Search This Blog

Thursday 8 May 2014

ರೆಡ್‌ಕ್ರಾಸ್: ಮಾನವೀಯ ಕಾಳಜಿಯ ದ್ಯೋತಕ 
                                                                                                                                 ಪ್ರದೀಪ್ ಮಾಲ್ಗುಡಿ
ಜಗತ್ತಿನೆಲ್ಲೆಡೆ ಯುದ್ಧಗಳು ಸಂಭವಿಸಿವೆ, ಸಂಭವಿಸುತ್ತಲೇ ಇರುತ್ತವೆ. ಉದ್ದೇಶ ಯಾವುದೇ ಇದ್ದರೂ ಅಮಾಯಕರ ಬಲಿ ಮಾತ್ರ ನಿರಂತರ. ಮಾನವೀಯತೆಗೆ ಅಂಟಿದ ಶಾಪವೆಂದು ಬೇಕಾದರೂ ಯುದ್ಧಕ್ಕೆ ವ್ಯಾಖ್ಯಾನವನ್ನು ನೀಡಬಹುದು. ಸಾವಿರಾರು ಲೀಟರ್ ರಕ್ತ ಹರಿಯದೇ ಯುದ್ಧಗಳು ಮುಗಿಯುವುದಿಲ್ಲ. ಆದರೆ ಹೀಗೆ ಹರಿದ ರಕ್ತವೂ ಮನುಷ್ಯರ ಯುದ್ಧದಾಹವನ್ನು ತಣಿಸಿಲ್ಲ. ಇದಕ್ಕೆ ಬಲಿಯಾಗುವವರ ಪರವಾಗಿ ಚಿಂತಿಸುವ, ಅವರ ಪರವಾಗಿ ಕ್ರಿಯಾಶೀಲವಾದವರ ಸಂಖ್ಯೆ ಯುದ್ಧಪೀಪಾಸುಗಳಿಗೆ ಹೋಲಿಸಿದರೆ ಕಡಿಮೆಯೆ.
ಕಳಿಂಗ ಯುದ್ಧದಲ್ಲಿ ಜಯಗಳಿಸಿದ ಅಶೋಕ ಮುಂದೆ ಯುದ್ಧ ಮಾಡುವುದಿಲ್ಲವೆಂದು ನಿರ್ಣಯಿಸಿದ. ಕಾಲ ಕ್ರಿ.ಪೂ. ೩೦೪-೨೩೨. ಇಂತಹ ಯುದ್ಧ ನಡೆಸಿದ ತಪ್ಪಿಗಾಗಿ ಯುದ್ಧವಿರೋಧಿ ನಿಲುವನ್ನು ತಳೆದ ಅಶೋಕನನ್ನು ಈ ಲೋಕ ಮರೆಯಲಾರದು. ಹಾಗೆಯೇ ಯುದ್ಧಾನಂತರದ ಭೀಬತ್ಸ ಸನ್ನಿವೇಶಗಳನ್ನು ಕಂಡು  ಹೆನ್ರಿ ಡೋನೆಂಟ್‌ನ ಮನಸು ತೀವ್ರವಾದ ಆಘಾತಕ್ಕೆ ಒಳಗಾಗುತ್ತದೆ. ಯುದ್ಧ ದೃಶ್ಯಗಳಿಗೆ ಮುಖಾಮುಖಿಯಾಗುವ ಮೂಲಕ ಮಾನವೀಯತೆಯ ಕಡೆಗೆ ತುಡಿದ ಅಶೋಕ ಮತ್ತು ಹೆನ್ರಿ ಡೋನೆಂಟ್ ಮಾನವ ಜನಾಂಗದ ಅಸ್ಥಿತ್ವವನ್ನು ಉಳಿಸಲು ನೆರವಾದವರು.
ಹೆನ್ರಿ ಡೋನೆಂಟ್ ೧೮೫೯ರಲ್ಲಿ ಇಟಲಿಯ ಸಾಲ್ಫಾರಿನೋ ನಗರಕ್ಕೆ ಬಂದಿದ್ದರು. ಈ ಅವಧಿಯಲ್ಲಿ ಅಲ್ಲಿ ನಡೆದ ಭೀಕರ ಯುದ್ಧದ ನಂತರ ಇಡೀ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಸಾವು, ನೋವು, ನರಳಿಕೆ ಕೇಳಿ ಬರುತ್ತಿತ್ತು. ಸೈನಿಕರ, ಯುದ್ಧದಲ್ಲಿ ಬಳಕೆಯಾದ ಕುದುರೆಗಳ ಶವಗಳು ಎಲ್ಲೆಂದರಲ್ಲಿ ಚೆಲ್ಲಾಡಿ ಅನಾಥಶವಗಳಾಗಿದ್ದವು. ಕೆಲವು ಸೈನಿಕರು ಜೀವ ಉಳಿಸುವಂತೆ ಅಂಗಲಾಚುತ್ತಿದ್ದ ಆರ್ತನಾದಗಳು, ನೋವಿನ  ನರಳಾಟಗಳು ಮುಗಿಲುಮುಟ್ಟಿ, ಅಕ್ಷರಶಃ ಅರಣ್ಯ ರೋದನವಾಗಿತ್ತು. ಈ ಅಮಾನುಷ ದೃಶ್ಯವನ್ನು ಕಂಡ ಹೆನ್ರಿ ಡೋನೆಂಟ್ ಮನಸು ತೀವ್ರ ಅಲ್ಲೋಲಕಲ್ಲೋಲಕ್ಕೆ ಒಳಗಾಯಿತು.
ಇಂತಹ ಅನಾಹುತಗಳನ್ನು ತಡೆಯುವ ಸಲುವಾಗಿ ಏನಾದರೂ ಮಾಡಬೇಕು, ನಾಗರಿಕ ಪ್ರಜ್ಞೆ ಮೂಡಿಸಬೇಕೆಂಬ ಸಂಕಲ್ಪದಿಂದ ‘ಎ ಮೆಮೊರಿ ಆಫ್ ಸಾಲ್ಫಾರಿನೋ’ ಎಂಬ ಕೃತಿಯನ್ನು ಡೋನೆಂಟ್ ರಚಿಸಿದರು. ಮುಂದೆ ಇದು ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಹೆನ್ರಿ ಡೋನೆಂಟ್ ಮತ್ತು ಗುಸ್ತೇವ್ ಮಯನೀರ್ ಜತೆಗೂಡಿ ರೆಡ್‌ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಪೂರಕವಾದ ಕೆಲಸಗಳನ್ನು ಮಾಡುತ್ತಾರೆ. ಅದರ ಪ್ರತಿಫಲವಾಗಿ ಜಿನೇವಾದಲ್ಲಿ ಸಭೆ ನಡೆದು ಸಂಸ್ಥೆಯ ಸ್ಥಾಪನೆಯಾಗುತ್ತದೆ. ಇತ್ತೀಚೆಗೆ ಸ್ವಿಟ್ಜರ್‌ಲೆಂಡನ್ನು ಕೇವಲ ಸ್ವಿಸ್ ಬ್ಯಾಂಕ್ ಖಾತೆಯ ಕಾರಣಕ್ಕೆ ನೆನಪಿಸಿಕೊಳ್ಳಲಾಗುತ್ತಿದೆ. ಆದರೆ, ಮಾನವೀಯತೆಗೆ ಇದು ಕೊಟ್ಟಿರುವ ಉದಾರ ಕೊಡುಗೆ ಮರೆಗೆ ಸಂದಿದೆ.
ಜಗತ್ತಿನಲ್ಲಿ ಯುದ್ಧಗಳು ನಡೆಯಲು ಇಂತದೇ ನಿರ್ದಿಷ್ಟ ಕಾರಣಗಳು ಬೇಕಿಲ್ಲ. ಮೋಜಿಗಾಗಿ ಬೇಟೆಯಾಡುವಂತೆ ಕಳೆದ ಕೆಲವು ಶತಮಾನಗಳಿಂದ ಯುದ್ಧಗಳು ನಡೆದಿವೆ. ರಾಮಾಯಣ, ಮಹಾಭಾರತ, ಈನಿಯಡ್, ಓಡಿಸ್ಸಿಯಂತಹ ಮಹಾಕಾವ್ಯಗಳ ವಸ್ತುಗಳು ಮೂಲತಃ ಯುದ್ಧವನ್ನೇ ಅವಲಂಬಿಸಿವೆ. ಯುದ್ಧವಿಲ್ಲದ ಮಹಾಕಾವ್ಯ ರಚನೆಯೇ ಕಷ್ಟಕರವೇನೋ ಎಂಬಷ್ಟರಮಟ್ಟಿಗೆ ಇವುಗಳಲ್ಲಿ ಯುದ್ಧಗಳು ಅನಿವಾರ‍್ಯವಾಗಿವೆ. ಸೀತೆಯನ್ನು ರಾವಣ ಅಪಹರಿಸಿದ ಕಾರಣಕ್ಕೆ, ದ್ರೌಪದಿಯನ್ನು ದುರ‍್ಯೋಧನ ಅವಮಾನಿಸಿದ ಕಾರಣಕ್ಕೆ ಇಡೀ ಭಾರತದ ರಾಜಮಹಾರಾಜರು, ಸಣ್ಣಪುಟ್ಟ ಸಾಮಂತರು, ಪಾಳೆಯಗಾರರು, ದಳವಾಯಿಗಳು, ನಾಯಕರು ಈ ಯುದ್ಧಗಳಲ್ಲಿ ಭಾಗವಹಿಸಿದರು.
ಒಟ್ಟಿನಲ್ಲಿ ಯುದ್ಧೋತ್ಸಾಹಕ್ಕೆ ಒಂದು ನೆಪ ಬೇಕಷ್ಟೆ. ಅದು ಆಧುನಿಕ ಕಾಲದಲ್ಲೂ ಸಾಬೀತಾಗಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ, ಜಪಾನ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳ ವೈಯಕ್ತಿಕ ಹಿತಾಸಕ್ತಿಗಾಗಿ ಜಗತ್ತಿನಲ್ಲಿ ಎರಡು ಕೆಟ್ಟ ಯುದ್ಧಗಳು ಹಿಂದಿನ ಶತಮಾನದಲ್ಲಿ ನಡೆದವು. (ಅವುಗಳನ್ನು ಮಹಾಯುದ್ಧಗಳೆಂದು ಕರೆಯುವುದು ಅಪಾಯಕಾರಿ.) ಅದರಿಂದ ಕೋಟ್ಯಂತರ ಜನರ ಸಾವು ಸಂಭವಿಸಿತು. ಇನ್ನು ಸ್ವತಂತ್ರ ಭಾರತ ನೆರೆ ರಾಷ್ಟ್ರಗಳಿಂದ ಪ್ರೇರಿತವಾಗಿ, ಅಥವಾ ದಾಳಿಗೊಳಗಾಗಿ ನಡೆಸಿರುವ ಯುದ್ಧಗಳದ್ದೂ ದೊಡ್ಡ ಇತಿಹಾಸವಿದೆ. ಕಳೆದ ಶತಮಾನದ ಅಂತ್ಯದಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ ಯುದ್ಧದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇಂದಿನ ಇಂಧನ ಬೆಲೆ ಏರಿಕೆ, ಹಣದುಬ್ಬರ, ಡಾಲರ್ ಬೆಲೆ ಏರಿಕೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಜಿಡಿಪಿ ಬೆಳವಣಿಗೆಯಲ್ಲಿ ಉಂಟಾಗಿರುವ ಕುಸಿತಗಳ ಕಾರಣ ಅನವಶ್ಯಕ ಯುದ್ಧಗಳ ಪರಿಣಾಮವೆಂಬುದನ್ನು ಇಂದಿಗೂ ನಾಗರಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ.
ವೈಯಕ್ತಿಕ ಹಠ, ಸಿದ್ಧಾಂತ, ಧರ್ಮ, ಭಾಷೆ, ಭೂಮಿ, ಹೆಣ್ಣುಗಳಿಗಾಗಿ ನಡೆದಿರುವ ಯುದ್ಧಗಳಲ್ಲಿ ಮಡಿದ ಸಾವಿರಾರು ಜನರ ಕಷ್ಟಕೋಟಲೆಗಳ ಕಡೆಗೆ ಯುದ್ಧೋತ್ಸಾಹಿಗಳು ಗಮನ ನೀಡುವುದಿಲ್ಲ. ಕಟ್ಟಕಡೆಗೆ ಇವರ ಯುದ್ಧದಿಂದ ತಮ್ಮ ಹಿತಾಸಕ್ತಿಯ ಸಾಧನೆಯಾದರೂ ಸಾಧ್ಯವಾಯಿತೇ? ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಏಕೆಂದರೆ, ಇತ್ತೀಚೆಗೆ ಅಮೆರಿಕಾ ಪ್ರಾಯೋಜಿತ, ಯೋಜಿತ ಯುದ್ಧಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಅವು ಬಹುತೇಕ ಧರ್ಮ ಕೇಂದ್ರಿತವಾಗಿವೆ. ಗಲ್ಫ್ ದೇಶಗಳು, ಇರಾನ್, ಇರಾಕ್, ಆಫ್ಘಾನಿಸ್ತಾನ ಮೊದಲಾದ ಕಡೆ ನಡೆದಿರುವ ಕ್ರಾಂತಿಯ ಹೆಸರಿನ ಅಧಿಕಾರ ಬದಲಾವಣೆಗಳು ಹಾಗೂ ಅಮೆರಿಕ ಸ್ವತಃ ದಾಳಿ ನಡೆಸಿ, ಪ್ರಜಾಪ್ರಭುತ್ವದ ರಕ್ಷಕನ ಫೋಸ್ ನೀಡುತ್ತಿರುವ ಈ ಹೊತ್ತಿನಲ್ಲಿ ಅಶೋಕ ಮತ್ತು ಹೆನ್ರಿ ಡೋನೆಂಟ್ ತರದವರ ಕ್ರಿಯೆಯನ್ನು ಯಾರು ಮನ್ನಿಸಬೇಕು?
ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಯ ಉದ್ದೇಶ ಕೇವಲ ಯುದ್ಧ ಸಂತ್ರಸ್ತರ ರಕ್ಷಣೆಯಲ್ಲ; ಬದಲಾಗಿ ಎಲ್ಲ ಬಗೆಯ ವಿಕೋಪಗಳ ಸಂದರ್ಭದಲ್ಲೂ ಅಸಹಾಯಕರ ನೆರವಿಗೆ ತನ್ನ ನೆರವಿನ ಹಸ್ತವನ್ನು ನೀಡುವುದು. ಆದ್ದರಿಂದ ಇಂದು ಜಗತ್ತಿನಾದ್ಯಂತ ರೆಡ್‌ಕ್ರಾಸ್ ಸಂಸ್ಥೆಯ ಶಾಖೆಗಳು ಕಾರ‍್ಯ ನಿರ್ವಹಿಸುತ್ತಿವೆ. ರಕ್ತ ಸಂಗ್ರಹ, ರಕ್ತದಾನದ ಮೂಲಕ ಮಾನವ ಸಂಕುಲದ ಉಳಿವಿಗೆ ಇದು ಸಲ್ಲಿಸಿರುವ, ಸಲ್ಲಿಸುತ್ತಿರುವ ಕೊಡುಗೆ ಅನುಪಮವಾದುದು. ಇಂದು ಎಲ್ಲೆ ಎಂಥ ಬಗೆಯ ಅವಘಡಗಳು ಸಂಭವಿಸಿದಾಗಲೂ ಮೊದಲು ರೆಡ್‌ಕ್ರಾಸ್‌ನ ಸ್ವಯಂ ಸೇವಕರು ಹಾಜರಿರುತ್ತಾರೆ. ಅಂತಹ ನಿಸ್ವಾರ್ಥಮಯ ಸೇವೆಗೆ ತನನ್ನು ತಾನು ತೆತ್ತುಕೊಳ್ಳುವಂತಹ ಮನಸ್ಥಿತಿಯನ್ನು ಜನರಲ್ಲಿ ಉಂಟುಮಾಡಿದ ರೆಡ್‌ಕ್ರಾಸ್ ಸಂಸ್ಥೆಗೆ ಮೂರು ಬಾರಿ ವಿಶ್ವಶಾಂತಿಗಾಗಿ ಸಲ್ಲುವ ನೊಬೆಲ್ ಪ್ರಶಸ್ತಿ ಲಭಿಸಿದೆ.
ಮೊಟ್ಟಮೊದಲು ರೆಡ್‌ಕ್ರಾಸ್ ಸಂಸ್ಥಾಪಕ ಹೆನ್ರಿ ಡೋನೆಂಟ್‌ಗೆ ಈ ಪುರಸ್ಕಾರ ಘೋಷಣೆಯಾದಾಗ ಅವನ ಸ್ಥಿತಿ ಅಯೋಮಯವಾಗಿರುತ್ತದೆ. ವಯೋಸಹಜವಾದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. ಇಪ್ಪತ್ತನೆ ಶತಮಾನದಲ್ಲಿ ಮಾನವೀಯತೆಗೆ ನೀವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಿಮಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡುವುದಾಗಿ ನೊಬೆಲ್ ಸಮಿತಿ ಅವನಿಗೆ ಪತ್ರವೊಂದನ್ನು ಬರೆಯುತ್ತದೆ. ಮುಂದುವರೆದು ಈ ಪ್ರಶಸ್ತಿಯನ್ನು ಪಡೆಯಲು ನಿಮ್ಮನ್ನು ಹೊರತು ಪಡಿಸಿದ ಮತ್ತೊಬ್ಬ ವ್ಯಕ್ತಿ ಇಲ್ಲ, ಅದು ನೀವೇ. ನಲವತ್ತು ವರ್ಷಗಳ ಹಿಂದೆ ಯುದ್ಧಸಂತ್ರಸ್ತರಿಗಾಗಿ ನೀವು ಮೂಡಿಸಿದ ಹೆಜ್ಜೆ ಅಂತರಾಷ್ಟ್ರೀ ಸಂಸ್ಥೆಯಾಗಿ ಬೆಳೆದಿದೆ. ನಿಮ್ಮನ್ನು ಹೊರತು ಪಡಿಸಿದ ರೆಡ್‌ಕ್ರಾಸ್ ಸಂಸ್ಥೆ, ಹತ್ತೊಂಬತ್ತನೆ ಶತಮಾನದ ಮಹೋನ್ನತ ಮಾನವೀಯ ಸಾಧನೆಯನ್ನು ಸಾಧಿಸುವುದು ಪ್ರಾಯಶಃ ಕಷ್ಟಸಾಧ್ಯವಾದುದು ಎಂದು ಅವನ ಸಾಧನೆಯನ್ನು, ಸಂಸ್ಥೆಯ ಹುಟ್ಟಿಗೆ ಕಾರಣವಾದ ಅವನ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತದೆ. ಆದರೆ ಅದಕ್ಕೆ ಅವನು ಪ್ರತಿಕ್ರಿಯಿಸುವುದೂ ಇಲ್ಲ. ಕೊನೆಗೆ ಅವನನ್ನು ಹುಡುಕಿ ಪುರಸ್ಕಾರವನ್ನು ನೀಡಲಾಗುತ್ತದೆ. ಅವನು ಪುರಸ್ಕಾರ ರೂಪದಲ್ಲಿ ಬಂದ ಹಣದ ಚೆಕ್ಕನ್ನು ರೆಡ್‌ಕ್ರಾಸ್ ಸಂಸ್ಥೆಗೆ ಮರಳಿಸುತ್ತಾನೆ. ಇಂದಿಗೂ ಇವನ ಈ ನಡೆ ಮಾದರಿಯಾಗಿದೆ. ನಮ್ಮ ನಡುವೆ ಇರುವ ಬಹುತೇಕ ಚಿಂತಕರು, ಸಮಾಜಸೇವಕರು, ಲೇಖಕರು ತಮಗೆ ಸಂದಾಯವಾದ ಹಣರೂಪದ ಕೊಡುಗೆಯನ್ನು ಹೇಗೆ ಜನೋಪಯೋಗಿ ವಿಷಯಗಳಿಗಾಗಿ ವಿನಿಯೋಗಿಸಬೇಕೆಂಬುದಕ್ಕೆ ಮಾರ್ಗದಶಿಯಾಗಿ ಇವನ ನಡೆಯಿದೆ. ಎಲ್ಲೋ ಕೆಲವರು ಮಾತ್ರ ಇಂತಹ ದಾರಿಯನ್ನು ಅನುಕರಿಸಿದ್ದಾರೆ. ಬಹುತೇಕರು ತಮಗೆ ಬಂದ ಹಣವನ್ನು ಮನೆಗೆ ಕೊಂಡೊಯ್ದಿದ್ದಾರೆ. ವೇದಿಕೆ ಸಿಕ್ಕಾಗ ಪುಂಖಾನುಪುಂಖವಾಗಿ ಮಾತನಾಡುವುದಕ್ಕೂ ಅವಕಾಶ ಲಭಿಸಿದಾಗ ಉದಾರವಾಗಿ ದಾನ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ಈ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು.

ಗುರುದೇವ ರವೀಂದ್ರ 
                                                                                                                                     ಪ್ರದೀಪ್ ಮಾಲ್ಗುಡಿ
ದೇವೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯವರ ರವೀಂದ್ರನಾಥ ಠಾಗೋರ್ ಅವರು ೦೭/೦೫/೧೮೬೧ ಜನಿಸಿದರು. ಎಂಬತ್ತು ವರ್ಷಗಳ ಸುದೀರ್ಘ ಜೀವನವನ್ನು ನಡೆಸಿದ ಅವರು ೦೭/೦೮/೧೯೪೧ರಂದು ಇಹಲೋಕ ತ್ಯಜಿಸಿದರು. ೧೯೧೩ರಲ್ಲಿ ಇವರು ಜಗತ್ಪ್ರಸಿದ್ಧ ನೋಬಲ್ ಪ್ರಶಸ್ತಿಯನ್ನು ಭಾರತಕ್ಕೆ ಮೊಟ್ಟಮೊದಲು ದೊರಕಿಸಿಕೊಟ್ಟರು. ಕಲೆ, ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಶಿಕ್ಷಣ ಕ್ಷೇತ್ರಗಳಿಗೆ ಸಲ್ಲಿಸಿದ ಅನುಪಮ ಸೇವೆಯಿಂದ ವಿಶ್ವದಾದ್ಯಂತ ಹೆಸರಾಗಿದ್ದಾರೆ. ಇಂದಿಗೂ ಬಂಗಾಳದಲ್ಲಿ ರವೀಂದ್ರ ಸಾಹಿತ್ಯ, ರವೀಂದ್ರ ಸಂಗೀತ, ರವೀಂದ್ರ ಚಿತ್ರಕಲೆ, ರವೀಂದ್ರ ಶಿಕ್ಷಣ, ರವೀಂದ್ರ ಚಿಂತನ ಎಂಬ ಭಿನ್ನ ಕ್ಷೇತ್ರಗಳಿಗೆ ಸೇರಿದ ಶಿಸ್ತುಗಳ ಕುರಿತ ಒಂದಿಲ್ಲೊಂದು ಕಾರ‍್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಇವರು ಭಾರತೀಯ ನವೋದಯ ಸಾಹಿತ್ಯದ ಪ್ರವರ್ತಕರಲ್ಲಿ ಆದ್ಯರು. ಬಹುತೇಕ ಭಾರತೀಯ ಭಾಷೆಗಳ ಮೇಲೆ ಪ್ರಭಾವ ಬೀರುವಷ್ಟು ಪ್ರಖರ ಚಿಂತನೆ ಇವರದಾಗಿತ್ತು. ಅರವಿಂದ, ಮೋಹನದಾಸ್ ಕರಮ್‌ಚಂದ್ ಗಾಂಧಿಯಂತವರ ಜತೆಗೆ ಇಡೀ ಭಾರತದಲ್ಲಿ ಏಕಕಾಲಕ್ಕೆ ಅನೇಕ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ಪ್ರಚಲಿತಕ್ಕೆ ಬಂದದ್ದು ಈ ಮೂವರ ಶ್ರೇಷ್ಠತೆಗೆ ಉದಾಹರಣೆಗಳಾಗಿ ಇಂದಿಗೂ  ಅವರಿಗೆ ಅರ್ಪಿತವಾಗಿರುವ, ನೆನೆದಿರುವ, ಅನುವಾದಿಸಿರುವ ಅನೇಕ ಕೃತಿಗಳು ದಾಖಲೆಗಳಾಗಿ ಸಿಗುತ್ತಿವೆ. ಬೇಂದ್ರೆ, ಕುವೆಂಪು ಮೊದಲಾದ ಕನ್ನಡ ನವೋದಯ ಕವಿಗಳು ಠಾಗೋರ್ ಅವರನ್ನು ಕುರಿತ ಕವಿತೆಗಳನ್ನು ರಚಿಸಿದ್ದಾರೆ. ಬೇಂದ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಭಾರತೀಯ ಸಾಂಪ್ರದಾಯಕ ಚೌಕಟ್ಟಿನಿಂದ ಆಚೆ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರುಗು ನೀಡಿದವರಲ್ಲಿ ಅಗ್ರಗಣ್ಯರು. ಅವರ ಕಾದಂಬರಿ, ಸಣ್ಣ ಕಥೆ, ಕವನ, ನೃತ್ಯ ರೂಪಕ, ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಆಧ್ಯಾತ್ಮಕ ಭಾವಗೀತೆಗಳು), ಗೋರ ಮತ್ತು ಘರೇ ಬೈರೆ ಇವರ ಪ್ರಸಿದ್ಧ ಕೃತಿಗಳು. ಅವರ ಕವನ, ಸಣ್ಣ ಕಥೆ, ಮತ್ತು ಕಾದಂಬರಿಗಳ ವಸ್ತು, ತಂತ್ರ, ಆಡು ಮಾತಿನ ಬಳಕೆ, ವಾಸ್ತವಿಕ ನಿರೂಪಣಾ ಕ್ರಮ ಮತ್ತು ತತ್ವಶಾಸ್ತ್ರ ದೃಷ್ಟಿಕೋನಗಳಿಂದ ವಿಭಿನ್ನವಾಗಿವೆ. ಟಾಗೋರ್ ಅವರು ವಿಶ್ವದ ಎರಡು ರಾಷ್ಟ್ರಗಳಿಗೆ ರಾಷ್ಟ್ರಗೀತೆಗಳನ್ನು ರಚಿಸಿದ ವಿಶ್ವದ ಏಕೈಕ ಕವಿ. ’ಜನ ಗಣ ಮನ’ ಭಾರತದ ರಾಷ್ಟ್ರಗೀತೆಯಾದರೆ, ’ಅಮರ್ ಶೋನರ್ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.
ಆರಂಭದಲ್ಲಿ ಮನೆಪಾಠ, ನಂತರ ಶಾಲೆ, ಕಾಲೇಜಿನಲ್ಲಿ ಅಭ್ಯಾಸ ಮಾಡಿದರೂ ಅವರಿಗೆ ಈ ಬ್ರಿಟಿಶ್ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆ ಆಸಕ್ತಿಕರವಾಗಿರಲಿಲ್ಲ. ಆದರೂ ವಿದ್ಯಾಭ್ಯಾಸ ಮುಂದುವರಿದು, ತಾಯಿಯ ಮರಣಾನಂತರ ಲಂಡನ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಠಾಗೋರ್ ಅವರು ಬ್ಯಾರಿಸ್ಟರ್ ಆಗಲಿ ಎಂಬ ಕುಟುಂಬ ಸದಸ್ಯರ ಕನಸು ನನಸಾಗಲಿಲ್ಲ. ಅಲ್ಲಿಂದ ಭಾರತಕ್ಕೆ ಮರಳಿ ರಚಿಸಿದ ‘ವಾಲ್ಮೀಕಿ ಪ್ರತಿಭಾ’, ‘ಕಾಲಮೃಗಯೂ’, ‘ಭಗ್ನ ಹೃದಯ’ ನಾಟಕಗಳು ಭಾರತೀಯ ನಾಟಕ ಪರಂಪರೆಯ ಇತಿಹಾಸದಲ್ಲಿ ದಾಖಲಾದವು.
ಅವರು ತೀವ್ರವಾದ ನೋವುಗಳನ್ನು ಅನುಭವಿಸುತ್ತಿದ್ದ ಅವಧಿಯಲ್ಲಿ ಗೀತಾಂಜಲಿ ಕವನ ಸಂಕಲನವು ಆಂಗ್ಲ ಲೋಕವನ್ನು ಪ್ರವೇಶಿಸಿತು. ೧೯೦೨ರಲ್ಲಿ ಹೆಂಡತಿಯ ಸಾವು, ೧೯೦೫ರಲ್ಲಿ ತಂದೆಯ ಸಾವು, ೧೯೦೭ರಲ್ಲಿ ಮಗ ಸಮೀಂದ್ರ, ಮಗಳು ರೇಣುಕಾಳ ಸಾಲುಸಾಲು ಸಾವುಗಳು ಅವರ ಕಣ್ಣೆದುರೇ ಘಟಿಸಿದವು. ಇದಾದ ನಂತರ ಅವರ ಆರೋಗ್ಯವೂ ಕೆಡುತ್ತಾ ಬಂತು. ಈ ಅವಧಿಯಲ್ಲಿ ಅವರು ರಚಿಸಿದ ’ಗೀತಾಂಜಲಿ’ ಕವನ ಸಂಕಲನವನ್ನು ೧೯೧೨ರ ಹೊತ್ತಿಗೆ ಪೂರ್ಣ ಕವನ ಸಂಕಲನವಾಗಿ ಬಿಡುಗಡೆ ಮಾಡುತ್ತಾರೆ. ೧೯೧೨ರಲ್ಲಿ ತೀವ್ರ ಅನಾರೋಗ್ಯದ ಅವಧಿಯಲ್ಲಿ ಬಂಗಾಳಿ ಭಾಷೆಯಿಂದ ತಮ್ಮ ಕವನಗಳನ್ನು ಇಂಗ್ಲಿಶ್ ಭಾಷೆಗೆ ಅನುವಾದಿಸುತ್ತಾರೆ. ಆ ನಂತರ ಅದು ಇಂಗ್ಲಿಶ್ ರೊಮ್ಯಾಂಟಿಕ್ ಕವಿ ಯೇಟ್ಸ್ ಕೈ ತಲುಪುತ್ತದೆ. ’ಇಡೀ ಪಾಶ್ಚಿಮಾತ್ಯ ಜಗತ್ತು ಠಾಗೋರ್‌ರಂತ ಕವಿಗಾಗಿ ಕಾಯುತ್ತಿದೆ’ ಎಂದು ಅವರು ಈ ಕವಿತೆಗಳನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ’ರವೀಂದ್ರ ಪಡೆದ ಪ್ರಸಿದ್ಧಿಯನ್ನು ಯೂರೋಪಿನಲ್ಲಿ ಯಾವ ಕವಿಯೂ ಪಡೆದಿಲ್ಲ. ಮಾನವ ಕುಲದ ಸಕಲ ಮಹತ್ವಾಕಾಂಕ್ಷೆಗಳೂ ಅವರ ಪ್ರಾರ್ಥನಾ ಗೀತೆಗಳಲ್ಲಿವೆ. ರವೀಂದ್ರರ ಪೂಜ್ಯ ಮನೋಭಾವ, ಸೌಂದರ್ಯ ಪ್ರಜ್ಞೆ, ಲಲಿತ ಲಯಗಾರಿಕೆ, ಅನುವಾದಿಸಲು ಅಸಾಧ್ಯವಾದ ನವಿರಾದ ವರ್ಣನಾ ವೈವಿಧ್ಯತೆ, ನವನವೀನ ಛಂದೋವಿನ್ಯಾಸಗಳು, ಕವಿಯ ಚಿಂತನ ಸ್ತರಗಳು ಶ್ರೇಷ್ಠತಮವಾಗಿದ್ದು, ಕನಸಿನ ಲೋಕವನ್ನು ತೆರೆದಿಡುತ್ತವೆ. ಅವರ ಬರವಣಿಗೆ ಸಮೃದ್ಧವಾಗಿಯೂ, ನವನವೋನ್ಮೇಷಶಾಲಿಯಾಗಿಯೂ, ದಿಟ್ಟತನದ ಭಾವೋದ್ವೇಗದಿಂದ ವಿಸ್ಮಯಕರವಾಗಿಯೂ, ಹೃದಯದಲ್ಲಿ ಸುಂದರ ಸುಮನೋಹರ ಭಾವದಲೆಗಳ ಪ್ರತಿಮೆಗಳನ್ನು ಮೂಡಿಸುತ್ತವೆ. ರವೀಂದ್ರರ ದೈವೀ ಪ್ರೇಮವೂ ತಮ್ಮ ಹೃದಯದಾಳದಲ್ಲಿ ಭೋರ್ಗರೆದು ನಿರಂತರವಾಗಿ ಹೊರಹರಿಯುತ್ತದೆ’ ಎಂದು ಇಂಗ್ಲಿಷ್ ಗೀತಾಂಜಲಿಯ  ಮುನ್ನುಡಿಯಲ್ಲಿ ಠಾಗೋರ್ ಅವರ ಕಾವ್ಯದ ಕಾಳಜಿ, ಮೂಲ ಆಶಯಗಳು, ಅದರ ಆದರ್ಶಗಳನ್ನು ಕುರಿತು ಯೇಟ್ಸ್ ಜಗತ್ಸಾಹಿತ್ಯಕ್ಕೆ ಇವರ ಕೊಡುಗೆಯನ್ನು ಸಾರುತ್ತಾರೆ. ಅದರ ಪರಿಣಾಮದಿಂದ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸುತ್ತದೆ.
ಈ ಕ್ರಿಯೆ ರಾಮಾಯಣ ರಚನೆಯ ಕಾರಣದಂತಿದೆ. ಎರಡು ಕ್ರೌಂಚ ಪಕ್ಷಿಗಳು ಮಿಲನದ ಸಂದರ್ಭದಲ್ಲಿ ಬಾಣಕ್ಕೆ ಗುರಿಯಾಗಿ ಸತ್ತ ಪಕ್ಷಿಯ ಸುತ್ತ ಗಿರಕಿ ಹೊಡೆಯುವಾಗ ಉಂಟಾದ ಶೋಕದಿಂದ ಶ್ಲೋಕ ಹುಟ್ಟಿದಂತೆ ಸ್ವಯಂ ಶೋಕದಿಂದ ಗೀತಾಂಜಲಿ ಕವನ ಸಂಕಲನ ಇಂಗ್ಲಿಶ್‌ಗೆ ಅನುವಾದವಾಗುತ್ತದೆ.
ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಮೃತಿಯನ್ನು ಉದ್ದೀಪನಗೊಳಿಸುವ ವಿಶಿಷ್ಟ ಕೃತಿಗಳಾಗಿ ಅವರ ಚಿಂತನೆಗಳು ಪ್ರವಾಹದೋಪಾದಿಯಲ್ಲಿ ಹರಿದಿವೆ. ೧೯೧೨ರಲ್ಲಿ ರಚನೆಯಾದ ಗೀತಾಂಜಲಿ ಕವನ ಸಂಕಲನ ರಚನೆಯಾಗಿ ೧೦೨ ವರ್ಷಗಳಾದರೆ, ಆ ಕೃತಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸಂದು ೧೦೧ ವರ್ಷಗಳಾಗಿವೆ. ಸಾಹಿತ್ಯಕ್ಕಾಗಿಯಾಗಲಿ, ಬೇರಾವುದೇ ಕ್ಷೇತ್ರದ ಸಾಧನೆಗಾಗಿ ಭಾರತೀಯ ಸಂಜಾತನಾಗಿ, ಇಲ್ಲೇ ನೆಲೆಸಿದ ಯಾವೊಬ್ಬ ಭಾರತೀಯರಿಗೂ ಇದುವರೆಗೆ ನೊಬೆಲ್ ಪ್ರಶಸ್ತಿ ಬಂದಿಲ್ಲ. ಹಾಗಾಗಿ ಇಂದಿಗೂ ಭಾರತದ ನೊಬೆಲ್ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿದೆ.
೧೮೮೩ರಲ್ಲಿ ಕಾರವಾರದಲ್ಲಿ ಉದ್ಯೋಗದಲ್ಲಿದ್ದ ಅವರ ಸಹೋದರರನ್ನು ಭೇಟಿಯಾಗಲು ಬರುತ್ತಾರೆ. ಇಲ್ಲಿನ ಪರಿಸರದಿಂದ ಉತ್ತೇಜಿರಾದ ಅವರು ಪ್ರಾಕೃತಿಕ ಪರಿಶೋಧ ಎಂಬ ನಾಟಕವನ್ನು ರಚಿಸುತ್ತಾರೆ. ಇವರ ಭೇಟಿಯ ನೆನಪಿಗಾಗಿ ಕಾರವಾರ ಕಡಲತೀರಕ್ಕೆ ’ರವೀಂದ್ರನಾಥ ಠಾಗೋರ್ ಸಮುದ್ರತೀರ’ವೆಂದು ನಾಮಕಾರಣ ಮಾಡಲಾಗಿದೆ. ೧೯೨೮ರಲ್ಲಿ ಇವರು ಬೆಂಗಳೂರಿಗೂ ಭೇಟಿ ನೀಡಿ ಬಾಲಬ್ರೂಯಿ ಅತಿಥಿಗೃಹದಲ್ಲಿ ತಂಗಿದ್ದರು. ಬೆಂಗಳೂರಿನಲ್ಲಿ ಸುಸಜ್ಜಿತವಾಗಿರುವ ರಂಗಮಂದಿರಕ್ಕೆ ರವೀಂದ್ರ ಕಲಾಕ್ಷೇತ್ರ ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ಇವರ ಜನಗಣಮನ ರಾಷ್ಟ್ರಗೀತೆಯು ಬ್ರಿಟಿಶ್ ಅಧಿಕಾರಿಯೋರ್ವನನ್ನು ಸ್ತುತಿಸುವ ಗೀತೆಯೆಂಬ ವಿವಾದ ಹುಟ್ಟಿತು. ಇದರ ಜತೆಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಗಿರೀಶ್ ಕಾರ್ನಾಡ್ ಅವರು ’ಅವರೊಬ್ಬ ಶ್ರೇಷ್ಠ ನಾಟಕ ರಚನಕಾರರಾಗಿರಲಿಲ್ಲ. ಅವರು ಶ್ರೇಷ್ಠ ಕವಿಯಾಗಿದ್ದರು. ನಾವೆಲ್ಲ ಅವರ ಕವಿತೆಗಳಿಂದಷ್ಟೇ ಪ್ರಭಾವಿತರಾಗಿದ್ದೆವು. ಅವರು ಶ್ರೇಷ್ಠ ನಾಟಕ ಕೃತಿಗಳನ್ನು ರಚಿಸಲಿಲ್ಲ. ಅವರು ಕಳಪೆ ನಾಟಕಗಳನ್ನು ಬರೆದಿದ್ದಾರೆ. ಈ ವಿಷಯದಲ್ಲಿ ನಾವು ಪ್ರಾಯೋಗಿವಾಗಿರನೇಕು’ ಎಂದು ಅಭಿಪ್ರಾಯಪಟ್ಟರು. ಕೃತಿಯೊಂದರ ಮಹತ್ವ ಏಕವ್ಯಕ್ತಿಯ ಪ್ರತಿಕ್ರಿಯೆಯಿಂದ ನಿರ್ಧಾರಿತವಾಗುವುದಿಲ್ಲ. ಹೀಗೆ ವಿಮರ್ಶೆಗೆ ಒಳಗಾಗುವ ಪೂರ್ವದಲ್ಲೇ ರವೀಂದ್ರರು ಜನಮಾನಸದಲ್ಲಿ ನೆಲೆನಿಂತಹ ಬಹಳ ಕಾಲವಾಗಿದೆ.
ಕನ್ನಡದಲ್ಲಿ ರವೀಂದ್ರರ ನೂರೊಂದು ಕವನಗಳು, ರವೀಂದ್ರ ನಿಬಂಧ ಮಾಲಾ, ಗೀತಾಂಜಲಿಯ ಅನೇಕ ಅನುವಾದಗಳು ಹಾಗೂ ಅವರ ನಾಟಕಗಳ ಕೆಲವು ಅನುವಾದಗಳು ಪ್ರಕಟವಾಗಿವೆ. ಹೆಸರಾಂತ ಅನುವಾದಕರಿಂದ, ಕವಿಗಳು, ಯುವಕರೂ ರವೀಂದ್ರ ಅವರ ಕೃತಿಗಳನ್ನು ಇಂದಿಗೂ ಮುಖಾಮುಖಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ೧೫೦ ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಅನೇಕ ಕೃತಿಗಳನ್ನು ಸಾಹಿತ್ಯ, ಸಂಗೀತ, ಚಿತ್ರಕಲೆಯ ವಿವಿಧ ಪ್ರಕಾರಗಳಿಗೆ ಅಳವಡಿಸಿ ದೇಶದಾದ್ಯಂತ ಪ್ರದರ್ಶಿಸುವ, ಪ್ರಯೋಗಿಸುವ ಕೆಲಸಗಳು ನಡೆದವು.

Monday 5 May 2014

                          ಹೆಚ್ಚುತ್ತಿರುವ ಅವಮರ್ಮಾದೆ ಹತ್ಯೆ 
                                                                                                              ಪ್ರದೀಪ್ ಮಾಲ್ಗುಡಿ
          ೧೯೫೭ರಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಅವರು “ಆಧುನಿಕ ಸಂದರ್ಭದಲ್ಲಿ ಜಾತಿಯು ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ” ಎಂದಿದ್ದರು. ಸಮಾಜಶಾಸ್ತ್ರಜ್ಞರು ಇವರನ್ನು ಅನೇಕ ಸಂದರ್ಭದಲ್ಲಿ ಕಟುಟೀಕೆಗೆ ಗುರಿ ಮಾಡಿದ್ದರು. ಅವರ ’ಸಂಸ್ಕೃತೀಕರಣ’ ಪರಿಕಲ್ಪನೆಯನ್ನು ಅಂಚಿನ ಜಾತಿಯವರು ಆಮೂಲಾಗ್ರವಾಗಿ ತಿರಸ್ಕರಿಸಿದ್ದರು.
           ಆದರೆ ಪ್ರಸ್ತುತ ನಡೆಯುತ್ತಿರುವುದು ಮನೆತನದ ಗೌರವ ರಕ್ಷಣೆ, ಧರ್ಮ ಅಥವಾ ಜಾತಿಯ ಕಾರಣಕ್ಕಾಗಿ ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಅವಮರ್ಯಾದೆ ಹತ್ಯೆಗಳು ಅಮಾನವೀಯವಾಗಿ ನಡೆಯುತ್ತಿವೆ. ತಮ್ಮ ಕುಟುಂಬಕ್ಕೆ ಕೆಳಜಾತಿಯವರನ್ನು ಮದುವೆಯಾಗುವ ಮೂಲಕ ಅಗೌರವವನ್ನುಂಟು ಮಾಡುವುದು ಹಾಗೂ ಕುಟುಂಬದ ಮರ್ಯಾದೆಗೆ ಧಕ್ಕೆ ತರುವಂತೆ ಕುಟುಂಬದ ಮಹಿಳಾ ಸದಸ್ಯರು ನಡೆದುಕೊಂಡಾಗ, ಅದೇ ಕುಟುಂಬದ ಪುರುಷ ಸದಸ್ಯರು ಮಹಿಳೆಯರನ್ನು ಸಾಯಿಸುವ ಕುಕೃತ್ಯ ಮರ್ಯಾದೆ ಹತ್ಯೆಯೆಂದು ಹೆಸರಾಗಿದೆ. ಇದರ ಭೀಕರತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಕುಟುಂಬದವರು ಏರ್ಪಡಿಸಿದ ಮದುವೆಯ ನಿರಾಕರಣೆ, ಅತ್ಯಾಚಾರಕ್ಕೊಳಗಾಗುವುದು, ವಿಚ್ಛೇದನ ನೀಡುವುದು, ವ್ಯಭಿಚಾರಕ್ಕಿಳಿಯುವುದು, ಬೇರೆ ಜಾತಿಯ ಯುವಕ ಅಥವಾ ಯುವತಿಯನ್ನು ಪ್ರೀತಿಸುವುದು, ಇವೆಲ್ಲಾ ಹತ್ಯೆಗೆ ಕಾರಣವಾಗುತ್ತಿವೆ.
           ಉತ್ತರ ಭಾರತವಂತೂ ಮರ್ಯಾದೆ ಹತ್ಯೆಯ ನೆಲೆಬೀಡಾಗಿದೆ. ಉತ್ತರಾಖಂಡ್, ಪಂಜಾಬ್, ರಾಜಸ್ತಾನ, ಹರ್ಯಾಣ, ಉತ್ತರ ಪ್ರದೇಶ ಮೊದಲಾದೆಡೆ ಈ ಹತ್ಯೆಗಳು ನಡೆಯುತ್ತಿವೆ. ಪ್ರೇಮವಿವಾಹ, ಅಂತರ್ಜಾತಿ ವಿವಾಹ, ಅಂತಧರ್ಮೀಯ ವಿವಾಹ ಅಥವಾ ಪ್ರೇಮಾಂಕರದ ಸಮಯದಲ್ಲೂ ಪ್ರೇಮಿಗಳ, ವಧು ಅಥವಾ ವರನ ಹತ್ಯೆ ಮಾಡುವುದು ಕೋಮುವಾದಿಗಳಿಗೆ ಹಾಗೂ ಮತಾಂಧರಿಗೆ ಉದ್ಯೋಗವಾಗಿಬಿಟ್ಟಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ವಿರಳವಾಗಿದ್ದವು. ಆದರೆ ಧಾರವಾಡ, ಮೈಸೂರು, ಬೆಂಗಳೂರು, ಮಂಡ್ಯ, ಮದ್ದೂರುಗಳಲ್ಲಿ ೨೦೧೧ರಿಂದ ದಾಖಲಾಗಿರುವ ಪ್ರಕರಣಗಳು ಕರ್ನಾಟಕದ ಮಟ್ಟಿಗೂ ಆತಂಕಕಾರಿಯಾಗಿ ಬೆಳೆಯುತ್ತಿವೆ. ಕರ್ನಾಟಕ ಸರ್ವಧರ್ಮ ಸಮನ್ವಯದ, ಶಾಂತಿಯ ನೆಲೆಬೀಡೆಂದು ಹೆಸರಾಗಿತ್ತು. ವಚನ ಚಳುವಳಿಯ ಸಮಯದಲ್ಲೇ ಅಂತರ್ಜಾತಿ ವಿವಾಹದ ಪ್ರಯತ್ನದ ಮೂಲಕ ಜಾತಿ ವಿನಾಶದ ಪ್ರಯತ್ನ ಆರಂಭವಾಗಿತ್ತು.
ಕುಟುಂಬ ಗೌರವದ ಹೆಸರಿನಲ್ಲಿ ತಮ್ಮ ಕರುಳ ಕುಡಿಗಳನ್ನು ಹತ್ಯೆ ಮಾಡುತ್ತಿರುವುದು ಮಾನವೀಯತೆಯ ಮೇಲೆ ನಡೆಯುತ್ತಿರುವ ಹಲ್ಲೆ. ಕರುಣೆಯ ಹೊನಲು ಹರಿಯಬೇಕಿದ್ದ ಸಂದರ್ಭದಲ್ಲಿ ಜಾತಿದ್ವೇಷದ ಕರಾಳ ನೆರಳು ಬೀಳುತ್ತಿರುವ ಪರಿಣಾಮ ಇಂತಹ ಅಮಾನುಷ ಹತ್ಯೆಗಳಿಗೆ ಕಾರಣವಾಗುತ್ತಿವೆ.

ಜಾತಿ, ಅಂತಸ್ತು, ಐಶ್ವರ್ಯ, ವರ್ಣಗಳ ಕಾರಣಕ್ಕೆ ಜಗತ್ತಿನಲ್ಲಿ ರಕ್ತಪಾತ ನಡೆದಿರುವುದು ಹೊಸದಲ್ಲ. ಆದರೆ, ತಮ್ಮ ಮಕ್ಕಳನ್ನೂ ಬೆಂಕಿಗೆ ಅರ್ಪಿಸುವ, ನೇಣು ಕುಣಿಕೆಗೆ ಏರಿಸುವ, ವಿಷವುಣಿಸುವ ಅಚಾತುರ್ಯಗಳು ನಾಗರಿಕ ಸಮಾಜಕ್ಕೆ ಗೌರವ ತರುವಂತಹವಲ್ಲ. ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಪ್ರವೇಶವಾಗುವ ವಿಷಯವನ್ನು ಕೇಳಿ ಹತ್ಯೆ ಮಾಡುತ್ತಿರುವ ಪೋಷಕರೇ ಎಷ್ಟು ಸುಖಿಸಿದ್ದರೋ? ಆದರೆ, ವಯಸ್ಸಿಗೆ ಬಂದ ಮಕ್ಕಳು ಅನ್ಯ ಜಾತಿ, ಧರ್ಮ, ಅಂತಸ್ತಿನವರನ್ನು ಮದುವೆಯಾಗುವುದನ್ನು ಸಹಿಸುತ್ತಿಲ್ಲ. ಇವರು ಬಾಳಿ ಬದುಕಬೇಕಾದ ಮಕ್ಕಳ ಭವ್ಯ ಭವಿಷ್ಯಕ್ಕಿಂತ, ತಮ್ಮ ಜಾತಿ, ಧರ್ಮ, ಅಂತಸ್ತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ.
        ಮನುಷ್ಯ ಮೂಲತಃ ಸಂಘಜೀವಿ. ಅದರ ಜತೆಗೆ ಆತ ಉದಾರಿ. ಆದರೆ ಆಧುನಿಕ ಜಗತ್ತಿನಲ್ಲಿ ಶೈಕ್ಷಣಿಕ ತಿಳುವಳಿಕೆಯ ಹೊರತಾಗಿಯೂ ಮನುಷ್ಯಪ್ರೀತಿಯ ಸಂವೇದನೆಗಳಿಗೆ ಬದಲಾಗಿ ಜೀವವಿರೋಧಿಯಾಗಿ ವರ್ತಿಸುವ ಕ್ರಿಯೆ ಹೆಚ್ಚಾಗಿದೆ. ತಮ್ಮ ಸಂತಾನವನ್ನು ವೃದ್ಧಿಸುವ ಮುಂದಿನ ಜನಾಂಗದ ಅಭಿಲಾಷೆಗಳಿಗೆ ಕಿವುಡಾಗುವಷ್ಟು ಮೌಢ್ಯ ಆವರಿಸುತ್ತಿದೆ.
ಬರಬರುತ್ತಾ ಜಾತಿ ಬಲಿಷ್ಠವಾಗುತ್ತಿರುವುದಕ್ಕೆ ಈ ಕೆಟ್ಟ ಉದಾಹರಣೆಗಳು ಸಾಕ್ಷಿಯಾಗಿವೆ. ಬಡವರ, ಕೆಳಜಾತಿಯವರ ಜೊತೆ ಸೌಹಾರ್ದಯುತವಾದ ನಡವಳಿಕೆ, ಸಂಬಂಧ, ಹೊಂದಾಣಿಕೆಗಳ ಬದಲಾಗಿ ಸಮಾಜದಲ್ಲಿ ನಿರಂತರ ಸಂಘರ್ಷ ನಡೆಯುತ್ತಿರುವುದು ದುರಾದೃಷ್ಟಕರ. ಸಂಕರವೆಂಬುದು ಪ್ರಕೃತಿಯಷ್ಟೇ ಸಹಜವಾಗಿದ್ದರೂ ಶುದ್ಧತೆಯ ಅಮಲೇರಿಸಿಕೊಂಡಿರುವ ಆಧುನಿಕ ಮನುಷ್ಯರು ಅವನತಿಯ ಹಾದಿ ಹಿಡಿಯುತ್ತಿದ್ದಾರೆ. ಹಣ, ಕುಲ, ವಿದ್ಯೆ,  ರೂಪ, ಯೌವನ, ಬಲ, ಪರಿವಾರ, ಅಧಿಕಾರಗಳೆಂಬ ಅಷ್ಟಮದಗಳಿಂದ ಅರಿಷಡ್ವರ್ಗಗಳ ಕರಾಳ ಹಿಡಿತಕ್ಕೆ ಸಿಲುಕಿ ದುಷ್ಟರಾಗುತ್ತಿದ್ದಾರೆ. ಅಷ್ಟಮದ ಮತ್ತು ಅರಿಷಡ್ವರ್ಗಗಳಲ್ಲಿ ಯಾವ ಒಂದರ ದಾಳಿಗೆ ಮನುಷ್ಯ ತುತ್ತಾದರೂ ಬದುಕುವುದು ಕಷ್ಟಸಾಧ್ಯ. ಆದರೆ, ಈ ಎಲ್ಲವುಗಳ ಹಿಡಿತದಲ್ಲಿ ಆಧುನಿಕ ಮಾನವರು ಬಂಧಿಯಾಗಿದ್ದಾರೆ. ಇದರ ದುಷ್ಪರಿಣಾಮವನ್ನು ನಾವೀಗ ಕಣ್ಣೆದುರು ಕಾಣುತ್ತಿದ್ದೇವೆ.
      ಹುಸಿ ಮರ‍್ಯಾದೆಗೆ ಅಂಜುವ ಬದಲು ಬಂದದ್ದೆಲ್ಲವನ್ನೂ ಗೌರವದಿಂದ ಸ್ವೀಕರಿಸುವ ಉದಾರತೆ ನಮಗಿಂದು ರೂಢಿಯಾಗಬೇಕಿದೆ. ಇದುವರೆಗೆ ನಡೆದ ಇಂತಹ ಹತ್ಯೆಗಳಿಗೆ ಕಾರಣರಾದವರು ಈಗ ಸಮಾಜದಲ್ಲಿ ಅಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗಾದರೆ ಅವರು ಹತ್ಯೆಯ ಮೂಲಕ ಸಾಧಿಸಬೇಕೆಂದಿದ್ದ ಗೌರವ, ಈಗ ಇದ್ದುದಕ್ಕಿಂತ ಪಾತಾಳ ಸೇರಿದಂತಾಗಲಿಲ್ಲವೇ? ಇಂತಹ ಸಾಮಾನ್ಯ ಪ್ರಜ್ಞೆಯಿಂದ ಯೋಚಿಸಬೇಕಾಗಿದೆ. ಆಗ ಇಂತಹ ಹತ್ಯೆಗಳು ನಿಲ್ಲುವ ಸಾಧ್ಯತೆಗಳಿವೆ.
       ಇದರ ಹಿಂದೆ ಕೆಲಸ ಮಾಡುತ್ತಿರುವುದು ಮೂಢನಂಬಿಕೆ. ವೈಚಾರಿಕತೆಯ ಕೊರತೆಯಿಂದ ಅಮಾನವೀಯವಾಗಿ ವರ್ತಿಸಿ, ನೋಡುವವರ ಕಣ್ಣಿಗೆ ಹೀನಾಯವಾಗಿ ಕಾಣುವ ದುರಂತಕ್ಕೆ ಕೆಲವು ಕುಟುಂಬಗಳು ಬಲಿಯಾಗುತ್ತಿವೆ. ತಾವು ತಮ್ಮ ಗೌರವವನ್ನು ಉಳಿಸಿಕೊಳ್ಳುವ ಸಲುವಾಗಿ ತೆಗೆದುಕೊಂಡ ಬಲಿಯಿಂದಾಗಿ ಸ್ವತಃ ತಾವೂ ಬಲಿಯಾಗುವುದು ತಪ್ಪುವುದಿಲ್ಲವೆಂಬ ವೈಚಾರಿಕ ತಿಳಿವಳಿಕೆ ನಮ್ಮದಾಗಬೇಕಿದೆ.