Search This Blog

Sunday 2 November 2014

ಕನ್ನಡ ಶಾಸ್ತ್ರೀಯ ಭಾಷೆ: ಆಗಬೇಕಿರುವುದೇನು?
ಪ್ರದೀಪ್ ಮಾಲ್ಗುಡಿ
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಕೇಂದ್ರ ಸರ್ಕಾರ ೨೦೦೯ರಲ್ಲಿ ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ನೀಡಿತ್ತು. ಇದಕ್ಕೆ ಸಂಬಂಧಿಸಿದ ಕೆಲಸವನ್ನು ನಿರ್ವಹಿಸುವ ಹೊಣೆಯನ್ನು ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರ ವಹಿಸಿತ್ತು. ಆದರೆ ಇದು ಕೇವಲ ಎರಡು ವಿದ್ವಾಂಸರ ಸಭೆಗಳನ್ನು ನಡೆಸುವಷ್ಟಕ್ಕೆ ಸೀಮಿತವಾಯಿತು. ಅಲ್ಲದೆ ಶಾಸ್ತ್ರೀಯ ಭಾಷೆಗಾಗಿ ಒದಗಿಸಲಾದ ಅನುದಾನವನ್ನು ಬೇರೆಯವರ ಪ್ರಾಯೋಜಕತ್ವದಲ್ಲಿ ಕರ್ನಾಟಕದ ವಿವಿಧೆಡೆ ಎಂಟು ವಿಚಾರ ಸಂಕಿರಣಗಳನ್ನು ನಡೆಸುವಷ್ಟಕ್ಕೆ ತನ್ನ ಕೆಲಸವನ್ನು ಸೀಮಿತಗೊಳಿಸಿಕೊಂಡಿತ್ತು. ಅವಧಿಯನ್ನು ಬಹುತೇಕ ನಿಷ್ಕ್ರಿಯವಾಗಿಯೇ ಕಳೆಯಲಾಯಿತು. ಕಡೆಗೆ ಸರ್ಕಾರ ಮೈಸೂರಿನಿಂದ ಬೆಂಗಳೂರಿಗೆ ಸಂಸ್ಥೆಯನ್ನು ವರ್ಗಾಯಿಸಲು ಆಜ್ಞೆ ಹೊರಡಿಸಿದಾಗ ಮೈಸೂರಿನ ಸಾಹಿತಿ, ವಿದ್ವಾಂಸರು ಇದನ್ನು ವಿರೋಧಿಸಿದರು. ಆದರೆ ಕೇಂದ್ರೀಯ ಭಾಷಾ ಸಂಸ್ಥಾನದ ನಿಷ್ಕ್ರಿಯತೆಯನ್ನು ಪ್ರಶ್ನಿಸುವ ದಿಟ್ಟತನವನ್ನು ಇವರು ಪ್ರದರ್ಶಿಸಿರಲಿಲ್ಲ. ಸರ್ಕಾರದ ಪ್ರತಿಷ್ಟಿತ ಸಂಸ್ಥೆಯೊಂದು ಮೈಸೂರಿನಿಂದ ದೂರವಾಗುತ್ತದೆಂದು ಮನದಟ್ಟಾದಾಗ ಕ್ರಿಯಾಶೀಲರಾದರು. ಪ್ರಸ್ತುತ ಸನ್ನಿವೇಶದಲ್ಲಿ ಶಾಸ್ತ್ರೀಯ ಭಾಷೆಗಾಗಿ ಹೋರಾಟ ನಡೆಸಿದಂತೆ ಮತ್ತೆ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಗಾಗಿಯೂ ಹೋರಾಟಗಳು ನಡೆಯಬೇಕಾದ ಅನುಮಾನಗಳನ್ನು ಸರ್ಕಾರಗಳು ಹಾಗೂ ಅಧಿಕಾರಿಗಳು ಸೃಷ್ಟಿಸಿದ್ದಾರೆ.
ಸದ್ಯಕ್ಕೆ ತುರ್ತಾಗಿ ಆಗಬೇಕಿರುವ ಕೆಲಸವೆಂದರೆ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ತಮಿಳುನಾಡಿನ ಮಾದರಿಯಲ್ಲಿ ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆಯನ್ನು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರದಿಂದ ತೆರೆಯಬೇಕಾಗಿದೆ. ಅದನ್ನು ಅಧಿಕಾರಿಗಳ ಹಿಡಿತಕ್ಕೆ ಸಿಲುಕಿಸದೇ ಸ್ವಾಯತ್ತ ಸ್ಥಾನವನ್ನು ನೀಡಿ ಅದಕ್ಕೊಂದು ಸ್ವತಂತ್ರ ಸ್ಥಳ, ಕಟ್ಟಡವನ್ನು ಶೀಘ್ರವಾಗಿ ಒದಗಿಸಿ ಉಳಿದ ಆಡಳಿತಾತ್ಮಕ ಹಾಗೂ ಆರ್ಥಿಕ ನೆರವನ್ನು ನೀಡಬೇಕಿದೆ.
ಆದರೆ ಇದನ್ನು ಮತ್ತೊಂದು ವಿಶ್ವವಿದ್ಯಾಲವನ್ನಾಗಿಸಬಾರದು. ಈಗಾಗಲೇ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲಾದವುಗಳು ಸಾವಿರಾರು ಕೃತಿಗಳನ್ನು ಪ್ರಕಟಿಸಿವೆ. ಇವುಗಳ ಪುನರ್ಮುದ್ರಣಕ್ಕೆ ಶಾಸ್ತ್ರೀಯ ಅಧ್ಯಯನ ಸಂಸ್ಥೆ ಮೀಸಲಾಗದಂತೆ ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ. ಕರ್ನಾಟಕ ಸುವರ್ಣ ಮಹೋತ್ಸವದ ಸಮಯದಲ್ಲಿ ಹಾಗೂ ಶಾಸ್ತ್ರೀಯ ಸ್ಥಾನ ಲಭಿಸಿದ ಸಮಯದಲ್ಲಿ ಸರ್ಕಾರ ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಕೋಟಿಗಟ್ಟಲೆ ಅನುದಾನವನ್ನು ಬಿಡುಗಡೆ ಮಾಡಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಯಾವ ಯೋಜನೆಗಳನ್ನು ಜಾರಿಗೆ ತರಬೇಕೆಂದು ಯೋಚಿಸುವುದರಲ್ಲೇ ಕಾಲಕಳೆಯಿತು. ಇಂತಹ ಅಚಾತುರ್ಯ ಹಾಗೂ ವಿಳಂಬಾವಸ್ಥೆಗೆ ಸಂಸ್ಥೆ ತಲುಪಬಾರದು.
ಶಾಸ್ತ್ರೀಯ ಸ್ಥಾನ ಲಭಿಸಿ ವರ್ಷಗಳಾದರೂ ಇದಕ್ಕೆ ನಿರ್ದೇಶಕರನ್ನು ಇದುವರೆಗೆ ನೇಮಿಸಿಲ್ಲ. ತಮಿಳು ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ನಿರಂತರ ಅನುದಾನವನ್ನು ಪಡೆಯುತ್ತಿದೆ. ವಿಷಯದಲ್ಲಿ ತಮಿಳುನಾಡು ಕನ್ನಡ ಹಾಗೂ ಕರ್ನಾಟಕಕ್ಕಿಂತ ನೂರು ವರ್ಷ ಮುಂದಿದೆ. ಪ್ರತಿವರ್ಷ ಕೇವಲ ಅನುದಾನ ಪಡೆಯುವುದರಿಂದಲೇ ಕನ್ನಡದ ಉದ್ಧಾರವಾಗುತ್ತದೆಂದು ಯಾರೂ ಭ್ರಮಿಸಬೇಕಿಲ್ಲವಾದರೂ ಲಭ್ಯ ಆರ್ಥಿಕ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಯುವ ಉತ್ಸಾಹಿ, ಕ್ರಿಯಾಶೀಲ, ಅನ್ವೇಷಣಾತ್ಮಕ ಮನೋಧರ್ಮವುಳ್ಳ ವಿದ್ವಾಂಸರು, ಚಿಂತಕರು ಸದ್ಯಕ್ಕೆ ಕನ್ನಡಕ್ಕೆ ಅತ್ಯಗತ್ಯವಾಗಿದ್ದಾರೆ. ಪ್ರಾಚೀನ ಶಾಸನ, ಹಸ್ತಪ್ರತಿ, ಸಾಹಿತ್ಯ ಕೃತಿಗಳನ್ನು ಆಳವಾಗಿ ಅಭ್ಯಸಿಸಿರುವ ಶಾಸ್ತ್ರೀಯ ಓದು, ಸಿದ್ಧತೆ ಹಾಗೂ ಆಧುನಿಕ ತಂತ್ರಜ್ಞಾನವೆರಡನ್ನೂ ಹೊಂದಿರುವ ಯುವ ಸಮೂಹ ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆಯಲ್ಲಿ ದುಡಿಯುವಂತಾಗಬೇಕು. ಇಲ್ಲವಾದಲ್ಲಿ ಮತ್ತೆ ತೌಡು ಕುಟ್ಟುವ ಕೆಲಸಗಳಿಗೆ ಮಾತ್ರ ಸಂಸ್ಥೆ ಮೀಸಲಾಗಲಿದೆ.
ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಸಿನಿಮಾ, ನೃತ್ಯ, ಜನಪದ, ಜನಸಮುದಾಯಗಳೆಲ್ಲವನ್ನೂ ಒಳಗೊಳ್ಳುವ ಹಾಗೂ ಇವೆಲ್ಲವುಗಳಿಂದ ಕನ್ನಡ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶಾಸ್ತ್ರೀಯ ಅಧ್ಯಯನ ಸಂಸ್ಥೆ ಕ್ರಿಯಾಶೀಲವಾಗಬೇಕಿದೆ. ಅದರ ಜತೆಗೆ ನಾಡಿನ ರೈತರು, ಉದ್ಯಮಿಗಳು, ಕಾರ್ಮಿಕರ ಹಿತಾಸಕ್ತಿಯನ್ನು ಕಾಯುವ ಕೆಲಸವೂ ಇದರ ಆದ್ಯತೆಯಾಗಬೇಕು. ಏಕೆಂದರೆ; ನಾಡಿನ ಗಡಿ ಸುತ್ತ ಕನ್ನಡ ಭಾಷಿಕರ ಮೇಲೆ, ಮೂಲಕ ಕನ್ನಡದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಇದುವರೆಗೆ ಸರ್ಕಾರ ಹಾಗೂ ನಾಡಿನ ವಿವಿಧ ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳು ತಡೆಯುವಲ್ಲಿ ವಿಫಲವಾಗಿವೆ. ಇನ್ನು ಮುಂದಾದರೂ ಇಂತಹ ಅನಾಹುತಗಳು ನಡೆಯದಂತೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಇನ್ನಾದರೂ ಆರಂಭದ ಹೆಜ್ಜೆ ಇಡಬೇಕಾಗಿದೆ.
ಸರ್ಕಾರ ೨೦೧೪ ಆಗಸ್ಟ್ ಒಂದರಂದು ನೇಮಿಸಿರುವ ಆಡಳಿತ ಮಂಡಳಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಿಂಹಪಾಲು ಸಿಕ್ಕಿದೆ. ಇದರ ಮುಂದುವರಿದ ಭಾಗ ಏನಾಗಲಿದೆ? ಎಂದು ಸದ್ಯಕ್ಕೆ ಕಾದು ನೋಡಬೇಕಿದೆ. ಆದರೆ ಶಾಸ್ತ್ರೀಯ ಕನ್ನಡ ಸಂಸ್ಥೆ ಯಾವುದೇ ವಿಶ್ವವಿದ್ಯಾಲಯದ ಹಿಡಿತದಲ್ಲಿರಬಾರದು. ಸಾಂಸ್ಕೃತಿಕ ತಿಳಿವಳಿಕೆಯಿಲ್ಲದ ವ್ಯಕ್ತಿಗಳು ಸಂಸ್ಥೆಯ ನಿರ್ಣಾಯಕ ಹಂತದಲ್ಲಿ ಒಂದು ತಪ್ಪು ಹೆಜ್ಜೆಯನ್ನಿಟ್ಟರೆ ಕನ್ನಡದ ಅಸ್ಮಿತೆ, ಕನ್ನಡ ಚಿಂತನೆ, ಕನ್ನಡದ ಭವಿಷ್ಯ, ಶಾಸ್ತ್ರೀಯ ಭಾಷೆಯ ಸ್ಥಾನಕ್ಕಾಗಿ ನಡೆದ ಹೋರಾಟಗಳೆಲ್ಲವೂ ಮಣ್ಣುಪಾಲಾಗುತ್ತವೆ. ಸಂಬಂಧವಾಗಿ ತರಾತುರಿಯಲ್ಲಿ ನಿರ್ಣಯಗಳನ್ನು ಯಾರೂ ತೆಗೆದುಕೊಳ್ಳಬಾರದು.
ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳು
.    ನಾಡಿನ ಕನ್ನಡ ಅಧ್ಯಯನಕಾರರ ಸಭೆ ನಡೆಸುವುದು. ಅವರಿಂದ ಕನ್ನಡಕ್ಕಾಗಿ ಯೋಜನೆಗಳನ್ನು ರೂಪುಗೊಳಿಸುವ ಪ್ರಸ್ತಾವಗಳನ್ನು ಸ್ವೀಕರಿಸುವುದು
.    ಕನ್ನಡ ನಾಡು, ನುಡಿ, ಗಡಿ, ಜಲ ಕುರಿತ ಅರಿವನ್ನು ಹೊಂದಿರುವ ಹಾಗೂ ಇವುಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಆಸಕ್ತರಾಗಿರುವ ಹಿರಿ-ಕಿರಿಯರಿಂದ ಸಲಹೆ-ಸಹಕಾರಗಳನ್ನು ಪಡೆಯುವುದು
.    ನಿರ್ದೇಶಕರ ನೇಮಕ
.    ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಅವಶ್ಯಕವಾದ ತಜ್ಞರು, ವಿದ್ವಾಂಸರು, ಸಂಶೋಧಕರ ನೇಮಕ
.    ಅವಶ್ಯಕ ಸಿಬ್ಬಂದಿಗಳ ನೇಮಕಾತಿ
.    ಕನ್ನಡ ಶಾಸ್ತ್ರೀಯ ಸಂಸ್ಥೆಗೆ ಸೂಕ್ತವಾದ ಸ್ಥಳ ಹಾಗೂ ಕಟ್ಟಡವನ್ನು ಒದಗಿಸುವುದು
.    ವಿಶಾಲವಾದ ಗ್ರಂಥಾಲಯಕ್ಕೆ ಒತ್ತು ನೀಡಿ, ಕನ್ನಡದ ಪ್ರಾಚೀನ ಗ್ರಂಥಗಳನ್ನೆಲ್ಲ ಅಂತರ್ಜಾಲದಲ್ಲಿ ಸುಲಭವಾಗಿ ಓದಲು ಹಾಗೂ ಬರೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವುದು
.    ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿರುವ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಗಳನ್ನು ತೆರೆಯುವುದು

ಹಾಗೆಯೇ ನಿವೃತ್ತರನ್ನು ಸಂಸ್ಥೆಯ ನಿರ್ದೇಶಕ ಹುದ್ದೆಗೆ ಪರಿಗಣಿಸದಿರುವುದು ಸೂಕ್ತ. ಅಂತಹವರನ್ನು ಸಲಹಾ ಸಮಿತಿಯಲ್ಲಿ ಮಾರ್ಗದರ್ಶಿಗಳಾಗಿ ನೇಮಿಸಿಕೊಳ್ಳುವುದು ಒಳಿತು. ಕೆಲಸಗಳು ಅತ್ಯಂತ ತುರ್ತಾಗಿ ನಡೆಯಬೇಕಿದೆ. ಇದರಲ್ಲಿ ಯಾವ ಆಮಿಷ ಅಥವಾ ಒತ್ತಡಗಳಿಗೂ ಒಳಗಾಗದೆ ಕನ್ನಡಪರವಾದ ಆಲೋಚನೆಯೊಂದನ್ನೇ ಮುನ್ನೆಲೆಯಾಗಿಟ್ಟುಕೊಂಡಿರುವ ಸಮಾನಮನಸ್ಕರನ್ನು ಒಂದುಗೂಡಿಸಬೇಕಾಗಿದೆ. ಮೂಲಕ ಕನ್ನಡದ ಭವಿಷ್ಯವನ್ನು ಉಜ್ವಲಗೊಳಿಸುವ ಸಾಧ್ಯತೆಗಳೆಡೆಗೆ ಸಾಗಲು ದಾರಿಯನ್ನು ನಿರ್ಮಿಸಬೇಕಿದೆ.    

No comments:

Post a Comment