Search This Blog

Sunday 2 November 2014

ಹೊಸ ಚಿಂತನೆಗಳಿಲ್ಲದೆ ಸೊರಗಿದ ಸಾಂಸ್ಕೃತಿಕ ನೀತಿ
-    ಪ್ರದೀಪ್ ಮಾಲ್ಗುಡಿ
ಸಾಂಸ್ಕೃತಿಕ ನೀತಿ ಕುರಿತ ಆಗಸ್ಟ್ ೦೪ ೨೦೧೪ರಂದು ರಾಜ್ಯಧರ್ಮ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಧನಂಜಯ್ಯ ಎಚ್.ಎನ್. ಅವರ ಲೇಖನ ಸಾಂಸ್ಕೃತಿಕ ನೀತಿಯ ಕೆಲವು ಮಿತಿಗಳನ್ನು ಎತ್ತಿತೋರಿಸಿದೆ. ಸರ್ಕಾರದ ಸಾಂಸ್ಕೃತಿಕ ನೀತಿ ಕುರಿತ ಪ್ರಸ್ತಾಪ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹು ನಿರೀಕ್ಷೆಯನ್ನು ಮೂಡಿಸಿತ್ತು. ಅದರ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕರೆಂದು ಹೆಸರಾದ ಬಂಡಾಯ ಸಂಘಟನೆಯ ಪ್ರೊ.ಬರಗೂರು ರಾಮಚಂದ್ರಪ್ಪನವರಿಗೆ ವಹಿಸಿದಾಗ ನಿರೀಕ್ಷೆಗಳು ಇನ್ನಷ್ಟು ಉತ್ತುಂಗಕ್ಕೇರಿದ್ದವು. ಅವರ ಬಂಡಾಯ ಪ್ರವೃತ್ತಿ ಸಾಂಸ್ಕೃತಿಕ ನೀತಿಯಲ್ಲಿ ವ್ಯಕ್ತವಾಗುತ್ತವೆಂದು ಬಹುತೇಕ ಸಾಹಿತಿಗಳು, ಚಿಂತಕರು, ಕಲಾಸಕ್ತರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಇದರಲ್ಲಿ ಬಹುಮುಖ್ಯವಾದ ಚರ್ಚೆಗಳು ಹೊರಗೆಯೇ ಉಳಿದವು.
ನೀತಿ ಕುರಿತು ವ್ಯಕ್ತವಾದ ಕೆಲವು ಅಭಿಪ್ರಾಯಗಳು ಹೀಗಿವೆ: ರಾಜ್ಯ ಸರ್ಕಾರ ಸಾಂಸ್ಕೃತಿಕ ನೀತಿ ರೂಪಿಸಲು ಹೊರಟಿರುವುದನ್ನು ಪ್ರಶ್ನಿಸುವುದರ ಜೊತೆಗೆ ಧಿಕ್ಕರಿಸಬೇಕು. ನೀತಿ ಸಂಹಿತೆಯ ಕಲ್ಪನೆಯನ್ನೇ ಕಿತ್ತೊಗೆಯಬೇಕು ಎಂಬ ಅಭಿಪ್ರಾಯವನ್ನು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಸಾಹಿತ್ಯ ಸಮ್ಮೇಳನವೊಂದರಲ್ಲಿ ವ್ಯಕ್ತಪಡಿಸಿದ್ದರು.
ಗಮನಿಸದೇ ಉಳಿದ ಬುಡಕಟ್ಟು ಸಮುದಾಯಗಳು, ಮುಟ್ಟದೆ ಹೋದ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಅರಿವೇ ಇನ್ನೂ ಮೂಡಿಲ್ಲ. ಜೀವಂತ ಸಮುದಾಯಗಳೇ ಹೀಗಿರುವಾಗ, ಗತದ ಕುರುಹುಗಳಾದ ಶಿಲಾಯುಗದ ಸಮಾಧಿಗಳು, ಬೌದ್ಧ ಸ್ತೂಪಗಳು ಇವುಗಳಿಗೆ ಮತ್ತೆ ಜೀವ ಬರಬಹುದೆ? ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಂಸ್ಕೃತಿ ನೀತಿಯನ್ನು ರೂಪಿಸಲು ಸಾಧ್ಯವಾದೀತೆ? ಕಾದು ನೋಡೋಣ ಎಂಬ ಅನುಮಾನವನ್ನು ಇತಿಹಾಸ ಅಧ್ಯಾಪಕಿ ಡಾ.ವಸು ಮಳಲಿ ತಮ್ಮ ಅಂಕಣವೊಂದರಲ್ಲಿ ದಾಖಲಿಸಿದ್ದರು.
ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುವ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಸ್.ಎಲ್.ಭೈರಪ್ಪ ವಿರೋಧಿಸಿದ್ದರು.
ಸರ್ಕಾರಗಳ ಸಾಂಸ್ಕೃತಿಕ ನಿಲುವನ್ನು ಕುರಿತು ಒಂದೊಂದು ಸರ್ಕಾರ ಬಂದಾಗಲೂ ಇದರ ಕಾರ್ಯವೈಖರಿಯಲ್ಲಿ ಏರುಪೇರುಗಳನ್ನು ನೋಡಬಹುದು. ಇಂಥದನ್ನು ತಡೆಯುವುದೇ ಸಾಂಸ್ಕೃತಿಕ ನೀತಿಯ ಹಿಂದಿರುವ ಪ್ರಧಾನ ಗುರಿ. ಇದರಾಚೆಗೂ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಸಂಗತಿಗಳ ಬಗ್ಗೆ ನೀತಿ ದಾರಿತೋರಿಸಬಹುದು. ಅದಕ್ಕೆ ಅಗತ್ಯವಾದ ಚಿಂತನೆಯೂ ನೀತಿಯಲ್ಲಿ ಸಿಕ್ಕುವಂತೆ ಮಾಡಬಹುದು. ಬರಗೂರರ ತಂಡ ಹೇಗೆ ಹೊಣೆಗಾರಿಕೆಯನ್ನು ನಿಭಾಯಿಸುವುದೋ ಕಾದುನೋಡಬೇಕು  ಎಂದು ಆಶಾವಾದ ಹಾಗೂ ಅಪನಂಬಿಕೆಗಳೆರಡನ್ನೂ ಒಳಗೊಂಡ ನಿಲುವನ್ನು ಜಿ.ಪಿ.ಬಸವರಾಜು ಅವರು ತಳೆದಿದ್ದರು. ಇನ್ನು ಪ್ರೊ.ಎಸ್.ಜಿ.ಸಿದ್ದರಾಮಯ್ಯನವರು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು.
 ಪ್ರಸ್ತುತ ಸಲ್ಲಿಕೆಯಾಗಿರುವ ಕೆಲವು ಶಿಫಾರಸುಗಳೆಂದರೆ: . ಅಕಾಡೆಮಿ, ಪ್ರಾಧಿಕಾರ, ಪ್ರತಿಷ್ಠಾನಗಳ ಅಧ್ಯಕ್ಷರ ಆಯ್ಕೆಗೆ ಶೋಧನಾ ಸಮಿತಿ ರಚನೆ. . ಸರ್ಕಾರ ಬದಲಾದರೂ ಅಧ್ಯಕ್ಷ, ಸದಸ್ಯರ ರಾಜೀನಾಮೆ ಪಡೆಯಬಾರದು. . ಕೆಲವು ಹೊಸ ಪ್ರಾಧಿಕಾರ, ಅಕಾಡೆಮಿಗಳ ಸ್ಥಾಪನೆ. . ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆ ಸ್ಥಾಪನೆ. . ಗಡಿನಾಡು ಪ್ರಾಧಿಕಾರದ ವ್ಯಾಪ್ತಿಗೆ ಹೊರನಾಡನ್ನು ಸೇರಿಸಿಕೊಳ್ಳುವುದು. . ರಂಗಭೂಮಿಗೆ ಪ್ರತ್ಯೇಕ ಕ್ರಿಯಾ ಯೋಜನೆ. . ಜನಪದ ರೆಪರ್ಟರಿ ಸ್ಥಾಪನೆ. . ಕಲಾಪ್ರದರ್ಶನ. . ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಇತ್ಯಾದಿ. ಆದರೆ ಈಗಾಗಲೇ ಇವುಗಳಲ್ಲಿ ಬಹುತೇಕ ವಿಷಯಗಳು ಚರ್ಚೆಯಲ್ಲಿದ್ದವು. ವಿಷಯಕ್ಕೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಸರ್ಕಾರಗಳ ಹಿತಾಸಕ್ತಿಯ ಕಡೆಗೆ ಬಹುತೇಕ ವಿದ್ವಾಂಸರು ವಿರೋಧ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿ ಬುಡಕಟ್ಟು ವಿ.ವಿ. ಸ್ಥಾಪನೆಯ ಶಿಫಾರಸು ಏಕೆಂದು ಅರ್ಥವಾಗುತ್ತಿಲ್ಲ. ಇನ್ನು ಈಗಾಗಲೇ ರಂಗಭೂಮಿಗೆ ಸಂಬಂಧಿಸಿದ ರಂಗಾಯಣ, ನಾಟಕ ಅಕಾಡೆಮಿ ಇರುವಾಗ ಮತ್ತೆ ಅದಕ್ಕೆ ಸಂಬಂಧಿಸಿದ ಉಲ್ಲೇಖಗಳು ಏಕೆ? ಎಂಬ ಅನುಮಾನ ಹುಟ್ಟುತ್ತಿದೆ.
ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳ ನೇಮಕಾತಿಯ ಸಮಯದಲ್ಲಿ ಅನುಸರಿಸಬೇಕಾದ ಹೊಸ ನಿಯಮಗಳೆಡೆಗೆ ಬಹುತೇಕರ ಆಸಕ್ತಿ ಇತ್ತು. ಏಕೆಂದರೆ ರಾಜಕೀಯ ಕ್ಷೇತ್ರಗಳಂತೆಯೇ ಸಾಂಸ್ಕೃತಿಕ ಕ್ಷೇತ್ರವೂ ಎಲ್ಲೆಡೆ ಒಬ್ಬರೇ ವಿಜೃಂಭಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು. ಸಾಹಿತ್ಯ ಕ್ಷೇತ್ರದಿಂದ ಕೆಲವರನ್ನು ಸತತವಾಗಿ ಮೇಲ್ಮನೆ ಸದಸ್ಯರನ್ನಾಗಿಸುವುದು, ಕುಲಪತಿಗಳನ್ನು ಮೇಲ್ಮನೆ ಸದಸ್ಯರನ್ನಾಗಿಸುವುದುಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಸುವುದು, ಇದರ ಅಧ್ಯಕ್ಷರಾದವರನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನಾಗಿಸುವುದು, ಮತ್ತೆ ಅವಧಿ ಮುಗಿದವರನ್ನು ಮುಂದುವರೆಸುವುದು, ಒಮ್ಮೆ ರಂಗಾಯಣದ ನಿರ್ದೇಶಕರಾದವರನ್ನು ಎರಡನೇ ಬಾರಿ ಪರಿಗಣಿಸುವುದು, ರಂಗಾಯಣದ ನಿರ್ದೇಶಕರಾಗಿದ್ದವರನ್ನು ರಾಜ್ಯಸಭೆ ಸದಸ್ಯರನ್ನಾಗಿಸುವುದುಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರ ಅವಧಿ ಮುಗಿಯುವ ಮೊದಲೇ ರಂಗಾಯಣದ ನಿರ್ದೇಶಕರನ್ನಾಗಿಸುವುದು. ಹೀಗೆ ಸಾಂಸ್ಕೃತಿಕ ಕ್ಷೇತ್ರಕ್ಕೂ ರಾಜಕೀಯ ಕ್ಷೇತ್ರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವಂತಹ ವಾತಾವರಣವನ್ನು ಸ್ವತಃ ಸಾಂಸ್ಕೃತಿಕ ಕ್ಷೇತ್ರದವರು ಹಾಗೂ ಇವರನ್ನ ಹುದ್ದೆಗಳಿಗೆ ಕೂರಿಸುವ ರಾಜಕಾರಣಿಗಳು ಸೃಷ್ಟಿಸಿದ್ದರು. ಇದು ಸಾಂಸ್ಕೃತಿಕ ಕ್ಷೇತ್ರದ ಅನನ್ಯತೆಯನ್ನು ಹಾಳುಮಾಡುವ ಕ್ರಿಯೆ.
ಒಬ್ಬ ವ್ಯಕ್ತಿಗೆ ಮತ್ತೆಮತ್ತೆ ವಿವಿಧ ಹುದ್ದೆಗಳನ್ನು ನೀಡುವ ಕೆಟ್ಟ ಸಂಪ್ರದಾಯ ಬೆಳೆಯಲು ಕಾರಣರಾದ ಕೆಲವರು ಸಮಿತಿಯಲ್ಲಿದ್ದರು. ಅಲ್ಲದೆ ಉತ್ತರ ಕರ್ನಾಟಕದಲ್ಲಿ ತೀವ್ರವಾದ ಬರಗಾಲದ ಸನ್ನಿವೇಶ ಎದುರಾಗಿ ಕುಡಿಯಲು ನೀರಿಲ್ಲದೆ ಜನ ಬವಣೆ ಪಡುತ್ತಿರುವ ಸಮಯದಲ್ಲಿ ಕಾದಂಬರಿಯೊಂದನ್ನು ನಾಟಕವನ್ನಾಗಿಸಲು ಸುಮಾರು ೭೦ ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದೆ ಪ್ರಯೋಗ ಯಶಸ್ವಿಯಾಗಿದೆ. ಇದನ್ನು ಪ್ರತಿ ಜಿಲ್ಲೆಗೂ ವಿಸ್ತರಿಸಬೇಕು ಎಂಬ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಮೂಡಿಸುವ ಪ್ರಯತ್ನವೂ ನಡೆದಿತ್ತು. ಇನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಮೀಸಲಾದ ರಾಜ್ಯಸಭೆ, ವಿಧಾನ ಪರಿಷತ್ಗೆ ಉದ್ಯಮಿಗಳನ್ನು, ಹೊರರಾಜ್ಯದವರನ್ನು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಆರಿಸುವ ಕೆಟ್ಟ ಸಂಪ್ರದಾಯವೂ ಆರಂಭವಾಗಿತ್ತು.
 ಇಂತಹ ವಿರೋಧಾಭಾಸಗಳಿಗೆ ಸಾಂಸ್ಕೃತಿಕ ನೀತಿ ಪೂರ್ಣವಿರಾಮ ಹಾಡಬೇಕಿತ್ತು. ಆದರೆ ಅದರ ಶಿಫಾರಸುಗಳು ಈಗಾಗಲೇ ಸಾಂಸ್ಕೃತಿಕ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯಗಳಿಗೆ ಮಾತ್ರ ಸೀಮಿತವಾಗಿವೆ.
ಬಹುತೇಕ ನೀತಿಯನ್ನು ವಿರೋಧಿಸಿದವರ ಆತಂಕವಿದ್ದದ್ದು ಆಳುವ ಸರ್ಕಾರಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳೆಡೆಗೆ. ಆದರೆ ಸಲ್ಲಿಕೆಯಾಗಿರುವ ನೀತಿಯಲ್ಲಿ ಆತಂಕಗಳ ಕಡೆಗಾಗಲೀ ಏಕವ್ಯಕ್ತಿ ಪ್ರದರ್ಶನದ ಸಮಸ್ಯೆಯೆಡೆಗೆ ಪರಿಹಾರ ಸೂಚಿಸುವುದಕ್ಕಾಗಲೀ ಯಾವ ಶಿಫಾರಸುಗಳನ್ನೂ ಮಾಡಿಲ್ಲ.
ಸತತ ಸಭೆಗಳನ್ನು  ನಡೆಸಿ ಸಲ್ಲಿಸಲಾಗಿರುವ ಸಾಂಸ್ಕೃತಿಕ ನೀತಿ ಯಾವ ಪ್ರಶ್ನೆ, ಅನುಮಾನಗಳಿಗೂ ಸಕಾರಾತ್ಮಕ ಉತ್ತರವನ್ನು ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ.

No comments:

Post a Comment