Search This Blog

Sunday 2 November 2014

ಕೆಪಿಎಸ್ಸಿ: ಭ್ರಷ್ಟಾಚಾರ ತಡೆ ಸಾಧ್ಯವಿಲ್ಲವೇ?
ಪ್ರದೀಪ್ ಮಾಲ್ಗುಡಿ
ಕೆಪಿಎಸ್ಸಿ ನೇಮಕಾತಿ ವಿವಾದ ಪ್ರಸ್ತುತ ರಾಜಕೀಯ ಸ್ವರೂಪ ಪಡೆಯುತ್ತಿದೆ. ನೇಮಕಾತಿ ಸಮಯದಲ್ಲಿ ಅನೇಕ ಅಕ್ರಮಗಳು ನಡೆದಿರುವ ಬಗ್ಗೆ ಈಗಾಗಲೇ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳು ವಿವರವಾಗಿ ಬರೆದು ಸುದ್ದಿ ಬಿತ್ತರಿಸಿವೆ. ಅದರಲ್ಲೂ ಸ್ಟಿಂಗ್ ಆಪರೇಷನ್ಗಳಲ್ಲೂ ಕೆ.ಪಿ.ಎಸ್.ಸಿ. ನೇಮಕಾತಿಯಲ್ಲಿ ನಡೆಯುವ ಅವ್ಯವಹಾರಗಳು ಬಯಲಾಗಿವೆ. ೨೦೧೧ರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅವಕಾಶ ವಂಚಿತ ಅಭ್ಯರ್ಥಿಗಳು ಅಳಲು ತೋಡಿಕೊಂಡರು. ಸಮಯದಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರೊ.ಚಂದ್ರಶೇಖರ್ ಹಾಗೂ ಆಪ್ ಪಕ್ಷದ ರವಿಕೃಷ್ಣಾರೆಡ್ಡಿಯವರು ಸತತವಾಗಿ ಪ್ರತಿಭಟನೆಯ ಹಾದಿ ಸವೆಸಿದರು.
    ಸರ್ಕಾರ ಕಡೆಗೆ ಸಿಐಡಿ ತನಿಖೆಗೆ ಆದೇಶಿಸಿತು. ಅದರಲ್ಲಿ ಬಯಲಾದ ಅವ್ಯವಹಾರಗಳ ಪ್ರಮಾಣ ಎಂತಹವರನ್ನೂ ದಂಗುಬಡಿಸುವಂತಿತ್ತು. ಇದುವರೆಗೆ ಕೇವಲ ವೈಯಕ್ತಿಕವಾಗಿ ಮಾತ್ರ ಮಾತನಾಡಿಕೊಳ್ಳುತ್ತಿದ್ದ ವಿಷಯಗಳೆಲ್ಲ ಸಾರ್ವಜನಿಕವಾಗಿ ಚರ್ಚೆಗೊಗಾದವು.
    ಅಕ್ರಮಗಳಲ್ಲಿ ಮುಖ್ಯವಾಗಿ ನಡೆದಿರುವುದು ಅರ್ಹತೆ ಇಲ್ಲದವರನ್ನು ಜಾತಿ, ಹಣ ಹಾಗೂ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಅಥವಾ ಇವುಗಳಿಗೆ ಸಂಬಂಧಿಸಿದ ವ್ಯಕ್ತಿಗಳಿಂದ ಪ್ರಭಾವವನ್ನು ಬಳಸಿಕೊಂಡು ವಿವಿಧ ಹುದ್ದೆಗಳನ್ನು ಒಂದರ್ಥದಲ್ಲಿ ಮಾರಲಾಗಿದೆ. ಅದರಲ್ಲಿ ಕೆಪಿಎಸ್ಸಿ ಅಧ್ಯಕ್ಷ, ಸದಸ್ಯರ ಪಾತ್ರವೂ ಇದೆ. ಇವರಲ್ಲಿ ಕೆಲವರು ಹಣಕಾಸು ವ್ಯವಹಾರವನ್ನು ತುಂಬಾ ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ತಾವು ಎಂದೂ ಹಣವನ್ನು ಪಡೆಯದೆ ವಿವಿಧ ಮಠಗಳಿಗೆ ಹಣವನ್ನು ಕೊಡಿಸಿದ್ದಾರೆ. ಅಲ್ಲದೇ ತಾಳಿ ಭಾಗ್ಯ ಯೋಜನೆ ಎಂಬ ಸ್ಕೀಮ್ಅನ್ನು ಕೂಡ ಕೆಪಿಎಸ್ಸಿಯ ಕೆಲ ಸದಸ್ಯರು ಸಂಶೋಧಿಸಿದ್ದಾರೆ. ಯೋಜನೆಯನ್ವಯ ಆಯ್ಕೆಯಾಗಬೇಕಾದ ಸಂಭವನೀಯ ಅಭ್ಯರ್ಥಿಗಳ ಕುಲ, ಗೋತ್ರ, ಜಾತಕಗಳನ್ನೆಲ್ಲ ಸಂಗ್ರಹಿಸಿ, ಕೆಎಎಸ್ ಅಧಿಕಾರಿಗಳನ್ನು ಅಳಿಯನನ್ನಾಗಿಸಿಕೊಳ್ಳುವ ಮಾವಂದಿರನ್ನು ಸಂಪರ್ಕಿಸಿ, ಅವರೊಂದಿಗೆ ವ್ಯವಹಾರವನ್ನು ಕುದುರಿಸಿ ಕೆಪಿಎಸ್ಸಿ ಹುದ್ದೆಗಳನ್ನು ಯೋಜನೆಯಡಿಯಲ್ಲಿ ಮಾರಲಾಗಿದೆ. ಇಂದಿಗೂ ಕೆಲವರನ್ನುಟಿಬಿವೈ (ತಾಳಿ ಭಾಗ್ಯ ಯೋಜನೆಯ ಸಂಕ್ಷಿಪ್ತ ರೂಪಎಂದು ಅನೇಕರು ಗೇಲಿ ಮಾಡುವುದಿದೆ. ಕೆಲವು ಸದಸ್ಯರು ಯಾವ ಆಸೆ, ಆಮಿಷಗಳಿಗೂ ಒಳಗಾಗದೆ ಮೀಸಲಾತಿಯ ಪ್ರಕಾರ ಆಯ್ಕೆ ನಡೆಸಲೂ ಕಾರಣರಾಗಿದ್ದಾರೆ. ಇದರ ಜತೆಗೆ ಪ್ರತಿ ಆಯ್ಕೆಯಲ್ಲೂ ಅನೇಕ ಕಾರಣಗಳಿಗೆ ಮೀಸಲಾತಿ ಉಲ್ಲಂಘನೆಯಾಗಿದೆ. ಸರ್ಕಾರದ ನಿಯಮದ ಪ್ರಕಾರ ನಿಗದಿಯಾದ ಮೀಸಲಾತಿಯನ್ವಯ ನಡೆಯಬೇಕಿದ್ದ ನೇಮಕವನ್ನು ತಮಗೆ ಬೇಕಾದ ಅಭ್ಯರ್ಥಿಗೆ ಬೇಕಾದ ಹುದ್ದೆ ದೊರೆಯುವಂತೆ ಮೀಸಲಾತಿ ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ನೇಮಕ ಮಾಡಲಾಗಿದೆ. ಆಯಾ ಅಧ್ಯಕ್ಷರ ಅವಧಿಯಲ್ಲಿ ತಮ್ಮ ಜಾತಿಗೆ ಸೇರಿದ ಅಭ್ಯರ್ಥಿಗಳನ್ನು ಅತಿಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುವ ಮೂಲಕ ಅಕ್ರಮ ನಡೆಸಲಾಗಿದೆ. ಹೇಗೆಂದರೆ, ತಮ್ಮ ಜಾತಿಯವರನ್ನು ಜಿ.ಎಂ. ಕೋಟಾದಡಿಯಲ್ಲಿ ಆಯ್ಕೆ ಮಾಡುವುದರ ಜತೆಗೆ ಆಯಾ ಜಾತಿಯ ಕೋಟಾದಲ್ಲೂ ಅದೇ ಜಾತಿಯ ಜನರಿಗೆ ಅವಕಾಶ ನೀಡಲಾಗಿದೆ.
    ಲಂಚ ನೀಡಿದ ಅಭ್ಯರ್ಥಿಗಳಿಗೆ ಮೌಲ್ಯಮಾಪನ ಸಮಯದಲ್ಲಿ ಹೆಚ್ಚಿನ ಅಂಕ ಕೊಡಿಸುವ ಹಾಗೂ ಸಂದರ್ಶನದ ಸಮಯದಲ್ಲೂ ಇದೇ ಕುತಂತ್ರವನ್ನು ಅನುಸರಿಸುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆಯೆಂದು ಸಿಐಡಿ ವರದಿ ಸಲ್ಲಿಸಿದೆ.
ಕೆಪಿಎಸ್ಸಿ ಯಾಕೆ ಬೇಕು?
ಪ್ರತಿ ನೇಮಕಾತಿ ಸಮಯದಲ್ಲೂ ಸ್ವಜನ ಪಕ್ಷಪಾತ, ಮೀಸಲಾತಿ ಉಲ್ಲಂಘನೆ, ಲಂಚ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಜತೆಗೆ ಕೆಲವರು ಪ್ರತಿ ನೇಮಕಾತಿಯನ್ನೂ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಇದರಿಂದ ನೇಮಕಾತಿ ನಡೆದರೂ ಕೇಸ್ ಕೋರ್ಟ್ನಲ್ಲಿ ಇತ್ಯರ್ಥವಾಗುವವರೆಗೆ ನೇಮಕಾತಿ ಆದೇಶಕ್ಕೆ ತಡೆಬೀಳುತ್ತಿದೆ. ಇದರಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ.
ಹೀಗೆ ಪ್ರತಿ ನೇಮಕಾತಿಯಲ್ಲೂ ಸರ್ಕಾರ ಹಾಗೂ ಕೋರ್ಟ್ ಒಂದಿಲ್ಲೊಂದು ರೀತಿಯಲ್ಲಿ ಮಧ್ಯಪ್ರವೇಶಿಸಬೇಕಿದೆ. ಹಾಗಾದರೆ ಕೆಪಿಎಸ್ಸಿ ಏಕೆ ಬೇಕು? ಎಂಬ ಪ್ರಶ್ನೆ ಎದುರಾಗುತ್ತಿದೆ.
ಪ್ರತಿಭಾಪಲಾಯನ
    ಭ್ರಷ್ಟಾಚಾರದ ದುರವಸ್ಥೆಯಿಂದ ಬೇಸತ್ತ ಯುವಜನಾಂಗ ಪ್ರತಿಭಾಪಲಾಯನಗೈಯುತ್ತಿದೆ. ಏಕೆಂದರೆ; ಅರ್ಹತೆಯ ಮಾನದಂಡಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ನೇಮಕಾತಿಗಳಿಂದ ಪ್ರತಿಭಾವಂತ ಅಭ್ಯರ್ಥಿಗಳು ಹೊರರಾಜ್ಯ ಹಾಗೂ ಹೊರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ನಾಡಿನ ಅಸಂಖ್ಯಾತ ಮಾನವ ಸಂಪನ್ಮೂಲ ವಿದೇಶದ ಪಾಲಾಗುತ್ತಿದೆ. ಭಾರತದಲ್ಲಿ ಅತ್ಯುತ್ತಮ ಕೌಶಲ್ಯದಿಂದ ಕೂಡಿರುವ ಜನರನ್ನು ಕರ್ನಾಟಕ ಹೊಂದಿದೆ. ಆದರೆ ಅವರಿಗೆ ಔದ್ಯೋಗಿಕ ಭದ್ರತೆಯಿಲ್ಲದ ಕಾರಣದಿಂದಾಗಿ ರಾಜ್ಯ, ದೇಶ, ಕುಟುಂಬ, ಪರಿಸರಗಳನ್ನೆಲ್ಲ ತೊರೆದು ಪಲಾಯನಗೈಯ್ಯುತ್ತಿದ್ದಾರೆ.
    ಇದು ದೀರ್ಘಕಾಲೀನವಾಗಿ ಕರ್ನಾಟಕದ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಯುವ, ಉತ್ಸಾಹಿ, ದಕ್ಷ, ಪ್ರಾಮಾಣಿಕ ಜನರ ಕೊರತೆಯುಂಟಾದ ಪರಿಣಾಮದಿಂದ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಅಲ್ಲದೇ ಪ್ರತಿಭಾವಂತರ ಪಲಾಯನದಿಂದ ಸಾಮಾಜಿಕವಾಗಿ ಕೂಡ ಸಮಸ್ಯೆಗಳುಂಟಾಗುತ್ತಿವೆ. ಹೆಚ್ಚುತ್ತಿರುವ ವೃದ್ಧಾಶ್ರಮಗಳು, ಅತ್ಯಾಚಾರಗಳು, ಕುಂದುತ್ತಿರುವ ನಾಗರಿಕ ಪ್ರಜ್ಞೆ ಕೆಲವು ಉದಾಹರಣೆಗಳು.
ಎಲ್ಲ ಕಾರಣಗಳಿಂದ ನೈತಿಕ ಮೌಲ್ಯಗಳು ಪಾತಾಳ ಸೇರಿವೆ. ಅರ್ಹತೆಯುಳ್ಳವರಿಗೂ ಉದ್ಯೋಗ ಸಿಗುತ್ತಿಲ್ಲ. ಎಲ್ಲೆಡೆ ವಶೀಲಿಬಾಜಿ, ತನ್ನ ಜಾತಿ, ಮತ, ಸಿದ್ಧಾಂತಗಳಿಗನುಗುಣವಾದ ವ್ಯಕ್ತಿಗಳನ್ನೆ ಆರಿಸಿಕೊಳ್ಳಲಾಗುತ್ತಿದೆ. ಯಾವುದೇ ಮಾನದಂಡಗಳೂ ಯಾವುದೇ ಹುದ್ದೆಗೆ ಅರ್ಹತೆಯಾಗುಳಿದಿಲ್ಲ. ಯಾವುದೇ ಸರ್ಕಾರಿ ನೌಕರಿ ಗಿಟ್ಟಿಸುವುದಕ್ಕೂ ಯುವಜನತೆ ಜಾತಿ, ಹಣ, ಅಧಿಕಾರ, ಪ್ರಭಾವಗಳ ಬೆನ್ನು ಬೀಳಬೇಕಾದ ದುಸ್ಥಿತಿ ಎದುರಾಗುತ್ತಿದೆ. ಅದೇ ಕಾಲಕ್ಕೆ ಉದ್ಯೋಗ ಹಿಡಿಯಬೇಕಾದ ಅಗತ್ಯವಿದೆ. ಹೀಗೆ ಉದ್ಯೋಗ ಹಿಡಿಯುವಲ್ಲಿ ವಿಫಲವಾದವರನ್ನು ಬದುಕುವುದಕ್ಕೆ ಅರ್ಹರಲ್ಲವೆಂಬಂತೆ ಕಾಣಲಾಗುತ್ತಿದೆ. ಯುವಜನಾಂಗ ಸಂದರ್ಭವನ್ನು ಎದುರಿಸಲಾಗದೆ ದಿಕ್ಕೆಟ್ಟಿದೆ.
ಭ್ರಷ್ಟರಿಂದ ಹೆಚ್ಚುತ್ತಿರುವ ಭ್ರಷ್ಟಾಚಾರ
    ಯಾವುದೇ ಹುದ್ದೆಗೆ ಬರುವ ಅಧಿಕಾರಿ ಲಕ್ಷಾಂತರ ರೂಪಾಯಿಗಳನ್ನು ಸುರಿದು ಪ್ರಾಮಾಣಿಕವಾಗಿ ಬದುಕುವುದು ಸಾಧ್ಯವಿಲ್ಲ. ಲಂಚ ಕೊಟ್ಟು ಬಂದವರು ತಮ್ಮ ಹುದ್ದೆಯನ್ನು ನಿರ್ವಹಿಸುವ ಸಮಯದಲ್ಲಿ ಲಂಚ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಒಂದು ವೇಳೆ ಮೇಲಿನ ಯಾವುದೇ ಅಕ್ರಮಗಳು ನಡೆಯದೇ ನೇಮಕಾತಿಗಳು ಅರ್ಹತೆಯ ಆಧಾರದಲ್ಲಿ ನಡೆದರೆ ಆಗ ಅಧಿಕಾರಿಗಳಲ್ಲಿ ನೈತಿಕ ಪ್ರಜ್ಞೆಯಿಂದಾದರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಸಾಧ್ಯತೆಯಿರುತ್ತದೆ. ಆದರೆ ಈಗನಾವೇನು ಬಿಟ್ಟಿ ಕೆಲಸ ಗಿಟ್ಟಿಸಿಲ್ಲ. ಇರುವಷ್ಟು ದಿವಸ ಬಾಚೋಣ, ದೋಚೋಣ ಎಂಬ ಮನಸ್ಥಿತಿಗೆ ಲಂಚ ಕೊಟ್ಟು ಅಧಿಕಾರ ಗಿಟ್ಟಿಸಿದವರು ಇಳಿದಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಬಲಿಪಶುಗಳಾಗುತ್ತಿರುವ ಪ್ರಾಮಾಣಿಕ ಅಭ್ಯರ್ಥಿಗಳು
    ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳಿಂದ ನಿಜಕ್ಕೂ ಬಲಿಪಶುಗಳಾಗುತ್ತಿರುವವರು ಅರ್ಹ, ಪ್ರತಿಭಾವಂತ, ಪ್ರಾಮಾಣಿಕ ಅಭ್ಯರ್ಥಿಗಳು. ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವವರು ಅಧ್ಯಕ್ಷ, ಸದಸ್ಯರು ಹಾಗೂ ಮೌಲ್ಯಮಾಪಕರು. ಆದರೆ ಇವರ ವಿರುದ್ಧ ಇದುವರೆಗೆ ಯಾವುದೇ ಕಠಿಣ ನಿಲುವನ್ನು ಯಾವುದೇ ಸರ್ಕಾರಗಳು ತೆಗೆದುಕೊಂಡಿಲ್ಲ.
ಅರ್ಹತೆಗಳ ನಿಗದಿ
ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಮಾನದಂಡಗಳೇ ನಿಗದಿಯಾಗಿಲ್ಲ. ಪ್ರತಿ ಸರ್ಕಾರ ಸದಸ್ಯ, ಅಧ್ಯಕ್ಷರ ಅವಧಿ ಮುಗಿದಾಗ ಸರ್ಕಾರದ ಮೀಸಲಾತಿಯನ್ವಯ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ನಡೆಯುತ್ತದೆ. ಆದರೆ ಇದರಲ್ಲೇ ಸ್ವಜನ ಪಕ್ಷಪಾತ ನಡೆದ ಅನೇಕ ಉದಾಹರಣೆಗಳಿವೆ. ಆಯಾ ಸರ್ಕಾರದ ಅವಧಿಯಲ್ಲಿ ಅವರ ಪಕ್ಷದ ಕಾರ್ಯಕರ್ತರು, ಸಿದ್ಧಾಂತಗಳನ್ನು ಬೆಂಬಲಿಸುವವರನ್ನು ಅಥವಾ ನಿವೃತ್ತ ಅಧಿಕಾರಿಗಳನ್ನು ಕೆಲವೊಮ್ಮೆ ಸಕ್ರಿಯ ರಾಜಕಾರಣಿಗಳನ್ನು ಕೆಪಿಎಸ್ಸಿಗೆ ನೇಮಿಸಲಾಗಿದೆ. ಹೀಗೆ ನಡೆದ ನೇಮಕಾತಿಗಳಿಂದ ಅತ್ಯಂತ ಹೆಚ್ಚಿನ ಫಲಾನುಭವ ಪಡೆದಿರುವುದು ಆಯಾ ಸರ್ಕಾರಗಳೇ. ಇದರ ದುಷ್ಪರಿಣಾಮದಿಂದಲೇ ಕೆಪಿಎಸ್ಸಿ ಸುಡುವ ಕೆಂಡವಾಗಿ, ಬಿಸಿತುಪ್ಪವಾಗಿ ಪರಿಣಮಿಸಿದೆ. ಇದನ್ನು ಸೆರಗಿನಲ್ಲಿ ಇಟ್ಟುಕೊಳ್ಳಲೂ ಆಗದ, ಬಿಟ್ಟುಬಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸಂದರ್ಭದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವೆ ವೈವಾಹಿಕ ಸಂಬಂಧಗಳು ಏರ್ಪಟ್ಟಿವೆ. ರಾಜಕಾರಣ ಹಾಗೂ ಉನ್ನತ ಹುದ್ದೆಗಳು ಒಟ್ಟೊಟ್ಟಿಗೆ ಸೇರಿ ಕರ್ನಾಟಕವನ್ನು ಅಧೋಗತಿಗಿಳಿಸಿವೆ.
ಆದರೆ ಸರ್ಕಾರಗಳು ಪ್ರತಿಬಾರಿ ಕೆಪಿಎಸ್ಸಿ ವಿಷಯದಲ್ಲಿ ತಪ್ಪೆಸಗಿವೆ. ಆಯ್ಕೆಯಾದ ಎಲ್ಲರೂ ಭ್ರಷ್ಟರಾಗಿರುವುದಿಲ್ಲ. ಹಾಗೂ ಪ್ರತಿಭಾವಂತರಿಗೆ ಅವಕಾಶವೂ ತಪ್ಪಿಹೋಗಿದೆ. ಇಂತಹ ವಿಷಮ ಪರಿಸ್ಥಿತಿಯನ್ನು ನಿರ್ವಹಿಸುವುದೇ ಅಸಾಧ್ಯವಾಗಿ ಎಲ್ಲ ಸಂದರ್ಭದಲ್ಲೂ ವಿಳಂಬನೀತಿಯನ್ನು ಸರ್ಕಾರಗಳು ಅನುಸರಿಸುತ್ತಿವೆ.
ಮಂಪರು ಪರೀಕ್ಷೆ ಸಾಧ್ಯವೇ?

    ಬಾನಗಡಿಗಳನ್ನೆಲ್ಲ ಗಮನಿಸಿದರೆ ಸರ್ಕಾರ ಹಾಗೂ ಕೋರ್ಟ್ ವಿಷಯದಲ್ಲಿ ಒಂದು ನಿರ್ಣಾಯಕ ನಿರ್ಧಾರಕ್ಕೆ ಬರಬೇಕಾಗಿದೆ. ಕೆಪಿಎಸ್ಸಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಅವಧಿಯ ಅಧ್ಯಕ್ಷ, ಸದಸ್ಯರು ಹಾಗೂ ಮೌಲ್ಯಮಾಪಕರು ಮತ್ತು ಹೆಸರು ಕೇಳಿಬಂದಿರುವ ಅಭ್ಯರ್ಥಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ. ಲಂಚ ಕೊಡುವ ಹಾಗೂ ಪಡೆಯುವವರಿಬ್ಬರನ್ನೂ ಕ್ರಿಮಿನಲ್ ಅಪರಾಧದಡಿಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸುವ ಕಾಯ್ದೆಯೊಂದನ್ನು ಜಾರಿಗೆ ತರಬೇಕಾಗಿದೆ. ಇಂದು ಭ್ರಷ್ಟಾಚಾರ ರಕ್ತಬೀಜಾಸುರನಂತೆ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುತ್ತಿರುವುದರಿಂದ ಕ್ರಾಂತಿಕಾರಕ ಕ್ರಮದಿಂದಾದರೂ ಇದಕ್ಕೆ ಒಂದು ಪೂರ್ಣವಿರಾಮವನ್ನು ಇಡುವ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ.

No comments:

Post a Comment