Search This Blog

Sunday 2 November 2014

ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕಾಗಿದೆ
-       ಪ್ರದೀಪ್ ಮಾಲ್ಗುಡಿ
ಪ್ರತಿ ಬಾರಿ ಆಯವ್ಯಯ ಪಟ್ಟಿಯಲ್ಲಿ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹಿಂದಿನ ವಿವಿಧ ಮುಖ್ಯಮಂತ್ರಿಗಳ ಸರ್ಕಾರಗಳ ಅವಧಿಯಲ್ಲಿ ೨೦೦೯-೧೦ ರಲ್ಲಿ ,೮೮೮ ಕೋಟಿ, ೨೦೧೦-೧೧ರಲ್ಲಿ ೨೭,೦೦೦ ಕೋಟಿ, ೨೦೧೧-೧೨ರಲ್ಲಿ ೧೨,೨೮೪ ಕೋಟಿ ರೂಪಾಯಿಗಳನ್ನು, ಹಾಲಿ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸು.೧೯,೦೦೦ ಕೋಟಿ ರೂಪಾಯಿಗಳನ್ನು ಮೀಸಲಿಟ್ಟ್ಟಿದ್ದಾರೆ. ಹೀಗೆ ಶಿಕ್ಷಣಕ್ಕಾಗಿ ಬಜೆಟ್ನಲ್ಲಿ ಹೆಚ್ಚಿನ ಒತ್ತನ್ನು ಕೊಡುವ ಸರ್ಕಾರಗಳು ಅದನ್ನು ಪರಿಣಾಮಕಾರಿಯಾಗಿ ವಿನಿಯೋಗಿಸುವಲ್ಲಿ ಸಂಪೂರ್ಣವಾಗಿ ಸೋಲುತ್ತಿವೆ. ದಿನದಿಂದ ದಿನಕ್ಕೆ ಶಿಕ್ಷಣ ದುಬಾರಿಯಾಗುತ್ತಿದೆ. ಅದರಲ್ಲೂ ವೃತ್ತಿಶಿಕ್ಷಣವನ್ನು ಪಡೆಯುವುದು ಜನಸಾಮಾನ್ಯರಿಂದ ಸಾಧ್ಯವಾಗದಂತಹ ಸ್ಥಿತಿಗೆ ಶಿಕ್ಷಣ ವ್ಯವಸ್ಥೆ ದುಬಾರಿಯಾಗಿದೆ. ಒಂದು ಎಂ.ಡಿ., (ವೈದ್ಯಕೀಯ ಸ್ನಾತಕೋತ್ತರ ಪದವಿ) ಪಡೆಯಲು ಕೋಟಿಗಟ್ಟಲೆ ಹಣ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ’ಕೋಟಿಗಟ್ಟಲೇ ಹಣ ನೀಡಿ ಪದವಿ ಪಡೆದವರು ಜನಸೇವೆ ಮಾಡುವುದು ಹೇಗೆಂದು?’ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಮಾರ್ಮಿಕವಾಗಿ ಪ್ರಶ್ನಿಸತೊಡಗಿದ್ದಾರೆ.
ಇದು ಒಂದು ಕಡೆಯಾದರೆ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಅವುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಪ್ರಸ್ತುತ ಸಮಸ್ಯೆಗಳನ್ನು ಇನ್ನೊಂದು ನೆಲೆಯಿಂದ ವಿವರಿಸಿಕೊಳ್ಳಬಹುದುಮೇಲಿನ ವಿಷಯದ ಆಧಾರಗಳಿಂದ  ಒಟ್ಟಾರೆ ವಿವಿಧ ಹಂತದಲ್ಲಿ ಕರ್ತವ್ಯಲೋಪವಾಗಿರುವುದು ಸಾಬೀತಾಗುತ್ತದೆ. ವಿಷಯ ಅಧಿಕಾರಿಗಳು, ಶಿಕ್ಷಕರು ಹಾಗೂ ಅಧ್ಯಾಪಕರುಗಳ ಬುಡಕ್ಕೂ ಬರುತ್ತದೆ. ಏಕೆಂದರೆ ನೀತಿ, ನಿಯಮ, ಯೋಜನೆಗಳನ್ನು ಸರ್ಕಾರ ರೂಪುಗೊಳಿಸುತ್ತದಾದರೂ ಅಧಿಕಾರಿಗಳು ಹಾಗೂ ಶಿಕ್ಷಕರ ಜವಾಬ್ದಾರಿಯ ಮೇಲೆ ಅದರ ಸಾಫಲ್ಯತೆ ಅವಲಂಬಿತವಾಗಿರುತ್ತದೆ. ಶಿಕ್ಷಣ ತಜ್ಞರ ಶಿಫಾರಸ್ಸುಗಳಿಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಯಾವುದೇ ಬೆಲೆ ನೀಡದೆ ಅವು ಮೂಲೆಗುಂಪಾಗಿವೆ
ಸರ್ಕಾರಗಳ ಅನೇಕ ಯೋಜನೆಗಳ ಮೂಲಕ ಶಿಕ್ಷಣ ನೀಡುವ ಪ್ರಯತ್ನವು ಕಳೆದ ದಶಕದಲ್ಲಿ ಭಾರೀ ಪ್ರಚಾರ ಪಡೆದಿತ್ತು. ’ಸರ್ವ ಶಿಕ್ಷಣ ಅಭಿಯಾನ ಹೆಸರಿನಲ್ಲಿ ದೇಶದಾದ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಪ್ರಯತ್ನವನ್ನು ಆರಂಭಿಸಲಾಯಿತು. ದಶಕ ಕಳೆದರೂ ಪ್ರಯತ್ನ ಸಫಲಗೊಂಡಿಲ್ಲ. ವೈಫಲ್ಯಕ್ಕೆ ಕೆಲವು ಕಾರಣಗಳೆಂದರೆ ತರಗತಿಗಳಲ್ಲಿ ಪಾಠ ಮಾಡುವುದರ ಬದಲು ಅನೇಕ ಜವಾಬ್ದಾರಿಗಳನ್ನು ಶಿಕ್ಷಕರ ಮೇಲೆ ಹೇರಿರುವುದು. ಸರ್ಕಾರಗಳ ಯಾವುದೇ ಯೋಜನೆಗಳಿಗೆ ತಕ್ಷಣ ಸಿಗುವುದು ಶಿಕ್ಷಕ ವರ್ಗವೇ. ಅವರನ್ನು ಚುನಾವಣೆ, ಜನಗಣತಿಯಿಂದಿಡಿದು ದನಗಣತಿವರೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಇತ್ತೀಚಿನ ಸರ್ಕಾರಗಳ ನೀತಿಗಳು ಶಾಲೆಗೆ ವಿದ್ಯಾರ್ಥಿಗಳನ್ನು ಹಿಡಿದು ತರುವ ಕೆಲಸವನ್ನೂ ಶಿಕ್ಷರ ಹೆಗಲಿಗೇರಿಸಿವೆ. ಅದರ ಜೊತೆಗೆ ಅಡುಗೆ ಮಾಡುವ, ಲೆಸೆನ್ ಪ್ಲಾನ್ಗಳನ್ನು ಸಿದ್ಧಪಡಿಸುವಷ್ಟಕ್ಕೆ ಸೀಮಿತಗೊಳಿಸಲಾಗುತ್ತಿದೆ. ಬೋಧನೆಯೊಂದನ್ನುಳಿದು ಎಲ್ಲ ಕೆಲಸಗಳನ್ನೂ ಶಿಕ್ಷಕರ ಜವಾಬ್ದಾರಿಗಳನ್ನಾಗಿಸಲಾಗಿದೆ. ಇನ್ನವರು ಭವ್ಯ ಭಾರತದ ಭವ್ಯಪ್ರಜೆಗಳನ್ನು ನಿರ್ಮಿಸುವ ಕೆಲಸ ಮಾಡಲು ಬಿಡುವೆಲ್ಲಿದೆ? ಭಾರತದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೇನು ಕೊರತೆಯಿಲ್ಲ. ಸರ್ಕಾರದ ಅನೇಕ ಯೋಜನೆಗಳಿಗೆ ಇವರನ್ನು ಬಳಸಿಕೊಂಡಲ್ಲಿ ಶಿಕ್ಷಣ ಕ್ಷೇತ್ರವು ಚುರುಕಾಗಬಲ್ಲದು.
ಇಂದು ಬಡ ರೈತನ, ಕೂಲಿಕಾರ್ಮಿಕನ ಆರ್ಥಿಕ ಪರಿಸ್ಥಿತಿಯಲ್ಲಿ ಖಾಸಗಿ ಶಾಲಾಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸರ್ಕಾರದ ಬಹುತೇಕ ಶಾಲಾಕಾಲೇಜುಗಳಲ್ಲಿ ಒಂದಿದ್ದರೆ ಇನ್ನೊಂದಿಲ್ಲ ಎಂಬಂತಹ ಪರಿಸ್ಥಿತಿ ಇದೆ. ಹಾಗಾದರೆ ಬಜೆಟ್ನಲ್ಲಿ ಮೀಸಲಾದ ಅಪಾರ ಪ್ರಮಾಣದ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಶಿಕ್ಷಣಕ್ಕಾಗಿ ಮೀಸಲಿಟ್ಟ ಹಣವನ್ನು ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸಿರುವ ಉದಾಹರಣೆಯೇ ಇಲ್ಲ. ಇಷ್ಟೊಂದು ಪ್ರಮಾಣದ ಹಣ ಎಲ್ಲಿ ಸೋರಿಹೋಗುತ್ತದೆಂಬುದು ಯಕ್ಷಪ್ರಶ್ನೆಯಾಗಿದೆ. ಒಂದು ಕಡೆ ಕೇಂದ್ರ ಸರ್ಕಾರವು % ರಷ್ಟು ಉನ್ನತ ಶಿಕ್ಷಣದ ಗುರಿಸಾಧಿಸಲು ಯೋಜನೆಗಳನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ಪ್ರಾಥಮಿಕ, ಫ್ರೌಢ, ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಕ್ಷೇತ್ರ ಮಾತ್ರ ಸಂಪೂರ್ಣ ಅಯೋಮಯ ಸ್ಥಿತಿಯಲ್ಲಿದೆ. ಹೀಗೆ ಇಲ್ಲಿ ಅರೆಬೆಂದ ಮಡಕೆಗಳನ್ನು ಕರೆತಂದು % ರಷ್ಟು ಉನ್ನತ ಹಂತದ ಶಿಕ್ಷಣ ನೀಡುವ ಸಾರ್ಥಕತೆ ಏನೆಂದು ಯಾರಿಗೂ ತಿಳಿಯುತ್ತಿಲ್ಲ
ನೆಪಮಾತ್ರಕ್ಕೆ ೧೦೦% ಸಾಕ್ಷರತೆಯನ್ನು ಸಾಧಿಸಿದ್ದೇವೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೊಳ್ಳಲು ಅನುವಾಗುವಂತಹ ಕ್ರಿಯೆಗಳನ್ನು ಮಾತ್ರ ನಾವು ಆಧುನಿಕ ಸರ್ಕಾರಗಳಿಂದ ನಿರೀಕ್ಷಿಸಬಹುದೇನೋ? ಸಮಾಜದಲ್ಲಿ ಶಿಕ್ಷಣ ಉಂಟುಮಾಡಬಹುದಾದ ಸಮಗ್ರ ಬದಲಾವಣೆಯ ಕಿಂಚಿತ್ ಅಂಶಗಳೂ ಕೂಡ ಕಾಣಿಸಿಕೊಳ್ಳದಿರುವುದರಿಂದಾಗಿ ಅನುಮಾನ ಮೂಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಹಾಗೂ ಸ್ವತಂತ್ರ ಆಲೋಚನಾ ಕ್ರಮವನ್ನು ರೂಪಿಸುವುದು ಮಾತ್ರ ನಿಜವಾದ ಶಿಕ್ಷಣವಾಗುತ್ತದೆ. ಆದರೆ ಇಂದು ನಡೆಯುತ್ತಿರುವ ವಿದ್ಯಮಾನಗಳು ಸಾವ್ರರ್ತಿಕ ಶಿಕ್ಷಣ ವ್ಯವಸ್ಥೆಯನ್ನು ಅಣಕಿಸುತ್ತಿವೆ.

ಶಿಕ್ಷಣ ನೀಡುವ ಜಾಗೃತಿಯ ಪರಿಣಾಮವನ್ನು ಎದುರಿಸುವ ಬದಲು ಸಮಗ್ರ ಶಿಕ್ಷಣ ವ್ಯವಸ್ಥೆಗೆ ಗ್ರಹಣ ಹಿಡಿಸುವ ದಾರಿಯನ್ನು ಅಧಿಕಾರ ವರ್ಗ ಹಿಡಿಯುತ್ತಿರುವ ಅನುಮಾನವನ್ನು ಇವರ ಹುನ್ನಾರಗಳು ಮೂಡಿಸುತ್ತಿವೆ. ದೇವನೂರ ಮಹಾದೇವ ಅವರ ಡಾಂಬರು ಬಂದುದು ಕತೆಯಲ್ಲಿನ ಓದಿದ ಹುಡುಗರು ಕೇಳುವ ಪ್ರಶ್ನೆಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಶಿಕ್ಷಕರು ಅರ್ಥ ಮಾಡಿಕೊಂಡು ಶಿಕ್ಷಣವನ್ನು ಕೊಟ್ಟೂ ಕೊಡದಂತಿರಿಸುವ ವ್ಯವಸ್ಥಿತ ಹನ್ನಾರಗಳನ್ನು ಹೂಡಿದ್ದಾರೆ. ಆದರೆ ಇಲ್ಲಿ ಏಕಲವ್ಯರು ಇಂದಲ್ಲ ನಾಳೆ ಕೇಳುವ ಪ್ರಶ್ನೆಗಳಿಗೆ ಮಾಧ್ಯಮಗಳು, ಶಿಕ್ಷಕರು, ಅಧಿಕಾರಿಗಳು, ಪೋಷಕರು ಮತ್ತು ರಾಜಕಾರಣಿಗಳೆಲ್ಲರೂ ಉತ್ತರಿಸಲೇಬೇಕಾಗುತ್ತದೆ.

No comments:

Post a Comment