Search This Blog

Tuesday 13 June 2017

ಮಗ ನರೇಂದ್ರ ಮೋದಿಯವರನ್ನು ಗಂಗಾ ತಾಯಿ ಕೈ ಬೀಸಿ ಕರೆಯುತ್ತಿದ್ದಾಳೆ

ವಾರಾಣಸಿಯಲ್ಲಿ ಮೈಬಿಚ್ಚಿಕೊಂಡು ಹರಿಯುತ್ತಿರುವ ಗಂಗಾ ಮಾತೆ ತಮ್ಮ ಪುತ್ರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಕೈಬೀಸಿ ಕರೆಯುತ್ತಿದ್ದಾಳೆ. ಈಗ ಗಂಗಾ ಮಾತೆಯನ್ನು ಸ್ವಚ್ಛಗೊಳಿಸಿ ಎಂಬ ಘೋಷವಾಕ್ಯದ ಬದಲು, ಗಂಗೆಯನ್ನು ಉಳಿಸಿ ಘೋಷವಾಕ್ಯವನ್ನು ಅವರೀಗ ಚಾಲ್ತಿಗೆ ತರಬೇಕಿದೆ.
ಮೋದಿಯವರಾಗಲಿ ಬಿಜೆಪಿಯವರಾಗಲಿ ಯಾವುದೇ ಧಾರ್ಮಿಕ ಅಂಶಗಳನ್ನು ತಮ್ಮ ಮತಗಳಾಗಿ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಗಂಗೆಯ ವಿಷಯದಲ್ಲೂ ಇದು ಸಾಬೀತಾಗಿದೆ. ಏಪ್ರಿಲ್ 24ರ 2014ರ ಅಂಬೇಡ್ಕರ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ್ದರು. ಅಂದು ಗಂಗಾ ಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಹೇಳುವುದರ ಮೂಲಕ ದೇಶದಲ್ಲಿ ಭಾವುಕ, ಧಾರ್ಮಿಕ ವ್ಯಕ್ತಿಗಳ ಮನಸನ್ನು ಕದ್ದುಬಿಟ್ಟಿದ್ದರು. ಭಾವುಕತೆಯನ್ನು ಬಂಡವಾಳವಾಗಿಸಿಕೊಳ್ಳುವ ಚಾಳಿ ಅವರಿಗೆ ರಕ್ತಗತವಾಗಿದೆ.
ಮೇ 18, 2014ರಂದು ಗಂಗಾ ಆರತಿಯನ್ನು ದಶಾಶ್ವಮೇಧ ಘಾಟ್​​ನಲ್ಲಿ ಮೋದಿ ಮಾಡಿದ್ದರು. ಆಗ ನಾನು ವಾರಾಣಸಿ ಮತ್ತು ಗಂಗೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಭೀಷ್ಮ ಪ್ರತಿಜ್ಞೆಯನ್ನೂ ಕೈಗೊಂಡಿದ್ದರು.
ತಾವು ನೀಡಿದ್ದ ಬಹುತೇಕ ಭರವಸೆಗಳನ್ನು ಮರೆತುಬಿಟ್ಟಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಗಂಗಾ ಪುನರುಜ್ಜೀವನ ಯೋಜನೆಯೊಂದನ್ನು ಮಾತ್ರ ಮರೆಯಲಿಲ್ಲ. ಗಂಗಾ ನದಿಯ ಸ್ವಚ್ಛತೆಯ ಹೊಣೆಯನ್ನು ಜಲಸಂಪನ್ಮೂಲ ಇಲಾಖೆಯ ಹೆಗಲಿಗೆ ಹಾಕಿದರು. ಗಂಗಾ ಪುನರುಜ್ಜೀವನ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವೆ ಉಮಾ ಭಾರತಿಯವರಿಗೆ ವಹಿಸಿದರು.
ನಮಾಮಿ ಗಂಗೆ ಯೋಜನೆಯನ್ನು ಘೋಷಿಸಿದ ಪ್ರಧಾನಿ ಮೇ 12, 2015ರಂದು ಬರೋಬ್ಬರಿ 20,000 ಕೋಟಿ ರೂ. ಮೊತ್ತವನ್ನು ಈ ಯೋಜನೆಗೆ ಒದಗಿಸುವ ಭರವಸೆ ನೀಡಿದ್ದರು. ಅವಶ್ಯಕತೆ ಇದ್ದಾಗ ಇನ್ನೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಕೂಡ ಹೇಳಿದರು.
ಆಗಸ್ಟ್​ 2016ರ ಹೊತ್ತಿಗೆ ಬರೋಬ್ಬರಿ 2,958 ಕೋಟಿ ರೂ.ಗಳನ್ನು ಗಂಗಾ ಮಾತೆಯ ಸ್ವಚ್ಛತೆಗೆ ಕೇಂದ್ರ ಸರ್ಕಾರ ವಿನಿಯೋಗಿಸಿದೆ ಎಂದು ಆರ್​ಟಿಐ ಅಡಿ ಸಲ್ಲಿಸಲಾದ ಅರ್ಜಿಗೆ ವಿವರ ಲಭ್ಯವಾಗಿತ್ತು.
ಮೂರು ವರ್ಷಗಳ ನಂತರದ ರಿಯಾಲಿಟಿ ಚೆಕ್​​​ನಿಂದ ಲಭ್ಯವಾಗಿರುವ ಮಾಹಿತಿಗಳು ಬೇರೊಂದು ಕತೆಯನ್ನೇ ಹೇಳುತ್ತವೆ. ಮೋದಿ ಬೆಂಬಲಿಗ ಪರಿಸರವಾದಿಗಳು ಮತ್ತು ಗಂಗಾ ಮಾತೆಯನ್ನು ಆಧುನಿಕ ಭಗೀರಥನಾಗಿ ನರೇಂದ್ರ ಮೋದಿಯವರು ಜನರ ಬಳಕೆಗೆ ಲಭ್ಯವಾಗುವಂತೆ ಮಾಡಿಯೇ ಮಾಡುತ್ತಾರೆ ಎಂದು ನಂಬಿಕೊಂಡಿರುವ ಶ್ರದ್ಧಾವಂತ ಹಿಂದೂಗಳಿಗಂತೂ ಈ ಮಾಹಿತಿಗಳು ಕಹಿ ಕಷಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದೇ ವರ್ಷದ ಮಾರ್ಚ್​​ನಲ್ಲಿ ಉತ್ತರಾಖಂಡ್ ಹೈ ಕೋರ್ಟ್​ ಗಂಗೆ ಮತ್ತು ಯಮುನಾ ನದಿಗಳಲ್ಲಿ ಕಲುಷಿತ ವಸ್ತುಗಳನ್ನು ಎಸೆಯದಂತೆ ಸೂಚನೆ ನೀಡಿತ್ತು. ಕೆಲವು ದಿನಗಳ ಹಿಂದೆ ಗಂಗಾ ನದಿಯಲ್ಲಿ ಕಸ ಸುರಿದಿರುವ ಕುರಿತು ಸ್ವತಃ ಬಿಜೆಪಿ ಅಧಿಕಾರದಲ್ಲಿರುವ ಉತ್ತರಾಖಂಡ್ ಸರ್ಕಾರ ಅಧಿಕೃತವಾಗಿ ಕೋರ್ಟ್​ನಲ್ಲಿ ಹೇಳಿಕೆ ನೀಡಿತ್ತು.
ಇದಕ್ಕೆ ಪೂರಕವಾಗಿ ಗಂಗಾ ನದಿಯ ದಡದಲ್ಲಿ ವಾಸಿಸುವ ನಾಗರಿಕರ ಅನುಭವಗಳು ಇವೆ. ಈ ಹಿಂದಿಗಿಂತ ಗಂಗಾ ನದಿ ಮಲಿನವಾಗಿದೆ ಮತ್ತು ಒಣಗಿ ಹೋಗಿದೆ ಎನ್ನುವುದು ಅವರ ಅಭಿಪ್ರಾಯ. ಮೋದಿಯವರ ತವರು ಕ್ಷೇತ್ರ ವಾರಾಣಸಿಯೊಂದರಲ್ಲೇ 32 ಚರಂಡಿಗಳಿಂದ ಪ್ರತಿನಿತ್ಯ ಮಲಿನ ನೀರು ಪವಿತ್ರ ಗಂಗಾ ಮಾತೆಯನ್ನು ಸೇರುತ್ತಿದೆ. ವಾರಾಣಸಿಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿಲ್ಲ. ಇನ್ನು ನದಿಯ ನೀರಿನಲ್ಲಿ ಅಗತ್ಯ ಪ್ರಮಾಣದ ನೀರಿನ ಅಂಶಗಳಾಗಲಿ ಅಥವಾ ಆಮ್ಲಜನಕವಾಗಲಿ ಇಲ್ಲ ಎನ್ನುವುದು ಜಲ ತಜ್ಞರ ಅಭಿಪ್ರಾಯ.
ಸದ್ಯಕ್ಕೆ ಪ್ರಧಾನಿಯವರು ಮಾಡಬೇಕಾದ ಮೊದಲ ಕರ್ತವ್ಯವೆಂದರೆ ತಮ್ಮ ಮಾನಸ ತಾಯಿ ಗಂಗೆಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಅದಕ್ಕಾಗಿ ಸ್ವಚ್ಛ ಗಂಗಾ ಬದಲು ಗಂಗಾ ಉಳಿಸಿ ಆಂದೋಲನವನ್ನು ಕೈಗೊಳ್ಳಬೇಕು. ಸದ್ಯಕ್ಕೆ ಗಂಗಾ ಮಾತೆ ಉಳಿವಿಗಾಗಿ ಹೋರಾಡುತ್ತಿದ್ದಾಳೆ. ತನ್ನ ಕಂದ ಮೋದಿಯವರನ್ನು ಎರಡೂ ಕೈಬೀಸಿ ಕರೆಯುತ್ತಿದ್ದಾಳೆ. ಈ ದೃಶ್ಯ ಮೋದಿಯವರ ಕನಸಿಗೆ ಬಂದರೆ ಅವರು ಎಚ್ಚೆತ್ತಾರೇ?
ಪ್ರದೀಪ್ ಮಾಲ್ಗುಡಿ ಹಿರಿಯ ಉಪ ಸಂಪಾದಕ

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಪ್ರಹಸನ

ಗರಿಷ್ಠ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಆರು ತಿಂಗಳುಗಳು ಕಳೆದು ಹೋಗಿವೆ. ಇಂದು ಕೂಡ ಎಟಿಎಂಗಳಲ್ಲಿ ‘ನೋ ಕ್ಯಾಶ್ ಬೋರ್ಡ್​’ ನೇತಾಡುವುದು ಮತ್ತು ಬ್ಯಾಂಕ್​​ಗಳಿಗೆ ಹಿಡಿಶಾಪ ಹಾಕುವ ಘಟನೆಗಳು ನಿಂತಿಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಇನ್ನೆಷ್ಟು ದಿನಗಳ ಅವಧಿ ಬೇಕು ಎಂಬುದು ಪ್ರಾಯಶಃ ಆರ್​ಬಿಐಗೂ ತಿಳಿದಿಲ್ಲ.
ನವೆಂಬರ್ 8ರಂದು ಚಲಾವಣೆಯಲ್ಲಿದ್ದ ಶೇ. 85ರಷ್ಟು 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಷೇಧಿಸಿದ್ದರು. ನಿಷೇಧದ ವೇಳೆ ಅವರು ಕೊಟ್ಟ ಕಾರಣಗಳು ಆಪ್ಯಾಯಮಾನವಾಗಿದ್ದವು. ಭ್ರಷ್ಟಾಚಾರ, ಕಪ್ಪು ಹಣ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗಳ ನಿಯಂತ್ರಣ ಎಂಬ ಆಕರ್ಷಕ ಮತ್ತು ಸಾಧಿಸಲಾಗದ ಕನಸುಗಳನ್ನು ಭಾರತೀಯರ ಎದೆಯೊಳಗೆ ಬಿತ್ತಿದರು.
ದೇಶದಲ್ಲಿ ಕನಸುಗಳನ್ನು ಕೊಲ್ಲುವುದು ಹೊಸದಲ್ಲ. ಆದರೆ, ಬಿತ್ತುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು 2014 ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಿಂದ ಮಾಡುತ್ತಿದ್ದಾರೆ. ಅವುಗಳಿಗೆ ನೀರೆರೆಯುವ ಕೆಲಸ ಮಾತ್ರ ಇದುವರೆಗೆ ಆಗಿಲ್ಲ. ಆದರೆ, ಕನಸು ಬಿತ್ತಿಸಿಕೊಂಡವರು ಮಾತ್ರ ಅವುಗಳನ್ನು ಪೋಷಿಸುತ್ತಿದ್ದಾರೆ. ಆದರೆ, ಕೇವಲ ನೀರೆರೆಯುವಷ್ಟು ಮಾತ್ರ ಸಾಮರ್ಥ್ಯ ಬಿತ್ತಿಸಿಕೊಂಡವರಿಗಿದೆ. ಅದಕ್ಕೆ ಪ್ರಧಾನಿ ಮೋದಿಯವರೇ ಸೂಕ್ತ ನೆರಳು, ಗೊಬ್ಬರ ಕೊಡಬೇಕಾಗಿದೆ. ಇಲ್ಲವಾದಲ್ಲಿ ದೇಶದ ಅಪೌಷ್ಟಿಕತೆಯ ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರ ಕನಸುಗಳಿಗೂ ಒದಗುತ್ತದೆ.
ಆದರೆ, ಅವರು ಮತ್ತಷ್ಟು ಕನಸುಗಳನ್ನು ಬಿತ್ತುವ ಕೆಲಸದಲ್ಲೇ ನಿರತರಾಗುತ್ತಿದ್ದಾರೆ. ಇಂಥ ಎಷ್ಟು ಕನಸುಗಳನ್ನು ಅವರು ತಮ್ಮ ಸ್ಟಾಕ್​​ನಲ್ಲಿಟ್ಟುಕೊಂಡಿದ್ದಾರೆ ಎನ್ನುವುದನ್ನು ಅವರ ಆಡಳಿತಾವಧಿ ಮುಗಿದ ಮೇಲಷ್ಟೆ ಲೆಕ್ಕ ಹಾಕಬಹುದು. ಇನ್ನಷ್ಟು ಕನಸುಗಳನ್ನು ಅವರು ಬಿತ್ತುವುದರಲ್ಲಂತೂ ಯಾವುದೇ ಸಂಶಯವಿಲ್ಲ.
ನೋಟು ನಿಷೇಧ ವಿಷಯದಲ್ಲಿ ಸರ್ಕಾರ ತರಾತುರಿಯ ನಿರ್ಧಾರ ಕೈಗೊಂಡಿರುವುದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ನೋಟು ನಿಷೇಧದಂಥ ದೇಶದ ಸಮಸ್ತ ನಾಗರಿಕರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕಾಂಗಿಯಾಗಿ ತೆಗೆದುಕೊಂಡರೆ ಎಂಬ ಅನುಮಾನ ನಂತರದ ಬೆಳವಣಿಗಗಳಿಂದ ಮೂಡಿದೆ. ಅವರು ಆರ್ಥಿಕ ತಜ್ಞರ ಬಳಿ ಕೂಡ ಚರ್ಚಿಸಿರುವುದಕ್ಕೆ ಯಾವುದೇ ಉದಾಹರಣೆಗಳು ಸಿಕ್ಕಿಲ್ಲ.
ಆರ್​ಟಿಐ ಮೂಲಕ ಸಿಕ್ಕ ಮಾಹಿತಿಗಳ ಪ್ರಕಾರ, ನೋಟು ನಿಷೇಧ ನಿರ್ಧಾರಕ್ಕೂ ಕೆಲವೇ ಗಂಟೆಗಳ ಮೊದಲು ಆರ್​ಬಿಐಗೆ ಐತಿಹಾಸಿಕ ನಿರ್ಧಾರದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಈ ನಿರ್ಧಾರವನ್ನು ಆರ್​ಬಿಐ ಸಮಿತಿ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಕೂಡ ಸ್ವತಃ ಆರ್​ಬಿಐ ಗವರ್ನರ್ ನೀಡಿರುವ ಗೊಂದಲಮಯ ಹೇಳಿಕೆಗಳಿಂದ ಸಾಬೀತಾಗಿದೆ.
ನೋಟು ನಿಷೇಧದ ದಿನದಂದು ಮೋದಿಯವರು ಬಿತ್ತಿದ ಕನಸುಗಳನ್ನು ಒಂದೊಂದಾಗಿ ನೋಡೋಣ. ಭ್ರಷ್ಟಾಚಾರ ನಿಯಂತ್ರಣ ಅವರ ಮೊದಲ ಕನಸಾಗಿತ್ತು. ಆದರೆ, ನೋಟ್​ ಬ್ಯಾನ್​ನಿಂದಲೇ 50ಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಡುವ ಭ್ರಷ್ಟಾಚಾರದಲ್ಲಿ ತೊಡಗಿಕೊಂಡರು. ಈ ಮೂಲಕ ಪ್ರಧಾನಿಯವರ ಮೊದಲ ಕನಸಿಗೆ ಕೊಳ್ಳಿ ಇಟ್ಟವರು ಬ್ಯಾಂಕ್ ಅಧಿಕಾರಿಗಳು ಮತ್ತು ಸಿರಿವಂತರು.
ನರೇಂದ್ರ ಮೋದಿಯವರು ತಮ್ಮ ಅಭಿಮಾನಿಗಳಿಗೆ ಮನೋರಂಜನೆ ಕೊಡುವ ಮೂಲಕ ಸುಖಿಸುತ್ತಾರೆ. ದೊಡ್ಡ ಮಹಲುಗಳಲ್ಲಿ ಸುಖವಾಗಿದ್ದವರು ಈಗ ನೋಟು ಬದಲಿಸಿಕೊಳ್ಳಲು ದೊಡ್ಡ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಸಭೆಯೊಂದರಲ್ಲಿ ಅವರು ಹೇಳಿದರು. ಇದಕ್ಕೆ ಭರಪೂರ ಚಪ್ಪಾಳೆಗಳೂ ಸಿಕ್ಕವು. ಆದರೆ, ಅವರು ಹೇಳಿದ್ದಕ್ಕೂ ವಾಸ್ತವಕ್ಕೂ ದೊಡ್ಡ ಅಂತರವಿತ್ತು.
ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ದೊಡ್ಡ ಸರದಿ ಸಾಲಿನಲ್ಲಿ ಯಾವ ರಾಜಕಾರಣಿ, ಉದ್ಯಮಿ, ಅಧಿಕಾರಿಗಳೂ ನಿಲ್ಲಲಿಲ್ಲ. ಬದಲಾಗಿ ವಿದ್ಯಾರ್ಥಿಗಳು, ಮಹಿಳೆಯರು, ಬಡವರು, ಅಂಗವಿಕಲರು, ಹಿರಿಯ ನಾಗರಿಕರು, ಅಶಕ್ತರು ಎಲ್ಲ ಬಂದು ಬ್ಯಾಂಕ್​ಗಳಲ್ಲಿ ನರೆದಿದ್ದರು.
ಇಡೀ ದೇಶದ ಜನರನ್ನು ಏಕಕಾಲಕ್ಕೆ ಇಂಥ ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆ ಭಾರತದ ಇತಿಹಾಸದಲ್ಲೇ ಎಂದೂ ನಡೆದಿರಲಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಇಡೀ ವಿಶ್ವದಲ್ಲೇ ನೋಟು ನಿಷೇಧ ನಿರ್ಧಾರ ವಿಫಲವಾಗಿದೆ. ಆದರೆ, ತಮ್ಮ ಸೈದ್ಧಾಂತಿಕ ನಂಬಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಓಬಿರಾಯನ ಕಾಲದ ನಿರ್ಧಾರವನ್ನು 125 ಕೋಟಿ ಭಾರತೀಯರ ಮೇಲೆ ಹೇರಿದ್ದರು.
ನೋಟ್ ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ನಾಗರಿಕರು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಅಚಾತುರ್ಯದ ನಿರ್ಧಾರಕ್ಕೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆ ಕೋರಿಲ್ಲ. ಕನಿಷ್ಠ ಅವರ ಆತ್ಮಗಳಿಗೂ ಶಾಂತಿ ಕೋರುವ ಸೌಜನ್ಯವನ್ನು ಅವರು ತೋರಿಸಿಲ್ಲ. ತಮ್ಮ ಟ್ವೀಟ್ ಖಾತೆಯನ್ನೂ ಇದಕ್ಕೆ ಬಳಸಿಕೊಂಡಿಲ್ಲ.
ಕಪ್ಪುಹಣ ನಿಯಂತ್ರಣ ಅವರು ಬಿತ್ತಿದ್ದ ಇನ್ನೊಂದು ಕನಸು. 2014ರಲ್ಲಿ ತಾವು ಅಧಿಕಾರಕ್ಕೆ ಬಂದರೆ 100 ದಿನದಲ್ಲಿ ಅವರು ವಿದೇಶದಲ್ಲಿರುವ ಕಪ್ಪುಹಣವನ್ನು ತರುವುದಾಗಿ ಈಡೇರಿಸಲಾಗದ ಕನಸನ್ನು ಬಿತ್ತಿದ್ದರು. ಆದರೆ, ಸುಪ್ರೀಂ ಕೋರ್ಟ್ ನೀಡಿದ ಚಾಟಿ ಏಟಿಗೆ ಎಚ್ಚರವಾಗಿದ್ದ ಮೋದಿ ಸರ್ಕಾರ, ಸುಮಾರು 600 ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದಿದ್ದೇವೆ ಎಂದುಕೊಂಡು ಸುಮ್ಮನಾಗಿಬಿಟ್ಟಿತ್ತು. ಆದರೆ, ಇದ್ದಕ್ಕಿದ್ದಂತೆ ಬಿಜೆಪಿಗೆ ಎಚ್ಚರವಾಗಿದ್ದು ಏಕೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಅದರಲ್ಲೂ ವಿದೇಶದ ಹಣ ತಂದಿರುವ ತೃಪ್ತಿಯ ನಡುವೆ! ಮುಂದೆ ನಡೆಯಲಿರುವ ಪಂಚರಾಜ್ಯಗಳ ಚುನಾವಣೆಯ ಕಾರಣಕ್ಕೆ ಸ್ವದೇಶದಲ್ಲಿರುವ ಕಪ್ಪುಹಣ ನಿಯಂತ್ರಣವಾಗಿಲ್ಲವಲ್ಲ ಎಂಬ ಜ್ಞಾನೋದಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗಿಬಿಟ್ಟಿತ್ತು. ಇದಕ್ಕೆ ಅನೇಕ ಕಾರಣಗಳೂ ಇದ್ದವು.
ಇದಕ್ಕೂ ಮುನ್ನ ದೇಶದಾದ್ಯಂತ ಗೋರಕ್ಷಕರು ದಲಿತರು, ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕೊಲ್ಲುವುದಾದರೆ ನನ್ನನ್ನು ಕೊಲ್ಲಿ. ನಮ್ಮ ಸೋದರರಾದ ದಲಿತರನ್ನು ಕೊಲ್ಲಬೇಡಿ ಎಂದು ಅಂಗಲಾಚಿಕೊಂಡರು. ಆದರೆ, ಗೋರಕ್ಷಕರು ಮಾತ್ರ ತಮ್ಮ ಕ್ರೌರ್ಯವನ್ನು ಮುಂದುವರೆಸಿದ್ದರು.
ಇನ್ನು ಅಚ್ಚೇದಿನ್ ತರುವ ಭರವಸೆ ಕೂಡ ಸುಳ್ಳಾಗಿತ್ತು. ದೈನಂದಿನ ಬಳಕೆಯ ವಸ್ತುಗಳು ಮತ್ತು ಇಂಧನದ ಬೆಲೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಕೇಂದ್ರ ಸರ್ಕಾರದ ಇಂಥ ಸೋಲುಗಳು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆಯನ್ನ ಒಡ್ಡಿದ್ದವು. ಇಂಥ ವಿಷಮ ಸಂದರ್ಭದಲ್ಲಿ ನೋಟು ನಿಷೇಧ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ರಾಜ್ಯಗಳಲ್ಲಿ ಕಮಲವನ್ನು ಅರಳಿಸುವ ಕನಸು ಮೋದಿಯವರಿಗಿತ್ತು. ಆದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್​​ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂತು. ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದ್ದ ಗೋವಾ ಮತ್ತು ರಾಜ್ಯಗಳಲ್ಲಿ ಪಕ್ಷ ಅಧಿಕಾರವನ್ನು ಕಳೆದುಕೊಂಡಿತು. ಹಿಂಬಾಗಿಲ ಮೂಲಕ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಧಿಕಾರವನ್ನೂ ಹಿಡಿದು, ಮೀಸೆ ಮಣ್ಣಾಗಿಲ್ಲ ಎಂದು ಬಿಜೆಪಿ ಮರೆಯಲ್ಲಿ ನಕ್ಕಿತ್ತು. ಇಂಥ ಕಾರಣದಿಂದಾಗಿ ದೇಶದ ಗಮನವನ್ನು ಸೆಳೆಯುವುದು ಬಿಜೆಪಿಗೆ ಹೊಸದಲ್ಲ. ಇದು ಕೂಡ ಅಂಥದ್ದೇ ಮತ್ತೊಂದು ತಂತ್ರವಾಗಿತ್ತು.
ಮೋದಿಯವರ ಮಹತ್ವಾಕಾಂಕ್ಷಿ ಕನಸು ಕಪ್ಪು ಹಣ ನಿಯಂತ್ರಣವಾಯಿತೇ? ಎಂಬ ಪ್ರಶ್ನೆಗೆ ಉತ್ತರವನ್ನು ಮೋದಿಯವರಾಗಲಿ, ಆರ್​ಬಿಐ ಆಗಲಿ ನೀಡಿಲ್ಲ. ಆರ್​ಬಿಐ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 15 ಲಕ್ಷ ಕೋಟಿಯಷ್ಟು ನಿಷೇಧಿಸ್ಪಟ್ಟ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಇವುಗಳ ಪೈಕಿ ಶೇ. 98ರಷ್ಟು ನೋಟುಗಳು ವಿನಿಮಯವಾಗಿವೆ. ಇನ್ನು ಶೇ. 2ರಷ್ಟು ಮಾತ್ರ ಹಣ ವಿನಿಮಯವಾಗಿಲ್ಲ. ಹಾಗಾದರೆ ಕಪ್ಪು ಹಣ ನಿಯಂತ್ರಣವಾಗಿದ್ದು ಹೇಗೆ?
ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೋದಿ ಬೆಂಬಲಿಗರು, ಹೊಸ ನೋಟಿನಲ್ಲಿ ಚಿಪ್ ಇದೆ, ಕೆಲವು ದಿನಗಳ ನಂತರ ಈ ನೋಟು ಮಾಯವಾಗುತ್ತದೆ ಎಂಬಂಥ ಕತೆಗಳನ್ನು ಕಟ್ಟಿ ನರೇಂದ್ರ ಮೋದಿಯವರು ನೀಡುವ ಮನೋರಂಜನೆಗಳಿಗೆ ಸ್ಪರ್ಧೆ ಒಡ್ಡಿದರು. ಇದರ ನಡುವೆ ಬಲಿಯಾದ ನೂರಾರು ಜೀವಗಳ ಕುರಿತು ಯಾವ ಬಿಜೆಪಿ ನಾಯಕರಿಗಗಾಗಲಿ, ಸ್ವತಃ ಮೋದಿಯವರಿಗಾಗಲಿ ಕಾಳಜಿ ಇರಲಿಲ್ಲ. ಶೇ. 2ರಷ್ಟು ಹಣ ನಿಯಂತ್ರಿಸುವ ಸಲುವಾಗಿ ನೂರಾರು ಜನರನ್ನು ಬಲಿಕೊಡಬೇಕಿತ್ತೆ? ಕೋಟ್ಯಂತರ ಜನರನ್ನು ಬೀದಿಯಲ್ಲಿ ನಿಲ್ಲಿಸಬೇಕಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು? ಭ್ರಷ್ಟಾಚಾರ ಮತ್ತು ಕಪ್ಪು ಹಣ ನಿಯಂತ್ರಣಗಳು ನೋಟು ನಿಷೇಧದಿಂದ ಸಾಧ್ಯವಾಗಲಿಲ್ಲ ಎನ್ನುವುದನ್ನು ಇಂದಿಗೂ ಮೋದಿ ಮತ್ತವರ ಬೆಂಬಲಿಗರು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ನೋಟ್ ಬ್ಯಾನ್ ವೇಳೆ ಮೋದಿ ಕಂಡ ಇನ್ನೊಂದು ಕನಸು ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣ. 2016ರ ನವೆಂಬರ್ 16 - 21ರವರೆಗೆ ಒಟ್ಟು 27 ಬಾರಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಅಲ್ಲಿಂದ ಮುಂದೆ ಕೂಡ ಕಾಶ್ಮೀರದಲ್ಲಿ ಗಲಭೆಗಳು ನಿರಂತರವಾಗಿ ನಡೆದವು. ನೋಟ್ ಬ್ಯಾನ್ ನಿಷೇಧಿಸಿದ ನವೆಂಬರ್​​ನಿಂದ ಜನವರಿ ಹೊತ್ತಿಗೆ 100ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘಿಸಿತು. ಕಳೆದ ಮೂರು ದಿನಗಳಿಂದ 3 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟಾಟೋಪ ಕೂಡ ಏರಿಕೆಯಾಗಿದೆ.
ಇವೆಲ್ಲಕ್ಕೂ ಕಳಶವಿಟ್ಟಂತೆ ಅಮೆರಿಕ ಗುಪ್ತಚರ ಇಲಾಖೆ ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಿಂದ ದೇಶದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುತ್ತವೆ ಎಂಬ ಎಚ್ಚರಿಕೆ ನೀಡಿದೆ. ಹಾಗಾದರೆ ಗಡಿಯಾಚೆಗಿನ ಭಯೋತ್ಪಾದನೆ ನಿಂತಿದ್ದು ಯಾವಾಗ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಮೋದಿ ಮತ್ತವರ ಬೆಂಬಲಿಗರು ಭ್ರಷ್ಟಾಚಾರ ನಿಯಂತ್ರಣವಾಗಿ, ಕಪ್ಪುಹಣ ನಿರ್ಮೂಲನೆಯಾಗಿ, ಗಡಿಯಾಚೆಗಿನ ಭಯೋತ್ಪಾದನೆಗಳೆಲ್ಲ ನಿಯಂತ್ರಣವಾಗಿರುವ ಕನಸುಗಳಲ್ಲಿ ಕನವರಿಸಿಕೊಂಡಿದ್ದಾರೆ.
ನೋಟು ನಿಷೇಧಿಸಿದ ಆರು ತಿಂಗಳು ತುಂಬಿದ ದಿನದಂದೇ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ನೋಟು ನಿಷೇಧದಿಂದ ಕಪ್ಪು ಹಣ ನಿಯಂತ್ರಣ ಸಾಧ್ಯವಿಲ್ಲ. ಇನ್ನು ಆರಂಭದಲ್ಲಿ ಬ್ಯಾಂಕ್​​ಗಳಲ್ಲಿ ನೋಟಿನ ಕೊರತೆ ಎದುರಾಗಿ ಜನ ಪರದಾಡಿದ್ದರು. ಆಗ ಕೇವಲ 50 ದಿನ ಈ ಸಮಸ್ಯೆಯನ್ನು ಸಹಿಸಿಕೊಳ್ಳಿ. ನಂತರ ಎಲ್ಲ ಸಹಜ ಸ್ಥಿತಿಗೆ ಮರಳಲಿದೆ ಎಂಬ ಭರವಸೆ ನೀಡಿದ್ದರು. ಈಗ ಅಂಥ ನಾಲ್ಕನೇ 50 ದಿನಗಳೂ ಇನ್ನೇನು ಕೆಲವೇ ದಿನಗಳಲ್ಲಿ ಕಳೆದು ಹೋಗುತ್ತವೆ. ಎಟಿಎಂಗಳಲ್ಲಿ ನೋ ಕ್ಯಾಷ್ ಬೋರ್ಡ್​​ ನೋಡಿದಾಗಲೆಲ್ಲ ಪ್ರಧಾನಿಯವರ 50 ದಿನದ ಭರವಸೆ ನೆನಪಾಗುತ್ತದೆ. ಮತ್ತೂ ಇವರ ಗಡಿಯಾರ ಮತ್ತು ಕ್ಯಾಲೆಂಡರ್​ಗಳ ಮೇಲೆ ನನಗೆ ಅನುಮಾನ ಮೂಡುತ್ತದೆ.
ಕಡೆಗೂ ಮೋದಿಯವರು ಬೆಟ್ಟ ಅಗೆದು ಇಲಿ ಹಿಡಿದರು ಎನ್ನುವುದಷ್ಟೇ ಇಡೀ ನೋಟು ನಿಷೇಧ ಪ್ರಹಸನದ ಹಿಂದಿರುವ ಹೂರಣ. ಆರು ತಿಂಗಳ ನಂತರ ಕೂಡ ಕೆಲವು ಪ್ರಶ್ನೆಗಳಿವೆ.
1. ಹಳೆಯ ನೋಟುಗಳ ವಿನಿಮಯ ಪ್ರಮಾಣ ಎಷ್ಟು?
2. ನೋಟ್ ಬ್ಯಾನ್ ನಂತರ ಎಷ್ಟು ಪ್ರಮಾಣದ ಕಪ್ಪು ಹಣವನ್ನು ನಿಯಂತ್ರಿಸಲಾಗಿದೆ?
3. ಭಾರತದ ಆರ್ಥಿಕ ಬೆಳವಣಿಗೆಗೆ ನೋಟ್ ಬ್ಯಾನ್ ಕೊಡುಗೆ ಏನು?
4. ನೋಟ್​ ಬ್ಯಾನ್​​ನಿಂದ ಲಾಭವಾಗಿದ್ದು ಯಾರಿಗೆ? ನಷ್ಟವಾಗಿದ್ದು ಯಾರಿಗೆ?
5. ಡಿಜಿಟಲ್ ವಹಿವಾಟಿಗೆ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಕೈಗೊಂಡ ಕ್ರಮಗಳೇನು?
6. ಹಳೆಯ ನೋಟುಗಳ ಪರಿಸ್ಥಿತಿ ಏನಾಗಿದೆ?
7. ಕಪ್ಪು ಹಣ ನಿಯಂತ್ರಣವಾಯಿತೇ?
8. ಭ್ರಷ್ಟಾಚಾರ ನಿಯಂತ್ರಣವಾಯಿತೇ?
9. ಭಯೋತ್ಪಾದನೆ ನಿಯಂತ್ರಣವಾಯಿತೇ?
ಎಂಬ ಪ್ರಮುಖ ಪ್ರಶ್ನಗೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಾಗಲಿ ಅಥವಾ ಅವರ ಬೆಂಬಲಿಗರಾಗಲಿ ಉತ್ತರಿಸಿದರೆ ಭಾರತೀಯರು ಕೃತಾರ್ಥರಾದರೂ ಆಗಬಹುದು.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ

ಜಮ್ಮು ಕಾಶ್ಮೀರದಲ್ಲಿ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಮೈತ್ರಿ ಪಕ್ಷ ಪಿಡಿಪಿಗೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ತಡವಾಗಿ ವರದಿಯಾಗಿದೆ. ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರ ಅಕ್ಷರಶಃ ಕಾದ ಕುಲುಮೆಯಾಗಿದೆ. ಶಾಲಾ ಕಾಲೇಜು ಬಂದ್, ಜನಜೀವನ ಅಸ್ತವ್ಯಸ್ತತೆ ನಿರಂತರವಾಗಿದೆ. ಇನ್ನು ಪೊಲೀಸರು ಮತ್ತು ಸೇನೆಯ ಮೇಲೆ ನಾಗರಿಕರ ಕಲ್ಲೆಸೆತ, ಇದನ್ನು ತಡೆಯಲು ಪೆಲೆಟ್ ಗನ್​ಗಳ ಬಳಕೆ ಇತ್ಯಾದಿ ನಡೆದಿವೆ.
ಈ ನಡುವೆ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಕಣಿವೆ ರಾಜ್ಯದ ರಾಜೌರಿಯಲ್ಲಿ ಬೆಳೆ ಕಟಾವು ಮಾಡಲು ಕೂಡ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಸಿಎಂ ಆದರೆ, ಪರಿಸ್ಥಿತಿಯನ್ನು ತಹಬಂದಿಗೆ ತರುವುದು ಸಾಧ್ಯ ಎಂದು ಬಿಜೆಪಿ ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿಯವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ತಂತ್ರ ಹೆಣೆಯುತ್ತಿದೆ.
ಆದರೆ, ಈ ಪ್ರಸ್ತಾವನೆಯನ್ನು ಮೆಹಬೂಬ ಮುಫ್ತಿ ನಿರಾಕರಿಸಿದ್ದಾರೆ. ಏಪ್ರಿಲ್ 24ರಂದು ಜಮ್ಮು ಕಾಶ್ಮೀರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದ ಮೆಹಬೂಬ ಮುಫ್ತಿಯವರ ಮುಂದೆ ಈ ಪ್ರಸ್ತಾವನೆಯನ್ನು ಇಡಲಾಗಿದೆ ಎಂದು ವರದಿಯಾಗಿದೆ. ಬಿಜೆಪಿಯ ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ.
ಮುಫ್ತಿ – ಮೋದಿ ಭೇಟಿ ವೇಳೆ 6 ತಿಂಗಳಿಗೊಮ್ಮೆ ಸಿಎಂ ಹುದ್ದೆಯನ್ನು ಮೈತ್ರಿಪಕ್ಷಗಳು ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆಯನ್ನೂ ಮುಫ್ತಿಯವರ ಮುಂದಿಡಲಾಗಿದೆ. ಆದರೆ ಈ ಯಾವ ಪ್ರಸ್ತಾವನೆಗಳಿಗೂ ಮುಫ್ತಿ ಸಹಮತ ವ್ಯಕ್ತಪಡಿಸಿಲ್ಲ.
87 ಸದಸ್ಯ ಬಲದ ಕಾಶ್ಮೀರ ವಿಧಾನಸಭೆಗೆ 2014ರಲ್ಲಿ ಚುನಾವಣೆ ನಡೆದಿತ್ತು. ನ್ಯಾಷನಲ್ ಕಾನ್ಫರೆನ್ಸ್​​ನ ಒಮರ್ ಅಬ್ದುಲ್ಲಾ ಅಧಿಕಾರ ಕಳೆದುಕೊಂಡಿದ್ದರು. ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್​ 15, ಕಾಂಗ್ರೆಸ್ 12, ಜೆಕೆ ಪಿಸಿ 2, ಸಿಪಿಐ (ಎಂ) ಮತ್ತು ಜೆಕೆ ಪಿಡಿಎಫ್​ ತಲಾ ಒಂದು ಹಾಗೂ ಮೂವರು ಪಕ್ಷೇತರರು ವಿಧಾನಸಭೆಗೆ ಆಯ್ಕೆಯಾಗಿದ್ದರು.
ಪಿಡಿಪಿ ಮತ್ತು ಬಿಜೆಪಿ ನಡುವೆ ಮೈತ್ರಿ ಕೂಟದಿಂದ ಪಿಡಿಪಿಯ ಮುಫ್ತಿ ಮೊಹಮದ್ ಸಯೀದ್ ಸಿಎಂ ಆಗಿದ್ದರು. ಆದರೆ, ಜನವರಿ 7, 2016ರಂದು ಅವರ ನಿಧನದ ನಂತರ, ಮೈತ್ರಿಕೂಟದಲ್ಲಿ ಸಿಎಂ ಯಾವ ಪಕ್ಷದವರು ಆಗಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 4, 2016ರವರೆಗೆ ಹಲವು ಸುತ್ತಿನ ಮಾತುಕತೆಗಳು ನಡೆದು, ಅಂತಿಮವಾಗಿ ಮುಫ್ತಿ ಮೊಹಮದ್ ಸಯೀದ್ ಪುತ್ರಿ ಮೆಹಬೂಬ ಮುಫ್ತಿ ಅವರಿಗೆ ಸಿಎಂ ಹುದ್ದೆಯನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು.
ಪಿಡಿಪಿ ಮತ್ತು ಬಿಜೆಪಿ ವಿಧಾನಸಭೆಯಲ್ಲಿ ಗಳಿಸಿರುವ ಸ್ಥಾನಗಳ ನಡುವೆ ಇರುವ ಅಂತರ ಕೇವಲ 3. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಕ್ಕೆ ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿ ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದೆ ಎಂದು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಇದೀಗ ಬದಲಾದ ಪರಿಸ್ಥಿತಿಯಲ್ಲಿ ಹಿಂಬಾಗಿಲಿನಿಂದ ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. 2004ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 79, ಕಾಂಗ್ರೆಸ್ 65, ಜೆಡಿಎಸ್ 58 ಸ್ಥಾನಗಳನ್ನು ಗಳಿಸಿತ್ತು. ಆದರೆ, ಅತಿಹೆಚ್ಚಿನ ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರದಿಂದ ದೂರ ಉಳಿದು, ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು.
2006ರಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮುರಿದಿದ್ದ ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. 58 ಸ್ಥಾನ ಗಳಿಸಿದ್ದ ಜೆಡಿಎಸ್​​ನ ಕುಮಾರಸ್ವಾಮಿಯವರಿಗೆ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. 20 ತಿಂಗಳ ಅವಧಿಗೆ ಅಧಿಕಾರವನ್ನು ಹಂಚಿಕೊಂಡು ಮೊದಲು ಕುಮಾರಸ್ವಾಮಿ ನಂತರ ಯಡಿಯೂರಪ್ಪ ಸಿಎಂ ಎಂದು ಒಪ್ಪಂದವಾಗಿತ್ತು.
ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕುಮಾರಸ್ವಾಮಿ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿದರು. 2009ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110, ಕಾಂಗ್ರೆಸ್ 80, ಜೆಡಿಎಸ್ 28 ಸ್ಥಾನಗಳನ್ನು ಗಳಿಸಿತ್ತು. ನಂತರ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಕೂಡ ರಣತಂತ್ರ ಹೆಣೆಯುತ್ತಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

ಸರ್ಕಾರದ ಜಿಡಿಪಿ ಪ್ರಗತಿ ಕುರಿತು ಅನುಮಾನ ವ್ಯಕ್ತಪಡಿಸಿದ ಆರ್ಥಿಕ ತಜ್ಞರು

ಭಾರತ ಸರ್ಕಾರ ನೀಡಿದ ಜಿಡಿಪಿ ವರದಿ ಉತ್ಪ್ರೇಕ್ಷಿತ ಎಂದ ಆರ್ಥಿಕ ತಜ್ಞರು ಹೇಳಿದ್ದೇನು?
ರಫ್ತು ಮತ್ತು ಆಮದು ವಹಿವಾಟುಗಳಲ್ಲಿ ಇಳಿಕೆ
ಅಸಂಘಟಿತ ವಲಯದಲ್ಲಿ ನಿರುದ್ಯೋಗ
ಕೈಗಾರಿಕೆಗಳ ಬೆಳವಣಿಗೆಯಲ್ಲಿ ನಿಧಾನಗತಿ
ಬ್ಯಾಂಕ್​ಗಳ ಸಾಲ ನೀಡುವು ಸಾಮರ್ಥ್ಯದಲ್ಲಿ ಕುಸಿತ
ಇನ್ನಿತರ ವಲಯಗಳಲ್ಲಿ ಅಸಂಖ್ಯ ಸಮಸ್ಯೆಗಳು
ಜಿಡಿಪಿ ಕುರಿತು ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಉತ್ಪ್ರೇಕ್ಷಿತ ಎಂದು ಭಾರತೀಯ ಮೂಲದ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರ್ಥಿಕ ತಜ್ಞ ವಿಜಯ ಆರ್‌. ಜೋಷಿ ಅಭಿಪ್ರಾಯಪಟ್ಟಿದ್ದಾರೆ. India’s Long Road – The Search for Prosperity ಎಂಬ ತಮ್ಮ ಕೃತಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ 5.5ಕ್ಕೆ ಕುಸಿದಿದೆ. ಆದರೆ, ಸರ್ಕಾರ ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ ಎಂದಿದ್ದಾರೆ.
ರಫ್ತು ಮತ್ತು ಆಮದು ವಹಿವಾಟುಗಳಲ್ಲಿ ಇಳಿಕೆಯಾಗಿದೆ. ಅಸಂಘಟಿತ ವಲಯದಲ್ಲಿ ನಿರುದ್ಯೋಗ ಏರಿಕೆಯಾಗಿದೆ. ಕೈಗಾರಿಕೆಗಳ ಬೆಳವಣಿಗೆ ನಿಧಾನಗತಿಗೆ ಇಳಿದಿದೆ. ಇನ್ನು ಸಾಲ ನೀಡುವುದರಲ್ಲಿ ಕೂಡ ಬ್ಯಾಂಕ್​​ಗಳು ಹಿಂದುಳಿದಿವೆ. ಇದರಂತೆ ದೇಶದ ಅನೇಕ ವಲಯಗಳಲ್ಲಿ ಅಸಂಖ್ಯ ಸಮಸ್ಯೆಗಳು ತಲೆದೋರಿವೆ. ಈ ಎಲ್ಲ ಮಿತಿಗಳ ನಡುವೆ ಶೇ. 7ರಷ್ಟು ಜಿಡಿಪಿ ಸಾಧಿಸುವುದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಭಾರತದ ರಾಷ್ಟ್ರೀಯ ಲೆಕ್ಕಪತ್ರ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಶೇ 7ರಷ್ಟು ಪ್ರಗತಿ ಕಾಣುವುದು ಸಾಧ್ಯ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ದೇಶದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಹೂಡಿಕೆಯ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ. ಇನ್ನು 2011ರಲ್ಲಿ ಹೂಡಿಕೆ ಪ್ರಮಾಣ ಒಟ್ಟು ಜಿಡಿಪಿಯಲ್ಲಿ ಶೇ 34 – 27ಕ್ಕೆ ಇಳಿಕೆಯಾಗಿದೆ. ಆದ್ದರಿಂದ, ಜಿಡಿಪಿ ಶೇ 7ರ ದರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದಾಗಿ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ನಂಬಲಸಾಧ್ಯ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತದಂತಹ ದೇಶದಲ್ಲಿ ದೀರ್ಘಾವಧಿಯಲ್ಲಿ ವಾರ್ಷಿಕ ಶೇ 7 – 9ರ ದರದಲ್ಲಿ ಅಭಿವೃದ್ಧಿ ದಾಖಲಿಸುವುದು ಕಷ್ಟ. ಇಷ್ಟು ಪ್ರಮಾಣದ ಪ್ರಗತಿ ಸಾಧಿಸಿರುವ ಉದಾಹರಣೆಗಳು ಕೂಡ ಕಡಿಮೆ. ಚೀನಾ, ದಕ್ಷಿಣ ಕೊರಿಯಾ ಮತ್ತು ತೈವಾನ್‌ ಮೊದಲಾದ ಬೆರಳೆಣಿಕೆಯ ದೇಶಗಳು ಮಾತ್ರ ಈ ದರದಲ್ಲಿ ಪ್ರಗತಿ ಸಾಧಿಸಿವೆ ಎಂದು ಕೂಡ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಿಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿದೆ. ಆದರೆ, ಶಿಕ್ಷಣ, ಆರೋಗ್ಯ ವಲಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ಭಾರತದ ಜಿಡಿಪಿ ಶೇ 7ರ ದರದಲ್ಲಿ ಬೆಳವಣಿಗೆ ದಾಖಲಿಸುತ್ತಿಲ್ಲ. ಸರ್ಕಾರ ಬಿಡುಗಡೆ ಮಾಡಿರುವ ವರದಿ ವಿಶ್ವಾಸಾರ್ಹವಲ್ಲ ಎಂದು ಕೂಡ ಹೇಳಿದ್ದಾರೆ. ಶೇ 7ರ ದರದಲ್ಲಿ ಪ್ರಗತಿ ಕಾಣುತ್ತಿದೆ ಎಂಬ ವಿಷಯವನ್ನು ನನ್ನನ್ನೂ ಒಳಗೊಂಡಂತೆ ಅನೇಕ ಆರ್ಥಿಕ ತಜ್ಞರು ಒಪ್ಪುವುದಿಲ್ಲ. ಅಂಕಿಅಂಶ ಕಚೇರಿ ನೀಡಿರುವ ಮಾಹಿತಿಯನ್ನು ನಾವು ನಂಬುವುದಿಲ್ಲ ಎಂದಿದ್ದಾರೆ. ಜೊತೆಗೆ ಮೂಲ ವರ್ಷವನ್ನು 2004–05 ರಿಂದ 2011–12ಕ್ಕೆ ಬದಲಿಸಲಾಗಿದೆ. ಈ ಮೂಲಕ ಜಿಡಿಪಿಯಲ್ಲಿ ಪ್ರಗತಿಯಾಗಿರುವುದಾಗಿ ಹೇಳಲಾಗುತ್ತಿದೆ. ಆದರೆ, ವಾಸ್ತವ ಅಭಿವೃದ್ಧಿ ದರವೇ ಬೇರೆ ಎಂದು ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.
ಕಳೆದ ವಾರ ಜಿಡಿಪಿ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ, ಜಿಡಿಪಿಯ ದೇಶ ಶೇ. 7ರ ದರದಲ್ಲಿ ಪ್ರಗತಿ ಸಾಧಿಸಿದೆ ಎಂದಿದ್ದರು. ಈ ಅಂಕಿ ಅಂಶಗಳನ್ನು ವಿರೋಧಿಸಿದ್ದ ಕಾಂಗ್ರೆಸ್, ಸಿಪಿಐ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಕಾಂಗ್ರೆಸ್ ಸಂಸದ ಆನಂದ್ ಶರ್ಮ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೇ, ಕಳೆದ ಹತ್ತು ವರ್ಷಗಳ ಜಿಡಿಪಿ ಕುರಿತು ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು. ಆದರೆ, ಈ ಸವಾಲನ್ನು ಕೇಂದ್ರ ಸರ್ಕಾರವಾಗಲಿ, ಹಣಕಾಸು ಸಚಿವರಾಗಲಿ ಸ್ವೀಕರಿಸಿರಲಿಲ್ಲ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

ಎಲ್ಲ ಜಾತಿಯ ಬಡವರಿಗೆ ಮೀಸಲಾತಿ: ಸಕಾರಾತ್ಮಕ ನಿರ್ಧಾರ

ಮೀಸಲಾತಿ ಎಂದರೆ ಸಾಕು ಎಲ್ಲರೂ ಮೂಗು ಮುರಿಯುವ ಪರಿಸ್ಥಿತಿ ಸದ್ಯಕ್ಕೆ ದೇಶದಲ್ಲಿ ನಿರ್ಮಾಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲ ಉದ್ಯೋಗಗಳೂ ತಮ್ಮ ದೇಶದವರಿಗೆ ಮೀಸಲು ಎನ್ನುವುದನ್ನು ಸಮರ್ಥಿಸುವವರು ಕೂಡ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಾರೆ. ಆದರೆ, ಪರೋಕ್ಷವಾಗಿ ಬಹುತೇಕರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬ್ರಾಹ್ಮಣರು, ವೈಶ್ಯ ಸೇರಿದಂತೆ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಜನರಲ್ಲಿ ಮನೆ ಮಾಡಿರುವ ಅನ್ಯ ಜಾತಿ ದ್ವೇಷವನ್ನು ಕಡಿಮೆ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಮೀಸಲಾತಿ ವಿರುದ್ಧ ವಾದ ಕೇಳಿಬರುತ್ತಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಆದರೆ, ಸ್ವತಃ ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಬಲಿಷ್ಠ ಜಾತಿಯ ಜನರೇ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಬಿಜೆಪಿ ಮತ್ತು ಸಂಘ ಪರಿವಾರ ಹಾಗೂ ಇದೇ ಮನಃಸ್ಥಿತಿಯವರಲ್ಲಿ ಮೀಸಲಾತಿಯಿಂದಲೇ ದೇಶ ಅಭಿವೃದ್ಧಿ ಹೊಂದಿಲ್ಲ ಅನ್ನೋ ನಂಬಿಕೆ ಗಟ್ಟಿಯಾಗಿದೆ.
ಆದರೆ, ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರವಾಹದ ವಿರುದ್ಧ ಈಜೋದಕ್ಕೆ ಸಿದ್ಧವಾಗಿದೆ. ರಾಜ್ಯದಲ್ಲಿರುವ ಬ್ರಾಹ್ಮಣ, ವೈಶ್ಯರು ಸೇರಿದಂತೆ ಎಲ್ಲ ಜಾತಿಯ ಬಡವ, ಶೋಷಿತ ಮತ್ತು ದಮನಿತರಿಗೆ ಮೀಸಲಾತಿ ನೀಡೋ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಹೌದು, ಎಲ್ಲ ಜಾತಿಯಲ್ಲೂ ಬಡವರು, ಶೋಷಿತರು ಇದ್ದಾರೆ. ಆದ್ದರಿಂದ ಎಲ್ಲ ಜಾತಿಗೂ ಮೀಸಲಾತಿ ಒದಗಿಸುವ ನಿರ್ಧಾರ ನಿಜಕ್ಕೂ ಕ್ರಾಂತಿಕಾರಕವಾಗಿದೆ.
ಸಾಮಾಜಿಕ ನ್ಯಾಯದ ಹಂಚಿಕೆಯಲ್ಲಿ ಮೀಸಲಾತಿ ಪಾತ್ರ ಗಮನಾರ್ಹ. ಇದುವರೆಗೆ ತಮಗೆ ಇನ್ನೊಂದು ಜಾತಿಯವರು ಅವಕಾಶ ತಪ್ಪಿಸಿದ್ದಾರೆ ಎಂಬ ಕಾರಣದಿಂದಾಗಿ ಮೀಸಲಾತಿ ವಿರುದ್ಧ ನಿಲುವು ತಳೆಯಲಾಗುತ್ತಿದೆ. ಆದರೆ, ಜನರ ಮನಸಿನಲ್ಲಿರುವ ಈ ಅತ್ಯಾಧುನಿಕ ಮೂಢನಂಬಿಕೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಇದುವರೆಗೆ ಮೇಲ್ಜಾತಿ ಎಂದು ಪರಿಗಣಿಸಲಾಗಿದ್ದು, ಮೀಸಲಾತಿಯಿಂದ ಹೊರಗಿಟ್ಟವರನ್ನು ಕೂಡ ಒಳಗೊಳ್ಳುವ ಕೆಲಸ ಸಾಧ್ಯವಾಗುತ್ತದೆ.
ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಬದಲು ನಮ್ಮ ರಾಜ್ಯದಲ್ಲಿ ಸರ್ವೋದಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ. ಇಷ್ಟು ದಿನಗಳ ಕಾಲ ಬ್ರಾಹ್ಮಣರೂ ಸೇರಿದಂತೆ ಬಲಿಷ್ಠ ಜಾತಿಗಳಿಗೆ ಸಾಮಾನ್ಯ ವರ್ಗದಲ್ಲಿ ಸಿಗುತ್ತಿದ್ದ ಮೀಸಲಾತಿ ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಆಧರಿಸಿ ಮೀಸಲಾತಿ ಸಿಗಲಿದೆ. ಈ ಮೂಲಕ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಸೌಲಭ್ಯ ವಿಸ್ತರಣೆಯಾಗಲಿದೆ. ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ಎಲ್ಲ ಜಾತಿಯ ಬಡವರನ್ನು ತರುತ್ತಿರುವುದು ನಿಜಕ್ಕೂ ಸಕಾರಾತ್ಮಕ ಅಂಶವಾಗಲಿದೆ.
ಇನ್ನು ಮೀಸಲಾತಿ ಪ್ರಮಾಣವನ್ನು ಶೇ.72ಕ್ಕೆ ಏರಿಸಲು ಕೂಡ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿ ಇದನ್ನು ಜಾರಿಗೆ ತರುವ ಕುರಿತು ಕೂಡ ರಾಜ್ಯ ಸರ್ಕಾರ ಮುಂದಡಿ ಇಡಬೇಕಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಸಮೀಕ್ಷೆ ಇದುವರೆಗಿನ ಎಲ್ಲ ಮೀಸಲಾತಿಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡುತ್ತಿದೆ. ಸರ್ಕಾ ಅಧಿಕೃತವಾಗಿ ಸಮೀಕ್ಷೆಯನ್ನು ಬಿಡುಗಡೆ ಮಾಡಿದಲ್ಲಿ ಅಲ್ಪ ಸಂಖ್ಯಾತರ ವ್ಯಖ್ಯಾನ ಕೂಡ ಬದಲಾಗುವ ಸಾಧ್ಯತೆ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಲ್ಲ ಜಾತಿಯ ಜನರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು ಸ್ವಾಗತಿಸಬೇಕಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

2014ರಲ್ಲಿ ರೈತರ ಕುರಿತು ಮೋದಿ ಹೇಳಿದ್ದೇನು, ಮಾಡಿದ್ದೇನು?

ಪ್ರದೀಪ್ ಮಾಲ್ಗುಡಿ
2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶ ಸುತ್ತಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಭರಪೂರ ಭರವಸೆಗಳ ಮಳೆ ಸುರಿಸಿದ್ದರು. ಅವುಗಳಲ್ಲಿ ಒಂದು ಪ್ರಮುಖ ಭರವಸೆ ಬೆಳೆಗಳಿಗೆ ಸಂಬಂಧಿಸಿದಂತೆ ಯಶಸ್ವಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದೂ ಒಂದಾಗಿತ್ತು. ಇದೇ ಸಲಹೆಯನ್ನು ಸ್ವಾಮಿನಾಥನ್ ಆಯೋಗ ಯುಪಿಎ ಆಡಳಿತದ ಅವಧಿಯಲ್ಲಿ ಶಿಫಾರಸು ಮಾಡಿತ್ತು. ಅಂದು ಸ್ವಾಮಿನಾಥನ್ ಅವರ ಸಲಹೆಗಳನ್ನೇ ಇಂದು ದೇಶದ ರೈತರು ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
2014ರಲ್ಲಿ ಬೆಳೆಗಳಿಂದ ಶೇ. 50ರಷ್ಟು ಲಾಭವಾಗುವಂತೆ ಮಾಡುತ್ತೇನೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇನೆ ಎಂದು ಕೂಡ ಮೋದಿಯವರು ಹೇಳಿಕೊಂಡಿದ್ದರು. ಈಗ ಅದೇ ಬೇಡಿಕೆಯನ್ನು ರೈತರು ಇಟ್ಟುಕೊಂಡು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರೈತರ ಬೇಡಿಕೆಗಳಿಗೂ ಮೋದಿಯವರ ಭರವಸೆಗಳಿಗೂ ಅಕ್ಷರಶಃ ತಾಳೆಯಾಗುತ್ತಿದೆ.
ಏಪ್ರಿಲ್ 15, 2014ರಂದು ಜಾರ್ಖಂಡ್​​ನ್​​ ಹಜಾರಿಬಾಘ್​​ನಲ್ಲಿ ಎನ್​​ಡಿಎ ಪರ ಭಾಷಣ ಮಾಡಿದ್ದ ಮೋದಿಯವರು ನಾವು ಅಧಿಕಾರಕ್ಕೆ ಬಂದರೆ, ಕನಿಷ್ಠ ಬೆಂಬಲ ಬೆಲೆಯನ್ನು ಏರಿಸುತ್ತೇವೆ ಎಂದಿದ್ದರು. ಹೊಸ ನಿಯಮಾವಳಿಗಳನ್ನು ರೂಪಿಸಿ, ಕೃಷಿ ಉತ್ಪನ್ನವನ್ನು ಏರಿಸುವ ಭರವಸೆ ನೀಡಿದ್ದನ್ನು ಮೋದಿಯವರು ವಿದೇಶ ಪ್ರವಾಸ ಮಾಡುವ ವೇಳೆಯಾದರೂ ನೆನಪಿಸಿಕೊಳ್ಳುತ್ತಾರೋ ಇಲ್ಲವೋ? ಯಾರಿಗೂ ಗೊತ್ತಿಲ್ಲ. ಆದರೆ, ಅವರು ನೀಡಿದ್ದ ಭರವಸೆಯನ್ನು ನೆನಪಿಸುವ ಹೊಣೆಗಾರಿಕೆಯನ್ನು ಸ್ವಪಕ್ಷ, ವಿಪಕ್ಷ ಮತ್ತು ಮಾಧ್ಯಮಗಳೂ ಮಾಡುತ್ತಿಲ್ಲ. ಇನ್ನು ತಾವು ನೀಡಿದ ಇದೇ ಭರವಸೆಯನ್ನು ತವರು ರಾಜ್ಯ ಗುಜರಾತ್​ನ ಸುರೇಂದ್ರ ನಗರದಲ್ಲೂ ಪುನರಾವರ್ತಿಸಿದ್ದರು. ಅಲ್ಲಿ ಅವರ ಮಾತುಗಳಿಗೆ ಭಾರೀ ಸಂಖ್ಯೆಯಲ್ಲಿ ಹತ್ತಿ ಬೆಳೆಯುವ ರೈತರು ಸಾಕ್ಷಿಯಾಗಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ನಿರ್ಣಾಯಕವಾದ ಬದಲಾವಣೆ ತರುತ್ತೇನೆ ಎನ್ನುವುದು ಅವರ ಭರವಸೆಯಾಗಿತ್ತು. ಅಲ್ಲದೇ, ಬೀಜ, ನೀರಾವರಿ, ವಿದ್ಯುತ್, ಕೃಷಿ ಉಪಕರಣಗಳು, ಔಷಧಿ, ರಸಗೊಬ್ಬರು ಮತ್ತು ಇತರ ವೆಚ್ಚಗಳನ್ನು ಆಧರಿಸಿ ಶೇ. 50ರಷ್ಟು ಲಾಭವನ್ನು ರೈತರಿಗೆ ತಂದುಕೊಡುತ್ತೇನೆ. 100 ರೂ. ವೆಚ್ಚವಾಗಿದ್ದಲ್ಲಿ 150 ರೂ. ಆದಾಯ ತಂದುಕೊಡುತ್ತೇನೆ ಎಂದು ಅವರು ಭರವಸೆಯ ಆಣಿಮುತ್ತುಗಳನ್ನು ಉದುರಿಸಿದ್ದರು.
ಆದರೆ, ಅವರು ಅಧಿಕಾರ ಅನುಭವಿಸಿದ ಈ ಮೂರು ವರ್ಷಗಳಲ್ಲಿ ತಮ್ಮ ಭರವಸೆಯನ್ನು ಅಪ್ಪಿತಪ್ಪಿಯೂ ನೆನೆಪಿಸಿಕೊಂಡಿಲ್ಲ. ಭರವಸೆಯನ್ನು ಈಡೇರಿಸಲು ಒಂದು ಹೆಜ್ಜೆಯನ್ನಾದರೂ ಅವರಾಗಲಿ, ಸರ್ಕಾರವಾಗಲಿ ಇಟ್ಟಿದ್ದಲ್ಲಿ ರೈತರು ಇಂದು ನೇಣಿನ ಕುಣಿಕೆಗೆ ಕೊರಳೊಡ್ಡುವುದು ಮತ್ತು ವಿಷ ನುಂಗಿ ನೀಲಕಂಠನ ಅಪರಾವತರವನ್ನು ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
ಸದ್ಯದ ಮಾಹಿತಿಯ ಪ್ರಕಾರ ದೇಶದ 162 ಜಿಲ್ಲೆಗಳಲ್ಲಿ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಜೂನ್ 1ರಿಂದ ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ರೈತರು ಬೀದಿಗಿಳಿದಿದ್ದಾರೆ. ತಮಿಳುನಾಡು ರೈತರು ದೆಹಲಿಯಲ್ಲಿ ವಿವಿಧ ಶೈಲಿಯಲ್ಲಿ ಪ್ರತಿಭಟನೆ ನಡೆಸಿ, ಚೆನ್ನೈನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸಾಲ ಮನ್ನಾ ಅವರ ಪ್ರಮುಖ ಬೇಡಿಕೆಯಾದರೆ ಸೂಕ್ತ ಬೆಂಬಲ ಬೆಲೆಗೂ ಅವರು ಆಗ್ರಹಿಸಿದ್ದಾರೆ.
ಅಹಮದ್ ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಪ್ರತಿ ವರ್ಷ ತಾವು ಎದುರಿಸುವ ಕೃಷಿ ಸಮಸ್ಯೆ ಕುರಿತು ರೈತರು ಸಭೆ ಸೇರಿದ್ದರು. ಮಹಾರಾಷ್ಟ್ರದ ರೈತರ ಮುಷ್ಕರಕ್ಕೆ ಮುನ್ನುಡಿಯಾಗಿದ್ದು ಇದೇ ವರ್ಷದ ಏಪ್ರಿಲ್ 3. ಅಂದಿನ ತಮ್ಮ ಭೇಟಿಯ ವೇಳೆ ರೈತರು ತಮ್ಮ ದುರಂತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡದ ಸರ್ಕಾರಗಳೇ ಹೊಣೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದ್ದರಿಂದ ಈ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಅವರು ಯೋಜನೆ ರೂಪಿಸಿದರು. ಗ್ರಾಮಸಭೆ ಕೂಡ ಈ ಕುರಿತು ನಿರ್ಣಯ ಕೈಗೊಂಡಿತ್ತು. ಅಲ್ಲದೇ, ತಮ್ಮ ಸಮಸ್ಯೆಗೆ ಸರ್ಕಾರ ಪರಿಹಾರ ಹುಡುಕಬೇಕು ಎಂದು ಕೂಡ ರೈತರು ಆಗ್ರಹಿಸಲು ವೇದಿಕೆ ಸಿದ್ಧಗೊಳಿಸುತ್ತಿದ್ದರು. ಇದರೊಂದಿಗೆ ಸ್ವಾಮಿನಾಥನ್ ವರದಿ ಜಾರಿಯನ್ನೂ ತಮ್ಮ ಬೇಡಿಕೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ರೈತ ಹೋರಾಟಗಾರರು ನಿರ್ಧಿಸಿದರು. ದೀರ್ಘಕಾಲೀನ ಪರಿಹಾರಕ್ಕಾಗಿ ಅವರು ಈ ವರದಿಯ ಮೊರೆ ಹೋಗುವುದೇ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು.
ಅಹಮದ್ ನಗರ ಜಿಲ್ಲೆಯ ಗ್ರಾಮ ಸಭೆ ತೆಗೆದುಕೊಂಡ ನಿರ್ಣಯ 2,500 ಪಂಚಾಯಿತಿಗಳಿಗೆ ವಿಸ್ತರಣೆಯಾಯ್ತು. ಇದರಿಂದಾಗಿ ರಾಜ್ಯದಲ್ಲಿ ಭಾರೀ ಸಂಚಲನ ಉಂಟಾಯಿತು. ಈ ಹೋರಾಟಕ್ಕೆ ಆತ್ಮಕ್ಲೇಶ ಯಾತ್ರೆ ಎಂಬ ಹೆಸರನ್ನೂ ನೀಡಲಾಯ್ತು. ಕಡೆಗೆ ಜೂನ್ ಒಂದರಂದು ರಾಜ್ಯದ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ಆರಂಭಿಸಿದರು. ಈ ಅವಧಿಯಲ್ಲಿ ಒಟ್ಟು 8 ರೈತರು ರಾಜ್ಯ ಸರ್ಕಾರವನ್ನು ಹೊಣೆಯಾಗಿಸಿ ಆತ್ಮಹತ್ಯೆಗೆ ಶರಣಾದರು. ರೈತರ ಪ್ರತಿಭಟನೆ ಆರಂಭವಾದ 11 ದಿನಗಳ ನಂತರ ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಘೋಷಿಸಿದೆ.
ಆದರೆ, ಬೆಂಬಲ ಬೆಲೆ, ವೃದ್ಧಾಪ್ಯ ವೇತನ ಮತ್ತು ಸ್ವಾಮಿನಾಥನ್ ವರದಿ ಅನುಷ್ಠಾನದ ಕುರಿತು ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಇದೇ ಸಮಯದಲ್ಲಿ ಮಧ್ಯಪ್ರದೇಶ ರೈತರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿ 5 ರೈತರು ಸೇರಿ ಆರು ಜನರನ್ನು ಬಲಿತೆಗೆದುಕೊಳ್ಳಲಾಗಿತ್ತು.
ರಾಷ್ಟ್ರೀಯ ರೈತರ ಆಯೋಗ ಅಥವಾ ಸ್ವಾಮಿನಾಥನ್ ಆಯೋಗವನ್ನು 2004ರಲ್ಲಿ ರಚಿಸಲಾಗಿತ್ತು. ದೇಶದಾದ್ಯಂತ ನಡೆಯುತ್ತಿದ್ದ ರೈತರ ಪ್ರತಿಭಟನೆಗಳೇ ಈ ಆಯೋಗ ರಚನೆಗೆ ಕಾರಣ. ಕೃಷಿ ವಿಜ್ಞಾನಿ ಎಂ ಎಸ್ ಸ್ವಾಮಿನಾಥನ್ ಆಯೋಗ ಐದು ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ತ್ವರಿತ ಮತ್ತು ಹೆಚ್ಚು ರೈತರನ್ನು ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ವರದಿ ಅಭಿಪ್ರಾಯಪಟ್ಟಿತ್ತು. 2006ರಲ್ಲಿ ಸಲ್ಲಿಸಿದ ಅಂತಿಮ ವರದಿ ಇದುವರೆಗೆ ಧೂಳು ತಿನ್ನುತ್ತಾ ಕೂತಿದೆ.
ರೈತರ ಯಾತನೆಗಳಿಗೆ ಅಂತ್ಯಹಾಡಲು ಬಹು ಆಯಾಮದ ಸಲಹೆ, ಸೂಚನೆಗಳನ್ನು ಆಯೋಗ ನೀಡಿತ್ತು. ಆರೋಗ್ಯ ವಿಮೆ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಆತ್ಮಹತ್ಯೆ ತಡೆ ಕೇಂದ್ರಗಳ ಸ್ಥಾಪನೆ ಮೊದಲಾದ ಅಂಶಗಳನ್ನು ಆಯೋಗ ಪ್ರಸ್ತಾಪಿಸಿತ್ತು. ರಾಜ್ಯ ರೈತ ಆಯೋಗಗಳ ಸ್ಥಾಪನೆಯನ್ನೂ ಒಳಗೊಂಡಂತೆ ರೈತರ ಸಮಸ್ಯೆಗಳ ನಿವಾರಣೆ ಮತ್ತು ಸಾಮಾಜಿಕ ಭದ್ರತೆ ಒದಗಿಸುವಂತೆ ಸಲಹೆ ನೀಡಿತ್ತು. ಈಗ ಇವೇ ಬೇಡಿಕೆಗಳು ರೈತರಿಂದ ವ್ಯಕ್ತವಾಗುತ್ತಿವೆ. 2014ರ ಚುನಾವಣಾ ಕಾಲದ ಭರವಸೆಗಳು ಈಗಲಾದರೂ ಪ್ರಧಾನಿ ಮೋದಿಯವರಿಗೆ ನೆನಪಾಗುತ್ತದೆಯೇ? ಎಂದು ರೈತ ಸಮುದಾಯ ಕಾಯುತ್ತಿದೆ.

Monday 29 August 2016

ಅರಸು ಯುಗ: ಕರ್ನಾಟಕ ರಾಜಕೀಯ ಕನಸುಗಾರನ ಏಳುಬೀಳಿನ ಕಥನ
ಪ್ರದೀಪ್ ಮಾಲ್ಗುಡಿ
ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ. 
ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು ಜಾರಿಗೆ ತರುವುದರ ಹಿಂದಿರುವ ಕಷ್ಟಗಳನ್ನು ಎನ್.ಎಸ್.ಶಂಕರ್ ಅವರ ಕೃತಿ ‘ಅರಸು ಯುಗ’ ಸೂಕ್ಷ್ಮವಾಗಿ, ಖಚಿತ ದಾಖಲೆಗಳೊಂದಿಗೆ ಮಂಡಿಸುತ್ತದೆ. ದೇವರಾಜ ಅರಸು ಅವರ ದೂರದೃಷ್ಟಿ ಅವರ ಸಮಕಾಲೀನ ಮತ್ತು ಅನುಯಾಯಿಗಳಲ್ಲೇ ಇಲ್ಲದಿರುವುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣಬಹುದು.
ಹಾವನೂರು ವರದಿ, ಕೂಲಿಗಾಗಿ ಕಾಳು ಯೋಜನೆ, ಉಳುವವನೇ ಹೊಲದೊಡೆಯ, ಜೀತಮುಕ್ತಿ, ಮಲಹೊರುವ ಪದ್ಧತಿ ನಿಷೇಧ ಮೊದಲಾದ ಕ್ರಾಂತಿಕಾರಕ ನಿರ್ಧಾರಗಳ ಹಿಂದೆ ಅರಸು ಅವರಿಗಿದ್ದ ರಾಜಕೀಯ ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯನ್ನೂ ಓದುಗರೆದುರು ತೆರೆದಿಡುತ್ತದೆ. ಉಳುವವನೇ ಹೊಲದೊಡೆಯ ಕಾನೂನಿನ ಮೂಲಕ ಕರ್ನಾಟಕದಲ್ಲಿ ಉಂಟಾದ ಬದಲಾವಣೆಗಳನ್ನು ಎನ್.ಎಸ್.ಶಂಕರ್ ಹೀಗೆ ದಾಖಲಿಸುತ್ತಾರೆ: “4,85,000 ಗೇಣಿದಾರರು ಸುಮಾರು 21 ಲಕ್ಷ ಎಕರೆ ಪಡೆದು ಭೂಮಾಲೀಕರಾದರು, ಅದರಲ್ಲಿ 14,700 ದಲಿತ ಭೂಹೀನರು ಒಂದು ಲಕ್ಷ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಗಳಿಸಿದ್ದು ಕಡಿಮೆ ಸಾಧನೆಯೇನಲ್ಲ. ಇದರ ಜೊತೆಗೆ 3,700 ಕೃಷಿ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಗಳ ಮಾಲೀಕರೂ ಆದರು.”(ಪು. 92)
ಇನ್ನು ಹೀಗೆ ಭೂಮಿ ಹಂಚಿಕೆ ಮಾಡಿದವರಿಗೆ 20 ಕೋಟಿ 30 ಲಕ್ಷ ರೂಪಾಯಿಗಳನ್ನು ಪರಿಹಾರರೂಪವಾಗಿ ನೀಡಿರುವ ಅರಸರ ನ್ಯಾಯ ದೃಷ್ಟಿಕೋನದೆಡೆಗೆ ಬೆಳಕು ಚೆಲ್ಲಲಾಗಿದೆ.

ಅಧಿಕಾರ ಇರುವುದು ಜನರ ಸೇವೆಗೆ ಎಂಬ ಎಚ್ಚರ ಅರಸರಿಗಿತ್ತು ಎಂಬುದನ್ನೂ, ವೃದ್ಧಾಪ್ಯ ವೇತನ ಸೇವೆಗಳನ್ನು ಅಧಿಕಾರಿಗಳೇ ಜನರ ಬಳಿ ಹೋಗಿ ಒದಿಗಿಸಬೇಕೆಂಬ ಅವರ ನಿಲುವು ಜನರಪರ ಆಡಳಿತದ ಸೂಕ್ಷ್ಮತೆಗಳನ್ನು ವಿವರಿಸುತ್ತದೆ.
ಚೋಮನ ದುಡಿ ಕಾದಂಬರಿ ಕುರಿತು ಕೆಲವು ದಲಿತ ಮತ್ತು ಸಾಮಾಜಿಕ ನ್ಯಾಯದ ಪರ ವಾದಿಸುವವರಿಗೆ ಅನೇಕ ತಕರಾರುಗಳಿವೆ. ಶಿವರಾಮ ಕಾರಂತರು “ಚೋಮನಿಗೆ ಕಾದಮಂಬರಿಯಲ್ಲಾದರೂ ಭೂಮಿಯನ್ನು ಕೊಡಿಸಲಿಲ್ಲ” ಎಂಬುದು ಅದರಲ್ಲಿ ಪ್ರಮುಖವಾಗಿದೆ. ಆದರೆ ಶಿವರಾಮ ಕಾರಂತರ ಕಾದಂಬರಿಯೇ ತಮ್ಮ ಭೂ ಸುಧಾರಣೆ ಕಾಯ್ದೆಗೆ ಪ್ರೇರಣೆ ಎಂದು ಸ್ವತಃ ದೇವರಾಜ ಅರಸರು ಹೇಳಿಕೊಂಡಿರುವುದನ್ನು ಈ ಕೃತಿಯಲ್ಲಿ ಕಾಣಬಹುದು. ಶಿವರಾಮ ಕಾರಂತರಿಗೂ ಕೇವಲ ಕಾದಂಬರಿಯಲ್ಲಿ ಮಾತ್ರ ದಲಿತರಿಗೆ ಭೂಮಿ ಕೊಡಿಸುವುದರಿಂದ ಲಾಭವಿಲ್ಲವೆಂಬುದು ತಿಳಿದಿತ್ತು. ಆ ಕಾರಣದಿಂದಲೇ ಸ್ಥಾಪಿತ, ಸಾಂಪ್ರಾದಾಯಿಕ ಹಿಡಿತಗಳಿಂದ ದಲಿತರಿಗೆ ಭೂಮಿ ಸಿಗುವುದು ಸರಳವಲ್ಲ ಎಂಬುದನ್ನೇ ಅವರು ‘ಚೋಮನ ದುಡಿ’ಯಲ್ಲಿ ಪ್ರತಿಪಾದಿಸಿದ್ದರು.

ಜೀತ ನಿಷೇಧ, ಮಲಹೊರುವ ಪದ್ಧತಿ ನಿಷೇಧಗಳ ಮುಂದಿನ ಸವಾಲುಗಳನ್ನು ದೇವರಾಜ ಅರಸರು ನಿರ್ವಹಿಸಿದ ಬಗೆ, ಋಣ ಪರಿಹಾರ ಕಾಯ್ದೆ ಜಾರಿಯಲ್ಲಿ ತೋರಿದ ಎಚ್ಚರ ಹಾಗೂ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ಮುಂದಾಗಿ ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿಸಿದಂತಹ ಅನೇಕ ಸಾಧನೆಗಳನ್ನು ಈ ಕೃತಿಯಲ್ಲಿ ಕಾಣಬಹುದು.
ಇದರ ಜೊತೆಗೆ ದೇವರಾಜ ಅರಸು ಅವರ ಅನುಯಾಯಿಗಳು ಹಾಗೂ ಸ್ವಪಕ್ಷೀಯರ ಹುನ್ನಾರಗಳನ್ನೂ ಈ ಕೃತಿ ಬಯಲಿಗೆಳಿದಿದೆ. ಅಧಿಕಾರ ಸಿಕ್ಕ ಎಲ್ಲರೂ ಅರಸು ಅವರಂತೆ ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದರೆ ಕರ್ನಾಟಕದ ಇಂದಿನ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ಅರಸು ಯುಗ ಓದುಗರಿಗೆ ಅನಿಸುತ್ತದೆ.
ಇನ್ನು ಆಡಳಿತದಲ್ಲಿ ತಂದ ದಕ್ಷತೆ, ಅಧಿಕಾರಿಗಳ ಮೇಲಿನ ಹಿಡಿತ ಹೇಗಿರಬೇಕೆಂಬ ಮಹತ್ವದ ವಿಚಾರಗಳನ್ನು ಈ ಕೃತಿ ಕರ್ನಾಟಕದ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಸುತ್ತದೆ. 

ದೇವರಾಜ ಅರಸರ ಕಾಲದ ಭ್ರಷ್ಟಾಚಾರದ ಆಪಾದನೆಗಳಿಗೆ ಅಂದಿನ ಮಾಧ್ಯಮಗಳು ಹೇಗೆ ಕಾರಣವಾದವು, ಜನಪರ ಆಡಳಿತದ ಅಲೆಯ ಕುರಿತು ಆಡಬೇಕಾದ ಮಾತುಗಳ ಬದಲಿಗೆ, ಭ್ರಷ್ಟಾಚಾರ ಏಕೆ ಸ್ಥಾನ ಪಡೆಯಿತು ಮೊದಲಾದ ವಿಷಯಗಳು ಈ ಕೃತಿಯಿಂದ ಬಹಿರಂಗವಾಗಿವೆ.
ಇನ್ನು ಸ್ವತಃ ದೇವರಾಜ ಅರಸರ ಭ್ರಷ್ಟಾಚಾರದ ಕುರಿತು ಇರುವ ಅನುಮಾನಗಳಿಗೂ ಈ ಕೃತಿಯ ಕಡೆಯ ಅಧ್ಯಾಯ ಉತ್ತರವಾಗಿದೆ. ಅರಸರ ಅನೇಕ ಒಡನಾಡಿಗಳ ಮಾತುಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿರುವುದರಿಂದಾಗಿ ಕೃತಿಗೆ ಅಧಿಕೃತತೆ ಲಭಿಸಿದೆ. 126 ಪುಟಗಳ ಅತಿ ಚಿಕ್ಕ ವಿಸ್ತಾರದಲ್ಲಿ ಅರಸು ಅವರ ಬಾಲ್ಯ, ಹರೆಯ, ರಾಜಕೀಯ ಏಳುಬೀಳುಗಳನ್ನು ಯಾವುದೇ ಭಾವೋದ್ವೇಗವಿಲ್ಲದೆ, ತಣ್ಣನೆಯ ಧ್ವನಿಯಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷತೆ.
ಕೃತಿ: ಅರಸು ಯುಗ
ಪ್ರಕಾಶಕರು: ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು-52
ಮುದ್ರಣ: 2016