Search This Blog

Sunday 27 April 2014

ಪಡಿತರ ಹಂಚಿಕೆ ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ
                                                                                                       - ಪ್ರದೀಪ್ ಮಾಲ್ಗುಡಿ
    ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳಾಗಿರುವ ಕಿರು ಸಾಲ ಯೋಜನೆ, ಗುಡಿಕೈಗಾರಿಕೆಗಳ ಸಬ್ಸಿಡಿ, ರಿಯಾಯಿತಿ ದರದಲ್ಲಿ ಹಂಚಿಕೆಯಾಗುತ್ತಿರುವ ಸಿಲಿಂಡರ್ ಹಾಗೂ ಪಡಿತರ ಮತ್ತು ಸೀಮೆಎಣ್ಣೆ ಮೊದಲಾದವುಗಳನ್ನು ಸರಿಯಾಗಿ ಸೂಕ್ತ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರಗಳು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ರಾಜ್ಯದ ಆರು ಕೋಟಿ ಜನಸಂಖೆಯಲ್ಲಿ ಒಂದು ಕೋಟಿಗೂ ಹೆಚ್ಚಿನ ಅನ್ನಭಾಗ್ಯ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಹಾಗೂ ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ. ಆದರೆ, ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಗೌರವಯುತವಾಗಿ ಸರ್ಕಾರ ಹಾಗೂ ಅಧಿಕಾರಿಗಳು ನಡೆಸಿಕೊಳ್ಳುತ್ತಿಲ್ಲ. ಈ ಮಾಲೀಕರಿಗೆ ಸರ್ಕಾರದಿಂದ ಗೌರವ ಧನವೂ ಸಂದಾಯವಾಗುತ್ತಿಲ್ಲ. ಬದಲಿಗೆ ಕಮೀಶನ್ ಆಧಾರದಲ್ಲಿ ಅವರು ಜೀವನ ನಡೆಸಬೇಕಾಗಿದೆ. 
  ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ದಿನಕ್ಕೊಂದು ನಿಯಮವನ್ನು ಜಾರಿಗೆ ತರುತ್ತಿದ್ದಾರೆ. ಅದರ ಪ್ರಕಾರ; ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅರವತ್ತು ವಯೋಮಿತಿ ಮೀರಿರಬಾರದು, (ಕೇಂದ್ರ ಸರ್ಕಾರ ಒಂದೊಂದು ಇಲಾಖೆಗೆ ಒಂದೊಂದು ವಯೋಮಾನವನ್ನು ನಿಗದಿ ಪಡಿಸಿದೆ. ಅದರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ ೬೫ ವರ್ಷ, ರಾಜ್ಯ ಸರ್ಕಾರವು ಈ ವಯೋಮಿತಿಯನ್ನು ೬೨ಕ್ಕೇರಿಸಿದೆ. ಇನ್ನು ರಾಜಕಾರಣಿಗಳಿಗೆ ಯಾವುದೇ ವಯೋಮಿತಿಯಿಲ್ಲ!) ಒಂದು ತಿಂಗಳ ಮುಂಗಡ ದಾಸ್ತಾನಿಗೆ ಅವಕಾಶವಿರುವಷ್ಟು ವಿಶಾಲವಾದ ಜಾಗವಿರಬೇಕು, (ಇದು ಸರ್ಕಾರಿ ಸ್ವಾಮ್ಯದ ಉಗ್ರಾಣ ಸಾಮರ್ಥ್ಯದ ಮಿತಿಯನ್ನು ಎತ್ತಿ ತೋರಿಸುತ್ತದೆ. ಅನ್ನಭಾಗ್ಯದ ಅಪಾರ ಪ್ರಮಾಣದ ಪಡಿತರಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವ ವಿಶಾಲವಾದ ಉಗ್ರಾಣ ವ್ಯವಸ್ಥೆ ಸರ್ಕಾರದ ಸುಪರ್ದಿಯಲ್ಲಿಲ್ಲ. ಈ ನಿಯಮ ಜಾರಿಯಾದರೆ, ಅನ್ಯಾಯ, ಅಕ್ರಮಗಳು ಹೆಚ್ಚಾಗುವ ಸಂಭವವಿದೆ. ಏಕೆಂದರೆ, ಒಂದು ತಿಂಗಳ ಮುಂಗಡ ಪಡಿತರವನ್ನು ಮಾಲೀಕರು ನಿರ್ವಹಿಸಬೇಕಾಗುತ್ತದೆ. ಅದರಿಂದ ಮಾಲೀಕರು ಮತ್ತಷ್ಟು ಕಷ್ಟಗಳನ್ನು ಎದುರಿಸಲಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಎರಡು ತಿಂಗಳ ಮೊತ್ತವನ್ನು ಒಟ್ಟಿಗೆ ಕಟ್ಟಿ ಎಂಬ ಹೊಸ ವಾದವನ್ನು ಅಧಿಕಾರಿಗಳು ಹೂಡಬಹುದು.) ಮಾಲೀಕರನ್ನು ಹೊರತುಪಡಿಸಿ ಅಂಗಡಿಯಲ್ಲಿ ಕೆಲಸವನ್ನು ನಿರ್ವಹಿಸಬಾರದು, ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಕೆಲಸ ನಿರ್ವಹಿಸಬೇಕು ಹೀಗೆ ದಿನಕ್ಕೊಂದು ನಿಯಮಗಳು ಎದುರಾದರೆ ಪಡಿತರ ಹಂಚಿಕೆ ವ್ಯವಸ್ಥೆ ಸುಗಮವಾಗಿ ನಡೆಯುವುದಾದರೂ ಹೇಗೆ? ಸರ್ಕಾರಗಳ ಜನಪರ ಯೋಜನೆಗಳನ್ನು ದಿಕ್ಕುತಪ್ಪಿಸುವಂತಹ ನಿರ್ಣಯಯಗಳನ್ನು ಅಧಿಕಾರಿಗಳು ಜಾರಿಗೆ ತರುವ ಪ್ರಯತ್ನಗಳನ್ನು ಮಾಡುತ್ತಿರುವುದೇಕೆ? ಎಂಬ ಪ್ರಶ್ನೆಗಳು ಈ ನಿಯಮಗಳಿಂದ ಮೂಡುತ್ತಿವೆ. 
ಈಗಾಗಲೇ ಅನ್ನಭಾಗ್ಯ ಯೋಜನೆಯಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಅಪಾರ ಪ್ರಮಾಣದ ಹಣವನ್ನು ಮುಂಗಡವಾಗಿ ಡಿ.ಡಿ. ಮೂಲಕ ಸಲ್ಲಿಸಿ, ಇಲಾಖೆ ಪಡಿತರಗಳನ್ನು ಸರಬರಾಜು ಮಾಡಿದಾಗ  ಲಾರಿ ಬಾಡಿಗೆ ಹಾಗೂ ಪಡಿತರಗಳನ್ನು ಲೋಡ್  ಮತ್ತು ಅನ್‌ಲೋಡ್ ಮಾಡಿದ ಕೂಲಿಯನ್ನು ಸಲ್ಲಿಸಿ, ಪಡೆದುಕೊಂಡು ನಂತರ ಕಾರ್ಡುದಾರರಿಗೆ ಹಂಚಿಕೆ ಮಾಡಬೇಕಾಗಿದೆ. ಇದರ ಜೊತೆಗೆ ಈ ಅವಧಿಯಲ್ಲಿ ಲೋಡ್ ಹಾಗೂ ಅನ್‌ಲೋಡ್ ಸಮಯದಲ್ಲಿ ಸಂಭವಿಸುವ ನಷ್ಟವನ್ನೂ ಅಂಗಡಿ ಮಾಲೀಕರೆ ಭರಿಸಬೇಕಾಗಿದೆ. ಸೀಮೆಎಣ್ಣೆಯ ಪರಿಸ್ಥಿತಿ ಇದಕ್ಕೂ ಭಿನ್ನ. ಸೂಕ್ತ ತಂಪು ವಾತಾವರಣವಿಲ್ಲದಿದ್ದರೆ ಇದು ಆವಿಯಾಗುತ್ತದೆ ಅಥವಾ ಬಿಸಿಲಿನಲ್ಲಿ ಬ್ಯಾರೆಲ್‌ಗಳಿದ್ದರೆ ಹಿಗ್ಗಿ ಹೊರಚೆಲ್ಲಿ ನಷ್ಟ ಸಂಭವಿಸುತ್ತದೆ. ಡಿ.ಡಿ.ಯನ್ನು  ಮುಂಗಡವಾಗಿ ಪಡೆದು ತಾಲೂಕು ಕೇಂದ್ರಗಳಿಗೆ ಹೋಗಿ, ಅಲ್ಲಿನ ದಾಸ್ತಾನು ಮಳಿಗೆಗೆಳ ನಿರ್ವಾಹಕರಿಗೆ ಸಲ್ಲಿಬೇಕಾಗಿದೆ. ಅಲ್ಲದೆ ಇವರಿಗೆ ಯಾವುದೇ ಬಗೆಯ ಪ್ರಯಾಣ ಭತ್ಯೆ, ದಿನಭತ್ಯೆ, ಇ.ಎಸ್.ಐ., ಪಿ.ಎಫ್., ನಂತಹ ಸರ್ಕಾರಿ ಸೌಲಭ್ಯಗಳಾಗಲಿ, ನಿವೃತ್ತಿ ವೇತನ ಸೌಲಭ್ಯಗಳಾಗಲೀ ಲಭ್ಯವಿಲ್ಲ.  ಈ ಸಮಸ್ಯೆಗಳ ಜೊತೆಗೆ ಕಾರ್ಡುದಾರರು ಸಮಯಕ್ಕೆ ಸರಿಯಾಗಿ ಬಾರದೆ, ಸೂಕ್ತ ಹಣವನ್ನು ತಾರದೆ, ಮದುವೆ, ಮುಂಜಿ, ತಿಥಿ ಇತ್ಯಾದಿಗಳ ಹೆಸರಿನಲ್ಲಿ ಮಾಲೀಕರನ್ನು ಹೆಚ್ಚಿನ ಪಡಿತರಕ್ಕಾಗಿ ಪೀಡಿಸುತ್ತಿರುತ್ತಾರೆ. ಹಳ್ಳಿಗಳಲ್ಲಿನ ನ್ಯಾಯಬೆಲೆ ಅಂಗಡಿ ಮಾಲೀಕರ ದುಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಉದಾಹರಣೆಗೆ; ಹಳ್ಳಿಗಳಲ್ಲಿನ ಬಹುತೇಕ ಪಡಿತರ ಚೀಟಿದಾರರು ಭೂರಹಿತ ಕೃಷಿಕಾರ್ಮಿಕರು. ಇವರು ನಿಗದಿತ ಸಮಯದಲ್ಲಿ ಪಡಿತರವನ್ನು ಕೊಂಡೊಯ್ಯಲು ಬರುವುದಿಲ್ಲ. ಬದಲಾಗಿ ಅವರಿಗೆ ಬಿಡುವಾದಾಗ ಆಗಮಿಸುತ್ತಾರೆ. ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗಬೇಕೆಂದು ಆರು ಗಂಟೆಗೆ ಕೆಲವರು ಬಂದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸುಪ್ರಭಾತವನ್ನು ಹಾಡಿ ಎದ್ದೇಳಿಸಿದರೆ, ಇನ್ನು ಕೆಲವರು ರಾತ್ರಿ ಮಲಗಿದ ನಂತರವೂ ಬಂದು ಶುಭರಾತ್ರಿಯನ್ನು ಕೋರುತ್ತಿರುತ್ತಾರೆ! ವಾರದ ರಜೆಯ ಪರಿಕಲ್ಪನೆಯಿಲ್ಲದ, ಅಂಗಡಿಯಲ್ಲಿ ಹಾಕಿರುವ ವೇಳಾಪಟ್ಟಿಯನ್ನು ನೋಡುವ ವ್ಯವಧಾನವಿಲ್ಲದ ಕಾರ್ಡುದಾರರು ಹಾಗೂ ಇದನ್ನು ಪ್ರತಿತಿಂಗಳು ಹೇಳಿಹೇಳಿ ಸುಸ್ತಾಗಿರುವ ಮಾಲೀಕರ ನಡುವೆ ಸದಾ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಯ ಉಂಟಾಗುತ್ತಿರುತ್ತದೆ. ಇದರ ಜೊತೆಗೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿರುವಂತೆ ಇಲ್ಲಿಯೂ ಅನೇಕ ಬಗೆಯ ಅಲಿಖಿತ ನಿಯಮಗಳಿವೆ. ಇಲಾಖೆ ನಡೆಸುವ ಅನೇಕ ಕಾರ‍್ಯಕ್ರಮಗಳ ಖರ್ಚನ್ನು ನ್ಯಾಯಬೆಲೆ ಅಂಗಡಿ ಮಾಲೀಕರು  ಭರಿಸಬೇಕಾಗಿದೆ! 
ಅಂಗಡಿ ಮಾಲೀಕರನ್ನು ಹೊರತುಪಡಿಸಿ ಬೇರಾರೂ ಕೆಲಸ ನಿರ್ವಹಿಸುವಂತಿಲ್ಲ ಎಂಬ ನಿಯಮದ ಸಾಧ್ಯತೆಗಳೆಡೆಗೆ ನೋಡುವುದಾದರೆ; ಅನ್ನ ಭಾಗ್ಯ ಯೋಜನೆಯನ್ವಯ ಹಂಚಿಕೆಯಾಗುತ್ತಿರುವ ಅಕ್ಕಿ, ಗೋಧಿ ಹಾಗೂ ಸಕ್ಕರೆಯನ್ನು ದಿನವಿಡೀ ಒಬ್ಬ ವ್ಯಕ್ತಿ ಕಾರ್ಡಿಗೆ ಅವರು ಪಡೆದಿರುವ ಪಡಿತರದ ಮಾಹಿತಿಯನ್ನು ನಮೂದಿಸಿ, ಅವರ ಬಳಿ ಇರಬಹುದಾದ ಟೋಕನ್‌ಗಳನ್ನು ಪಡೆದು, ( ಇವರಲ್ಲಿ ಕೆಲವರು ಹಣ, ಪಡಿತರ ಕಾರ್ಡನ್ನು, ಚಿಲ್ಲರೆಯನ್ನು , ಟೋಕನ್ನನ್ನು, ಚೀಲವನ್ನು ತಂದಿರುವುದಿಲ್ಲ) ಹಣ ಪಡೆದು ಬಿಲ್‌ನಲ್ಲಿ ಈ ಎಲ್ಲ ಮಾಹಿತಿಯನ್ನು ನಮೂದಿಸಿ ಕಾರ್ಡುದಾರರಿಂದ ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಪಡೆದು ದಿನಕ್ಕೆ ಎಷ್ಟು ಜನಕ್ಕೆ ತೂಕ ಮಾಡಿ ಪಡಿತರವನ್ನು ಹಂಚಲು ಸಾಧ್ಯ? ನಿಯಮಗಳನ್ನು ಜಾರಿಗೆ ತರುವಾಗ ಆಚರಣಯೋಗ್ಯವಾದ, ಕಾರ‍್ಯಸಾಧುವಾದ ನಿಯಮಗಳನ್ನು ಕುರಿತು ಆಲೋಚಿಸಬೇಕಾಗಿದೆ. ಇಲ್ಲವಾದಲ್ಲಿ ಈ ನಿಯಮಗಳು ಜಾರಿಗೆ ಬರಲಾರವು.

No comments:

Post a Comment