Search This Blog

Friday 15 April 2016

ರಾಮ ಜನ್ಮ ಭೂಮಿ: ಇತಿಹಾಸ ತಿರುಚುವವರ ವರಸೆ
ಪ್ರದೀಪ್ ಮಾಲ್ಗುಡಿ 
ಈ ವಿವಾದವನ್ನು ಅಧಿಕಾರ ಹಿಡಿಯಲು ಸಂಘ ಪರಿವಾರ ಮತ್ತು ಬಿಜೆಪಿ ದುರ್ಬಳಕೆ ಮಾಡಿಕೊಂಡಿವೆ. ಇತಿಹಾಸದ ಅರಿವುಳ್ಳವರಿಗೆ ಆಯಾ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳೂ ತಿಳಿದಿರುತ್ತವೆ. ’ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದನೋ ಇಲ್ಲವೋ’ ಎಂಬುದಕ್ಕಿಂತ ’ರಾಜ್ಯ ಗೆದ್ದವನ ಸ್ವತ್ತು’ ಎಂಬುದು ಅಂದಿನ ನಿಯಮ. ಮುಸ್ಲಿಮರು ಅಲ್ಲಿ ಬಾಬರಿ ಮಸೀದಿಯನ್ನು ಕಾಲಾನಂತರದಲ್ಲಿ ಕಟ್ಟಿರಬಹುದು. ಈ ಹಿಂದೆ ಬಲಿಷ್ಠ ರಾಜ ತಾನು ಗೆದ್ದ ಪ್ರದೇಶವನ್ನು ವಶಪಡಿಸಿಕೊಂಡಾಗ ಆ ನಾಡು, ಅಲ್ಲಿನ ಪ್ರಜೆಗಳೆಲ್ಲರೂ ಅವನ ಅಧೀನದಲ್ಲಿದ್ದು, ಅವನ ಆದೇಶದಂತೆ ನಡೆಯಬೇಕಿತ್ತು. ಅದರಂತೆ ತಾನು ಗೆದ್ದ ಪ್ರದೇಶದಲ್ಲಿ ಅವನು ಏನನ್ನು ಬೇಕಾದರೂ ಮಾಡಲು ಅವಕಾಶವಿತ್ತು. ಅದರಂತೆ ಅಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿರಬಹುದು.
ಮಧ್ಯಕಾಲದ ಐತಿಹಾಸಿಕ ಘಟನೆಯೊಂದನ್ನು ದಾಳವಾಗಿಸಿಕೊಂಡು ಅಧಿಕಾರ ಹಿಡಿಯಲು ಬಳಸಿಕೊಂಡದ್ದು ದೇಶದ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಈ ಘಟನೆಯ ಮೂಲಕ ದೇಶದಲ್ಲಿ ಹಿಂದೂ - ಮುಸ್ಲಿಂರ ನಡುವೆ ದೊಡ್ಡ ಕಂದಕವನ್ನು ನಿರ್ಮಿಸಲಾಗಿದೆ.
ಇತಿಹಾಸವನ್ನು ಬೇಕಾದಾಗ ಬೇಕಾದಂತೆ ವ್ಯಾಖ್ಯಾನಿಸುವ ಕೆಲಸವನ್ನು ಸಂಘ ಪರಿವಾರ ಮತ್ತವರ ಬೆಂಬಲಿಗರು ಮಾಡುತ್ತಿದ್ದಾರೆ. ಮುಸ್ಲಿಮರು ಗೆದ್ದು ಸ್ಥಾಪಿಸಿದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿ, ಅದೇ ಸ್ಥಳದಲ್ಲಿ ರಾಮ ಮಂದಿರ ಕಟ್ಟುತ್ತೇನೆನ್ನುವವರು ಇತಿಹಾಸ ಸೃಷ್ಟಿಸುವ ಮದದಲ್ಲಿದ್ದಾರೆ. ಇಂತಹ ಮನೋಧರ್ಮ ಮುಂದುವರೆದರೆ ಮತ್ತಷ್ಟು ಜೀವಹಾನಿಯಲ್ಲದೆ ಮತ್ತೇನನ್ನೂ ಸಾಧಿಸಲಾಗದು.
ಆದರೆ ಇತಿಹಾಸ ಸೃಷ್ಟಿಸಲು ಅಮಾಯಕರ ಬಲಿಯಾಗುತ್ತಿರುವುದನ್ನು ಈ ದೇಶಭಕ್ತರು ಮರೆಯುತ್ತಿದ್ದಾರೆ. ’ಧರ್ಮವೆನ್ನುವುದು ಜನರಿಗೆ ತಿನ್ನಿಸಲಾದ ಅಫೀಮು’ ಎಂದ ಮಾರ್ಕ್ಸ್‌ನ ಮಾತು ನಿಜವಾಗಿದೆ. ಈ ಮತ್ತಿನಿಂದ ಅವರೆಂದೂ ಹೊರಬರದಂತೆ, ಸೇವಿಸಿದವರನ್ನು ತೇಲಿಸುವ ಬದಲು ಮುಳುಗಿಸುತ್ತಿದೆ.

No comments:

Post a Comment