Search This Blog

Monday 28 April 2014

  ಕುಲಪತಿ ನೇಮಕ: ಆಯ್ಕೆ ಮಾನದಂಡ ಬದಲಾಗಲಿ 
                                                                          ಪ್ರದೀಪ್ ಮಾಲ್ಗುಡಿ
ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರ ನೇಮಕಾತಿಯಲ್ಲಿ ನಡೆಯುತ್ತಿರುವ ವಿವಿಧ ವಲಯಗಳ ಹಸ್ತಕ್ಷೇಪಗಳು ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿವೆ. ಹೈಕೋರ್ಟ್ ಕೂಡ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳ ಮುಂದುವರಿಕೆಯನ್ನು ಕುರಿತು ವಿವರಣೆ ಕೇಳಿ ರಾಜ್ಯಪಾಲರಿಗೆ ನೋಟೀಸ್ ನೀಡಿದೆ. ಇತ್ತೀಚೆಗೆ ದಾವಣಗೆರೆ ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ.ಯೂ.ಆರ್.ಅನಂತಂಮೂರ್ತಿಯವರು ನೇಮಕಾತಿ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಸಾಂವಿಧಾನಿಕವಾಗಿ ಉನ್ನತ ಹುದ್ದೆಯಲ್ಲಿರುವ ಮಾಜಿ ಕಾನೂನು ಸಚಿವ ಹಾಗೂ ಹಾಲಿ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ವೈಯಕ್ತಿಕ ಅವಹೇಳನಕ್ಕೆ ಮುಂದಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇಲ್ಲಿ ಪ್ರಶ್ನೆಗಳಿರುವುದು ಉನ್ನತ ಹುದ್ದೆಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಈಗ ಅನುಸರಿಸುತ್ತಿರುವ ಮಾನದಂಡಗಳು ಸಮಾಧಾನಕರವಾಗಿಲ್ಲ ಎಂಬುದರ ಕುರಿತು. ಈ ಬಗೆಯ ತಕರಾರುಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಉನ್ನತ ಅಧಿಕಾರ ಹೊಂದಿರುವವರು ಪರಿಗಣಿಸಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗಿದೆ.
ಕೇಂದ್ರ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಉನ್ನತ ವಿದ್ಯಾಭ್ಯಾಸವನ್ನು ಕೇಂದ್ರವಾಗಿಟ್ಟುಕೊಂಡು ನಿರಂತರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಮುಖ್ಯವಾಗಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುವವರ ಈಗಿನ ಪ್ರಮಾಣ ಶೇ ೫ರಿಂದ ಶೇ ೮ಕ್ಕೆ ಏರಿಸುವ ಗುರಿಯನ್ನು  ಸಾಧಿಸುವ ಪ್ರಯತ್ನವನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಬೇಕಾಗಿದೆ.
ಎಲ್ಲ ವಿಶ್ವವಿದ್ಯಾಲಯಗಳನ್ನು ಜಾತಿ ಕೇಂದ್ರಿತವಾಗಿ ಗುರುತಿಸಲಾಗುತ್ತಿದೆ. ಅದಕ್ಕೆ ಕಾರಣಗಳು ಸ್ಪಷ್ಟವಾಗಿವೆ. ಸಾಮಾಜಿಕವಾಗಿ ಮೇಲ್ಜಾತಿ ಹಾಗೂ ಕೆಳಜಾತಿ ಎಂದು ಪರಿಭಾವಿಸಿರುವ ಎಲ್ಲ ಜಾತಿಯವರು ಉನ್ನತ ಅಧಿಕಾರವನ್ನು ವಹಿಸಿಕೊಂಡಾಗಲೆಲ್ಲ ತಮ್ಮತಮ್ಮ ಜಾತಿಯವರಿಗೆ ಮೆರಿಟ್, ಮೀಸಲಾತಿ ಮಾನದಂಡಗಳನ್ನು ಮೀರಿ ಹುದ್ದೆಗಳನ್ನು ದಯಪಾಲಿಸುವ ಪವಾಡಗಳನ್ನು ನಡೆಸಿದ್ದಾರೆ. ಸ್ವಜನಪಕ್ಷಪಾತ, ಸ್ವಜಾತಿ ಮೋಹ, ಹಣ, ಸಿದ್ಧಾಂತ, ಅಧಿಕಾರದ ಒತ್ತಡಗಳನ್ನು ಮೀರಿ ಉನ್ನತ ಶಿಕ್ಷಣ ಕೇಂದ್ರಗಳು ಕಾರ‍್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ.
ಇತ್ತೀಚಿನ ವಿಶ್ವವಿದ್ಯಾಲಯಗಳ ಬಹುತೇಕ ನೇಮಕಾತಿಯಲ್ಲಿ ಅನೇಕ ಅಕ್ರಮಗಳು ನಡೆದಿರುವುದನ್ನು ಆತ್ಮಸಾಕ್ಷಿ ಇದ್ದ ಪಕ್ಷದಲ್ಲಿ ಸ್ವತಃ ಕುಲಾಧಿಪತಿಗಳು, ಕುಲಪತಿಗಳು, ನೇಮಕಗೊಂಡವರು ಹಾಗೂ ಉದ್ಯೋಗ ವಂಚಿತರು ಅಲ್ಲಗಳೆಯಲಾರರು. ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣದ ಮೂಲೋದ್ದೇಶಗಳು ಮಸುಕಾಗುತ್ತಿರುವುದನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ.
ಉನ್ನತ ಶಿಕ್ಷಣ ಕ್ಷೇತ್ರವು ಜ್ಞಾನವನ್ನು ಹಂಚುವ, ವಿಸ್ತರಿಸುವ, ದೇಶೀ ಚಿಂತನಕ್ರಮಗಳನ್ನು ರೂಪಿಸುವ ಹಾಗೂ ಸಾಮಾಜಿಕ ಅಸಮತೋಲನವನ್ನು ನಿವಾರಿಸಲು ಇರುವ ಬಹುದೊಡ್ಡ ಸಾಧನ. ಆದರೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಈ ದೇಶದ ಸಾಮಾಜಿಕ ಚಲನೆಯ ಸಾಧ್ಯತೆಯೇ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಆಯ್ಕೆ ಸಮಿತಿ ಸದಸ್ಯರು, ಆಕಾಂಕ್ಷಿತರು ಈ ಅಂಶಗಳನ್ನು ಮನಗಂಡು ಕ್ರಿಯಾಶೀಲವಾಗಬೇಕಾಗಿದೆ.

     

No comments:

Post a Comment