Search This Blog

Monday 21 April 2014

              ಸಾಂಸ್ಕೃತಿಕ ನೀತಿ: ಪ್ರಭುತ್ವದ ಸಾಮಿಪ್ಯದಿಂದ ಆವರಿಸಿರುವ ವಿಸ್ಮೃತಿ
                                                                                                                   - ಪ್ರದೀಪ್ ಮಾಲ್ಗುಡಿ
ಕಲಿಯನೆ ಪಂದೆ ಮಾಳ್ಪ ಕಡುವೊಂದೆಯನೊಳ್ಗಲಿ ಮಾಳ್ಪ ತಕ್ಕನಂ
ಪೊಲೆಯನೆ ಮಾಳ್ಪ ಮುಂ ಪೊಲೆಯನಂ ನೆರೆ ತಕ್ಕನೆ ಮಾಳ್ಪ ತಮ್ಮೊಳ
ಗ್ಗಲಿಸಿ ಪೊದಳ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿಯಿಂ ಸಂ
ಚಲಮದರಿಂದೋಲಗಿಸಿ ಬಾಳ್ವುದೆ ಕಷ್ಟಂ ಇಳಾಧಿನಾಥನಂ||
                    - ಪಂಪ, ಕ್ರಿ.ಶ. ೯೦೨
ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಲು ಸಮಿತಿಯೊಂದನ್ನು ರಚಿಸಿದೆ. ಅದರ ಅಧ್ಯಕ್ಷತೆಯನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ವಹಿಸಲಾಗಿದೆ. ಪ್ರಾದೇಶಿಕ ಪ್ರಾತಿನಿಧ್ಯ ಹಾಗೂ ವಿವಿಧ ಕ್ಷೇತ್ರದ ಸದಸ್ಯರ ತಂಡ  ಕ್ರಿಯಾಶೀಲವಾಗಿದೆ. ಈ ಸಂದರ್ಭದಲ್ಲಿ ಆದಿಕವಿ ಪಂಪನ ಮೇಲಿನ ಮಾತುಗಳು  ಸಾಂದರ್ಭಿಕತೆಯನ್ನು ಪಡೆದಿವೆ. ಈ ಹಿಂದಿನ ಎಲ್ಲ ಸರ್ಕಾರಗಳು ತಮ್ಮ ದೃಷ್ಟಿಕೋನಕ್ಕೆ ತಕ್ಕಂತಹ ವ್ಯಕ್ತಿಗಳನ್ನು ನಿಗಮ, ಮಂಡಳಿ, ರಂಗಾಯಣ, ಪ್ರತಿಷ್ಠಾನ ಹಾಗೂ ಪ್ರಾಧಿಕಾರಗಳಿಗೆ ನೇಮಿಸಿವೆ. ತಮ್ಮ ಆಪ್ತರಾದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳದಲ್ಲಿ ಪ್ರತಿಷ್ಠಾಪಿಸಿವೆ. ಅನೇಕ ಯೋಜನೆಗಳನ್ನು ಆರಂಭಿಸಿ ತಮ್ಮ ಪಕ್ಷ, ಸಿದ್ಧಾಂತಗಳಿಗನುಗುಣವಾದ ಹೆಸರಿನಲ್ಲಿ ಜಾರಿಗೆ ತಂದಿವೆ, ಬಸ್ ಹಾಗೂ ಬಸ್ ನಿಲ್ದಾಣಗಳಿಗೆ ತಮಗೆ ಬೇಕಾದ ಬಣ್ಣ ಬಳಿದು, ತಮಗೆ ಬೇಕಾದ ವ್ಯಕ್ತಿಗಳ ಹೆಸರನ್ನಿಟ್ಟಿವೆ. ಎಲ್ಲವನ್ನೂ ತನ್ನ ಮನೋಧರ್ಮಕ್ಕೆ ತಕ್ಕಂತೆ ರೂಪಿಸುವ ಪ್ರಭುತ್ವದ ಈ ಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ನಾವೀಗ ಕರ್ನಾಟಕ ಸರ್ಕಾರವು ರೂಪಿಸ ಹೊರಟಿರುವ ಉದ್ದೇಶಿತ ಸಾಂಸ್ಕೃತಿಕ ನೀತಿಯನ್ನು ವಿರೋಧಿಸಬೇಕಾಗಿದೆ. ಏಕೆಂದರೆ, ಅಧಿಕಾರಕ್ಕೆ ಬಂದ ಸರ್ಕಾರ ತನಗೆ ಬೇಕಾದಂತೆ ಭವಿಷ್ಯದಲ್ಲಿ ಸಾಂಸ್ಕೃತಿಕ ನೀತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.
ಒಂದು ವೇಳೆ ಬಿ.ಜೆ.ಪಿ. ಸರ್ಕಾರವೇನಾದರೂ  ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಮುಂದಾಗಿದ್ದರೆ? ಆಗ ಆರ್.ಎಸ್.ಎಸ್. ವ್ಯಕ್ತಿಯೊಬ್ಬರನ್ನು ಸಾಂಸ್ಕೃತಿಕ ನೀತಿ ಸಮಿತಿಯ ಅಧ್ಯಕ್ಷರನ್ನಾಗಿಸಿದ್ದರೆ? ಪ್ರೊ.ಯೂ.ಆರ್.ಅನಂತಮೂರ್ತಿ, ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ,  ಡಾ.ಚಂದ್ರಶೇಖರ ಕಂಬಾರ ಮೊದಲಾದವರು ಅದನ್ನು ಒಪ್ಪಿಕೊಳ್ಳುತ್ತಿದ್ದರೆ? ಈ ಎಲ್ಲ ಪ್ರಶ್ನೆಗಳು ಈಗ ಎದುರಾಗಿವೆ.
ಪ್ರಭುತ್ವದ ಸಖ್ಯದಿಂದಾಗಿ ಪ್ರಭುತ್ವ ಮಾಡುತ್ತಿರುವ ಇಂತಹ ಅಚಾತುರ್ಯಗಳನ್ನು ಸಹಿಸಬಾರದು. ಆದರೆ ಮೇಲೆ ಉದ್ಧರಿಸಿರುವ ಹಿರಿಯರು ಪ್ರಸ್ತುತ ಸಂದರ್ಭದಲ್ಲಿ ಮೌನವಾಗಿರುವುದು ಯುವಜನಾಂಗವನ್ನು ಚಿಂತೆಗೀಡುಮಾಡಿದೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕೆಂದು ಮಾಡಿದ್ದ ಸಂಕಲ್ಪಗಳು ಇವರ ಪ್ರಭುತ್ವದ ಜೊತೆಯ ಸಖ್ಯದಿಂದಾಗಿ ಮಣ್ಣುಪಾಲಾಗುತ್ತಿವೆ. ನಮ್ಮ ಆಪ್ತರೊಬ್ಬರು ಉನ್ನತ ಹುದ್ದೆ ಪಡೆದಾಗ ನಾವು ಅವರ ಬಾಲಬಡುಕರಾಗಬೇಕಾಗಿಲ್ಲ, ಅವರ ಕಿವಿ ಹಿಂಡುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಆದರೆ ಇಂದು ಆಗುತ್ತಿರುವುದೇ ಬೇರೆ.
ಸಂಸ್ಕೃತಿಗಳ ಬಹುಮುಖತೆ
ಸಂಸ್ಕೃತಿಗಳು ಏಕರೂಪಿ ರಚನೆಗಳಲ್ಲ. ಅವು ಪರಸ್ಪರ ಕೊಡು ಕೊಳುವಿಕೆಗಳಿಂದ ನಿರಂತರವಾಗಿ ಬೆಳೆಯುತ್ತಿರುತ್ತವೆ. ಆದ್ದರಿಂದ ಸಂಸ್ಕೃತಿಗಳಲ್ಲಿ ಬಹುಮುಖತೆ ಸಾಮಾನ್ಯವಾಗಿರುತ್ತದೆ. ಭಾಷೆ, ಧರ್ಮ, ಆಚರಣೆ, ಸಂಪ್ರದಾಯ, ಭಿನ್ನ ಅನುಸಂಧಾನ, ಕಲೆ, ಆರ್ಥಿಕತೆ, ಲೋಕಗ್ರಹಿಕೆ, ನೋಟಕ್ರಮ ಇವೆ ಮೊದಲಾದವುಗಳ ಸಂಶ್ಲೇಷಿತ ರೂಪವೇ ಸಂಸ್ಕೃತಿ. ಕಾಲಾನಂತರದಲ್ಲಿ ಸಂಸ್ಕೃತಿಗಳು ಸಂಕರಗೊಳ್ಳುವುದು, ಭಿನ್ನ ಅವಸ್ಥೆಗಳಿಗೆ ಒಳಪಡುವುದು ಅನಿವಾರ್ಯವಾಗಿರುತ್ತದೆ. ಸಂಸ್ಕೃತಿ, ಸಂಸ್ಕೃತಿಗಳು, ಪ್ರತಿಸಂಸ್ಕೃತಿ, ಉಪಸಂಸ್ಕೃತಿಗಳ ಭಿನ್ನ ಮಾದರಿಗಳ ಬಗೆಗೆ ಕನ್ನಡದಲ್ಲಿ ಡಿ.ವಿ.ಜಿ, ಮಾಸ್ತಿ, ಶಂಬಾ ಜೋಷಿ, ಕುವೆಂಪು, ದೇವುಡು, ಶ್ರೀರಂಗ, ಶಿವರಾಮಕಾರಂತ, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಡಿ.ಆರ್.ನಾಗರಾಜ್, ದೇವನೂರ ಮಹಾದೇವ, ರಹಮತ್ ತರೀಕೆರೆ, ಬರಗೂರು ರಾಮಚಂದ್ರಪ್ಪ ಹಾಗೂ ಕೋಟಗಾನಹಳ್ಳಿ ರಾಮಯ್ಯ ಮೊದಲಾದವರು ಚಿಂತನೆ ನಡೆಸಿದ್ದಾರೆ.
ಕನ್ನಡ ಸಂಸ್ಕೃತಿ ಚಿಂತನೆಗಳು ಒಂದು ಬಗೆಯಲ್ಲಿ ಪ್ರಭುತ್ವವು ನಿರ್ಮಿಸಬಯಸುವ ಏಕರೂಪಿ ಜೀವನಕ್ರಮ, ಧರ್ಮ, ಭಾಷೆ, ಸಂಸ್ಕೃತಿಗಳ ಬದಲು ಬಹುಮುಖತೆಯನ್ನು ಅದರ ಎದುರು ಮಂಡಿಸುತ್ತವೆ. ವಸಾಹತುಶಾಹಿ ಪ್ರಭುತ್ವವನ್ನೂ ಒಳಗೊಂಡು ಆಧುನಿಕಪೂರ್ವ, ಆಧುನಿಕ ಹಾಗೂ ಆಧುನಿಕೋತ್ತರ ಪ್ರಭುತ್ವಗಳಿಗೆ ಬೇಕಾದುದು ಏಕರೂಪಿ ಸಂಸ್ಕೃತಿಯೇ ಹೊರತು ಬಹುಮುಖಿ ಸಂಸ್ಕೃತಿಯಲ್ಲ. ಏಕರೂಪೀಕರಣವನ್ನು ಬಯಸುವ ಪ್ರಭುತ್ವದ ಸ್ವ-ಉದ್ದೇಶಗಳ ಕಾರಣದಿಂದಾಗಿ ಬಹುತ್ವವುಳ್ಳ ಸಂಸ್ಕೃತಿಗಳನ್ನು ಕೂಡ  ಏಕರೂಪಿಯಾಗಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿರುತ್ತವೆ. ಹೇಗೆಂದರೆ: ಪ್ರಭುತ್ವಕ್ಕೆ ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಇತ್ಯಾದಿಗಳ ಬಹುತ್ವವು ಎಂದಿಗಾದರೂ ಸವಾಲಿನದ್ದಾಗಿರುತ್ತದೆ; ತನ್ನ ಆಡಳಿತವನ್ನು ಸುಗಮವಾಗಿ ನಡೆಸುವುದಕ್ಕೆ ಅನೇಕ ಸವಾಲುಗಳನ್ನು ಒಡ್ಡುತ್ತದೆ. ನ್ಯಾಯ, ನೀತಿ, ಶಾಸನಗಳನ್ನು ಸಾರ್ವತ್ರಿಕವಾಗಿ ತಿಳಿಸಲು, ತನ್ನ ಆಡಳಿತವನ್ನು ನಿರಾತಂಕವಾಗಿ ನಡೆಸಲು ಅನುವಾಗುವಂತೆ ಧರ್ಮ, ಭಾಷೆ, ಸಂಸ್ಕೃತಿ, ಜೀವನಕ್ರಮಗಳನ್ನು ಏಕರೂಪಗೊಳಿಸಲು ಪ್ರಭುತ್ವವು ಸದಾ ಹವಣಿಸುತ್ತಿರುತ್ತದೆ. ಪ್ರಭುತ್ವಕ್ಕೆ ಅವಶ್ಯಕವಾದ ಈ ಏಕರೂಪತೆಯನ್ನು ಪ್ರಜೆಗಳು ಎಂದಿಗೂ ಒಪ್ಪಲಾರರು. ಅವರು ತಮ್ಮ ಅನೇಕ ಒಳಧಾರೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡೆ ಬರುತ್ತಾರೆ. ಆದರೆ ಪ್ರಭುತ್ವಗಳು ಈ ಬಗೆಯ ಬಹುತ್ವವನ್ನು ನಿವಾರಿಸುವ ಕೆಲಸಗಳನ್ನು ನಿರ್ವಹಿಸುತ್ತಿರುತ್ತವೆ.
ಸಾಂಸ್ಕೃತಿಕ ನೀತಿಯಿಂದ ಏಕರೂಪೀ ರಚನೆಗಳ ಸಾಧ್ಯತೆಗಳೆ ಹೆಚ್ಚು
ಈಗಾಗಲೇ ಪ್ರಭುತ್ವಗಳೇ ಧರ್ಮ ಪೋಷಣೆ ಹಾಗೂ ಸಂಸ್ಕೃತಿ ವಕ್ತಾರಿಕೆಯ ಕೆಲಸವನ್ನು ಕೂಡ ನಿರ್ವಹಿಸುವ ಧೋರಣೆಗಳು ಚಾಲ್ತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಬೆಂಬಲಿಸುವ ಪ್ರಭುತ್ವವು, ಇನ್ನುಳಿದವುಗಳನ್ನು ಅಂಚಿಗೆ ತಳ್ಳುತ್ತಿರುತ್ತದೆ. ಇದು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿದ್ದರೆ, ಮತ್ತೆ ಕೆಲವು ಸಾರಿ ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುತ್ತದೆ. ಭಾರತದಂತಹ ಬಹು ಧಾರ್ಮಿಕ, ಭಾಷಿಕ, ಸಾಂಸ್ಕೃತಿಕ ವಾತಾವರಣದಲ್ಲಿ ಪ್ರಭುತ್ವಗಳು ತೆಗೆದುಕೊಳ್ಳುವ ಈ ಬಗೆಯ ನಿರ್ಣಯಗಳು ಕೆಲವು ಸಂದರ್ಭದಲ್ಲಿ ಅನ್ಯ ಧರ್ಮ, ಭಾಷೆ, ಸಂಸ್ಕೃತಿಗಳಿಗೆ ಮಾರಕವಾಗುತ್ತಿರುತ್ತವೆ. ಭಾರತದ ದೇಶೀ ರಾಜರು, ಮೊಗಲರು, ಬ್ರಿಟಿಷ್ ಹಾಗೂ ಆಧುನಿಕ ಪ್ರಜಾಪ್ರಭುತ್ವದ ಸಂದರ್ಭಗಳಲ್ಲೂ ಕೂಡ ಈ ಬಗೆಯ ಅನೇಕ ತಾರತಮ್ಯಗಳು ಜಾರಿಯಲ್ಲಿದ್ದವು, ಜಾರಿಯಲ್ಲಿವೆ ಹಾಗೂ ಭವಿಷ್ಯದಲ್ಲಿ ಕೂಡ ಜಾರಿಗೆ ಬರುತ್ತವೆ.
ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಈ ಬಗೆಯ ಏಕರೂಪೀಕರಣವು ಆತ್ಯಂತಿಕ ಮಟ್ಟದಲ್ಲಿ ಪ್ರತಿಪಾದಿತವಾಗಿದೆ. ಇಲ್ಲಿನ ಅಗಾಧವಾದ ವೈವಿಧ್ಯತೆ ವಸಾಹತುಶಾಹಿಗಳಿಗೆ ಆರಂಭದಲ್ಲಿ ಕುತೂಹಲಕಾರಿಯೆನಿಸಿದರೂ, ಅಧಿಕಾರ ಗ್ರಹಣಾನಂತರದಲ್ಲಿ ಬ್ರಿಟಿಷರನ್ನು ಅಧೀರರನ್ನಾಗಿಸಿದ್ದು ಈ ದೇಶೀ ಸಮುದಾಯಗಳ ಬಹುತ್ವ. ದೇಶದಾದ್ಯಂತ ಹಂತಹಂತವಾಗಿ ಅಧಿಕಾರವನ್ನು ವಿಸ್ತರಿಸಿದ ಬ್ರಿಟಿಷರು, ಪ್ರತಿಯೊಂದು ಪ್ರಾಂತ್ಯಕ್ಕೂ ಪ್ರತ್ಯೇಕ ಪರಿಸರ, ಭಾಷೆ, ಆಚರಣೆ, ಸಂಪ್ರದಾಯ, ವೃತ್ತಿ, ಸಂಸ್ಕೃತಿಗಳಿರುವುದರಿಂದ; ತನ್ನ ಆಡಳಿತದ ಅವಧಿಯಲ್ಲಿ ನೀತಿ, ನ್ಯಾಯ, ಶಾಸನ ರೂಪಣೆ ಹಾಗೂ ಅವುಗಳನ್ನು ಪ್ರತಿಯೊಂದು ಪ್ರಾಂತ್ಯದ ಭಾಷೆಗಳಲ್ಲಿ ಹೊರಡಿಸಬೇಕಾದ ಅನಿವಾರ್ಯತೆಯನ್ನು ಎದುರಿಸಿದರು. ಇದನ್ನು ಆರಂಭದಲ್ಲೆ ಮನಗಂಡ ವಸಾಹತುಶಾಹಿಗಳು, ಈ ಬಗೆಯ ಬಹುತ್ವದ ಸಮುದಾಯಗಳನ್ನು ಆಳುವುದು, ನಿಯಂತ್ರಿಸುವುದು ಸಾಧ್ಯವಾಗದೆಂಬ ಕಾರಣಕ್ಕೆ ಏಕರೂಪೀಕರಣವನ್ನು ಮಂಡಿಸತೊಡಗಿದರು. ಇದನ್ನೆ ಆಧುನಿಕ ಸಂದರ್ಭದಲ್ಲಿ ಕೂಡ ಪ್ರಭುತ್ವಗಳು ಒಂದಿಲ್ಲೊಂದು ಬಗೆಯಲ್ಲಿ ಮುಂದುವರೆಸಿಕೊಂಡು ಬರುತ್ತಿರುವುದರ ಕಾರಣಕ್ಕೆ ಅನೇಕ ಧಾರ್ಮಿಕ, ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳುಂಟಾಗುತ್ತಿವೆ.
ಬೌದ್ಧ, ಜೈನ, ವೈಷ್ಣವ, ವೀರಶೈವ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮವನ್ನಾಶ್ರಯಿಸಿದ, ಪೋಷಿಸಿದ ಪ್ರಭುತ್ವಗಳು ಆಯಾ ಸಂದರ್ಭದಲ್ಲಿ ತಾನು ನಂಬಿದ ಧರ್ಮಗಳಿಗೆ ಉದಾರವಾಗಿ ದಾನ, ದತ್ತಿ, ಮತಾಂತರಗಳಿಗೆ ಪ್ರೋತ್ಸಾಹಗಳನ್ನು ನೀಡುತ್ತಿದ್ದ ಅಂಶ ಚರಿತ್ರೆಯಲ್ಲಿ ದಾಖಲಾಗಿದೆ. ಅಂತೆಯೇ ಉದಾರ ಮನೋಧರ್ಮದ ರಾಜರು ಕೂಡ ಆಳ್ವಿಕೆ ನಡೆಸಿದ ಉದಾಹರಣೆಗಳಿವೆ.
ಆದರೆ ಆಧುನಿಕ ಸಂದರ್ಭದಿಂದೀಚೆಗೆ ಧಾರ್ಮಿಕ ಸಹಿಷ್ಣುತೆಯು ದಿನದಿಂದ ದಿನಕ್ಕೆ ಪ್ರಭುತ್ವಗಳಲ್ಲಿ ಕಣ್ಮರೆಯಾಗುತ್ತಿದೆಯೇನೋ? ಎಂಬ ಅನುಮಾನ ಮೂಡುವಂತೆ ಧಾರ್ಮಿಕ ಮೂಲಭೂತವಾದವು ವಿಶ್ವವ್ಯಾಪಿಯಾಗುತ್ತಿದೆ. ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ ಧರ್ಮಗಳು ಅನೇಕ ಹಂತಗಳಲ್ಲಿ ಈ ಬಗೆಯಲ್ಲಿ ಬಳಕೆಯಾಗುತ್ತಿವೆ. ಪ್ರಭುತ್ವ ನಿರ್ದೇಶಿತ ಧರ್ಮಗಳು, ಧರ್ಮ ನಿರ್ದೇಶಿತ ಪ್ರಭುತ್ವಗಳೆರಡೂ ಈ ಬಗೆಯ ಧಾರ್ಮಿಕ ಮೂಲಭೂತವಾದಕ್ಕೆ ಎಡೆ ಮಾಡಿಕೊಡುತ್ತಿವೆ.
ಪ್ರಭುತ್ವವು ಸೃಷ್ಟಿಸುವ ಮೋಹಕವಾದ ಸುಳ್ಳನ್ನು ಜನ ಸತ್ಯವೆಂದು ನಂಬುವಂತೆ ಮಾಡಲಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಮಾಧ್ಯಮಗಳನ್ನು ಈ ಉದ್ದೇಶಕ್ಕೆ ಪ್ರಭುತ್ವಗಳು ಬಳಸಿಕೊಳ್ಳುತ್ತಿವೆ. ಇದರ ಪರಿಣಾಮದಿಂದ, ಏನನ್ನಾದರೂ ಸತ್ಯವೆಂದು ಪ್ರತಿಪಾದಿಸಿ ಜನರನ್ನು ನಂಬಿಸಲಾಗುತ್ತದೆ. ಅದರಿಂದಾಗಿ ಸತ್ಯ, ನ್ಯಾಯ, ನಿಷ್ಟೆ, ಋಣ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ಪ್ರಭುತ್ವದ ಪರವಾಗಿ ಪ್ರಜೆಗಳು ನಿರಂತರ ದುಡಿಯುವಂತೆ, ಅವರ ಪ್ರತಿರೋಧದ ನೆಲೆಗಳನ್ನು ದಮನಿಸಲಾಗುತ್ತದೆ. ಮಾನವರನ್ನು ಪ್ರಾಣಿಗಳಂತೆ ಪಳಗಿಸುವ ವ್ಯವಸ್ಥಿತ ಹುನ್ನಾರಗಳು ಜಾರಿಯಾಗುತ್ತವೆ. ಸಂಸ್ಕೃತಿಯೊಳಗೆ ವೈರುಧ್ಯಗಳು ಸದಾ ಜೀವಂತವಾಗಿರುತ್ತವೆ. ಆದರೆ, ಅಧಿಕಾರವು ತನ್ನ ವಿರೋಧಿಗಳನ್ನು ಹತ್ತಿಕ್ಕಲು ಸಂಸ್ಕೃತಿಯನ್ನು ತನಗೆ ಬೇಕಾದಂತೆ ವ್ಯಾಖ್ಯಾನಿಸುವ ಅವಕಾಶವಾದಿತನಕ್ಕೆ ಸಂಸ್ಕೃತಿ ಬಲಿಯಾಗುವುದೆ ಹೆಚ್ಚು. ಪ್ರಭುತ್ವ ಹಾಗೂ ಜನವರ್ಗಗಳು ಸದಾ ವೈರುಧ್ಯಗಳಂತೆಯೇ ವರ್ತಿಸುತ್ತವೆ.
ತನ್ನ ಸುಗಮ ಆಡಳಿತದ ಅನುಕೂಲಕ್ಕಾಗಿ ಏಕ ಭಾಷೆ, ಧರ್ಮ, ಸಂಸ್ಕೃತಿಗಳನ್ನು ಬೆಂಬಲಿಸಿ - ಆ ಮೂಲಕ ಪ್ರಜೆಗಳ ಮೇಲೆ ಅದನ್ನು ಹೇರುವ ಪ್ರಯತ್ನ ನಡೆಸುವ, ಪ್ರಭುತ್ವದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದರೂ, ಅದನ್ನು ಪ್ರತಿರೋಧಿಸುವ ಕ್ರಮಗಳನ್ನು ಪ್ರಜೆಗಳು ಕಂಡುಕೊಳ್ಳುತ್ತಿರುತ್ತಾರೆ. ಈ ಹಂತವು ತೀವ್ರ ಸಂಘರ್ಷದ ಸ್ವರೂಪವನ್ನೆ ತಳೆಯಬೇಕೆಂದೇನೂ ಇಲ್ಲ. ಕೆಲವೊಮ್ಮೆ ಮಾತ್ರ ಈ ಬಗೆಯ ಸಂಘರ್ಷಗಳು ಎದುರಾದಾಗ ಪ್ರಭುತ್ವವು ದಮನಕಾರಿ ಕ್ರಮಗಳಿಂದ ಆ ಪ್ರಯತ್ನಗಳನ್ನು ಹತ್ತಿಕ್ಕುತ್ತವೆ. ಆದ್ದರಿಂದ, ಅದಕ್ಕೆ ಪರ್ಯಾಯವಾಗಿ ದೇಶೀ ಜೀವನ ಪದ್ಧತಿಗಳಲ್ಲೇ ಅಸಂಖ್ಯ ಪ್ರತಿಭಟನೆಯ ಮಾದರಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಪ್ರಭುತ್ವವು, ಪ್ರತಿಭಟನೆಗಳು ಘಟಿಸಿಯೇ ಇಲ್ಲವೆನ್ನುವಂತೆ ಅವುಗಳನ್ನು ಉಪೇಕ್ಷಿಸುತ್ತದೆ ಅಥವಾ ಸಮನ್ವಯತೆಯನ್ನು ಪ್ರತಿಪಾದಿಸುವ ಪ್ರಯತ್ನಗಳನ್ನು ನಡೆಸುವ ಮೂಲಕ ಅನೇಕ ಹುನ್ನಾರಗಳನ್ನು ನಡೆಸುತ್ತಿರುತ್ತದೆ. ಈ ಹುನ್ನಾರಗಳನ್ನು ಬುಕ್ಕನ ಶ್ರವಣಬೆಳಗೊಳದ ಶಾಸನದಿಂದ ಆರಂಭಿಸಿ, ಇಂದಿಗೂ ಕೂಡ ಆಧುನಿಕ ಪ್ರಭುತ್ವಗಳು ಮಂಡಿಸುತ್ತಿರುವ ’ವೈವಿಧ್ಯತೆಯಲ್ಲಿ ಏಕತೆ’ ಹಾಗೂ ’ಸಮನ್ವಯತೆ’ಯ ಕಥನಗಳ ಮೂಲಕ ಕಂಡುಕೊಳ್ಳಬಹುದು. ಇಂದು ಮೀಡಿಯಾ ಮ್ಯಾನೇಜ್‌ಮೆಂಟ್‌ಗಾಗಿ ಸರ್ಕಾರಗಳು ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುತ್ತಿವೆ. ಕರ್ನಾಟಕದ ಸದ್ಯದ ದುರಂತವೆಂದರೆ ಪ್ರತಿಭಟನೆಗಳನ್ನು ವಿದ್ಯುನ್ಮಾನ ಮಾಧ್ಯಮಗಳು ಪ್ರಸಾರವನ್ನೇ ಮಾಡುತ್ತಿಲ್ಲ. ಅವುಗಳಲ್ಲಿ ನಡೆಯುವ ಪ್ಯಾನೆಲ್ ಡಿಸ್‌ಕಷನ್‌ನ ವಿಷಯಗಳಲ್ಲಿ ಈ ಬಗೆಯ ಪ್ರತಿಭಟನೆಗಳಿಗೆ ಸಂಬಂಧಿಸಿದ ಚರ್ಚೆಗಳೇ ನಡೆಯುತ್ತಿಲ್ಲ.
ಆಧುನಿಕಪೂರ್ವ, ಆಧುನಿಕ ಹಾಗೂ ಆಧುನಿಕೋತ್ತರ ಸಂದರ್ಭದಲ್ಲಿ ಆಳ್ವಿಕೆಯ ಸಿದ್ಧಾಂತಗಳು ಕಾಲಾನುಕ್ರಮದಲ್ಲಿ ನಿರಂತರವಾಗಿ ತಮ್ಮ ಹಿಡಿತವನ್ನು ಪ್ರಬಲಗೊಳಿಸುತ್ತಿರುವ ಅಸಂಖ್ಯ ಕ್ರಮಗಳಿಂದಾಗಿ, ಅವುಗಳನ್ನು ಎದುರಿಸಲು ಅನೇಕ ಬಗೆಯ ಉಪಕ್ರಮಗಳ ಶೋಧನೆ ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಾಚೀನ ಕಾಲದಿಂದಲೂ ದೇಶೀ ಜೀವನ ಪದ್ಧತಿಗಳಲ್ಲಿಯೆ ಅಡಗಿರುವ ಪ್ರತಿರೋಧದ ಅನೇಕ ಮಾದರಿಗಳ ಶೋಧವು ಅವಶ್ಯಕ. ಆದರೆ ಸಾಂಸ್ಕೃತಿಕ ನೀತಿಯು ಪ್ರಭುತ್ವ ಪರವಾಗಿ ರೂಪುಗೊಳ್ಳುವ ಅಥವಾ ಅದನ್ನು ತನಗೆ ಬೇಕಾದಂತೆ ಬಾಗಿಸಿಕೊಳ್ಳುವ ಅವಕಾಶವಿರುತ್ತದೆ. ಈ ಎಲ್ಲ ಕಾರಣಗಳಿಂದ ನಮಗೆ ಬೇಕಾಗಿಲ್ಲದ ಸಾಂಸ್ಕೃತಿಕ ನೀತಿಗೆ ನಮ್ಮನ್ನು ನಾವೇ ಬಂಧಿಸಿಕೊಳ್ಳುವ ಅವಕಾಶವನ್ನು ನೀಡಬಾರದು.
ಏಕರೂಪವನ್ನು ಮಂಡಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವುದೆ ಸಂಸ್ಕೃತಿ. ಸಂಸ್ಕೃತಿಯು ಒಂದು ದಾಳವಾಗಿ ಬಳಸಲ್ಪಡುವ ಅತ್ಯಂತ ಸರಳ ಮಾರ್ಗ. ಮನುಷ್ಯರನ್ನು ಭಾವನಾತ್ಮಕವಾಗಿ ದುರ್ಬಲರನ್ನಾಗಿಸಿ, ತನ್ನ ಬೇಳೆ ಬೇಯಿಸಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ. ಅದಕ್ಕೊಂದು ನೀತಿಯನ್ನು ರೂಪಿಸಿಬಿಟ್ಟರೆ ಮುಂದಿನ ಹಾದಿ ಸುಗಮವಾಗುತ್ತದೆ. ಆದ್ದರಿಂದ ತನಗೆ ಬೇಕಾದಂತಹ ನಿಯಮಗಳನ್ನು ಸಂಸ್ಕೃತಿ ಹೆಸರಿನಲ್ಲೆ ಪ್ರಚಲಿತಕ್ಕೆ ತರಬಹುದು. ಈ ನೀತಿಯು ಭವಿಷ್ಯದಲ್ಲಿ ಉಂಟುಮಾಡಬಹುದಾದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಆಲೋಚಿಸಿ ಮುನ್ನಡೆಯಬೇಕಿದೆ.
ಪ್ರಭುತ್ವದ ಜೊತೆಗಿನ ಸಖ್ಯ ಈಗ ಆಪ್ಯಾಯಮಾನವಾಗಿ ಕಾಣಬಹುದು. ಆದರೆ ಭವಿಷ್ಯದಲ್ಲಿ ನಮ್ಮ ಸಖ್ಯವನ್ನು ಬಯಸುವ  ವ್ಯಕ್ತಿಗಳೇ ಅಧಿಕಾರ ನಡೆಸುತ್ತಾರೆಂಬ ಖಾತ್ರಿ ಇಲ್ಲ. ಏಕೆಂದರೆ; ಒಮ್ಮೆ ಸಾಂಸ್ಕೃತಿಕ ನೀತಿಯ ಪರವಾಗಿ ಕೆಲಸ ನಿರ್ವಹಿಸಿದ ಮೇಲೆ ಅದು ಮುಂದೆ ತಂದೊಡ್ಡಬಹುದಾದ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ. ಆಗ ಪ್ರತಿಭಟನೆಯ ಸಾಧ್ಯತೆಗಳೂ ಇರುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಅಂದಿನ ಪ್ರಭುತ್ವ ಈ ಹಿಂದೆ ನೀವು ಮಾಡಿದ್ದೇನು? ಈಗ ಅದರ ವಿರುದ್ಧ ಪ್ರತಿಭಟಿಸಲು ನಿಮಗ್ಯಾವ ನೈತಿಕತೆ ಇದೆಯೆಂದು ಪ್ರಶ್ನಿಸುತ್ತದೆ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.  
ಪ್ರಭುತ್ವದೊಡನೆ ಅಂತರ ಕಾಯ್ದುಕೊಂಡರೆ ಇಂತಹ ಸೂಕ್ಷ್ಮ ವಿಷಯಗಳು ಗಮನಕ್ಕೆ ಬರುತ್ತವೆ. ಅದನ್ನು ಕಾವ್ಯಮೀಮಾಂಸೆಯ ಪರಿಭಾಷೆಯಲ್ಲಿ ಹೇಳುವುದಾದರೆ ಮಾನಸಿಕ ದೂರದಿಂದ ಈ ಅಂಶವನ್ನು ಪರಿಭಾವಿಸಬೇಕಾಗಿದೆ.
ಪಿರಿಯಣ್ಣಂಗೆಱಗುವುದೇಂ
ಪರಿಭವಮೇ ಕೀಱ ನೆತ್ತಿಯೊಳ್ ಬಾಳಂ ನಿ
ರ್ನೆರಮೂಱ ಚಲದಿನೆಱಗಿಸ
ಲಿರೆ ಭರತಂಗೆರಗುವೆಱಕಮಂಜಮೆಯಲ್ತೇ||
- ಪಂಪ, ಕ್ರಿ.ಶ. (೯೦೨)
ಇಂತಹ ಪಠ್ಯಗಳನ್ನು ಬೋಧಿಸಿದ ಪ್ರೊ.ಬರಗೂರು ರಾಮಚಂದ್ರಪ್ಪನವರು ಇಂದು ಪ್ರಭುತ್ವದೊಡನೆ ಮಾನಸಿಕ ಹಾಗೂ ದೈಹಿಕವಾಗಿಯೂ ದೂರವಾಗಿದ್ದುಕೊಂಡು ಈ ಸಾಂಸ್ಕೃತಿಕ ನೀತಿಯು ಭವಿಷ್ಯದಲ್ಲಿ ಸೃಷ್ಟಿಸಬಹುದಾದ ಹಳವಂಡಗಳನ್ನು, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಮುಂದೊದಗಬಹುದಾದ ದುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಿತ ನೀತಿಯಿಂದ ಹಿಂದೆ ಸರಿಯಲೇಬೇಕಾಗಿದೆ.
ಕೊಟ್ಟ ಕುದುರೆಯನೇರಲರಿಯದೆ  
ಮತ್ತೊಂದು ಕುದುರೆಯನೇರ ಬಯಸುವರು
ವೀರರೂ ಅಲ್ಲ, ಧೀರರೂ ಅಲ್ಲ, ಇದು ಕಾರಣ
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು
ತೊಳಲುತ್ತಾ ಇದ್ದಾರೆ. ಗುಹೇಶ್ವರ ಲಿಂಗವನವರೆತ್ತ ಬಲ್ಲರು?
- ಅಲ್ಲಮಪ್ರಭು
ಸಾಂಸ್ಕೃತಿಕ ನೀತಿಯನ್ನು ಕುರಿತು ಅಲ್ಲಮ ಪ್ರಭುವನ್ನು ಕೇಳಿದ್ದರೆ ಪ್ರಾಯಶಃ ಈ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದನೇನೋ?

(ಅಕ್ಟೋಬರ್ ೯ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ.)


No comments:

Post a Comment