Search This Blog

Tuesday 24 May 2016

ಅಚ್ಚೇದಿನ್ ಯಾರಿಗೆ?
ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ: ಉದ್ಯಮಿಗಳ ಪರ ಒಲವು
ಪ್ರದೀಪ್ ಮಾಲ್ಗುಡಿ
ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ೧೮೯೪ರ ಭೂಸ್ವಾಧೀನ ಕಾಯ್ದೆಗೆ ೨೦೧೩ರಲ್ಲಿ ತಿದ್ದುಪಡಿ ತಂದಿತ್ತು. ಅದರ ಪ್ರಕಾರ ವಶಪಡಿಸಿಕೊಳ್ಳಬೇಕಾದ ಕೃಷಿ ಜಮೀನಿನ ೭೦% ಭಾಗದ ರೈತರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಡಿಸೆಂಬರ್ ೨೦೧೪ರಂದು ಎನ್ಡಿಎ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದರ ಪ್ರಕಾರ ಸರ್ಕಾರದ ಅನುಮತಿ ಪಡೆದ  ಉದ್ದೇಶಿತ ಯೋಜನೆಗಳಿಗೆ (ಅವು ಖಾಸಗಿಯಾಗಿರಲಿ ಅಥವಾ ಸರ್ಕಾರಿ ಯೋಜನೆಗಳಾಗಿರಲಿ) ಭೂ ಸ್ವಾಧೀನಪಡಿಸಿಕೊಳ್ಳಲು ರೈತರ ಅನುಮತಿಯೇ ಅಗತ್ಯವಿಲ್ಲ.
ತಿದ್ದುಪಡಿ ಖುಷ್ಕಿ, ನೀರಾವರಿ, ಬಂಜರು ಭೂಮಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ಭೂಸ್ವಾಧೀನಕ್ಕೆ ಅವಕಾಶ ನೀಡುತ್ತದೆ. ಇದರಿಂದ ಭವಿಷ್ಯದಲ್ಲಿ ದೇಶದ ಆಂತರಿಕ ಕೃಷಿ ಉತ್ಪಾದನೆ ಹಾಗೂ ಆಹಾರ ಉತ್ಪಾದನೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ೨೦ ಕೋಟಿ ಜನಕ್ಕೆ ಎರಡು ಹೊತ್ತಿನ ಊಟ ಸಿಗದ, ಅಪೌಷ್ಟಿಕತೆಯಿಂದ ಗರ್ಭಿಣಿಯರು ಮತ್ತು ಮಕ್ಕಳು ಬಳಲುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ವಿವೇಚನಾರಹಿತವಾಗಿ ಕೃಷಿ ಭೂಮಿಯನ್ನು ಸರ್ಕಾರಿ, ಅರೆ ಸರ್ಕಾರಿ ಯೋಜನೆಗಳಿಗೆ ಮತ್ತು ಖಾಸಗಿ ಹಾಗೂ ವಿದೇಶೀ ಕಂಪೆನಿಗಳಿಗೆ ಹಸ್ತಾಂತರಿಸಿದರೆ ಇದರ ಪರಿಸ್ಥಿತಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
೨೦೧೩ರ ಕಾಯ್ದೆಯ ಪ್ರಕಾರ ಉದ್ದೇಶಿತ ಯೋಜನೆ ವರ್ಷಗಳ ಅವಧಿಯಲ್ಲಿ ಜಾರಿಗೆ ಬರದಿದ್ದಲ್ಲಿ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮೂಲ ರೈತರಿಗೆ ಹಿಂದಿರುಗಿಸಬೇಕಿತ್ತು. ಆದರೆ ವಿಷಯವನ್ನು ಪ್ರಸ್ತುತ ತಿದ್ದುಪಡಿಯಲ್ಲಿ ಕೈಬಿಟ್ಟಿದೆ. ಇದುವರೆಗೆ ನಡೆದಿರುವ ಸ್ವಾಧೀನ ಪ್ರಕ್ರಿಯೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಜಮೀನನ್ನು ಆಧಾರವಾಗಿರಿಸಿ ಬ್ಯಾಂಕ್ಗಳಲ್ಲಿ ಸಾಲ ಪಡೆಯಲಾಗಿದೆ. ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿರುವ ಉದಾಹರಣೆಗಳೂ ಇವೆ. ಇನ್ನೊಂದು ಆಘಾತಕಾರಿ ಮಾಹಿತಿ ಎಂದರೆ; ಸಿಎಜೆ ವರದಿ ಪ್ರಕಾರ ಇದುವರೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನಿನಲ್ಲಿ ೩೮%ರಷ್ಟು ಭೂಮಿಯಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.
ಕಾಯ್ದೆ  ಜಾರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣಅಭಿವೃದ್ಧಿಗೆ ಹಿಂದಿನ ಕಾಯ್ದೆ ಅಡ್ಡಗಾಲಾಗಿದೆ. ಆದ್ದರಿಂದ ಇದಕ್ಕೆ ತಿದ್ದುಪಡಿ ತರಲಾಗಿದೆ ಎಂಬುದು. ಆದರೆ ಗುಜರಾತಿನಲ್ಲಿ ನಡೆದಿರುವ ಭೂಸ್ವಾಧೀನ ಮತ್ತು ಅದರ ಫಲಾನುಭವಿಗಳ ಸಂಪತ್ತಿನ ವೃದ್ಧಿಯನ್ನು ಗಮನಿಸಿದರೆ ಇದು ಶುದ್ಧ ಸುಳ್ಳೆಂಬುದು ಸಾಬೀತಾಗುತ್ತದೆ. ಅಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಕರೆಗೆ ಕೇವಲ ೨೦ ರೂ.ನಂತೆ ಸಾವಿರಾರು ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಕೊಡಲಾಗಿತ್ತು. ಕೆಲವೇ ವರ್ಷಗಳ ಹಿಂದೆ ಕಂಪನಿ ಸ್ಥಾಪಿಸಿದ ವ್ಯಕ್ತಿ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಸಂಪಾದಿಸಿರುವುದರ ಜತೆಗೆ, ಬಹುರಾಷ್ಟ್ರೀಯ ಕಂಪೆನಿಗಳ ಒಡೆಯನಾಗಿದ್ದಾರೆ.  ತಿದ್ದುಪಡಿಯಿಂದ ಗುಜಾರಾತಿಗೆ ಸೀಮಿತವಾಗಿದ್ದ ಭೂಸ್ವಾಧೀನ ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಅಭಿವೃದ್ಧಿಗೆ ಶರವೇಗ ನೀಡುವುದಾಗಿ ಭರವಸೆ ನೀಡಿದ ಮೋದಿ ಸರ್ಕಾರ ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಪಾಯಕಾರಿ ಹೆಜ್ಜೆಗಳನ್ನು ಇಟ್ಟಿದೆ. ಮೂಲಕ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳಿಗೆ ನಂಬಿಕೆ ಇಲ್ಲವೆಂಬುದನ್ನು ಸಾಬೀತು ಮಾಡಿದೆ.
ಕಪ್ಪು ಹೋರಾಟಗಾರ ಚೀಫ್ ಸಿಯಾಟಲ್ ಹೋರಾಟದ ಸಮಯದಲ್ಲಿಎಂಡ್ ಆಫ್ ದಿ ಲಿವಿಂಗ್, ಬಿಗಿನಿಂಗ್ ಆಫ್ ದಿ ಸರ್ವೈವಲ್ ಎಂದಂತೆ ಭಾರತೀಯ ಬಡ ರೈತರು ಇನ್ನು ಬದುಕಿ ಉಳಿಯಲು ಹೋರಾಡಬೇಕಾದ ದಿನಗಳು ದೂರವಿಲ್ಲ. ಗುಜರಾತ್ನಲ್ಲಿ ಇಪ್ಪತ್ತು ರೂಪಾಯಿಗೆ ಒಂದು ಎಕರೆಯಂತೆ ಸಾವಿರಾರು ಎಕರೆ ಭೂಮಿಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಹರಿದು ಹಂಚಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಇಂದು ಭಾರತದ ಪ್ರಧಾನಿಯಾಗಿ ಅದನ್ನು ಇಡೀ ದೇಶಕ್ಕೆ ವಿಸ್ತರಿಸಲು ಮುಂದಾಗಿದ್ದಾರೆ.
ಸ್ವತಂತ್ರ ಪೂರ್ವ ಸಂದರ್ಭದಲ್ಲಿ ಮೋಹನದಾಸ್ ಕರಮಚಂದ್ ಗಾಂಧಿಯವರು ಟಾಟಾ, ಬಿರ್ಲಾರಿಂದ ಕಾಂಗ್ರೆಸ್ಗೆ ದೇಣಿಗೆ ಪಡೆಯುವುದಕ್ಕೂ ಆಧುನಿಕೋತ್ತರ ಸಂದರ್ಭದಲ್ಲಿ ವಿವಿಧ ಪಕ್ಷಗಳು ಉದ್ದಿಮೆದಾರರಿಂದ ದೇಣಿಗೆ ಪಡೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ದೇಶವನ್ನು ವಿದೇಶಿ ಆಡಳಿತದಿಂದ ಸ್ವತಂತ್ರಗೊಳಿಸಲು ಉದ್ದಿಮೆದಾರರು ದೇಣಿಗೆ ನೀಡಿದರೆ, ಇಂದು ವ್ಯಾವಹಾರಿಕ ಉದ್ದೇಶಗಳಿಂದ ದೇಣಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯಾನಂತರ ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾದ ರಾಜಕೀಯ ಪಕ್ಷಗಳು ಗಾಂಧಿಗೆ ಇದ್ದ ನೈತಿಕತೆಗೆ ತಿಲಾಂಜಲಿ ನೀಡಿದವು. ಇದರ ಪರಿಣಾಮವೆಂದರೆ ಉದಾರ ದೇಣಿಗೆ ನೀಡಿದಷ್ಟು ತಾವು ಅಧಿಕಾರದ ಗದ್ದುಗೆ ಹಿಡಿದ ನಂತರ ಪ್ರತ್ಯುಪಕಾರ ಮಾಡಲು ಒಳ ಒಪ್ಪಂದವಾಗುತ್ತಿರುವುದು ಬಹಿರಂಗ ಸತ್ಯ. ಇಲ್ಲವಾದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯುವುದು ಹೇಗೆ ಸಾಧ್ಯ?
ಬೃಹತ್ ಬಂಡವಾಳವನ್ನು ರಾಜಕೀಯ ಪಕ್ಷಗಳಿಗಾಗಿ ಹೂಡಿದ ಬಂಡ ಬಂಡವಾಳಶಾಹಿಗಳಿಗೆ ದೇಶಪ್ರೇಮ, ನೈತಿಕತೆ, ಪ್ರಾಮಾಣಿಕತೆಗಳ ಜತೆಗೆ ಎಣ್ಣೆ ಸೀಗೆಕಾಯಿ ಸಂಬಂಧ. ಅಲ್ಲದೇ ವ್ಯಾಪಾರವೆಂದರೆ ದ್ರೋಹ ಚಿಂತನೆ. ಅವರ ಮನೋಧರ್ಮದ ಪ್ರಕಾರ ಹೂಡಿದ ಬಂಡವಾಳಕ್ಕೆ ಗರಿಷ್ಠ ಮಟ್ಟದ ಲಾಭ ಮರಳಿ ಬರಬೇಕು. ರಾಜಕಾರಣಿ ಮತ್ತು ರಾಜಕೀಯ ಪಕ್ಷಗಳ ಮೇಲೆ ಹೂಡುವ ಬಂಡವಾಳವೂ ಇದಕ್ಕೆ ಹೊರತಲ್ಲ. ಹೀಗೆ ಪರಸ್ಪರ ಕೊಡುಕೊಳೆಗಳಲ್ಲಿ ಸಿಲುಕಿರುವ ಭಾರತೀಯ ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿಗಳಿಗೆ ಬಡವರೆಂದರೆ ಅವರ ಭೋಗದ ವಸ್ತುವಿಗಿಂತ ಕಡೆ. ಅವರ ಪರವಾಗಿ ಯಾರೂ ಏನನ್ನೂ ಮಾಡಲು ಬಿಡುವುದಿಲ್ಲ. ಕಾರಣ ಇವರು ಕರ್ಚು ಮಾಡಲು ಹಿಂದೇಟು ಹಾಕುವ ಮನಃಸ್ಥಿತಿಯ ಜನ. ಇವರಿಂದ ದೇಶದಲ್ಲಿ ಬಂಡವಾಳ ಕೊಳೆಯುತ್ತದೆ. ಆದ್ದರಿಂದ ಎಲ್ಲರನ್ನೂ ಮಧ್ಯಮ, ಮೇಲ್ಮಧ್ಯಮ ವರ್ಗದ ವ್ಯಾಪ್ತಿಗೆ ತರಬೇಕು. ಇದಕ್ಕಾಗಿ ಆರ್ಥಿಕ ತಜ್ಞರನ್ನು ಕಲೆಹಾಕಿದೇಶದ ತಲಾದಾಯ ವೃದ್ಧಿಯಾಗಿದೆ ಎಂಬ ಮಿಥ್ಯೆಯನ್ನು ಸತ್ಯವೆಂದು ಪ್ರತಿಪಾದಿಸಲಾಗುತ್ತದೆ.
ದೊಡ್ಡ ಪ್ರಮಾಣದ ಹಣ ಹೂಡಿರುವವರು ದೇಶಕ್ಕಾಗಿ ತಂತ್ರಜ್ಞಾನ, ವಿಜ್ಞಾನ, ಬಡತನ ನಿವಾರಣೆ, ಗುಡಿಸಲು ಮುಕ್ತ ಭಾರತ, ಮೂಲಸೌಕರ್ಯಗಳ ಬಗೆಗೆ ಯೋಚಿಸಬೇಕೆಂದು ಬಯಸುವುದು ಆದರ್ಶವಾಗುತ್ತದೆ. ಇದರಿಂದ ಸೌಲತ್ತು ಪಡೆದ ರಾಜಕೀಯ ಪಕ್ಷ, ರಾಜಕಾರಣಿಗಳು ದೇಶವನ್ನು ಸ್ವದೇಶೀ ಉದ್ದಿಮೆದಾರರಿಗೆ ಒದಗಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಸಾಕಾರಕ್ಕಾಗಿ ಭೂಸ್ವಾಧೀನ ಮಸೂದೆಗೆ ಹಠ ಹಿಡಿದು ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಿ, ಲೋಕಸಭೆಯ ಬಹುತೇಕ ವಿರೋಧ ಪಕ್ಷಗಳು ಹಾಗೂ ದೇಶದ ಚಳವಳಿಗಾರರ ವಿರೋಧಗಳನ್ನು ಲೆಕ್ಕಿಸದೆ, ಕನಿಷ್ಠ ಕುರಿತು ಚರ್ಚೆಗೆ ಅವಕಾಶವಾಗುವ ವಾತಾವರಣವನ್ನೂ ಇಲ್ಲವಾಗಿಸಿ ಲೋಕಸಭೆಯಲ್ಲಿ ಮಂಡಿಸಿ ರಾಷ್ಟ್ರಪತಿಯಿಂದ ಅಂಕಿತ ಪಡೆದರೂ ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಇನ್ನೂ ಅಂಗೀಕರಿಸಲಾಗಿಲ್ಲ
ಭೂಸ್ವಾಧೀನ ಕಾಯ್ದೆಯ ವಿರೋಧಿಗಳಿಗೆ ಅಭಿವೃದ್ಧಿ ವಿರೋಧಿಗಳೆಂಬ ಪಟ್ಟಕಟ್ಟಲು ಪಟ್ಟಭದ್ರ ಗುಂಪುಗಳನ್ನು ಕಟ್ಟಿಕೊಳ್ಳಲಾಗಿದೆ. ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ, ಕೆಲವೊಮ್ಮೆ ಧಮ್ಕಿ ಹಾಕುವ ಶೈಲಿಯಲ್ಲಿ ವಾದದಲ್ಲಿ ತೊಡಗಿದೆ. ಮತ್ತಿವರು ಸ್ವಯಂಘೋಷಿತ ದೇಶಭಕ್ತರು. ಬಹುತೇಕ ಸ್ವಯಂಘೋಷಿತ ದೇವಮಾನವರ ಕತೆ ಏನಾಗಿದೆ ಎಂದು ಇವರು ಕ್ಷಣಕಾಲ ಯೋಚಿಸಬೇಕಿದೆ. ಆದರೆ ದೀಪದ ಬುಡ ಕತ್ತಲೆ. ಕತ್ತಲೆಗೆ ದೀಪ ಹಿಡಿದವರಿಗೆ ಯಥಾಪ್ರಕಾರ ದೇಶದ್ರೋಹಿಗಳ ಪಟ್ಟ.
ದೇಶಭಕ್ತಿ ಹೆಸರಿನಲ್ಲಿ ದೇಶಾದ್ಯಂತ ವ್ಯಾಪಕ ಸಂಘಟನೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮೋದಿಯವರನ್ನು ಪ್ರಧಾನಿ ಹುದ್ದೆಗೇರಿಸಲು ಹಗಲಿರುಳು ದುಡಿದ ನಮೋ ಬ್ರಿಗೇಡಿಗರೂ ಕೇಂದ್ರ ಸರ್ಕಾರದ ರೈತವಿರೋಧಿ ಭೂಸ್ವಾಧೀನ ಮಸೂದೆ ವಿಷಯದಲ್ಲಿ ಮೌನವಾಗಿದ್ದಾರೆ. ಇದು ಅವರ ಆತ್ಮಸಾಕ್ಷಿಗೆ ಮಾಡುತ್ತಿರುವ ದ್ರೋಹವಲ್ಲವೇ? ಅಭಿವೃದ್ಧಿಯೆಂದರೆ ಅನ್ನ ನೀಡುವ ರೈತನ ಭೂಮಿಯನ್ನು ಅವನ ಒಪ್ಪಿಗೆಯಿಲ್ಲದೇ ಕಿತ್ತುಕೊಂಡು ಬ್ರಹ್ಮಾಂಡ ಭ್ರಷ್ಟಾಚಾರದ ಭಾಗಿದಾರರಾದ ಖಾಸಗಿ ಉದ್ದಿಮೆದಾರರಿಗೆ ಹಂಚುವುದೇ?

ಅಭಿಪ್ರಾಯಗಳು:
ಹೊಟ್ಟೆಗೆ ಅನ್ನ ತಿನ್ನುವವರೆಲ್ಲರೂ ಕಾಯ್ದೆಯನ್ನು ವಿರೋಧಿಸಬೇಕು.
ದೇವನೂರ ಮಹಾದೇವ

ಇದು ಭೂಸ್ವಾಧೀನ ಕಾಯ್ದೆಯಲ್ಲ. ಭೂ ದರೋಡೆ ಕಾಯ್ದೆ.
ಎನ್.ಎಸ್ಶಂಕರ್