Search This Blog

Sunday 2 November 2014

ಕನ್ನಡ ಎತ್ತ ಸಾಗುತ್ತಿದೆ?
                                ಪ್ರದೀಪ್ ಮಾಲ್ಗುಡಿ
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪ್ರಾದೇಶಿಕ ಭಾಷೆಗಳು ಉಳಿಯುವ ಸಾಧ್ಯೆತೆಗಳು ಮಸುಕಾಗುತ್ತಿವೆ. ತಮಿಳು, ಕನ್ನಡ, ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕ ನಂತರ, ನಿಜಕ್ಕೂ ಭಾಷೆಗಳೆಲ್ಲವೂ ಶಾಸ್ತ್ರೀಯ ಭಾಷೆಗಳಾಗಿಬಿಡುತ್ತವೆಯೇ? ಎಂಬ ಅನುಮಾನ ಬಲವಾಗುತ್ತಿದೆ. ಶಾಸ್ತ್ರೀಯ ಭಾಷೆಯೆಂದರೆ ಇನ್ನೊಂದು ಅರ್ಥ ಮೃತ ಭಾಷೆ! ದಿನದಿಂದ ದಿನಕ್ಕೆ ವ್ಯಾವಹಾರಿಕ ಮೋಹಕ್ಕೆ ಮಾನವ ಸಂಕುಲ ಒಳಗಾಗಿದೆ. ಉಪಭೋಗಿ ಸಂಸ್ಕಾರದ ದೀಕ್ಷೆ ಇಂದು ಎಲ್ಲವನ್ನೂ ಆರ್ಥಿಕ ಲಾಭದ ದೃಷ್ಟಿಯಿಂದ ಪರಿಗಣಿಸುವುದನ್ನು ಕಲಿಸಿದೆ. ಇದರ ಪರಿಣಾಮದಿಂದ ಇದುವರೆಗಿನ ಮಾನವ ಮಹೋನ್ನತ ಸಾಧನೆಗಳು ಹಿನ್ನೆಲೆಗೆ ಸರಿಯುತ್ತಿವೆ. ಕರ್ನಾಟಕದ ಜನರನ್ನು ಸರ್ವಧರ್ಮ ಸಹಿಷ್ಣುಗಳು, ವೀರರು, ಕಲಿಗಳು, ತ್ಯಾಗಿಗಳು, ಶರಣಾಗತ ರಕ್ಷಕರು ಇತ್ಯಾದಿಯಾಗಿ ಇಂದಿಗೂ ಇತಿಹಾಸದ ಪಾಠಗಳಲ್ಲಿ ಹೇಳಿಕೊಡಲಾಗುತ್ತಿದೆ. ಒಂದು ಕಾಲಕ್ಕೆ ಇದ್ದ ಕನ್ನಡ ನಾಡಿನ ವೈಶಾಲ್ಯತೆ ಏಕೀಕರಣದ ನಂತರ ಕುಬ್ಜಗೊಂಡಿದೆ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಕ್ಷೇತ್ರವೂ ಕುಗ್ಗಿದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಕನ್ನಡದ ಆತಂಕಗಳು ಕಡಿಮೆಯಾಗಬೇಕಿತ್ತು. ಆದರೆ ಇಂದು ಆತಂಕ ಹೆಚ್ಚಾಗುತ್ತಿದೆ. ನಗರ ಹಳ್ಳಿಗಳೆಬ ಭೇದವಿಲ್ಲದೆ ದಿನದಿಂದ ದಿನಕ್ಕೆ ಕನ್ನಡೇತರರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚುವ, ಸ್ಥಳಾಂತರಿಸುವ, ಸಂಯೋಜಿಸುವ ಕನ್ನಡ ವಿರೋಧಿ ಕೆಲಸಗಳನ್ನು ಸರ್ಕಾರವೇ ಮುಂದೆ ನಿಂತು ಮಾಡುತ್ತಿದೆ. ಆಡಳಿತದಲ್ಲಿ ಕನ್ನಡ ಜಾರಿ ಎಂದು ಪ್ರತಿ ಸರ್ಕಾರಗಳೂ ಸುಳ್ಳು ಹೇಳುತ್ತಿವೆ. ಕೋರ್ಟ್ನಲ್ಲಿ ಕನ್ನಡ ವಾತಾವರಣವನ್ನು ತರಲು ಇದುವರೆಗೆ ಸಾಧ್ಯವಾಗಿಲ್ಲ. ಮಧ್ಯಮ ಹಾಗೂ ಮೇಲು ವರ್ಗದ ಕುಟುಂಬಗಳು ಕನ್ನಡ ಹಾಗೂ ಸರ್ಕಾರಿ ಶಾಲೆಗಳೆರಡರಿಂದಲೂ ದೂರವಾಗುತ್ತಿವೆ. ಇಂತಹ ಸಮಸ್ಯೆಗಳತ್ತ ಕನ್ನಡದ ಸರ್ವತೋಮುಖ ಬೆಳವಣಿಗೆಯ ಉದ್ದೇಶಗಳಿಂದ ಸ್ಥಾಪನೆಯಾಗಿರುವ ವಿವಿಧ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳು- ಸಂಘಟನೆಗಳು ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಅಕಾಡೆಮಿ ಹಾಗೂ ವಿಶ್ವವಿದ್ಯಾಲಯಗಳು
ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ, ಅನುವಾದ ಅಕಾಡೆಮಿ ಇತ್ಯಾದಿಗಳನ್ನು ಸ್ಥಾಪಿಸಿದೆ. ಕರ್ನಾಟಕ ಸರ್ಕಾರವು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಗಳ ಏಳ್ಗೆಗಾಗಿ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ. ಅನುದಾನವನ್ನು ಬಳಸುತ್ತಿರುವ ಎಲ್ಲ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪಸರಿಸುತ್ತಿವೆ? ಅಥವಾ ಕರ್ನಾಟಕದಲ್ಲಿ ಕನ್ನಡವನ್ನು ಸದೃಢಗೊಳಿಸಲು ಕಾರ್ಯೋನ್ಮುಖವಾಗಿವೆ? ಎಂಬ ಪ್ರಶ್ನೆ ಎಲ್ಲ ಪ್ರಜ್ಞಾವಂತರ್ನೂ ಕಾಡುತ್ತಿದೆ. ಏಕೆಂದರೆ, ಕನಾಟಕದ ನಾಡು, ನುಡಿ, ಗಡಿ ಹಾಗೂ ಜಲದ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ. ಏಕೀಕರಣಕ್ಕಾಗಿ ಹೋರಾಡಿ, ಏಕೀಕರಣಗೊಂಡ ಐದು ದಶಕಗಳ ನಂತರ ಉತ್ತರ ಕರ್ನಾಟಕದ ಕೆಲವು ರಾಜಕಾರಣಿಗಳು ಪ್ರತ್ಯೇಕ ರಾಜ್ಯದ ಕೂಗನ್ನು ಪದೇಪದೇ ಎತ್ತುತ್ತಿದ್ದಾರೆ.
ಅಕಾಡೆಮಿ, ಪ್ರಾಧಿಕಾರಗಳು ವಿಚಾರ ಸಂಕಿರಣಗಳ ಆಯೋಜನೆ, ಪುಸ್ತಕ ಪ್ರಕಟಣೆಗೆ ಕೊಟ್ಟಷ್ಟು ಒತ್ತನ್ನು ಕನ್ನಡ ಪರವಾದ ನೀತಿ, ನಿಯಮಗಳ ರೂಪಣೆಯತ್ತ ಗಮನ ಹರಿಸುತ್ತಿಲ್ಲ. ಅನುವಾದ ಅಕಾಡೆಮಿಯಲ್ಲಿ ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳ ಮರುಮುದ್ರಣಕ್ಕೆ ನೀಡಿದಷ್ಟು ಒತ್ತನ್ನು ಹೊಸ ಅನುವಾದಕರ ಸೃಷ್ಟಿಗೆ ನೀಡುತ್ತಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ೩೭೧ಜೆ ಕಲಂ ಜಾರಿಯಲ್ಲಿ ಇವುಗಳ ಪಾತ್ರ ಎಳ್ಳಷ್ಟೂ ಇಲ್ಲದಿರುವುದು ನೋವಿನ ಸಂಗತಿಯಾಗಿದೆ.
ಕರ್ನಾಟಕದ ಹೊರಗಿರುವ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿನ ಸಹ, ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯದೊಳಗಿರುವ ಅನೇಕ ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದಕ್ಕಿಂಥ ಭಿನ್ನವಾಗಿಲ್ಲ. ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಇಂತಹ ವಿಶ್ವವಿದ್ಯಾಲಯಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡಲಾಗಿದೆ. ಆದರೆ ಅನುದಾನ ಬಳಕೆಯಾಗಿರುವುದು ಯಾವ ಉದ್ದೇಶಕ್ಕೆ ಎಂದು ಕೇಳಿದರೆ ಅದಕ್ಕೆ ಸ್ಪಷ್ಟ ಹಾಗೂ ಸಮಾಧಾನಕರ ಉತ್ತರ ಸಿಗಲಾರದು.
ಕನ್ನಡ ಬಲ್ಲವರಿಗೆ ಕೆಲಸವಿಲ್ಲ
ಕನ್ನಡ ಮಾಧ್ಯಮದಲ್ಲಿ ಓದಿರುವ ಮಾನವಿಕ ವಿಜ್ಞಾನ, ಕಲಾ ಸ್ನಾತಕ ಪದವೀಧರರ ಸಮಸ್ಯೆಯನ್ನು ಕೇಳುವವರೆ ಇಲ್ಲ. ವ್ಯಾವಹಾರಿಕ ಕಾರಣದಿಂದ ಇಡೀ ಸಮುದಾಯ ಕಲಾ ವಿಷಯಗಳತ್ತ ಆಸಕ್ತಿ ತೋರುತ್ತಿಲ್ಲ. ಜತೆಗೆ ಪದವಿ ಹಂತದಲ್ಲಿ ಕಲಾ ವಿಷಯ ಮಾಯವಾಗುತ್ತಿದೆ. ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಕನ್ನಡ, ಹಿಂದಿ ವಿಷಯಗಳ ಸ್ನಾತಕೋತ್ತರ ಪದವಿ ಪಡೆದವರು ಔದ್ಯೋಗಿಕ ಅಭದ್ರತೆಯಿಂದ ನರಳುತ್ತಿದ್ದಾರೆ. ಏಕೆಂದರೆ ಶಿಕ್ಷಣದ ವಾಣಿಜ್ಯೀಕರಣದಿಂದಾಗಿ ಕಲಾ ಹಾಗೂ ಭಾಷಾ ವಿಷಯಗಳ ಕಡೆಗೆ ಶಿಕ್ಷಣ ಸಂಸ್ಥೆಗಳು ನಕಾರಾತ್ಮಕ ಭಾವನೆಗಳನ್ನು ತಳೆದಿವೆ. ಇದರಿಂದಾಗಿ ಸಮಾಜ ವಿಜ್ಞಾನಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದಿರುವವರು ನಿರುದ್ಯೋಗಿಗಳಾಗುತ್ತಿದ್ದಾರೆ.
    ಇತ್ತೀಚೆಗೆ ಬಿ.., ಬಿ.ಎಸ್ಸಿ., ಬಿ.ಸಿ.., ಬಿ.ಕಾಂ., ಬಿ.ಬಿ.ಎಂ., ಮೊದಲಾದ ಪದವಿಗಳಿಗೆ ಕೆಲವು ವಿಶ್ವವಿದ್ಯಾಲಯಗಳು ಭಾಷಾವಿಷಯದಲ್ಲಿ ಏಕಪಠ್ಯವನ್ನು (ಎಲ್ಲ ಪದವಿಗಳಿಗೂ ಒಂದೇ ಕನ್ನಡ ಪಠ್ಯ ಬೋಧನೆ) ಜಾರಿಗೆ ತಂದಿವೆ. ಇದರ ಹಿಂದೆ ಖಾಸಗಿ ಕಾಲೇಜುಗಳ ಒತ್ತಡ ಇರುವ ಅನುಮಾನವಿದೆ. ಏಕೆಂದರೆ ಇದರ ಲಾಭ ಖಾಸಗಿ ಕಾಲೇಜು ಮಾಲಿಕರಿಗೆ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಡೆತನ ಸಕ್ರಿಯ ರಾಜಕಾರಣಿಗಳು, ಮಠಾಧೀಶರು ಹಾಗೂ ಉದ್ಯಮಿಗಳ ಹಿಡಿತದಲ್ಲಿದೆ. ಎಲ್ಲ ಪದವಿ ಹಂತದ ಭಾಷಾಪಠ್ಯಗಳೂ ಒಂದೇ ಇದ್ದರೆ ಅವರಿಗೆ ಹೆಚ್ಚುವರಿ ಭಾಷಾ ಉಪನ್ಯಾಸಕರ ನೇಮಕಾತಿ ತಪ್ಪುತ್ತದೆ. ಅಲ್ಲದೆ ಎಲ್ಲ ಕನ್ನಡ ತರಗತಿಗಳನ್ನು ಕಂಬೈಂಡ್ ಮಾಡಿಸಿ, ಸಿಲಬಸ್ ಮುಗಿಸುವ ಹುನ್ನಾರಗಳು ನಡೆಯುತ್ತಿವೆ.
ಈಗಾಗಲೇ ಕನ್ನಡ ಎಂ.., ಪದವೀಧರರನ್ನು ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂರು ಅಥವಾ ಆರು ತಿಂಗಳಿಗೆ ಒಮ್ಮೆ ವೇತನ ಸಂದಾಯವಾಗುತ್ತಿದೆ. ಖಾಸಗಿ ಪದವಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಕನ್ನಡೇತರ ವಿಷಯ ಹಾಗೂ ಭಾಷೆಗಳಿಗಿಂಥ, ಕನ್ನಡ ಉಪನ್ಯಾಸಕರಿಗೆ ಅತ್ಯಂತ ಕಡಿಮೆ  ವೇತನವನ್ನು ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕಾಲೇಜುಗಳಲ್ಲಿ ಸು. ೨೫೦೦ ರೂಗಳಿಂದ ೮೦೦೦ ಸಾವಿರದವರೆಗೆ ಕೂಲಿಯನ್ನು ನೀಡುತ್ತಿದ್ದಾರೆ. ಅರೆಕಾಲಿಕ ಉಪನ್ಯಾಸಕರ ಗೋಳನ್ನು ಕೇಳುವವರೇ ಇಲ್ಲ.
ಬೆಂಗಳೂರಿನ ಅನೇಕ ಕಾಲೇಜುಗಳಲ್ಲಿ ಸೆಮಿಸ್ಟರ್ ತರಗತಿಗಳನ್ನು ಒಂದು ತಿಂಗಳಿಗೆ ಇಂತಿಷ್ಟು ಎಂದು ಗುತ್ತಿಗೆ ಆಧಾರದಲ್ಲಿ ನಡೆಸುವ ಕಾಲೇಜುಗಳೂ ಅಸ್ತಿತ್ವದಲ್ಲಿವೆ. ಪಿಯುಸಿ ಕಾಲೇಜುಗಳಲ್ಲಿ ನವೆಂಬರ್ - ಡಿಸೆಂಬರ್ ತಿಂಗಳೊಳಗೆ ಕನ್ನಡ ತರಗತಿಗಳನ್ನು ಮುಗಿಸಿಕೊಡಬೇಕೆಂಬ ಅಲಿಖಿತ ನಿಯಮವನ್ನು ಅನೇಕ ಕಾಲೇಜುಗಳಲ್ಲಿ ಜಾರಿಗೆ ತರಲಾಗಿದೆ. ನಂತರ ಉಪನ್ಯಾಸಕರು ಜೂನ್ ಅಥವಾ ಜುಲೈವರೆಗೆ ನಿರುದ್ಯೋಗಿಗಳಾಗಿರುತ್ತಾರೆ. ಇದನ್ನು ಪ್ರತಿಭಟಿಸಿದರೆ, ತಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ - ಎಂದು ಅನ್ಯಾಯವನ್ನು ಯಾರೂ ಪ್ರತಿಭಟಿಸಲು ಮುಂದೆ ಬರುತ್ತಿಲ್ಲ. ಕನ್ನಡ ಭಾಷೆಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಅತ್ಯಂತ ಕೀಳಾಗಿ ಪರಿಗಣಿಸಿವೆ. ನಾಮಕಾವಸ್ಥೆಗೆ ಕನ್ನಡ ಬೋಧನೆಗೆ ಅವಕಾಶ ನೀಡಲಾಗುತ್ತಿದೆ. ಕನ್ನಡ ಎಂ.., ಪದವೀಧರರಲ್ಲಿ ಬಗೆಯ ಸಂಸ್ಥೆಗಳು ಕೀಳರಿಮೆಯನ್ನು ಹುಟ್ಟಿಸುತ್ತಿವೆ.
ಇತ್ತೀಚೆಗೆ ಕನ್ನಡಕ್ಕೆ ಮರ್ಮಾಘಾತಕವಾದ ಎರಡು ತೀರ್ಪುಗಳು ಹೊರಬಿದ್ದಿವೆ. ಕನ್ನಡ ಭಾಷಾಮಾಧ್ಯಮದ ಕುರಿತು ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾದ ರಾಜ್ಯಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ ಸಾಧಿಸಿದೆ. ಜತೆಗೆ ಕನ್ನಡ ನಾಮಫಲಕಗಳ ಜಾರಿ ನಿಯಮದಲ್ಲೂ ಇದು ಮುಂದುವರೆದು, ಹೈಕೋರ್ಟ್ನಲ್ಲೂ ಹಿನ್ನಡೆ ಅನುಭವಿಸಿದೆ. ಇಲ್ಲಿ ಖಾಸಗಿಯವರ ಒತ್ತಡಗಳ ಪರಿಣಾಮ ಎದ್ದು ಕಾಣುತ್ತಿದೆ. ಸರ್ಕಾರಗಳ ನೀತಿನಿಯಮಗಳನ್ನು ಪಾಲಿಸಲು ಇವರಿಗೆ ಇಷ್ಟವಿಲ್ಲ. ಕನ್ನಡಕ್ಕಿಂತ ಇಂಗ್ಲಿಶ್ ಹೆಸರಿನಲ್ಲಿ ಹಣ ಮಾಡುವುದು ಸುಲಭ. ದಾರಿಗೆ ಅವರು ಬೇಕಾದ ಸಾಕ್ಷ್ಯಾಧಾರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ಅವರ ಎದುರು ಸರ್ಕಾರ ಸೋತು ಮಂಡಿಯೂರುತ್ತದೆ. ಕುರಿತು ನಾಡಿನ ಚಿಂತಕರು, ವಿದ್ವಾಂಸರು, ಕನ್ನಡ ಅಧ್ಯಾಪಕರು, ಕನ್ನಡಪರ ಹೋರಾಟಗಾರರು, ಕನ್ನಡದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಇಷ್ಟು ದಿನಗಳಿಗಿಂತ ಭಿನ್ನವಾಗಿ ಆಲೋಚಿಸಿ ಕ್ರಿಯಾಶೀಲವಾಗಬೇಕಿದೆ

No comments:

Post a Comment