Search This Blog

Monday 21 April 2014

ನಿಜದ ನಾಡೋಜನನ್ನು ನೆನೆದು
                                                                                                                       ಪ್ರದೀಪ್ ಮಾಲ್ಗುಡಿ
ಕನ್ನಡದ ಪ್ರಮುಖ ಸಂಸ್ಕೃತಿ ಚಿಂತಕರು ಹಾಗೂ ಪ್ರಾಧ್ಯಾಪಕರಾದ ಕಿ.ರಂ.ನಾಗರಾಜ ಅವರು ಸದಾ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಮೊದಲಾದ ಬಹುಶಿಸ್ತೀಯ ವಾಗ್ವಾದಗಳೊಡನೆ ಮುಖಾಮುಖಿಯಾಗುತ್ತಿದ್ದರು. ಸಾಹಿತ್ಯ (ಅಭಿಜಾತ, ಸಮಕಾಲೀನ, ಜಾನಪದ, ತೌಲನಿಕ), ಭಾಷಾವಿಜ್ಞಾನ, ಸಾಹಿತ್ಯ ಚರಿತ್ರೆ, ಕಾವ್ಯಮೀಮಮಾಂಸೆ,  ವಿಮರ್ಶಾ ಸಿದ್ಧಾಂತಗಳು ಮುಂತಾದ ಕ್ಷೇತ್ರಗಳಲ್ಲಿ ಅವರಿಗಿದ್ದ ನಿರಂತರವಾದ ಆಸಕ್ತಿ, ಸಾಹಿತ್ಯದೆಡೆಗಿನ ಉಗ್ರ ನಿಷ್ಠೆ, ಸಾಹಿತ್ಯದ ಮೇಲಿನ ಅಪಾರ ನಂಬುಗೆಗಳ ಕಾರಣದಿಂದಾಗಿ ಅವರು ಸಾಹಿತ್ಯದ ವಕ್ತಾರರಾಗಿದ್ದರು. ನಿಜದ ನಾಡೋಜರಾಗಿದ್ದ ಕಿ.ರಂ. ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪಠ್ಯಗಳ ಆಚೆಗೂ ಅನೇಕರನ್ನು ಒಳಗೊಂಡವರಾಗಿದ್ದರು.
ಸಾಹಿತ್ಯ, ಭಾಷಾವಿಜ್ಞಾನ, ಸಾಹಿತ್ಯ ಚರಿತ್ರೆ, ಕಾವ್ಯಮೀಮಮಾಂಸೆ,  ವಿಮರ್ಶಾ ಸಿದ್ಧಾಂತಗಳು ಮುಂತಾದ ಕ್ಷೇತ್ರಗಳಲ್ಲಿ ಆಳವಾದ ತಿಳುವಳಿಕೆಯಿತ್ತು. ಕಿ.ರಂ.,  ಮೇಲಿನ ಬಹುಶಿಸ್ತೀಯ ಜ್ಞಾನವನ್ನು ಅಧ್ಯಾಪನದ ಸಂದರ್ಭದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದರು. ಇದರ ಪರಿಣಾಮದಿಂದಾಗಿ ವಿದ್ಯಾರ್ಥಿಗಳು ಅನೇಕ ಶಿಸ್ತುಗಳ ಜ್ಞಾನವನ್ನು ಏಕಕಾಲಕ್ಕೆ ಪಡೆಯಬಹುದಾಗಿತ್ತು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ೨೦೦೭-೦೮ರಲ್ಲಿ ಕಿ.ರಂ.ರವರು ನಮಗೆ ಅತಿಥಿ ಉಪನ್ಯಾಸಕರಾಗಿ ತರಗತಿಗಳನ್ನು ನಡೆಸುತ್ತಿದ್ದರು. ಜಿ.ರಾಜಶೇಖರ್‌ರವರ ’ಯಶೋಧರ ಚರಿತೆಯ ದ್ವಂದ್ವ ವಿನ್ಯಾಸ’, ಕೆ.ವಿ.ನಾರಾಯಣರವರ ’ಕನ್ನಡಿಗಳು ಇನ್ನು ಸಾಕು’, ರಾಜೇಂದ್ರ ಚೆನ್ನಿಯವರ ’ಕುಸುಮಬಾಲೆಯ ನಿರಚನವಾದಿ ಓದು’, ಡಿ.ಆರ್.ನಾಗರಾಜ್ ಅವರ ’ಕನ್ನಡ ರಾಷ್ಟೀಯತೆಯ ಸ್ವರೂಪ’, ಮೊದಲಾದ ವಿಮರ್ಶಾ ಲೇಖನಗಳ ಜೊತೆಗೆ ’ಸ್ಯಾಫೋ ಕಾವ್ಯ’, ’ಓಡಿಸ್ಸಿ’, ’ಅಭಿಜ್ಞಾನ ಶಾಕುಂತಲ’ ಮುಂತಾದ ಪಠ್ಯಗಳನ್ನು ಬೋಧಿಸುತ್ತಿದ್ದರು.
ಸರ್ ಈ ಕವನ ಅರ್ಥ ಆಗ್ಲಿಲ್ಲ ಸರ್ ಎಂದರೆ ಅರ್ಥ ಯಾಕ್ರೀ ಮಾಡ್ಕೊಳ್ಳೋಕ್ ಹೋದ್ರಿ?  'ಕಾವ್ಯದ ಓದು  ಎಂದರೆ ಅದೊಂದು ಪ್ರಯಾಣ ಕಣ್ರೀ' ಎಂದು ಅವರದೇ ಆದ ಶೈಲಿಯಲ್ಲಿ ನಗುತ್ತಿದ್ದರು. ಬೇಂದ್ರೆಯವರು ಮಹಾಕಾವ್ಯ ಬರೆದಿಲ್ವಲ್ಲ ಸಾರ್? ಎಂದಾಗ ಯಾಕ್ರೀ ಬರೀಬೇಕು? ಎಂದು ಪ್ರಶ್ನಿಸಿ ತಬ್ಬಿಬ್ಬಾಗಿಸಿದ್ದರು. ಆ ಕಾಲಕ್ಕೆ ನನಗೆ ಮಹಾಕಾವ್ಯ ಬರೆದವರಷ್ಟೇ ಸತ್ವಶಾಲಿಯಾದ ಕವಿ ಎಂಬ ಅನಿಸಿಕೆ ಇತ್ತು. ಮುಂದಿನ ದಿನಗಳಲ್ಲಿ ಕಿ.ರಂ. ಈ ಅಭಿಪ್ರಾಯವನ್ನು ಬದಲಿಸಿದರು.
ಬೋಧನೆಯ ಸಂದರ್ಭದಲ್ಲಿ ಅವರದು ಮೌಖಿಕ ಸಂಪ್ರದಾಯ. ಪಠ್ಯಕ್ಕೆ ಸಂಬಂಧಿಸಿದ ಅನೇಕ ಕವನ, ಪಠ್ಯ, ಪ್ರಸಂಗಗಳನ್ನು ಬೆರಳನ್ನು ಉಜ್ಜಿ ಕೊಳ್ಳುತ್ತಾ, ನೆನಪಿನಿಂದ ಎತ್ತಿಕೊಂಡು ಹಾಗೇ ಉದ್ಧರಿಸಿ, ಸಂದರ್ಭಕ್ಕೆ ತಕ್ಕಂತೆ ವ್ಯಾಖ್ಯಾನಿಸಿ - ಬೋಧನೆಯನ್ನು ಆಕರ್ಷಕ ಹಾಗೂ ಅರ್ಥಪೂರ್ಣಗೊಳಿಸುತ್ತಿದ್ದರು. ಅವರು ತರಗತಿಗೆ ಬರುವುದು ಸಮಯಕ್ಕೆ ಸರಿಯಾಗಿದ್ದರೂ ಎಂದೂ ಒಂದೇ ಗಂಟೆಗೆ ತರಗತಿಯನ್ನು ಮುಗಿಸುತ್ತಿರಲಿಲ್ಲ. ಗಂಟೆಯ ಸೀಮಿತ ವೃತ್ತಕ್ಕೆ ಸಿಕ್ಕು ಬೋಧಿಸುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಒಂದು ವಿಷಯಕ್ಕೆ ಸೀಮಿತವಾಗಿ ಅವರು ಎಂದೂ ಬೋಧಿಸಿದ ನೆನಪಿಲ್ಲ. ವಿಮರ್ಶೆಯಿರಲಿ,  ಪುನರ್ಮನನ ಶಿಬಿರಗಳ ಅವರ ಬೋಧನೆಯಾಗಲಿ, ಪುಸ್ತಕ ಬಿಡುಗಡೆಯ ಮಾತುಗಳಾಗಿರಲಿ, ಪಠ್ಯಗಳ ಬೋಧನೆಯಿರಲಿ, ಕಾವ್ಯಮಂಡಲದ ಎಂ.ಫಿಲ್., ತರಗತಿಗಳಿರಲಿ ಅಥವಾ ಅವರು ಇಷ್ಟಪಡುವ ಪಟ್ಟಾಂಗ  ಹೊಡೆಯುವ ಹರಟೆಗಳಿರಲಿ - ಈ ಎಲ್ಲ  ಸಂದರ್ಭಗಳಲ್ಲೂ ಮೀಮಾಂಸೆ, ವಿಮರ್ಶೆ, ಭಾಷಾವಿಜ್ಞಾನದ ಅನೇಕ ಆಳವಾದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಹಿಡಿದು, ಮಿದಿದು ವ್ಯಾಖ್ಯಾನಿಸುತ್ತಿದ್ದ ಪರಿ ಅನನ್ಯವಾದುದು.
ಎಂ.ಎ., ಓದುವಾಗಿನ ಅವರ ಕೆಲಕಾಲದ ಒಡನಾಟವನ್ನು ಶಾಶ್ವತಗೊಳಿಸಿಕೊಳ್ಳುವ ತವಕ ಲಕ್ಷ್ಮೀಕಾಂತ್, ಪುಟ್ಟರಾಜ ಹಾಗೂ ನನಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಅವರ ಮಾತುಗಳನ್ನು ದಿನವಿಡೀ ಕೇಳುವ ಬಯಕೆಯಾಗುತ್ತಿತ್ತು. ಕಾರಣಾಂತರಗಳಿಂದ ನಾವು ದ್ವಿತೀಯ ಎಂ.ಎ., ಪ್ರವೇಶಿಸಿದ ನಂತರ ನಮ್ಮ ಪ್ರೀತಿಯ ಮೇಷ್ಟ್ರು ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲವೆಂದು, ತರಗತಿಯ ವೇಳಾಪಟ್ಟಿಯನ್ನು ನೋಡಿದಾಗಲೇ ನಮಗೆ ತಿಳಿದಿದ್ದು. ಆ ನಂತರ ನಮಗೆ ಒಂದು ರೀತಿಯ ಅನಾಥ ಪ್ರಜ್ಞೆ ಕಾಡತೊಡಗಿತು. ಕಳೆದ ವರ್ಷ ನಮ್ಮ ಆತಂಕಗಳನ್ನು ಸ್ವಲ್ಪವಾದರೂ ಕಡಿಮೆ ಮಾಡುತ್ತಿದ್ದ ಕಿ.ರಂ. ಪಾಠವಿಲ್ಲದ ಎಂ.ಎ., ತರಗತಿಗಳನ್ನು ನೆನಪಿಸಿಕೊಂಡಷ್ಟು ನೆಮ್ಮದಿ ಇಲ್ಲದಾಯಿತು. ಆದರೆ ನಾವು ಅಸಹಾಯಕರಾಗಿದ್ದೆವು. ಕಿ.ರಂ. ಸ್ವತಃ ಮತ್ತೆ ಇನ್ನೆಂದೂ ಕನ್ನಡ ಅಧ್ಯಯನ ಕೇಂದ್ರಕ್ಕೆ ಕಾಲಿಡುವುದಿಲ್ಲವೆಂದು ನಿರ್ಧರಿಸಿದಂತಿತ್ತು. ಆ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೆ ಬಂದರೂ ಕನ್ನಡ ಅಧ್ಯಯನ ಕೇಂದ್ರಕ್ಕೆ ಅವರು ಕಾಲಿಡಲಿಲ್ಲ.
ಆದರೆ  ನಾವು ಅವರ ಬೆನ್ನು ಬಿದ್ದೆವು. ವಿವಿಧ ಕ್ಷೇತ್ರದ ಹಿರಿಯರಿಂದ ಕಿರಿಯರವರೆಗೂ ಕಿ.ರಂ.ರವರು ತೋರಿಸುತ್ತಿದ್ದ ಪ್ರೀತಿ, ನೀಡುತ್ತಿದ್ದ ಗೌರವ ನಮ್ಮನ್ನು ಅವರತ್ತ ಸೆಳೆಯುತ್ತಿತ್ತು. ಆಗ ಅವರ ಮನೆಗೆ ನಮ್ಮ ಓಡಾಟ, ಒಡನಾಟ ಶುರುವಾಯಿತು.  ಈ ಅವಧಿಯಲ್ಲೇ ಕಿ.ರಂ. ಕುರಿತು ನಿಜದ ನಾಡೋಜ ಅಭಿನಂದನಾ ಗ್ರಂಥವನ್ನು ತರಬೇಕೆಂಬ ಚರ್ಚೆ ಆರಂಭವಾಯಿತು. ಆದರೆ ಲೇಖನಗಳನ್ನು ಕಿ.ರಂ. ಒಡನಾಡಿಗಳು, ಶಿಷ್ಯರು, ಸ್ನೇಹಿತರ ಬಳಿ ಕೇಳಿದಾಗ ಈಗಾಗಲೇ ಕಿ.ರಂ. ಅಭಿನಂದನಾ ಸಮಿತಿ ರಚನೆಯಾಗಿದೆ. ಲೇಖನಗಳನ್ನು ಅವರಿಗೆ ಕೊಟ್ಟಿದ್ದೇವೆ ಎಂದು ಅನೇಕರು ತಿಳಿಸಿದರು. ದೊಡ್ಡವರು ಈ ಕೆಲಸ ಮಾಡುತ್ತಿರುವಾಗ ಒಳ್ಳೆಯ ಅಭಿನಂದನಾ ಗ್ರಂಥವನ್ನು ನಿರೀಕ್ಷಿಸುತ್ತಾ ನಾವು ಕಿ.ರಂ. ಜೊತೆಗೆ ಒಡನಾಟವನ್ನು ಮುಂದುವರೆಸಿದೆವು. ಆದರೆ ಆ ಅಭಿನಂದನಾ ಗ್ರಂಥ ಇನ್ನೂ ಬಂದಿಲ್ಲ. ಈ ನಡುವೆಯೇ ಕಿ.ರಂ. ನಮ್ಮಿಂದ ದೈಹಿಕವಾಗಿ ದೂರವಾದರು.
ಈ ಆಘಾತದಿಂದ ನಮ್ಮಲ್ಲನೇಕರು ಎಲ್ಲವನ್ನೂ ಕಳೆದುಕೊಂಡಂತಹ ಒತ್ತಡಕ್ಕೆ ಸಿಕ್ಕಿಬಿದ್ದೆವು. ಕುವೆಂಪು, ಬೇಂದ್ರೆ, ಅಡಿಗ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಲಂಕೇಶ್, ನಂಜುಂಡಸ್ವಾಮಿ, ತೇಜಸ್ವಿ ಮೊದಲಾದವರನ್ನು ಕುರಿತ ಸೆಮಿನಾರ್, ಕಿ.ರಂ. ಅವರು ಕಾವ್ಯಮಂಡಲದಿಂದ ಪ್ರಕಟಿಸಬೇಕೆಂದುಕೊಂಡಿದ್ದ; ನಮ್ಮಂತಹ ಯುವಕರಿಂದ ಸಂಪಾದಿತ ಕವನ, ಕತೆ, ಪ್ರಬಂಧ, ವಿಮರ್ಶೆ, ವೈಚಾರಿಕ, ಮೀಮಾಂಸೆ ಹೀಗೆ ವಿವಿಧ ಬಗೆಯ ಸಂಕಲನಗಳು ಹಾಗೂ ಅವರ ಮಾರ್ಗದರ್ಶನದಲ್ಲಿ ನಾವು ಹೊರತರಬೇಕೆಂದುಕೊಂಡ ಮಾಯೆ ಮಾಸಪತ್ರಿಕೆ... ಇನ್ನೂ ಇಂತಹ ಸಾವಿರಾರು ಕನಸುಗಳು... ಹಾಗೇ ಉಳಿದಿವೆ.
ಹೀಗೆ ದಿನಗಳು ಪೇಲವವಾಗಿ ನಡೆಯುತ್ತಿರಬೇಕಾದರೆ ಅವರ ನೆನಪಿನಲ್ಲಿ ಒಂದು ಕಾರ‍್ಯಕ್ರಮ ಮಾಡಬೇಕೆಂದು ಸಂಸ ಸುರೇಶ್, ಲಕ್ಷ್ಮೀಕಾಂತ್ ಮತ್ತು ನಾನು ನಿರ್ಧರಿಸಿದೆವು. ಆಗ ನಮ್ಮ ಹಳೆಯ ನಿಜದ ನಾಡೋಜ ಅಭಿನಂದನಾ ಗ್ರಂಥವನ್ನು ತರಬೇಕೆಂಬ ಆಸೆ ಮತ್ತೆ ಚಿಗುರೊಡೆಯಿತು. ಕಿ.ರಂ. ಬಗೆಗೆ ಇದುವರೆಗೆ ಅಲ್ಲಲ್ಲಿ ಪ್ರಕಟವಾದ ಲೇಖನಗಳು ಹಾಗೂ ಕವಿತೆಗಳ ಜೊತೆಗೆ ಹೊಸ ಲೇಖನಗಳು, ಅವರ ಕೃತಿಗಳನ್ನು ಕುರಿತ ಲೇಖನಗಳನ್ನು ಸಂಪಾದಿಸಬೇಕೆಂದು ಸ್ನೇಹಿತರು ನನಗೆ ಜವಾಬ್ದಾರಿಯನ್ನು ವಹಿಸಿದರು. ಅಭಿನಂದನಾ ಗ್ರಂಥಗಳನ್ನು ಓದಿದ್ದ ನನಗೆ ಆ ಗ್ರಂಥಗಳಲ್ಲಿರುವ ಅಭಿನಂದನಾ ಸಮಿತಿ, ಸಂಪಾದಕ ಮಂಡಳಿ, ಸಲಹಾ ಸಮಿತಿ, ಪುಸ್ತಕ ಪ್ರಕಟಣಾ ಸಮಿತಿ ಇತ್ಯಾದಿಗಳನ್ನು ನೆನೆದು ನನ್ನ ಕೈಯಿಂದ ಈ ಕೆಲಸ ಸಾಧ್ಯವೇ? ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ಆದರೆ ಕಿ.ರಂ. ಮೇಷ್ಟ್ರ ಒಡನಾಡಿಗಳ ಬಗೆಗೆ ನಂಬಿಕೆ ಹುಟ್ಟಿತು. ಆ ನಂತರ ಅನೇಕರನ್ನು ಈ ಕುರಿತು ಲೇಖನ ಹಾಗೂ ಕವಿತೆಗಳನ್ನು ಕೇಳುವ ಕಾಯಕ ಮುಂದುವರೆಯಿತು. ಅನೇಕರು ಆ ಆಘಾತದಿಂದ ಹೊರಬರಲು ಇನ್ನೂ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಬರೆಯಲೇಬೇಕಾಗಿದ್ದ ಹಲವರು ಬರೆಯಲಿಲ್ಲ. ಇನ್ನು ಕೆಲವರು ನನ್ನ ಕರೆಯನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದರು. ಈ ಎಲ್ಲವುಗಳ ನಡುವೆಯೇ ನಿಜದ ನಾಡೋಜ ಕೃತಿ ರೂಪುಗೊಂಡಿತು. ಈ ಕೃತಿಯಲ್ಲಿ ಸಂಪಾದಕ ಎಂದು ನೆಪಮಾತ್ರಕ್ಕೆ ನನ್ನ ಹೆಸರಿದೆಯಷ್ಟೆ. ನನ್ನ ಅನೇಕ ಸ್ನೇಹಿತರು ಈ ಪುಸ್ತಕಕ್ಕಾಗಿ ಹಗಲಿರುಳು ನನ್ನ ಜೊತೆ ಯೋಗೀಶ, ಲಕ್ಷ್ಮೀಕಾಂತ ಹಾಗೂ ರೀಗಲ್ ಪ್ರಿಂಟ್ಸ್ ಸರ್ವೀಸ್‌ನ ವೆಂಕಟೇಶ್ ಅವರು ದುಡಿದಿದ್ದಾರೆ.
ನಿಜದ ನಾಡೋಜ ಕೃತಿ ಬಿಡುಗಡೆ ವಿಶಿಷ್ಟವಾಗಿರಬೇಕೆಂದು  ಎಲ್.ಎನ್.ಮುಕುಂದರಾಜ್ ಅವರು ಕಾರ‍್ಯಕ್ರಮದ ಉದ್ಘಾಟನೆಯನ್ನು ಡಾ.ಚಂದ್ರಶೇಖರ ಕಂಬಾರ ಅವರು, ಕೃತಿ ಬಿಡುಗಡೆಯನ್ನು ಶೂದ್ರ ಶೀನಿವಾಸ್ ಅವರು, ಮುಖ್ಯ ಅತಿಥಿಗಳಾಗಿ ಪ್ರೊ. ಯೂ.ಆರ್. ಅನಂತಮೂರ್ತಿಯವರು, ಶ್ರೀಮತಿ ಕೆ.ಎನ್.ಸಹನ ಅವರು ಹಾಗೂ ಅಧ್ಯಕ್ಷತೆಯನ್ನು ಡಾ.ಕೆ.ಮರುಳಸಿದ್ದಪ್ಪ ಅವರು ವಹಿಸಿಕೊಳ್ಳಲಿ ಎಂದು ತೀರ್ಮಾನಿಸಿದರು. ಅಂತಿಮವಾಗಿ ಅನಾರೋಗ್ಯದ ಕಾರಣದಿಂದಾಗಿ ಅನಂತಮೂರ್ತಿಯವರು ಕಾರ‍್ಯಕ್ರಮಕ್ಕೆ ಬರುತ್ತೇನೆ, ವೇದಿಕೆಯ ಮೇಲಿರಲು ನನ್ನಿಂದ ಸಾಧ್ಯವಿಲ್ಲವೆಂದು ತಿಳಿಸಿದರು. ಅದರಂತೆಯೆ ಬಂದು ನಮ್ಮಂತಹ ಯುವಕರನ್ನು ಹುರಿದುಂಬಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ೦೬.೦೮.೨೦೧೧ ರಂದು ಕಿ.ರಂ.ನುಡಿನಮನ ಕಾರ‍್ಯಕ್ರಮದಲ್ಲಿ ಬೆಳಿಗ್ಗೆ ಕೃತಿ ಬಿಡುಗಡೆ ಹಾಗೂ ಮಧ್ಯಾಹ್ನ ಡಾ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಹಿರಿಕಿರಿಯ ಕವಿ ಹಾಗೂ ಕಲಾವಿದರಿಂದ ಕಿ.ರಂ. ನೆನಪಿನ ಕವಿಗೋಷ್ಠಿ ನಡೆಯಿತು.
ಕಿ.ರಂ.ರವರು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗೌರವ ಹಾಗೂ ಅವರಲ್ಲಿ ಮೂಡಿಸುತ್ತಿದ್ದ ಆತ್ಮಗೌರವಕ್ಕೆ ಇನ್ನೊಂದು ಘಟನೆ ನೆನಪಾಗುತ್ತದೆ. ಒಂದು ದಿನ ಬೆಳಿಗ್ಗೆ ಯಾವುದೋ ಕಾರ‍್ಯಕ್ರಮಕ್ಕೆ ಹೋಗೋಣ ಬನ್ನಿ ಎಂದು ಹಿಂದಿನ ದಿನ ನನ್ನನ್ನು ಕರೆದಿದ್ದರು. ಬೆಳಿಗ್ಗೆ ಕಿ.ರಂ. ಮನೆ ತಲುಪಿದೆ. ಆಗ ಹಾಲು ಹಾಕುವವರು, ಹಾಲನ್ನು ಬಾಗಿಲಿನ ಒಳಗೆ ಇರಿಸಿ ಹೋದರು. ಕಿ.ರಂ. ರವರು, ಯಾವುದೋ ಪುಸ್ತಕ ಹುಡುಕುತ್ತಿದ್ದರು. ನಾನು ಆ ಹಾಲಿನ ಪ್ಯಾಕೆಟ್‌ಗಳನ್ನು ಎತ್ತಿಕೊಂಡೆ. ಆ ಕ್ಷಣದಲ್ಲೇ, ತಾವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಅದನ್ನ ಇಡ್ರೀ ಅಲ್ಲಿ ಎಂದರು. ನಾನು ಪರವಾಗಿಲ್ಲ ಬಿಡಿ ಸರ್ ಎಂದೆ. ಕಿರಂ ಮತ್ತೆ, ಸ್ವಲ್ಪ ಸಿಡಿಮಿಡಿಗೊಂಡು ಅಲ್ಲೇ ಇಡ್ರೀ ಅದನ್ನ ಎಂದು ಧ್ವನಿ ಎತ್ತರಿಸಿದರು. ಅದಕ್ಕೂ ಬಗ್ಗದ ನಾನು ಇರಲಿ ಬಿಡಿ ಸರ್ ಎಂದಾಗ. ಅವರು ಅಲ್ಲಿ ಇಡ್ಬೇಕಷ್ಟೇ ಎಂದು ಕಿರುಚಿದರು. ಆ ಕ್ಷಣದಲ್ಲೆ ಎತ್ತಿಕೊಂಡ ಹಾಲಿನ ಪ್ಯಾಕೆಟ್‌ಗಳನ್ನು ಅಲ್ಲೇ ಇಟ್ಟೆ. ನಂತರ ಅವರೇ ಬಂದು, ಆ ಹಾಲಿನ ಪ್ಯಾಕೆಟ್‌ಗಳನ್ನು ಎತ್ತಿಕೊಂಡು, ಕಲ್ಗುಡಿ ಮೇಷ್ಟ್ರು, ನಟರಾಜ್ ಹುಳಿಯಾರ್, ದಳವಾಯಿ, ಸುಮಿತ್ರ ಮೇಡಂ ಅವರತ್ರ ಹೋದಾಗ್ಲೂ ಹೀಗೆ ಮಾಡ್ತೀರೇನ್ರೀ? ಅವರೆಲ್ಲ ಈ ತರದ ಕೆಲಸಗಳನ್ನೆಲ್ಲ ನಿಮ್ಮತ್ರ ಮಾಡ್ಸಲ್ಲ ತಾನೇ? ನನ್ನತ್ರ ಬಂದಾಗ ಕೂಡ ಹಾಗೆ ಇರ‍್ಬೇಕು. ಈ ಎಲ್ಲ ಕೆಲಸಗಳು ನನ್ನವು, ನಾನೇ ಮಾಡ್ಕೋಬೇಕು ಎಂದರು. ಬಿಸಿಬಿಸಿ ಕಾಫಿ ಮಾಡಿಕೊಟ್ಟು ಮರುಕ್ಷಣದಲ್ಲೇ ಏನೂ ನಡೆದೇ ಇಲ್ಲವೆಂಬಂತೆ, ಹೊರಡಲು ಸಿದ್ಧತೆ ಮಾಡಿಕೊಳ್ಳತೊಡಗಿದರು. ಕ್ಷಣದ ಹಿಂದೆ ನಡೆದ ಕಿರುಚಾಟಕ್ಕೂ, ಈಗಿನ ಶಾಂತ ಕಿ.ರಂ. ರವರಿಗೂ ಯಾವ ಸಂಬಂಧವೂ ಇರಲಿಲ್ಲ. ಇಂತಹ ಅಸಂಖ್ಯ ಪ್ರಸಂಗಗಳು ಅವರ ಜೊತೆ ಕಳೆದ ದಿನಗಳಲ್ಲಿ ಸಾಮಾನ್ಯವಾಗಿರುತ್ತಿದ್ದವು. ಇದು ಕಿ.ರಂ.ರವರು ತಮ್ಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗೌರವಕ್ಕೆ ಒಂದು ಚಿಕ್ಕ ಉದಾಹರಣೆ ಮಾತ್ರ. ನನ್ನ ಅವರ ನಾಲ್ಕು ವರ್ಷದ ಒಡನಾಟದಲ್ಲಿ ಒಮ್ಮೆಯೂ ನನ್ನನ್ನು ಅವರು ತಮ್ಮ ವೈಯಕ್ತಿಕ ಅಥವಾ ಕಾವ್ಯಮಂಡಲದ ಕೆಲಸಕ್ಕೆ ಬಳಸಿಕೊಂಡ ನೆನಪಿಲ್ಲ. ಒಮ್ಮೆ ವೆಂಕಟೇಶ ಮೂರ್ತಿಯವರು ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡುವಂತೆ ನನಗೆ ಕೊಡಲು ಬಂದರು. ಆದರೆ ಕಿ.ರಂ. ಅದನ್ನು ಕೂಡ ನನ್ನಿಂದ ಮರಳಿ ಪಡೆದರು. ಈ ಬಗೆಯ ಗುರು ಪರಂಪರೆಯನ್ನು ನಾನೆಲ್ಲೂ ಕಂಡಿಲ್ಲ. ಕನ್ನಡ ಪ್ರಜ್ಞೆಯ ವಿಸ್ತರಣೆಗೆ ಅವರು ನಮ್ಮಂಥ ಯುವ ಜನರ ಮೇಲೆ ನಂಬಿಕೆ ಇಟ್ಟಿದ್ದರೆನ್ನಿಸುತ್ತದೆ. ಆ ಕಾರಣದಿಂದಾಗಿಯೇ ಸಮಕಾಲೀನರೊಡನೆ ಹೇಗೆಲ್ಲ ವರ್ತಿಸುತ್ತಿದ್ದರೋ, ನಮ್ಮ ತಲೆಮಾರಿನವರೊಡನೆಯೂ ಅಷ್ಟೇ ಲೀಲಾಜಾಲವಾಗಿ ಬೆರೆಯುತ್ತಿದ್ದರು.
 ನಿಜದ ನಾಡೋಜ ಸಂಕಲನದ ಕವನ, ಲೇಖನಗಳನ್ನು ಓದುತ್ತಾ ಹೋದಾಗ ಕಿರಂ ರವರ ವ್ಯಕ್ತಿತ್ವದ ಅಸಾಮಾನ್ಯತೆ ವ್ಯಕ್ತವಾಗುತ್ತಾ ನನಗೆ ಕಿ.ರಂ.ರ ಮೇಲಿದ್ದ ಪ್ರೀತಿ, ಗೌರವಗಳು ಮತ್ತಷ್ಟು ಹೆಚ್ಚಿದವು. ಕೆ. ಮರುಳಸಿದ್ದಪ್ಪ, ಬಸವರಾಜ ಕಲ್ಗುಡಿ, ಶಿವಪ್ರಕಾಶ್, ರಹಮತ್ ತರೀಕೆರೆ, ಟಿ.ಗೋವಿಂದರಾಜು, ಬಂಜಗೆರೆ ಜಯಪ್ರಕಾಶ್, ಎಸ್.ಆರ್.ವಿಜಯಶಂಕರ್, ವೈ.ಜಿ.ಅಶೋಕ್ ಕುಮಾರ್, ಗುಬ್ಬಿ ರೇವಣಾರಾಧ್ಯ... ಮೊದಲಾದವರು ಕಳೆದಿರುವ ಕಿರಂರ ಜೊತೆಗಿನ ಅನೇಕ ಪ್ರಸಂಗಗಳು, ಕ್ಷಣಗಳನ್ನು ಕಿರಂ ರವರು ನನ್ನಂಥ ಹಲವಾರು ಕಿರಿಯರೊಡನೂ ಕಳೆದಿದ್ದಾರೆ. ಇದು ಕಿರಂರವರು ಎಷ್ಟು ಪ್ರಜಾಪ್ರಭುತ್ವವಾದಿ ಮನಸ್ಸುಳ್ಳವರಾಗಿದ್ದರೆಂಬುದಕ್ಕೆ ಉದಾಹರಣೆ.
ಕಿರಂ ಬದುಕು - ಬರಹ
ಕಿರಂರವರದು ಸದಾ ಅಧ್ಯಯನಶೀಲವಾದ ಬದುಕು. ಅದರಲ್ಲಿ ಸಾಂದರ್ಭಿಕವಾಗಿ ಅವರಿವರ ಒತ್ತಡಕ್ಕೆ ಬರೆದಿದ್ದಾರೆ. ಆದರೆ, ಆ ಬರಹಗಳು ಅವರನ್ನು ಆಳದಲ್ಲಿ ಕಾಡದೆ ರಚನೆಗೊಂಡವುಗಳಲ್ಲ. ಅದು ಅವರ ಕೃತಿಗಳಿಂದಲೇ ವ್ಯಕ್ತವಾಗುತ್ತದೆ. ’ಪ್ರತಿಷ್ಠಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ’ (೧೯೭೩) ಕೃತಿಯಲ್ಲಿ ವ್ಯಕ್ತವಾಗಿರುವ ವಿಚಾರಗಳು ಕಿರಂ ತಮಗೆ ತಾವೇ ಹಾಕಿಕೊಂಡ ನಿಬಂಧನೆಗಳಂತೆ ಈಗ ತೋರುತ್ತಿದೆ. ಅದರ ಅನೇಕ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದನ್ನು ಈಗಾಗಲೇ ಕಿರಂ ರ ಒಡನಾಡಿಗಳು ದಾಖಲಿಸಿದ್ದಾರೆ. ಅವರ ಬದುಕು - ಬರಹವನ್ನು ಮತ್ತಷ್ಟು ಗಾಢವಾಗಿಸಿದ್ದು ಅವರ ನಿರಂತರ ಓದು ಹಾಗೂ ಮಾತುಗಳೆ.
     ‘ನೀಗಿಕೊಂಡ ಸಂಸ’ ಹಾಗೂ ‘ಕಾಲಜ್ಞಾನಿ ಕನಕ’ ನಾಟಕಗಳು ಕಿ.ರಂ.ರ ವ್ಯಕ್ತಿತ್ವದ ಎರಡು ತುಣುಕುಗಳು. ಅವರ ಇಡಿಯಾದ ವ್ಯಕ್ತಿತ್ವದ ಪರಿಚಯವೂ ಸಾಧ್ಯವಾಗದಷ್ಟು ಅವರ ಜೀವನ ವಿಸ್ತಾರವಾಗಿತ್ತು. ರಾಜಕಾರಣಿಗಳು, ಮಠಾಧಿಪತಿಗಳು, ಅಧಿಕಾರಿ ವರ್ಗ, ಅಧ್ಯಾಪಕ ವರ್ಗವಷ್ಟೇ ಅಲ್ಲದೆ ಅವರ ಒಡನಾಟದ ಅಸಂಖ್ಯಾತ ಜನರೊಡನೆ ಅವರ ವ್ಯಕ್ತಿತ್ವದ ವಿವಿಧ ಹಂತಗಳು ಹಂಚಲ್ಪಟ್ಟಿವೆ, ವಿಸ್ತರಿಸಲ್ಪಟ್ಟಿವೆ.
ಸಾಹಿತ್ಯ ಪಕ್ಷಪಾತಿ ಕಿರಂ
      ಕಿರಂ ಸಮಕಾಲೀನ ಸಮಾಜದ ಎಲ್ಲ ಬಗೆಯ ಸಮಸ್ಯೆಗಳಿಗೂ ನಮ್ಮ ಸಾಹಿತ್ಯದಲ್ಲಿಯೇ ಉತ್ತರಗಳಿವೆ ಎಂದು ದೃಢವಾಗಿ ನಂಬಿದ್ದರು. ಅವರ ಈ ಸಾಹಿತ್ಯಕ ನಂಬಿಕೆಯೆ ಅವರನ್ನು ಅನೇಕ ಸಭೆ, ಸಮಾರಂಭ, ಪುಸ್ತಕ ಬಿಡುಗಡೆ, ಸಂವಾದ, ವಿಚಾರ ಸಂಕಿರಣಗಳಲ್ಲಿ ನಿರಂತರವಾಗಿ ಭಾಗವಹಿಸುವಂತೆ ಮಾಡುತ್ತಿತ್ತು. ಈ ಸಭೆ ಸಮಾರಂಭಗಳಲ್ಲಿ ಹೇಳಿದ್ದನ್ನೆ ಹೇಳುವ - ಕೇಳುವಂಥ ವಾತಾವರಣವನ್ನು ಕಿರಂ ಎಂದೂ ಸೃಷ್ಟಿಸಿರಲಿಲ್ಲ.
    ನಾಡಿನ ಪ್ರಖ್ಯಾತ, ಖ್ಯಾತನಾಮರಾದ ವಿಮರ್ಶಕರುಗಳೇ ಆಗಿರಲಿ, ಒಂದೇ ವಿಷಯದ ಬಗ್ಗೆ ಎರಡು ಬಾರಿ ಮಾತನಾಡಿದ್ದು, ಮೂರನೆ ಬಾರಿಗೆ ಅದೇ ವಿಷಯವನ್ನು ಕುರಿತು ಮಾತನಾಡಿದರೆ, ಹೊಸ ಹೊಳಹುಗಳೇನೂ ಸಿಗಲಾರವು. ಆದರೆ, ಕಿರಂರವರು ಬೇಂದ್ರೆ, ಅಲ್ಲಮ, ಅಡಿಗ, ಷರೀಫ, ಮಧುರಚೆನ್ನ, ಕುವೆಂಪು, ಪಂಪ, ಕುಮಾರವ್ಯಾಸ ಮೊದಲಾದವರ ಬಗ್ಗೆ ತರಗತಿಗಳಲ್ಲಷ್ಟೇ ಅಲ್ಲದೆ ಅನೇಕ ಕಡೆ ಮಂಡಿಸಿರುವ ವಿಚಾರಗಳು ಮತ್ತೆ ಮತ್ತೆ ಹೊಸತನದಿಂದ ಕೂಡಿರುತ್ತಿದ್ದವು.
    ಈ ಹೊಸತನವನ್ನು ಕಿ.ರಂ.ತನವೆನ್ನಬಹುದು. ಅವರು ಪ್ರತಿಕ್ಷಣದ ರಾಜಕೀಯ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಭಾಷಿಕ, ಸಾಂಸ್ಥಿಕ, ಸಾಂದರ್ಭಿಕ ಒತ್ತಡಗಳನ್ನು (ಆeಜಿiಟಿe ಮಾಡಿಕೊಳ್ಳುತ್ತಿದ್ದುದೆ - ಸಾಹಿತ್ಯ ಕೃತಿಗಳಿಂದ. ಅದು ಈ ಎಲ್ಲವುಗಳನ್ನು ಒಳಗೊಳ್ಳುವುದು ಸದ್ಯಕಾಲೀನ ಸಾಹಿತ್ಯವೆನ್ನುತ್ತಿದ್ದರು.) ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ತಾವು ಅದನ್ನು ಸಾಹಿತ್ಯ ಕೃತಿಗಳ ಓದಿನಿಂದ ಪಡೆದಿದ್ದೇನೆಂಬುದು ಅವರ ತಿಳುವಳಿಕೆಯಾಗಿತ್ತು. ಆದ್ದರಿಂದಲೆ ಒಂದೆ ವಿಷಯ, ವಸ್ತು, ವ್ಯಕ್ತಿ, ಕೃತಿಗಳ ಬಗೆಗೆ ಕಿರಂ ಅನೇಕ ಆಯಾಮಗಳಲ್ಲಿ ಮಾತನಾಡಬಲ್ಲವರಾಗಿದ್ದರು.
        ಭಾಷಾವಿಜ್ಞಾನ, ಕಾವ್ಯಮೀಮಾಂಸೆ, ಸಾಹಿತ್ಯ ಚರಿತ್ರೆ, ವಿಮರ್ಶಾ ಕ್ಷೇತ್ರಗಳಲ್ಲೂ ಆಳವಾದ ಪರಿಶ್ರಮವಿದ್ದ ಕಿರಂ ಅವುಗಳೆಲ್ಲವನ್ನು ಅಧ್ಯಾಪನದ ಸಂದರ್ಭದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದರು. ಅದರ ಪರಿಣಾಮದಿಂದಾಗಿ ವಿದ್ಯಾರ್ಥಿಗಳು ಅನೇಕ ಜ್ಞಾನಶಿಸ್ತುಗಳ ಬಗೆಗೆ ಏಕಕಾಲಕ್ಕೆ ಜ್ಞಾನ ಪಡೆಯುವಂತಾಗುತ್ತಿತ್ತು. ಈ ಎಲ್ಲ ಜ್ಞಾನಗಳೆಡೆಗೆ ಅವರಿಗಿದ್ದ ನಿರಂತರವಾದ ಆಸಕ್ತಿ, ಸಾಹಿತ್ಯದೆಡೆಗಿನ ಉಗ್ರ ನಿಷ್ಠೆ, ಸಾಹಿತ್ಯದ ಮೇಲಿನ ಅಪಾರ ನಂಬುಗೆಗಳ ಕಾರಣದಿಂದಾಗಿ ಅವರು ಸಾಹಿತ್ಯ ಪಕ್ಷಪಾತಿಯಂತೆ ಕಾಣುತ್ತಿದ್ದರು. ಆದರೆ ಅದು ಮುಂದುವರೆದು ಮಾನವೀಯತೆಯತ್ತ ಸಾಗುತ್ತಿತ್ತು.
ಕಿರಂ ನಿಜದ ಅರ್ಥದಲ್ಲಿ ನಾಡೋಜರಾಗಿದ್ದವರು. ಅವರು ಬರೆದಿಲ್ಲವೆಂಬ ಅವರ ಬಗೆಗಿನ ಮಾತುಗಳು ಸತ್ಯವಲ್ಲ. ಅವರು ಬರೆದ, ಸಂಪಾದಿಸಿದ, ಅನುವಾದಿಸಿದ, ಮುನ್ನುಡಿ, ಹಿನ್ನುಡಿಗಳು ಮತ್ತು ಸಾಹಿತ್ಯವಾರ್ಷಿಕ, ಕನ್ನಡ ವಾರ್ಷಿಕ ಹಾಗೂ ಸಾಂದರ್ಭಿಕವಾಗಿ ಬರೆದ ಲೇಖನ, ನಾಟಕ, ಬರಹ, ಭಾಷಣಗಳನ್ನು ಒಟ್ಟುಗೂಡಿಸಿದರೆ ಸಾವಿರಾರು ಪುಟಗಳ ಸಂಪುಟಗಳು ಸಿದ್ಧವಾಗುತ್ತವೆ. ಸದ್ಯದಲ್ಲೆ ಅವರ ಪ್ರಾತಿನಿಧಿಕ ಸಂಪುಟ ಹೊರಬರಲಿದೆ. ಆಗ ಕಿರಂ ಬರಹದ ಅಗಾಧತೆ ತಿಳಿಯುತ್ತದೆ. ಆದರೆ, ಅವರು ಬರೆದಿಲ್ಲ, ಬರೆದದ್ದು ಕಡಿಮೆ ಎಂಬ ತಿಳುವಳಿಕೆ ಇನ್ನು ಮುಂದೆ ಹಾಗೆ ಉಳಿಯಲಾರದು.
ಸಾಹಿತ್ಯ ಪರಿಚಾರಕ
     ಕನ್ನಡದ ಮುಖ್ಯ ಸಾಂಸ್ಕೃತಿಕ ವಾಗ್ವಾದಗಳಲ್ಲಿ, ಜನಪರ ಚಳುವಳಿಗಳಲ್ಲಿ ಅಂತರ್ಜಲದಂತೆ ಅವಿರತವಾಗಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸಿರುವ ಕಿ.ರಂ. ನಾಗರಾಜರವರಿಗೆ ಜಿ.ಪಿ. ರಾಜರತ್ನಂರವರ ಹೆಸರಿನಲ್ಲಿ ’ಸಾಹಿತ್ಯ ಪರಿಚಾರಿಕೆ’ ಪ್ರಶಸ್ತಿ ನೀಡಿದ ಪುಸ್ತಕ ಪ್ರಾಧಿಕಾರದ ಕ್ರಮಕ್ಕೆ ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ ಕೆಲವರಿಗೆ ಕಿ.ರಂ. ರವರ ಸಾಹಿತ್ಯ ಪರಿಚಾರಿಕೆಯ ಕ್ರಮಗಳ ಅರಿವಿರಲಾರದೆನಿಸುತ್ತದೆ. ಶ್ರೀವಿಜಯನ ಕೃತಿಗಳಿಂದ, ಮಧುರಚೆನ್ನ, ಬೇಂದ್ರೆ, ಕುವೆಂಪು, ಅಡಿಗ, ಕಂಬಾರ, ಸಿದ್ಧಲಿಂಗಯ್ಯ, ಎನ್.ಕೆ. ಹನುಮಂತಯ್ಯ ಹೀಗೆ ಹಿರಿಯ ಕವಿಗಳಿಂದ ಕಿರಿಯ ಕವಿಗಳವರೆಗಿನ ಕಾವ್ಯಗಳನ್ನು ಆಳವಾದ ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಕಿ.ರಂ ರವರು ಕನ್ನಡ, ಸಂಸ್ಕೃತ ಹಾಗೂ ಪಾಶ್ಚಾತ್ಯ ಸಾಹಿತ್ಯ, ತತ್ವಗಳಂತೆಯೆ ಜಾನಪದ ಸಾಹಿತ್ಯದ ಆಳವಾದ ಅಭ್ಯಾಸ ಮಾಡಿರುವುದರ ಜೊತೆಗೆ ಅನೇಕ ಕಿರಿಯರ ಕೃತಿ ಪ್ರಕಟಣೆಗಳಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ಸಿದ್ಧಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’ ಕವನ ಸಂಕಲನದ ಪ್ರಕಟಣೆಯ ಸಂದರ್ಭದಲ್ಲಿನ ಅವರ ಆಸ್ಥೆಯನ್ನು ಕಾವ್ಯ ಪರಿಚಾರಿಕೆಯೆಂದಲ್ಲದೆ ಏನೆಂದು ಕರೆಯಬೇಕು ?
ಕಾವ್ಯಮಂಡಲದ ಮೂಲಕ ’ಕುಸುಮಬಾಲೆ’ಯಂತಹ ಪಠ್ಯವನ್ನು ಓದುಗರಿಗೆ ತಲುಪಿಸುವ ಆ ಮೂಲಕ ಅದು ನಾಟಕವಾಗಿ ರೂಪಾಂತರವಾಗುವಲ್ಲಿ ಅವರ ಪ್ರಯತ್ನವು ಮುಖ್ಯವಾದುದು. ಕನ್ನಡದಲ್ಲಿ ಸದಭಿರುಚಿಯ ಅಪರೂಪದ ಕೃತಿಗಳ ಪ್ರಕಟಣೆಗೆ ಕಾವ್ಯಮಂಡಲ ಹಾಗೂ ಅಧ್ಯಯನ ಮಂಡಲದ ಪ್ರಕಟಣೆಗಳು ಉದಾಹರಣೆಗಳಾಗಿವೆ. ಸ್ಯಾಫೋ ಕಾವ್ಯ, ಸಿಲ್ವಿಯಾ ಪ್ಲಾತ್, ಕನ್ನಡದ ಹಾಡು ಪಾಡು, ಎಡ್ವರ್ಡ್ ಸೈದ್, ಬಾಳಿನಲ್ಲಿ ಬೆಳಕು, ಕುವೆಂಪು ಕಥನ, ಮಾತನಾಡುವ ಹಕ್ಕಿ, ಮಾತು ಚಿಟ್ಟೆ, ಬೆಂಕಿ-ಬೆರಳು, ಸಿಮೊನ್ ದ ಬೊವಾರವರ  ದ ಸೆಕೆಂಡ್ ಸೆಕ್ಸ್, ಟ್ರೋಜನ್ ಯುದ್ಧ, ಕನ್ನಡ ನಾಟಕ - ಯಾಜಮಾನ್ಯ ಸಂಕಥನ, ತೌಲನಿಕ ಸಾಹಿತ್ಯ ಮೊದಲಾದ ಕಾವ್ಯ, ಅನುವಾದ, ಸಂಶೋಧನಾ ಕೃತಿಗಳ ಪ್ರಕಟಣೆಯನ್ನು ಈ ನಿಟ್ಟಿನಲ್ಲಿ ಗಮನಾರ್ಹವಾದ ಪ್ರಯತ್ನವೆನ್ನಬಹುದು.
ಕಿ.ರಂ ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪಡೆದ ಕೆ.ಸಿ. ಶಿವಾರೆಡ್ಡಿ, ಸಿ.ಆರ್. ಗೋವಿಂದರಾಜು, ವಾಸುದೇವಮೂರ್ತಿ, ರಂಗನಾಥ ಕಂಟನಕುಂಟೆ, ಕುರುವ ಬಸವರಾಜ್ ಮೊದಲಾದವರು ಇಂದಿಗೂ ಸೃಜನಶೀಲ, ವಿಮರ್ಶೆ, ಸಂಶೋಧನೆ ಹಾಗೂ ಅನುವಾದದ ಕ್ಷೇತ್ರಗಳಲ್ಲಿ ತಮ್ಮ ಕೃಷಿಯನ್ನು ಮುಂದುವರೆಸಿದ್ದಾರೆ. ಇದು ಕಾವ್ಯಮಂಡಲ ಹಾಗೂ ಕಿ.ರಂ. ರವರ ಮಹತ್ವ. ಅನೇಕ ಸಂಶೋಧಕರ ಸಂಶೋಧನಾಸಕ್ತಿ ಪಿಎಚ್.ಡಿ., ಪ್ರಬಂಧ ಸಲ್ಲಿಕೆಯಲ್ಲೇ ಮುಗಿದು ಹೋಗುವ ಉದಾಹರಣೆಗಳಿಗಿಂತ ಭಿನ್ನವಾಗಿ ಕಿ.ರಂ.ರವರ ಶಿಷ್ಯ ಬಳಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಸ್ತಿತ್ವವನ್ನು ಹೊಂದಿದೆ. ಕಾವ್ಯ ಮಂಡಲ ಡಾಕ್ಟರ್‌ಗಳನ್ನು ಸೃಷ್ಟಿಸುವ ಕೆಲಸವನ್ನಷ್ಟೇ ಮಾಡುತ್ತಿಲ್ಲ.
ನಿರಂತರವಾದ ಅಧ್ಯಯನ, ಅಧ್ಯಾಪನ, ಚಿಂತನೆಯಲ್ಲಿ ತೊಡಗಿಕೊಂಡಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಕಿ.ರಂ ರವರಿಂದ ಕಲಿತ ಅಸಂಖ್ಯ ವಿದ್ಯಾರ್ಥಿಗಳು ಇಂದು ನಾಡಿನಾದ್ಯಂತ ಅಧ್ಯಾಪಕರಾಗಿ, ಐ.ಎ.ಎಸ್., ಕೆ.ಎ.ಎಸ್. ಅಧಿಕಾರಿಗಳಾಗಿ, ಸಮೂಹ ಮಾಧ್ಯಮದಲ್ಲಿ, ರಾಜಕಾರಣದಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿನವರೆಗೆ ಒಂದೇ ಬಗೆಯ ಆದರ, ಪ್ರೀತಿ, ವಿಶ್ವಾಸಗಳನ್ನು ಹೊಂದಿದ್ದ ಹಾಗೂ ಕಾವ್ಯಮಂಡಲದ ಮೂಲಕ ಕಾವ್ಯ, ಸಾಹಿತ್ಯ ಪರಿಚಾರಿಕೆಯನ್ನು ಅವಿರತವಾಗಿ ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ತುರ್ತಿರುವ ವಿಚಾರ ಗೋಷ್ಠಿಗಳು, ಕಾವ್ಯ ಶಿವರಾತ್ರಿಯಂತಹ ಅನೇಕ ಕಾರ್ಯಕ್ರಮಗಳು ಸಾಹಿತ್ಯ ಪರಿಚಾರಿಕೆಯಲ್ಲದೇ ಮತ್ತಾವುದು ಪರಿಚಾರಿಕೆಯೆಂಬುದನ್ನು ಯೋಚಿಸಬೇಕು. ನಾಡು, ರಾಷ್ಟ್ರ, ವಿದೇಶಗಳಲ್ಲಿ ಕೂಡ ಇರುವ ಕಿ.ರಂ.ರವರ ಅಪಾರ ಸ್ನೇಹಿತರು, ಒಡನಾಡಿಗಳು, ಶಿಷ್ಯ ವೃಂದದವರಿಗೆ ಈ ಬಗೆಯ ಲೇಖನ ಹಾಗೂ ಮಾತುಗಳು ನೋವನ್ನುಂಟು ಮಾಡಿದ್ದವು.
ಈಚಿನ ಕರ್ನಾಟಕದ ಸಾಮಾಜಿಕ, ರಾಜಕೀಯ ಪಲ್ಲಟಗಳು ಕಿರಂರನ್ನು ತೀವ್ರವಾಗಿ ವ್ಯಗ್ರಗೊಳಿಸಿದ್ದವು. ಕೋಮುವಾದಿ ಶಕ್ತಿಗಳ ಕೈಯಲ್ಲಿನ ಅಧಿಕಾರದ ದುರ್ಬಳಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ’ಅರಿಕೇಸರಿಯ ಹೆಸರಿರುವುದು - ಪಂಪನಿಂದ’ ಎಂದು ಹೇಳುವ ಮೂಲಕ ಕರ್ನಾಟಕದ ಅತಿವೃಷ್ಟಿ ಸಂದರ್ಭದಲ್ಲಿ ನಡೆದ ದುಂದು ವೆಚ್ಚಗಳನ್ನು ಕುರಿತು ಕಟುವಾಗಿ ನಮ್ಮೊಡನೆ ಆ ವಿಷಯವನ್ನು ಚರ್ಚಿಸುತ್ತಿದ್ದರು.
ಹಾಗೆಯೇ ಮಾಧ್ಯಮಗಳವರ ಮಿತಿಮೀರಿದ ಸುದ್ದಿ ದಾಹವನ್ನು ಕುರಿತು ಕೂಡ ವಿಮರ್ಶಿಸುತ್ತಿದ್ದರು. ಈ ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಇಡೀ ಬದುಕು ಪಲ್ಲಟಕ್ಕೊಳಗಾಗುವುದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಶೂದ್ರ ಪತ್ರಿಕೆಗೆ ಮಾಧ್ಯಮಗಳ ಕುರಿತು ಲೇಖನ ಬರೆದು ಕೊಡುವಂತೆ ಮೂರು ತಿಂಗಳುಗಳ ಕಾಲ ನನ್ನನ್ನು ಕೇಳುತ್ತಿದ್ದರು. (ಆದರೆ, ಅವರ ಮಾತನ್ನು ನನಗೆ ಇನ್ನೂ ನಡೆಸಲಾಗಿಲ್ಲ. ಅದರ ಕೊರತೆ ನೀಗಿಸಲು ಒಂದು ಪುಸ್ತಕವನ್ನೇ ಬರೆಯಬೇಕಾಗುತ್ತದೆ. ಮಾಧ್ಯಮಗಳು ಇಂದು ವಿಮರ್ಶಾತೀತವಾಗಿ ಬೆಳೆಯುತ್ತಿವೆ.)
ಮಾಧ್ಯಮಗಳ ಮೇಲೆ ಅವರು ಕಿಡಿಕಾರುವುದಕ್ಕೆ ಮಾಧ್ಯಮದವರ ಸುದ್ದಿದಾಹವಷ್ಟೇ ಕಾರಣವಾಗಿರಲಿಲ್ಲ. ಅವುಗಳ ಸಾಮಾಜಿಕ ಬದ್ಧತೆಯ ಬಗ್ಗೆ ಅವರಿಗೆ ಅನುಮಾನಗಳಿದ್ದವು. ತಮ್ಮ ವಿದ್ಯಾರ್ಥಿಗಳು, ಸ್ನೇಹಿತರನೇಕರು ಈ ಮಾಧ್ಯಮಗಳಲ್ಲಿದ್ದರೂ ಕೂಡ ಅವುಗಳ ಜೊತೆಗೂ ಕೂಡ ಅಂತರವನ್ನು ಕಾಪಾಡಿಕೊಂಡಿದ್ದರು.
   ಅವರು ಸಾಹಿತ್ಯ ಪಕ್ಷಪಾತಿಯಾಗಿ, ಕೆಲವೊಮ್ಮೆ ಅತಿಯೆಂಬಂತೆ ಸಾಹಿತ್ಯ, ಕಾವ್ಯದ ಬಗ್ಗೆ ಮಾತನಾಡುತ್ತಿದ್ದರೂ ಸಾಹಿತ್ಯವನ್ನೇ ಬದುಕನ್ನಾಗಿಸಿಕೊಂಡಿದ್ದರು. ವಿಮರ್ಶೆಯು ಕಾಲದಿಂದ ಕಾಲಕ್ಕೆ ಭಿನ್ನವಾದ ಉಪಕರಣಗಳನ್ನು ಬಳಸುತ್ತಾ ಭಿನ್ನವಾದ ಪರಿಪ್ರೇಕ್ಷ್ಯಗಳನ್ನು ಪಡೆಯುವ ಸಂದರ್ಭದಲ್ಲಿ ಕಿ.ರಂ.ರವರು ಸಮಕಾಲೀನರಿಗಿಂಥ ಮೊದಲೇ ಈ ಬಗೆಯ ಎಲ್ಲ ಉಪಕರಣಗಳನ್ನು ಒಳಗೊಂಡು, ಅದಕ್ಕಿಂತ ಮುಂದೆ ಹೋಗಿ ಪ್ರತಿಯೊಬ್ಬ ಕೃತಿಕಾರನಿಗೂ ಅವನದೇ ಆದ ಕಾವ್ಯ ಮೀಮಾಂಸೆ, ಜೀವನ ದೃಷ್ಟಿ ಇರುತ್ತದೆಂದು ಪ್ರತಿಪಾದಿಸುತ್ತಿದ್ದರು. ಶ್ರೀವಿಜಯ, ಪಂಪ, ವಚನಕಾರರು, ಕುಮಾರವ್ಯಾಸ, ಶರೀಫ, ಮಧುರಚೆನ್ನ, ಬೇಂದ್ರೆ, ಕುವೆಂಪು ಮತ್ತು ಅಡಿಗರಂಥ ಕವಿಗಳ ಕಾವ್ಯದಲ್ಲಿಯೇ ಕಾವ್ಯಮೀಮಾಂಸೆಯ ಉಪಕರಣಗಳಿವೆ ಎಂಬುದನ್ನು ಉದಾಹರಣೆಗಳ ಮೂಲಕ ನಮಗೆ ತೋರಿಸಿಕೊಡುತ್ತಿದ್ದರು. ಪಂಪನ ಕಿವಿಯಿಂಬಗೆವುಗುವೊಡೆ ಕೊಂಕುವೆತ್ತ ಪೊಸನುಡಿಯೆ ಪುಗುಗುಮುಳಿದುದು ಸವಿಸಯ್ತವಚರನೆ ಮಾಡಿ ಸರು ಸಯ್ತು ವೋಕುಮದು ಬಗೆಯ ಬಟ್ಟೆಯಂ ಮುಟ್ಟುದುಮೇಣ|| ಎಂಬ ಭಾಗಗಳಿಂದ ಜಾನಪದಕ್ಕೂ ಶಿಷ್ಟಕ್ಕೂ ಇರುವ ಆದಿಮ ಕೊಂಡಿಗಳ ಹುಡುಕಾಟವನ್ನು ನಡೆಸುತ್ತಿದ್ದರು. ಈ ಬಗೆಯಲ್ಲಿ ಕಾವ್ಯ, ನಾಟಕ, ಪ್ರಬಂಧ, ಕತೆ, ಕಾದಂಬರಿ, ಜಾನಪದ, ಕಾವ್ಯಮೀಮಾಂಸೆ, ವಿಮರ್ಶೆ, ತತ್ವಜ್ಞಾನ ಎಲ್ಲವನ್ನೂ ಒಳಗೊಳ್ಳುವ - ಆ ಮೂಲಕ ಬದುಕು ಮತ್ತು ಸಾಹಿತ್ಯಕ್ಕೆ ಇರುವ ಸಂಬಂಧಗಳನ್ನು ಬೆಸೆಯುವ ಹುಡುಕಾಟದತ್ತ ಅವರ ಪಯಣವಿತ್ತು.
ಮೇರು ಸದೃಶ ವ್ಯಕ್ತಿತ್ವದ ಕಿ.ರಂ. ಮೇಷ್ಟ್ರು ಕನ್ನಡದ ಮೂಲಕ ಜಗತ್ತನ್ನು ಒಳಗೊಳ್ಳುವ ಪ್ರಯತ್ನವನ್ನು ಅವರ ಪರಿಧಿಗೆ ಬಂದವರಿಗೆ ಕಲಿಸುತ್ತಿದ್ದರು. ಅಪಾರ ಶಿಷ್ಯ ವಾತ್ಸಲ್ಯವುಳ್ಳ ಅವರಿಗೆ ಅವರ ಎಲ್ಲಾ ವಿದ್ಯಾರ್ಥಿಗಳಿಗೂ ಸಾಹಿತ್ಯದ ಭಿನ್ನ ಬಗೆಯ ಓದು ಸಾಧ್ಯವಾಗುವುದು ಹೇಗೆಂಬುದರ ಹುಡುಕಾಟವನ್ನು ತೋರಿಸಿಕೊಡುತ್ತಿದ್ದರು. ಪಂಪ, ಅಲ್ಲಮ, ಕುಮಾರವ್ಯಾಸ, ಮಧುರಚನ್ನ, ಬೇಂದ್ರೆ, ಕುವೆಂಪು, ಅಡಿಗರ ಕಾವ್ಯಗಳನ್ನು ಅವರಷ್ಟು ಆಳವಾಗಿ ಅಧ್ಯಯನ ಮಾಡಿ ಕಾವ್ಯದ ಅನಂತ ಮುಖಗಳನ್ನು ತೋರಿಸುವ ಮತ್ತೊಬ್ಬರು ಪ್ರಾಯಶಃ ಬರಲಾರರೆನಿಸುತ್ತದೆ. ಪ್ರತಿ ಬಾರಿಯು ಕಾವ್ಯವನ್ನು ಹೊಸದಾಗಿ ಅರ್ಥೈಸುವ, ವ್ಯಾಖ್ಯಾನಿಸುವ ಅಸಂಖ್ಯ ಪರಿಕರಗಳಿಂದ ಕಿ.ರಂ.ರ ಕಾವ್ಯಪ್ರೀತಿಯ ಅನನ್ಯತೆಯನ್ನು ಕಾಣಬಹುದು. ಈ ಎಲ್ಲ ವಿಷಯಗಳು ಕಿ.ರಂ.ರ ಬಗೆಗೆ ನಿಜದ ನಾಡೋಜ ಕೃತಿ ಸಂಪಾದನೆಗೆ ಕಾರಣವಾಗಿವೆ. ಕನ್ನಡ ಸಂವೇದನೆಯ ಭಾಗವಾಗಿರುವ ಅವರ ಚಿಂತನೆಗಳು ನಿರಂತರವಾಗಿರುತ್ತವೆ.

(ನಾನು ಪ್ರೊ.ಕಿ.ರಂ.ನಾಗರಾಜ  ಅವರನ್ನು ಕುರಿತ ಕವಿತೆ, ಲೇಖನಗಳನ್ನು  ಸಂಪಾದಿಸಿದ ನಿಜದ ನಾಡೋಜ ಕೃತಿಯ ಮುನ್ನುಡಿ)

No comments:

Post a Comment