ಮಾಧ್ಯಮದಿಂದ ಕನ್ನಡದ ಉಳಿಯುತ್ತದೆಯೆ?
ಪ್ರದೀಪ್ ಮಾಲ್ಗುಡಿ
ಕನ್ನಡವೂ ಸೇರಿದಂತೆ ಜಗತ್ತಿನ ಭಾಷೆಗಳು ಉಳಿದಿರುವುದು ಅವುಗಳ ಬಳಕೆಯ ಸಾಧ್ಯತೆಗಳಿಂದ. ಯುವಜನಾಂಗವು ಬಳಸದ ಯಾವುದೇ ಭಾಷೆಯು ಮಾತೃ ಭಾಷೆಯಾಗಲು ಸಾಧ್ಯವಿಲ್ಲ. ಪ್ರಸ್ತುತ ಕನ್ನಡ ಮಾಧ್ಯಮ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಯುವಜನಾಂಗಕ್ಕೆ ಕನ್ನಡ ಭಾಷೆಯನ್ನು ಪರಿಪೂರ್ಣವಾಗಿ ಕಲಿಸುವ ಸಾಧ್ಯತೆಗಳನ್ನು ಶೋಧಿಸುವುದು ಅತ್ಯಗತ್ಯ. ಆದರೆ, ಈ ಶೋಧದ ಕೊರತೆಯೇ ಸದ್ಯದ ಕನ್ನಡ ಭಾಷೆಯ ಅಳಿವು-ಉಳಿವಿನ ಪ್ರಶ್ನೆ ಎದುರಾಗಲು ಕಾರಣವಾಗಿದೆ. ನಾಡಿನ ಪ್ರತಿಷ್ಟಿತ, ಅಪ್ರತಿಷ್ಟಿತ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಓದುವ, ಬರೆಯುವ ಮಾತನಾಡುವ ಕನ್ನಡಗಳನ್ನು ಕಂಡು, ಕೇಳಿರುವ ಅನುಭವಗಳಿಂದ ಕೆಲವು ಆತಂಕದ ವಿಷಯಗಳು ಹೊರಬರುತ್ತವೆ.
ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವ ೮೦% ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ, ನಿರರ್ಗಳವಾಗಿ ಕನ್ನಡ ಭಾಷೆಯನ್ನು ಬರೆಹ ಹಾಗೂ ಮಾತಿನ ಮೂಲಕ ಅಭಿವ್ಯಕ್ತಿಸುವ ಸಾಮರ್ಥ್ಯವೇ ಸಿದ್ಧಿಸಿರುವುದಿಲ್ಲ. ಈ ಯುವ ಜನಾಂಗವೇ ತಾನೆ ಭಾಷೆಯನ್ನು ವ್ಯವಸ್ಥಿತವಾಗಿ ಕಲಿತು, ಬಳಸಿ, ಬೆಳೆಸಬೇಕಾಗಿರುವುದು? ಆದರೆ, ಇಂದಾಗುತ್ತಿರುವುದು ಈ ಯುವಜನಾಂಗವು ಕನ್ನಡ ಭಾಷೆಯನ್ನು ಕಲಿಯುವ ಹಾಗೂ ಬಳಸುವ ಎರಡೂ ಕ್ರಿಯೆಗಳಿಂದ ವಿಮುಖವಾಗುತ್ತಿದೆ. ಹೀಗಾದರೆ, ಕನ್ನಡವನ್ನೆ ಕಲಿಯದ ಮತ್ತು ಬಳಸದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮೂಲಕ ಯಾವ ಸಾಧನೆ ಮಾಡಲು ಸಾಧ್ಯವಾಗುತ್ತದೆ? ಕನ್ನಡ ಮಾಧ್ಯಮದ ಜಾರಿಯ ಸಾರ್ಥಕತೆಯಾದರೂ ಏನು? ಈ ಪ್ರಶ್ನೆಗಳು ನಮ್ಮನ್ನು ಕನ್ನಡ ಪರಿಸರ ನಿರ್ಮಾಣದ ಕೊರತೆಯೆಡೆಗೆ ಗಮನ ಸಳೆಯುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಅವುಗಳು ಕಾರ‍್ಯರೂಪಕ್ಕೆ ಬರುತ್ತಿಲ್ಲ. ಪ್ರಸ್ತುತ ಸಮಸ್ಯೆಗೆ ಕಾರಣಾರಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟರೆ ಅದು ಶೈಕ್ಷಣಿಕ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಮೇಲಿನ ವಿಷಯದ ಆಧಾರಗಳಿಂದ (ಭಾಷಾ ಕಲಿಕೆಯ ಮಿತಿಗಳು) ಈ ಸ್ಥಿತಿಗೆ ಶಿಕ್ಷಕರು, ಅಧ್ಯಾಪಕರು, ಅಧಿಕಾರಿಗಳು ಕಾರಣವೆಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ನೀತಿ, ನಿಯಮ, ಯೋಜನೆಗಳನ್ನು ಸರ್ಕಾರ ರೂಪುಗೊಳಿಸುತ್ತದಾದರೂ ಅದು ಆಚರಣೆಗೆ ಬರುವಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ. ಸರ್ಕಾರಗಳ ಅನೇಕ ಯೋಜನೆಗಳ ಮೂಲಕ ಶಿಕ್ಷಣ ನೀಡುವ ಪ್ರಯತ್ನವು ಕಳೆದ ದಶಕದಲ್ಲಿ ಭಾರೀ ಪ್ರಚಾರ ಪಡೆದಿತ್ತು. ’ಸರ್ವ ಶಿಕ್ಷಣ ಅಭಿಯಾನ’ದ ಹೆಸರಿನಲ್ಲಿ ದೇಶದಾದ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಪ್ರಯತ್ನವನ್ನು ಆರಂಭಿಸಲಾಯಿತು. ದಶಕ ಕಳೆದರೂ ಆ ಪ್ರಯತ್ನ ಸಫಲಗೊಂಡಿಲ್ಲ. ಕಾರಣವೇನೆಂದರೆ, ಭಾಷಾ ಬೋಧನೆಯಲ್ಲಿರುವ ಸಮಸ್ಯೆಗಳು.
ಆಧುನಿಕೋತ್ತರ ಸಂದರ್ಭದಲ್ಲಿ ವ್ಯಾವಹಾರಿಕ ಚಿಂತನೆಗಳ ಬೀಸಿನಲ್ಲಿ ಭಾಷೆಯೂ ಸೇರಿದಂತೆ ಮಾನವ ಶಾಸ್ತ್ರ, ಸಮಾಜ ವಿಜ್ಞಾನಗಳೆಡೆಗೆ ನಿರಾಸಕ್ತಿಯ ವಾತಾವರಣ ನಿರ್ಮಾಣವಾಗಿದೆ. ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿರುವ ಆಸಕ್ತಿ ಭಾಷೆಗಳ ಬಗೆಗೆ ಇಲ್ಲ. ಭಾಷಾ ಭೋಧನೆ, ಕಲಿಕೆಗಳೆರಡೂ, ಅಪ್ರಸ್ತುತವೆನ್ನುವಂಥಹ ತೀರ್ಮಾನಕ್ಕೆ ಬರಲಾಗಿದೆ. ಇದರ ಜೊತೆಗೆ ಆಧುನಿಕ ಯುಗದಲ್ಲಿ ಜನಾಂಗಗಳೇ ಸಂವೇದನಾರಹಿತರಾಗಿ ಬದಲಾಗುತ್ತಿದ್ದಾರೆ.
ಭಾಷಾ ವಿಷಯಗಳ ಬೋಧನೆಯು ಲೋಕವನ್ನು ಗ್ರಹಿಸುವ, ಭಿನ್ನ ವಯೋಮಾನ, ಜಾತಿ, ಲಿಂಗ, ವರ್ಗ, ಪರಿಸರದವರ ಜೊತೆ ಸಂವಾದವನ್ನು ಸಾಧ್ಯವಾಗಿಸುವ, ಪ್ರಾಚೀನ ಕಾಲದಿಂದ ಇಂದಿನವರೆಗೂ ಸಮಾಜದಲ್ಲುಂಟಾಗಿರುವ ಬದಲಾವಣೆಗಳು, ಪ್ರಭುತ್ವ ಮತ್ತು ಅದರ ಹಿಡಿತಗಳು, ಅವುಗಳನ್ನು ನಿರ್ವಹಿಸುವ ಕ್ರಮಗಳು, ಸಮಸ್ಯೆಗಳು ಮುಂತಾದ ಅನಂತ ವಿಷಯಗಳನ್ನು ಒಳಗೊಳ್ಳುತ್ತದೆ. ಭಾಷಾ ಬೋಧನೆಯೆಂದರೆ, ಕವಿ, ಕಾವ್ಯ, ಛಂದಸ್ಸು ಮಾತ್ರವಲ್ಲ- ಎಂಬ ವಿಷಯವನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ. ಹಾಗೂ ಅದನ್ನು ವಿದ್ಯಾರ್ಥಿ ಸಮುದಾಯ ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೋಡಬೇಕು. ಸ್ವತಃ ಬೋಧಕರೂ ಇದನ್ನು ಮೊಟ್ಟಮೊದಲು ಅರಿಯಬೇಕಾಗಿದೆ.
ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಪಾತ್ರವಿರುವಂತೆಯೇ ಪೋಷಕರ ಪಾತ್ರವೂ ಗಮನಾರ್ಹ. ಅನೇಕ ಶಾಲಾ, ಕಾಲೇಜುಗಳಲ್ಲಿ ಅನ್ಯ ವಿಷಯಗಳ ಶಿಕ್ಷಕರು ಭಾಷಾಬೋಧನೆಯ ಬಗ್ಗೆ ಲಘುವಾಗಿ ಮಾತನಾಡುತ್ತಿರುತ್ತಾರೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾಬೋಧನೆಯನ್ನು ನೆಪಮಾತ್ರಕ್ಕೆ ಮಾಡಲಾಗುತ್ತಿದೆ. ಕನ್ನಡ ಭಾಷೆಯ ಶಿಕ್ಷಕರು, ಉಪನ್ಯಾಸಕರಿಗೆ ವೇತನ ತಾರತಮ್ಯವೂ ಜಾರಿಯಲ್ಲಿದೆ. ಪೋಷಕರು ಕೂಡ ವಾಣಿಜ್ಯ, ವಿಜ್ಞಾನ, ಗಣಿತ ವಿಷಯಗಳಿಗೆ ನೀಡಿದ ಒತ್ತನ್ನು ಭಾಷಾಕಲಿಕೆಗೆ ನೀಡುವುದಿಲ್ಲ. ಈ ಅನೇಕ ಕಾರಣಗಳಿಂದಾಗಿ ಭಾಷಾ ಬೋಧನೆ ಹಾಗೂ ಕಲಿಕೆಗಳೆರಡೂ ಅಪ್ರಸ್ತುತವೆಂಬಂತಹ ಮಟ್ಟಕ್ಕೆ ಇಂದಿನ ಸ್ಥಿತಿಯಿದೆ. ಈ ಪರಿಸ್ಥಿತಿಯನ್ನು ಸುಧಾರಿಸದ ಹೊರತು ಭಾಷಾ ಮಾಧ್ಯಮದ ಗೊಂದಲ ಬಗೆಹರಿಯದು.
ಕಡ್ಡಾಯ ಕನ್ನಡ ಮಾಧ್ಯಮದಿಂದ ಕನ್ನಡದ ಉಳಿವು ಸಾಧ್ಯವೇ?
ಪ್ರಸ್ತುತ ಸಂದರ್ಭದಲ್ಲಿ ಈ ಪ್ರಶ್ನೆಗೆ ಸರಳ ಉತ್ತರ ಸಾಧ್ಯವಿಲ್ಲ. ಏಕೆಂದರೆ, ಕನ್ನಡ ಭಾಷೆಯನ್ನು ಸಮರ್ಪಕವಾಗಿ ಕಲಿಸದೆ ಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸುವುದರ ಮೂಲಕ ಕನ್ನಡ ಭಾಷೆಯ ಉಳಿವು ಸಾಧ್ಯವಾಗದು. ಭಾಷಾ ಕಲಿಕೆಯು ಮೂಲಭೂತವಾದ ಅಂಶ. ಅದರ ಬಳಕೆಯ ಸಾಧ್ಯತೆಗೆ ಕಲಿಕೆ ಅವಶ್ಯಕ. ಈಗ ನಡೆಯುತ್ತಿರುವ ಚರ್ಚೆಗಳು ಎರಡನೆ ಹಂತವನ್ನು ಕುರಿತಾಗಿವೆ. ಕನ್ನಡ ಭಾಷೆಯ ಸಮರ್ಥ ಕಲಿಕೆಯಿಂದ ನಾವು ಮುಂದಿನ ಹಂತಕ್ಕೆ ಹೋಗಬೇಕಲ್ಲದೆ, ಕನ್ನಡ ಮಾಧ್ಯಮದಿಂದಲೇ ಎಲ್ಲ ಸಾಧ್ಯವಾಗದು. ಭಾಷೆಯನ್ನೆ ಕಲಿಯುವ ಅವಕಾಶಗಳಿಂದ ಮುಕ್ತರಾಗಿರುವ ವಿದ್ಯಾರ್ಥಿಗಳು ಭಾಷೆಯನ್ನು ಬಳಸುವ ಕ್ರಮವನ್ನು ಕಲಿಯುವುದು ಸಾಧ್ಯವಿಲ್ಲ. ಈ ಕ್ರಮದ ಅರಿವಿರದ ವಿದ್ಯಾರ್ಥಿಗಳು ಇತ್ತ ಭಾಷೆಯನ್ನೂ ಕಲಿಯದೆ, ಅತ್ತ ವಿಷಯಗಳನ್ನೂ ತಿಳಿದುಕೊಳ್ಳಲಾಗದ ಅತಂತ್ರ ಸ್ಥಿತಿ ಎದುರಾಗಬಹುದು.
ಮೊದಲು, ಭಾಷೆಯನ್ನು ಸಮಗ್ರವಾಗಿ ಕಲಿಸುವ ಮೂಲಕ ಕನ್ನಡದ ಉಳಿವು ಸಾಧ್ಯ. ಪ್ರಾಥಮಿಕ ಹಂತದಿಂದಲೇ ಪರಿಣಾಮಕಾರಿ ವಿಧಾನಗಳನ್ನು ಪಠ್ಯರೂಪಣೆ, ಬೋಧನೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾಷಾಕಲಿಕೆಯನ್ನು ಉತ್ತೇಜಿಸಬೇಕು. ಅಕ್ಷರ, ಪದ, ವಾಕ್ಯಗಳ ಜೋಡಣೆ, ಪ್ರಯೋಗ, ಬಳಕೆಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನ ಈಗಿನ ಶಿಕ್ಷಣ ಪದ್ಧತಿಯಲ್ಲಿದೆ. ಆದರೆ, ವಿದ್ಯಾರ್ಥಿ ಹಾಗೂ ಪೋಷಕರುಗಳ ನಿರಾಸಕ್ತಿಯ ಕಾರಣದಿಂದಾಗಿ ಇದು ಪರಿಣಾಮಕಾರಿಯಾಗುತ್ತಿಲ್ಲ.
ಭಾಷಾ ಬೋಧಕರ ಸಾಮರಸ್ಯದ ಕೊರತೆ
ಪ್ರಥಮ ಭಾಷೆಯಾಗಿ ಕನ್ನಡ, ಸಂಸ್ಕ್ರತ, ಹಿಂದಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಕ್ರಮ ಕೂಡ ಭಾಷಾ ಬೋಧಕರ ನಡುವೆ ಪರಸ್ಪರ ಪೈಪೋಟಿಗೆ ಕಾರಣವಾಗುತ್ತಿದೆ. ಈ ಮೂರೂ ಭಾಷೆಗಳ ಬೋಧಕರು - ತಮ್ಮ ಭಾಷೆಯನ್ನೆ ಆಯ್ದುಕೊಳ್ಳಲಿ ಎಂಬ ಕಾರಣಕ್ಕೆ ಅನೇಕ ಹಂತದಲ್ಲಿ ಅನೇಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಉದಾಹರಣೆಗೆ, ಮೌಲ್ಯಮಾಪನ ಹಾಗೂ ಆಂತರಿಕ ಅಂಕ ನೀಡುವಾಗ ತಳೆಯುವ ಉದಾರ ಧೋರಣೆ. ಈ ಧೋರಣೆಯಿಂದ ಭಾಷಾವಿಷಯದಲ್ಲಿ ವಿದ್ಯಾರ್ಥಿಗಳು ಏನು ಬರೆದರೂ ಪಾಸ್ ಆಗುತ್ತೇವೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಇಲ್ಲಿ ಬೇಕಾಗಿರುವುದು ಭಾಷಾ ಮೂಲಭೂತವಾದವಲ್ಲ. ಬದಲಿಗೆ ಶಿಕ್ಷಕರು ಹಾಗೂ ಅಧ್ಯಾಪಕರುಗಳಲ್ಲಿ ಕಟ್ಟುನಿಟ್ಟಾಗಿ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಯಲ್ಲಿರುವಂತೆ ನೋಡಿಕೊಳ್ಳುವುದು. ಅಂದರೆ, ವಿದ್ಯಾರ್ಥಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ವ್ಯವಸ್ಥೆ ಬಳಕೆಯಾಗಬೇಕೆಂದಲ್ಲ; ಬದಲಾಗಿ ತಾವು ಹಾಗೂ ತಮ್ಮ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ತಾವೇ ಗೌರವಯುತವಾದ ಮೌಲ್ಯಮಾಪನಕ್ಕೆ ಅಳವಡಿಸಿಕೊಳ್ಳಬೇಕಾಗಿದೆ.
ಈ ಬಗೆಯ ಅನೇಕ ಸಮಸ್ಯೆಗಳಿಗೆ ತತ್ಕಾಲೀನ ಪರಿಹಾರ ಸಾಧ್ಯವಿಲ್ಲ. ಈಗಿರುವ ಭಾಷಾ ಕಲಿಕೆ ಹಾಗೂ ಬೋಧನೆಯ ಬಗೆಗಿನ ಉಡಾಫೆತನವನ್ನು ಹೋಗಲಾಡಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ. ಭಾಷೆಯನ್ನು ಸಶಕ್ತಗೊಳಿಸಲು ಆ ಭಾಷೆಯನ್ನು ಯುವಜನಾಂಗಕ್ಕೆ ಸಮರ್ಥವಾಗಿ, ಸಮಗ್ರವಾಗಿ, ಅರ್ಥಪೂರ್ಣವಾಗುವಂತೆ ಕಲಿಸಬೇಕಾಗಿದೆ. ಇದು ರಾತ್ರೋ ರಾತ್ರಿ ಸಾಧ್ಯವಿಲ್ಲ. ವ್ಯವಸ್ಥಿತವಾದ ಕಲಿಕೆಯ ಸಾಧ್ಯತೆಗಳನ್ನು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಹಂತಗಳಲ್ಲಿ ಜಾರಿಗೆ ತರಬೇಕಾಗಿದೆ. ಅದಕ್ಕೆ ಅವಶ್ಯಕವಾದ ಪೂರ್ವಸಿದ್ಧತೆಗಳನ್ನು ಪಠ್ಯಪುಸ್ತಕಗಳ ಸಲಹಾ ಸಮಿತಿಗಳು, ಪಠ್ಯಪುಸ್ತಕಗಳ ಸಂಪಾದಕರು, ಭಾಷಾ ಹಾಗೂ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಧ್ಯಾಪಕರೆಲ್ಲರ ನಡುವೆ ಸಂವಾದ ನಡೆಸುವ ಮೂಲಕ ಭಾಷಾ ಕಲಿಕಾ ಯೋಜನೆಯನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಆರಂಭವಾಗಬೇಕಾಗಿದೆ.

No comments:
Post a Comment