Search This Blog

Sunday 2 November 2014

ಕಸಾಪ ಮುಂದಿರುವ ಸವಾಲುಗಳು
                                                                                                                      - ಪ್ರದೀಪ್ ಮಾಲ್ಗುಡಿ
ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದು ಸಮಸ್ತ ಕನ್ನಡಿಗರ ಹೆಮ್ಮೆ. ಇಡೀ ವರ್ಷ ನಡೆಯಲಿರುವ ಶತಮಾನೋತ್ಸವ ಆಚರಣೆಯ ಉದ್ಘಾಟನೆಯೂ ನಡೆದಿದೆ. ಆದರೆ ನಾಡು, ನುಡಿ, ಗಡಿ, ಜಲ ಮತ್ತು ಉದ್ಯೋಗದ ಸಮಸ್ಯೆಯನ್ನು ಹೊರತುಪಡಿಸಿದ ಸಾಹಿತ್ಯ ಪರಿಷತ್ತಿನ ನಡೆಯೇ ಅದು ಜನಸಾಮಾನ್ಯರಿಂದ ದೂರವಾಗಿರುವುದಕ್ಕೆ ಕಾರಣವಾಗಿದೆ. ಈ ಅಂಶವನ್ನು ಕಸಾಪ ಮೊದಲು ಅರ್ಥಮಾಡಿಕೊಳ್ಳಬೇಕಿದೆ. ಮೇಲೆ ಉಲ್ಲೇಖಿಸಿದ ಸಮಸ್ಯೆಗಳು ಉದ್ಭವಿಸಿದ ಸಮಯದಲ್ಲಿ ಕಸಾಪ ಮೌನವಾಗಿದೆ. ಇಂದಿನವರೆಗೆ ಸರ್ಕಾರದ ಅನುದಾನವನ್ನು ನಂಬಿಕೊಂಡಿರುವುದು ಅದರ ಅಸಹಾಯಕತೆಗೆ ಒಂದು ಕಾರಣ. ಸುಮಾರು ಒಂದೂವರೆ ಲಕ್ಷ ಸದಸ್ಯರಿರುವ ಕಸಾಪ ಸಾಂಸ್ಕೃತಿಕ ಬಿಕ್ಕಟ್ಟಿನ ಸಮಯದಲ್ಲಿ ಕನ್ನಡ ಪರ ನಿಲುವು ತಾಳುವಲ್ಲಿ ಸೋತಿದೆ. ಪ್ರತಿಭಟನೆಗಳ ಸಮಯದಲ್ಲಿ ಕನ್ನಡಪರ ಸಂಘಟನೆಗಳ ಜತೆಗೆ ಕೈಜೋಡಿಸುವುದು, ಸಾಹಿತ್ಯ ಸಮ್ಮೇಳನಗಳ ಆಯೋಜನೆ, ಪುಸ್ತಕ ಪ್ರಕಟಣೆ, ದತ್ತಿ ಉಪನ್ಯಾಸ, ಪ್ರಶಸ್ತಿ ವಿತರಣೆಯ ಕೆಲಸಗಳಿಗೆ ಇದು ಸೀಮಿತವಾಗಿದೆ. ಇವುಗಳ ಜತೆಗೆ ಇನ್ನೂ ಮಾಡಬೇಕಿರುವ ಕೆಸಗಳೆಡೆಗೆ ಕಸಾಪ ಕಣ್ಣು ಹಾಯಿಸಬೇಕಿದೆ. ಉದಾಹರಣೆಗೆ ಕನ್ನಡವನ್ನು ಆಡಳಿತ ಭಾಷೆಯಾಗಿ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಇರುವ ಅಡೆತಡೆಗಳ ನಿವಾರಣೆಯ ಜವಾಬ್ದಾರಿಯನ್ನು ತನ್ನ ಆದ್ಯತೆಯಾಗಿಸಿಕೊಳ್ಳಬೇಕಿದೆ. ಕನ್ನಡ ಮಾಧ್ಯಮವನ್ನು ಹಿನ್ನೆಲೆಗೆ ಸರಿಸಿದ ನಿರ್ಣಯಗಳು ಯಾವುವು? ಮತ್ತು ಅದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ಆಗುವ ದುಷ್ಪರಿಣಾಮಗಳೇನು? ಈ ಸಮಸ್ಯೆಗೆ ಪರಿಹಾರ ಸೂತ್ರಗಳೇನು? ದಿನದಿಂದ ದಿನಕ್ಕೆ ಕನ್ನಡ ಭಾಷೆ ಬಲಿಷ್ಠಗೊಳ್ಳಲು ಕೈಗೊಳ್ಳಬೇಕಾದ ನಿರ್ಣಾಯಕ ಅಂಶಗಳೇನು? ಬೆಂಗಳೂರಿನಲ್ಲಿ ದಿನಕಳೆದಂತೆ ಕನ್ನಡ ವಾತಾವರಣ ಕಳೆದು ಹೋಗುತ್ತಿರುವುದಕ್ಕೆ ಕಾರಣಗಳೇನು? ಹಾಗಾದಂತೆ ಮಾಡಬೇಕಿರುವ ಕನ್ನಡ ಕಟ್ಟುವ ಕೆಲಸಗಳೇನು? ಕನ್ನಡ-ಕನ್ನಡಿಗರು; ಎರಡನ್ನೂ ಒಟ್ಟಿಗೇ ಸಬಲಗೊಳಿಸುವ, ಒಳಗೊಳ್ಳುವ ಯೋಜನೆಗಳ ಅನುಷ್ಠಾನ ಸಾಧ್ಯವೇ?  ಇಂತಹ ಪ್ರಶ್ನೆಗಳನ್ನು ಮುಖ್ಯವಾಗಿಟ್ಟುಕೊಂಡು ಕಸಾಪ ಮುನ್ನಡೆಯಬೇಕಿದೆ.
ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿಗೆ ಆತ್ಮವಿಮರ್ಶೆಯ ವರ್ಷವಾಗಬೇಕು. ಇದುವರೆಗೆ ಮಾಡಿರುವ ಕೆಲಸಗಳ ಜತೆಗೆ ನಿಷ್ಕ್ರಿಯವಾಗಿದ್ದ ಅವಧಿಯಲ್ಲಿ ಕನ್ನಡಕ್ಕೆ ಉಂಟಾಗಿರುವ ಹಾನಿಯನ್ನು ಅರಿಯಬೇಕು. ಮುಂದೆಂದೂ ಇಂತಹ ಅಪವಾದ ತನಗೆ ಬರದಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಕನ್ನಡ, ಕರ್ನಾಟಕಗಳ ಭವಿಷ್ಯವನ್ನು ಕೇಂದ್ರವಾಗಿಟ್ಟುಕೊಂಡು ಶತಮಾನೋತ್ಸವವನ್ನು ಆಚರಿಸುವ ಕೆಲಸವಾಗಬೇಕು. ಈ ಸಮಯದಲ್ಲಿ ಪರಿಣಾಮಕಾರಿಯಾದ ಚಿಂತನೆ, ಯೋಜನೆಗಳನ್ನು ಆವಿಷ್ಕರಿಸಬೇಕಾದ ಜವಾಬ್ದಾರಿ ಕಸಾಪ ಮೇಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಎಲ್ಲ ಅಧ್ಯಕ್ಷರೂ ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಇದನ್ನು ಕನ್ನಡಿಗರೆಲ್ಲರೂ ಒಪ್ಪಿಕೊಳ್ಳುವಂತಹ ದೃಢ ನಿರ್ಧಾರವನ್ನು ಈ ವರ್ಷದಲ್ಲಾದರೂ ಕೈಗೊಳ್ಳಬೇಕು. ಹಾಗಾದರೆ ಮಾತ್ರ  ಶತಮಾನೋತ್ಸವ ಆಚರಣೆ ಅರ್ಥಪೂರ್ಣವಾಗುತ್ತದೆ.

No comments:

Post a Comment