Search This Blog

Monday 28 April 2014

 ದಶಮುಖನಿಲ್ಲದ ದಶಕದ ಆಚೀಚೆ
- ಪ್ರದೀಪ್ ಮಾಲ್ಗುಡಿ
ಲಂಕೇಶರಂತೆ ನೇರ, ದಿಟ್ಟ, ಪ್ರಾಮಾಣಿಕ ನಡೆನುಡಿಯನ್ನು ರೂಢಿಸಿಕೊಂಡಿರುವ ಯುವ ಸಮುದಾಯವನ್ನು ಒಂದುಗೂಡಿಸುವ ಕೆಲಸ ಇಂದು ತುರ್ತಾಗಿ ನಡೆಯಬೇಕಾಗಿದೆ. ಏಕೆಂದರೆ: ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಪಲ್ಲಟಗಳಾಗಿವೆ. ಆದರೆ ಆ ಪಲ್ಲಟಗಳು ನಕಾರಾತ್ಮಕ ದಾರಿಯಲ್ಲಿ ಸಾಗುತ್ತಿವೆ. ಕಾಂಗ್ರೆಸ್ ಮತ್ತು ಜನತಾದಳ, ಬಿ.ಜೆ.ಪಿ. ಮತ್ತು ಜನತಾದಳ ಸಮ್ಮಿಶ್ರ ಸರ್ಕಾರಗಳು ಹಾಗೂ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದು ಹೋಗಿವೆ. ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳ ಹಾಗೂ ಕೆ.ಪಿ.ಎಸ್.ಸಿ. ನೇಮಕಾತಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳು ನಡೆದಿವೆ. ಈ ಕ್ಷೇತ್ರಗಳಲ್ಲಿ ನೇಮಕಾತಿ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಸ್ವಜನ ಪಕ್ಷಪಾತ, ಹಣ, ಜಾತಿ, ಸಿದ್ಧಾಂತ, ಅಧಿಕಾರಗಳ ಪ್ರಭಾವ ನಡೆದಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದಮೇಲೆ ಪಠ್ಯ ಪುಸ್ತಕಗಳ ಕೇಸರೀಕರಣವಷ್ಟೇ ಅಲ್ಲದೇ ಸರ್ಕಾರಿ ನೇಮಕಾತಿಗಳಲ್ಲಿ ಕೂಡ ಆರ್.ಎಸ್.ಎಸ್. ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮಣೆ ಹಾಕಲಾಗಿದೆ. ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ. ಬಸ್ ಹಾಗೂ ಬಸ್ ನಿಲ್ದಾಣಗಳಿಗೂ ಕೇಸರಿ ಬಣ್ಣ ಬಳಿಯಲಾಯ್ತು. ಇಷ್ಟಾದರೂ ಅದನ್ನು  ಪ್ರತಿಭಟಿಸುವ ಕೆಲಸಗಳು ನಡೆಯಲಿಲ್ಲ. ಅದರ ಜೊತೆಗೆ ಭೂಗಳ್ಳತನ ಹಾಗೂ ಗಣಿ ಲೂಟಿ ಅವ್ಯಾಹತವಾಗಿ ನಡೆದು ಹೋಯಿತು. ಸಾಮಾಜಿಕವಾಗಿ ಗಣ್ಯ ಸ್ಥಾನವನ್ನು ಅಲಂಕರಿಸಿದವರು ಈ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ರೂಪಿಸುವ ಕೆಲಸಗಳನ್ನು ಮರೆತು ತೂಕಡಿಸಿದರು.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಲುವಾಗಿ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಈ ನಡೆಯನ್ನೇನು ನಾವು ವಿರೋಧಿಸಬೇಕಾಗಿಲ್ಲ. ಆದರೆ ಅಹಿಂದ ಸಂಘಟನೆ, ಹೋರಾಟ, ವೈಚಾರಿಕತೆಗಳನ್ನು ಮೈಗೂಡಿಸಿಕೊಂಡಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಈ ಹಿಂದಿನ ಯಾವ ಸರ್ಕಾರಗಳೂ ಮಾಡದಂತಹ ಅನೇಕ ಅನಾಹುತಗಳನ್ನು ಮಾಡುತ್ತಿದೆ. ಉದಾಹರಣೆಗೆ, ಸರ್ಕಾರಿ ನೌಕರರಿಗೆ ಸಮವಸ್ತ್ರ ಸಂಹಿತೆಯ ಗುಮ್ಮವನ್ನು ಬಿಟ್ಟದ್ದು, ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದರ ನೇಮಕ, ಢುಂಢಿ ಕಾದಂಬರಿಯ ಲೇಖಕರಾದ ಯೋಗೀಶ್ ಮಾಸ್ತರ್‌ರವರ ಬಂಧನ, ಕೃತಿಯ ಮುಟ್ಟುಗೋಲು, ಅಕಾಡೆಮಿ, ಪ್ರಾಧಿಕಾರಗಳ ನೇಮಕಾತಿಗೆ ಗ್ರಹಣ ಹಿಡಿಸಿದ್ದು, ಅಹಿಂದ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸ ಭಾಗ್ಯ, ಅಲ್ಪಸಂಖ್ಯಾತರಿಗೆ ಮಾತ್ರ ಶಾದಿ ಭಾಗ್ಯ, ಕವಿಯೊಬ್ಬರನ್ನು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ಸಂಸ್ಕಾರ ಮಾಡಿದ್ದು, ಎಫ್.ಡಿ.ಐ.ಗೆ ಸ್ವಾಗತ... ಹೀಗೆ ಈ ಸರ್ಕಾರವು ಕೈಗೊಂಡ ಜನವಿರೋಧೀ ನಿಲುವುಗಳನ್ನು ಖಂಡಿಸುವ ಕೆಲಸವನ್ನು ಈ ಸರ್ಕಾರವನ್ನು ಬೆಂಬಲಿಸಿದ ಸಾಹಿತಿಗಳು ಹಾಗೂ ಬುದ್ಧಿಜೀವಿಗಳ್ಯಾರು ಮಾಡಲಿಲ್ಲ.
ದುರಂತವೆಂದರೆ ಅವಕಾಶ ಸಿಕ್ಕಾಗಲೆಲ್ಲ ಇವರಲ್ಲಿ ಬಹುತೇಕರು ತಾವು ಲಂಕೇಶ್ ಅವರ ಒಡನಾಡಿಗಳೆಂದು ಹೇಳಿಕೊಳ್ಳುವವರು. ಈ ಬಗೆಯ ಪ್ರಜಾಪ್ರಭುತ್ವ ವಿರೋಧೀ ನಿಲುವುಗಳನ್ನು ಎಂದಾದರೂ ಲಂಕೇಶ್ ಅವರು ಮೌನವಾಗಿ  ಸಹಿಸುತ್ತಿದ್ದರೆ? ಎಂಬ ಪ್ರಶ್ನೆಯನ್ನು ಈ ಬುದ್ಧಿಜೀವಿಗಳು ಎಂದೂ ಕೇಳಿಕೊಂಡಿಲ್ಲ. ಅವರ ಒಡನಾಡಿಗಳನೇಕರು ಇಂದು ಲಂಕೇಶ್ ಅವರ ವಿಚಾರಧಾರೆಗಳನ್ನು ಸಂಪೂರ್ಣವಾಗಿ ಮರೆತು, ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಅವರ ಪ್ರಭುತ್ವದ ಜೊತೆಗಿನ ಅನವಶ್ಯಕ ಸಖ್ಯ ಹಾಗೂ ರಾಜಿಗಳಿಗೆ ಅನೇಕ ಉದಾಹರಣೆಗಳಿವೆ. ಸಾಂಸ್ಕೃತಿಕ ವಲಯವಂತೂ ಅತ್ಯಂತ ಹೆಚ್ಚಿನ ರಾಜಿಗೆ ಒಳಗಾಗಿದೆ. ನಿರಂತರವಾದ ಅಧಿಕಾರ ಲಾಲಸೆ ಈ ಕ್ಷೇತ್ರದವರ ಬಾಯಿ ಮುಚ್ಚಿಸಿದೆ. ಈಗಾಗಲೆ ಒಂದು ಬಾರಿ ಅಕಾಡೆಮಿ, ಪ್ರಾಧಿಕಾರಗಳ ಉನ್ನತ ಹುದ್ದೆಯನ್ನು ಅನುಭವಿಸಿರುವ ಸಾಂಸ್ಕೃತಿಕ ವಕ್ತಾರರು ಮತ್ತೆ ಮತ್ತೆ ಅಂತಹ ಹುದ್ದೆಗಳ ಮೇಲೆ ಕಣ್ಣಿಟ್ಟುಕೊಂಡು, ಅತ್ತ ಸರ್ಕಾರವನ್ನು ಇತ್ತ ಸಿದ್ಧಾಂತ, ಮೌಲ್ಯಗಳನ್ನು ಹಾಗೂ ಜನರನ್ನು ಬ್ಯಾಲೆನ್ಸ್ ಮಾಡಲಾಗದೆ ಪ್ರಜ್ಞಾವಂತರ ಕಣ್ಣಿಗೆ ಕ್ರಿಮಿಗಳಾಗಿ ಕಾಣುತ್ತಿದ್ದಾರೆ. ಇಷ್ಟಾದರೂ ಆತ್ಮವಿಮರ್ಶೆಯ ಲವಲೇಶವೂ ಅವರ ಮಾತು, ವರ್ತನೆ, ನಡೆಯಲ್ಲಿ ಕಾಣುತ್ತಿಲ್ಲ. ಸಾಲದ್ದಕ್ಕೆ ಭಟ್ಟಂಗಿಗಳ ಗುಂಪುಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಸಹಿಸಿಕೊಳ್ಳುತ್ತಾ ಇನ್ನೂ ಎಷ್ಟು ದಿನ ಯುವಜನಾಂಗವು ಸುಮ್ಮನಿರಬೇಕು? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.
ಈ ಕಾಲಘಟ್ಟದಲ್ಲಿ ಎಲ್ಲರ ಬದುಕು ಸ್ಥಿತ್ಯಂತರಗೊಳ್ಳುತ್ತಿದೆ. ವೈಜ್ಞಾನಿಕ ಸಂಶೋಧನೆಯ ಕಾರಣಗಳಿಂದಾಗಿ ತುದಿಬೆರಳಲ್ಲಿ ಜಗತ್ತು ಲಭಿಸುತ್ತಿದೆ. ಅಂತರ್ಜಾಲವೂ ಸೇರಿದಂತೆ ಮೊಬೈಲ್ ಸೇವೆಯು ಸಾರ್ವರ್ತ್ರಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟಕುತ್ತಿದೆ. ಇದೇ ಸಂದರ್ಭದಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಲೇ ಇವೆ. ನೈತಿಕ ಮೌಲ್ಯಗಳು ಪಾತಾಳ ಸೇರಿವೆ. ಅರ್ಹತೆಯುಳ್ಳವರಿಗೂ ಉದ್ಯೋಗ ಸಿಗುತ್ತಿಲ್ಲ. ಎಲ್ಲೆಡೆ ವಶೀಲಿಬಾಜಿ, ತನ್ನ ಜಾತಿ, ಮತ, ಸಿದ್ಧಾಂತಗಳಿಗನುಗುಣವಾದ ವ್ಯಕ್ತಿಗಳನ್ನೆ ಆರಿಸಿಕೊಳ್ಳಲಾಗುತ್ತಿದೆ. ಯಾವುದೇ ಮಾನದಂಡಗಳೂ ಯಾವುದೇ ಹುದ್ದೆಗೆ ಅರ್ಹತೆಯಾಗುಳಿದಿಲ್ಲ.
ಯಾವುದೇ ನೌಕರಿ ಗಿಟ್ಟಿಸುವುದಕ್ಕೂ ಯುವಜನತೆ ಜಾತಿ, ಹಣ, ಅಧಿಕಾರ, ಪ್ರಭಾವಗಳ ಬೆನ್ನು ಬೀಳಬೇಕಾದ ದುಸ್ಥಿತಿ ಎದುರಾಗುತ್ತಿದೆ. ಅದೇ ಕಾಲಕ್ಕೆ ಏನಕೇನಪ್ರಕಾರೇಣ ಉದ್ಯೋಗ ಹಿಡಿಯಬೇಕಾದ ಅನಿವಾರ‍್ಯ ಪರಿಸ್ಥಿತಿಯಲ್ಲಿ ಯುವಜನಾಂಗವಿದೆ. ಹೀಗೆ ಉದ್ಯೋಗ ಹಿಡಿಯುವಲ್ಲಿ ವಿಫಲವಾದವರನ್ನು ಬದುಕುವುದಕ್ಕೆ ಅರ್ಹರಲ್ಲವೆಂಬಂತೆ ಕಾಣಲಾಗುತ್ತಿದೆ. ಯುವಜನಾಂಗವು ರಾಜಕಾರಣ, ಅಧಿಕಾರ ಸ್ಥಾನಗಳಿಂದ ದೂರ ಉಳಿದಿದೆ.
ಕನ್ನಡ, ಕನ್ನಡಿಗ ಮತ್ತು ಲಂಕೇಶ್
ಕವಿತೆ, ಕತೆ, ನಾಟಕ, ಕಾದಂಬರಿ, ಅನುವಾದ, ಅಂಕಣ ಬರಹ, ವಿಮರ್ಶೆ, ಸಿನಿಮಾ, ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಲಂಕೇಶರ ಕೃತಿಗಳು ಕನ್ನಡದ್ದೇ ಆದ ಸಂವೇದನೆಯ ಭಾಗವಾಗಿವೆ. ಜಾತ್ಯತೀತತೆ, ನಿಷ್ಠುರತೆ, ಪ್ರಭುತ್ವದೊಡನೆ ಅವರ ಕಾಯ್ದುಕೊಂಡ ಅಂತರ, ಪ್ರಭುತ್ವಗಳ ಹುನ್ನಾರಗಳನ್ನು ಸದಾ ಬಯಲು ಮಾಡುವಾಗ ತೋರುತ್ತಿದ್ದ ಧೈರ್ಯ ಅವರಿಗೇ ವಿಶಿಷ್ಟವಾದುದು. ನೀಚನನ್ನು ನೀಚನೆಂದೇ ಕರೆಯಬೇಕು, ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ ಎಂಬಿವೆ ಕೆಲವು ಮಾತುಗಳಿಂದಲೆ ಅವರ ಚಿಂತನೆಯ ಆಳ, ಅಗಲಗಳನ್ನು ಕಾಣಬಹುದು. ಸಂಕ್ರಾಂತಿಯಂತಹ ನಾಟಕವೊಂದು ಬರದಿದ್ದರೆ ವಚನ ಚಳುವಳಿಯ ನಿಷ್ಠುರ ವಿಮರ್ಶೆಯ ಸಾಧ್ಯತೆಗಳೇ ತೆರೆದುಕೊಳ್ಳುತ್ತಿರಲಿಲ್ಲ. ಗುಣಮುಖ ನಾಟಕವು ಪ್ರಭುತ್ವದ ರೋಗಗ್ರಸ್ಥತೆಯನ್ನು ಅನಾವರಣ ಮಾಡುತ್ತದೆ. ದೊರೆ ಈಡಿಪಸ್ ಹಾಗೂ ಪಾಪದ ಹೂಗಳುವಿನಂತಹ ಅನುವಾದಗಳು ಕನ್ನಡ ಸಂದರ್ಭಧಲ್ಲಿ ವಿರಳಾತಿವರಳ. ಮುಟ್ಟಿಸಿಕೊಂಡವನು, ನಿವೃತ್ತರು, ತೋಟದವನು, ಸ್ಟೆಲ್ಲಾ ಎಂಬ ಹುಡುಗಿಯಂತಹ ಪಾತ್ರಗಳು ಕನ್ನಡ ಕಥನಕ್ಕೆ ಹೊಸವಾಗಿವೆ. ಇನ್ನು ಟೀಕೆ-ಟಿಪ್ಪಣಿಯದ್ದು ಮತ್ತೊಂದು ಬಯಲಿನ ವಿಸ್ತಾರ.  
  ಅವರ ಬರಹಗಳಲ್ಲಿ ಕನ್ನಡದ ವಿಶಿಷ್ಟ ಬಳಕೆಯ ಸಾಧ್ಯತೆಗಳನ್ನು ಕಾಣಬಹುದು. ಅನವಶ್ಯಕವಾದ ಪದಗಳಾಗಲಿ, ಸಂಸ್ಕೃತ ಭಾಷಾ  ಪ್ರೌಢಿಮೆಯ ಪ್ರದರ್ಶನಗಳು ಅವರ ಬರಹಗಳಲ್ಲಿ ಕಡಿಮೆ. ಕನ್ನಡವನ್ನು ಕನ್ನಡದ ಮೂಲಕವೇ ಉನ್ನತ ಹಂತಕ್ಕೇರಿಸುವ ಪ್ರಯತ್ನದ ಭಾಗವಾಗಿಯೇ ಅವರ ಬರಹಗಳನ್ನು ನಾವಿಂದು ಅರ್ಥೈಸಿಕೊಳ್ಳಬೇಕಾಗಿದೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕವಾಗಿ ಹಂಚಿಹೋಗಿರುವ ಅವರ ಚಿಂತನೆಗಳ ಆಳದಲ್ಲಿ ಮತ್ತೆ ಮತ್ತೆ ಕನ್ನಡ ನಾಡು, ನುಡಿ ಹಾಗೂ ಕನ್ನಡಿಗರ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಅವರ ಗಮನವಿರುವುದನ್ನು ನಾವು ಕಾಣಬಹುದು. ಆದರೆ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ, ಅನುವಾದ ಅಕಾಡೆಮಿ ಇತ್ಯಾದಿಗಳನ್ನು ಸ್ಥಾಪಿಸಿ, ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಗಳ ಏಳ್ಗೆಗಾಗಿ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ. ಅನುದಾನವನ್ನು ಬಳಸುತ್ತಿರುವ ಈ ಎಲ್ಲ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪಸರಿಸುತ್ತಿವೆ? ಅಥವಾ ಕರ್ನಾಟಕದಲ್ಲಿ ಕನ್ನಡವನ್ನು ಸದೃಢಗೊಳಿಸಲು ಕಾರ್ಯೋನ್ಮುಖವಾಗಿವೆ? ಎಂಬ ಪ್ರಶ್ನೆ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ. ಏಕೆಂದರೆ, ಕನಾಟಕದ ನಾಡು, ನುಡಿ, ಗಡಿ ಹಾಗೂ ಜಲದ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ. ಏಕೀಕರಣಕ್ಕಾಗಿ ಹೋರಾಡಿದ ನಾಡಿನಲ್ಲಿ ಈಗ ಕೆಲವು ರಾಜಕಾರಣಿಗಳು ಪ್ರತ್ಯೇಕ ರಾಜ್ಯದ ಕೂಗನ್ನು ಪದೇಪದೇ ಎತ್ತುತ್ತಿದ್ದಾರೆ. ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿಕಾರಿಗಳು, ರಾಜಕಾರಣಿಗಳು, ಸಾಹಿತಿ ಕಲಾವಿದರು, ಚಿಂತಕರು ಕ್ರಿಯಾಶೀಲವಾಗಿದ್ದಿದ್ದರೆ ಇಂತಹ ಕೂಗುಗಳಿಗೆ ಸ್ಥಳವಿರುತ್ತಿರಲಿಲ್ಲ.
ಈ ಸಂಸ್ಥೆಗಳು ಮಾಡುತ್ತಿರುವ ಕೆಲಸಗಳೆಂದರೆ ಪ್ರಶಸ್ತಿಗಳನ್ನು ಹಂಚುವುದು, ಅನುದಾನವನ್ನು ಕೊಡುವುದು, ಸಲ್ಲದ ಸಾಂಸ್ಕೃತಿಕ (ಜಾತಿ) ರಾಜಕಾರಣ ಮತ್ತು ವಿವಾದಗಳಿಗೆ ತಮ್ಮ ಗಡಿಗಳನ್ನು ಸೀಮಿತಗೊಳಿಸಿಕೊಳ್ಳುವುದು. ಇವುಗಳ ಫಲಾನುಭವಿಗಳೆಂದರೆ ಸಾಹಿತಿಗಳು, ಕಲಾವಿದರು, ಆಡಳಿತವರ್ಗದವರು. ಆದರೆ ಇವರಲ್ಲಿ ಬಹುತೇಕರು ಕನ್ನಡ ಮಾಧ್ಯಮದಲ್ಲಿ  ಹಾಗೂ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸದಿರುವಷ್ಟು ಉಗ್ರ ಕನ್ನಡಾಭಿಮಾನಿಗಳು!
ಕರ್ನಾಟಕದ ಜನರನ್ನು ಸರ್ವಧರ್ಮ ಸಹಿಷ್ಣುಗಳು, ವೀರರು, ಕಲಿಗಳು, ತ್ಯಾಗಿಗಳು, ಶರಣಾಗತ ರಕ್ಷಕರು ಇತ್ಯಾದಿಯಾಗಿ ಇಂದಿಗೂ ಇತಿಹಾಸದ ಪಾಠಗಳಲ್ಲಿ ಹೇಳಿಕೊಡಲಾಗುತ್ತಿದೆ. ಒಂದು ಕಾಲಕ್ಕೆ ಇದ್ದ ಕನ್ನಡ ನಾಡಿನ ವೈಶಾಲ್ಯತೆ ಏಕೀಕರಣದ ನಂತರ ಕುಬ್ಜಗೊಂಡಿದೆ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಕ್ಷೇತ್ರವೂ ಕುಗ್ಗಿದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಕನ್ನಡದ ಆತಂಕಗಳು ಕಡಿಮೆಯಾಗಬೇಕಿತ್ತು. ಆದರೆ ಇಂದು ಆ ಆತಂಕ ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕನ್ನಡೇತರರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚುವ, ಸ್ಥಳಾಂತರಿಸುವ, ಸಂಯೋಜಿಸುವ ಕನ್ನಡ ವಿರೋಧಿ ಕೆಲಸಗಳನ್ನು ಸರ್ಕಾರವೇ ಮುಂದೆ ನಿಂತು ಮಾಡುತ್ತಿದೆ. ಆಡಳಿತದಲ್ಲಿ ಕನ್ನಡ ಜಾರಿ ಎಂದು ಪ್ರತಿ ಸರ್ಕಾರಗಳೂ ಸುಳ್ಳು ಹೇಳುತ್ತಿವೆ. ಕೋರ್ಟ್‌ನಲ್ಲಿ ಕನ್ನಡ ವಾತಾವರಣವನ್ನು ತರಲು ಇದುವರೆಗೆ ಸಾಧ್ಯವಾಗಿಲ್ಲ. ಮಧ್ಯಮ ಹಾಗೂ ಮೇಲು ವರ್ಗದ ಕುಟುಂಬಗಳು ಕನ್ನಡ ಹಾಗೂ ಸರ್ಕಾರಿ ಶಾಲೆಗಳೆರಡರಿಂದಲೂ ದೂರವಾಗುತ್ತಿವೆ. ಇಂತಹ ಸಮಸ್ಯೆಗಳತ್ತ ಕನ್ನಡದ ಸರ್ವತೋಮುಖ ಬೆಳವಣಿಗೆಯ ಉದ್ದೇಶಗಳಿಂದ ಸ್ಥಾಪನೆಯಾಗಿರುವ ವಿವಿಧ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳು- ಸಂಘಟನೆಗಳು ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಕರ್ನಾಟಕದ ಹೊರಗಿರುವ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿನ ಸಹ, ಸಹಾಯಕ ಹಾಗೂ ಪ್ರಾಧ್ಯಾಪಕ ಹುದ್ದೆಗಳನ್ನು ಖಾಲಿ ಉಳಿಸಲಾಗಿದೆ. ರಾಜ್ಯದೊಳಗಿರುವ ಅನೇಕ ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದಕ್ಕಿಂಥ ಭಿನ್ನವಾಗಿಲ್ಲ. ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಇಂತಹ ವಿಶ್ವವಿದ್ಯಾಲಯಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡಲಾಗಿದೆ. ಆದರೆ ಈ ಅನುದಾನ ಬಳಕೆಯಾಗಿರುವುದು ಯಾವ ಉದ್ದೇಶಕ್ಕೆ ಎಂದು ಕೇಳಿದರೆ ಅದಕ್ಕೆ ಸ್ಪಷ್ಟ ಹಾಗೂ ಸಮಾಧಾನಕರ ಉತ್ತರ ಸಿಗಲಾರದು. ಅನುವಾದ ಅಕಾಡೆಮಿಯಲ್ಲಿ ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳ ಮರುಮುದ್ರಣಕ್ಕೆ ನೀಡಿದಷ್ಟು ಒತ್ತನ್ನು ಹೊಸ ಅನುವಾದಕರ ಸೃಷ್ಟಿಗೆ ನೀಡುತ್ತಿಲ್ಲ.
ಈಗಾಗಲೇ ಕನ್ನಡ ಎಂ.ಎ., ಪದವೀಧರರನ್ನು ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆರು ತಿಂಗಳಿಗೆ ಒಮ್ಮೆ ವೇತನ ಸಂದಾಯವಾಗುತ್ತಿದೆ. ಖಾಸಗಿ ಪದವಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಕನ್ನಡೇತರ ವಿಷಯ ಹಾಗೂ ಭಾಷೆಗಳಿಗಿಂಥ, ಕನ್ನಡ ಉಪನ್ಯಾಸಕರಿಗೆ ಅತ್ಯಂತ ಕಡಿಮೆ  ವೇತನವನ್ನು ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕಾಲೇಜುಗಳಲ್ಲಿ ಸು. ೨೫೦೦ ರೂಗಳಿಂದ ೮೦೦೦ ಸಾವಿರದವರೆಗೆ ಕೂಲಿಯನ್ನು ನೀಡುತ್ತಿದ್ದಾರೆ. ಅರೆಕಾಲಿಕ ಉಪನ್ಯಾಸಕರ ಗೋಳನ್ನು ಕೇಳುವವರೇ ಇಲ್ಲ.
ಬೆಂಗಳೂರಿನ ಅನೇಕ ಕಾಲೇಜುಗಳಲ್ಲಿ ಸೆಮಿಸ್ಟರ್‌ನ ತರಗತಿಗಳನ್ನು ಒಂದು ತಿಂಗಳಿಗೆ ಇಂತಿಷ್ಟು ಎಂದು ಗುತ್ತಿಗೆ ಆಧಾರದಲ್ಲಿ ನಡೆಸುವ ಕಾಲೇಜುಗಳೂ ಅಸ್ತಿತ್ವದಲ್ಲಿವೆ. ಪಿಯುಸಿ ಕಾಲೇಜುಗಳಲ್ಲಿ ನವೆಂಬರ್ - ಡಿಸೆಂಬರ್ ತಿಂಗಳೊಳಗೆ ಕನ್ನಡ ತರಗತಿಗಳನ್ನು ಮುಗಿಸಿಕೊಡಬೇಕೆಂಬ ಅಲಿಖಿತ ನಿಯಮವನ್ನು ಅನೇಕ ಕಾಲೇಜುಗಳಲ್ಲಿ ಜಾರಿಗೆ ತರಲಾಗಿದೆ. ಇದನ್ನು ಪ್ರತಿಭಟಿಸಿದರೆ, ತಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ - ಎಂದು ಈ ಅನ್ಯಾಯವನ್ನು ಯಾರೂ ಪ್ರತಿಭಟಿಸಲು ಮುಂದೆ ಬರುತ್ತಿಲ್ಲ. ಕನ್ನಡ ಭಾಷೆಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಅತ್ಯಂತ ಕೀಳಾಗಿ ಪರಿಗಣಿಸಿವೆ. ನಾಮಕಾವಸ್ಥೆಗೆ ಕನ್ನಡ ಬೋಧನೆಗೆ ಅವಕಾಶ ನೀಡಲಾಗುತ್ತಿದೆ. ಕನ್ನಡ ಎಂ.ಎ., ಪದವೀಧರರಲ್ಲಿ ಈ ಬಗೆಯ ಸಂಸ್ಥೆಗಳು ಕೀಳರಿಮೆಯನ್ನು ಹುಟ್ಟಿಸುತ್ತಿವೆ.
ಕನ್ನಡ ಮಾಧ್ಯಮ ಹಾಗೂ ಕನ್ನಡ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ ಮೊದಲಾದ ಸಮಾಜ ವಿಜ್ಞಾನ ವಿಷಯಗಳ ಅಸಂಖ್ಯಾತ ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ.
ಈ ಕುರಿತು ನಾಡಿನ ಚಿಂತಕರು, ವಿದ್ವಾಂಸರು, ವಿಶ್ವವಿದ್ಯಾಲಯಗಳ ಕುಲಪತಿಗಳು, ಪದವಿ ಹಾಗೂ ಪದವಿಪೂರ್ವ ತರಗತಿಗಳ ಅಧ್ಯಾಪಕರು, ಕನ್ನಡಪರ ಹೋರಾಟಗಾರರು, ಕನ್ನಡದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಯಾವುದೇ ರೀತಿಯಲ್ಲಿ ಕ್ರಿಯಾಶೀಲವಾಗಿಲ್ಲ. ಇನ್ನಾದರೂ ಈ ಸಮಸ್ಯೆಗಳತ್ತ ಗಮನ ಹರಿಸಿ ಆ ಮೂಲಕ ವಿದ್ಯಾವಂತರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
ಇಷ್ಟೆಲ್ಲ ಅವಘಡಗಳು ಲಂಕೇಶ್ ಅವರಿಲ್ಲದ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಇವುಗಳ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಜವಾಬ್ದಾರಿಯನ್ನು ಹೊರುವ ವ್ಯಕ್ತಿಗಳು ಹಾಗೂ ಸಂಘಟನೆಗಳ ಅವಶ್ಯಕತೆ ಇಂದು ತೀರಾ ತುರ್ತಾಗಿ ನಡೆಯಬೇಕಾಗಿದೆ.
       

No comments:

Post a Comment