Search This Blog

Monday, 21 April 2014

ಕವಿತೆ: ಇಂದಿನ ತನಕ ಶಿವಪ್ರಕಾಶರ ಕಾವ್ಯದಲ್ಲೊಂದು ಯಾನ
                                                                                                                                     ಪ್ರದೀಪ್ ಮಾಲ್ಗುಡಿ
ಕವಿತೆ: ಇಂದಿನ ತನಕ ಕನ್ನಡದ ಮುಖ್ಯ ಕವಿ, ನಾಟಕಕಾರ, ವಿಮರ್ಶಕರಾಗಿರುವ ಪ್ರೊ.ಎಚ್.ಎಸ್.ಶಿವಪ್ರಕಾಶರ ಎಂಟು ಕವನ ಸಂಕಲನಗಳ ಸಮಗ್ರ ಕಾವ್ಯ ಸಂಪುಟ. ಸಮಗ್ರ ಸಂಪುಟ ಬಿಡುಗಡೆಯ ಬಗೆಗೆ ಸಾಹಿತ್ಯ ಹಾಗೂ ವಿಮರ್ಶಕ ವಲಯದಲ್ಲಿ ಅನೇಕ ಬಗೆಯ - ಉದಾಹರಣೆಗೆ: ’ಇನ್ನು ಬರೆಯಲಾಗದೆಂದು\ ಬರೆಯಬಾರದೆಂದು\ ಬದುಕಿರುವುದಿಲ್ಲವೆಂದು’ ಇತ್ಯಾದಿ ಚರ್ವಿತ ಚರ್ವಣ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಕವಿ-ಕಾವ್ಯದ (ಕರ್ತೃ-ಕೃತಿ) ಸಮಗ್ರ ಮಂಥನದ ಸಾಧ್ಯತೆಗೆ ಸಮಗ್ರ ಸಂಪುಟಗಳು ಅವಕಾಶ ಒದಗಿಸುತ್ತವೆ. ಬೇಂದ್ರೆ, ಕುವೆಂಪು, ಪು.ತಿ.ನ., ಗೋಪಾಲಕೃಷ್ಣ ಅಡಿಗ, ಚನ್ನವೀರ ಕಣವಿ, ಹುಯಿಲಗೋಳ ನಾರಾಯಣ ರಾವ್,  ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದದ್ರಪ್ಪ ಮೊದಲಾದವರ ಸಮಗ್ರ ಸಾಹಿತ್ಯ ಸಂಪುಟಗಳು ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ದೂರದ ದೆಹಲಿಯಲ್ಲಿದ್ದ ಮತ್ತು ಈಗ ಅದಕ್ಕೂ ದೂರದ ಜರ್ಮನಿಯಲ್ಲಿರುವ - ದೇಶವಿದೇಶಗಳನ್ನು ಸುತ್ತುತ್ತಲೇ ಕನ್ನಡದಲ್ಲಿ ಕವಿತೆ, ನಾಟಕಗಳನ್ನು ರಚಿಸುತ್ತಾ ಅನುವಾದಿಸುತ್ತ, ಅನೇಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ, ರಂಗಭೂಮಿ,ವಿಮರ್ಶೆ, ಸೂಫಿತತ್ವ ಇತ್ಯಾದಿಗಳ ಬಗೆಗೆ ವಿಚಾರ ಸಂಕಿರಣಗಳಲ್ಲಿ ಅರ್ಥಪೂರ್ಣ ಚರ್ಚೆಗಳಿಗೆ ಕಾರಣವಾಗುತ್ತಿರುವ ಶಿವಪ್ರಕಾಶರ ಓದು, ಬರಹ, ತಿರುಗಾಟ, ಅನುಸಂಧಾನ, ಮಾತುಕತೆಗಳೆಲ್ಲವೂ ಅಗಾಧ ವಿಸ್ತಾರವುಳ್ಳವು.
ಅದರ ಪರಿಣಾಮದಿಂದಾಗಿ ಅವರ ’ಕವಿತೆ: ಇಂದಿನ ತನಕ’ ಸಂಪುಟವು ಕವಿಯ ಜೀವನಾನುಭವ ಹಾಗೂ ತಾನು ಕನಸಿದ ಸಮಾಜದ ಬಗ್ಗೆ ಅನೇಕ ಸೂಕ್ಷ್ಮಾಂಶಗಳನ್ನು ಹೊರಗೆಡಹುತ್ತದೆ. ಚರಿತ್ರೆ, ಪುರಾಣ, ಧರ್ಮ, ಸಂಸ್ಕೃತಿ, ಜನಪದ, ತತ್ವ, ಸೂಫಿ ಇವೇ ಮೊದಲಾದವುಗಳ ಅನುಸಂಧಾನದ ಫಲಿತದಿಂದಾಗಿ ಅವರ ಕಾವುವೂ ವಿಭಿನ್ನ ಪಾತಳಿಯನ್ನು ಪಡೆಯುತ್ತದೆ. ಈ ಅನೇಕ ನೆಲೆಗಳಿಂದ ಅವರ ಕಾವ್ಯವನ್ನು ಪರಿಭಾವಿಸಬಹುದು. ಅವರ ಅನೇಕ ಕವನಗಳು ಈ ಎಲ್ಲವುಗಳ ಏಕೀಕೃತ ರೂಪಗಳಾಗಬಯಸುತ್ತವೆ. ನಚಿಕೇತ, ಮಿಲರೇಪ, ಬಾಗ್ದಾದ್ ಒಂದು ಪ್ರಾರ್ಥನೆ - ಮೊದಲಾದ ಕವಿತೆಗಳು ಈ ಮಾತಿಗೆ ಉದಾಹರಣೆಗಳಾಗಿವೆ.
ಕವಿ ಕಾಲದಿಂದ ಕಾಲಕ್ಕೆ ವ್ಯತ್ಯಸ್ಥಗೊಳ್ಳುವ, ಹೊಸದನ್ನು ಹುಡುಕಿಕೊಳ್ಳುವ, ದೂರದ, ಸಿಗದ, ಅನುಭವ-ಅನುಭಾವಗಳನ್ನು ದಕ್ಕಿಸಿಕೊಳ್ಳುವ ಹಂತದಲ್ಲಿ ಹೊಸ ಸಂಬಂಧಗಳನ್ನು ಹುಡುಕಿಕೊಳ್ಳುತ್ತಾನೆ. ಅದು ಅವರ ಭಾಷೆ,ಅಭಿವ್ಯಕ್ತಿಕ್ರಮ, ಉಪಮೆ, ರೂಪಕ, ಪ್ರತಿಮೆಗಳ ಬಳಕೆ ಹಾಗೂ ನಿರ್ಮಾಣ ಮುಂತಾದವುಗಳಲ್ಲಿ ವ್ಯಕ್ತವಾಗುತ್ತಿರುತ್ತವೆ.  ಶಿವಪ್ರಕಾಶರ ಕಾವ್ಯಯಾನವು ಕೂಡ ’ಮಿಲರೇಪ’ ಕವನ ಸಂಕಲನದಿಂದ ’ಮಬ್ಬಿನ ಹಾಗೆ ಕಣಿವೆಯಾಸಿ’ ವರೆಗೆ ಈ ಬಗೆಯದೆ.
ಮಹತ್ವದ ನವ್ಯ ಕವಿ-ಕಾವ್ಯಗಳಿಂದ ಪ್ರೇರಣೆ ಪಡೆದರೂ; ಅದರ ಜೊತೆಗೆ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಸದಾ ಇಟ್ಟುಕೊಂಡ ಕಾರಣಗಳಿಂದಾಗಿ ಇವರ ಕಾವ್ಯವು ಅಲ್ಲಮ, ಶಿಶುನಾಳ ಷರೀಫ, ಕಡಕೋಳ ಮಡಿವಾಳಪ್ಪ, ಮಧುರ ಚೆನ್ನ ಮೊದಲಾದವರ ಜೊತೆ ಅನುಸಂಧಾನ ಸಡೆಸಲು ಉತ್ಸುಕವಾಗುತ್ತದೆ. ಇದರ ಪರಿಣಾಮದಿಂದಾಗಿ ’ಸಮಗಾರ ಭೀಮವ್ವ, ತಿಗಣೆ, ನಾಗರ‍್ಹಾವು, ಕುಂಬಾರಣ್ಣ,’ ಮೊದಲಾದ ಕವಿತೆಗಳು ಸೃಷ್ಟಿಯಾಗಿವೆ.
ತನ್ನ ಹಿಂದಿನ ಕಾವ್ಯ ಮಾದರಿಗಳಿಂದ ಬಿಡುಗಡೆಯ ಹಂಬಲ ಕಾವ್ಯಕ್ರಿಯೆಯಲ್ಲಿ ಅನಿವಾರ‍್ಯವೇನೋ? ಹಾಗೆಯೇ ಅದು ಮುಂದುವರೆದರೆ Iಜeಟಿಣiಣಥಿ ಅಡಿisis ಕೂಡ ಆಗುವ ದಟ್ಟವಾದ ಸಾಧ್ಯತೆಗಳಿರುತ್ತವೆ. ಶಿವಪ್ರಕಾಶರ ಆರಂಭದ ಕಾವ್ಯರಚನೆಯ ಕಾಲದಲ್ಲಿ ಒಡನಾಟವಿದ್ದದ್ದು ಹಾಗೂ ಅವರ ಓದು ನಡೆದದ್ದು- ಅವರೇ ಹೇಳಿಕೊಂಡಿರುವಂತೆ ಗೋಪಾಲಕೃಷ್ಣ ಅಡಿಗರ ಕಾವ್ಯದ ಜೊತೆಗೆ. ಆದರೆ ನವ್ಯಕಾವ್ಯದ ಜೊತೆಗಿನ ತಮ್ಮ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ, ಶಿವಪ್ರಕಾಶರು ನವ್ಯರ ಕಾವ್ಯ ಮಾದರಿ, ವಸ್ತುಗಳನ್ನು ಪ್ರಶ್ನಿಸಿದ್ದು ತಮ್ಮದೇ ಆದ ಹೊಸ ಅಭಿವ್ಯಕ್ತಿ ಕ್ರಮದ ಮೂಲಕ. ಈ ಕಾರಣದಿಂದ ಅನುಭಾವಿ ಪರಂಪರೆಯ ಜೊತೆ ಸಂಬಂಧವನ್ನು ಮರುಹೊಂದಿಸುವ ಪ್ರಯತ್ನವು ಆರಂಭವಾಗಿರಬಹುದು.
ನವ್ಯಕಾವ್ಯದ ಪ್ರಭಾವದಿಂದ ಬಿಡುಗಡೆ ಹೊಂದುವ ಶಿವಪ್ರಕಾಶರ ಬಯಕೆಗಳು ಎಷ್ಟು ಸಾಫಲ್ಯ ಹೊಂದಿವೆ? ಎಂಬ ಪ್ರಶ್ನೆ ಅವರ ’ನಚಿಕೇತ’ದಂತಹ ಕವನಗಳ ರಚನೆಯ ಹಿಂದಿರುವ ಅವರ ಆಶಯಗಳನ್ನು ಗಮನಿಸಿದಾಗ, ಅವರ ದ್ವಿಪಾತ್ರಾಭಿನಯ ವ್ಯಕ್ತವಾಗುತ್ತದೆ. ಅವರ ಘೋಷಿತ ಸತ್ಯಗಳು ಕಾವ್ಯಕ್ರಿಯೆಯಲ್ಲಿ ವ್ಯಕ್ತವಾದ ಉದಾಹರಣೆಗಳೊಡನೆ ಪರಿಶೀಲಿಸಿದಾಗ ಮತ್ತೆ ಅವರು ಎರಡೂ ದಡಗಳತ್ತ ಹೆಜ್ಜೆ ಹಾಕುವುದನ್ನು ಸಾಬೀತು ಮಾಡುವುದು ’ಕೆಳದಿಯಾಗು ಪ್ರಿಯೆ’, ’ಸಿಗರೇಟುಗಳ ನಡುವೆ’ ಮೊದಲಾದ ಕವನಗಳು.
’ಬೇಕು ನಂದನ ಇಳೆಗೆ’ ಎಂಬ ಅವರ ಕವನದ ಆಶಯವೇಕೆ ವ್ಯಕ್ತವಾಗುತ್ತದೆ? ಈ ಬಗೆಯ ಆಶಯದ ಹಿನ್ನೆಲೆ ಯಾವುದು? ’ನಂದನವನ’ದ ಹುಡುಕಾಟವೇ? ಅಥವಾ ನೈಜ ನಂದನವನದ ಸೃಷ್ಟಿಯೆ? ಎಂಬ ಪ್ರಶ್ನೆಯನ್ನು ಅವರ ಸಮಗ್ರ ಕಾವ್ಯವೇ ನಮ್ಮ ಮುಂದಿಡುತ್ತದೆ. ನಾಟಕಕಾರರಾಗಿಯೂಂದು ಉನ್ನತ ಹಂತ ತಲುಪ ಬಯಸುವ ಅವರ ’ಕ್ರಿಯೆ’ ಮತ್ತೆ ತಲುಪ ಬಯಸುವ ಊieghಣ ಯಾವುದು?
ಈ ಪ್ರಶ್ನೆಗಳೊಡನೆ ಮುಖಾಮುಖಿಯಾದಾಗ ಶಿವಪ್ರಕಾಶರು ತಲುಪಿರುವ ಸ್ಥಿತಿ ಮತ್ತದೇ ಹಳೆಯ ಜಾಡೇ? ಎಂದಾಗ ಇಲ್ಲ ಎಂಬ ಸ್ಪಷ್ಟ ಉತ್ತರ ಲಭಿಸುತ್ತದೆ. ’ಮಿಲರೇಪ’ ಹಾಗೂ ’ಬಾಗ್ದಾದ್: ಒಂದು ಪ್ರಾರ್ಥನೆ’ಯಂಥ ಕವಿತೆಗಳನ್ನು ಈ ಮಾತುಗಳಿಗೆ ಉದಾಹರಣೆಯಾಗಿ ನೋಡಬಹುದು.
ನವ್ಯ ಕವನಗಳಿಗಿಂಥ ಭಿನ್ನವಾಗುವ ಅವರ ಪ್ರಯತ್ನದ ಸಾಫಲ್ಯತೆ ಎದ್ದು ಕಾಣುವಂಥದು. ಕನ್ನಡದ ಪ್ರಸಿದ್ಧ ವಿಮರ್ಶಕರುಗಳೂ ಸೇರಿದಂತೆ ಅವರ ಕವನಗಳನ್ನು ವಸಾಹತುಶಾಹಿಗೆ ಪ್ರತಿಕ್ರಿಯೆ, ಪ್ರತಿರೋಧ ಎಂಬಂತೆ ಗ್ರಹಿಸುವ ವಿಧಾನಗಳು ಅವರ ಕಾವ್ಯಧಾರೆಯಲ್ಲಿ ಎದ್ದು ಕಾಣುತ್ತದೆ. ಆದರೆ ವಸಾಹತುಶಾಹಿಯನ್ನು ಪರಿಭಾವಿಸುವ ಭಿನ್ನ ಪರಿಭಾಷೆಗಳನ್ನು ಅವರ ಕಾವ್ಯದುದ್ದಕ್ಕೂ ಗಮನಿಸದಿದ್ದರೆ ಅವರ ಕಾವ್ಯ ಹಾಗೂ ನಾಟಕಗಳೆರೆಡರ ಓದುಗಳೆರಡೂ ಅಪ್ರಸ್ತುವಾಗುವ ಸಾಧ್ಯತೆಗಳಿವೆ.
ಜನಪ್ರಿಯ ಕವನಗಳಿಗಿಂಥ ಚಿಂತನಪ್ರಧಾನ ಕವನಗಳಲ್ಲಿ ಶಿವಪ್ರಕಾಶರ ಕಾವ್ಯದ ಗಢವಾದ ಕಾಳಜಿ ಜೀವಪರತೆಯತ್ತ
 ವ್ಯಕ್ತವಾಗುತ್ತದೆ. ಆದರ್ಶಲೋಕವೊಂದರ ನಿರಂತರ ಬಯಕೆಯು ಪದೆಪದೇ ಕಾವ್ಯದಲ್ಲಿ ಎದುರಾದರೂ ಆ ಲೋಕವೊಂದು ದೂರದ ಕನಸೇ ಆಗಬಾರದೆಂಬ ಎಚ್ಚರದಿಂದ ’ಬಾಗ್ದಾದ್: ಒಂದು ಪ್ರಾರ್ಥನೆ’ಯಂಥ ಕವನಗಳು ರಚನೆಯಾಗಿವೆ.  ಈ ಕವಿತೆ ತತ್‌ಕ್ಷಣದ ಅನೇಕ ಅಮಾನವೀಯ ಕೃತ್ಯಗಳನ್ನು ಕಂಡ ಮಾನವೀಯ ಮನಸ್ಸಿನ ಪ್ರತಿಕ್ರಿಯೆಯಾಗಿ, ಅದರಿಂದ  ಬಿಡುಗಡೆಗಾಗಿ ಪ್ರಾಥಿಸುವ ಆರ್ದತೆಯಿಂದಾಗಿ ಮುಖ್ಯವಾದುದು. ಪುರಾಣಗಳನ್ನು ಒಡೆದು ನೋಡುವ ಕ್ರಿಯೆಯು ಸೃಜನಶೀಲ ಮನಸ್ಸುಗಳಿಗೆಲ್ಲ ಸಾಧ್ಯ. ಅಂತೆಯೇ, ಪುರಾಣಗಳಿರುವುದು ಕೂಡ ಅವ್ಯಕ್ತ ಸೃಜನಶೀಲತೆಯನ್ನು ಉದ್ದೀಪಿಸುವ ಸಲುವಾಗಿ. ಇಂಥ ಪುರಾಣ, ಚಾರಿತ್ರಿಕಾಂಶಗಳಿಂದ ಶಿವಪ್ರಕಾಶರ ಕವನಗಳು ಪ್ರಭಾವಿತವಾಗಿವೆ. ಈ ಕ್ರಿಯೆ ಅವರ ನಾಟಕಗಳಿಂದ ಆರಂಭವಾದರೂ ಕಾವ್ಯಮುಖೇನ ತಮ್ಮ ಅನುಭವಗಳಿಗೆ ನೀಡಿದ ಕಾವ್ಯಾಭಿವ್ಯಕ್ತಿಯಲ್ಲಿ ಜೀವಪರತೆ ವ್ಯಕ್ತವಾಗುತ್ತದೆ.
ಮಿಲರೇಪ (೧೯೭೭)
ಈ ಸಂಕಲನವು ಶಿವಪ್ರಕಾಶರ ಚೊಚ್ಚಲ ಕೃತಿ. ’ಮಿಲರೇಪ’ ಕವನವು ಜೀವನದ ಏಳುಬೀಳುಗಳನ್ನು ದಾಖಲಿಸುವಂತೆಯೇ ಅದರ ಸಾರ್ಥಕ ಕ್ಷಣಗಳು ಹಾಗೂ ದುರಂತಗಳ ನಡುವಿನ ಬದುಕು ಹಾಗೂ ಅವುಗಳಿಂದ ಬಿಡುಗಡೆಯ ಸಾಧ್ಯತೆಗಳೆಲ್ಲವನ್ನೂ ಮಂಡಿಸುತ್ತದೆ. ಜೀವನದ ಅಂತಿಮ ಸತ್ಯವನ್ನು ಅರಿತ ಜ್ಞಾನಿಯಾಗಿದ್ದ ’ಮಿಲರೇಪ’ ತಾನು ಹುಟ್ಟಿ, ಬೆಳೆದು, ದಾಟಿದ ಮನೆಯ ಗಡಿಯನ್ನು ಕಾಲಾನಂತರ- ಮತ್ತೆ ತಲುಪಿದಾಗ- ಎಲ್ಲವನ್ನೂ ನೆನಪಿಸಿಕೊಳ್ಳುವಷ್ಟಕ್ಕೆ ಮಾತ್ರ ಆ ಮನೆ, ಸಂಬಂಧಗಳನ್ನು ಸೀಮಿತಗೊಳಿಸಿಬಿಡುತ್ತಾನೆ.
ಅಲ್ಲದೆ, ತನ್ನ ಮಡಿದ ತಂದೆ, ತಾಯಿಯರಿಗೆ ಜೀವ ನೀಡುವ ಅವಕಾಶ ಅವನೆದುರಿಗಿದ್ದರೂ ಮತ್ತದೆ ಹುಟ್ಟುಸಾವಿನ ಚಕ್ರಕ್ಕೆ ನಿಮ್ಮನ್ನು ಬಲಿಕೊಡಲೆ? ಎಂಬ ಪ್ರಶ್ನೆಯೊಡನೆ ಕವನ ಮುಗಿಯುತ್ತದೆ. ಈ ಬಗೆಯ ಎಚ್ಚರ ಅವನಿಗೆ ಸಿದ್ಧಿಸಿರುವುದರಿಂದ ಅವನು ಕಾಲಚಕ್ರದಲ್ಲಿ ಮತ್ತೆ ಯಾರನ್ನೂ ಸಿಲುಕಿಸಲಾರ. ಈ ಎಚ್ಚರ ಅವನಿಗೆ ಅನುಭಾವದಿಂದ ಸಿದ್ಧಿಸಿದೆ.
ಓಲಗದ ಗೋಳಲ್ಲಿ ಎಡೆಯನ್ನು ಬಡಿಸಿದರು,
ಎಳೆಬೇವ ಸಿಗಿಸಿ ತೋರಣವ ಕಟ್ಟಿ|
ಬೆಂಕಿಗೆರೆದರು ತುಪ್ಪ, ನಗುವ ನಂಟರಿಗಿಕ್ಕಿ
ಔತಣ, ಗಂಟಲಿಗೆ ಬಿಗಿಸಿದರು ಹೊನ್ನಪಟ್ಟಿ ||೧||
ಭೈರವನ ದೇಗಲಕೆ ಮುಡಿಯ ಹೂಗಳನಿಕ್ಕು,
  ಎಕ್ಕೆ ಹಾಲನ್ನು ಹಾಗೆ ಕುಡಿ ಅಂದರು|
ನನ್ನ ರಕ್ತದ ಕೆಂಪು ಬೊಟ್ಟನ್ನು ಹಣೆಗಿಕ್ಕಿ
ಮುತ್ತೈದೆ ಪಟ್ಟವನ್ನು ಕಟ್ಟಿದ್ದರು ||೨||
ಗಂಡ ಭೈರವನಾದ, ನನ್ನ ಚರ್ಮವ ಹರಿದ
ಊರೆಲ್ಲ ಹೆಣ್ಣುಗಳ ನುಂಗಿ ಬಂದ|
ಚಂದ್ರ ಮೆಲ್ಲಗೆ ಕಂಡ ಮಲ್ಲಿಗೆಯ ಬನದಲ್ಲಿ
ನೂರು ಮನ್ಮಥರು; ಮನೆ ಕೆಂಡ ಕೆಂಡ ||೩|| (ಮದುವೆಯ ಹಾಡು ಪು.೫)
ಈ ಕವನವು ಸಾಂಪ್ರದಾಯಿಕ ಮದುವೆಯ ಸಂದರ್ಭದ ಆಚರಣೆಗಳಿಂದ ಆರಂಭವಾಗಿ, ಆ ಮದುವೆ ನಂತರ ಹೆಣ್ಣು ಎದುರಿಸುವ ಸಮಸ್ಯೆಗಳೆಡೆಗೆ ತಲುಪುತ್ತದೆ. ಪೌರಾಣಿಕ ಭೈರವನ ಮತ್ತೊಂದು ರೂಪವನ್ನು ತನ್ನ ಗಂಡನಲ್ಲಿ ಕಾಣುವ ಹಾಗೂ ಆ ಗಂಡಿನ ಅಹಂಕಾರ ದರ್ಪಗಳೆದುರಿನಲ್ಲಿ- ತನನ್ ಆಸೆ, ಆಕಾಂಕ್ಷೆಗಳ ಕನಸು, ವ್ಯಕ್ತವಾಗುತ್ತದೆ, ಅಂತೆಯೇ, ಕವನದ ಎರಡನೆ ಭಾಗದಲ್ಲಿ ಅವಳು ಗಂಡನಿಗೆ ಸೇವೆಗೈದು, ಎಕ್ಕೆ ಹಾಲನ್ನು ಕುಡಿಸುವ ಲೋಕದ ಕ್ರಿಯೆಯನ್ನು ಮಂಡಿಸುತ್ತದೆ.
’ಮಳೆಬಿದ್ದ ನೆಲದಲ್ಲಿ’ ಕವನ ಸಂಕಲನದ ’ಸಿಂಗಿರಾಜ ಸಂಪಾದನೆ’ ಕವನವು ಸಮಕಾಲೀನ ಸಮಾಜದ ವಿರುದ್ಧ ವೈಯಕ್ತಿಕ ಪ್ರತಿಭಟನೆಯ ಸಾಧ್ಯತೆಗಳು ಹಾಗೂ ಅವುಗಳಿಂದ ಎದುರಾಗುವ ಸಮಸ್ಯೆಗಳೆರಡನ್ನೂ ಮಂಡಿಸುತ್ತದೆ.
ಇಬ್ಬರು ಹೆಂಡಿರ ಗಂಡ
ಒಬ್ಬಾಕೆ ಹರಳಯ್ಯ ಮಧುವರಸನ ಸ್ನೇವಲ್ಲರಿ;
ಇನ್ನೊಬ್ಬಾಕೆ ಬಿಜ್ಜಳನ ಮನದ ವೇಶ್ಯಾವಾಟಿಕೆಗಳಲ್ಲಿ
ಕೊಳೆತಯೋನಿಯ ರಾಜ್ಯಲಕ್ಷ್ಮೀ (ಪು.೪೪)
ಎಂಬಲ್ಲಿ ಜಾತಿ, ಅಧಿಕಾರಗಳೆರಡರ ಮದದಿಂದ ಉಂಟಾಗುವ ತೊಂದರೆಗಳ ಚಿತ್ರಣವಿದೆ. ಸಮಾಜದ ಈ ಬಗೆಯ ಅಹಂಕಾರಗಳನ್ನು ಕವನದಲ್ಲಿ ತಂದಿರುವ ಕ್ರಮ ವಿಶೇಷವಾಗಿ ಈ ಬಗೆಯ ಅಹಮಿಕೆಗೆ ಇರುವ ಮಿತಿಗಳನ್ನು ಚಿತ್ರಿಸಲು ಬಳಕೆಯಾಗುತ್ತದೆ.
’ಸಮಗಾರ ಭೀಮವ್ವ’ ಕವನವು ನಾಗಲಿಂಗಯತಿಯ ಸಮಸ್ಯೆಗಳಿಗಷ್ಟೇ ಸೀಮಿತವಾಗಿಲ್ಲ. ಅದರಲ್ಲಿ ವ್ಯಕ್ತವಾಗುತ್ತಿರುವುದು ಸಮಾಜದ ಪಿಡುಗು. ಆ ಪಿಡುಗನ್ನು ದಾಟುವಲ್ಲಿ ನಾಗಲಿಂಗಯತಿಯೂ ಮುಕ್ತನಾಗುತ್ತಾನೋ ಇಲ್ಲವೋ ಎಂಬ ಸಂದಿಗ್ಧತೆಯಲ್ಲೇ ಕವನ ಮುಕ್ತಾಯವಾಗುತ್ತದೆ. ಮೊಲೆಹಾಲ ಬದಲಾಗಿ ಎದೆಹಾಲ ಬೇಡುವ ನಾಗಲಿಂಗಯೋಗಿಗೆ ಈ ಸಮಾಜದ ಎಲ್ಲ ಮಿತಿಗಳ ಅರಿವಿದೆ. ಅವುಗಳನ್ನು ಮೀರುವ ಪ್ರಯತ್ನಕ್ಕೆ ’ಸಮಗಾರ ಭೀಮವ್ವ’ನನ್ನು ಆಶ್ರಯಿಸುತ್ತಾನೆ. ಈ ಕವನದ ಮುಕ್ತಾಯದಲ್ಲಿ ನಾಗಲಿಂಗ ಯತಿಯ ತೃಪ್ತ ಸ್ಥಿತಿ ವ್ಯಕ್ತವಾಗಿದೆಯೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುವುದಿಲ್ಲ.
’ಅಣುಕ್ಷಣ ಚರಿತೆ’ ಸಂಕಲನದಲ್ಲಿ ಮನುಕುಲದ ಅಣುಕ್ಷಣದ ಚರಿತೆಯ ಅನೇಕ ದಾಖಲೆಗಳು ಇವೆ. ನಿದ್ದೆ, ನೆನಪು, ಮರೆವು, ಯಾತ್ರೆ, ಮೈಥುನ, ನಲಿವು, ಬಾಲ್ಯ, ಹರೆಯ, ಮುಪ್ಪು, ಹುಟ್ಟು, ಸಾವು, ಪ್ರಕೃತಿ, ವಿಕೃತಿ, ಸ್ವಪ್ನ, ಜಾಗೃತಿ, ದೇವ, ದಾನವ, ದಾರಿಹೋಕ, ತಾತ್ವಿಕ, ಬುದ್ಧ, ಅಲ್ಲಮ, ನಾಗಾರ್ಜುನ, ಷರೀಫ. ಬೌದ್ಧ, ವೈದಿಕ, ಮುಸ್ಲಿಂ, ಸೂಫಿ, ಪ್ರಾಣಿ, ಪಕ್ಷಿ, ಕ್ರಿಮಿ, ಹಾವು, ಹಣ್ಣು... ಈ ಬಗೆಯ ಅನೇಕ ವೈವಿಧ್ಯಗಳನ್ನು Zರಿತ್ರೆಯಲ್ಲಿ ದಾಖಲಾಗದ ಅನೇಕ ಸೂಕ್ಷ್ಮ ಪಾತ್ರ, ಘಟನೆ, ವ್ಯಕ್ತಿತ್ವ, ವಸ್ತು ವಿಷಯಗಳ ವೈವಿಧ್ಯೆದೆಡೆಗೆ ಗಮನಹರಿಸುವ ಕವಿಯ ಆಸಕ್ತಿ ಕುತೂಹಲPರಿಯಾಗಿದೆ.
ಈ ಅನೇಕ ವಸ್ತುಗಳನ್ನು ಒಂದೇ ಸಂಕಲನದಲ್ಲಿ ಎದುರಾಗುವುದು ಈ ಸಂಕಲನದ ವೈಶಿಷ್ಟ್ಯತೆ. ’ನಕ್ಷತ್ರಯಾತ್ರಿಕರು’ ಕವನವನ್ನು ಉದಾಹರಣೆಗೆ ನೋಡಬಹುದು. ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ರೈಲಿನ ಓಟದ ನಡುವೆ ಎಚ್ಚೆತ್ತು ಕಾಣುವ ನೋಟಗಳು ನಿರೂಪಕನಿಗೆ ದಗ್ಭ್ರಾಮಕಸ್ಥಿತಿಯನ್ಮ್ನಂಟು ಮಾಡುತ್ತವೆ.
ಅರ್ಧ ನಿದ್ದೆ ಅರ್ಧ ಎಚ್ಚರದಲ್ಲಿ
ದೀಪಗಳ ಗುಂಪು
ಕಿಟಕಿ ಕಡೆಗೆ
ಇನ್ನೂ ಯಾಕೆ ಉರಿದಿದೆ
ಮಹಡಿಯಲ್ಲಿ ಲೈಟು
ಯಾವ ಕೂಸೋ ಎದ್ದು ಅಳುತ್ತಿರಬೇಕು
ಯಾವುದೋ ಜೀವ ಖಾಯಿಲೆ ಬಿದ್ದಿರಬೇಕು
ಕುಲುಕುತ್ತ ಗಡಬಡಿಸಿ
ಕತ್ತಲಿನ ನಡುವೆ ದೀಪಗಳ ದ್ವೀಪ ಹೊಕ್ಕಾಗ ರೈಲು ನಿಧಾನವಾಗಿ
ಕಂಬಿ ಪಕ್ಕ ಕುಂಟುತ್ತ ಹೋದ ಜೋಪಡಿಯಲ್ಲಿ
ಯಾಕೆ ಇನ್ನೂ ಸಣ್ಣ ಲಾಟೀನು ಬೆಳಕು
ವಿದ್ಯುತ್ ದೀಪ ಪಟ್ಟಣದ ಮಧ್ಯೆ;
ಎಣ್ಣೆಯಾದರೂ ಅದರಲ್ಲಿ ಸಾಕಷ್ಟು ಇದೆಯೊ
ಮುಗಿಯುತ್ತಿದೆಯೊ ಇನ್ನಷ್ಟು ಬೇಕಿದೆಯೊ
ಪರೀಕ್ಷೆಗೋಸ್ಕರ ಎದ್ದು ಓದುವವರಿಗೆ
ಇರುಳಿಡೀ ನರಳುವ ರೋಗಿಗಳಿಗೆ (ಪು.೯೪, ೯೫)
ಇಷ್ಟೇ ಅಲ್ಲದೇ ತನ್ನ ಅನೇಕ  ಚಿಂತೆಗಳು, ಬೋಗಿಯೊಳಗೆ ಹಾಯಾಗಿ ಮಲಗಿರುವವರ ಕನಸುಗಳು, ಅವರನ್ನು ದೋಚುವ, ದೋಚುವವನನ್ನು ಹಿಡಿಯುವ ಪೋಲಿಸ್, ಬರ್ತಿನಲ್ಲಿ ಮಲಗಿರುವವಳ ಮುದ್ದು ಮೊಗದಲ್ಲಿ ಮೆತ ಹಾಡು ನೆನಪಿಸಿಕೊಳ್ಳುವ ಯುವಕ, ಟಿಕೆಟ್ಟಿರದ ಪ್ರಯಾಣಿಕನ ಕಷ್ಟ, ರೈಲ್ವೆ ನಿಲ್ದಾಣದಲ್ಲಿ ನಿರೀಕ್ಷೆ, ನಿರಾಶೆಗಳನ್ನು ತಳೆದು ರೈಲಿಗಾಗಿ ಕಾಯುತ್ತಿರುವ ಕಾರವಾನ್‌ಗಳು- ಇಷ್ಟೆಲ್ಲ ವೈವಿಧ್ಯಗಳನ್ನು ಈ ಕವನ ಸಂಕಲನದುದ್ದದ ಕವಿಎಗಳಲ್ಲಿ ಕಾಣಬಹುದು.
’ಓ ಪ್ರಾಣಶಕ್ತಿ ದೇವಿ’ ಕವನದಲ್ಲಿ ಮೇಲುಕೀಳಿನ ಭ್ರಮೆಯ ಸೃಷ್ಟಿಗಳನ್ನು ಪಂಚಭೂತಗಳನ್ನು ನೆಪವಾಗಿಟ್ಟುಕೊಂಡು ಹೇಳುವ ರೀತಿ ಗಮನಾರ್ಹವಾಗಿದೆ.
ಹೇಳು
ಎಂದು ಬದಲಾಗುವುದು ಭೂತ ಭೂತದ ಕಾಟ
ಒಂದರ ಮೇಲಿನ್ನೊಂದು
ಪ್ಲಥ್ವಿ ಅಪ್ಪುವಿನ ಮೇಲೆ
ಅಪ್ಪು ಅಗ್ನಿಯ ಮೇಲೆ
ಅಗ್ನಿ ವಾಯುವಿನ ಮೇಲೆ
ವಾಯು ಆಕಾಶದ ಮೇಲೆ
ನಾ ಮೇಲೆ
ನೀ ಮೇಲೆ
ಎಂದು ನಡೆಸುವ ಹಲ್ಲೆ
ಪ್ರತಿಹಲ್ಲೆಗಳಿಗೆ ಎಲ್ಲೆ. (ಪು.೧೩೮)
ಈ ಭಾಗವು ಪಂಚಭೂತಗಳಂತೆ ಸಹಜವಾಗಿ ಒಂದರೊಡನೊಂದು ಸಹಬಾಳ್ವೆ ನಡೆಸಬೇಕಿರುವವರು, ಒಬ್ಬರ ಮೇಲೊಬ್ಬರು ಹತ್ತಿ ತುಳಿಯುವ, ಕುಣಿಯುವ ಕ್ರಿಯೆ ಏಕೆಂಬ ಮೂಲಭೂತ ಪ್ರಶ್ನೆಯನ್ನು ಸಮಾಜದ ಜಾತಿ ಸಂಕಥನಗಳಿಗೆ ಒಡ್ಡುತ್ತದೆ.
ಇಂಥ ಸಂಶಯದ ಸಾವುಗಳ ಆಚೆಗಿದೆ
ತಥಾಗತ ಬೋಧಿಸಿದ ಧರ್ಮ
ಅಲ್ಲದೆ ತಥಾಗತನ ಪ್ರಕಾರ
ಸಾವು ಎನ್ನುವುದು ಬರುವುದು ಕೊನೆಗೊಂದು ಸಲ ಮಾತ್ರ ಅಲ್ಲ.
ಎಷ್ಟೋ ಥರದ ಸಾವುಗಳಿವೆ
ಬದುಕುಗಳೂ ಇವೆ
ಇಂಥ ಸಂಶಯಗಳಾಚೆಗೆ
ಇಂಥ ನಂಬಿಕೆಗಳಾಚೆಗೆ. (ಪು.೨೨೬)
ಬುದ್ಧ ಹಾಗೂ ಶಿಷ್ಯನ ಸಂವಾದವನ್ನು ಬಳಸಿಕೊಂಡು ರಚಿತವಾವಾಗಿರುವ ’ಸಂಶಯಸೂತ್ರ’ ಎಂಬ ಕವನವು, ಬುದ್ಧನ ಪ್ರಕಾರ, ಮನುಷ್ಯ ಸಾಯುವ ಅಂತಿಮ ಕ್ಷಣದಲ್ಲಿ ಅವನು ಎಳೆಯುವ ಕೊನೆಯುಸಿರಿನ ಕ್ಷಣದಲ್ಲಲ್ಲ. ಹುಟ್ಟು ಸಾವಿನ ಮುನ್ನುಡಿ ಎಂಬುದನ್ನು ಮನದಟ್ಟು ಮಾಡಿಕೊಡುತ್ತದೆ. ಇದು ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳುವ ಬುದ್ಧನಿಗಿಂಥ ತುಂಬ ದೂರ ಕ್ರಮಿಸಿರುವುದನ್ನು ಕಾಣಬಹುದು.
’ಸೂರ್ಯಜಲ’ ಕವನ ಸಂಕಲನವು ಶಿವಪ್ರಕಾಶರಿಗೆ ಈ ಹಿಂದೆಯೇ ಆರಂಭವಾಗಿರುವ ನವ್ಯ ಪ್ರಭಾವದ ಬಿಡುಗಡೆಗೆ ಸೂಕ್ತ ದಾಖಲೆಗಳನ್ನು ನೀಡುತ್ತದೆ. ’ಬಾಗ್ದಾದ್: ಒಂದು  ಪ್ರಾರ್ಥನೆ ಕವನದ ಮೊದಲನೆ ಭಾಗದಲ್ಲಿ ಸಾಂಪ್ರದಾಯಿಕವಾದ ದೈವದ ಬಳಿಯ ಪ್ರಾರ್ಥನೆಗಿಂಥ ಭಿನ್ನವಾದ ಅಭಿವ್ಯಕ್ತಿ ಇದೆ. ಈ ಹಿಂದಿನ ಭಕ್ತಿಪಂಥಗಳಿಗೆ ಎದುರಾಗಿದ್ದ ಅನೇಕ ಆತಂಕ, ತಲ್ಲಣಗಳಿಗಿಂಥ ಪ್ರಸ್ತುತ ಸಂದರ್ಭ ಆಘಾತಕಾರಿಯಾದುದರಿಂದ, ಮಾನವೀಯ ಪರವಾದ ತುಡಿತ ಇಲ್ಲಿ ವ್ಯಕ್ತವಾಗುತ್ತಿರುವ ರೀತಿ ವಿಷೇಶವಾದುದು.
ವಿಯತ್ನಾಂ ತಾಯ ಧೀರ ವಾತ್ಸಲ್ಯ , ಆರ್ಕಿಮಿಡೀಸನ ಭದ್ರ ಚಿತ್ರ, ಮೈಕೆಲ್ ಏಂಜೆಲೋನ ವರ್ಣ ಸಮಾಧಿ. ನಕ್ಷತ್ರಗಳ ನಿರುಮ್ಮಳ ಆಯುಷ್ಯ. ನೆಲತಾಯ ನಿಗೂಢ ಮೌನಗಳನ್ನು ಅರ್ಥೈಸುವ ಬಗೆ ಭಿನ್ನವಾಗಿದೆ. ಇವರ ಈ ಶಾಂತ ಚಿತ್ರ ‘ಕ್ರಿಯೆ’ಯನ್ನು ಭಂಗಪಡಿಸಲು, ಭಗ್ನಗೊಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ಅವುಗಳನ್ನು ಮೀರುವ ಅವರುಗಳ ಪ್ರಯತ್ನದೆಡೆಗೆ ಕವಿತೆ ಗಮನ ಸೆಳೆಯುತ್ತದೆ.
ಈ ಕವಿತೆಯ ಪ್ರಾರ್ಥನೆ ಕೇಂದ್ರೀಕೃತವಾಗಿರುವುದು ಮುಖ್ಯವಾಗಿ ತನಗೆ ಬೇಕಾದ ಸ್ಥೈರ್ಯವನ್ನು ಪಡೆಯುವುದರೆಡೆಗೆ. ಅದಕ್ಕಾಗಿ ಇಲ್ಲಿ ಪ್ರಾರ್ಥನೆ ನಡೆದಿರುವುದು ‘ಬಾಬಾ’ನ ಬಳಿ. ಆಧುನಿಕ ಯುದ್ಳೋನ್ಮಾದಿ ನಿಲುವುಗಳ ಪರಿಣಾಮವಾಗಿ, ವಿನಾಕಾರಣ ಹೆಚ್ಚುತ್ತಿರುವ ಯುದ್ಧಗಳ ನಡುವೆ. ಇಲ್ಲಿ ಯುದ್ಧವನ್ನು, ಎದುರಿಸುವ ಹಾಗೂ ಯುದ್ಧ ಪರಿಣಾಮಗಳನ್ನು ಅರಗಿಸಿಕೊಳ್ಳುವ ಸ್ಥೈರ್ಯಕ್ಕಾಗಿ ಪ್ರಾರ್ಥಿಸಲಾಗುತ್ತಿದೆ.
ಈ ಕವನದಲ್ಲಿ ವ್ಯಂಗ್ಯದ ಧಾಟಿಯಲ್ಲಿ ಕವಿತೆ ಯುದ್ಧೋತ್ಸಾಹಿಗಳ ಜೀವವಿರೋಧಿ ನಿಲುವನ್ನು ಖಂಡಿಸುತ್ತದೆ. ಆ ಯುದ್ಧಗಳ ನಡುವೆಯೂ ಜೀವಪರವಾದ ಧೋರಣೆಗಳು ಚಿಗುರಲು ಇರುವ ಅವಕಾಶಗಳನ್ನು ಕೂಡ ಮಂಡಿಸುತ್ತದೆ.
ಹಸಿವನ್ನು ಕೇಂದ್ರವಾಗುಳ್ಳ ಕವಿತೆಗಳು ಈ ಸಂಕಲನದಲ್ಲಿ ಮುಖ್ಯವಾಗಿವೆ. ನ್ಯಾಷನಲ್ ಪಾರ್ಕಿನಲ್ಲಿ ಬಕಧ್ಯಾನ-೨, ರೊಟ್ಟಿ ಚೂರಿಗಾಗಿ ಕವನಗಳಷ್ಟೇ ಅಲ್ಲದೆ, ಮುಂದಿನ ಕವನ ಸಂಕಲನಗಳಲ್ಲೂ ಹಸಿವು ಸ್ಥಾನ ಪಡೆದಿದೆ. ಜಗದ ಹಸಿವಿನ ಅನೇಕ ರೂಪಗಳನ್ನು ಈ ಕವಿತೆಗಳು ಅಭಿವ್ಯಕ್ತಿಸುತ್ತವೆ. ಈ ಆಧುನಿಕ ಜಗತ್ತಿನಲ್ಲಿ ಉಂಟಾಗುತ್ತಿರುವ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕುರಿತು ಸಂವೇದನಾಶೀಲ ಮನಸ್ಸೊಂದು ವಿಮುಖವಾಗಲಾರದು. ಶಿವಪ್ರಕಾಶರ ಕಾವ್ಯದ ಹಸಿವಿನ ಸ್ವರೂಪವು ವ್ಯಕ್ತಿಯಿಂದ ವ್ಯಕ್ತಿಗೆ, ಪ್ರಾಣಿ-ಪಕ್ಷಿಗಳಿಗೂ ವಿಸ್ತರಿಸುತ್ತದೆ. ಈ ಬಗೆಯ ವಿಸ್ತಾರದಲ್ಲೆ, ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳಿಗೂ ವಿಸ್ತರಿಸುತ್ತದೆ. ಈ ಬಗೆಯ ವಿಸ್ತಾರದಲ್ಲೆ, ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳ ನಡುವೆ ಇರುವ ಹೋಲಿಕೆಯನ್ನು ಹಸಿವಿನ ಕುರಿತಾದ ರಚನೆಗಳಲ್ಲಿ ಕಾಣಬಹುದು.
‘ನವಿಲು ನಾಗರ’ (೧೯೯೬) ಸಂಕಲನವು ರಂಗಗೀತೆಗಳು, ತತ್ವಪದಗಳು, ಭಾವಗೀತೆಗಳು ಎಂಬ ಭಾಗವನ್ನೊಳಗೊಂಡಿದೆ. ನಾಟಕದ ನಾಟ್ಯೀಕರಣ, ಸಂದರ್ಭ, ಅವಶ್ಯಕತೆಗಳಿಗೆ ತಕ್ಕಂತೆ ರಚನೆಯಾಗಬೇಕಾದ ಸವಾಲನ್ನುಳ್ಳ ರಂಗಗೀತೆಗಳು ನಾಟಕದ ಭಾಗವಾಗಿ ಬಳಕೆಯಾಗಿವೆ.
‘ಮಾದಾರಿ ಮಾದಯ್ಯ’ ನಾಟಕದ ಆದಿಕಲ್ಯಾಣಕೆ... ಕವನವು ಕಲ್ಯಾಣದ ಪ್ರವೇಶಕ್ಕಿರುವ ನೂರಾರು ಬಾಗಿಲುಗಳ ಕುರಿತು ಹಾಗೂ ಆ ಬಾಗಿಲುಗಳ ಅನೇಕ ರೂಪಗಳನ್ನು ಕುರಿತು ರಚನೆಯಾಗಿದೆ. ವಚನಕಾರರ ಕಲ್ಯಾಣದ ಕಟ್ಟುವಿಕೆ ಹಾಗೂ ವಚನಕಾರರ ನಂತರದ ವ್ಯತ್ಯಸ್ಥ ಸ್ಥಿತಿಗಳೆರಡನ್ನೂ ಕಂಡ ಮನಸ್ಸಿನ ಪ್ರತಿಕ್ರಿಯೆಯಾಗಿ ಇದು ದಾಖಲಾಗಿದೆ. ಮಹಾಚೈತ್ರ, ಮಾದಾರಿ ಮಾದಯ್ಯ, ಮಂಟೇಸ್ವಾಮಿ ನಾಟಕಗಳು ಕಲ್ಯಾಣದ ಆಶಯವನ್ನು ಪುನರ್ ಸ್ಥಾಪಿಸುವ ಪ್ರಯತ್ನವನ್ನು ಮಾಡುತ್ತವೆ. ಅದಕ್ಕೆ ಪೂರಕವಾಗಿ  ‘ಮಾದಾರಿ ಮಾದಯ್ಯ’ ರಂಗಗೀತೆಗಳು ಹೆಣೆಯಲ್ಪಟ್ಟಿವೆ.
ತತ್ತ್ವಪದಗಳು ಭಾಗದಲ್ಲಿರುವ ತಿಗಣೆ ಸಾಮಾನ್ಯವಾದ ತಿಗಣೆಯಲ್ಲ. ಮಲಗಿರುವಾಗ ಕಚ್ಚ ತೊಡಗುವ ತಿಗಣೆ- ಹುಚ್ಚು ಹಿಡಿಸುವುದು, ಬೆಟ್ಟು ಗಾತ್ರದಿಂದ ಬೆಟ್ಟ ಗಾತ್ರವಾಗಿ ಬೆಳೆಯುವ ಕ್ರಿಯೆ ಮುಂತಾದವುಗಳು ಎಚ್ಚರಗೊಳಿಸುವ ಹರಿವಾಗಿ ಬರುತ್ತದೆ.ನಾಗರ‍್ಹಾವು ಕಚ್ಚುವಿಕೆಯಲ್ಲಿ ನಕಾರಾತ್ಮಕ ಅಂಶಗಳು ಮಾತ್ರ ಇಲ್ಲ.
ಹಾದಿಯಲ್ಲೆದುರಾದ ಹಾವು
ಅಬ್ಬ! ತಾನೆ ಹಾದಿಯಾಯಿತಲ್ಲೋ! ( ಪು.೩೬೧)
ಈ ನಾಗಾರ‍್ಹಾವಿನ ಕಚ್ಚುವಿಕೆಯನ್ನು ಎಚ್ಚರದಿಂದ ಪರಿಭಾವಿಸುವ ಅವಕಾಶಗಳಿವೆ. ಅದರಲ್ಲಿ ನಾವು ನಮ್ಮ ಭವಿಷ್ಯದ ದಾರಿಯನ್ನು ಕೂಡ ಕಂಡುಕೊಳ್ಳಬಹುದಾದ ಸಾಧ್ಯತೆಗಳೆಡೆಗೆ ಕವನ ಸಾಗುತ್ತದೆ.
‘ಕುಂಬಾರಣ್ಣ’ ಕವನವು ಕುಂಬಾರನ ಏಕತಾನ ತಲ್ಲೀನತೆ, ಕಾಯಕದಲ್ಲಿನ ತೊಡಗಿಕೊಳ್ಳುವಿಕೆ, ನಿರಂತರ ದುಡಿಮೆಗಳನ್ನು ಮಂಡಿಸುತ್ತಲೆ, ಆ ಕುಂಬಾರನ ಮಡಿಕೆಗೆ ಎದುರಾಗುವ ದೊಣ್ಣೆಯ ಘಾತವನ್ನು ಚಿತ್ರಿಸುತ್ತದೆ. ಆಧುನಿಕ ಕಾಲದಲ್ಲಿ ಕುಂಬಾರಿಕೆಯಂಥ ದೇಸೀ ಕಸುಬುಗಳಿಗೆ ಎದುರಾಗುತ್ತಿರುವ ಆತಂಕಗಳನ್ನು
ಕಂಡರು ಮಡಿಕೆಗಳು
ಕಾಣವೊ ಬಡಿಗೆಗಳು
ಒಮ್ಮೆಲೆ ಒಡೆದಿರಲು
ಮಮ್ಮಲ ಮರುಗಿದನೊ| ಮಾಡಿದೆನೆಂಬ
ಹಮ್ಮನು ಮರೆದಿಹನೋ| ಕುಂಬಾರಣ್ಣ
ಸುಮ್ಮನೆ ಕೊರಗಿಹನೊ|| (ಪುಟ ೩೬೨)

ಈ ಸಾಲುಗಳು ಧ್ವನಿಸುತ್ತವೆ. ಈ ಆತಂಕಗಳನ್ನು ಯಶಸ್ವಿಯಾಗಿ ದಾಟುವ ನಂಬಿಕೆ ಮುಂದಿನ ಭಾಗದಲ್ಲಿ ವ್ಯಕ್ತವಾಗುತ್ತದೆ.
ಭಾವಗೀತೆಗಳು ಭಾಗದಲ್ಲಿನ ಕವನಗಳು ದೈನಂದಿನ ಲಯಗಳನ್ನು ಆದರಿಸಿವೆ. ‘ಮೂರು ಪ್ರಶ್ನೆಗಳು’ ಕವನದಲ್ಲಿನ ಬೆಳವಣಿಗೆಯು ಹೆಣ್ಣಿನ ಬಾಳಿನ ಅವನತಿಯತ್ತ ಸಾಗುತ್ತದೆ. ಮೊದಲ ಪ್ರಶ್ನೆಗೆ ಸಂಭ್ರಮದಿಂದ ಉತ್ತರಿಸಿದ ‘ಮಲ್ಲಿಗೆ ಹೂವಿನ ಚಂದದ ಚೆಲುವೆ’ಯಾದಳು, ‘ನಿಂಬೆಯ ಹಣ್ಣೆ ತುಂಬಿದ ಹಣ್ಣಾಗಿ’- ಗಂಡನ ಮನಕ್ಕೆ ಆನಂದ ನೀಡಲು ಬಸುರಿಯಾಗಿದ್ದಾಳೆ. ಕವನದ ಕೊನೆಭಾಗದಲ್ಲಿ ‘ಮಲ್ಲಿಗೆ ಬಿಸುಟ ಮಾಂಸ, ಎಲುಬಾಗಿರುವ ಹೆಣ್ಣು ‘ಗಂಡನ ಮನದಲಿ ಮುಳ್ಳೇ ತುಂಬಿವೆ. ಅಲ್ಲಿಗೆ ನಾನು ಕೊಳ್ಳಿಯನಿಕ್ಕುವೆ|’ ಎಂಬ ನಿರ್ಧಾರಕ್ಕೆ ಬರುತ್ತಾಳೆ. ಅವಳ ಈ ಸ್ಥಿತಿಗೆ ಕವನದಲ್ಲಿ ಯಾವ ಕಾರಣಗಳೂ ಸಿಗದಿದ್ದರೂ, ಆರಂಭದಿಂದ ಅವಳ ಸಂಭೋಧನೆಗೆ ಬಳಸುತ್ತಿರುವ ‘ಅನ್ವರ್ಥ’ ನಾಮಗಳಿಂದಲೆ ಇದು ವ್ಯಕ್ತವಾಗುತ್ತದೆ.
‘ಸುಡು ಬಯಲಗಾಳಿ’ ಕವನವು ಸನಾತನತೆಯನ್ನು ಪ್ರೇಮಿಯ ಸಂವಾದದ ಮೂಲಕ ಪ್ರಶ್ನಿಸುತ್ತದೆ.
ಯಾರು ನೆಟ್ಟರು ಇಲ್ಲಿ
ಮುಳ್ಳು ಲೋಹದ ಬಳ್ಳಿ
ಬೇರುಗಳು ಬರಲು ಬರಲು|
ದೂರ ಗಗನದ ನಾಡು
ಖಾಲಿ ನೀಲಿಯ ಜಾಡು
ತೋರೆ ಕಾರ್ಮುಗಿಲ ಕರುಳು ||ಸುಡು||
ಈ ಭಾಗದಲ್ಲಿ ಸನಾತನೆಯ ಬೇರುಗಳು ಮುಳ್ಳು ಲೋಹದ ಬಳ್ಳಿಗಳಾಗಿ ಬದಲಾಗಿರುವುದು- ಅದರ ದುರಂತವನ್ನು ಮಂಡಿಸಲು. ಅಧಿಕಾರ, ಅಂತಸ್ತು, ಜಾತಿ ಶ್ರೇಣೀಕರಣಗಳಿಂದಾಗಿ ಛಿದ್ರಗೊಂಡಿರುವ ಸಮಾಜದ ರಿಕ್ತ ಸ್ಥಿತಿಯನ್ನು ಇಲ್ಲಿ ಕಾಣಬಹುದು.
ಅಂತೆಯೇ, ಅದನ್ನು ಮೌನವಾಗಿ ಒಪ್ಪುವ ಸ್ಥಿತಿಯಲ್ಲಿ ಆಧುನಿಕ ಕಾಲವಿಲ್ಲ. ಈ ದುಸ್ಥಿತಿಯನ್ನು ಮೀರುವ ತುಡಿತ ಕೂಡ ಕೆಳಗಿನಂತೆ ವ್ಯಕ್ತವಾಗುತ್ತದೆ.
ಯಾಕೆ ಯಾತನೆ ಚಿಂತೆ
ಲೋಕಗಳು ನನ್ನಂತೆ
ದೇಕುತಿವೆ ನಿನ್ನ ಕಡೆಗೆ|
ಕರೆಯೆ ಜೀವದ ಗೋವ
ಮೆರೆಯ ಗೋಕುಲ ನಲವ
ಬೇಕು ನಂದನ ಇಳೆಗೆ ||ಸುಡು|| (ಪುಟ ೩೯೮)
ಕಾವ್ಯ ಚಾರಿತ್ರಿಕ, ಸಮಕಾಲೀನ ಸಂದರ್ಭ, ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ಸಂವೇದನೆಯಾಗಿ ಸೃಷ್ಟಿಯಾಗುತ್ತಿರುವಾಗ ಅದರ ರಚನೆ ಹಾಗೂ ಅಭ್ಯಾಸಗಳೆರಡೂ ಸಮಸ್ಯಾತ್ಮಕವಾಗುತ್ತವೆ. ಚರಿತ್ರೆ, ಪುರಾಣ, ಧರ್ಮ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು, ಮಾನವೀಯ ಮುಖದ ಅಮಾನವೀಯತೆಯನ್ನು ಕುರಿತ ಕವನಗಳ ಸಂದರ್ಭದಲ್ಲಂತು ಇದು ಜಟಿಲ ಪ್ರಕ್ರಿಯೆಯಾಗಿ ಬಿಡುತ್ತದೆ. ಈ ಬಗೆಯ ಕವನಗಳ ಅಭ್ಯಾಸಕ್ಕೆ ತಕ್ಕ ಸಿದ್ಧತೆಗಳು ಕೂಡ ಅಗತ್ಯವಾಗುತ್ತವೆ. ಇಲ್ಲವಾದಲ್ಲಿ ಕವಿತೆ ತಂತಾನೆ ಅರ್ಥಗಳನ್ನು ಹೊಳೆಸಲಾರದು. ಕೇವಲ ಅದೂ ಚಾಕ್ಷುಷ ರೂಪವಾಗಿ, ಕಣ್ಣೋದಾಗುತ್ತದೆಯೆ ವಿನಃ ಕವಿಯ ಸಂವೇದನೆ ಹಾಗೂ ಓದುಗನ ಸಮವೇದನೆಗಳೆರಡು ಸಂಧಿಸಲಾರದೆನಿಸುತ್ತದೆ.
ಶಿವಪ್ರಕಾಶರ ‘ನವಿಲು ನಾಗರ’ ಕವನ ಸಂಕಲನದ ನಂತರ ಈ ಸಮಸ್ಯೆ ಮುಖ್ಯವಾಗಿ ಓದುಗರಿಗೆ ಎದುರಾಗುತ್ತದೆ. ಇದಕ್ಕೂ ಮೊದಲ ಕವನಗಳ ರಚನೆಗಳನ್ನು ಒಂದು ಸಂದರ್ಭ. ಘಟನೆ, ಪಾತ್ರಗಳ ಮೂಲಕ ಅಥವಾ ನಿರೂಪಕನ ನಿವೇದ. ಪ್ರಾರ್ಥನೆ ಎಂದು ಅರ್ಥೈಸಿಕೊಳ್ಳುವ ಸಾಧ್ಯತೆಗಳನ್ನೂ ಮೀರಿರುವ ರಚನೆಗಳನ್ನು ಮುಂದೆ ಕಾಣಬಹುದು. ಈ ಕಾರಣದಿಂದಾಗಿ ಕಾವ್ಯದ ಓದುಗರನ್ನೂ ಮುಂದೆ ಕಾಣಬಹುದು. ಈ ಕಾರಣದಿಂದಾಗಿ ಕಾವ್ಯದ ಓದುಗರನ್ನೂ ಕೂಡ ಸಿದ್ಧಗೊಳಿಸುವ ಕೆಲಸವನ್ನೂ ಶಿವಪ್ರಕಾಶರೆ ತಮ್ಮ ಕೃತಿಗಳಿಗೆ ಬರೆದಿರುವ ಮುನ್ನುಡಿಗಳಲ್ಲಿ ಕೆಲವು ಸೂಕ್ಷ್ಮ ಸುಳಿವುಗಳನ್ನು ನೀಡುತ್ತಾರೆ. ವಚನ, ಕೀರ್ತನೆ, ಶೂನ್ಯ ಸಂಪಾದನೆ, ತತ್ತ್ವಪದಕಾರರು, ಮಧುರಚೆನ್ನರ ಕೃತಿಗಳ ಪ್ರಭಾವವನ್ನು ಈ ಸಂಕಲನಗಳಲ್ಲಿ ಕಾಣಬಹುದು.
ನವ್ಯರ ಪ್ರಭಾವದಿಂದ ಬಿಡುಗಡೆ ಬಯಸುವ ಶಿವಪ್ರಕಾಶರ ಕಾವ್ಯ, ಮೇಲಿನವರಿಂದ ಪ್ರಭಾವಿತವಾಗುವುದಕ್ಕೆ ಮುಜುಗರಕ್ಕೋಳಗಾಗುವುದಿಲ್ಲವೆಂಬುದು ಮುಖ್ಯವಾಗಿದೆ. ಂಟಿxiಣಥಿ oಜಿ iಟಿಜಿಟueಟಿಛಿe ಕೃತಿಕಾರರಿಗೆ ಇರುತ್ತದೆಂಬ ಸಿದ್ಧಾಂತವನ್ನು ಒಂದು ಬಗೆಯಲ್ಲಿ ಈ ಕಾವ್ಯ ಪ್ರಶ್ನಿಸುತ್ತದೆ. ಇದರಿಂದಾಗಿ ಕನ್ನಡ ಕಾವ್ಯದ ಕೊಂಡಿಯಿಂದ ಕಳಚಿಕೊಳ್ಳದೆ, ಕನ್ನಡ ಕಾವ್ಯಕ್ಕೆ ಅನೇಕ ಧಾರೆಗಳನು ಸೇರಿಸಿಕೊಳ್ಳುವುದರಿಂದ ಕನ್ನಡ ಕಾವ್ಯದ ಅಭಿವ್ಯಕ್ತಿ, ವಸ್ತು, ತಂತ್ರ, ಭಾಷೆ, ಭಾಷಾರಚನೆಯಲ್ಲಿ ಹೊಸ ಹುಡುಕಾಟ ನಡೆಸುತ್ತಿರುವುದು ಶಿವಪ್ರಕಾಶರ ಕಾವ್ಯದ ಸಕಾರಾತ್ಮಕ ಅಂಶವಾಗಿದೆ.





No comments:

Post a Comment