Search This Blog

Monday 28 April 2014

ಆಪ್ ಶಾಪಗ್ರಸ್ತ ಗಂಧರ್ವರ ಬೀಡಾಗದಿರಲಿ                                                                                                                                                                                                                                              - ಪ್ರದೀಪ್ ಮಾಲ್ಗುಡಿ
ಭಾರತದಲ್ಲಿ ಸಣ್ಣ ಬದಲಾವಣೆಗೂ ಸಾವಿರಾರು ವರ್ಷಗಳ ಸುದೀರ್ಘ ಯಾನ ಅನಿವಾರ‍್ಯವೆಂಬ ಮಾತಿದೆ. ಆದರೆ ಆ ನಂಬಿಕೆಯನ್ನು ಸುಳ್ಳು ಮಾಡಿದ ಎರಡು ಉದಾಹರಣೆಗಳು ಕಳೆದ ಒಂದು ಶತಮಾನದಲ್ಲೇ ಘಟಿಸಿವೆ. ಮೊದಲನೆಯ ಉದಾಹರಣೆಯೆಂದರೆ, ಸ್ವಾತಂತ್ರ್ಯ ಹೋರಾಟ. ೧೮೫೭ರ ಸಿಪಾಯಿ ದಂಗೆಯಿಂದ ೧೯೪೭ರವರೆಗಿನ ಸ್ವಾತಂತ್ರ್ಯ ಹೋರಾಟಕ್ಕೆ ೯೦ ವರ್ಷಗಳ ಇತಿಹಾಸವಿದೆ. ಎರಡನೆ ಉದಾಹರಣೆಯೆಂದರೆ, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆಂದೋಲನ.
ಇಲ್ಲಿ ಗಮನಿಸಬಹುದಾದ ಸಂಗತಿಯೆಂದರೆ, ಹೊಲವನ್ನು ಹರಗಿ, ಬೀಜವನ್ನು ಬಿತ್ತಿ, ನೀರು ಹಾಯಿಸಿ, ಕಳೆ ತೆಗೆದು, ಗೊಬ್ಬರ ಹಾಕಿ ಹುಲುಸಾದ ಬೆಳೆ ಬೆಳೆಯಲು ಸಹಕರಿಸಿದ್ದು ಭಾರತದ ಯುವಜನಾಂಗ, ಮಧ್ಯಮ, ಐಟಿ, ಬಿಟಿ ವರ್ಗ. ಈ ಮಹಾಯಾತ್ರೆಗೆ ಕೈಜೋಡಿಸಿದ್ದು ಮಾಧ್ಯಮಗಳು. ಆದರೆ, ಫಸಲನ್ನು ಕೊಯ್ದುಕೊಳ್ಳುವ ಅವಕಾಶ ಅನಾಯಾಸವಾಗಿ ಸಿಕ್ಕಿದ್ದು ಆಪ್ - ಆಮ್ ಆದ್ಮಿ ಪಕ್ಷದ  ಸ್ಥಾಪಕರಾದ ಅರವಿಂದ್ ಕೇಜ್ರಿವಾಲ್ ಅವರಿಗೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬ್ರಹ್ಮಾಂಡ ಭ್ರಷ್ಟಾಚಾರ, ಅಧಿಕಾರಿಗಳ ಲಂಚಗುಳಿತನಗಳಿಂದ ಬೇಸತ್ತಿದ್ದ ಭಾರತೀಯರು  ಭ್ರಷ್ಟಾಚಾರ ವಿರೋಧೀ ಆಂದೋಲನಕ್ಕೆ ಅಭೂತಪೂರ್ವ ಬೆಂಬಲವನ್ನು ನೀಡಿದರು. ಈ ಆಂದೋಲನ ತೀವ್ರಗತಿಯಲ್ಲಿ ಮುನ್ನೆಲೆಗೆ ಬಂದು, ಸಾರ್ವಜನಿಕವಾಗಿ ಚರ್ಚೆಗೊಳಗಾಗಿ ಲೋಕಪಾಲ್ ಬಿಲ್‌ನ ಮಂಡನೆಯಾಗುವ ಹಂತವನ್ನು ತಲುಪಿದ್ದರಲ್ಲಿ ಬಹುತೇಕ ಮಾಧ್ಯಮಗಳ ಪಾತ್ರ ಗಣನೀಯವಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಸ್ವಾತಂತ್ರ್ಯ ಹೋರಾಟ ದೇಶದಾದ್ಯಂತ ಹರಡಬೇಕಾದಾಗ ತೆಗೆದುಕೊಂಡ ಸಮಯಕ್ಕಿಂತ ಈ ಆಂದೋಲನ ಬೇಗ ವ್ಯಾಪಕವಾಗಿ ಪಸರಿಸಿತು. ದೇಶದ ಯುವ ಜನತೆಯನ್ನೂ ಒಳಗೊಂಡು ಮೊಬೈಲ್ ಎಸ್.ಎಂ.ಎಸ್., ಫೇಸ್‌ಬುಕ್, ಟ್ವೀಟರ್‌ಗಳ ಮೂಲಕ ತ್ವರಿತವಾಗಿ ಜನಾಭಿಪ್ರಾಯ ರೂಪುಗೊಳ್ಳಲು ಕಾರಣವಾಯಿತು. ಈ ಹಂತದಲ್ಲಿ ವಿಶೇಷವಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸ್ಪರ್ಧೆಗೆ ಬಿದ್ದಂತೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿದವು ಹಾಗೂ ಬಿತ್ತರಿಸಿದವು.
ಮಾಧ್ಯಮಗಳ ವ್ಯಾಪಕ ಪ್ರಚಾರದಿಂದಾಗಿ ಲೋಕಪಾಲ್ ಪರವಾಗಿ ಜನಾಭಿಪ್ರಾಯ  ಮೂಡಿತು. ಇದರಿಂದ ಆಡಳಿತ ಹಾಗೂ ವಿರೋಧ ಪಕ್ಷಗಳೂ ಇಕ್ಕಟ್ಟಿಗೆ ಸಿಲುಕಿದವು. ಇದರಿಂದ ಉತ್ತೇಜಿತರಾದ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯನ್ನು ಹುಟ್ಟು ಹಾಕಿ, ಕಸಪೊರಕೆಯನ್ನು ತಮ್ಮ ಪಕ್ಷದ ಗುರುತನ್ನಾಗಿಸಿಕೊಂಡರು. ಇದರ ಪರಿಣಾಮದಿಂದ ದೆಹಲಿಯಲ್ಲಿ ೪೯ ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ, ಈಗ ಅಧಿಕಾರದಿಂದ ನಿರ್ಗಮಿಸಿದ್ದಾರೆ.
ಲೋಕಪಾಲ್ ಬಿಲ್ಲನ್ನು ಮಂಡಿಸಲು ಮೀನಮೇಷ ಎಣಿಸಿದ ಕಾಂಗ್ರೆಸ್ ಪಕ್ಷ ಪಂಚರಾಜ್ಯಗಳ ಚುನಾವಣೆಯಲ್ಲಿ ನೆಲಕಚ್ಚಿತು. ಅದಾದ ನಂತರ ತರಾತುರಿಯಲ್ಲಿ ಆತುರಾತುರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳತೊಡಗಿತು. ಆ ನಡುವೆ ಅಲ್ಪಮತದ ಸರ್ಕಾರವನ್ನು ರಚಿಸಿದ್ದ ಅರವಿಂದ್ ಕೇಜ್ರಿವಾಲ್ ಅನೇಕ ಅವಾಂತರಗಳನ್ನು ಸೃಷ್ಟಿಸಿ, ಸ್ವತಃ ಮುಖ್ಯಮಂತ್ರಿಯೊಬ್ಬರು ಧರಣಿ ನಡೆಸಿದ ಇತಿಹಾಸವನ್ನೂ ನಿರ್ಮಿಸಿದರು.
ಸೂಕ್ಷ್ಮವಾಗಿ ಗಮನಿಸಿದರೆ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಚುನಾವಣಾ ಪೂರ್ವದಿಂದ ಇಂದಿನವರೆಗೂ ಭ್ರಷ್ಟಾಚಾರವೊಂದನ್ನೆ ತಮ್ಮ ಭಾಷಣದ ಅಜೆಂಡಾವನ್ನಾಗಿಸಿಕೊಂಡಿದ್ದಾರೆ. ಆದರೆ ಒಂದೇ ಕಾರ‍್ಯಸೂಚಿಯಿಂದ ಚುನಾವಣಾ ರಾಜಕೀಯ ಅಥವಾ ಅಧಿಕಾರ ರಾಜಕಾರಣವನ್ನು ಭಾರತದಲ್ಲಿ ನಡೆಸಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ೧೩೬೮ಕ್ಕೂ ಹೆಚ್ಚಿನ ಸಮುದಾಯ(ಜಾತಿ)ಗಳಿವೆ. ಇದರಲ್ಲಿ ಅನಕ್ಷರಸ್ಥರು, ಅಕ್ಷರಸ್ಥರು, ಕಡುಬಡವರು, ಮಧ್ಯಮ ವರ್ಗ, ಮೇಲ್ಮಧ್ಯಮವರ್ಗ, ಮೇಲ್ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳು, ಜಾತಿ ಆಧಾರಿತವಾಗಿ ವೃತ್ತಿಯನ್ನು ನಂಬಿಕೊಂಡಿರುವ ವರ್ಗಗಳು ಇತ್ಯಾದಿ ಭಿನ್ನ ವರ್ಗ, ವರ್ಣ, ಲಿಂಗ, ವಯೋಮಾನ, ಆಸ್ತಿಕ - ನಾಸ್ತಿಕ  ಮನೋಧರ್ಮದ ಜನರಿದ್ದಾರೆ. ಈ ಎಲ್ಲರನ್ನೂ ತಲುಪುವುದಕ್ಕೆ ಭ್ರಷ್ಟಾಚಾರ ವಿರೋಧ ಎಂಬ ಒಂದೇ ಮಂತ್ರದಿಂದ ಸಾಧ್ಯವಿಲ್ಲ. ಈ ಅಂಶವನ್ನು ಆಪ್ ಮನಗಾಣಬೇಕಾಗಿದೆ.
ಆಧುನಿಕೋತ್ತರ ಭಾರತದಲ್ಲಿ ಹೊಸಕ್ರಾಂತಿಯ ಸಾಧ್ಯತೆಗಳೇ ಮಸುಕಾಗುತ್ತಿವೆ, ಚಳುವಳಿಗಳು ಸಾಯುತ್ತಿವೆ ಎಂಬ ವಾದ ನಿಧಾನವಾಗಿ ಬಲವಾಗಿ ರೂಪುಗೊಳ್ಳತೊಡಗಿದಾಗ ನಡೆದ ಈ ಬದಲಾವಣೆಯನ್ನು ಆಪ್‌ನಂತಹ  ಪಕ್ಷಗಳು, ಮಾಧ್ಯಮಗಳು ಹಾಗೂ ಮತದಾರರು ತುಸು ಎಚ್ಚರದಿಂದ ಪರಿಭಾವಿಸಬೇಕಾಗಿದೆ. ಅರವಿಂದ್ ಕೇಜ್ರಿವಾಲ್ ಅಧಿಕಾರ ವಹಿಸಿಕೊಳ್ಳುವವರೆಗೆ ಅವರ ಪರವಾಗಿದ್ದ ಮಾಧ್ಯಮಗಳು ಅಧಿಕಾರ ವಹಿಸಿಕೊಂಡ ಕ್ಷಣದಿಂದ ತಾವೇ ಅಧಿಕೃತ ವಿರೋಧ ಪಕ್ಷಗಳಾಗಿ ವರ್ತಿಸತೊಡಗಿದವು.
ಆಪ್ ಬಗ್ಗೆ ಇರುವ ಕೆಲವು ಆಕ್ಷೇಪಗಳನ್ನು ನೋಡುವುದಾದರೆ, ಅದರಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಇಲ್ಲ ಹಾಗೂ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಛಿದ್ರಗೊಳಿಸಲು ವಿದೇಶೀ ಹುನ್ನಾರದ ಬಲಿಪಶು ಆಪ್ ಎಂಬ ಮಾತುಗಳಿವೆ. ಮೊದಲನೆಯ ಆಕ್ಷೇಪಕ್ಕೆ ಆಪ್ ಆದಷ್ಟು ಶೀಘ್ರವಾಗಿ ಉತ್ತರ ಕಂಡುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕೇವಲ ಒಂದು ವರ್ಗದ ಮತದಾರರನ್ನು ನೆಚ್ಚಿಕೊಂಡು ಲೋಕಸಭಾ ಚುನಾವಣೆಗೆ ಹೋದರೆ ದೆಹಲಿಯಲ್ಲಿ ಸಿಕ್ಕ ಜಯ ಸಿಗುವ ದಾರಿ ದೂರವಾಗಬಹುದು. ಎರಡನೇ ಆಕ್ಷೇಪಕ್ಕೆ ಕಾಲವೇ ಉತ್ತರಿಸಬಹುದೇನೋ?
ಭಾರತೀಯ ಪುರಾಣಗಳ ನಂಬಿಕೆಯ ಪ್ರಕಾರ ಶಾಪಗ್ರಸ್ಥ ಗಂಧರ್ವರು ಭೂಮಿಯಲ್ಲಿ ಅಲ್ಪ ಕಾಲ ಕಳೆದು ತಮ್ಮ ಶಾಪವಿಮೋಚನೆಯ ನಂತರ ಸ್ವರ್ಗಲೋಕವನ್ನು ಪ್ರವೇಶಿಸುತ್ತಾರೆ. ಆದರೆ ಭೂಮಿಯನ್ನೇ ಸ್ವರ್ಗ ಮಾಡುವ ಕನಸನ್ನು ಬಿತ್ತಿರುವ ಆಪ್ ಹಾಗೂ ಅದರ ತತ್ವವನ್ನು ನಂಬಿರುವ ಆಕಾಂಕ್ಷಿಗಳು ತಾವೇನೋ ಸ್ವರ್ಗವನ್ನು ಸೇರಬಹುದು; ಆದರೆ ಕನಸು ಬಿತ್ತಿ ಮೋಸ ಮಾಡಿದರೆ ಭಾರತದಲ್ಲಿ ಹೊಸಪಕ್ಷಗಳಿಗೆ ಭವಿಷ್ಯವೇ ಇಲ್ಲದಂತಾಗುವ ಅಪಾಯವಿದೆ. ಈ ಮೂಲಕ ಜನಸಮುದಾಯದ ಆಶೋತ್ತರಗಳು ಎಂದಿನಂತೆ ನಿಲುಕದ ನಕ್ಷತ್ರಗಳಾಗುತ್ತವೆ. ಹಾಗೆ ನೋಡಿದರೆ, ಜನರೇ ಆಮ್ ಆದ್ಮಿಗಳು ಮತ್ತು ಕಾಮ್ ಆದ್ಮಿಗಳು. ಶ್ರೀಸಾಮಾನ್ಯನಿಗೆ ಎಂದಿಗೆ ಮಾನ್ಯತೆ? ನೆಮ್ಮದಿ?

No comments:

Post a Comment