Search This Blog

Monday 28 April 2014

ರಾಜ್‌ಕುಮಾರ್ ಕುಟುಂಬ ರಾಜಕಾರಣಕ್ಕೆ
                                                                                                              ಪ್ರದೀಪ್ ಮಾಲ್ಗುಡಿ
ಕನ್ನಡದ ಸಾಕ್ಷಿಪ್ರಜ್ಞೆಯಂತೆ ಕೆಲಸ ನಿರ್ವಹಿಸಿದ ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಕುಟುಂಬ ಕೊನೆಗೂ ಕರ್ನಾಟಕದಲ್ಲಿ ರಾಜಕಾರಣ ಪ್ರವೇಶಮಾಡಿದೆ. ಕರ್ನಾಟಕದ ನಾಡು, ನುಡಿ, ಸಿನಿಮಾ ಕುರಿತ ಸಮಸ್ಯೆಗಳಿಗೆ ರಾಜ್ ಪ್ರತಿಸ್ಪಂದನೆ ಅಭೂತಪೂರ್ವವಾಗಿರುತ್ತಿತ್ತು. ಅವರೊಮ್ಮೆ ರಸ್ತೆಗಿಳಿದರೆ ಇಡೀ ಕನ್ನಡ ನಾಡು ಅವರ ಕರೆಗೆ ಓಗೊಡುತ್ತಿತ್ತು. ಕೇವಲ ನಟನೆಯೊಂದರಿಂದಲೆ ಇಷ್ಟೊಂದು ಜನಾದರ ಪಡೆದ ಮತ್ತೊಬ್ಬ ಕನ್ನಡ ನಟ ಇನ್ನು ಮುಂದೆ ಬರುವುದು ಕನಸಾಗಬಹುದು.
ನಾಡು, ನುಡಿ, ಮಾನವೀಯತೆ, ಮನುಷ್ಯ ಸಂಬಂಧಗಳು, ನಗರೀಕರಣ, ಭ್ರಷ್ಟಾಚಾರ, ಹೆಣ್ಣುಮಕ್ಕಳ ಸಮಸ್ಯೆಗಳು, ದುಷ್ಟರ ದಮನಗಳನ್ನು ಕೇಂದ್ರವಾಗಿಟ್ಟುಕೊಂಡು ಅವರ ಚಿತ್ರಗಳ ಕತೆಗಳನ್ನು ಹೆಣೆಯಲಾಗಿತ್ತು. ಅವರ ಪೌರಾಣಿಕ, ಜನಪದ, ಐತಿಹಾಸಿಕ ಚಿತ್ರಗಳಂತೂ ಮತ್ತಾರೂ ಅವರು ನಿರ್ವಹಿಸಿದ ಪಾತ್ರಗಳನ್ನು ಅವರಷ್ಟೇ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯವಿಲ್ಲವೆಂಬಷ್ಟರ ಮಟ್ಟಿಗೆ ಪರಿಪೂರ್ಣವಾಗಿವೆ. ಜೊತೆಗೆ ಅವರ ಕಂಠ ಮಾಧುರ್ಯವನ್ನು ಕನ್ನಡಿಗರು ಮರೆಯಲು ಸಾಧ್ಯವೆ ಇಲ್ಲ. ಭಕ್ತಿ, ಭಾವಗೀತೆ, ಚಿತ್ರಗೀತೆಗಳಲ್ಲಿ ಹರಿದ ಅವರ ಗಾನಸುಧೆ ಕನ್ನಡಿಗರ ಮನದಲ್ಲಿ ನೆಲೆ ನಿಂತಿದೆ. ಅವರ ಬಾಯಿಯಲ್ಲಿ ಕನ್ನಡ ಹಾಲು, ಜೇನಿನಂತೆ ಮಧುರವಾಗಬಲ್ಲದು. ಕನ್ನಡವನ್ನು ಅವರು ಬಳಸಿದಷ್ಟು ಸರಳವಾಗಿ, ಅರ್ಥಪೂರ್ಣವಾಗಿ ಬಳಸಲು ಸಾಧ್ಯವೇ ಇಲ್ಲವೆನ್ನುವಂತೆ ಅವರ ಕನ್ನಡವಿದೆ.
ಕರ್ನಾಟಕದ ತಳಸಮುದಾಯಗಳಲ್ಲೊಂದಾದ ಈಡಿಗ ಜನಾಂಗದಲ್ಲಿ ಹುಟ್ಟಿದ ರಾಜ್ ತಮ್ಮ ಜಾತಿಯನ್ನು ಮೀರಿ ನಾಡಿನ ಎಲ್ಲ ಸಮುದಾಯಗಳ ಮನಸ್ಸನ್ನು ಸೂರೆಗೊಂಡರು. ಕನ್ನಡ ಚಳುವಳಿಯಲ್ಲಿ ಎಲ್ಲರೂ ಪ್ರಮುಖವಾಗಿ ಚರ್ಚಿಸುವ ಗೋಕಾಕ್ ಚಳುವಳಿ ತೀವ್ರ ಸ್ವರೂಪ ಪಡೆದುಕೊಳ್ಳಲು ರಾಜ್ ಅವರ ಕೊಡುಗೆ ಅಪಾರವಾದುದು. ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ವಿಪ್ಲವವೊಂದಕ್ಕೆ ತಾವು ಕಾರಣರಾಗುತ್ತಿದ್ದೇನೆಂಬ ತಿಳುವಳಿಕೆ ಪ್ರಾಯಶಃ ರಾಜ್‌ಕುಮಾರ್ ಅವರಿಗೂ ಇದ್ದಿರಲಾರದು. ಅವರ ಪ್ರವೇಶವಾಗುತ್ತಿದ್ದಂತೆ ಈ ಹೋರಾಟದಲ್ಲಿ ಜನರ ಪಾಲ್ಗೊಳ್ಳುವಿಕೆ ವ್ಯಾಪಕವಾಯಿತು. ದಿನದಿಂದ ದಿನಕ್ಕೆ ವಿಶಾಲವಾದ ಪ್ರತಿಭಟನೆಯ ಸ್ವರೂಪದಿಂದಾಗಿ ಕನ್ನಡಪರವಾದ ಚಳುವಳಿಗಾರರ ಬೇಡಿಕೆಯನ್ನು ಈಡೇರಿಸಲೇ ಬೇಕಾದ ಅನಿವಾರ‍್ಯತೆಯನ್ನು ಸರ್ಕಾರ ಎದುರಿಸಿತು. ಈ ಚಳುವಳಿಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು.  
ಈ ಸಂದರ್ಭದಲ್ಲಿ ಅವರ ನಿಲುವು ಸ್ಪಷ್ಟವಾಗಿತ್ತು. ಸ್ವತಃ ಪ್ರಭಾವಿ ರಾಜಕಾರಣಿಯ ಸಂಬಂಧಿಯಾಗಿದ್ದರೂ ಅವರೆಂದು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ತಾಳಲಿಲ್ಲ. ಆ ಸಮಯದ ಹೊತ್ತಿಗಾಗಲೆ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಚಿತ್ರನಟರ ರಾಜಕೀಯ ಪಯಣ ಶುರುವಾಗಿತ್ತು. ಎನ್.ಟಿ.ಆರ್. ಹಾಗೂ ಎಂ.ಜಿ.ಆರ್. ಅವರು ರಾಜಕಾರಣದಲ್ಲಿ  ಸಕ್ರಿಯರಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದರು. ಆಗಲೇ ಮನಸು ಮಾಡಿದ್ದರೆ ಪ್ರಸ್ತುತ ಕರ್ನಾಟಕದ ರಾಜಕಾರಣದ ಚಿತ್ರವೇ ಸಂಪೂರ್ಣ ಬದಲಾಗುವ ಸಾಧ್ಯತೆಗಳಿದ್ದವು. ಆದರೆ ಅವರು ತಮ್ಮ ಮೂಲ ಕ್ಷೇತ್ರವಾದ ನಟನೆ ಹಾಗು ತಮ್ಮನ್ನು ಬೆಳೆಸಿದ ಕನ್ನಡವನ್ನು ಹೊರತು ಪಡಿಸಿ ಮತ್ತೊಂದು ಕಡೆ ಚಾಂಚಲ್ಯಕ್ಕೆ ಒಳಗಾಗಲಿಲ್ಲ. ಇಂದಿಗೂ ರಾಜ್‌ಕುಮಾರ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಕಲಾನಿಷ್ಠೆ ಹಾಗೂ ಕನ್ನಡಪರ ನಿಲುವಿನಿಂದಾಗಿಯೇ ಅವರು ಕನ್ನಡಿಗರ ಪಾಲಿಗೆ ಧೃವತಾರೆಯಾಗಿದ್ದಾರೆ. ಅವರ ಪಾತ್ರಗಳ ಮೂಲಕ ಕಟ್ಟಿಕೊಟ್ಟಿರುವ ಮನೋಲೋಕ ಅದ್ಭುತವಾದುದು. ಯಾವ ನೈತಿಕತೆ ಬೋಧನೆಯ ಸೋಗಿಲ್ಲದೆ ಅವರು ಪಾತ್ರಗಳಲ್ಲಿ ಬೋಧಿಸಿರುವ ಮೌಲ್ಯಗಳು ಒಂದೆರೆಡಲ್ಲ. ಕುಡಿತ, ಧೂಮಪಾನವನ್ನು ಈಗ ಎಚ್ಚರಿಕೆಯ ಸಂದೇಶದೊಂದಿಗೆ ತೋರಿಸಬೇಕೆಂಬ ನಿಯವನ್ನು ಮಾಡಲಾಗಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿ ರಾಜ್‌ಕುಮಾರ್ ತೋರಿಸಿದ ಸಂಯಮವನ್ನು ಇಂದಿಗೂ ಯಾವ ನಟರೂ ಸಾಧಿಸಲಾಗಿಲ್ಲ.
ಇಷ್ಟೆಲ್ಲ ಚರ್ಚಿಸುವ ಅಗತ್ಯ ಉಂಟಾದದ್ದು ಪ್ರಸ್ತುತ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ರಾಜ್‌ಕುಮಾರ್ ಅವರ ಸೊಸೆ ಗೀತಾ ಶಿವರಾಜ್‌ಕುಮಾರ್ ಅವರು ಸ್ಪರ್ಧಿಯಾಗಿರುವುದು. ಈ ಹಿಂದೆ ಕರ್ನಾಟಕದಲ್ಲಿ ಪಕ್ಷಾಂತರ ಪರ್ವವನ್ನೇ ನಡೆಸಿದ, ಹೊಸಪಕ್ಷಗಳ ಹುಟ್ಟಿಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮಗಳಾದ ಗೀತಾರವರನ್ನು ಜೆ.ಡಿ.ಎಸ್. ಪಕ್ಷ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕಣಕ್ಕಿಳಿಸಿದೆ. ಇವರ ಸ್ಪರ್ಧೆಯ ಹಿಂದೆ ಅನೇಕ ಅಜೆಂಡಾಗಳಿವೆ. ಒಂದು ಬಂಗಾರಪ್ಪನವರ ಕುಟುಂಬ ರಾಜಕಾರಣ ಕಾರಣವಾಗಿದೆ. ಈ ಹಿಂದೆ ಬಂಗಾರಪ್ಪನವರ ಮಾತನ್ನು ಕೇಳದ ಕುಮಾರ್ ಬಂಗಾರಪ್ಪನವರ ವಿರುದ್ಧ ಇಡೀ ಕುಟುಂಬ ನಿಲುವು ತಳೆದಿದೆ. ಅದರ ಪರಿಣಾಮದಿಂದಾಗಿ ಕುಮಾರ್ ಬಂಗಾರಪ್ಪನವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಧು ಬಂಗಾರಪ್ಪನವರ ವಿರುದ್ಧ ಸೋಲುಂಡರು. ಬಂಗಾರಪ್ಪನವರ ನಿಧನದ ಸಂದರ್ಭದಲ್ಲೇ ಇವರ ಕುಟುಂಬದಲ್ಲಿದ್ದ ಒಡಕು ಜಗಜ್ಜಾಹೀರಾಗಿತ್ತು. ಸದ್ಯಕ್ಕೆ ಶಿವಮೊಗ್ಗದಲ್ಲಿ ಕುಮಾರ್ ಬಂಗಾರಪ್ಪನವರಿಗೆ ಲೋಕಸಭಾ ಟಿಕೆಟ್ ಕೂಡ ತಪ್ಪಿದೆ. ಈಗವರು ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ಈಗ ಈ ಒಡಕಿನ ಲಾಭ ಜೆ.ಡಿ.ಎಸ್. ಪಾಲಾಗಲಿದೆಯೇ? ಅಥವಾ ಪಾಲು ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆಯೇ? ಎಂಬ ಅನುಮಾನ ಮೂಡುತ್ತಿದೆ. ರಾಜ್‌ಕುಮಾರ್ ಅವರ ಕುಟುಂಬವನ್ನು ರಾಜಕಾರಣಕ್ಕೆ ಕರೆತರುವ ಮೂಲಕ ಶಿವಮೊಗ್ಗದ ಸುತ್ತಮುತ್ತ ಜೆ.ಡಿ.ಎಸ್.ಅನ್ನು ಬಲಪಡಿಸುವ ಉದ್ದೇಶದ ಸಾಫಲ್ಯತೆಗೆ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಮತದಾರರು ಉತ್ತರ ನೀಡಬೇಕಿದೆ. ಇನ್ನು ನಾಲ್ಕು ದಶಕಗಳ ಹೋರಾಟ, ರಾಜಕೀಯ ಅನುಭವವಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಗೀತಾ ಶಿವರಾಜ್‌ಕುಮಾರ್ ಅವರನ್ನು ಸ್ಪರ್ಧೆಗಿಳಿಸಿರುವುದರ ಹಿಂದೆ ಯಾವ ಚಾಣಾಕ್ಷ ಯೋಜನೆಗಳಿವೆ ಎಂಬುದು ಇನ್ನೂ ನಿಗೂಢವಾಗಿದೆ.

No comments:

Post a Comment