Search This Blog

Monday 28 April 2014

ಮರೆತು ಹೋದ ವಿಶ್ವ ತಾಯ್ನುಡಿ ದಿನ
- ಪ್ರದೀಪ್ ಮಾಲ್ಗುಡಿ
ಭಾರತದಂತಹ ಬಹುಭಾಷಿಕ ಪರಿಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣವನ್ನು ಜಾರಿಗೊಳಿಸುವುದು ಅಸಾಧ್ಯವಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕನ್ನಡವೊಂದೆ ಮನೆಮಾತಾಗಿಲ್ಲ. ಕನ್ನಡೇತರ ಭಾಷೆಗಳಾದ ಕೊಂಕಣಿ, ತುಳು, ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ ಹಾಗೂ ಈ ಯಾವುದೇ ಭಾಷಾ ಪ್ರಬೇಧಗಳಿಗೂ ಸೇರಿಸಲಾಗದ ಅನೇಕ ಭಾಷೆಗಳನ್ನು ಮನೆಮಾತಾಗಿ ಆಡುತ್ತಿರುವ ಸಮುದಾಯಗಳು ಕರ್ನಾಟಕದಲ್ಲಿದ್ದಂತೆಯೆ ಇಡೀ ಭಾರತದಾದ್ಯಂತ ಅಸ್ಥಿತ್ವದಲ್ಲಿವೆ. ಆದರೆ ರಾಜ್ಯದ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸುವುದರ ಕುರಿತು ಆಲೋಚಿಸಿ, ಸಮರ್ಥವಾಗಿ ವಾದವನ್ನು ಮಂಡಿಸಿದರೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವಲ್ಲಿ ಸಾರ್ಥಕತೆಯನ್ನು ಕಾಣಬಹುದು.
ಈ ತೊಡಕುಗಳನ್ನು ಈಗ ಕನ್ನಡ ಪರವಾಗಿ ವಾದ ಮಂಡಿಸುತ್ತಿರುವಂತೆಯೆ ಮುಂದುವರಿಸಿದಲ್ಲಿ ಅದು ಯಾವ ಪ್ರತಿಫಲವನ್ನೂ ಪಡೆಯಲಾರದು. ಇದರ ಬದಲಾಗಿ ಪ್ರಾದೇಶಿಕ ಭಾಷೆಗಳು ಉಳಿಯಬೇಕಾದ ಅಗತ್ಯವನ್ನು ಮನಗಂಡು ಮತ್ತೊಂದು ದಿಕ್ಕಿನಿಂದ ಕನ್ನಡದಂತಹ ಭಾಷೆಗಳನ್ನು ಉಳಿಸುವ ಪ್ರಯತ್ನವನ್ನು ನಾವಿಂದು ಗಂಭೀರವಾಗಿ ಮಾಡಬೇಕಾಗಿದೆ. ಮನ್ವಂತರದ ಕಾಲಘಟ್ಟದಲ್ಲಿರುವ ತೃತೀಯ ರಾಷ್ಟ್ರಗಳ ಎಲ್ಲ ವರ್ಗಗಳೂ ಏನನ್ನು, ಏಕೆ, ಹೇಗೆ ಒಪ್ಪಿಕೊಳ್ಳಬೇಕು? ಏನನ್ನು ಮಾಡಿದರೆ ಭವಿಷ್ಯ ಉಜ್ವಲವಾಗಲಿದೆ? ಯಾವ ಭಾಷೆಯನ್ನು ಕಲಿತರೆ ಮಾರುಕಟ್ಟೆ ಮೌಲ್ಯ ಹೆಚ್ಚುತ್ತದೆ? ಎಂಬಿವೆ ಕೆಲವು ಅಂಶಗಳನ್ನು ಇಟ್ಟುಕೊಂಡೆ ಏನನ್ನೂ ನಿರ್ಧರಿಸಲಾಗದ ಅಸಹಾಯಕತೆಯಲ್ಲೇ ದಿನಗಳನ್ನು ಕಳೆಯುತ್ತಿವೆ.
ಇಂಗ್ಲಿಶ್ ಭಾಷೆಯ ಮೂಲಕ ಮೇಲ್ವರ್ಗಗಳು ಪಡೆದಿರುವ ಸವಲತ್ತುಗಳಿಂದ ತಳಸಮುದಾಯಗಳು ಆಕರ್ಷಿತವಾಗಿವೆ. ಆದರೆ ಮೇಲ್ವರ್ಗಗಳ ಸಾಂಸ್ಕೃತಿಕ ರಾಜಕಾರಣವನ್ನು ಮಾಡಬಲ್ಲಷ್ಟು ಶಕ್ತಿಯನ್ನು ಈ ಸಮುದಾಯಗಳು ಇನ್ನೂ ಪಡೆದಿಲ್ಲ. ಅದನ್ನು ಸಾಧಿಸುವುದು ಕಷ್ಟಸಾಧ್ಯವಾಗಿದೆ. ಏಕೆಂದರೆ ಭಾರತದಂತಹ ರಾಷ್ಟ್ರಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಾಗಿ ಮೇಲ್ವರ್ಗಗಳು ತಳಸಮುದಾಯಗಳನ್ನೇ ಬಳಸಿಕೊಳ್ಳುತ್ತವೆ.
ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಸದ್ದಿಲ್ಲದೇ ಕಳೆದು ಹೋದ ಒಂದು ದಿನವನ್ನು ನಾವೆಲ್ಲ ಮರೆತು ಬಿಟ್ಟಿದ್ದೇವೆ. ಮಾರುಕಟ್ಟೆಯ ಕಾರಣದಿಂದ ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿರುವ ಪ್ರೇಮಿಗಳ ದಿನಕ್ಕೆ ಎಲ್ಲೆಡೆ ಪ್ರಚಾರದ ಭರಾಟೆಯಿರುತ್ತದೆ. ಏಕೆಂದರೆ ಶಾಪಿಂಗ್ ಮಾಲ್, ಕಾರ್ಡ್, ಉಡುಗೆ, ಉಡುಗೊರೆಗಳ ಮಾರುಕಟ್ಟೆಯ ವಿಸ್ತರಣೆಯ ಭಾಗವಾಗಿ ಈ ದಿನ ಆಧುನಿಕ ಸಂದರ್ಭದಲ್ಲಿ ಮುದ್ರಣ, ಶ್ರವಣ, ದರ್ಶನ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೆರೆದಾಡುತ್ತಿದೆ. ಆದರೆ ಈ ಮಾಧ್ಯಮಗಳಲ್ಲಿ ಕನ್ನಡದಂತಹ ಸ್ಥಳೀಯ ಭಾಷೆಗಳನ್ನು ಬಳಸಿಕೊಂಡು ವ್ಯಾವಹಾರಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿರುವ ಎಲ್ಲರೂ ಭವಿಷ್ಯದಲ್ಲಿ ಕನ್ನಡದಂತಹ ಭಾಷೆಗಳನ್ನು ಉಳಿಸುವ ಸಲುವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹುಡುಕಿದರೂ ಕಾಣದಿರುವುದು ದುರಾದೃಷ್ಟಕರ ಬೆಳವಣಿಗೆಯಾಗಿದೆ. ಅಂದ ಹಾಗೆ ನಾವು ಮರೆತು ಹೋದ ಆ ದಿನವೇ ಫೆಬ್ರವರಿ ೨೧ ವಿಶ್ವ ತಾಯ್ನುಡಿ ದಿನ.
ಮಾನವನ ಮಹೋನ್ನತ ಸಾಧನೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಸಲ್ಲುವುದು ಭಾಷೆಗೆ. ಆದರೆ ನಾವಿಂದು ಎಷ್ಟು ಉಪಭೋಗವಾದಿ ಹಾಗೂ ಉಪಯೋಗವಾದಿಗಳಾಗಿ ಬದಲಾಗಿದ್ದೇವೆಂದರೆ; ನಮಗೆ ಇಂದಿನ ಸಕಲ ಸವಲತ್ತುಗಳನ್ನು ಧಾರೆಯೆರೆಯಲು ಕಾರಣವಾಗಿರುವ ನಮ್ಮನಮ್ಮ ತಾಯ್ನುಡಿಯನ್ನು ಅದರಿಂದ ಲಭ್ಯವಾದ ಎಲ್ಲ ಸೌಲಭ್ಯಗಳನ್ನು ಗಳಿಸಿದ ನಂತರ ಕಾಲಕಸವನ್ನಾಗಿ ಮಾಡುತ್ತಿದ್ದೇವೆ. ಒಮ್ಮೆ ಯೋಚಿಸಿದರೆ ನಾವು ಕಲಿತ ಮೊದಲ ಭಾಷೆ ನಮಗೆ ಏನೆಲ್ಲವನ್ನು ಒದಗಿಸಿದೆ ಎಂದು ಮನದಟ್ಟಾಗುತ್ತದೆ. ನಮ್ಮ ಆಲೋಚನೆ, ಲೋಕಗ್ರಹಿಕೆ, ಒಡನಾಟ, ಉದ್ಯೋಗ ಹೀಗೆ ಜೀವನದ ಎಲ್ಲ ಸ್ತರಗಳಲ್ಲಿ ಭಾಷೆಯು ತನ್ನ ಆತ್ಯಂತಿಕ ಮಟ್ಟದ ಕೊಡುಗೆಯನ್ನು ಮಾನವ ಸಮುದಾಯಕ್ಕೆ ಕೊಟ್ಟಿದೆ. ಪ್ರಾಣಿ ಸಮೂಹಕ್ಕಿಂತ ಉನ್ನತ ಹಂತವೆಂದು ಹೇಳಿಕೊಳ್ಳುವ ಅವಕಾಶವನ್ನು ಭಾಷೆಯ ಮೂಲಕ ಗಳಿಸಿರುವ ಮಾನವರು ಭಾಷೆಗಳ ಉಳಿವಿಗೆ ಇನ್ನು ಮುಂದಾದರೂ ಕ್ರಿಯಾಶೀಲವಾಗಬೇಕಿದೆ.
ಆದರೆ ಆ ಕೆಲಸ ಆರಂಭವಾಗುವ ಸಾಧ್ಯತೆಗಳೇ ಸದ್ಯಕ್ಕೆ ಕಾಣುತ್ತಿಲ್ಲ. ಏಕೆಂದರೆ ಎಲ್ಲರೂ ಆಧುನಿಕತೆಯ ಓಟದಲ್ಲಿ ನಿರತರಾಗಿದ್ದಾರೆ. ಅವರ ಈ ಓಟ ಗುರಿ ಇರದೆ ಬಿಟ್ಟ ಬಾಣದಂತೆ ಸಾಗುತ್ತಿದೆ. ಆಧುನಿಕ ಮೂಢನಂಬಿಕೆಯೊಂದನ್ನು ಗಮನಿಸಿದರೆ ಈ ಮಾತಿಗೆ ಸಮಜಾಯಿಷಿ ಸಿಗಬಹುದು. ಆದಷ್ಟು ಬೇಗ ಎಲ್ಲರೂ ಇಂಗ್ಲಿಶ್ ಕಲಿಯಿರಿ, ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ, ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ ಎಂಬರ್ಥದ ಜಾಹಿರಾತುಗಳು, ಇಂಗ್ಲಿಶ್ ಕಲಿಸುವ ಸಂಸ್ಥೆಗಳು ಪ್ರಚಾರವನ್ನು ನೀಡುತ್ತಿವೆ. ಇದರ ಜೊತೆಗೆ ಖಾಸಗಿ ಶಾಲಾಕಾಲೇಜುಗಳು ಈ ವಾದಕ್ಕೆ ಹಿಮ್ಮೇಳವನ್ನು ಜೊತೆಗೂಡಿಸುತ್ತಿವೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂದು ಯೋಚಿಸಬೇಕಾಗಿದೆ. ಅಮೆರಿಕಾದ ಆರ್ಥಿಕ ವ್ಯವಸ್ಥೆ ಕುಸಿದಾಗ ಸಾಫ್ಟ್‌ವೇರ್ ಆಧರಿಸಿದ ಉದ್ದಿಮೆಗಳು ಆರ್ಥಿಕ ಕುಸಿತದ ಕಾರಣದಿಂದಾಗಿ ಹೊಸ ಉದ್ಯೋಗಿಗಳ ನೇಮಕಾತಿಯನ್ನು ಸ್ಥಗಿತಗೊಳಿಸಿ, ಇರುವ ಉದ್ಯೋಗಗಳನ್ನೂ ಕಡಿತಗೊಳಿಸಿದವು. ಆಗ ಇಂಗ್ಲಿಶ್ ಕಲಿತ ಸಾಫ್ಟ್‌ವೇರ್ ಉದ್ಯೋಗಿಗಳೂ ಆತ್ಮಹತ್ಯೆಯ ಹಾದಿ ಹಿಡಿದಿದ್ದರು. ಹಾಗಾದರೆ ಇಂಗ್ಲಿಶ್ ಭಾಷೆಯನ್ನು ಕಲಿತ ಮಾತ್ರಕ್ಕೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕುವ ಅವಕಾಶ ಎಲ್ಲರಿಗೂ ಮುಕ್ತವಾಗಿದ್ದಲ್ಲಿ ಇವರೇಕೆ ಆತ್ಮಹತ್ಯೆಯ ದಾರಿ ಹಿಡಿದರು? ಇಂತಹ ಸೂಕ್ಷ್ಮಗಳೆಡೆಗೆ ಇಂದು ನಾವು ಯೋಚಿಸುವಷ್ಟು ಬಿಡುವು ನಮಗಿಲ್ಲ. ಏಕೆಂದರೆ; ೨೪ ಘಿ ೭ ಚಾನೆಲ್‌ಗಳ ಭರಾಟೆಯಲ್ಲಿ ನಮ್ಮ ಯೋಚಿಸುವ ಶಕ್ತಿ ಕುಂದಿಹೋಗಿದೆ. ಧಾರಾವಾಹಿ, ಹಾಡು, ಸಿನಿಮಾ, ನಗು, ವಾರ್ತೆಗಳನ್ನು ದಿನದ ೨೪ ಗಂಟೆಯೂ ಪ್ರಸಾರಿಸುತ್ತ ನಮ್ಮನ್ನು ಬಿಡುವಾಗದಂತೆ ಯೋಚನೆಯ ಸಾಧ್ಯತೆಗೆ ಒಡ್ಡನ್ನು ನಿರ್ಮಿಸುತ್ತಿವೆ. ಅದರ ಜೊತೆಗೆ ರೇಡಿಯೊ, ಇಂಟರ‍್ನೆಟ್‌ನಲ್ಲಿ ಮೇಯ್ಲ್, ಫೇಸ್‌ಬುಕ್, ಟ್ವೀಟರ್, ಇವುಗಳೆಲ್ಲ ಮೊಬೈಲ್‌ನಲ್ಲೇ ಲಭಿಸುವಂತಾಗಿರುವುದು ನಮ್ಮ ಸುಯೋಗವೆಂಬಂತೆ ನಾವು ಭಾವಿಸುತ್ತಿದ್ದೇವೆ. ಕನಿಷ್ಟ ದರದಲ್ಲಿ ಹೆಚ್ಚಿನ ಟಾಕ್‌ಟೈಮ್, ಎಂ.ಬಿ. ಹಾಗೂ ಜಿ.ಬಿ. ಗಳಿಸುವ ಕುರಿತು ನಮ್ಮ ಆಲೋಚನೆಗಳಿವೆ. ಆದರೆ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರ ಕಡೆ ನಮ್ಮ ಗಮನವಿಲ್ಲ! ಹಾಲು, ಅಕ್ಕಿ, ಸೊಪ್ಪು, ತರಕಾರಿ, ದಿನಸಿ ಪದಾರ್ಥಗಳ ಬೆಲೆಯ ಕುರಿತು ನಮ್ಮ ಆಲೋಚನೆಗಳಿಲ್ಲ! ಆಧುನಿಕತೆಯ ಜುಗಾರಿ ಕ್ರಾಸ್‌ನಲ್ಲಿ ಸಿಲುಕಿಕೊಂಡು ನಾವಿಂದು ಬಳಲುತ್ತಿದ್ದೇವೆ.
ಕನ್ನಡ ಭಾಷೆಯ ಅಭಿವೃದ್ಧಿಗೆ ಈ ಮಾಧ್ಯಗಳ ಕೊಡುಗೆಯೇನು? ಎಂಬ ಪ್ರಶ್ನೆಯನ್ನು ಕೇಳಿದರೆ ಸಿಗುವ ಉತ್ತರ ನಿರಾಶಾದಾಯಕವಾಗಿದೆ. ಮಾಧ್ಯಮಗಳು ಬೃಹತ್ ಬಂಡವಾಳ ಹೂಡಿಕೆಯನ್ನು ಬಯಸುತ್ತವೆ. ವ್ಯಾಪಾರವೆಂದರೆ ದ್ರೋಹ ಚಿಂತನೆ ಎಂಬ ಮಾತಿದೆ. ಅದರಂತೆ ರೇಡಿಯೋ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳು ಹೂಡಿದ ಬಂಡವಾಳವನ್ನು ಮರಳಿ ಪಡೆಯುವತ್ತ ತಮ್ಮ ಗಮನವನ್ನು ಹರಿಸುತ್ತವೆ. ಆಗ ಭಾಷೆ, ಸಂಸ್ಕೃತಿ, ನಾಡಿನ ಹಿತಾಸಕ್ತಿ ಮಸುಕಾಗುತ್ತದೆ.
ಇಂತದೇ ಸಂದರ್ಭ ಖಾಸಗಿ ಶಾಲಾಕಾಲೇಜುಗಳದು. ಸರ್ಕಾರಿ ಶಾಲಾಕಾಲೇಜುಗಳಲ್ಲಿಲ್ಲದ ಪೀಠೋಪಕರಣಗಳು, ಪರಿಣತ ಶಿಕ್ಷಕರು, ಇಂಗ್ಲಿಶ್ ಮಾಧ್ಯಮ ನಮ್ಮಲ್ಲಿದೆ ಎಂದು ಪೋಷಕರನ್ನು ನಂಬಿಸಲಾಗುತ್ತಿದೆ. ಬೆಂಗಳೂರಿನ ಬಹುತೇಕ ಸರ್ಕಾರಿ ಶಾಲಾಕಾಲೇಜುಗಳ ಸುತ್ತಮುತ್ತಲ ವಾತಾವರಣವನ್ನು ಹದಗೆಡಿಸಲಾಗಿದೆ. ಸುತ್ತಮುತ್ತ ತಿಪ್ಪೆಗುಂಡಿಗಳ ನಿರ್ಮಾಣ ಮಾಡಲಾಗಿದೆ. ಇಂತಹ ವಾತಾವರಣದಲ್ಲಿ ತಮ್ಮ ಮಕ್ಕಳನ್ನು ಓದಲು ಕಳಿಸುವುದು ಹೇಗೆ ಎಂದು ಪೋಷಕರು ಹಿಂದೆಮುಂದೆ ನೋಡುವಂತಹ ಸ್ಥಿತಿಯನ್ನು ನಿರ್ಮಿಸಲಾಗಿದೆ. ಆ ಮೂಲಕ ಇಂಗ್ಲಿಶ್ ಭಾಷೆಯನ್ನೂ ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಾಣತನವನ್ನು ಮೆರೆಯಲಾಗಿದೆ. ಇನ್ನು ಕನ್ನಡದಂತಹ ಭಾಷೆಗಳ ಸ್ಥಿತಿಯನ್ನು ಕಾಪಾಡುವವರು ಯಾರು?

No comments:

Post a Comment