Search This Blog

Monday 16 March 2015

ಜಾಗತೀಕರಣ ಹಾಗಂದರೇನು?
ಕೆಪ್ಪರ ನಡುವೆ ಶ್ರೋತೃಗಳ ಹುಡುಕಾಟ 
- ಪ್ರದೀಪ್ ಮಾಲ್ಗುಡಿ

ನಾಡಿನೆಲ್ಲೆಡೆ ಜಾಗತೀಕರಣ ಕುರಿತು ಬಹುತೇಕರು ಅದನ್ನು ಸಮರ್ಥಿಸಿಯೋ ಅಥವಾ ವಿಮರ್ಶಿಸಿಯೋ ಮಾತನಾಡುತ್ತಿರುವುದು ಈಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ಜಾಗತೀಕರಣವೆಂದರೇನು? ಎಂಬ ಪ್ರಶ್ನೆಗೆ ಇನ್ನೂ ಭಾರತೀಯರು ಖಚಿತ ಉತ್ತರ ಕಂಡುಕೊಂಡಿಲ್ಲ. ರಾಜಕಾರಣಿಗಳು, ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು, ಚಿಂತಕರು, ಸಂಶೋಧಕರ ಬಾಯಲ್ಲಿ ಸದಾ ಜಾಗ ಪಡೆದಿರುವ ಇದಕ್ಕೆ ವ್ಯಾಖ್ಯೆ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ತುಸು ಕಷ್ಟಕರವಾದ ಕೆಲಸವಾಗಿದೆ. ಜಾಗತೀರಣವೆಂದರೆ ತೃತೀಯ ರಾಷ್ಟ್ರಗಳನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಲು ನವವಸಾಹತುಶಾಹಿಗಳು ಬಳಸಿದ ಆಕರ್ಷಕ ಪರಿಭಾಷೆ. ಇದು ಆರ್ಥಿಕ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡಿದೆ. ಆದರೆ ಅದಕ್ಕೆ ಕೇವಲ ಆರ್ಥಿಕ ಹಿತಾಸಕ್ತಿಗಳು ಮಾತ್ರ ಮುಖ್ಯವಾಗಿಲ್ಲ. ಅದರ ಜತೆಗೆ ಸ್ಥಳೀಯ ಭಾಷೆ, ಧರ್ಮ, ನಂಬಿಕೆ, ಆಚರಣೆ, ಸಂಪ್ರದಾಯ, ಉದ್ಯೋಗ, ಶಿಕ್ಷಣ, ಆಡಳಿತ ಮೊದಲಾದ

ಚಿತ್ರ ಕೃಪೆ: ಬಿಸಿನೆಸ್ ನ್ಯೂಸ್
ಸಾಂಸ್ಕೃತಿಕ ಹಾಗೂ ರಾಜಕೀಯ ವಿಷಯಗಳನ್ನೂ ನಿಧಾನಕ್ಕೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರವಿದೆ. ಇದನ್ನು ಉದಾಹರಿಸದ ಹೊರತು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಇಲ್ಲವಾದಲ್ಲಿ ಈ ಲೇಖನ ಜಾಗತೀಕರಣದ ವಿರೋಧಿಯೊಬ್ಬನ ಬಡಬಡಿಕೆಯಂತೆ ತೋರಬಹುದು. ಪೆಪ್ಸಿ-ಕೋಕಕೋಲ, ಕೆಂಟಕಿ ಚಿಕನ್, ಜೀನ್ಸ್, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಂತರಿಕ ಸಂಬಂಧವಿದೆ. ಇಂದು ಯುಜಿಸಿ ವೇತನವನ್ನು ನಿಗದಿ ಮಾಡುವ ಅವಕಾಶವನ್ನು ಭಾರತದಂತಹ ತೃತೀಯ ರಾಷ್ಟ್ರಗಳು ಕಳೆದುಕೊಂಡಿವೆ ಎಂಬ ಅಂಶ ಸ್ವತಃ ಯುಜಿಸಿ ವೇತನ ಪಡೆಯುತ್ತಿರುವ ಲಕ್ಷಾಂತರ ಪ್ರಾಧ್ಯಾಪಕರ ಅರಿವಿಗೆ ಬಂದಿಲಾರದು. ಅಥವಾ ತಿಳಿದಿದ್ದೂ ಜಾಗತೀಕರಣದ ವಿರುದ್ಧ ಮಾತನಾಡದಂತೆ ಮ್ಯಾಜಿಕ್‌ನಂತೆ ದುಪ್ಪಟ್ಟು ಏರಿಕೆಯಾದ ವೇತನವೂ ಕಾರಣವಾಗಿರಬಹುದು. ಇಲ್ಲವೇ ಇದರ ವಿರುದ್ಧ ಮಾತನಾಡಿದರೆ ಮುಂದೆ ಏರಬಹುದಾದ ವೇತನದ ಮೇಲೆ ನಾವೇ ಏಕೆ ಕಲ್ಲು ಹಾಕಿಕೊಳ್ಳಬೇಕೆಂಬ ಜಾಣ ಕುರುಡಿರಬಹುದು. ಇದಕ್ಕೊಂದು ಕಾರಣವಿದೆ. ಉನ್ನತ ವಿದ್ಯಾಕೇಂದ್ರಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ನವವಸಾಹತುಶಾಹಿಯ ಜಾಗತಿಕ ಭವಿಷ್ಯ ಬಯಲಾಗಿಬಿಡುತ್ತದೆ. ಆದರೆ ಅಲ್ಲಿನ ವ್ಯವಸ್ಥೆಯನ್ನು ಹಾಳುಗೆಡವುವಲ್ಲಿ ಯಶಸ್ವಿಯಾದರೆ ತಮ್ಮ ಬುಡ ಭದ್ರವಾಗಿರುತ್ತದೆಂಬುದು ನವವಸಾಹತುಶಾಹಿಗಳ ದೃಢವಾದ ನಂಬಿಕೆಯಾಗಿದೆ. ಆದರೆ ತಾನು ನಂಬಿದ್ದನ್ನು ಎಲ್ಲರಿಗೂ ತಿಳಿಯದಂತೆ, ಎಲ್ಲರೂ ಒಪ್ಪುವಂತೆ ಮಾಡುವ ಕುತಂತ್ರ ಮಾತ್ರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಇಲ್ಲವಾದಲ್ಲಿ ಈ ಹೊತ್ತಿಗೆ ಜಾಗತೀಕರಣದ ಸುತ್ತ ತೃತೀಯ ರಾಷ್ಟ್ರಗಳಲ್ಲಿ ದೊಡ್ಡ ಜನಾಭಿಪ್ರಾಯ ರೂಪಿತವಾಗಿರಬೇಕಿತ್ತು.
ತೃತೀಯ ರಾಷ್ಟ್ರಗಳ ಅನೈಕ್ಯತೆಯನ್ನು ವಸಾಹತುಶಾಹಿಗಳಂತೆಯೇ ಇಂದಿಗೂ ನವವಸಾಹತುಶಾಹಿಗಳು ಬಳಸಿಕೊಳ್ಳುತ್ತಿದ್ದಾರೆ. ಜಾತಿ, ವರ್ಗ, ವರ್ಣ, ಲಿಂಗ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಸಮಾನತೆಯನ್ನು ಜೈವಿಕ ವಿಷಯವೆಂಬಂತೆ ತಿಳಿದಿರುವ ತೃತೀಯ ರಾಷ್ಟ್ರಗಳನ್ನು ಆಧುನಿಕ ಸಂದರ್ಭದಲ್ಲಿ ಮರಳು ಮಾಡುವುದು ಇನ್ನಷ್ಟು ಸುಲಭಸಾಧ್ಯವಾಗಿದೆ.
ಅಕಾಡೆಮಿಕ್ ವಲಯದಲ್ಲಿ ಇಂದು ಎಲ್ಲ ವಿಷಯಗಳಿಗೂ ಹಿಂದೆ ಅಥವಾ ಮುಂದೆ ಜಾಗತೀಕರಣವನ್ನು ಅಂಟಿಸಿ ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡದಲ್ಲಿ ಇದರ ಬಗೆಗೆ ಸಮರ್ಥವಾಗಿ ಚಿಂತಿಸುವವರ ಸಂಖ್ಯೆಯ ಖಚಿತ ಅಂದಾಜು ಕೂಡ ಸಿಗಲಾರದು. ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ’ಈ ಜಾಗತೀಕರಣದಿಂದಾದರೂ ಜಾತಿ ವ್ಯವಸ್ಥೆ ಹೋಗುವುದಾದರೆ ಹೋಗಲಿಬಿಡಿ’ ಎಂಬ ಮಾತನ್ನು ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡು ’ನೋಡಿ, ನೋಡಿ. ತೇಜಸ್ವಿಯವರೂ ಜಾಗತೀಕರಣದ ಪರ ವಕಾಲತ್ತು ವಹಿಸುತ್ತಿದ್ದಾರೆ’ ಎಂಬಂತಹ ಅಸಂಬದ್ಧ ವಾದವನ್ನು ಮಂಡಿಸಿ ಚರ್ಚೆಯ ಸಾಧ್ಯತೆಗಳನ್ನೇ ಇಲ್ಲವಾಗಿಸಿದರು. ಇದರ ಪರಿಣಾಮದಿಂದ ಅದರ ಸಾಧಕ ಬಾಧಕಗಳ ಚರ್ಚೆಗೇ ಸ್ಥಳವಿಲ್ಲದಂತಾಯಿತು. ಅದರ ದುಷ್ಪರಿಣಾಮ ಇಂದು ನಮ್ಮೆದುರಿದೆ.
ವಸಾಹತೋತ್ತರ ಸನ್ನಿವೇಶದಲ್ಲಿ ತೃತೀಯ ರಾಷ್ಟ್ರಗಳ ಮೇಲೆ ಬಿಗಿಹಿಡಿತ ಸಾಧಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಟ್ (ಜನರಲ್ ಅಗ್ರೀಮೆಂಟ್ ಆನ್ ಟ್ರೇಡ್ ಅಂಡ್ ಟ್ಯಾರಿಫ್) ಒಪ್ಪಂದವನ್ನು ಹೇರುವ ಹುನ್ನಾರ ನಡೆಯಿತು. ಅದನ್ನು ಭಾರತದಲ್ಲಿ ೧೯೯೧ರಲ್ಲಿ ಅಪ್ಪಿಕೊಳ್ಳಲಾಯಿತು. ಇದು ಇಲ್ಲಿ ಮಾಡಿರುವ ಅನಾಹುತಗಳನ್ನು ಅಳೆಯಲು ಇನ್ನೂ ಮಾಪಕಗಳು ಸಿದ್ಧಗೊಂಡಿಲ್ಲ. ಈ ಒಪ್ಪಂದಕ್ಕೆ ಮೂಲ ಕಾರಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಅಂದಿನ ವಿತ್ತ ಸಚಿವರಾಗಿದ್ದ ಇವರು, ಭಾರತದಲ್ಲಿ ಆರ್ಥಿಕ ಸುಧಾರಣೆಯ ಸಲುವಾಗಿ ಈ ಒಪ್ಪಂದಕ್ಕೆ ಭಾರತದ ಹೆಬ್ಬಾಗಿಲನ್ನು ತೆರೆದರು. ಅದರ ನಂತರ ಹಂತಹಂತವಾಗಿ ಭಾರತದ ಆರ್ಥಿಕ ಸ್ಥಿರತೆ ಕುಸಿಯಲಾರಂಭಿಸಿತು.
ಗ್ಯಾಟ್‌ನ ಕರಾಳ ಮುಖಗಳು ಅರಿವಾಗಬೇಕೆಂದರೆ ಕಳೆದ ಎರಡು ದಶಕಗಳಲ್ಲಿ ಭಾರತದ ಗುಡಿ ಕೈಗಾರಿಕೆಗಳ ಮೇಲೆ ವಿದೇಶಿ ಕಂಪನಿಗಳು ಮಾಡಿದ ದಾಳಿಯ ಪರಿಣಾಮ ಏನಾಗಿದೆ ಎಂದು ಪರಿಶೀಲಿಸಬೇಕಿದೆ. ಚಮ್ಮಾರ, ಕಮ್ಮಾರ, ನೇಕಾರ, ಕಂಬಾರ ಹಾಗೂ ಇನ್ನಿತರ ಸ್ವಯಂ ಉದ್ಯೋಗ ನಡೆಸಿ, ಹಳ್ಳಿಗಳಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದ  ಜನ ಗ್ಯಾಟ್ ಒಪ್ಪಂದದ ನಂತರ ಹಂತಹಂತವಾಗಿ ಹಳ್ಳಿಗಳಿಂದ ವಿಮುಖರಾಗತೊಡಗಿದರು. ಇದರ ಇನ್ನೊಂದು ದುಷ್ಪರಿಣಾಮ ರೈತರ ಮೇಲೆ ಕೂಡ ಉಂಟಾಯಿತು. ಇಂದು ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ಜನ ಸಿಗದಿರುವ ಹಂತಕ್ಕೆ ತಲುಪಲು ಕಾರಣ ಅಂದಿನ ವಿವೇಚನಾರಹಿತ ನಿರ್ಧಾರವಾಗಿದೆ. (ಇಲ್ಲಿ ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಎಲ್ಲರೂ ಒಂದರ್ಥದಲ್ಲಿ ಕೂಲಿಗಳೇ. ಆದರೆ ನಾನು ಯಥಾಸ್ಥಿತಿವಾದದ ಪರವಾಗಿ ವಾದ ಮಂಡಿಸುತ್ತಿಲ್ಲ. ವಸ್ತುಸ್ಥಿತಿ ಏನಾಗಿದೆ ಎಂಬುದಷ್ಟೇ ನನ್ನ ಮಂಡನೆ)
ಆದರೆ ಇದನ್ನು ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀರಕರಣಗಳೆಂಬ ಆಕರ್ಷಕ ಹೆಸರಿನಲ್ಲಿ ಮಂಡಿಸಲಾಯಿತು. ದೇಶೀ ಸಮುದಾಯಗಳ ಸ್ವಾವಲಂಬಿ ಜೀವನವನ್ನು ಹಂತಹಂತವಾಗಿ, ಆದರೆ ಹಿಡಿಯಾಗಿ ಆಪೋಶನ ತೆಗೆದುಕೊಳ್ಳುವ ಅನಾಹುತಕಾರಿ ಒಪ್ಪಂದವನ್ನು ದೇಶ ತನಗರಿವಿಲ್ಲದೇ ಸ್ವಾಗತಿಸಿಬಿಟ್ಟಿತು. ನೋಡನೋಡುತ್ತಲೆ ಹಳ್ಳಿಗಳಿಂದ ಯುವಕರು ನಗರಗಳೆಡೆಗೆ ಗುಳೆ ಏಳತೊಡಗಿದರು. ಹಳ್ಳಿಗಳು ಕೇವಲ ರೈತರ, ವಯಸ್ಸಾದವರ ಪಾಲಾಗತೊಡಗಿದವು. ದುಡಿಮೆಗೆ ಹಳ್ಳಿಗಳು ಯೋಗ್ಯವಲ್ಲವೆಂಬಂತೆ ನಗರಗಳು ಬೆಳೆಯತೊಡಗಿದವು. ಈ ನಗರೀಕರಣ ಪ್ರಕ್ರಿಯೆ ಜಾಗತೀಕರಣದ ಪ್ರಮುಖ ಅಂಶವಾಗಿದೆ. ಏಕೆಂದರೆ ನಗರಕೇಂದ್ರಿತ ಉತ್ಪಾದಕ ವಲಯಗಳು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಸ್ವರ್ಗಗಳಂತೆ ಭಾಸವಾಗತೊಡಗಿದವು. ಇದರಿಂದ ಆಕರ್ಷಿತರಾದ ಯುವಕರು ಕಾರ್ಖಾನೆ, ಕಚೇರಿ, ಸಾಫ್ಟ್‌ವೇರ್, ಹಾರ್ಡ್‌ವೇರ್, ಸೆಕ್ಯುರಿಟಿ ಮೊದಲಾದ ಕೆಲಸಗಳಿಗೆ ನಗರಗಳಿಗೆ ದೌಡಾಯಿಸತೊಡಗಿದ್ದು ಆ ಕ್ಷಣಕ್ಕೆ ಬಿಡುಗಡೆಯ ಹಾದಿಯಂತೆ ಕಾಣತೊಡಗಿತು. ಆದರೆ ಕಾಲಾನಂತರದಲ್ಲಿ ಎಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಜೀತವೇ ಎಂಬುದು ಅರ್ಥವಾಗತೊಡಗಿದೆ. ಆದರೆ ಈ ವಿಷಯವನ್ನು ಮನದಟ್ಟು ಮಾಡಿಕೊಳ್ಳುವಷ್ಟರಲ್ಲಿ ಆಗಬಾರದ ಅನಾಹುತಗಳು ನಡೆದಾಗಿದೆ. ಈಗ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂತಹ ಸ್ಥಿತಿ ಆಧುನಿಕ ಗುಳೆಹೊರಟ ಕಾರವಾನ್‌ಗಳದ್ದಾಗಿದೆ.