Search This Blog

Tuesday 13 June 2017

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಪ್ರಹಸನ

ಗರಿಷ್ಠ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಆರು ತಿಂಗಳುಗಳು ಕಳೆದು ಹೋಗಿವೆ. ಇಂದು ಕೂಡ ಎಟಿಎಂಗಳಲ್ಲಿ ‘ನೋ ಕ್ಯಾಶ್ ಬೋರ್ಡ್​’ ನೇತಾಡುವುದು ಮತ್ತು ಬ್ಯಾಂಕ್​​ಗಳಿಗೆ ಹಿಡಿಶಾಪ ಹಾಕುವ ಘಟನೆಗಳು ನಿಂತಿಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಇನ್ನೆಷ್ಟು ದಿನಗಳ ಅವಧಿ ಬೇಕು ಎಂಬುದು ಪ್ರಾಯಶಃ ಆರ್​ಬಿಐಗೂ ತಿಳಿದಿಲ್ಲ.
ನವೆಂಬರ್ 8ರಂದು ಚಲಾವಣೆಯಲ್ಲಿದ್ದ ಶೇ. 85ರಷ್ಟು 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಷೇಧಿಸಿದ್ದರು. ನಿಷೇಧದ ವೇಳೆ ಅವರು ಕೊಟ್ಟ ಕಾರಣಗಳು ಆಪ್ಯಾಯಮಾನವಾಗಿದ್ದವು. ಭ್ರಷ್ಟಾಚಾರ, ಕಪ್ಪು ಹಣ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗಳ ನಿಯಂತ್ರಣ ಎಂಬ ಆಕರ್ಷಕ ಮತ್ತು ಸಾಧಿಸಲಾಗದ ಕನಸುಗಳನ್ನು ಭಾರತೀಯರ ಎದೆಯೊಳಗೆ ಬಿತ್ತಿದರು.
ದೇಶದಲ್ಲಿ ಕನಸುಗಳನ್ನು ಕೊಲ್ಲುವುದು ಹೊಸದಲ್ಲ. ಆದರೆ, ಬಿತ್ತುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು 2014 ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಿಂದ ಮಾಡುತ್ತಿದ್ದಾರೆ. ಅವುಗಳಿಗೆ ನೀರೆರೆಯುವ ಕೆಲಸ ಮಾತ್ರ ಇದುವರೆಗೆ ಆಗಿಲ್ಲ. ಆದರೆ, ಕನಸು ಬಿತ್ತಿಸಿಕೊಂಡವರು ಮಾತ್ರ ಅವುಗಳನ್ನು ಪೋಷಿಸುತ್ತಿದ್ದಾರೆ. ಆದರೆ, ಕೇವಲ ನೀರೆರೆಯುವಷ್ಟು ಮಾತ್ರ ಸಾಮರ್ಥ್ಯ ಬಿತ್ತಿಸಿಕೊಂಡವರಿಗಿದೆ. ಅದಕ್ಕೆ ಪ್ರಧಾನಿ ಮೋದಿಯವರೇ ಸೂಕ್ತ ನೆರಳು, ಗೊಬ್ಬರ ಕೊಡಬೇಕಾಗಿದೆ. ಇಲ್ಲವಾದಲ್ಲಿ ದೇಶದ ಅಪೌಷ್ಟಿಕತೆಯ ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರ ಕನಸುಗಳಿಗೂ ಒದಗುತ್ತದೆ.
ಆದರೆ, ಅವರು ಮತ್ತಷ್ಟು ಕನಸುಗಳನ್ನು ಬಿತ್ತುವ ಕೆಲಸದಲ್ಲೇ ನಿರತರಾಗುತ್ತಿದ್ದಾರೆ. ಇಂಥ ಎಷ್ಟು ಕನಸುಗಳನ್ನು ಅವರು ತಮ್ಮ ಸ್ಟಾಕ್​​ನಲ್ಲಿಟ್ಟುಕೊಂಡಿದ್ದಾರೆ ಎನ್ನುವುದನ್ನು ಅವರ ಆಡಳಿತಾವಧಿ ಮುಗಿದ ಮೇಲಷ್ಟೆ ಲೆಕ್ಕ ಹಾಕಬಹುದು. ಇನ್ನಷ್ಟು ಕನಸುಗಳನ್ನು ಅವರು ಬಿತ್ತುವುದರಲ್ಲಂತೂ ಯಾವುದೇ ಸಂಶಯವಿಲ್ಲ.
ನೋಟು ನಿಷೇಧ ವಿಷಯದಲ್ಲಿ ಸರ್ಕಾರ ತರಾತುರಿಯ ನಿರ್ಧಾರ ಕೈಗೊಂಡಿರುವುದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ನೋಟು ನಿಷೇಧದಂಥ ದೇಶದ ಸಮಸ್ತ ನಾಗರಿಕರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕಾಂಗಿಯಾಗಿ ತೆಗೆದುಕೊಂಡರೆ ಎಂಬ ಅನುಮಾನ ನಂತರದ ಬೆಳವಣಿಗಗಳಿಂದ ಮೂಡಿದೆ. ಅವರು ಆರ್ಥಿಕ ತಜ್ಞರ ಬಳಿ ಕೂಡ ಚರ್ಚಿಸಿರುವುದಕ್ಕೆ ಯಾವುದೇ ಉದಾಹರಣೆಗಳು ಸಿಕ್ಕಿಲ್ಲ.
ಆರ್​ಟಿಐ ಮೂಲಕ ಸಿಕ್ಕ ಮಾಹಿತಿಗಳ ಪ್ರಕಾರ, ನೋಟು ನಿಷೇಧ ನಿರ್ಧಾರಕ್ಕೂ ಕೆಲವೇ ಗಂಟೆಗಳ ಮೊದಲು ಆರ್​ಬಿಐಗೆ ಐತಿಹಾಸಿಕ ನಿರ್ಧಾರದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಈ ನಿರ್ಧಾರವನ್ನು ಆರ್​ಬಿಐ ಸಮಿತಿ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಕೂಡ ಸ್ವತಃ ಆರ್​ಬಿಐ ಗವರ್ನರ್ ನೀಡಿರುವ ಗೊಂದಲಮಯ ಹೇಳಿಕೆಗಳಿಂದ ಸಾಬೀತಾಗಿದೆ.
ನೋಟು ನಿಷೇಧದ ದಿನದಂದು ಮೋದಿಯವರು ಬಿತ್ತಿದ ಕನಸುಗಳನ್ನು ಒಂದೊಂದಾಗಿ ನೋಡೋಣ. ಭ್ರಷ್ಟಾಚಾರ ನಿಯಂತ್ರಣ ಅವರ ಮೊದಲ ಕನಸಾಗಿತ್ತು. ಆದರೆ, ನೋಟ್​ ಬ್ಯಾನ್​ನಿಂದಲೇ 50ಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಡುವ ಭ್ರಷ್ಟಾಚಾರದಲ್ಲಿ ತೊಡಗಿಕೊಂಡರು. ಈ ಮೂಲಕ ಪ್ರಧಾನಿಯವರ ಮೊದಲ ಕನಸಿಗೆ ಕೊಳ್ಳಿ ಇಟ್ಟವರು ಬ್ಯಾಂಕ್ ಅಧಿಕಾರಿಗಳು ಮತ್ತು ಸಿರಿವಂತರು.
ನರೇಂದ್ರ ಮೋದಿಯವರು ತಮ್ಮ ಅಭಿಮಾನಿಗಳಿಗೆ ಮನೋರಂಜನೆ ಕೊಡುವ ಮೂಲಕ ಸುಖಿಸುತ್ತಾರೆ. ದೊಡ್ಡ ಮಹಲುಗಳಲ್ಲಿ ಸುಖವಾಗಿದ್ದವರು ಈಗ ನೋಟು ಬದಲಿಸಿಕೊಳ್ಳಲು ದೊಡ್ಡ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಸಭೆಯೊಂದರಲ್ಲಿ ಅವರು ಹೇಳಿದರು. ಇದಕ್ಕೆ ಭರಪೂರ ಚಪ್ಪಾಳೆಗಳೂ ಸಿಕ್ಕವು. ಆದರೆ, ಅವರು ಹೇಳಿದ್ದಕ್ಕೂ ವಾಸ್ತವಕ್ಕೂ ದೊಡ್ಡ ಅಂತರವಿತ್ತು.
ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ದೊಡ್ಡ ಸರದಿ ಸಾಲಿನಲ್ಲಿ ಯಾವ ರಾಜಕಾರಣಿ, ಉದ್ಯಮಿ, ಅಧಿಕಾರಿಗಳೂ ನಿಲ್ಲಲಿಲ್ಲ. ಬದಲಾಗಿ ವಿದ್ಯಾರ್ಥಿಗಳು, ಮಹಿಳೆಯರು, ಬಡವರು, ಅಂಗವಿಕಲರು, ಹಿರಿಯ ನಾಗರಿಕರು, ಅಶಕ್ತರು ಎಲ್ಲ ಬಂದು ಬ್ಯಾಂಕ್​ಗಳಲ್ಲಿ ನರೆದಿದ್ದರು.
ಇಡೀ ದೇಶದ ಜನರನ್ನು ಏಕಕಾಲಕ್ಕೆ ಇಂಥ ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆ ಭಾರತದ ಇತಿಹಾಸದಲ್ಲೇ ಎಂದೂ ನಡೆದಿರಲಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಇಡೀ ವಿಶ್ವದಲ್ಲೇ ನೋಟು ನಿಷೇಧ ನಿರ್ಧಾರ ವಿಫಲವಾಗಿದೆ. ಆದರೆ, ತಮ್ಮ ಸೈದ್ಧಾಂತಿಕ ನಂಬಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಓಬಿರಾಯನ ಕಾಲದ ನಿರ್ಧಾರವನ್ನು 125 ಕೋಟಿ ಭಾರತೀಯರ ಮೇಲೆ ಹೇರಿದ್ದರು.
ನೋಟ್ ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ನಾಗರಿಕರು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಅಚಾತುರ್ಯದ ನಿರ್ಧಾರಕ್ಕೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆ ಕೋರಿಲ್ಲ. ಕನಿಷ್ಠ ಅವರ ಆತ್ಮಗಳಿಗೂ ಶಾಂತಿ ಕೋರುವ ಸೌಜನ್ಯವನ್ನು ಅವರು ತೋರಿಸಿಲ್ಲ. ತಮ್ಮ ಟ್ವೀಟ್ ಖಾತೆಯನ್ನೂ ಇದಕ್ಕೆ ಬಳಸಿಕೊಂಡಿಲ್ಲ.
ಕಪ್ಪುಹಣ ನಿಯಂತ್ರಣ ಅವರು ಬಿತ್ತಿದ್ದ ಇನ್ನೊಂದು ಕನಸು. 2014ರಲ್ಲಿ ತಾವು ಅಧಿಕಾರಕ್ಕೆ ಬಂದರೆ 100 ದಿನದಲ್ಲಿ ಅವರು ವಿದೇಶದಲ್ಲಿರುವ ಕಪ್ಪುಹಣವನ್ನು ತರುವುದಾಗಿ ಈಡೇರಿಸಲಾಗದ ಕನಸನ್ನು ಬಿತ್ತಿದ್ದರು. ಆದರೆ, ಸುಪ್ರೀಂ ಕೋರ್ಟ್ ನೀಡಿದ ಚಾಟಿ ಏಟಿಗೆ ಎಚ್ಚರವಾಗಿದ್ದ ಮೋದಿ ಸರ್ಕಾರ, ಸುಮಾರು 600 ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದಿದ್ದೇವೆ ಎಂದುಕೊಂಡು ಸುಮ್ಮನಾಗಿಬಿಟ್ಟಿತ್ತು. ಆದರೆ, ಇದ್ದಕ್ಕಿದ್ದಂತೆ ಬಿಜೆಪಿಗೆ ಎಚ್ಚರವಾಗಿದ್ದು ಏಕೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಅದರಲ್ಲೂ ವಿದೇಶದ ಹಣ ತಂದಿರುವ ತೃಪ್ತಿಯ ನಡುವೆ! ಮುಂದೆ ನಡೆಯಲಿರುವ ಪಂಚರಾಜ್ಯಗಳ ಚುನಾವಣೆಯ ಕಾರಣಕ್ಕೆ ಸ್ವದೇಶದಲ್ಲಿರುವ ಕಪ್ಪುಹಣ ನಿಯಂತ್ರಣವಾಗಿಲ್ಲವಲ್ಲ ಎಂಬ ಜ್ಞಾನೋದಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗಿಬಿಟ್ಟಿತ್ತು. ಇದಕ್ಕೆ ಅನೇಕ ಕಾರಣಗಳೂ ಇದ್ದವು.
ಇದಕ್ಕೂ ಮುನ್ನ ದೇಶದಾದ್ಯಂತ ಗೋರಕ್ಷಕರು ದಲಿತರು, ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕೊಲ್ಲುವುದಾದರೆ ನನ್ನನ್ನು ಕೊಲ್ಲಿ. ನಮ್ಮ ಸೋದರರಾದ ದಲಿತರನ್ನು ಕೊಲ್ಲಬೇಡಿ ಎಂದು ಅಂಗಲಾಚಿಕೊಂಡರು. ಆದರೆ, ಗೋರಕ್ಷಕರು ಮಾತ್ರ ತಮ್ಮ ಕ್ರೌರ್ಯವನ್ನು ಮುಂದುವರೆಸಿದ್ದರು.
ಇನ್ನು ಅಚ್ಚೇದಿನ್ ತರುವ ಭರವಸೆ ಕೂಡ ಸುಳ್ಳಾಗಿತ್ತು. ದೈನಂದಿನ ಬಳಕೆಯ ವಸ್ತುಗಳು ಮತ್ತು ಇಂಧನದ ಬೆಲೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಕೇಂದ್ರ ಸರ್ಕಾರದ ಇಂಥ ಸೋಲುಗಳು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆಯನ್ನ ಒಡ್ಡಿದ್ದವು. ಇಂಥ ವಿಷಮ ಸಂದರ್ಭದಲ್ಲಿ ನೋಟು ನಿಷೇಧ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ರಾಜ್ಯಗಳಲ್ಲಿ ಕಮಲವನ್ನು ಅರಳಿಸುವ ಕನಸು ಮೋದಿಯವರಿಗಿತ್ತು. ಆದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್​​ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂತು. ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದ್ದ ಗೋವಾ ಮತ್ತು ರಾಜ್ಯಗಳಲ್ಲಿ ಪಕ್ಷ ಅಧಿಕಾರವನ್ನು ಕಳೆದುಕೊಂಡಿತು. ಹಿಂಬಾಗಿಲ ಮೂಲಕ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಧಿಕಾರವನ್ನೂ ಹಿಡಿದು, ಮೀಸೆ ಮಣ್ಣಾಗಿಲ್ಲ ಎಂದು ಬಿಜೆಪಿ ಮರೆಯಲ್ಲಿ ನಕ್ಕಿತ್ತು. ಇಂಥ ಕಾರಣದಿಂದಾಗಿ ದೇಶದ ಗಮನವನ್ನು ಸೆಳೆಯುವುದು ಬಿಜೆಪಿಗೆ ಹೊಸದಲ್ಲ. ಇದು ಕೂಡ ಅಂಥದ್ದೇ ಮತ್ತೊಂದು ತಂತ್ರವಾಗಿತ್ತು.
ಮೋದಿಯವರ ಮಹತ್ವಾಕಾಂಕ್ಷಿ ಕನಸು ಕಪ್ಪು ಹಣ ನಿಯಂತ್ರಣವಾಯಿತೇ? ಎಂಬ ಪ್ರಶ್ನೆಗೆ ಉತ್ತರವನ್ನು ಮೋದಿಯವರಾಗಲಿ, ಆರ್​ಬಿಐ ಆಗಲಿ ನೀಡಿಲ್ಲ. ಆರ್​ಬಿಐ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 15 ಲಕ್ಷ ಕೋಟಿಯಷ್ಟು ನಿಷೇಧಿಸ್ಪಟ್ಟ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಇವುಗಳ ಪೈಕಿ ಶೇ. 98ರಷ್ಟು ನೋಟುಗಳು ವಿನಿಮಯವಾಗಿವೆ. ಇನ್ನು ಶೇ. 2ರಷ್ಟು ಮಾತ್ರ ಹಣ ವಿನಿಮಯವಾಗಿಲ್ಲ. ಹಾಗಾದರೆ ಕಪ್ಪು ಹಣ ನಿಯಂತ್ರಣವಾಗಿದ್ದು ಹೇಗೆ?
ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೋದಿ ಬೆಂಬಲಿಗರು, ಹೊಸ ನೋಟಿನಲ್ಲಿ ಚಿಪ್ ಇದೆ, ಕೆಲವು ದಿನಗಳ ನಂತರ ಈ ನೋಟು ಮಾಯವಾಗುತ್ತದೆ ಎಂಬಂಥ ಕತೆಗಳನ್ನು ಕಟ್ಟಿ ನರೇಂದ್ರ ಮೋದಿಯವರು ನೀಡುವ ಮನೋರಂಜನೆಗಳಿಗೆ ಸ್ಪರ್ಧೆ ಒಡ್ಡಿದರು. ಇದರ ನಡುವೆ ಬಲಿಯಾದ ನೂರಾರು ಜೀವಗಳ ಕುರಿತು ಯಾವ ಬಿಜೆಪಿ ನಾಯಕರಿಗಗಾಗಲಿ, ಸ್ವತಃ ಮೋದಿಯವರಿಗಾಗಲಿ ಕಾಳಜಿ ಇರಲಿಲ್ಲ. ಶೇ. 2ರಷ್ಟು ಹಣ ನಿಯಂತ್ರಿಸುವ ಸಲುವಾಗಿ ನೂರಾರು ಜನರನ್ನು ಬಲಿಕೊಡಬೇಕಿತ್ತೆ? ಕೋಟ್ಯಂತರ ಜನರನ್ನು ಬೀದಿಯಲ್ಲಿ ನಿಲ್ಲಿಸಬೇಕಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು? ಭ್ರಷ್ಟಾಚಾರ ಮತ್ತು ಕಪ್ಪು ಹಣ ನಿಯಂತ್ರಣಗಳು ನೋಟು ನಿಷೇಧದಿಂದ ಸಾಧ್ಯವಾಗಲಿಲ್ಲ ಎನ್ನುವುದನ್ನು ಇಂದಿಗೂ ಮೋದಿ ಮತ್ತವರ ಬೆಂಬಲಿಗರು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ನೋಟ್ ಬ್ಯಾನ್ ವೇಳೆ ಮೋದಿ ಕಂಡ ಇನ್ನೊಂದು ಕನಸು ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣ. 2016ರ ನವೆಂಬರ್ 16 - 21ರವರೆಗೆ ಒಟ್ಟು 27 ಬಾರಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಅಲ್ಲಿಂದ ಮುಂದೆ ಕೂಡ ಕಾಶ್ಮೀರದಲ್ಲಿ ಗಲಭೆಗಳು ನಿರಂತರವಾಗಿ ನಡೆದವು. ನೋಟ್ ಬ್ಯಾನ್ ನಿಷೇಧಿಸಿದ ನವೆಂಬರ್​​ನಿಂದ ಜನವರಿ ಹೊತ್ತಿಗೆ 100ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘಿಸಿತು. ಕಳೆದ ಮೂರು ದಿನಗಳಿಂದ 3 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟಾಟೋಪ ಕೂಡ ಏರಿಕೆಯಾಗಿದೆ.
ಇವೆಲ್ಲಕ್ಕೂ ಕಳಶವಿಟ್ಟಂತೆ ಅಮೆರಿಕ ಗುಪ್ತಚರ ಇಲಾಖೆ ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಿಂದ ದೇಶದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುತ್ತವೆ ಎಂಬ ಎಚ್ಚರಿಕೆ ನೀಡಿದೆ. ಹಾಗಾದರೆ ಗಡಿಯಾಚೆಗಿನ ಭಯೋತ್ಪಾದನೆ ನಿಂತಿದ್ದು ಯಾವಾಗ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಮೋದಿ ಮತ್ತವರ ಬೆಂಬಲಿಗರು ಭ್ರಷ್ಟಾಚಾರ ನಿಯಂತ್ರಣವಾಗಿ, ಕಪ್ಪುಹಣ ನಿರ್ಮೂಲನೆಯಾಗಿ, ಗಡಿಯಾಚೆಗಿನ ಭಯೋತ್ಪಾದನೆಗಳೆಲ್ಲ ನಿಯಂತ್ರಣವಾಗಿರುವ ಕನಸುಗಳಲ್ಲಿ ಕನವರಿಸಿಕೊಂಡಿದ್ದಾರೆ.
ನೋಟು ನಿಷೇಧಿಸಿದ ಆರು ತಿಂಗಳು ತುಂಬಿದ ದಿನದಂದೇ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ನೋಟು ನಿಷೇಧದಿಂದ ಕಪ್ಪು ಹಣ ನಿಯಂತ್ರಣ ಸಾಧ್ಯವಿಲ್ಲ. ಇನ್ನು ಆರಂಭದಲ್ಲಿ ಬ್ಯಾಂಕ್​​ಗಳಲ್ಲಿ ನೋಟಿನ ಕೊರತೆ ಎದುರಾಗಿ ಜನ ಪರದಾಡಿದ್ದರು. ಆಗ ಕೇವಲ 50 ದಿನ ಈ ಸಮಸ್ಯೆಯನ್ನು ಸಹಿಸಿಕೊಳ್ಳಿ. ನಂತರ ಎಲ್ಲ ಸಹಜ ಸ್ಥಿತಿಗೆ ಮರಳಲಿದೆ ಎಂಬ ಭರವಸೆ ನೀಡಿದ್ದರು. ಈಗ ಅಂಥ ನಾಲ್ಕನೇ 50 ದಿನಗಳೂ ಇನ್ನೇನು ಕೆಲವೇ ದಿನಗಳಲ್ಲಿ ಕಳೆದು ಹೋಗುತ್ತವೆ. ಎಟಿಎಂಗಳಲ್ಲಿ ನೋ ಕ್ಯಾಷ್ ಬೋರ್ಡ್​​ ನೋಡಿದಾಗಲೆಲ್ಲ ಪ್ರಧಾನಿಯವರ 50 ದಿನದ ಭರವಸೆ ನೆನಪಾಗುತ್ತದೆ. ಮತ್ತೂ ಇವರ ಗಡಿಯಾರ ಮತ್ತು ಕ್ಯಾಲೆಂಡರ್​ಗಳ ಮೇಲೆ ನನಗೆ ಅನುಮಾನ ಮೂಡುತ್ತದೆ.
ಕಡೆಗೂ ಮೋದಿಯವರು ಬೆಟ್ಟ ಅಗೆದು ಇಲಿ ಹಿಡಿದರು ಎನ್ನುವುದಷ್ಟೇ ಇಡೀ ನೋಟು ನಿಷೇಧ ಪ್ರಹಸನದ ಹಿಂದಿರುವ ಹೂರಣ. ಆರು ತಿಂಗಳ ನಂತರ ಕೂಡ ಕೆಲವು ಪ್ರಶ್ನೆಗಳಿವೆ.
1. ಹಳೆಯ ನೋಟುಗಳ ವಿನಿಮಯ ಪ್ರಮಾಣ ಎಷ್ಟು?
2. ನೋಟ್ ಬ್ಯಾನ್ ನಂತರ ಎಷ್ಟು ಪ್ರಮಾಣದ ಕಪ್ಪು ಹಣವನ್ನು ನಿಯಂತ್ರಿಸಲಾಗಿದೆ?
3. ಭಾರತದ ಆರ್ಥಿಕ ಬೆಳವಣಿಗೆಗೆ ನೋಟ್ ಬ್ಯಾನ್ ಕೊಡುಗೆ ಏನು?
4. ನೋಟ್​ ಬ್ಯಾನ್​​ನಿಂದ ಲಾಭವಾಗಿದ್ದು ಯಾರಿಗೆ? ನಷ್ಟವಾಗಿದ್ದು ಯಾರಿಗೆ?
5. ಡಿಜಿಟಲ್ ವಹಿವಾಟಿಗೆ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಕೈಗೊಂಡ ಕ್ರಮಗಳೇನು?
6. ಹಳೆಯ ನೋಟುಗಳ ಪರಿಸ್ಥಿತಿ ಏನಾಗಿದೆ?
7. ಕಪ್ಪು ಹಣ ನಿಯಂತ್ರಣವಾಯಿತೇ?
8. ಭ್ರಷ್ಟಾಚಾರ ನಿಯಂತ್ರಣವಾಯಿತೇ?
9. ಭಯೋತ್ಪಾದನೆ ನಿಯಂತ್ರಣವಾಯಿತೇ?
ಎಂಬ ಪ್ರಮುಖ ಪ್ರಶ್ನಗೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಾಗಲಿ ಅಥವಾ ಅವರ ಬೆಂಬಲಿಗರಾಗಲಿ ಉತ್ತರಿಸಿದರೆ ಭಾರತೀಯರು ಕೃತಾರ್ಥರಾದರೂ ಆಗಬಹುದು.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

No comments:

Post a Comment