Search This Blog

Sunday 2 November 2014

ಕೇಂದ್ರ ಸರ್ಕಾರ ಹಿಡಿಯಬೇಕಾದ ಹಾದಿ ಯಾವುದು?
                                                    -    ಪ್ರದೀಪ್ ಮಾಲ್ಗುಡಿ
ಹದಿನಾರನೇ ಲೋಕಸಭೆ ಚುನಾವಣೆ ಸಮಯದಲ್ಲಿ ಭಾರತಕ್ಕೆ ಅಭಿವೃದ್ಧಿಯ ಕನಸು ಹಂಚಿದ ಮೋದಿ ಕೆಂಪುಕೋಟೆಯಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಹಾರಿಸಿ ಮಾತನಾಡಿದ್ದಾರೆ. ಮೋದಿಯವರ ಭಾಷಣಕ್ಕಾಗಿ ದೇಶಭಕ್ತ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದರು. ತಮ್ಮ ಆಕಾಂಕ್ಷೆಗಳು ಗರಿಗೆದರುತ್ತವೆಂಬ ಕನಸು ಕಾಣುತ್ತಿದ್ದರು. ಅಮೆರಿಕಾದ ಅಧ್ಯಕ್ಷರ ಮೊದಲ ಭಾಷಣಕ್ಕಿರುವ ಪ್ರಾಧಾನ್ಯತೆಯನ್ನು ಮೋದಿ ಬೆಂಬಲಿಗರು ಹಾಗೂ ವಿರೋಧಿಗಳು ಭಾಷಣಕ್ಕೆ ಕೊಟ್ಟಿದ್ದರು. ಪ್ರತಿಸಲ ಸಮಾನತೆ, ವಿಶ್ವಶಾಂತಿ, ಉದ್ಯೋಗವಕಾಶಗಳ ಭರವಸೆ ನೀಡಿ ಅಧಿಕಾರಕ್ಕೆ ಬರುವ ಅಮೆರಿಕ ಅಧ್ಯಕ್ಷರು ಮೊದಲಾಡುವ ಮಾತು ಶಸ್ತ್ರಾಸ್ತ್ರ ಕೈಗಾರಿಕೆಗಳಿಗೆ ಪೂರಕವಾಗಿರುತ್ತದೆ. ಅಮೆರಿಕಾದ ಪ್ರಭುತ್ವ  ಯುದ್ಧವಿರೋಧದ ಮಾತಾಡುತ್ತಲೇ ಯುದ್ಧಗಳಿಗೆ ಪ್ರೇರೇಪಿಸುತ್ತಿರುತ್ತದೆ. ಪ್ರಸ್ತುತ ಮೋದಿಯವರಜಾತೀಯತೆ ಮತ್ತು ಕೋಮುವಾದಗಳು ದೇಶದ ಅಭಿವೃದ್ಧಿಯ ಹಾದಿಗೆ ಅಡೆತಡೆಗಳು ಎಂಬ ಮಾತುಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದಕ್ಕೆ ಇನ್ನೆರೆಡು ವರ್ಷ ಕಾಯಬೇಕಿದೆ. ಏಕೆಂದರೆ ನಿರೀಕ್ಷೆಯಿರದ ಪ್ರಚಂಡ ಬಹುಮತ ಪಡೆದ ಪಕ್ಷ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ರಾಜ್ಯಸಭೆಯಲ್ಲಿ ಬೆಂಬಲವಿಲ್ಲವೆಂದು ಸುಮ್ಮನಿದೆಯೇ? ಅಥವಾ ಜಯ ನಿಜಕ್ಕೂ ತಾಳ್ಮೆ, ವಿವೇಕವನ್ನು ಕಲಿಸಿದೆಯೇ? ಎಂಬುದು ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದ ನಂತರ ಗೊತ್ತಾಗಲಿದೆ.
 ಯುವಜನಾಂಗ ಪ್ರಜೆಗಳ ಬಯಕೆಯನ್ನು ಸಮರ್ಥವಾಗಿ ನಿಭಾಯಿಸುವ ಪ್ರತಿನಿಧಿಯೆಂದು ಮೋದಿಯವರನ್ನು ನಂಬಿದ್ದಾರೆ. ಶೀಘ್ರವಾಗಿ ಯುವ ವಿದ್ಯಾವಂತರಿಗೆ ಉದ್ಯೋಗವಕಾಶಗಳ ಸೃಷ್ಟಿಯ ಸಾಧ್ಯತೆಗಳ ಅನ್ವೇಷಣೆಯ ಮೇಲೆ ಅವರ ನಂಬಿಕೆ ನಿಂತಿದೆ. ಆದರೆ ನಿರೀಕ್ಷೆಗಳನ್ನು ಮೋದಿ ಈಡೇರಿಸಿಲ್ಲ. ಹೊಸ ಉದ್ಯೋಗಗಳ ಸೃಷ್ಟಿಗೆ ಪೂರಕವಾದ ಯೋಜನೆಗಳನ್ನು ಸ್ವಾತಂತ್ರೋತ್ಸವದ ಸಮಯದಲ್ಲಿ ಘೋಷಿಸುವ ಅವಕಾಶವಿತ್ತು. ಮೂಲಕ ನಿಜವಾದ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ಸಾಧ್ಯವಾಗಿಸಬಹುದಿತ್ತು.
       ನೆರೆರಾಷ್ಟ್ರಗಳೊಂದಿಗೆ ಮಿತ್ರತ್ವ, ಅಂತರಾಷ್ಟ್ರೀಯ ಸಂಬಂಧಗಳ ಸುಧಾರಣೆ, ಆರ್ಥಿಕ ಸುಧಾರಣೆ, ಉದ್ಯೋಗವಕಾಶ ಸೃಷ್ಟಿ, ಬೆಲೆಗಳ ನಿಯಂತ್ರಣದ ಕಡೆಗೆ ಸದ್ಯಕ್ಕೆ ಸರ್ಕಾರ ವಿಶೇಷ ಒತ್ತು ನೀಡಬೇಕಿದೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಅತ್ಯಾಧುನಿಕ ಮೂಲಭೂತ ಸೌಲಭ್ಯ, ಎಲ್ಲ ರೀತಿಯ ಮನೆಗಳು, ಕೃಷಿಭೂಮಿ ಮತ್ತು ಕಾರ್ಖಾನೆಗಳಿಗೆ ನೀರು ಪೂರೈಕೆ, ಭ್ರಷ್ಟಾಚಾರ ವಿರುದ್ಧ ಹೊಸ ಕಾಯ್ದೆ, ವಿದೇಶಗಳಿಂದ ಭಾರತೀಯರ ಕಪ್ಪುಹಣ ವಾಪಾಸ್, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸುಧಾರಣೆ, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ, ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ, -ಆಡಳಿತಕ್ಕೆ ಆದ್ಯತೆ, ನ್ಯಾಯಾಂಗ, ಪೊಲೀಸ್, ಚುನಾವಣಾ ಸುಧಾರಣೆ, ಬಡವರ ಮತ್ತು ಶೋಷಿತರ ಉದ್ಧಾರ, ಬಡವರು ಮತ್ತು ಸಿರಿವಂತರ ನಡುವಿನ ಅಂತರ ತಗ್ಗಿಸುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತಿತರ ದುರ್ಬಲ ವರ್ಗದವರಿಗೆ ಹೆಚ್ಚಿನ ಬಲ ಮತ್ತು ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ, ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ, ಮಕ್ಕಳ ಮೇಲೆ ಹೆಚ್ಚಿನ ಗಮನ, ಹಿರಿಯ ನಾಗರಿಕರಿಗೆ ಭದ್ರತೆ, ಕ್ರೀಡೆಗೆ ಉತ್ತೇಜನ, ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮೊದಲಾದವುಗಳಿಗೆ ಆದ್ಯತೆ ನೀಡಬೇಕಿದೆ
       ಮೇಲಿನ ವಿಷಯಗಳಲ್ಲಿ ಈಗಾಗಲೇ ಕಪ್ಪುಹಣ ತಡೆಗೆ ಸಕಾರಾತ್ಮಕ ನಡೆಯನ್ನು ಇಡಲಾಗಿದೆ. ನ್ಯಾಯಾಂಗ ಸುಧಾರಣೆಗೂ ಮುಂದಾಗಿದೆ. ಭ್ರಷ್ಟಾಚಾರ ತಡೆಗೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ಆಸ್ತಿಯನ್ನು ಕಡ್ಡಾಯವಾಗಿ ಘೋಷಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
 ಅದರ ಜತೆಗೆ ವಿವಾದಿತ ವಿಷಯಗಳಾದ ದೇಶದ ಪ್ರತಿಯೊಬ್ಬರಿಗೂ ಒಂದೇ ಕಾನೂನು; ಸಮಾನ ನಾಗರಿಕ ಸಂಹಿತೆ ಜಾರಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಭಯೋತ್ಪಾದನೆ, ಉಗ್ರವಾದ ಮತ್ತು ಅಪರಾಧ ಕೃತ್ಯಗಳ ವಿರುದ್ಧ ತೀರಾ ಕಟ್ಟುನಿಟ್ಟಿನ ಕ್ರಮ ಮೊದಲಾದ ವಿಷಯಗಳೆಡೆಗೆ ಮರುಚಿಂತನೆ ನಡೆಸಬೇಕಿದೆ. ವಿಷಯಗಳು ಒಂದಿಲ್ಲೊಂದು ರೀತಿಯಲ್ಲಿ ಧರ್ಮಕ್ಕೆ ತಳುಕುಹಾಕಿಕೊಳ್ಳುತ್ತವೆ. ಧರ್ಮ ನಿರ್ದೇಶಿತ ಪ್ರಭುತ್ವ ಮತ್ತು ಪ್ರಭುತ್ವ ನಿರ್ದೇಶಿತ ಧರ್ಮಗಳು ಪರಸ್ಪರ ಮೇಲುಗೈ ಸಾಧಿಸಲು ಸತತ ಪ್ರಯತ್ನಿಸುತ್ತಿರುತ್ತವೆ. ಇದರ ವ್ಯತಿರಿಕ್ತ ಪರಿಣಾಮ  ಅಮಾಯಕರ ಮೇಲೆ ಉಂಟಾಗುತ್ತದೆ. ಕರ್ನಾಟಕದ ವಚನ ಚಳವಳಿ ಸಂದರ್ಭದಲ್ಲಿ ಉಂಟಾದ ಧರ್ಮ ಮತ್ತು ಪ್ರಭುತ್ವದ ನಡುವಿನ ವೈರುಧ್ಯ ಕಲ್ಯಾಣದ ಪತನಕ್ಕೆ ಕಾರಣವಾಗಿದೆ. ಇದರಿಂದ ಸಾಬೀತಾದ ವಿಷಯವೆಂದರೆ ಇವೆರೆಡೂ ಪರಸ್ಪರ ದೂರವಿದ್ದರೆ ಎರಡಕ್ಕೂ ಒಳ್ಳೆಯದು. ಇದನ್ನು ಆಳುವ ವ್ಯಕ್ತಿಗಳು ಅರ್ಥ ಮಾಡಿಕೊಂಡರೆ ಕಲ್ಯಾಣ ರಾಜ್ಯದ ಕನಸುಗಳು ನನಸಾಗುತ್ತವೆ. ಇಲ್ಲವಾದಲ್ಲಿ ಜಾತಿ, ಧರ್ಮ, ವರ್ಗಗಳ ನಡುವೆ ಅನವಶ್ಯಕ ವೈಮನಸ್ಯ ಮೂಡಿ, ಅದು ಮಾನವ ಜನಾಂಗಕ್ಕೆ ಮಾರಕವಾಗುತ್ತದೆ. ಜಗತ್ತಿನಲ್ಲಿ ಯುದ್ಧದ ಕಾರಣಕ್ಕಿಂತ ಧರ್ಮ, ಜನಾಂಗಿಕ ಹತ್ಯೆಯ ಮೂಲಕ ಸಂಭವಿಸಿದ ಸಾವುಗಳ ಪ್ರಮಾಣ ಹೆಚ್ಚು. ಇದನ್ನು ಆಧುನಿಕ ಪೂರ್ವ (೧೯೦೦ಕ್ಕೂ ಹಿಂದಿನ ಕಾಲ), ಆಧುನಿಕ (ಸು.೧೯೦೦-೧೯೯೦ರ ದಶಕ) ಆಧುನಿಕೋತ್ತರ (ಸು.೧೯೯೦ರ ನಂತರದ ಕಾಲ) ಪ್ರಭುತ್ವ ಇನ್ನೂ ಅರ್ಥೈಸಿಕೊಂಡಿಲ್ಲ. ಇನ್ನಾದರೂ ಎರಡರ ನಡುವೆ ಅಂತರ ಕಾಪಾಡಿಕೊಳ್ಳುವ ಅಗತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ. ದುರಾದೃಷ್ಟವಶಾತ್ ಪ್ರಭುತ್ವಗಳು ಧರ್ಮವನ್ನು ಮತ್ತೆಮತ್ತೆ ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿವೆ. ಅಮೆರಿಕ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧಗಳಿಗೆ ಮೇಲ್ನೋಟಕ್ಕೆ ಇರುವ ವ್ಯಾಹಾರಿಕ ಕಾರಣಕ್ಕಿಂತ ಆಳದಲ್ಲಿ ಧರ್ಮವೇ ಮೂಲವಾಗಿರುವುದನ್ನು ಅಲ್ಲಗಳೆಯಲಾಗುತ್ತಿಲ್ಲ.
ಸನಾತನ ತತ್ವ, ಸಿದ್ಧಾಂತ, ನಂಬಿಕೆಗಳಿಂದ ಹೊರತಾದರೆ ಉತ್ತಮ ಆಡಳಿತ ನೀಡಿದ ಕೀರ್ತಿಗೆ ಸರ್ಕಾರ ಪಾತ್ರವಾಗಲಿದೆ. ಭಾರತ ದೇಶದ ಪ್ರಧಾನಿ ನಿರ್ದಿಷ್ಟ ಪ್ರದೇಶ, ಜಾತಿ, ಧರ್ಮ, ಸಿದ್ಧಾಂತದ ಪ್ರತಿನಿಧಿಯಾಗಬೇಕಿಲ್ಲ. ಏಕೆಂದರೆ ಭಾರತ ಒಂದೇ ಧರ್ಮ, ದೇವರು, ಸಂಸ್ಕೃತಿ, ಭಾಷೆಗಳನ್ನು ಹೊಂದಿರುವ ದೇಶವಲ್ಲ. ಬಹು ಧರ್ಮ, ಸಂಸ್ಕೃತಿ, ಭಾಷೆ, ಆಚರಣೆಗಳೇ ಭಾರತದ ವೈಶಿಷ್ಟ್ಯ. ಇದರಿಂದಾಗಿಯೇ ವಿಶ್ವದಲ್ಲಿ ಭಾರತದ ಅಸ್ತಿತ್ವ ಇಂದಿಗೂ ಗುರುತಿಲ್ಪಡುತ್ತದೆ. ಆದರೆ ಅದನ್ನು ಏಕಾಕೃತಿಗೆ ಇಳಿಸುವ ಪ್ರಯತ್ನವನ್ನು ಯಾರೂ ಮಾಡಬಾರದು.
ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆ ಜಾರಿಗೆ ತಂದಿತು. ಸಂದರ್ಭದಲ್ಲಿ ಬಿಜೆಪಿ ಇದನ್ನು ವಿರೋಧಿಸಿತ್ತು. ದೇಶಭಕ್ತ ಪಕ್ಷ ಇದನ್ನು ಹೇಗೆ ನಿವಾರಿಸುತ್ತದೆ? ಎಂಬ ಪ್ರಶ್ನೆಗೆ ಇದುವರೆಗೆ ಮೋದಿಯವರು ಉತ್ತರಿಸಿಲ್ಲ. ವಿದೇಶಿ ಬಂಡವಾಳಕ್ಕೆ ದೇಶದ ಬಾಗಿಲನ್ನು ತೆರೆಯುವುದರಿಂದ ದೇಶಿ ಸಮುದಾಯದ ಮೇಲೆ ಭಾರೀ ಪ್ರಮಾಣದ ದುಷ್ಪರಿಣಾಮ ಉಂಟಾಗಲಿದೆ. ಇದರಿಂದ ದೇಶಿ ಉತ್ಪಾದನಾ ವಲಯ ಸಂಪೂರ್ಣವಾಗಿ ನೆಲಕಚ್ಚಲಿದೆ. ಉದಾ: ಡಾಲರ್ ಲೆಕ್ಕದಲ್ಲಿ ಹಣತೆತ್ತು ಭಾರತದ ಗುಡಿ ಕೈಗಾರಿಕೆಗಳ ಉತ್ಪನ್ನವನ್ನು ಜಾಹಿರಾತು ಮೂಲಕ ಪರಿಚಯಿಸಲು ಸಾಧ್ಯವಿಲ್ಲ. ಗ್ಯಾಟ್ ಒಪ್ಪಂದದ ದುಷ್ಪರಿಣಾಮಗಳು ರುದ್ರನರ್ತನವಾಡತೊಡಗಿರುವ ಸಮಯದಲ್ಲಿ ಅಂಥದ್ದೇ ಮತ್ತೊಂದು ಒಪ್ಪಂದ ಇದಾಗಿದೆ. ಇದರ ವಿರುದ್ಧ ಬಿಜೆಪಿ ಸಕಾಲಿಕ ನಿಲುವು ತಳೆಯಬೇಕಿದೆ. ಆಗ ನಿಜಕ್ಕೂ ದೇಶಪ್ರೇಮವನ್ನು ಮೆರೆದಂತಾಗುತ್ತದೆ.
ವಿಕ್ರಮಾದಿತ್ಯ ಮತ್ತು ಬೇತಾಳನ ಕುರಿತ ಜನಪದ ಕತೆಯೊಂದಿದೆ. ಮರವೊಂದರಲ್ಲಿ ನೇತಾಡುತ್ತಿರುವ ಬೇತಾಳನನ್ನು ವಿಕ್ರಮಾದಿತ್ಯ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುತ್ತಾನೆ. ದಾರಿಯಲ್ಲಿ ಬೇತಾಳ ವಿಕ್ರಮಾದಿತ್ಯನಿಗೆ ಒಂದು ಪ್ರಶ್ನೆ ಕೇಳುತ್ತದೆ. ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಸುಮ್ಮನಿದ್ದರೆ ವಿಕ್ರಮಾದಿತ್ಯನ ತಲೆ ಸಿಡಿದು ಸಾವಿರ ಹೋಳಾಗುತ್ತದೆ. ಉತ್ತರ ಕೊಟ್ಟರೆ ಬೇತಾಳ ಮತ್ತೆ ತಾನು ನೇತಾಡುತ್ತಿದ್ದ ಮರಕ್ಕೆ ವಾಪಾಸು ಹೋಗುತ್ತದೆ. ಜಾತಿ, ಕೋಮುವಾದ, ಭ್ರಷ್ಟಾಚಾರ, ಬಡತನ, ದೌರ್ಜನ್ಯ, ಅಸಮಾನತೆ, ಲೈಂಗಿಕ ದೌರ್ಜನ್ಯ, ಅಸ್ಪೃಶ್ಯತೆ ಮೊದಲಾದ ವಿಷಯಗಳ ಕುರಿತ ಸ್ಥಿತಿ ಹೀಗೆಯೇ ಇದೆ. ಸಮಸ್ಯೆಗಳ ಕುರಿತು ಮಾತನಾಡಿ ಯಾವ ಪ್ರಯೋಜನವೂ ಆಗುತ್ತಿಲ್ಲ. ಆದರೆ ಮೌನವಾಗಿಯೂ ಇರುವಂತಿಲ್ಲ. ಹಾಗೆಂದು ಮಾತನಾಡಿದ ನಂತರ ಸಮಸ್ಯೆ ಬಗೆಹರಿಯುವ ಬದಲು ಎಲ್ಲಿತ್ತೋ ಅಲ್ಲೇ ನೇತಾಡುತ್ತಾ ಅಣಕಿಸುತ್ತಿರುತ್ತದೆ.
ಬಡತನ ನಿವಾರಣೆ, ಹೆಣ್ಣುಭ್ರೂಣ ಹತ್ಯೆ, ಸ್ವಚ್ಛತೆ ಮೊದಲಾದ ವಿಷಯಗಳ ಕುರಿತ ಮೋದಿಯವರ ಕಾಳಜಿಗಳು ಕಾಯ್ದೆ ರೂಪ ಪಡೆಯಬೇಕಿದೆ. ಇದುವರೆಗೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ, ಪ್ರಧಾನಮಂತ್ರಿಗಳೂ ಇಂತಹ ಮಾತುಗಳನ್ನು ಹೇಳಿದ್ದಾರೆ. ಸಮಸ್ಯೆಗಳು ಮಾತ್ರ ಇದ್ದಲ್ಲಿಯೇ ಇದ್ದು ಹಲ್ಲುಕಿರಿಯುತ್ತಿವೆ.

No comments:

Post a Comment