Search This Blog

Monday, 28 April 2014

                         ರಾಜರ ಆಸ್ತಿ ಕಬಳಿಕೆಗೆ ನಕಲಿ ದಾಖಲೆಗಳ ಬಳಕೆ 
                                                                                                                                  - ಪ್ರದೀಪ್ ಮಾಲ್ಗುಡಿ
ಮೈಸೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒಡೆಯರ್ ಕುಟುಂಬದ ಎಂಟು ಕೋಟಿ ಆಸ್ತಿ ಕಬಳಿಕೆಯ ಪ್ರಯತ್ನ ನಡೆದಿದೆ. ಬಲಿಷ್ಠರಾದ, ರಾಜಕೀಯವಾಗಿ ಶಕ್ತಿಯಿರುವ, ಪ್ರಸಿದ್ಧರ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಸಂದರ್ಭದಲ್ಲೆ ಹೀಗಾದರೆ ಇನ್ನು ಸಾಮಾನ್ಯ ಜನರ ಆಸ್ತಿಯ ರಕ್ಷಣೆ ಹೇಗೆ ಎಂಬ ಪ್ರಶ್ನೆ ಸದ್ಯಕ್ಕೆ ಎದುರಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ವಿಚಾರಣೆ ಆರಂಭಿಸಿದ್ದಾರೆ. ಇದರಲ್ಲಿ ತಪ್ಪಿತಸ್ತರನ್ನು ಗುರುತಿಸುವ ಕೆಲಸ ನಡೆಯಬಹುದು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕುಟುಂಬಕ್ಕೆ ಸೇರಿದ್ದ ಸುಮಾರು ಎಂಟು ಕೋಟಿ ಮೌಲ್ಯದ ನಿವೇಶನವನ್ನು ನಕಲಿ ದಾಖಲೆ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವ ಪ್ರಕರಣ ದುರ್ಬಲರಾಗಿರುವವರಲ್ಲಿ ಸೃಷ್ಟಿಸಿರುವ ಆತಂಕ ಕಡಿಮೆಯಲ್ಲ. ದಿನದಿಂದ ದಿನಕ್ಕೆ ಏರುತ್ತಿರುವ ಭೂಮಿಯ ಬೆಲೆ, ರಿಯಲ್ ಎಸ್ಟೇಟ್ ಲಾಭಿ, ದುರಾಸೆಯ ಲಂಚಕೋರ ಅಧಿಕಾರಿಗಳಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ವಾಸವಾಗಿರುವ ಕುಂಜಪ್ಪ ಎಂಬುಬವರ ಮಗ ಬಿ.ಕೆ.ಸುಂದರ್ (೮೦) ನಕಲಿ ದಾಖಲೆ ಸೃಷ್ಟಿಸಿ, ಒಡೆಯರ್ ವಂಶಸ್ಥರಿಗೆ ಸೇರಿದ ೮.೫ ಕೋಟಿ ಮೌಲ್ಯದ ನಿವೇಶನವನ್ನು ಕಬಳಿಸಿದ್ದ ಸುಂದರ್ ಎನ್ನುವವರ ವಿರುದ್ಧ ವಕೀಲ ಸಿ.ಚಂದ್ರಶೇಖರ್‌ರವರು ಮಾ.೧೫ ರಂದು ಲೋಕಾಯುಕ್ತರಿಗೆ ಸಲ್ಲಿಸಿದ್ದ ದೂರನ್ನು ಆಧರಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ. ಈ ಕೋಟ್ಯಂತರ ರೂಪಾಯಿಗಳ ಹಗರಣದಲ್ಲಿ ಯಾರ‍್ಯಾರು ಪಾಲುದಾರರಾಗಿದ್ದಾರೆ ಎಂಬುದನ್ನು ಕೂಲಂಕಷ ತನಿಖೆಯ ನಂತರ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದಲ್ಲಿ ಈ ಬಗೆಯ ಹಗಲು ದರೋಡೆಗಳು ಹೆಚ್ಚಾಗುವ ಸಂಭವವಿದೆ.
ಅಲ್ಲದೆ ಇದರಲ್ಲಿ ಪ್ರಭಾವಿಗಳ ಕೈವಾಡವೂ ಇರಬಹುದು. ಏಕೆಂದರೆ, ನಕಲಿ ದಾಖಲೆ ಸೃಷ್ಟಿಯಾಗಿರುವ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು ೨೫ಕೋಟಿ. ಮೈಸೂರು ಪೂರ್ವ ನೋಂದಣಿ ಕಚೇರಿಯ ನೋಂದಣಾಧಿಕಾರಿ ಗಿರೀಶ್ ಅವರ ಮೇಲೆ ಸದ್ಯಕ್ಕೆ ಅನುಮಾನ ಮೂಡಿದೆ. ಕಾರಣವೆಂದರೆ ಅವರು ನೀಡಿರುವ ವ್ಯತಿರಿಕ್ತ ದಾಖಲೆಗಳು. ಇವರು ಉಲ್ಲೇಖಿಸಿದ ದಿನಾಂಕದಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರಿನಲ್ಲಿರಲಿಲ್ಲ. ವಿಚಾರಣೆ ವೇಳೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವಿಷಯಗಳಲ್ಲಿ ಒದಗಿಸಿರುವ ದಾಖಲೆಗಳ ಪರಿಶೀಲನೆಯಿಂದ ಇಲ್ಲಿ ನಡೆದಿರುವ ಅವ್ಯವಹಾರ ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿರುವ ಭೂಕಬಳಿಕೆದಾರರು ಕೇವಲ ಇದೊಂದೆ ಪ್ರಕರಣವನ್ನು ಮಾಡಿರಲಾರರು. ಇದರ ಜತೆಗೆ ಇವರ ಸೂಕ್ತವಾದ ವಿಚಾರಣೆಯಾದಲ್ಲಿ ಪ್ರಾಯಶಃ ಇನ್ನಷ್ಟು ಹಗರಣಗಳು ಬಯಲಾಗಬಹುದು.
ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಕ್ಕೆ ಈ ಪ್ರಕರಣ ಬಯಲಾಗಿದೆ. ಇಲ್ಲವಾಗಿದ್ದರೆ? ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ಜಮೀನು ನಕಲಿ ದಾಖಲೆ ಸೃಷ್ಟಿಸಿದವರ ಪಾಲಾಗುತ್ತಿತ್ತು. ಅದೆ ರೀತಿ ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣದ ಕುರಿತು ಉದಾಸೀನ ಭಾವನೆ ತಾಳಿದ್ದರೂ ಇದೇ ಮುಂದುವರೆಯುತ್ತಿತ್ತು. ಈ ಎಲ್ಲ ವಿಷಯಗಳನ್ನು ಗಮನಿಸಿ ಲೋಕಾಯುಕ್ತ ಇಲಾಖೆಯೂ ಇನ್ನು ಮುಂದೆ ಬರುವ ದೂರುಗಳನ್ನು ಪರಿಗಣಿಸಿ, ತ್ವರಿತವಾಗಿ ಕ್ರಿಯಾಶೀಲವಾಗಬೇಕಾಗಿದೆ.
ಖಾತೆ ವರ್ಗಾವಣೆಯಾದ ದಿನದಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಅವರು ಮೈಸೂರಿನಲ್ಲಿ ಇರಲೇ ಇಲ್ಲವೆಂದಾದ ಮೇಲೆ ಇಲ್ಲಿ ಅಕ್ರಮ ನಡೆಸಿರುವವರ ಧೈರ್ಯ ಎಷ್ಟಿರಬಹುದೆಂದು ಊಹಿಸಬಹುದು. ಇವರೇನಾದರೂ ಶಿಕ್ಷೆಯಿಂದ ತಪ್ಪಿಸಿಕೊಂಡಲ್ಲಿ ಅಥವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ವಿಫಲವಾದಲ್ಲಿ ಇಂತಹ ಭೂಗಳ್ಳರ ಜಾಲ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಲ್ಲಿಯೂ ವಿಸ್ತರಿಸಬಹುದು.

ಚುನಾವಣಾ ಪ್ರಣಾಳಿಕೆ ಯುಗ
                                                                                                                       - ಪ್ರದೀಪ್ ಮಾಲ್ಗುಡಿ
ಎಲ್ಲ ಪಕ್ಷಗಳು ಭರದಿಂದ ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯ ಕಸರತ್ತನ್ನು ಒಂದು ಹಂತಕ್ಕೆ ಮುಗಿಸಿ ಚುನಾವಣಾ ಪ್ರಣಾಳಿಕೆಗಳತ್ತ ಒತ್ತು ನೀಡತೊಡಗಿವೆ. ಇನ್ನು ಅಧಿಕಾರವನ್ನು ಹಿಡಿಯಲು ಭರವಸೆಗಳ ಮಹಾಪೂರವನ್ನೇ ಹರಿಸಲು ಪ್ರಣಾಳಿಕೆಗಳ ಬಿಡುಗಡೆಯ ಸಮಯವಿದು. ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ಘೋಷಿಸಿದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದು ಕಷ್ಟವೆಂದು ಭಾವಿಸುವ ರಾಜಕೀಯ ಪಕ್ಷಗಳು; ಈ ಸಂದರ್ಭದಲ್ಲಿ ಭರವಸೆಗಳ ಅತಿವೃಷ್ಟಿಯನ್ನೇ ಸುರಿಸುತ್ತವೆ. ಆದರೆ, ಚುನಾವಣಾ ನಂತರ ಈ ಭರವಸೆಗಳನ್ನು ಘೋಷಿಸಿದವರು ಹಾಗೂ ಕೇಳಿ, ನಂಬಿ ಮತ ಹಾಕಿದವರು ಮತ್ತು ಇವರಿಬ್ಬರ ನಡುವೆ ಸೇತುವೆಯಾಗಿ ಕಾರ‍್ಯನಿರ್ವಹಿಸುತ್ತಿರುವ ಮಾಧ್ಯಮಗಳು ಬಹುತೇಕ ಈ ವಿಷಯಗಳನ್ನು ಮರೆತುಬಿಡುತ್ತವೆ.
ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಘೋಷಿಸಿದ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾವ ಹಂತದಲ್ಲಿ ಜಾರಿಗೆ ತಂದಿದೆ? ಎಂಬ ಪ್ರಶ್ನೆಯನ್ನು ಯಾರಿಗೆ ಕೇಳಬೇಕೆಂಬ ಗೊಂದಲ ಶುರುವಾಗುತ್ತದೆ. ಕರ್ನಾಟಕದಲ್ಲಿ ಸ್ವಚ್ಛ ಆಡಳಿತ - ಸಮರ್ಥ ನಾಯಕತ್ವದ ಘೋಷಣೆಯೊಂದಿಗೆ ಜನಪ್ರಿಯ ಯೋಜನೆಗಳ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿತ್ತು. ಅದರಲ್ಲಿ ಮುಖ್ಯವಾಗಿ ಭ್ರಷ್ಟಾಚಾರದ ವಿರುದ್ಧ ನಿಲುವನ್ನು ಪ್ರತಿಪಾದಿಸಲಾಗಿತ್ತು. ಜತೆಗೆ ಬಿಪಿಎಲ್ ಕುಟುಂಬಗಳಿಗೆ ಕೆ.ಜಿ.ಗೆ ೧ ರೂ.ದರದಲ್ಲಿ ತಿಂಗಳಿಗೆ ೩೦ ಕೆ.ಜಿ ಅಕ್ಕಿ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೪ ರೂ. ಸಬ್ಸಿಡಿ, ೨ ಲಕ್ಷ ರೂಪಾಯಿಗಳವರೆಗಿನ ಕೃಷಿ ಸಾಲದ ಬಡ್ಡಿಗೆ  ವಿನಾಯಿತಿ, ಪಿಯುಸಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಡಿಜಿಟಲ್ ನೋಟ್‌ಬುಕ್, ಕಾವೇರಿ, ಕೃಷ್ಣಾ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳನ್ನು ೫ ವರ್ಷದಲ್ಲಿ ಅನುಷ್ಠಾನಗೊಳಿಸಲು ವಾರ್ಷಿಕ ೧೦ ಸಾವಿರ ಕೋಟಿ ರೂಪಾಯಿಗಳ ಮೀಸಲು, ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಕರ‍್ಯ ಒದಗಿಸುವ ಯೋಜನೆ, ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಆಯೋಗ ರಚಿಸಿ ೧,೫೦೦ ಕೋಟಿ ರೂ. ಒದಗಿಸುವ ಭರವಸೆ, ಪಕೃತಿ ವಿಕೋಪ ಪರಿಹಾರಕ್ಕೆ ೧,೫೦೦ ಕೋಟಿ ರೂ. ನಿಧಿ ಸ್ಥಾಪನೆಯ ಭರವಸೆ, ಬೀದರ್‌ನಿಂದ ಚಾಮರಾಜನಗರದವರೆಗೆ ಅಷ್ಟ ಪಥದ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಯೋಜನೆ, ವಸತಿ ಯೋಜನೆಗಳ  ಸಾಲಗಳನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವುದು, ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚದಿರುವುದು, ಭಯೋತ್ಪಾದನೆ, ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ ಶೀಘ್ರ ನ್ಯಾಯಾಲಯ ಸ್ಥಾಪನೆ, ಬಿಬಿಎಂಪಿಗೆ ವಿಶೇಷ ಕಾನೂನು, ಗ್ರೇಟರ್ ಬೆಂಗಳೂರು ರಚನೆ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳಾಗಿದ್ದವು. ಇವುಗಳಲ್ಲಿ ಕೆಲವನ್ನು ಸಿ.ಎಂ. ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ದಿನದಂದೆ ಘೋಷಣೆ ಮಾಡಿದ್ದರು.
ಆದರೆ ನಂತರ ನಡೆದ ಕೆಲವು ವಿದ್ಯಮಾನಗಳು ಈ ಪ್ರಣಾಳಿಕೆಯ ಮುಖ್ಯ ಕಾರ‍್ಯಸೂಚಿಯಾದ ಸ್ವಚ್ಛ ಆಡಳಿತ - ಸಮರ್ಥ ನಾಯಕತ್ವದ ಭರವಸೆಯನ್ನು ಉಲ್ಲಂಘಿಸಿವೆ. ಲೋಕಸಭಾ ಚುನಾವಣೆಯನ್ನು ಎದುರಿಸುವ ಸಲುವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿ ಮಾಡಲೇಬೇಕಾದ ಅನಿವಾರ‍್ಯತೆಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೃಷ್ಟಿಸಿತು. ಇವರ ವಿರುದ್ಧ ಇರುವ ಆಪಾದನೆಗಳನ್ನು ಕುರಿತಂತೆ ಸಾಮಾಜಿಕ ಕಾರ‍್ಯಕರ್ತರು ಬಿಡುಗಡೆ ಮಾಡಿದ ಸಾಕ್ಷಿಗಳಿಗೂ ಮಾನ್ಯತೆ ಸಿಗಲಿಲ್ಲ. ಇದರೊಂದಿಗೆ  ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಸಿ.ಎಂ. ಸಿದ್ದರಾಮಯ್ಯನವರ ಸರ್ಕಾರವಲ್ಲ; ಕಾಂಗ್ರೆಸ್ ಸರ್ಕಾರ ಎಂಬುದು ಸಾಬೀತಾಯಿತು.
ಇದೀಗ ಪ್ರಣಾಳಿಕೆ ಬಿಡುಗಡೆಯಲ್ಲಿ ಎಲ್ಲ ಪಕ್ಷದವರಿಗಿಂಥ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ೨೦೦೯ರ ಪ್ರಣಾಳಿಕೆಯಲ್ಲಿ ಘೋಷಿಸಿದ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿ, ಯುವಕರಿಗೆ ಆಡಳಿತದಲ್ಲಿ ಭಾಗಿಯಾಗುವ ಅವಕಾಶ ಇತ್ಯಾದಿಗಳನ್ನು ಘೋಷಿಸಿತ್ತು. ಅದರ ನಡುವೆ ಆಧಾರ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿತು. ಅದಕ್ಕಾಗಿ ಸಾಫ್ಟ್‌ವೇರ್ ಉದ್ಯಮದ ನಂದನ್ ನಿಲೇಕಣಿಯವರನ್ನು ಈ ಯೋಜನೆಯ ಅಧ್ಯಕ್ಷರನ್ನಾಗಿಸಿತು. ಈಗವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಎದ್ದುಕಾಣುವ ಅಂಶವೆಂದರೆ, ಕಾಂಗ್ರೆಸ್ ಏನನ್ನೂ ಚುನಾವಣಾ ದೃಷ್ಟಿಕೋನವಿಲ್ಲದೆ ಯೋಜಿಸುತ್ತಿಲ್ಲವೆಂಬುದು. ರಾಷ್ಟ್ರವನ್ನು ವಿದೇಶಿ ಶಕ್ತಿಗಳಿಂದ ಬಿಡುಗಡೆಗೊಳಿಸುವ ಸಲುವಾಗಿ ಹುಟ್ಟಿದ ಸಂಸ್ಥೆಯೊಂದು ಹೀಗೆ ಸ್ವಾರ್ಥಪರವಾಗಿ ಚಿಂತಿಸುತ್ತಿರುವುದು ಸರಿಯಲ್ಲ.
ಆದರೆ ಈ ಜನೋಪಯೋಗಿ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಲೋಪವಾಗಿದೆ. ಕಾಮನ್ವೆಲ್ತ್ ಹಗರಣ, ೨ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣಗಳ ಮಸಿಯನ್ನು ಸ್ವತಃ ಕಾಂಗ್ರೆಸ್ ಮೆತ್ತಿಕೊಂಡಿತು. ೨೦೦೯ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ದೇಶಾದ್ಯಂತ ಹಳ್ಳಿಗಳನ್ನೂ ಒಳಗೊಂಡಂತೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವ ಗುರಿಯನ್ನು ಇನ್ನೂ ಈಡೇರಿಸಲಾಗಿಲ್ಲ. ಅದರ ಬದಲಾಗಿ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಇತಿಹಾಸದಲ್ಲಿ ಕೇಳರಿಯದಷ್ಟು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇನ್ನು ಕೂಲಿಗಾಗಿ ಕಾಳು ಯೋಜನೆ, ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ತಲುಪಬೇಕಾದ ಮೊತ್ತವನ್ನು ದಲ್ಲಾಳಿಗಳು ನುಂಗುತ್ತಿರುವ ಸುದ್ದಿ ಹೊಸದೇನಲ್ಲ. ಗುಡಿ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡುವುದಾಗಿ ಘೋಷಿಸಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿಯನ್ನು ನೀಡಲಾಯಿತು. ಇದು ದೇಶದ ಚಿಲ್ಲರೆ ಮಾರಾಟಗಾರರು, ಸಣ್ಣ ವ್ಯಾಪಾರಸ್ಥರು, ಗುಡಿ ಕೈಗಾರಿಕೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷಾಂತರ ಜನರು ಮತ್ತು ಅವರನ್ನು ಅವಲಂಬಿಸಿದ್ದ ಕುಟುಂಬಗಳ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ದೀರ್ಘಾವಧಿಯಲ್ಲಿ ಉಂಟುಮಾಡಲಿದೆ. ಆರ್ಥಿಕ ಶಿಸ್ತಿನ ಕುರಿತು ಮಾಡಿದ್ದ ಘೋಷಣೆಯು ಸುಳ್ಳಾಗಿ ದೇಶದ ಜಿಡಿಪಿ ಅಭಿವೃದ್ಧಿ ದರ ೪.೭ಕ್ಕೆ ಕುಸಿದಿದೆ. ಮಹತ್ವದ ಯೋಜನೆಗಳನ್ನು ಕೇವಲ ಪ್ರಣಾಳಿಕೆಯಲ್ಲಿ ಘೋಷಿಸುವಷ್ಟಕ್ಕೆ ರಾಜಕೀಯ ಪಕ್ಷಗಳು ಸೀಮಿತವಾಗುತ್ತಿವೆ.
ಈಗ ಬಿಡುಗಡೆಯಾಗಿರುವ ೨೦೧೪ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖವಾಗಿ ೧) ಮುಂದಿನ ೫ ವರ್ಷಗಳಲ್ಲಿ ೧೦ ಕೋಟಿಗೂ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ ೨) ೮೦ ಕೋಟಿ ಜನರನ್ನು ಮಧ್ಯಮ ವರ್ಗಕ್ಕೆ ತರುವುದು ೩) ಶೇ.೮ಕ್ಕೂ ಹೆಚ್ಚು ಬೆಳವಣಿಗೆ ದರವನ್ನು ಸಾಧಿಸುವ ಗುರಿ ೪) ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ೫)ಸರಕು ಮತ್ತು ಸೇವಾ ತೆರಿಗೆ ವಿಧೇಯಕ, ನೇರ ತೆರಿಗೆ ಸಂಹಿತೆ ವಿಧೇಯಕ ಜಾರಿ, ೬) ಆರೋಗ್ಯ, ವಸತಿ ಹಕ್ಕು: ಉಚಿತ ಔಷಧ ಸೇರಿ ಗುಣಮಟ್ಟದ ಆರೋಗ್ಯ ಸೇವೆಗೆ ಯೋಜನೆ. ಎಲ್ಲರಿಗೂ ಸೂರು ಕಲ್ಪಿಸಲು ವಿಶೇಷ ಕಾರ್ಯಕ್ರಮ ೭) ನಿಶ್ಚಿತ ಪಿಂಚಣಿ ಯೋಜನೆ: ವೃದ್ಧರು ಹಾಗೂ ಅಂಗವಿಕಲರಿಗೆ ನಿಶ್ಚಿತವಾದ ಮಾಸಿಕ ಪಿಂಚಣಿ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಕ್ರಮ ೮) ಬಡವರು, ಖಾಸಗಿ ಮೀಸಲು: ಖಾಸಗಿ ಕ್ಷೇತ್ರದಲ್ಲಿ ಔದ್ಯೋಗಿಕ ಮೀಸಲಾತಿಗೆ ಯತ್ನ, ಎಲ್ಲಾ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಭರವಸೆ ಇತ್ಯಾದಿ ಹತ್ತು ಹಲವು ಭರವಸೆಗಳನ್ನು ಈ ಬಾರಿ ಕಾಂಗೆಸ್ ಘೋಷಿಸಿದೆ. ಇದರಲ್ಲಿ ಅಧಿಕಾರಕ್ಕೆ ಬಂದಲ್ಲಿ ಏನನ್ನು ಮಾಡುತ್ತದದೆಂದು ಕಾದು ನೋಡಬೇಕಾಗಿದೆ.



                       ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ
                                                                                                                          - ಪ್ರದೀಪ್ ಮಾಲ್ಗುಡಿ
ಕ್ರೀಡಾಕ್ಷೇತ್ರವನ್ನು ರಾಜಕೀಯ ಮುಕ್ತಗೊಳಿಸಬೇಕೆಂಬ ವಾದವನ್ನು ಇದುವರೆಗೆ ಪುರಸ್ಕರಿಸಲಾಗಿಲ್ಲ. ಕ್ರೀಡಾಪಟುಗಳ ಆಯ್ಕೆಯಲ್ಲಿ ಕೂಡ ಈ ತಾರತಮ್ಯವನ್ನು ಜಾರಿಗೊಳಿಸಲಾಗಿದೆ. ಅದರ ಜತೆಗೆ ಕ್ರೀಡೆಗಳು ಈಚೆಗೆ ಕ್ರೀಡಾಮನೋಭಾವನೆಯ ಕಾರಣದ ಬದಲು ಹಗರಣದ ಕಾರಣಕ್ಕೆ ಭಾರಿ ಸುದ್ದಿಯಲ್ಲಿವೆ. ೨೦೧೩ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದೆ. ಎನ್.ಶ್ರೀನಿವಾಸನ್ ಅವರು ಕ್ರೀಡಾ ಸಂಘಟಕರಾಗಿದ್ದರು. ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಬಿ.ಸಿ.ಸಿ.ಐ.ನ ಕಾರ‍್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ನಂತರ ಈಗ ಅಧ್ಯಕ್ಷರಾಗಿದ್ದರೆ. ಇದರ ಜತೆಗೆ ಐ.ಸಿ.ಸಿ. ಮುಖ್ಯಸ್ಥರ ಸ್ಥಾನವನ್ನೂ ಅಲಂಕರಿಸಿದ್ದರು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹುಟ್ಟುಹಾಕಿದರು. ಇದರ ನಂತರ ನಡದ ಘಟನಾವಳಿಗಳು ಈಗ ಭಾರತೀಯ ಕ್ರಿಕೆಟ್‌ನ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ಫ್ರಾಂಚೈಸಿಯಲ್ಲಿ ನಿಯಮಬಾಹಿರವಾಗಿ ವರ್ತಿಸಿರುವ ಹಾಗೂ ಮ್ಯಾಚ್‌ಫಿಕ್ಸಿಂಗ್ ಹಗರಣದ ವಿಚಾರಣೆಯ ಸಮಯದಲ್ಲಿ ಇವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಧ್ವನಿ ಕೇಳಿಬರುವ ಮೂಲಕ ಎನ್.ಶ್ರೀನಿವಾಸ್ ಅವರ ಸದ್ಯದ ಸ್ಥಾನಕ್ಕೆ ಕುತ್ತು ಬಂತೆಂದು ಎಲ್ಲರು ಬಗೆದಿದ್ದರು. ಆದರೆ ಪಟ್ಟುಬಿಡದ ಇವರು ತಮ್ಮ ಸ್ಥಾನದಲ್ಲಿ ಯಥಾಪ್ರಕಾರ ಮುಂದುವರೆದಿದ್ದರು. ಈಗ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕಾರಣದಿಂದಾಗಿ ರಾಜೀನಾಮೆಯನ್ನು ಸಲ್ಲಿಸಲೇಬೇಕಾಗಿದೆ.
೨೦೧೦ರ ಕಾಮನ್ವೆಲ್ತ್ ಗೇಮ್ಸ್‌ನ ಹಗರಣ ದೇಶದ ಕ್ರೀಡಾಸಂಘಟನೆಯ ಮೇಲೆ ಕರಿನೆರಳು ಆವರಿಸುವಂತೆ ಮಾಡಿತು. ನೆರೆಯ ರಾಷ್ಟ್ರ ಚೀನಾ ಒಲಿಂಪಿಕ್ಸ್ ಗೇಮ್ಸ್‌ಗಳನ್ನು ಯಶಸ್ವಿಯಾಗಿ ಸಂಘಟಿಸಿ ಸೈ ಎನ್ನಿಸಿಕೊಂಡಿದೆ. ಆದರೆ ಕಾಮನ್ವೆಲ್ತ್ ಗೇಮ್ಸ್ ಹಗರಣದ ಕೆಸರು ಭಾರತಕ್ಕೆ ಮೆತ್ತಿಕೊಂಡಿದೆ. ಮೂರು ಬಾರಿ ಲೋಕಸಭಾ ಮತ್ತು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿರುವ ಸುರೇಶ್ ಕಲ್ಮಾಡಿ ರಾಷ್ಟ್ರೀಯ ಕಾಂಗ್ರೆಸ್‌ನ ಸಕ್ರಿಯ ರಾಜಕಾರಣಿ ಹಾಗೂ ಕ್ರೀಡಾ ಸಂಘಟಕ. ಇವರು ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈಲ್ವೇಖಾತೆ ರಾಜ್ಯಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಈಗ ಅದರಿಂದ ಅಮಾನತುಗೊಂಡಿದ್ದಾರೆ.
ಈ ಹಗರಣವು ವಿಶ್ವಮಟ್ಟದಲ್ಲಿ ದೇಶದ ಹೆಸರನ್ನು ಹಾಳು ಮಾಡಿದೆ. ಅಲ್ಲದೆ ದೇಶದ ಅಂತರಾಷ್ಟ್ರೀಯ ಕ್ರೀಡಾಸಂಘಟನೆಯ ಸಾಧ್ಯತೆಗಳನ್ನು ಮಸುಕು ಮಾಡಿದೆ. ಇದರ ಕುರಿತು ಕೆಲವು ಗಂಭೀರ ಆರೋಪಗಳು ಎದುರಾದವು. ಅನವಶ್ಯಕವಾದ ವೆಚ್ಚ, ದೆಹಲಿಯ ಕೊಳೆಗೇರಿಗಳಲ್ಲಿದ್ದ ನಾಲ್ಕು ಲಕ್ಷ ಜನರನ್ನು ಗುಳೆ ಎಬ್ಬಿಸಿದ ಪ್ರಕರಣ, ಕಾರ್ಮಿಕ ಕಾನೂನಿನ ಉಲ್ಲಂಘನೆ(ವೇತನ ತಾರತಮ್ಯ, ವೇತನವನ್ನು ಸರಿಯಾಗಿ ಪಾವತಿಸದಿರುವುದು), ಬಾಲಕಾರ್ಮಿಕರ ಬಳಕೆ, ನಗರೀಕರಣ ಪ್ರಕ್ರಿಯೆ ಈ ಅವಧಿಯಲ್ಲಿ ನಡೆದಿದೆ(ಕೊಳೆಗೇರಿಗಳ ನಿರ್ಮೂಲನೆ, ಐಷಾರಾಮಿತನದ ಹಿಂದೆ ಬಿದ್ದು ಕಾಮನ್ವೆಲ್ತ್ ಕ್ರೀಡಾಪಟುಗಳ ವಾಸ್ತವ್ಯ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಮೂಲನಿವಾಸಿಗಳನ್ನು ಒಕ್ಕಲೆಬ್ಬೆಸಿದ ಪ್ರಕರಣ), ಲೈಂಗಿಕ ಹಗರಣ(ಬಡ ಹೆಣ್ಣುಮಕ್ಕಳನ್ನು ಕ್ರೀಡಾಪಟುಗಳ ಲೈಂಗಿಕ ತೃಪ್ತಿಗಾಗಿ ಬಳಸಿಕೊಂಡಿರುವ ಆರೋಪ), ಅದಕ್ಷ ಟೆಂಡರ್‌ದಾರರಿಗೆ ಹೆಚ್ಚಿನ ಮೊತ್ತಕ್ಕೆ ಕೆಲಸಗಳನ್ನು ವಹಿಸಲಾಗಿದೆ. ಆದರೆ ನಿರ್ವಹಿಸಿದ ಕಾಮಗಾರಿಯ ಮಟ್ಟ ಕಳಪೆ ಗುಣಮಟ್ಟದ್ದಾಗಿದೆ, ಸಿದ್ಧತೆಯ ಕೊರತೆ, ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿನ ಕಳಪೆ ನಿರ್ವಹಣೆ, ಅದರಿಂದ ಕಡಿಮೆ ಪ್ರೇಕ್ಷಕರ ಆಗಮನ, ವಾಸ್ತವ್ಯ ವ್ಯವಸ್ಥೆಯಲ್ಲಿ ವರ್ಣ ತಾರತಮ್ಯದ ಆಪಾದನೆ, ಸುರಕ್ಷತಾ ಕ್ರಮಗಳ ಕೊರತೆ, ಬಹಿಷ್ಕಾರಕ್ಕೆ ಕರೆ ನೀಡಿದ ಆಟಗಾರರು ಇವೆಲ್ಲದರ ಜತೆಗೆ ಭ್ರಷ್ಟಾಚಾರದ ಆಪಾದನೆ ಎದುರಾದವು.
ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿ.ಸಿ.ಸಿ.ಐ.ನ ಮಾಜಿ ಅಧ್ಯಕ್ಷರು, ಕೃಷಿ ಸಚಿವರೂ ಆದ ಶರದ್ ಪವಾರ್ ಅವರ ಕತೆ ಮತ್ತೊಂದು ರೀತಿಯಿದೆ. ಇವರು ಕೃಷಿ ಸಚಿವರಾದ ಸಮಯದಲ್ಲಿ ವರ್ಷಕ್ಕೆ ೧೫೦೦೦ ಸಾವಿರ ಜನರಂತೆ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ಕುರಿತು ಪ್ರಶ್ನಿಸಿದಾಗ ಅದು ಸಾಮಾನ್ಯ ಸಂಗತಿ ಎಂದು ಉತ್ತರಿಸಿದ್ದರು. ಹೀಗೆ ಆತ್ಮಹತ್ಯೆಗಳು ಸಂಭವಿಸುತ್ತಿರುವ ಸಮಯದಲ್ಲಿ ಇವರು ವಿದೇಶದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಇವರು ಬಿ.ಸಿ.ಸಿ.ಐ.ನ ಅಧ್ಯಕ್ಷರಾಗುವುದಕ್ಕೆ ಕಾರಣ ಯು.ಪಿ.ಎ. ಸರ್ಕಾರಕ್ಕೆ ಅವರು ನೀಡಿದ ಬೆಂಬಲ. ಇವರನ್ನು ತಮ್ಮ ಸ್ವಾರ್ಥಕ್ಕಾಗಿ ಬೆಂಬಲಿಸಬೇಕಾಗಿ ಬಂತು. ಇವರ ಬೆಂಬಲವಿಲ್ಲದಿದ್ದರೆ ಯು.ಪಿ.ಎ. ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿತ್ತು. ಅದರ ಪರಿಣಾಮದಿಂದಾಗಿ ಇವರನ್ನು ಅನಿವಾರ‍್ಯ ಕಾರಣದಿಂದ ಗೆಲ್ಲಿಸಬೇಕಾಯಿತು. ಇಲ್ಲವಾದಲ್ಲಿ ಇವರು ಇದರ ಅಧ್ಯಕ್ಷರಾಗುತ್ತಿರಲಿಲ್ಲ.  
  ಎಲ್ಲರಿಗೂ ಬಿ.ಸಿ.ಸಿ.ಐ.ನ ಮೇಲೆ ಕಣ್ಣು ಬೀಳಲು ಒಂದು ಪ್ರಮುಖ ಕಾರಣವಿದೆ. ಅದೆಂದರೆ, ಬಿ.ಸಿ.ಸಿ.ಐ.ನ ಆರ್ಥಿಕ ಉತ್ಪನ್ನ. ವರ್ಷಕ್ಕೆ  <hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/Iಟಿಜiಚಿಟಿ_ಡಿuಠಿee> ೮.೬೮ ಶತಕೋಟಿಯಷ್ಟು ಆದಾಯವಿರುವ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಇದರ ಮೇಲೆ ಎಲ್ಲರ ಕಣ್ಣು ಸಹಜವಾಗಿ ಬೀಳುತ್ತಿದೆ ಇದರಿಂದಾಗಿ ನಿರಂತರವಾಗಿ ಆಟಗಾರರ ಆಯ್ಕೆ, ನಿವೃತ್ತಿ ಇತ್ಯಾದಿಗಳನ್ನು ಇದು ನಿರ್ಧರಿಸುವಂತಾಗಿದೆ. ಒಂದು ಹಂತದಲ್ಲಿ ಐ.ಸಿ.ಸಿ.ಗೆ ಪ್ರತಿಸ್ಪರ್ಧೆ ನೀಡುವಷ್ಟು ಇದು ಪ್ರಬಲವಾಗಿದೆ.
ಮೇಲಿನ ಮೂರು ವಿಷಯಗಳನ್ನು ಪ್ರಸ್ತಾಪಿಸಿದ ಉದ್ದೇಶವಿಷ್ಟೆ, ಎನ್.ಶ್ರೀನಿವಾಸ್, ಸುರೇಶ್ ಕಲ್ಮಾಡಿ, ಶರದ್ ಪವಾರ್ ಅವರ ಅವಧಿಯಲ್ಲಿ ಭಾರತದ ಕ್ರೀಡಾವಲಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅದರಲ್ಲು ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಅದರ ಪರಿಣಾಮದಿಂದಾಗಿ ಪ್ರತಿ ಹಂತದಲ್ಲೂ ಕೋರ್ಟ್‌ಗಳು ಮಧ್ಯಪ್ರವೇಶ ಮಾಡಬೇಕಾದ ಅನಿವಾರ‍್ಯ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರವೆ ಇಲ್ಲದಂತಹ ವಾತಾವರಣವನ್ನು ರಾಜಕೀಯ ಒತ್ತಡ ಎದುರಾಗಿದೆ. ಹೀಗಾದರೆ ಕ್ರೀಡಾಕ್ಷೇತ್ರದ ಪಾವಿತ್ರ್ಯತೆ ಎಲ್ಲಿ ಉಳಿಯುತ್ತದೆ?

              ಕೇಜ್ರಿವಾಲ್ ಮೇಲೆ ಮೊಟ್ಟೆ, ಮಸಿ ಯಾಕೆ? 
                                                                                              ಪ್ರದೀಪ್ ಮಾಲ್ಗುಡಿ
ಕರ್ನಾಟಕದಲ್ಲಿ ಕನ್ನಡ ಚಳುವಳಿಗಾರರು ಒಮ್ಮೆ ಎಂ.ಇ.ಎಸ್.ನ ಮೋರೆಯವರ ಮುಖಕ್ಕೆ ಮಸಿ ಬಳಿದಿದ್ದರು. ಆಗ ಚಿಂತಕ ಪೂರ್ಣಚಂದ್ರ ತೇಜಸ್ವಿಯವರನ್ನು ಈ ಕುರಿತು ಪ್ರಶ್ನಿಸಿದಾಗ ’ಕರ್ನಾಟಕದಲ್ಲಿದ್ದು ಕನ್ನಡದ ವಿರುದ್ಧ ಮಾತಾಡುವವರಿಗೆ ಫೇರ್ ಅಂಡ್ ಲವ್ಲಿ ಹಚ್ಚೋಕಾಗುತ್ತೇನ್ರೀ?’ ಎಂದು ಕೇಳಿ ಪ್ರಶ್ನಿಸಿದವರನ್ನೇ ತಬ್ಬಿಬ್ಬು ಮಾಡಿದ್ದರು.
ಪ್ರಮೋದ್ ಮುತಾಲಿಕ್‌ರವರ ಮೇಲೊಮ್ಮೆ ಇದೇ ರೀತಿ ಮಸಿ ದಾಳಿ ನಡೆದಿತ್ತು. ಮಾರ್ಚ್ ೪/೨೦೧೪ರಂದು ಸಹಾರಾ ಮುಖ್ಯಸ್ಥರ ಮೇಲೆ ಇಂಕ್ ಅನ್ನು ಒಬ್ಬ ನ್ಯಾಯವಾದಿ ಎಸೆದಿದ್ದ. ಮಾರ್ಚ್ ೮/೨೦೧೪ರಂದು ಜಂತರ್ ಮಂತರ್‌ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಪ್ ಮುಖಂಡ ಯೋಗೇಂದ್ರ ಯಾದವ್ ಅವರ ಮೇಲೆ ಇಂಕ್‌ನ ಬಾಣ ದಾಳಿ ನಡೆದಿತ್ತು. ಈ ಹಿಂದೆ ಬಾಬಾ ರಾಂದೇವ್ ಅವರ ಮೇಲೂ ಹೀಗೆ ಇಂಕಾಸ್ತ್ರ ಪ್ರಯೋಗವಾಗಿತ್ತು. ಅದಲ್ಲದೆ ಇತ್ತೀಚೆಗೆ ಗಣ್ಯವ್ಯಕ್ತಿಗಳ ಮೇಲೆ ಶೂಬಾಣಗಳು ಹಾರಾಡತೊಡಗಿವೆ. ಇವರೇನು ಇವುಗಳನ್ನು ಪನ್ನೀರು, ಪುಷ್ಟಗಳಿಗೆ ಪರ‍್ಯಾಯವೆಂದು ಪರಿಗಣಿಸಿದ್ದಾರೋ ಏನೋ!
ಮೇಲಿನ ಉದಾಹರಣೆಗಳು ವೈಯಕ್ತಿಕವಾಗಿ ಆ ವ್ಯಕ್ತಿಯ ಮೇಲೆ ಇರುವ ಅಸಹನೆಯನ್ನು ತೋರಿಸುತ್ತದೆ. ಆದರೆ ಮಾರ್ಚ್ ೨೫/೨೦೧೪ರಂದು ವಾರಣಾಸಿಯಲ್ಲಿ ಆಪ್ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ನಡೆದ ಬಿಜೆಪಿ ಕಾರ‍್ಯಕರ್ತರ ಇಂಕ್ ದಾಳಿ ಪ್ರಕರಣವು ರಾಜಕೀಯದ ಭಾಗವಾಗಿದೆ. ಸಾರ್ವಜನಿಕವಾಗಿ ಮಸಿ ಬಳಿಸಿಕೊಂಡವರನ್ನು ಜನ ಹೇಗೆ ಪರಿಭಾವಿಸುತ್ತಾರೆಂಬುದರ ಮೇಲೆ ಇವರ ತಂತ್ರ ಸಫಲವಾಗುತ್ತದೋ ವಿಫಲವಾಗುತ್ತದೋ ಎಂಬುದು ನಿರ್ಧಾರವಾಗುತ್ತದೆ. ಈ ಕ್ರಿಯೆಯ ಮೂಲಕ ಚುನಾವಣಾ ಸಮಯದಲ್ಲಿ ತಮ್ಮ ಪಕ್ಷದ ಎದುರಾಳಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸಕ್ಕೆ ಸಂಘಪರಿವಾರದ ಸದಸ್ಯರು ಮುಂದಾಗಿರಬಹುದು.
ಆದರೆ ಆಧುನಿಕ ಸಂದರ್ಭದಲ್ಲಿ ಮಾಧ್ಯಮಗಳು ಸದಾ ಕಣ್ಣು ತೆರೆದು ಕುಳಿತಿರುವ ದೇವರುಗಳಂತೆ (ದೇವರು ಅನಿಮಿಷರು ಎಂಬ ಪ್ರತೀತಿ ಇದೆ) ಕಾಯುತ್ತಿರುತ್ತಾರೆ. ಇಲ್ಲಿ ಈ ಕ್ರಿಯೆಯನ್ನು ನೋಡುವ ಕೋಟಿ ಕಣ್ಣುಗಳು ಕೋಟಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅದು ತಮ್ಮ ಪರವಾದ ನಿಲುವಾಗಿರುವ ಖಾತ್ರಿ ಇಲ್ಲ. ಆದರೆ ಮುಂದಾಲೋಚನೆಯಿಲ್ಲದೆ ಚಿಕ್ಕ ಮಕ್ಕಳಾಟದಂತೆ ಮಸಿಯನ್ನು ಎರಚುವ ಕೆಲಸವನ್ನು ನಿಲ್ಲಿಸಬೇಕಾಗಿದೆ.
ಮಸಿ ಎರಚುವವರ ಮನಸ್ಥಿತಿಯಷ್ಟೇ ಇಲ್ಲಿ ಜಗಜ್ಜಾಹೀರಾಗುತ್ತದೆ. ಹೀಗೆ ಮಸಿ ಬಳಿಯುವ ಮೂಲಕ, ಮಸಿ ಬಳಿಸಿಕೊಂಡವರ ವೈಯಕ್ತಿಕ ಜೀವನದ ಮೇಲೇನು ಇವರು ಮಸಿ ಬಳಿಯಲಾಗುವುದಿಲ್ಲವೆಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. ಚುನಾವಣಾ ಸಮಯದಲ್ಲಿ ಇಂತಹ ಕೀಳು ಅಭಿರುಚಿಯನ್ನು ಬಳಸಿಕೊಂಡು ತಮ್ಮ ನಂಬಿಕೆಯ ವಿರುದ್ಧವಿರುವ ವ್ಯಕ್ತಿಗಳ ಮುಖಕ್ಕೆ ಬಳಿಯುವ ಮಸಿ, ಕೇವಲ ಬಳಿಸಿಕೊಂಡವರ ಮುಖಕ್ಕೆ ಮಾತ್ರ ಬಳಿದಿದ್ದೇವೆಂದು ತಿಳಿದುಕೊಂಡರೆ ಅದು ತಪ್ಪು. ಹಾಗೆ ಬಳಿದ ಮಸಿ ಬಳಿದವರ ಮುಖಕ್ಕೂ ಮೆತ್ತಿಕೊಂಡಿರುತ್ತದೆ. ಅಲ್ಲದೆ ಇಡೀ ತನ್ನ ದೇಹವನ್ನೆಲ್ಲ ಆ ಮಸಿ ವ್ಯಾಪಿಸಿರುತ್ತದೆ ಎಂಬುದನ್ನು ಮಸಿ ಬಳಿಯುವವರು, ಬಳಿಸುವವರು ಮರೆಯಬಾರದು. ಈ ಲೋಕ ಕನ್ನಡಿ ಇದ್ದ ಹಾಗೆ, ನೀವು ನಕ್ಕರೆ ಅದು ನಗುತ್ತದೆ, ನೀವು ಅತ್ತರೆ ಅದೂ ಅಳುತ್ತದೆ ಅಲ್ಲವೇ?

  ತಂತ್ರಜ್ಞಾನದ ಮಿತಿ
                                                                                                                                   - ಪ್ರದೀಪ್ ಮಾಲ್ಗುಡಿ
ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಕಳೆದು ಹೋದ ವಿಮಾನವೊಂದನ್ನು ಪತ್ತೆಹಚ್ಚಲಾಗುತ್ತಿಲ್ಲ. ಇದುವರೆಗೆ ತನ್ನ ಕಿರುಬೆರಳಲ್ಲಿ ಜಗತ್ತನ್ನು ಆಡಿಸುವ ಪ್ರಯತ್ನಗಳಿಗೆ ತಂತ್ರಜ್ಞಾನವನ್ನು ನಂಬಿಕೊಳ್ಳಲಾಗಿತ್ತು. ತಂತ್ರಜ್ಞಾನ ಆವಿಷ್ಕಾರದ ಕಾರಣಕ್ಕೆ ವಿಶ್ವದ ಮುಂದುವರಿದ ರಾಷ್ಟ್ರಗಳೆಲ್ಲವೂ ವಿಶ್ವವೇ ತಮ್ಮನ್ನು ತಿರುಗಿ ನೋಡುವಂತೆ ಮಾಡಿದ್ದೇವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದವು. ಆದರೆ ಕಳೆದ ಎರಡು ವಾರಗಳಿಂದ ನಮ್ಮ ತಂತ್ರಜ್ಞಾನದ ಮಿತಿ ಮನವರಿಕೆಯಾಗಿದೆ. ಇಡೀ ವಿಶ್ವವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಮಾನವನ ಪ್ರಯತ್ನಗಳು ನಿರಂತರವಾಗಿ ವಿಫಲವಾಗಿವೆ. ಅದರಂತೆ ಪ್ರಕೃತಿಯನ್ನು ಮಾನವ ತನ್ನ ಹಿಡಿತಲ್ಲಿಟ್ಟುಕೊಳ್ಳುವುದು ಕೂಡ ಸಾಧ್ಯವಾಗುತ್ತಿಲ್ಲ. ತನ್ನ ಈ ಮಿತಿಯನ್ನು ಮೀರುವ ಸಲುವಾಗಿ ಅತಿ ವೇಗದ ವಿಮಾನ, ರೈಲುಗಳನ್ನು, ಯುದ್ಧವಿಮಾನ, ರಾಕೆಟ್‌ಗಳನ್ನು ಕಂಡುಹಿಡಿಯುತ್ತ, ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾಯಿಸುತ್ತ ಜಗತ್ತನ್ನು ಹಳ್ಳಿ ಮಾಡಿಕೊಂಡಿದ್ದೇವೆಂದು ಬೀಗುತ್ತಿದ್ದವರಿಗೆ ಈಗ ಸಂಭವಿಸಿರುವ ಅವಘಡ ಎಚ್ಚರದ ಗಂಟೆಯಾಗಿದೆ.
ತೃತೀಯ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮುಂದುವರಿದ ರಾಷ್ಟ್ರಗಳು ಕಂಡುಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ಜೀವ ಉಳಿಸುವ ತಂತ್ರಜ್ಞಾನದ ಆವಿಷ್ಕಾರದ ಅವಶ್ಯಕತೆಯನ್ನು ವಿಮಾನ ನಾಪತ್ತೆ ಪ್ರಕರಣ ಹುಟ್ಟುಹಾಕಿದೆ. ನಾಪತ್ತೆಯಾದ ವಿಮಾನದ ಪತ್ತೆಗೆ ಇಪ್ಪತ್ತೆರಡು ರಾಷ್ಟ್ರಗಳು ಶ್ರಮಿಸಿದರೂ ಇಷ್ಟು ದಿನಗಳ ನಂತರವೂ ಖಚಿತ ಮಾಹಿತಿ ಲಭಿಸದಿರುವುದು ಯಕ್ಷಪ್ರಶ್ನೆಯಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉಪಗ್ರಹಗಳು, ದೂರಸಂವೇದಿ ಯಂತ್ರಗಳು ನಾಪತ್ತೆಯಾಗಿರುವ ವಿಮಾನದಲ್ಲಿದ್ದ ಪ್ರಯಾಣಿಕರ ದುಃಖವನ್ನು ತೊಡೆಯುವುದರಲ್ಲಿ ವಿಫಲವಾಗಿವೆ. ನಾಸಾ ಇದುವರೆಗೆ ಹೆಮ್ಮೆ ಪಡುತ್ತಿದ್ದ ಉಪಗ್ರಹಗಳ ಕಣ್ಣಿಂದಲೂ ತಪ್ಪಿಸಿಕೊಂಡಿರುವ ಈ ವಿಮಾನದ ವಿಷಯ ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯುನ್ಮಾನ ಹಾಗು ಮುದ್ರಣ ಮಾಧ್ಯಮಗಳು ದಿನಕ್ಕೊಂದು  ಕತೆ ಕಟ್ಟಿದವು. ಆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಗಳ ಮಾನಸಿಕ ಒತ್ತಡವನ್ನು ನಿವಾರಿಸುವ ಬದಲು, ಆತಂಕ ಕ್ಷಣಕ್ಷಣಕ್ಕೂ ಹೆಚ್ಚಿಸುವಂತಹ, ರೋಚಕಗೊಳಿಸಿ ಪ್ರಸಾರಿಸುವ, ಪ್ರಕಟಿಸುವ ಕೆಲಸವನ್ನು ಈ ಮಾಧ್ಯಮಗಳು ಮಾಡಿದವು. ’ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದಾರೆ, ಆ ವಿಮಾನವನ್ನು ಬೆಂಗಳೂರಿನ ಮೇಲೆ ದಾಳಿಗಾಗಿ ಅಪಹರಿಸಲಾಗಿದೆ’ ಇತ್ಯಾದಿ ಕಪೋಲಕಲ್ಪಿತ ವರದಿಗಳು, ಸುದ್ದಿಗಳು ಪ್ರಕಟವಾದವು, ಬಿತ್ತರಗೊಂಡವು. ಇದರಿಂದ ಕೇವಲ ವಿಮಾನ ಪ್ರಯಾಣಿಕರಲ್ಲಿದ್ದ ಆತಂಕ ಬೆಂಗಳೂರಿನಲ್ಲಿದ್ದ ಜನತೆಯ ಜತೆಗೆ ಅಲ್ಲಿರುವ ಒಂದು ಕೋಟಿ ಜನರ ಸಂಬಂಧಿಕರ ಆತಂಕವಾಗಿ ವಿಸ್ತರಿಸಿತು. ಇದು ಇನ್ನೊಂದು ರೀತಿಯಲ್ಲಿ ಭಯೋತ್ಪಾದಕ ಕಾರ‍್ಯವಾಗಿದೆ. ಎಲ್ಲರನ್ನು ವಿಮರ್ಶಿಸುವ ಮಾಧ್ಯಮಗಳು ತಮ್ಮ ಸ್ವವಿಮರ್ಶೆಯ ಕಾಲವನ್ನು ತಲುಪಿರುವಂತಿದೆ.

  ನ್ಯಾಯಮೂರ್ತಿಗಳ ನೇಮಕವಾಗಲಿ
                                                                                                                                 - ಪ್ರದೀಪ್ ಮಾಲ್ಗುಡಿ
ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ಹೈಕೋರ್ಟ್‌ನ ನ್ಯಾಯಪೀಠಗಳಲ್ಲಿ ಹನ್ನೆರಡು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿವೆಯೆಂದು ವರದಿಯಾಗಿದೆ. ತ್ವರಿತ ನ್ಯಾಯದಾನದ ವಿಳಂಬಕ್ಕೆ ಇದು ಕಾರಣವಾಗಲಿದೆ. ಆದ್ದರಿಂದ ಉಚ್ಛನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಈ ಕುರಿತು ಶೀಘ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೆ ಅನವಶ್ಯಕ ವಿಳಂಬ ಎಂಬ ತಪ್ಪು ತಿಳುವಳಿಕೆ ಇದೆ. ಇದನ್ನು ಇಲ್ಲವಾಗಿಸಲು ಸೂಕ್ತ ಕ್ರಮದ ಅಗತ್ಯವಿದೆ. ಸರ್ಕಾರಗಳ ವಿಳಂಬನೀತಿಯ ಕುರಿತು ಆಗಾಗ ಚಾಟಿ ಬೀಸುತ್ತಿರುವ ಕೋರ್ಟ್‌ಗಳು ನ್ಯಾಯದಾನ ವಿಳಂಬವನ್ನು ತಮ್ಮ ಕರ್ತವ್ಯಲೋಪವೆಂದು ಪರಿಗಣಿಸದಿರುವುದು ಪ್ರಸ್ತುತ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜೀವ್‌ಗಾಂಧಿಯವರ ಕೊಲೆಯಲ್ಲಿ ಮರಣದಂಡನೆಗೆ ಗುರಿಯಾದವರನ್ನು ಈ ಶಿಕ್ಷೆಯಿಂದ ಬಿಡುಗಡೆಗೊಳಿಸಲಾಗಿತ್ತು. ಅದಕ್ಕೆ ಕಾರಣ ನೀಡಿದ ಈ ವಿಷಯಕ್ಕೆ ಸಂಬಂಧಿಸಿದೆ. ಕ್ಷಮಾಧಾನಕ್ಕೆ ಅರ್ಜಿ ಸಲ್ಲಿಸಿದ ಈ ಆರೋಪಿಗಳ ಅರ್ಜಿಯನ್ನು ವಿಲೇವಾರಿ ಮಾಡಲು ಸುದೀರ್ಘ ಕಾಲವನ್ನು ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿ ಈ ಆರೋಪಿಗಳ ಜೀವನವು ದಶಕಗಳಷ್ಟು ಕಾಲ ಜೈಲಿನಲ್ಲಿ ಕಳೆದಿತ್ತು. ಈ ವಿಳಂಬವನ್ನು ಉಲ್ಲೇಖಿಸಿದ ತಮಿಳುನಾಡಿನ ಹೈಕೋರ್ಟ್ ಇವರನ್ನು ಖುಲಾಸೆಗೊಳಿಸಿತ್ತು.
ನ್ಯಾಯದಾನ ಎನ್ನುವುದು ಸಾಮಾನ್ಯ ಕೆಲಸವೇನಲ್ಲ. ಬೃಹತ್ ರಾಷ್ಟ್ರದಲ್ಲಿ ಈ ಕೆಲಸ ಇನ್ನು ತ್ರಾಸದಾಯಕ. ಅಪರಾಧಿ, ಆಪಾದಿತ, ಆರೋಪಿ, ಸಾಕ್ಷಿಗಳು, ವಾದ, ಪ್ರತಿವಾದ ಹಾಗೂ ಇವುಗಳೆಲ್ಲದರ ಸೂಕ್ಷ್ಮ ವಿಶ್ಲೇಷಣೆಯ ನಂತರ ಮಾತ್ರ ನ್ಯಾಯನಿರ್ಣಯ ಮಾಡುವ ಕೆಲಸವನ್ನು ನ್ಯಾಯಮೂರ್ತಿಗಳು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ನ್ಯಾಯದಾನವು ಅತಿ ವಿಳಂಬಕ್ಕೆ ಈಡಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ. ನ್ಯಾಯಾಲಯದ ದಿಕ್ಕು ತಪ್ಪಿಸಲು ಆರೋಪಿಗಳು ಅನೇಕ ತಂತ್ರಗಳನ್ನು ಅನುಸರಿಸುತ್ತಾರೆ. ಅನಾರೋಗ್ಯದ ಸಮಸ್ಯೆ ಇಂತಹವರಿಗೆ ಸುಲಭವಾಗಿದೆ. ಅದಲ್ಲದೆ ತಮ್ಮ ಪರ ವಾದಿಸುವ ವಕೀಲರು ಇಂದು ಬಂದಿಲ್ಲ, ಆದ ಕಾರಣ ನಮ್ಮ ವಿಚಾರಣೇಯನ್ನು ಮುಂದೂಡಿ ಎಂದು ಮನವಿ ಸಲ್ಲಿಸಲಾಗುತ್ತದೆ. ಸಬೃಹತ್ ನ್ಯಾಯ ಅದಾಲತ್ ಹಾಗೂ ಕೌಟುಂಬಿಕ ನ್ಯಾಯಾಲಯಗಳಲ್ಲಿ ತ್ವರಿತ ವಿಚಾರಣೆ ಹಾಗೂ ತೀರ್ಪಿನ ಕುರಿಒತು ಈಗಾಗಲೆ ಕೋರ್ಟ್ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ಕ್ರಮಗಳಿಗೆ ಸೂಕ್ತವಾದ ನ್ಯಾಯಮೂರ್ತಿಗಳ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.                                                                                                                   
ಜನ ಪ್ರತಿನಿಧಿಗಳ ಆಸ್ತಿ
                                                                                                                                      - ಪ್ರದೀಪ್ ಮಾಲ್ಗುಡಿ
ಒಂದು ಅಂಕಿ-ಅಂಶದ ಪ್ರಕಾರ ಇಡೀ ಭಾರತದಲ್ಲಿ ಮುವತ್ತು ಕೋಟಿ ಜನಕ್ಕೆ ಎರಡು ಹೊತ್ತಿನ ಊಟವೂ ಸಿಗುತ್ತಿಲ್ಲ. ಪ್ರಾಥಮಿಕ ಶಿಕ್ಷಣವನ್ನೂ ಪಡೆಯದ ಕೋಟಿಗಟ್ಟಲೆ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಅಪೌಷ್ಠಿಕತೆಯಿಂದ ರೋಗಪೀಡಿತರಾಗಿ ನರಳುತ್ತಿರುವ ಮಕ್ಕಳು, ಗರ್ಭಿಣಿಯರ ಸಂಖ್ಯೆ ಕೋಟಿಗಳನ್ನು ಮೀರುತ್ತದೆ. ಸರ್ಕಾರಿ ಉತ್ಪಾದನಾ ವಲಯಗಳು ಒಂದೊಂದಾಗಿ ಕಣ್ಮುಚ್ಚುತ್ತಿವೆ. ಇದರಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗದೆ ಲಕ್ಷಾಂತರ ಪದವೀಧರರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ಅನೇಕ ಕ್ಷೇತ್ರಗಳ ಕ್ಷಿಪ್ರ ಬೆಳವಣಿಗೆಯ ಜೊತೆಗೆ ಬಡತನವೂ ಬೆಳೆಯುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿರುವ ಜೊತೆಗೆ ಈ ಬಗೆಯ ಸಮಸ್ಯೆಗಳು ಇಲ್ಲವಾಗುವ ಬದಲು, ಇಮ್ಮಡಿಯಾಗುತ್ತಿವೆ.
ಇದಕ್ಕೆ ವ್ಯತಿರಿಕ್ತವಾಗಿ ಪ್ರಜಾಸೇವೆಗೆಂದು ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳ ಆಸ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಕಾಲಕ್ಕೆ ಮತದಾರರೆ ಸ್ಪರ್ಧಿಗಳ ಚುನಾವಣಾ ವೆಚ್ಚಕ್ಕೆ ಹಣವನ್ನು ದೇಣಿಗೆ ನೀಡುತ್ತಿದ್ದ ಕಾಲವಿತ್ತು. ಆದರೆ ಇಂದು ಸಾವಿರಾರು ಕೋಟಿ ಒಡೆಯರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಇಷ್ಟೊಂದು ಅಪಾರ ಪ್ರಮಾಣದ ಹಣ, ಆಸ್ತಿ ಸಂಪಾದಿಸಿರುವುದು ಹೇಗೆಂಬುದು ಬಿಡಿಸಲಾಗದ ಒಗಟಾಗಿಯೇ ಉಳಿಯುತ್ತಿದೆ. ಜನಪ್ರತಿನಿಧಿಗಳ ನಡೆ ಇನ್ನಾದರೂ ಪ್ರಜೆಗಳ ಅಭಿವೃದ್ಧಿಯ ಕಡೆಗೆ ಚಲಿಸಬೇಕಾಗಿದೆ.

ಮತಬ್ಯಾಂಕ್      
                                                                                                                                       - ಪ್ರದೀಪ್ ಮಾಲ್ಗುಡಿ
ರಾಜಕಾರಣಿಗಳು ಮಠಮಾನ್ಯಗಳನ್ನು ತಮ್ಮ ಮತಬ್ಯಾಂಕ್ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. ಅದರಲ್ಲೂ ಚುನಾವಣಾ ಸಮಯದಲ್ಲಿ ನಡೆಯುವ ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮಠಗಳು ಹಾಗೂ ಪ್ರಭಾವೀ ಮಠಗಳ ಸ್ವಾಮಿಗಳ ದರ್ಶನ ಪಡೆಯುವುದು ಹಾಗೂ ಅವರ ಕಾಲಿಗೆರಗಿದ ಫೋಟೋಗಳು, ವೀಡಿಯೋಗಳು ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ಆ ಮಠಗಳ ಭಕ್ತರನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯದ ಅನೇಕ ಮಠಗಳಿಗೆ ಕೋಟಿಗಟ್ಟಲೆ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಅದರ ಕುರಿತು ವಿರೋಧಾಭಿಪ್ರಾಯಗಳು ಎದ್ದಿದ್ದವು. ಕೆಲವು ಮಠಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ನಾಟಕದಲ್ಲಿ ಸಾರ್ವರ್ತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ಆದರೆ ಹಾಗೆಂದು ಈಗ ಸರ್ಕಾರವು ಮಠಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುವುದು ಸಾರ್ವಜನಿಕ ಹಣದ ದುರುಪಯೋಗವಾಗುತ್ತದೆ. ಹೀಗೆ ಮಠಗಳಿಗೆ ಹಣ ಬಿಡುಗಡೆ ಮಾಡುವ ಕ್ರಿಯೆಯು ಮಠಾಧೀಶರು ಹಾಗೂ ಜನಪ್ರತಿನಿಧಿಗಳ ನಡುವೆ ಒಪ್ಪಂದವೊಂದು ಜಾರಿಯಲ್ಲಿರುವ ಅನುಮಾನವನ್ನು ಮೂಡಿಉವಂತೆ ಇವರಿಬ್ಬರ ನಡೆಯಿದೆ.
ಇದರ ನಡುವೆ ಸಿರಿಗೆರೆಯ ಬೃಹನ್ಮಠದ ಸ್ವಾಮಿಗಳು ತಮ್ಮನ್ನು ನೋಡಲು ಬರುವ ರಾಜಕಾರಣಿಗಳು ಸಾಮಾನ್ಯರಂತೆ ಜನರ ಜೊತೆ ಸರದಿ ಸಾಲಿನಲ್ಲಿ ಬಂದು ಹೋಗಬೇಕು ಹಾಗೂ ತಮ್ಮ ಜೊತೆಗಿರುವ ಫೋಟೋಗಳನ್ನು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಳಸಬಾರದೆಂದು ತಾಕೀತು ಮಾಡಿರುವುದು ಸರಿಯಾದ ಕ್ರಮವಾಗಿದೆ. ಆದರೆ ಇದು ಕೇವಲ ಈ  ಲೋಕಸಭಾ ಚುನಾವಣೆ ಹಾಗೂ ಸಿರಿಗೆರೆ ಮಠಕ್ಕೆ ಮಾತ್ರ ಅನ್ವಯಿಸುವ ಬದಲು, ಎಲ್ಲ ಮಠಾಧೀಶರು ಈ ನಿಲುವನ್ನು ತಳೆಯುವ ಮೂಲಕ ರಾಜಕಾರಣ ಮತ್ತು ಮಠಗಳಿಗಿರುವ ರಾಜಕೀಯ ಸಂಬಂಧಗಳ ನಡುವೆ ಅಂತರ ಕಾಯ್ದುಕೊಳ್ಳಬೇಕಾಗಿದೆ. ಈ ನಿಲುವನ್ನು ಮೊಟ್ಟಮೊದಲು ಸಾರ್ವಜನಿಕವಾಗಿ ಘೋಷಿಸಿದ್ದಕ್ಕಾಗಿ ಸಿರಿಗೆರೆ ಸ್ವಾಮಿಗಳು ಅಭಿನಂದನಾರ್ಹರು.

ಆಪ್ ಶಾಪಗ್ರಸ್ತ ಗಂಧರ್ವರ ಬೀಡಾಗದಿರಲಿ                                                                                                                                                                                                                                              - ಪ್ರದೀಪ್ ಮಾಲ್ಗುಡಿ
ಭಾರತದಲ್ಲಿ ಸಣ್ಣ ಬದಲಾವಣೆಗೂ ಸಾವಿರಾರು ವರ್ಷಗಳ ಸುದೀರ್ಘ ಯಾನ ಅನಿವಾರ‍್ಯವೆಂಬ ಮಾತಿದೆ. ಆದರೆ ಆ ನಂಬಿಕೆಯನ್ನು ಸುಳ್ಳು ಮಾಡಿದ ಎರಡು ಉದಾಹರಣೆಗಳು ಕಳೆದ ಒಂದು ಶತಮಾನದಲ್ಲೇ ಘಟಿಸಿವೆ. ಮೊದಲನೆಯ ಉದಾಹರಣೆಯೆಂದರೆ, ಸ್ವಾತಂತ್ರ್ಯ ಹೋರಾಟ. ೧೮೫೭ರ ಸಿಪಾಯಿ ದಂಗೆಯಿಂದ ೧೯೪೭ರವರೆಗಿನ ಸ್ವಾತಂತ್ರ್ಯ ಹೋರಾಟಕ್ಕೆ ೯೦ ವರ್ಷಗಳ ಇತಿಹಾಸವಿದೆ. ಎರಡನೆ ಉದಾಹರಣೆಯೆಂದರೆ, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆಂದೋಲನ.
ಇಲ್ಲಿ ಗಮನಿಸಬಹುದಾದ ಸಂಗತಿಯೆಂದರೆ, ಹೊಲವನ್ನು ಹರಗಿ, ಬೀಜವನ್ನು ಬಿತ್ತಿ, ನೀರು ಹಾಯಿಸಿ, ಕಳೆ ತೆಗೆದು, ಗೊಬ್ಬರ ಹಾಕಿ ಹುಲುಸಾದ ಬೆಳೆ ಬೆಳೆಯಲು ಸಹಕರಿಸಿದ್ದು ಭಾರತದ ಯುವಜನಾಂಗ, ಮಧ್ಯಮ, ಐಟಿ, ಬಿಟಿ ವರ್ಗ. ಈ ಮಹಾಯಾತ್ರೆಗೆ ಕೈಜೋಡಿಸಿದ್ದು ಮಾಧ್ಯಮಗಳು. ಆದರೆ, ಫಸಲನ್ನು ಕೊಯ್ದುಕೊಳ್ಳುವ ಅವಕಾಶ ಅನಾಯಾಸವಾಗಿ ಸಿಕ್ಕಿದ್ದು ಆಪ್ - ಆಮ್ ಆದ್ಮಿ ಪಕ್ಷದ  ಸ್ಥಾಪಕರಾದ ಅರವಿಂದ್ ಕೇಜ್ರಿವಾಲ್ ಅವರಿಗೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬ್ರಹ್ಮಾಂಡ ಭ್ರಷ್ಟಾಚಾರ, ಅಧಿಕಾರಿಗಳ ಲಂಚಗುಳಿತನಗಳಿಂದ ಬೇಸತ್ತಿದ್ದ ಭಾರತೀಯರು  ಭ್ರಷ್ಟಾಚಾರ ವಿರೋಧೀ ಆಂದೋಲನಕ್ಕೆ ಅಭೂತಪೂರ್ವ ಬೆಂಬಲವನ್ನು ನೀಡಿದರು. ಈ ಆಂದೋಲನ ತೀವ್ರಗತಿಯಲ್ಲಿ ಮುನ್ನೆಲೆಗೆ ಬಂದು, ಸಾರ್ವಜನಿಕವಾಗಿ ಚರ್ಚೆಗೊಳಗಾಗಿ ಲೋಕಪಾಲ್ ಬಿಲ್‌ನ ಮಂಡನೆಯಾಗುವ ಹಂತವನ್ನು ತಲುಪಿದ್ದರಲ್ಲಿ ಬಹುತೇಕ ಮಾಧ್ಯಮಗಳ ಪಾತ್ರ ಗಣನೀಯವಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಸ್ವಾತಂತ್ರ್ಯ ಹೋರಾಟ ದೇಶದಾದ್ಯಂತ ಹರಡಬೇಕಾದಾಗ ತೆಗೆದುಕೊಂಡ ಸಮಯಕ್ಕಿಂತ ಈ ಆಂದೋಲನ ಬೇಗ ವ್ಯಾಪಕವಾಗಿ ಪಸರಿಸಿತು. ದೇಶದ ಯುವ ಜನತೆಯನ್ನೂ ಒಳಗೊಂಡು ಮೊಬೈಲ್ ಎಸ್.ಎಂ.ಎಸ್., ಫೇಸ್‌ಬುಕ್, ಟ್ವೀಟರ್‌ಗಳ ಮೂಲಕ ತ್ವರಿತವಾಗಿ ಜನಾಭಿಪ್ರಾಯ ರೂಪುಗೊಳ್ಳಲು ಕಾರಣವಾಯಿತು. ಈ ಹಂತದಲ್ಲಿ ವಿಶೇಷವಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸ್ಪರ್ಧೆಗೆ ಬಿದ್ದಂತೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿದವು ಹಾಗೂ ಬಿತ್ತರಿಸಿದವು.
ಮಾಧ್ಯಮಗಳ ವ್ಯಾಪಕ ಪ್ರಚಾರದಿಂದಾಗಿ ಲೋಕಪಾಲ್ ಪರವಾಗಿ ಜನಾಭಿಪ್ರಾಯ  ಮೂಡಿತು. ಇದರಿಂದ ಆಡಳಿತ ಹಾಗೂ ವಿರೋಧ ಪಕ್ಷಗಳೂ ಇಕ್ಕಟ್ಟಿಗೆ ಸಿಲುಕಿದವು. ಇದರಿಂದ ಉತ್ತೇಜಿತರಾದ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯನ್ನು ಹುಟ್ಟು ಹಾಕಿ, ಕಸಪೊರಕೆಯನ್ನು ತಮ್ಮ ಪಕ್ಷದ ಗುರುತನ್ನಾಗಿಸಿಕೊಂಡರು. ಇದರ ಪರಿಣಾಮದಿಂದ ದೆಹಲಿಯಲ್ಲಿ ೪೯ ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ, ಈಗ ಅಧಿಕಾರದಿಂದ ನಿರ್ಗಮಿಸಿದ್ದಾರೆ.
ಲೋಕಪಾಲ್ ಬಿಲ್ಲನ್ನು ಮಂಡಿಸಲು ಮೀನಮೇಷ ಎಣಿಸಿದ ಕಾಂಗ್ರೆಸ್ ಪಕ್ಷ ಪಂಚರಾಜ್ಯಗಳ ಚುನಾವಣೆಯಲ್ಲಿ ನೆಲಕಚ್ಚಿತು. ಅದಾದ ನಂತರ ತರಾತುರಿಯಲ್ಲಿ ಆತುರಾತುರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳತೊಡಗಿತು. ಆ ನಡುವೆ ಅಲ್ಪಮತದ ಸರ್ಕಾರವನ್ನು ರಚಿಸಿದ್ದ ಅರವಿಂದ್ ಕೇಜ್ರಿವಾಲ್ ಅನೇಕ ಅವಾಂತರಗಳನ್ನು ಸೃಷ್ಟಿಸಿ, ಸ್ವತಃ ಮುಖ್ಯಮಂತ್ರಿಯೊಬ್ಬರು ಧರಣಿ ನಡೆಸಿದ ಇತಿಹಾಸವನ್ನೂ ನಿರ್ಮಿಸಿದರು.
ಸೂಕ್ಷ್ಮವಾಗಿ ಗಮನಿಸಿದರೆ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಚುನಾವಣಾ ಪೂರ್ವದಿಂದ ಇಂದಿನವರೆಗೂ ಭ್ರಷ್ಟಾಚಾರವೊಂದನ್ನೆ ತಮ್ಮ ಭಾಷಣದ ಅಜೆಂಡಾವನ್ನಾಗಿಸಿಕೊಂಡಿದ್ದಾರೆ. ಆದರೆ ಒಂದೇ ಕಾರ‍್ಯಸೂಚಿಯಿಂದ ಚುನಾವಣಾ ರಾಜಕೀಯ ಅಥವಾ ಅಧಿಕಾರ ರಾಜಕಾರಣವನ್ನು ಭಾರತದಲ್ಲಿ ನಡೆಸಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ೧೩೬೮ಕ್ಕೂ ಹೆಚ್ಚಿನ ಸಮುದಾಯ(ಜಾತಿ)ಗಳಿವೆ. ಇದರಲ್ಲಿ ಅನಕ್ಷರಸ್ಥರು, ಅಕ್ಷರಸ್ಥರು, ಕಡುಬಡವರು, ಮಧ್ಯಮ ವರ್ಗ, ಮೇಲ್ಮಧ್ಯಮವರ್ಗ, ಮೇಲ್ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳು, ಜಾತಿ ಆಧಾರಿತವಾಗಿ ವೃತ್ತಿಯನ್ನು ನಂಬಿಕೊಂಡಿರುವ ವರ್ಗಗಳು ಇತ್ಯಾದಿ ಭಿನ್ನ ವರ್ಗ, ವರ್ಣ, ಲಿಂಗ, ವಯೋಮಾನ, ಆಸ್ತಿಕ - ನಾಸ್ತಿಕ  ಮನೋಧರ್ಮದ ಜನರಿದ್ದಾರೆ. ಈ ಎಲ್ಲರನ್ನೂ ತಲುಪುವುದಕ್ಕೆ ಭ್ರಷ್ಟಾಚಾರ ವಿರೋಧ ಎಂಬ ಒಂದೇ ಮಂತ್ರದಿಂದ ಸಾಧ್ಯವಿಲ್ಲ. ಈ ಅಂಶವನ್ನು ಆಪ್ ಮನಗಾಣಬೇಕಾಗಿದೆ.
ಆಧುನಿಕೋತ್ತರ ಭಾರತದಲ್ಲಿ ಹೊಸಕ್ರಾಂತಿಯ ಸಾಧ್ಯತೆಗಳೇ ಮಸುಕಾಗುತ್ತಿವೆ, ಚಳುವಳಿಗಳು ಸಾಯುತ್ತಿವೆ ಎಂಬ ವಾದ ನಿಧಾನವಾಗಿ ಬಲವಾಗಿ ರೂಪುಗೊಳ್ಳತೊಡಗಿದಾಗ ನಡೆದ ಈ ಬದಲಾವಣೆಯನ್ನು ಆಪ್‌ನಂತಹ  ಪಕ್ಷಗಳು, ಮಾಧ್ಯಮಗಳು ಹಾಗೂ ಮತದಾರರು ತುಸು ಎಚ್ಚರದಿಂದ ಪರಿಭಾವಿಸಬೇಕಾಗಿದೆ. ಅರವಿಂದ್ ಕೇಜ್ರಿವಾಲ್ ಅಧಿಕಾರ ವಹಿಸಿಕೊಳ್ಳುವವರೆಗೆ ಅವರ ಪರವಾಗಿದ್ದ ಮಾಧ್ಯಮಗಳು ಅಧಿಕಾರ ವಹಿಸಿಕೊಂಡ ಕ್ಷಣದಿಂದ ತಾವೇ ಅಧಿಕೃತ ವಿರೋಧ ಪಕ್ಷಗಳಾಗಿ ವರ್ತಿಸತೊಡಗಿದವು.
ಆಪ್ ಬಗ್ಗೆ ಇರುವ ಕೆಲವು ಆಕ್ಷೇಪಗಳನ್ನು ನೋಡುವುದಾದರೆ, ಅದರಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಇಲ್ಲ ಹಾಗೂ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಛಿದ್ರಗೊಳಿಸಲು ವಿದೇಶೀ ಹುನ್ನಾರದ ಬಲಿಪಶು ಆಪ್ ಎಂಬ ಮಾತುಗಳಿವೆ. ಮೊದಲನೆಯ ಆಕ್ಷೇಪಕ್ಕೆ ಆಪ್ ಆದಷ್ಟು ಶೀಘ್ರವಾಗಿ ಉತ್ತರ ಕಂಡುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕೇವಲ ಒಂದು ವರ್ಗದ ಮತದಾರರನ್ನು ನೆಚ್ಚಿಕೊಂಡು ಲೋಕಸಭಾ ಚುನಾವಣೆಗೆ ಹೋದರೆ ದೆಹಲಿಯಲ್ಲಿ ಸಿಕ್ಕ ಜಯ ಸಿಗುವ ದಾರಿ ದೂರವಾಗಬಹುದು. ಎರಡನೇ ಆಕ್ಷೇಪಕ್ಕೆ ಕಾಲವೇ ಉತ್ತರಿಸಬಹುದೇನೋ?
ಭಾರತೀಯ ಪುರಾಣಗಳ ನಂಬಿಕೆಯ ಪ್ರಕಾರ ಶಾಪಗ್ರಸ್ಥ ಗಂಧರ್ವರು ಭೂಮಿಯಲ್ಲಿ ಅಲ್ಪ ಕಾಲ ಕಳೆದು ತಮ್ಮ ಶಾಪವಿಮೋಚನೆಯ ನಂತರ ಸ್ವರ್ಗಲೋಕವನ್ನು ಪ್ರವೇಶಿಸುತ್ತಾರೆ. ಆದರೆ ಭೂಮಿಯನ್ನೇ ಸ್ವರ್ಗ ಮಾಡುವ ಕನಸನ್ನು ಬಿತ್ತಿರುವ ಆಪ್ ಹಾಗೂ ಅದರ ತತ್ವವನ್ನು ನಂಬಿರುವ ಆಕಾಂಕ್ಷಿಗಳು ತಾವೇನೋ ಸ್ವರ್ಗವನ್ನು ಸೇರಬಹುದು; ಆದರೆ ಕನಸು ಬಿತ್ತಿ ಮೋಸ ಮಾಡಿದರೆ ಭಾರತದಲ್ಲಿ ಹೊಸಪಕ್ಷಗಳಿಗೆ ಭವಿಷ್ಯವೇ ಇಲ್ಲದಂತಾಗುವ ಅಪಾಯವಿದೆ. ಈ ಮೂಲಕ ಜನಸಮುದಾಯದ ಆಶೋತ್ತರಗಳು ಎಂದಿನಂತೆ ನಿಲುಕದ ನಕ್ಷತ್ರಗಳಾಗುತ್ತವೆ. ಹಾಗೆ ನೋಡಿದರೆ, ಜನರೇ ಆಮ್ ಆದ್ಮಿಗಳು ಮತ್ತು ಕಾಮ್ ಆದ್ಮಿಗಳು. ಶ್ರೀಸಾಮಾನ್ಯನಿಗೆ ಎಂದಿಗೆ ಮಾನ್ಯತೆ? ನೆಮ್ಮದಿ?

ರಾಜ್‌ಕುಮಾರ್ ಕುಟುಂಬ ರಾಜಕಾರಣಕ್ಕೆ
                                                                                                              ಪ್ರದೀಪ್ ಮಾಲ್ಗುಡಿ
ಕನ್ನಡದ ಸಾಕ್ಷಿಪ್ರಜ್ಞೆಯಂತೆ ಕೆಲಸ ನಿರ್ವಹಿಸಿದ ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಕುಟುಂಬ ಕೊನೆಗೂ ಕರ್ನಾಟಕದಲ್ಲಿ ರಾಜಕಾರಣ ಪ್ರವೇಶಮಾಡಿದೆ. ಕರ್ನಾಟಕದ ನಾಡು, ನುಡಿ, ಸಿನಿಮಾ ಕುರಿತ ಸಮಸ್ಯೆಗಳಿಗೆ ರಾಜ್ ಪ್ರತಿಸ್ಪಂದನೆ ಅಭೂತಪೂರ್ವವಾಗಿರುತ್ತಿತ್ತು. ಅವರೊಮ್ಮೆ ರಸ್ತೆಗಿಳಿದರೆ ಇಡೀ ಕನ್ನಡ ನಾಡು ಅವರ ಕರೆಗೆ ಓಗೊಡುತ್ತಿತ್ತು. ಕೇವಲ ನಟನೆಯೊಂದರಿಂದಲೆ ಇಷ್ಟೊಂದು ಜನಾದರ ಪಡೆದ ಮತ್ತೊಬ್ಬ ಕನ್ನಡ ನಟ ಇನ್ನು ಮುಂದೆ ಬರುವುದು ಕನಸಾಗಬಹುದು.
ನಾಡು, ನುಡಿ, ಮಾನವೀಯತೆ, ಮನುಷ್ಯ ಸಂಬಂಧಗಳು, ನಗರೀಕರಣ, ಭ್ರಷ್ಟಾಚಾರ, ಹೆಣ್ಣುಮಕ್ಕಳ ಸಮಸ್ಯೆಗಳು, ದುಷ್ಟರ ದಮನಗಳನ್ನು ಕೇಂದ್ರವಾಗಿಟ್ಟುಕೊಂಡು ಅವರ ಚಿತ್ರಗಳ ಕತೆಗಳನ್ನು ಹೆಣೆಯಲಾಗಿತ್ತು. ಅವರ ಪೌರಾಣಿಕ, ಜನಪದ, ಐತಿಹಾಸಿಕ ಚಿತ್ರಗಳಂತೂ ಮತ್ತಾರೂ ಅವರು ನಿರ್ವಹಿಸಿದ ಪಾತ್ರಗಳನ್ನು ಅವರಷ್ಟೇ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯವಿಲ್ಲವೆಂಬಷ್ಟರ ಮಟ್ಟಿಗೆ ಪರಿಪೂರ್ಣವಾಗಿವೆ. ಜೊತೆಗೆ ಅವರ ಕಂಠ ಮಾಧುರ್ಯವನ್ನು ಕನ್ನಡಿಗರು ಮರೆಯಲು ಸಾಧ್ಯವೆ ಇಲ್ಲ. ಭಕ್ತಿ, ಭಾವಗೀತೆ, ಚಿತ್ರಗೀತೆಗಳಲ್ಲಿ ಹರಿದ ಅವರ ಗಾನಸುಧೆ ಕನ್ನಡಿಗರ ಮನದಲ್ಲಿ ನೆಲೆ ನಿಂತಿದೆ. ಅವರ ಬಾಯಿಯಲ್ಲಿ ಕನ್ನಡ ಹಾಲು, ಜೇನಿನಂತೆ ಮಧುರವಾಗಬಲ್ಲದು. ಕನ್ನಡವನ್ನು ಅವರು ಬಳಸಿದಷ್ಟು ಸರಳವಾಗಿ, ಅರ್ಥಪೂರ್ಣವಾಗಿ ಬಳಸಲು ಸಾಧ್ಯವೇ ಇಲ್ಲವೆನ್ನುವಂತೆ ಅವರ ಕನ್ನಡವಿದೆ.
ಕರ್ನಾಟಕದ ತಳಸಮುದಾಯಗಳಲ್ಲೊಂದಾದ ಈಡಿಗ ಜನಾಂಗದಲ್ಲಿ ಹುಟ್ಟಿದ ರಾಜ್ ತಮ್ಮ ಜಾತಿಯನ್ನು ಮೀರಿ ನಾಡಿನ ಎಲ್ಲ ಸಮುದಾಯಗಳ ಮನಸ್ಸನ್ನು ಸೂರೆಗೊಂಡರು. ಕನ್ನಡ ಚಳುವಳಿಯಲ್ಲಿ ಎಲ್ಲರೂ ಪ್ರಮುಖವಾಗಿ ಚರ್ಚಿಸುವ ಗೋಕಾಕ್ ಚಳುವಳಿ ತೀವ್ರ ಸ್ವರೂಪ ಪಡೆದುಕೊಳ್ಳಲು ರಾಜ್ ಅವರ ಕೊಡುಗೆ ಅಪಾರವಾದುದು. ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ವಿಪ್ಲವವೊಂದಕ್ಕೆ ತಾವು ಕಾರಣರಾಗುತ್ತಿದ್ದೇನೆಂಬ ತಿಳುವಳಿಕೆ ಪ್ರಾಯಶಃ ರಾಜ್‌ಕುಮಾರ್ ಅವರಿಗೂ ಇದ್ದಿರಲಾರದು. ಅವರ ಪ್ರವೇಶವಾಗುತ್ತಿದ್ದಂತೆ ಈ ಹೋರಾಟದಲ್ಲಿ ಜನರ ಪಾಲ್ಗೊಳ್ಳುವಿಕೆ ವ್ಯಾಪಕವಾಯಿತು. ದಿನದಿಂದ ದಿನಕ್ಕೆ ವಿಶಾಲವಾದ ಪ್ರತಿಭಟನೆಯ ಸ್ವರೂಪದಿಂದಾಗಿ ಕನ್ನಡಪರವಾದ ಚಳುವಳಿಗಾರರ ಬೇಡಿಕೆಯನ್ನು ಈಡೇರಿಸಲೇ ಬೇಕಾದ ಅನಿವಾರ‍್ಯತೆಯನ್ನು ಸರ್ಕಾರ ಎದುರಿಸಿತು. ಈ ಚಳುವಳಿಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು.  
ಈ ಸಂದರ್ಭದಲ್ಲಿ ಅವರ ನಿಲುವು ಸ್ಪಷ್ಟವಾಗಿತ್ತು. ಸ್ವತಃ ಪ್ರಭಾವಿ ರಾಜಕಾರಣಿಯ ಸಂಬಂಧಿಯಾಗಿದ್ದರೂ ಅವರೆಂದು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ತಾಳಲಿಲ್ಲ. ಆ ಸಮಯದ ಹೊತ್ತಿಗಾಗಲೆ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಚಿತ್ರನಟರ ರಾಜಕೀಯ ಪಯಣ ಶುರುವಾಗಿತ್ತು. ಎನ್.ಟಿ.ಆರ್. ಹಾಗೂ ಎಂ.ಜಿ.ಆರ್. ಅವರು ರಾಜಕಾರಣದಲ್ಲಿ  ಸಕ್ರಿಯರಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದರು. ಆಗಲೇ ಮನಸು ಮಾಡಿದ್ದರೆ ಪ್ರಸ್ತುತ ಕರ್ನಾಟಕದ ರಾಜಕಾರಣದ ಚಿತ್ರವೇ ಸಂಪೂರ್ಣ ಬದಲಾಗುವ ಸಾಧ್ಯತೆಗಳಿದ್ದವು. ಆದರೆ ಅವರು ತಮ್ಮ ಮೂಲ ಕ್ಷೇತ್ರವಾದ ನಟನೆ ಹಾಗು ತಮ್ಮನ್ನು ಬೆಳೆಸಿದ ಕನ್ನಡವನ್ನು ಹೊರತು ಪಡಿಸಿ ಮತ್ತೊಂದು ಕಡೆ ಚಾಂಚಲ್ಯಕ್ಕೆ ಒಳಗಾಗಲಿಲ್ಲ. ಇಂದಿಗೂ ರಾಜ್‌ಕುಮಾರ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಕಲಾನಿಷ್ಠೆ ಹಾಗೂ ಕನ್ನಡಪರ ನಿಲುವಿನಿಂದಾಗಿಯೇ ಅವರು ಕನ್ನಡಿಗರ ಪಾಲಿಗೆ ಧೃವತಾರೆಯಾಗಿದ್ದಾರೆ. ಅವರ ಪಾತ್ರಗಳ ಮೂಲಕ ಕಟ್ಟಿಕೊಟ್ಟಿರುವ ಮನೋಲೋಕ ಅದ್ಭುತವಾದುದು. ಯಾವ ನೈತಿಕತೆ ಬೋಧನೆಯ ಸೋಗಿಲ್ಲದೆ ಅವರು ಪಾತ್ರಗಳಲ್ಲಿ ಬೋಧಿಸಿರುವ ಮೌಲ್ಯಗಳು ಒಂದೆರೆಡಲ್ಲ. ಕುಡಿತ, ಧೂಮಪಾನವನ್ನು ಈಗ ಎಚ್ಚರಿಕೆಯ ಸಂದೇಶದೊಂದಿಗೆ ತೋರಿಸಬೇಕೆಂಬ ನಿಯವನ್ನು ಮಾಡಲಾಗಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿ ರಾಜ್‌ಕುಮಾರ್ ತೋರಿಸಿದ ಸಂಯಮವನ್ನು ಇಂದಿಗೂ ಯಾವ ನಟರೂ ಸಾಧಿಸಲಾಗಿಲ್ಲ.
ಇಷ್ಟೆಲ್ಲ ಚರ್ಚಿಸುವ ಅಗತ್ಯ ಉಂಟಾದದ್ದು ಪ್ರಸ್ತುತ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ರಾಜ್‌ಕುಮಾರ್ ಅವರ ಸೊಸೆ ಗೀತಾ ಶಿವರಾಜ್‌ಕುಮಾರ್ ಅವರು ಸ್ಪರ್ಧಿಯಾಗಿರುವುದು. ಈ ಹಿಂದೆ ಕರ್ನಾಟಕದಲ್ಲಿ ಪಕ್ಷಾಂತರ ಪರ್ವವನ್ನೇ ನಡೆಸಿದ, ಹೊಸಪಕ್ಷಗಳ ಹುಟ್ಟಿಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮಗಳಾದ ಗೀತಾರವರನ್ನು ಜೆ.ಡಿ.ಎಸ್. ಪಕ್ಷ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕಣಕ್ಕಿಳಿಸಿದೆ. ಇವರ ಸ್ಪರ್ಧೆಯ ಹಿಂದೆ ಅನೇಕ ಅಜೆಂಡಾಗಳಿವೆ. ಒಂದು ಬಂಗಾರಪ್ಪನವರ ಕುಟುಂಬ ರಾಜಕಾರಣ ಕಾರಣವಾಗಿದೆ. ಈ ಹಿಂದೆ ಬಂಗಾರಪ್ಪನವರ ಮಾತನ್ನು ಕೇಳದ ಕುಮಾರ್ ಬಂಗಾರಪ್ಪನವರ ವಿರುದ್ಧ ಇಡೀ ಕುಟುಂಬ ನಿಲುವು ತಳೆದಿದೆ. ಅದರ ಪರಿಣಾಮದಿಂದಾಗಿ ಕುಮಾರ್ ಬಂಗಾರಪ್ಪನವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಧು ಬಂಗಾರಪ್ಪನವರ ವಿರುದ್ಧ ಸೋಲುಂಡರು. ಬಂಗಾರಪ್ಪನವರ ನಿಧನದ ಸಂದರ್ಭದಲ್ಲೇ ಇವರ ಕುಟುಂಬದಲ್ಲಿದ್ದ ಒಡಕು ಜಗಜ್ಜಾಹೀರಾಗಿತ್ತು. ಸದ್ಯಕ್ಕೆ ಶಿವಮೊಗ್ಗದಲ್ಲಿ ಕುಮಾರ್ ಬಂಗಾರಪ್ಪನವರಿಗೆ ಲೋಕಸಭಾ ಟಿಕೆಟ್ ಕೂಡ ತಪ್ಪಿದೆ. ಈಗವರು ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ಈಗ ಈ ಒಡಕಿನ ಲಾಭ ಜೆ.ಡಿ.ಎಸ್. ಪಾಲಾಗಲಿದೆಯೇ? ಅಥವಾ ಪಾಲು ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆಯೇ? ಎಂಬ ಅನುಮಾನ ಮೂಡುತ್ತಿದೆ. ರಾಜ್‌ಕುಮಾರ್ ಅವರ ಕುಟುಂಬವನ್ನು ರಾಜಕಾರಣಕ್ಕೆ ಕರೆತರುವ ಮೂಲಕ ಶಿವಮೊಗ್ಗದ ಸುತ್ತಮುತ್ತ ಜೆ.ಡಿ.ಎಸ್.ಅನ್ನು ಬಲಪಡಿಸುವ ಉದ್ದೇಶದ ಸಾಫಲ್ಯತೆಗೆ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಮತದಾರರು ಉತ್ತರ ನೀಡಬೇಕಿದೆ. ಇನ್ನು ನಾಲ್ಕು ದಶಕಗಳ ಹೋರಾಟ, ರಾಜಕೀಯ ಅನುಭವವಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಗೀತಾ ಶಿವರಾಜ್‌ಕುಮಾರ್ ಅವರನ್ನು ಸ್ಪರ್ಧೆಗಿಳಿಸಿರುವುದರ ಹಿಂದೆ ಯಾವ ಚಾಣಾಕ್ಷ ಯೋಜನೆಗಳಿವೆ ಎಂಬುದು ಇನ್ನೂ ನಿಗೂಢವಾಗಿದೆ.

ಪಶ್ಚಿಮ ಘಟ್ಟ ಉಳಿಯಬೇಕು                                                                                                                                                                                                                                                                   - ಪ್ರದೀಪ್ ಮಾಲ್ಗುಡಿ
ಕರ್ನಾಟಕವನ್ನೂ ಒಳಗೊಂಡ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ವಿಶಾಲವಾಗಿ ಹಬ್ಬಿರುವ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಅಪಾರ ಪ್ರಮಾಣದ ಸಸ್ಯ ಹಾಗೂ ಜೀವವೈವಿಧ್ಯವಿದೆ. ಪರಿಸರ ಸಚಿವಾಲಯದ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಈ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕೆಗಳು, ಅದಿರು ಹಾಗೂ ಕಲ್ಲು ಗಣಿಗಾರಿಕೆ, ಶಾಖೋತ್ಪನ್ನ ಅಣುವಿದ್ಯುತ್ ಸ್ಥಾವರ ಮೊದಲಾದ ಬೃಹತ್ ಕೈಗಾರಿಕಾ ಯೋಜನೆಗಳಿಗೆ ಕಡ್ಡಾಯ ನಿಷೇಧ ಜಾರಿಗೆ ಬರಲಿದೆ.
ವೈಜ್ಞಾನಿಕವಾಗಿ ಶೇ ೩೩ರಷ್ಟು ಕಾಡು ಇದ್ದರೆ ಮಾತ್ರ ಪರಿಸರ ಸಮತೋಲನದಿಂದ ಕೂಡಿರುತ್ತದೆ. ಆದರೆ ಸರ್ಕಾರಿ ವರದಿಗಳ ಪ್ರಕಾರವೇ ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಡಿನ ಪ್ರಮಾಣ ಶೇ ೨೨ರಷ್ಟು ಮಾತ್ರ. ಇದರ ಪ್ರಮಾಣ ಘೋಷಣೆಯಾಗಿರುವುದಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಈಗಾಗಲೇ ಸಾಕಷ್ಟು ಸಸ್ಯ ಹಾಗೂ ಜೀವವೈವಿಧ್ಯಗಳು ವಿನಾಶದ ಅಂಚನ್ನು ದಾಟಿಬಿಟ್ಟಿವೆ. ಉದಾಹರಣೆಗೆ ಜಗತ್ತಿನ ಅತಿ ದೊಡ್ಡ ಸಸ್ತನಿಯಾಗಿದ್ದ ಡೈನೋಸಾರ್‌ಗಳೇ ಇಂದು ತಮ್ಮ ಅಸ್ತಿತ್ವನ್ನು ಕಳೆದುಕೊಂಡಿವೆ. ಇನ್ನು ಕೆಲವು ವಿನಾಶದ ಗಡಿಯನ್ನು ತಲುಪಿವೆ. ಔಷಧೀಯ ಗಿಡಮೂಲಿಕೆಗಳು ಹಾಗೂ ಬೆಲೆಬಾಳುವ  ಮರಗಳು ಇಲ್ಲವಾಗುತ್ತಿವೆ. ಆದ್ದರಿಂದ ಇವುಗಳನ್ನು ಉಳಿಸಬೇಕೆಂದರೆ ಪರಿಸರ ಸಚಿವಾಲಯ ಘೋಷಿಸಿರುವ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಬೃಹತ್ ಕೈಗಾರಿಕೆಗಳಿಗೆ ನಿಷೇಧ ಜಾರಿಗೆ ಬರಬೇಕಾಗಿದೆ.
ಇಲ್ಲಿ ಮಾನವ ಗಮನಿಸಬೇಕಾದ ಒಂದು ಸಂಗತಿಯಿದೆ. ಸ್ವಾರ್ಥಕ್ಕಾಗಿ ನಾವು ಕಾಡನ್ನು ಕಡಿಯುತ್ತ ಜೀವವೈವಿಧ್ಯವನ್ನು ನಾಶ ಮಾಡುತ್ತ ಹೋದಂತೆ, ಒಂದೊಂದಾಗಿ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಅಳಿಯುತ್ತಿವೆ. ಆದರೆ ಆ ಅಳಿಯುತ್ತಿರುವ ಪಟ್ಟಿಯಲ್ಲಿ ಮಾನವ ಸ್ವತಃ ಕೊನೆಯ ಪಟ್ಟಿಯಲ್ಲಿದ್ದಾನೆ. ಈ ಅಂಶಗಳನ್ನು ವಿವೇಚಿಸಿ ಯಾವುದೇ ಅಂತರರಾಷ್ಟ್ರೀಯ, ರಾಷ್ಟ್ರೀಯ, ಸ್ಥಳೀಯ ರಾಜಕೀಯ ಹಾಗೂ ಉದ್ಯಮ, ಲಂಚದ ಆಮಿಶ, ಲಾಭಿ, ಒತ್ತಡಗಳಿಗೂ ಮಣಿಯದೆ ಇಲ್ಲಿನ ನಿಷೇಧ ಜಾರಿಗೆ ಬರಬೇಕಾಗಿದೆ. ಹಾಗಾದಲ್ಲಿ ಪಶ್ಚಿಮ ಘಟ್ಟಗಳ ಉಳಿವಿನ ಮೂಲಕ ಜೀವವೈವಿಧ್ಯವೂ ಆ ಮೂಲಕ ಮಾನವ ಸಂತತಿಯೂ ಉಳಿಯಲಿದೆ.

ಚುನಾವಣಾ ವೆಚ್ಚ ಮಿತಿ ಮೀರದಿರಲಿ                                
                                                                                                                                    - ಪ್ರದೀಪ್ ಮಾಲ್ಗುಡಿ
ಕರ್ನಾಟಕದಲ್ಲಿ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ನಡೆಸಿದ ಪ್ರಾಮಾಣಿಕ ಚುನಾವಣಾ ಪ್ರಚಾರಗಳು ಇಂದು ಸಾಧ್ಯವೇ ಇಲ್ಲವಾಗಿರುವುದು ದುರಂತವಾಗಿದೆ. ಶಾಂತವೇರಿ ಗೋಪಾಲಗೌಡರು ಚುನಾವಣೆಗೆ ನಿಂತಾಗ ಜನರೇ ಅವರಿಗೆ ಹಣ ನೀಡಿ ಮತ ಹಾಕಿದ ಉದಾಹರಣೆ ಕರ್ನಾಟಕದಲ್ಲಿದೆ. ಅದರ ಜೊತೆಗೆ ಜಾತಿ, ಅಧಿಕಾರ, ಹಣ, ತೋಳ್ಬಲಗಳು ಮೆರೆದ ಅನೇಕ ಚುನಾವಣೆಗಳಿಗೂ ಕರ್ನಾಟಕ ಸಾಕ್ಷಿಯಾಗಿದೆ.
ಲೋಕಸಭಾ ಚುನಾವಣಾ ವೆಚ್ಚದ ಮೇಲೆ ಕೇಂದ್ರ ಚುನಾವಣಾ ಆಯೋಗ ತೀವ್ರ ನಿಗಾ ವಹಿಸುವುದಾಗಿ ಈಗಾಗಲೇ ಪ್ರಕಟಿಸಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳದೆ ಈ ಕ್ರಮ ಜಾರಿಗೆ ಬರುವುದು ಅನುಮಾನಾಸ್ಪದವಾಗಿದೆ. ಈಗಿನ ನಿಯಮದ ಪ್ರಕಾರ ಎಪ್ಪತ್ತು ಲಕ್ಷ ರೂ.ಗಳ ಮಿತಿ ಇದೆ. ಆದರೆ ಇಷ್ಟರಲ್ಲಿ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಯಾವ ರಾಜಕಾರಣಿಯೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನಿಸುತ್ತದೆ. ಉದಾಹರಣೆಗೆ ಅಧಿಸೂಚನೆ ಹೊರಟ ದಿನದಿಂದ ದಿನಕ್ಕೆ ಕಡಿಮೆಯೆಂದರು ಹತ್ತು ಲಕ್ಷ ರೂಪಾಯಿಗಳ ಖರ್ಚನ್ನು ಮಾಡಿದರು ಒಂದು ವಾರಕ್ಕೆ ಈಗಿನ ಮೊತ್ತ ಏನಕ್ಕೂ ಸಾಲದು. ಆದರೆ ಇಷ್ಟೇ ವೆಚ್ಚ ಮಾಡಬೇಕೆಂಬ ನಿಯಮದ ಜೊತೆಗೆ ಚುನಾವಣಾ ಆಯೋಗ ಇನ್ನೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದೆಂದರೆ, ಅಧಿಸೂಚನೆ ಹೊರಡುವ ದಿನಕ್ಕೂ ಚುನಾವಣೆ ನಡೆಯುವ ದಿನಕ್ಕು ತುಂಬಾ ಅಂತರ ಇರಬಾರದು. ಹಾಗೆ ಯೋಜಿಸಿದಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ತಂತಾನೆ ನಿಯಂತ್ರಣ ಬೀಳಬಹುದು. ಇಂತಹ ನಿರ್ಣಯಗಳನ್ನು ಇನ್ನು ಮುಂದಾದರೂ ಆಯೋಗ ವಿವೇಚಿಸಿ ಕೈಗೊಳ್ಳಬೇಕಾಗಿದೆ.


ವಿಷಯಾಧಾರಿತವಾಗಿರಲಿ                     - ಪ್ರದೀಪ್ ಮಾಲ್ಗುಡಿ
ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿತರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ಅಭ್ಯರ್ಥಿಗಳು ಸಂಯಮದಿಂದ ವರ್ತಿಸಬೇಕಾಗಿದೆ. ವಿಷಯಾಧಾರಿತವಾಗಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸುವ ಹೊಣೆ ಈ ಜನಪ್ರತಿನಿಧಿಗಳ ಮೇಲಿದೆ. ಆದ್ದರಿಂದ ಏನಕೇನಪ್ರಕಾರೇಣ ಗೆಲ್ಲುವ ಪ್ರಯತ್ನದಲ್ಲಿ ಎದುರಾಳಿಗಳ ವೈಯಕ್ತಿಕ ಬದುಕನ್ನು ಬೀದಿಗೆ ತರಬಾರದು. ಅತ್ಯಂತ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಎಂದು ಕೇವಲ ಹೇಳಿಕೊಳ್ಳುವಷ್ಟಕ್ಕೆ ಸೀಮಿತವಾಗುವ ಬದಲು, ಜಗತ್ತಿಗೆ ಮಾದರಿ ಜನತಂತ್ರವೆಂದು ನಮ್ಮ ಪ್ರತಿನಿಧಿಗಳು ಸಾಬೀತು ಪಡಿಸಬೇಕಾಗಿದೆ.
ಕಳೆದ ಲೋಕಸಭಾ ಅವಧಿಯಲ್ಲಿ ನಡೆದಿರುವ ಅಸಂಸದೀಯ ಘಟನಾವಳಿಗಳು ಭಾರತದ ಸಂಸತ್‌ನ ದುರವಸ್ಥೆಯನ್ನು ಎತ್ತಿತೋರಿಸಿದೆ. ಈಗಲೆ ಅಭ್ಯರ್ಥಿಗಳು ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಹಾಕಿಕೊಂಡು ಸಫಲರಾದಲ್ಲಿ ಇಂತಹ ಘಟನೆಗಳು ಮತ್ತೆ ಲೋಕಸಭೆಯಲ್ಲಿ ಮರುಕಳಿಸಲಾರವು. ಈಗ ದಿನದ ಇಪ್ಪತ್ನಾಲ್ಕು ಗಂಟೆಯೂ ಮಾಧ್ಯಮಗಳ ಹಾಗೂ ಚುನಾವಣಾ ಆಯೋಗದ ಕಣ್ಣು ತೆರೆದಿರುವುದನ್ನು ಗಮನದಲ್ಲಿಟ್ಟುಕೊಂಡಾದರೂ ಈ ಚುನಾವಣೆ ವಿಷಯಾಧಾರಿತವಾಗಿ ನಡೆಯಬೇಕಾಗಿದೆ.

 ದಶಮುಖನಿಲ್ಲದ ದಶಕದ ಆಚೀಚೆ
- ಪ್ರದೀಪ್ ಮಾಲ್ಗುಡಿ
ಲಂಕೇಶರಂತೆ ನೇರ, ದಿಟ್ಟ, ಪ್ರಾಮಾಣಿಕ ನಡೆನುಡಿಯನ್ನು ರೂಢಿಸಿಕೊಂಡಿರುವ ಯುವ ಸಮುದಾಯವನ್ನು ಒಂದುಗೂಡಿಸುವ ಕೆಲಸ ಇಂದು ತುರ್ತಾಗಿ ನಡೆಯಬೇಕಾಗಿದೆ. ಏಕೆಂದರೆ: ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಪಲ್ಲಟಗಳಾಗಿವೆ. ಆದರೆ ಆ ಪಲ್ಲಟಗಳು ನಕಾರಾತ್ಮಕ ದಾರಿಯಲ್ಲಿ ಸಾಗುತ್ತಿವೆ. ಕಾಂಗ್ರೆಸ್ ಮತ್ತು ಜನತಾದಳ, ಬಿ.ಜೆ.ಪಿ. ಮತ್ತು ಜನತಾದಳ ಸಮ್ಮಿಶ್ರ ಸರ್ಕಾರಗಳು ಹಾಗೂ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದು ಹೋಗಿವೆ. ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳ ಹಾಗೂ ಕೆ.ಪಿ.ಎಸ್.ಸಿ. ನೇಮಕಾತಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳು ನಡೆದಿವೆ. ಈ ಕ್ಷೇತ್ರಗಳಲ್ಲಿ ನೇಮಕಾತಿ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಸ್ವಜನ ಪಕ್ಷಪಾತ, ಹಣ, ಜಾತಿ, ಸಿದ್ಧಾಂತ, ಅಧಿಕಾರಗಳ ಪ್ರಭಾವ ನಡೆದಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದಮೇಲೆ ಪಠ್ಯ ಪುಸ್ತಕಗಳ ಕೇಸರೀಕರಣವಷ್ಟೇ ಅಲ್ಲದೇ ಸರ್ಕಾರಿ ನೇಮಕಾತಿಗಳಲ್ಲಿ ಕೂಡ ಆರ್.ಎಸ್.ಎಸ್. ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮಣೆ ಹಾಕಲಾಗಿದೆ. ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ. ಬಸ್ ಹಾಗೂ ಬಸ್ ನಿಲ್ದಾಣಗಳಿಗೂ ಕೇಸರಿ ಬಣ್ಣ ಬಳಿಯಲಾಯ್ತು. ಇಷ್ಟಾದರೂ ಅದನ್ನು  ಪ್ರತಿಭಟಿಸುವ ಕೆಲಸಗಳು ನಡೆಯಲಿಲ್ಲ. ಅದರ ಜೊತೆಗೆ ಭೂಗಳ್ಳತನ ಹಾಗೂ ಗಣಿ ಲೂಟಿ ಅವ್ಯಾಹತವಾಗಿ ನಡೆದು ಹೋಯಿತು. ಸಾಮಾಜಿಕವಾಗಿ ಗಣ್ಯ ಸ್ಥಾನವನ್ನು ಅಲಂಕರಿಸಿದವರು ಈ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ರೂಪಿಸುವ ಕೆಲಸಗಳನ್ನು ಮರೆತು ತೂಕಡಿಸಿದರು.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಲುವಾಗಿ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಈ ನಡೆಯನ್ನೇನು ನಾವು ವಿರೋಧಿಸಬೇಕಾಗಿಲ್ಲ. ಆದರೆ ಅಹಿಂದ ಸಂಘಟನೆ, ಹೋರಾಟ, ವೈಚಾರಿಕತೆಗಳನ್ನು ಮೈಗೂಡಿಸಿಕೊಂಡಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಈ ಹಿಂದಿನ ಯಾವ ಸರ್ಕಾರಗಳೂ ಮಾಡದಂತಹ ಅನೇಕ ಅನಾಹುತಗಳನ್ನು ಮಾಡುತ್ತಿದೆ. ಉದಾಹರಣೆಗೆ, ಸರ್ಕಾರಿ ನೌಕರರಿಗೆ ಸಮವಸ್ತ್ರ ಸಂಹಿತೆಯ ಗುಮ್ಮವನ್ನು ಬಿಟ್ಟದ್ದು, ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದರ ನೇಮಕ, ಢುಂಢಿ ಕಾದಂಬರಿಯ ಲೇಖಕರಾದ ಯೋಗೀಶ್ ಮಾಸ್ತರ್‌ರವರ ಬಂಧನ, ಕೃತಿಯ ಮುಟ್ಟುಗೋಲು, ಅಕಾಡೆಮಿ, ಪ್ರಾಧಿಕಾರಗಳ ನೇಮಕಾತಿಗೆ ಗ್ರಹಣ ಹಿಡಿಸಿದ್ದು, ಅಹಿಂದ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸ ಭಾಗ್ಯ, ಅಲ್ಪಸಂಖ್ಯಾತರಿಗೆ ಮಾತ್ರ ಶಾದಿ ಭಾಗ್ಯ, ಕವಿಯೊಬ್ಬರನ್ನು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ಸಂಸ್ಕಾರ ಮಾಡಿದ್ದು, ಎಫ್.ಡಿ.ಐ.ಗೆ ಸ್ವಾಗತ... ಹೀಗೆ ಈ ಸರ್ಕಾರವು ಕೈಗೊಂಡ ಜನವಿರೋಧೀ ನಿಲುವುಗಳನ್ನು ಖಂಡಿಸುವ ಕೆಲಸವನ್ನು ಈ ಸರ್ಕಾರವನ್ನು ಬೆಂಬಲಿಸಿದ ಸಾಹಿತಿಗಳು ಹಾಗೂ ಬುದ್ಧಿಜೀವಿಗಳ್ಯಾರು ಮಾಡಲಿಲ್ಲ.
ದುರಂತವೆಂದರೆ ಅವಕಾಶ ಸಿಕ್ಕಾಗಲೆಲ್ಲ ಇವರಲ್ಲಿ ಬಹುತೇಕರು ತಾವು ಲಂಕೇಶ್ ಅವರ ಒಡನಾಡಿಗಳೆಂದು ಹೇಳಿಕೊಳ್ಳುವವರು. ಈ ಬಗೆಯ ಪ್ರಜಾಪ್ರಭುತ್ವ ವಿರೋಧೀ ನಿಲುವುಗಳನ್ನು ಎಂದಾದರೂ ಲಂಕೇಶ್ ಅವರು ಮೌನವಾಗಿ  ಸಹಿಸುತ್ತಿದ್ದರೆ? ಎಂಬ ಪ್ರಶ್ನೆಯನ್ನು ಈ ಬುದ್ಧಿಜೀವಿಗಳು ಎಂದೂ ಕೇಳಿಕೊಂಡಿಲ್ಲ. ಅವರ ಒಡನಾಡಿಗಳನೇಕರು ಇಂದು ಲಂಕೇಶ್ ಅವರ ವಿಚಾರಧಾರೆಗಳನ್ನು ಸಂಪೂರ್ಣವಾಗಿ ಮರೆತು, ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಅವರ ಪ್ರಭುತ್ವದ ಜೊತೆಗಿನ ಅನವಶ್ಯಕ ಸಖ್ಯ ಹಾಗೂ ರಾಜಿಗಳಿಗೆ ಅನೇಕ ಉದಾಹರಣೆಗಳಿವೆ. ಸಾಂಸ್ಕೃತಿಕ ವಲಯವಂತೂ ಅತ್ಯಂತ ಹೆಚ್ಚಿನ ರಾಜಿಗೆ ಒಳಗಾಗಿದೆ. ನಿರಂತರವಾದ ಅಧಿಕಾರ ಲಾಲಸೆ ಈ ಕ್ಷೇತ್ರದವರ ಬಾಯಿ ಮುಚ್ಚಿಸಿದೆ. ಈಗಾಗಲೆ ಒಂದು ಬಾರಿ ಅಕಾಡೆಮಿ, ಪ್ರಾಧಿಕಾರಗಳ ಉನ್ನತ ಹುದ್ದೆಯನ್ನು ಅನುಭವಿಸಿರುವ ಸಾಂಸ್ಕೃತಿಕ ವಕ್ತಾರರು ಮತ್ತೆ ಮತ್ತೆ ಅಂತಹ ಹುದ್ದೆಗಳ ಮೇಲೆ ಕಣ್ಣಿಟ್ಟುಕೊಂಡು, ಅತ್ತ ಸರ್ಕಾರವನ್ನು ಇತ್ತ ಸಿದ್ಧಾಂತ, ಮೌಲ್ಯಗಳನ್ನು ಹಾಗೂ ಜನರನ್ನು ಬ್ಯಾಲೆನ್ಸ್ ಮಾಡಲಾಗದೆ ಪ್ರಜ್ಞಾವಂತರ ಕಣ್ಣಿಗೆ ಕ್ರಿಮಿಗಳಾಗಿ ಕಾಣುತ್ತಿದ್ದಾರೆ. ಇಷ್ಟಾದರೂ ಆತ್ಮವಿಮರ್ಶೆಯ ಲವಲೇಶವೂ ಅವರ ಮಾತು, ವರ್ತನೆ, ನಡೆಯಲ್ಲಿ ಕಾಣುತ್ತಿಲ್ಲ. ಸಾಲದ್ದಕ್ಕೆ ಭಟ್ಟಂಗಿಗಳ ಗುಂಪುಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಸಹಿಸಿಕೊಳ್ಳುತ್ತಾ ಇನ್ನೂ ಎಷ್ಟು ದಿನ ಯುವಜನಾಂಗವು ಸುಮ್ಮನಿರಬೇಕು? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.
ಈ ಕಾಲಘಟ್ಟದಲ್ಲಿ ಎಲ್ಲರ ಬದುಕು ಸ್ಥಿತ್ಯಂತರಗೊಳ್ಳುತ್ತಿದೆ. ವೈಜ್ಞಾನಿಕ ಸಂಶೋಧನೆಯ ಕಾರಣಗಳಿಂದಾಗಿ ತುದಿಬೆರಳಲ್ಲಿ ಜಗತ್ತು ಲಭಿಸುತ್ತಿದೆ. ಅಂತರ್ಜಾಲವೂ ಸೇರಿದಂತೆ ಮೊಬೈಲ್ ಸೇವೆಯು ಸಾರ್ವರ್ತ್ರಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟಕುತ್ತಿದೆ. ಇದೇ ಸಂದರ್ಭದಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಲೇ ಇವೆ. ನೈತಿಕ ಮೌಲ್ಯಗಳು ಪಾತಾಳ ಸೇರಿವೆ. ಅರ್ಹತೆಯುಳ್ಳವರಿಗೂ ಉದ್ಯೋಗ ಸಿಗುತ್ತಿಲ್ಲ. ಎಲ್ಲೆಡೆ ವಶೀಲಿಬಾಜಿ, ತನ್ನ ಜಾತಿ, ಮತ, ಸಿದ್ಧಾಂತಗಳಿಗನುಗುಣವಾದ ವ್ಯಕ್ತಿಗಳನ್ನೆ ಆರಿಸಿಕೊಳ್ಳಲಾಗುತ್ತಿದೆ. ಯಾವುದೇ ಮಾನದಂಡಗಳೂ ಯಾವುದೇ ಹುದ್ದೆಗೆ ಅರ್ಹತೆಯಾಗುಳಿದಿಲ್ಲ.
ಯಾವುದೇ ನೌಕರಿ ಗಿಟ್ಟಿಸುವುದಕ್ಕೂ ಯುವಜನತೆ ಜಾತಿ, ಹಣ, ಅಧಿಕಾರ, ಪ್ರಭಾವಗಳ ಬೆನ್ನು ಬೀಳಬೇಕಾದ ದುಸ್ಥಿತಿ ಎದುರಾಗುತ್ತಿದೆ. ಅದೇ ಕಾಲಕ್ಕೆ ಏನಕೇನಪ್ರಕಾರೇಣ ಉದ್ಯೋಗ ಹಿಡಿಯಬೇಕಾದ ಅನಿವಾರ‍್ಯ ಪರಿಸ್ಥಿತಿಯಲ್ಲಿ ಯುವಜನಾಂಗವಿದೆ. ಹೀಗೆ ಉದ್ಯೋಗ ಹಿಡಿಯುವಲ್ಲಿ ವಿಫಲವಾದವರನ್ನು ಬದುಕುವುದಕ್ಕೆ ಅರ್ಹರಲ್ಲವೆಂಬಂತೆ ಕಾಣಲಾಗುತ್ತಿದೆ. ಯುವಜನಾಂಗವು ರಾಜಕಾರಣ, ಅಧಿಕಾರ ಸ್ಥಾನಗಳಿಂದ ದೂರ ಉಳಿದಿದೆ.
ಕನ್ನಡ, ಕನ್ನಡಿಗ ಮತ್ತು ಲಂಕೇಶ್
ಕವಿತೆ, ಕತೆ, ನಾಟಕ, ಕಾದಂಬರಿ, ಅನುವಾದ, ಅಂಕಣ ಬರಹ, ವಿಮರ್ಶೆ, ಸಿನಿಮಾ, ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಲಂಕೇಶರ ಕೃತಿಗಳು ಕನ್ನಡದ್ದೇ ಆದ ಸಂವೇದನೆಯ ಭಾಗವಾಗಿವೆ. ಜಾತ್ಯತೀತತೆ, ನಿಷ್ಠುರತೆ, ಪ್ರಭುತ್ವದೊಡನೆ ಅವರ ಕಾಯ್ದುಕೊಂಡ ಅಂತರ, ಪ್ರಭುತ್ವಗಳ ಹುನ್ನಾರಗಳನ್ನು ಸದಾ ಬಯಲು ಮಾಡುವಾಗ ತೋರುತ್ತಿದ್ದ ಧೈರ್ಯ ಅವರಿಗೇ ವಿಶಿಷ್ಟವಾದುದು. ನೀಚನನ್ನು ನೀಚನೆಂದೇ ಕರೆಯಬೇಕು, ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ ಎಂಬಿವೆ ಕೆಲವು ಮಾತುಗಳಿಂದಲೆ ಅವರ ಚಿಂತನೆಯ ಆಳ, ಅಗಲಗಳನ್ನು ಕಾಣಬಹುದು. ಸಂಕ್ರಾಂತಿಯಂತಹ ನಾಟಕವೊಂದು ಬರದಿದ್ದರೆ ವಚನ ಚಳುವಳಿಯ ನಿಷ್ಠುರ ವಿಮರ್ಶೆಯ ಸಾಧ್ಯತೆಗಳೇ ತೆರೆದುಕೊಳ್ಳುತ್ತಿರಲಿಲ್ಲ. ಗುಣಮುಖ ನಾಟಕವು ಪ್ರಭುತ್ವದ ರೋಗಗ್ರಸ್ಥತೆಯನ್ನು ಅನಾವರಣ ಮಾಡುತ್ತದೆ. ದೊರೆ ಈಡಿಪಸ್ ಹಾಗೂ ಪಾಪದ ಹೂಗಳುವಿನಂತಹ ಅನುವಾದಗಳು ಕನ್ನಡ ಸಂದರ್ಭಧಲ್ಲಿ ವಿರಳಾತಿವರಳ. ಮುಟ್ಟಿಸಿಕೊಂಡವನು, ನಿವೃತ್ತರು, ತೋಟದವನು, ಸ್ಟೆಲ್ಲಾ ಎಂಬ ಹುಡುಗಿಯಂತಹ ಪಾತ್ರಗಳು ಕನ್ನಡ ಕಥನಕ್ಕೆ ಹೊಸವಾಗಿವೆ. ಇನ್ನು ಟೀಕೆ-ಟಿಪ್ಪಣಿಯದ್ದು ಮತ್ತೊಂದು ಬಯಲಿನ ವಿಸ್ತಾರ.  
  ಅವರ ಬರಹಗಳಲ್ಲಿ ಕನ್ನಡದ ವಿಶಿಷ್ಟ ಬಳಕೆಯ ಸಾಧ್ಯತೆಗಳನ್ನು ಕಾಣಬಹುದು. ಅನವಶ್ಯಕವಾದ ಪದಗಳಾಗಲಿ, ಸಂಸ್ಕೃತ ಭಾಷಾ  ಪ್ರೌಢಿಮೆಯ ಪ್ರದರ್ಶನಗಳು ಅವರ ಬರಹಗಳಲ್ಲಿ ಕಡಿಮೆ. ಕನ್ನಡವನ್ನು ಕನ್ನಡದ ಮೂಲಕವೇ ಉನ್ನತ ಹಂತಕ್ಕೇರಿಸುವ ಪ್ರಯತ್ನದ ಭಾಗವಾಗಿಯೇ ಅವರ ಬರಹಗಳನ್ನು ನಾವಿಂದು ಅರ್ಥೈಸಿಕೊಳ್ಳಬೇಕಾಗಿದೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕವಾಗಿ ಹಂಚಿಹೋಗಿರುವ ಅವರ ಚಿಂತನೆಗಳ ಆಳದಲ್ಲಿ ಮತ್ತೆ ಮತ್ತೆ ಕನ್ನಡ ನಾಡು, ನುಡಿ ಹಾಗೂ ಕನ್ನಡಿಗರ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಅವರ ಗಮನವಿರುವುದನ್ನು ನಾವು ಕಾಣಬಹುದು. ಆದರೆ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ, ಅನುವಾದ ಅಕಾಡೆಮಿ ಇತ್ಯಾದಿಗಳನ್ನು ಸ್ಥಾಪಿಸಿ, ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಗಳ ಏಳ್ಗೆಗಾಗಿ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ. ಅನುದಾನವನ್ನು ಬಳಸುತ್ತಿರುವ ಈ ಎಲ್ಲ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪಸರಿಸುತ್ತಿವೆ? ಅಥವಾ ಕರ್ನಾಟಕದಲ್ಲಿ ಕನ್ನಡವನ್ನು ಸದೃಢಗೊಳಿಸಲು ಕಾರ್ಯೋನ್ಮುಖವಾಗಿವೆ? ಎಂಬ ಪ್ರಶ್ನೆ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ. ಏಕೆಂದರೆ, ಕನಾಟಕದ ನಾಡು, ನುಡಿ, ಗಡಿ ಹಾಗೂ ಜಲದ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ. ಏಕೀಕರಣಕ್ಕಾಗಿ ಹೋರಾಡಿದ ನಾಡಿನಲ್ಲಿ ಈಗ ಕೆಲವು ರಾಜಕಾರಣಿಗಳು ಪ್ರತ್ಯೇಕ ರಾಜ್ಯದ ಕೂಗನ್ನು ಪದೇಪದೇ ಎತ್ತುತ್ತಿದ್ದಾರೆ. ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿಕಾರಿಗಳು, ರಾಜಕಾರಣಿಗಳು, ಸಾಹಿತಿ ಕಲಾವಿದರು, ಚಿಂತಕರು ಕ್ರಿಯಾಶೀಲವಾಗಿದ್ದಿದ್ದರೆ ಇಂತಹ ಕೂಗುಗಳಿಗೆ ಸ್ಥಳವಿರುತ್ತಿರಲಿಲ್ಲ.
ಈ ಸಂಸ್ಥೆಗಳು ಮಾಡುತ್ತಿರುವ ಕೆಲಸಗಳೆಂದರೆ ಪ್ರಶಸ್ತಿಗಳನ್ನು ಹಂಚುವುದು, ಅನುದಾನವನ್ನು ಕೊಡುವುದು, ಸಲ್ಲದ ಸಾಂಸ್ಕೃತಿಕ (ಜಾತಿ) ರಾಜಕಾರಣ ಮತ್ತು ವಿವಾದಗಳಿಗೆ ತಮ್ಮ ಗಡಿಗಳನ್ನು ಸೀಮಿತಗೊಳಿಸಿಕೊಳ್ಳುವುದು. ಇವುಗಳ ಫಲಾನುಭವಿಗಳೆಂದರೆ ಸಾಹಿತಿಗಳು, ಕಲಾವಿದರು, ಆಡಳಿತವರ್ಗದವರು. ಆದರೆ ಇವರಲ್ಲಿ ಬಹುತೇಕರು ಕನ್ನಡ ಮಾಧ್ಯಮದಲ್ಲಿ  ಹಾಗೂ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸದಿರುವಷ್ಟು ಉಗ್ರ ಕನ್ನಡಾಭಿಮಾನಿಗಳು!
ಕರ್ನಾಟಕದ ಜನರನ್ನು ಸರ್ವಧರ್ಮ ಸಹಿಷ್ಣುಗಳು, ವೀರರು, ಕಲಿಗಳು, ತ್ಯಾಗಿಗಳು, ಶರಣಾಗತ ರಕ್ಷಕರು ಇತ್ಯಾದಿಯಾಗಿ ಇಂದಿಗೂ ಇತಿಹಾಸದ ಪಾಠಗಳಲ್ಲಿ ಹೇಳಿಕೊಡಲಾಗುತ್ತಿದೆ. ಒಂದು ಕಾಲಕ್ಕೆ ಇದ್ದ ಕನ್ನಡ ನಾಡಿನ ವೈಶಾಲ್ಯತೆ ಏಕೀಕರಣದ ನಂತರ ಕುಬ್ಜಗೊಂಡಿದೆ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಕ್ಷೇತ್ರವೂ ಕುಗ್ಗಿದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಕನ್ನಡದ ಆತಂಕಗಳು ಕಡಿಮೆಯಾಗಬೇಕಿತ್ತು. ಆದರೆ ಇಂದು ಆ ಆತಂಕ ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕನ್ನಡೇತರರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚುವ, ಸ್ಥಳಾಂತರಿಸುವ, ಸಂಯೋಜಿಸುವ ಕನ್ನಡ ವಿರೋಧಿ ಕೆಲಸಗಳನ್ನು ಸರ್ಕಾರವೇ ಮುಂದೆ ನಿಂತು ಮಾಡುತ್ತಿದೆ. ಆಡಳಿತದಲ್ಲಿ ಕನ್ನಡ ಜಾರಿ ಎಂದು ಪ್ರತಿ ಸರ್ಕಾರಗಳೂ ಸುಳ್ಳು ಹೇಳುತ್ತಿವೆ. ಕೋರ್ಟ್‌ನಲ್ಲಿ ಕನ್ನಡ ವಾತಾವರಣವನ್ನು ತರಲು ಇದುವರೆಗೆ ಸಾಧ್ಯವಾಗಿಲ್ಲ. ಮಧ್ಯಮ ಹಾಗೂ ಮೇಲು ವರ್ಗದ ಕುಟುಂಬಗಳು ಕನ್ನಡ ಹಾಗೂ ಸರ್ಕಾರಿ ಶಾಲೆಗಳೆರಡರಿಂದಲೂ ದೂರವಾಗುತ್ತಿವೆ. ಇಂತಹ ಸಮಸ್ಯೆಗಳತ್ತ ಕನ್ನಡದ ಸರ್ವತೋಮುಖ ಬೆಳವಣಿಗೆಯ ಉದ್ದೇಶಗಳಿಂದ ಸ್ಥಾಪನೆಯಾಗಿರುವ ವಿವಿಧ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳು- ಸಂಘಟನೆಗಳು ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಕರ್ನಾಟಕದ ಹೊರಗಿರುವ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿನ ಸಹ, ಸಹಾಯಕ ಹಾಗೂ ಪ್ರಾಧ್ಯಾಪಕ ಹುದ್ದೆಗಳನ್ನು ಖಾಲಿ ಉಳಿಸಲಾಗಿದೆ. ರಾಜ್ಯದೊಳಗಿರುವ ಅನೇಕ ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದಕ್ಕಿಂಥ ಭಿನ್ನವಾಗಿಲ್ಲ. ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಇಂತಹ ವಿಶ್ವವಿದ್ಯಾಲಯಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡಲಾಗಿದೆ. ಆದರೆ ಈ ಅನುದಾನ ಬಳಕೆಯಾಗಿರುವುದು ಯಾವ ಉದ್ದೇಶಕ್ಕೆ ಎಂದು ಕೇಳಿದರೆ ಅದಕ್ಕೆ ಸ್ಪಷ್ಟ ಹಾಗೂ ಸಮಾಧಾನಕರ ಉತ್ತರ ಸಿಗಲಾರದು. ಅನುವಾದ ಅಕಾಡೆಮಿಯಲ್ಲಿ ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳ ಮರುಮುದ್ರಣಕ್ಕೆ ನೀಡಿದಷ್ಟು ಒತ್ತನ್ನು ಹೊಸ ಅನುವಾದಕರ ಸೃಷ್ಟಿಗೆ ನೀಡುತ್ತಿಲ್ಲ.
ಈಗಾಗಲೇ ಕನ್ನಡ ಎಂ.ಎ., ಪದವೀಧರರನ್ನು ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆರು ತಿಂಗಳಿಗೆ ಒಮ್ಮೆ ವೇತನ ಸಂದಾಯವಾಗುತ್ತಿದೆ. ಖಾಸಗಿ ಪದವಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಕನ್ನಡೇತರ ವಿಷಯ ಹಾಗೂ ಭಾಷೆಗಳಿಗಿಂಥ, ಕನ್ನಡ ಉಪನ್ಯಾಸಕರಿಗೆ ಅತ್ಯಂತ ಕಡಿಮೆ  ವೇತನವನ್ನು ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕಾಲೇಜುಗಳಲ್ಲಿ ಸು. ೨೫೦೦ ರೂಗಳಿಂದ ೮೦೦೦ ಸಾವಿರದವರೆಗೆ ಕೂಲಿಯನ್ನು ನೀಡುತ್ತಿದ್ದಾರೆ. ಅರೆಕಾಲಿಕ ಉಪನ್ಯಾಸಕರ ಗೋಳನ್ನು ಕೇಳುವವರೇ ಇಲ್ಲ.
ಬೆಂಗಳೂರಿನ ಅನೇಕ ಕಾಲೇಜುಗಳಲ್ಲಿ ಸೆಮಿಸ್ಟರ್‌ನ ತರಗತಿಗಳನ್ನು ಒಂದು ತಿಂಗಳಿಗೆ ಇಂತಿಷ್ಟು ಎಂದು ಗುತ್ತಿಗೆ ಆಧಾರದಲ್ಲಿ ನಡೆಸುವ ಕಾಲೇಜುಗಳೂ ಅಸ್ತಿತ್ವದಲ್ಲಿವೆ. ಪಿಯುಸಿ ಕಾಲೇಜುಗಳಲ್ಲಿ ನವೆಂಬರ್ - ಡಿಸೆಂಬರ್ ತಿಂಗಳೊಳಗೆ ಕನ್ನಡ ತರಗತಿಗಳನ್ನು ಮುಗಿಸಿಕೊಡಬೇಕೆಂಬ ಅಲಿಖಿತ ನಿಯಮವನ್ನು ಅನೇಕ ಕಾಲೇಜುಗಳಲ್ಲಿ ಜಾರಿಗೆ ತರಲಾಗಿದೆ. ಇದನ್ನು ಪ್ರತಿಭಟಿಸಿದರೆ, ತಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ - ಎಂದು ಈ ಅನ್ಯಾಯವನ್ನು ಯಾರೂ ಪ್ರತಿಭಟಿಸಲು ಮುಂದೆ ಬರುತ್ತಿಲ್ಲ. ಕನ್ನಡ ಭಾಷೆಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಅತ್ಯಂತ ಕೀಳಾಗಿ ಪರಿಗಣಿಸಿವೆ. ನಾಮಕಾವಸ್ಥೆಗೆ ಕನ್ನಡ ಬೋಧನೆಗೆ ಅವಕಾಶ ನೀಡಲಾಗುತ್ತಿದೆ. ಕನ್ನಡ ಎಂ.ಎ., ಪದವೀಧರರಲ್ಲಿ ಈ ಬಗೆಯ ಸಂಸ್ಥೆಗಳು ಕೀಳರಿಮೆಯನ್ನು ಹುಟ್ಟಿಸುತ್ತಿವೆ.
ಕನ್ನಡ ಮಾಧ್ಯಮ ಹಾಗೂ ಕನ್ನಡ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ ಮೊದಲಾದ ಸಮಾಜ ವಿಜ್ಞಾನ ವಿಷಯಗಳ ಅಸಂಖ್ಯಾತ ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ.
ಈ ಕುರಿತು ನಾಡಿನ ಚಿಂತಕರು, ವಿದ್ವಾಂಸರು, ವಿಶ್ವವಿದ್ಯಾಲಯಗಳ ಕುಲಪತಿಗಳು, ಪದವಿ ಹಾಗೂ ಪದವಿಪೂರ್ವ ತರಗತಿಗಳ ಅಧ್ಯಾಪಕರು, ಕನ್ನಡಪರ ಹೋರಾಟಗಾರರು, ಕನ್ನಡದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಯಾವುದೇ ರೀತಿಯಲ್ಲಿ ಕ್ರಿಯಾಶೀಲವಾಗಿಲ್ಲ. ಇನ್ನಾದರೂ ಈ ಸಮಸ್ಯೆಗಳತ್ತ ಗಮನ ಹರಿಸಿ ಆ ಮೂಲಕ ವಿದ್ಯಾವಂತರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
ಇಷ್ಟೆಲ್ಲ ಅವಘಡಗಳು ಲಂಕೇಶ್ ಅವರಿಲ್ಲದ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಇವುಗಳ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಜವಾಬ್ದಾರಿಯನ್ನು ಹೊರುವ ವ್ಯಕ್ತಿಗಳು ಹಾಗೂ ಸಂಘಟನೆಗಳ ಅವಶ್ಯಕತೆ ಇಂದು ತೀರಾ ತುರ್ತಾಗಿ ನಡೆಯಬೇಕಾಗಿದೆ.
       

ನ್ಯಾಯಬೆಲೆ ಅಂಗಡಿ ಬಂದ್ ನಿರ್ಣಯ: ಖಾಸಗಿ ಕಂಪನಿಗಳ ಲಾಭಿಯ ಅನುಮಾನ ಮೂಡಿಸುತ್ತಿದೆ
         ಪ್ರದೀಪ್ ಮಾಲ್ಗುಡಿ
ರಾಜ್ಯದಾದ್ಯಂತ ಇರುವ ಸುಮಾರು ೨೨೦೦೦ ನ್ಯಾಯಬೆಲೆ ಅಂಗಡಿಗಳಲ್ಲಿ ೨೦೦ ಕಾರ್ಡ್‌ಗಳಿಗಿಂತ ಕಡಿಮೆ ಸಂಖ್ಯೆಯನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳು ಹಾಗೂ ಸುಮಾರು ೧೫೦೦೦ ಸೀಮೆಎಣ್ಣೆ ಚಿಲ್ಲರೆ ಅಂಗಡಿಗಳಲ್ಲಿ ೫೦೦೦ ಅಂಗಡಿಗಳನ್ನು ರದ್ದುಗೊಳಿಸುವ ನಿರ್ಧಾರದ ಕುರಿತು ಆಹಾರ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಲೋಚಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯಲೋಪ
ಸರ್ಕಾರಿ ಯೋಜನೆಗಳ ಸಮರ್ಪಕವಾದ ಜಾರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಂಪೂರ್ಣ ವಿಫಲವಾಗಿವೆ. ಸರ್ಕಾರಗಳ ಯೋಜನೆಗಳಲ್ಲಿ ೧೦% ಕೂಡ ನೈಜ ಫಲಾನುಭವಿಗಳ ಕೈಸೇರುವುದಿಲ್ಲ. ದೇಶ, ರಾಜ್ಯಗಳ ರಾಜಧಾನಿಗಳಿಂದ ಹೊರಡುವ ಯೋಜನೆಗಳಿಗೆ ಅಡಿಗಡಿಗೆ ಅಡೆತಡೆಗಳು ಎದುರಾಗುತ್ತವೆ.
ದಲ್ಲಾಳಿಗಳು, ಅಧಿಕಾರಿಗಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಫಲಾನುಭವಿಗಳ ಕೈಗೆ ತಲುಪುವಷ್ಟರಲ್ಲಿ ಅಪಾರ ಪ್ರಮಾಣದ ಸಮಯ ಹಿಡಿಯುವುದಲ್ಲದೆ, ಈ ಯೋಜನೆಗಳ ೯೦%ನಷ್ಟು ಮೊತ್ತ ಸೋರಿಕೆಯಾಗಿಬಿಟ್ಟಿರುತ್ತದೆ. ಇಂತಹ ವಿಳಂಬ ನೀತಿಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿದೆ.
ಆದ್ದರಿಂದ ಸರ್ಕಾರಗಳ ಬಡತನ ನಿರ್ಮೂಲನೆ, ಪಡಿತರ ಯೋಜನೆ, ಸಾಲ ಯೋಜನೆ, ಸಹಾಯಧನ, ಶಿಷ್ಯವೇತನ, ವಿಪತ್ತು ನಿರ್ವಹಣಾ ಪರಿಹಾರ ಯೋಜನೆಗಳನ್ನೆಲ್ಲ ನಿಯಮಿತ ಅವಧಿಯಲ್ಲಿ ಯೋಜನೆಗಳ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸರ್ಕಾರಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಕರ್ತವ್ಯಲೋಪವೆಂದು ಪರಿಗಣಿಸಬೇಕಾಗಿದೆ. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಆರಂಭಿಸಿರುವ ಸಕಾಲ ಯೋಜನೆಯನ್ವಯ ಎಲ್ಲ ಇಲಾಖೆಗಳನ್ನು ತರಲು ಈಗ ಸಕಾಲ. ಆಗ ಕಾಯ್ದೆಯ ಭಯದಿಂದಲಾದರೂ ಕನಿಷ್ಠ ಕೆಲಸಗಳು ನಡೆಯಬಹುದು.
ಇಬ್ಬಗೆಯ ನೀತಿ 
ಇನ್ನು ಆಹಾರ ಮತ್ತು ಕಟುಂಬ ಇಲಾಖೆಯ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ಮಾಲಿಕರು ರಾಜಕೀಯ ಒತ್ತಡವನ್ನು ಅನುಸರಿಸುತ್ತಿರುವುದರ ಕುರಿತು ತಕರಾರು ಎತ್ತಿದ್ದಾರೆ. ಈ ತಕರಾರು ನ್ಯಾಯಸಮ್ಮತ. ಆದರೆ, ಎಲ್ಲ ಹೊಸ ಸರ್ಕಾರಗಳೂ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಮನೋಧರ್ಮ, ಕಾರ‍್ಯಸೂಚಿ, ಜಾತಿ ಇತ್ಯಾದಿಗಳಿಗೆ ಅನುಗುಣವಾದ ವ್ಯಕ್ತಿಗಳಿಗೆ ವಯೋಮಾನ, ಅನುಭವ, ಸೇವಾಜೇಷ್ಠತೆಯ ಯಾವ ಮಾನದಂಡಗಳನ್ನೂ ಅನುಸರಿಸದೆ ಉನ್ನತ ಹುದ್ದೆಗಳನ್ನು, ಆಯಕಟ್ಟಿನ ಜಾಗಗಳನ್ನು ದಯಪಾಲಿಸಿಲ್ಲವೆ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್., ಅಧಿಕಾರಿಗಳು, ಸಬ್ ಇನ್ಸ್‌ಪೆಕ್ಟರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲವೇ?
ಸ್ವತಃ ಆಹಾರ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೂ ಇಂತಹ ಒತ್ತಡದ ಕಾರಣಗಳಿಂದಾಗಿಯೇ ಈಗಿರುವ ಹುದ್ದೆಗಳಲ್ಲಿರಬಹುದು. ಹಾಗೆಯೆ, ಕರ್ನಾಟಕದ ವಿವಿಧ ನಿಗಮ, ಮಂಡಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ, ತುಳು, ಬ್ಯಾರಿ, ಜಾನಪದ, ಲಲಿತ ಕಲಾ ಅಕಾಡೆಮಿಗಳು ಇತ್ಯಾದಿಗಳಿಗೆ ನೇಮಕ ಮಾಡುವಾಗ ನಡೆಯುವ ಒತ್ತಡಗಳನ್ನು ಸಹಿಸಿಕೊಂಡಿಲ್ಲವೇ? ಆದರೆ ದೀಪದ ಬುಡ ಕತ್ತಲು. ಆದ್ದರಿಂದ ತಮಗೆ ಅನ್ವಯಿಸಿಕೊಳ್ಳದೆ ತಮ್ಮ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಈ ಮೇಲಿನವುಗಳಿಗೆ ಅನ್ವಯಿಸದ ರಾಜಕೀಯ ಒತ್ತಡವನ್ನು ಜನೋಪಯೋಗಿ ಕಾರ‍್ಯಕ್ರಮಗಳ ಸಮರ್ಪಕ ವಿಲೇವಾರಿಯ ಸಂದರ್ಭದಲ್ಲಷ್ಟೇ ನೆನಪಿಸಿಕೊಳ್ಳುತ್ತಿರುವುದು ಏಕೆ? ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಮತ್ತೊಂದು ದೇಶೀಯ ಹಾಗೂ ಅಂತರರಾಷ್ಟ್ರೀಯ ಖಾಸಗಿ ರಾಜಕೀಯ ಒತ್ತಡವಿರುವುದು ಎದ್ದು ಕಾಣುತ್ತದೆ.
ಖಾಸಗಿಯವರಿಗೆ ಮಣೆ ಹಾಕುವ ಹುನ್ನಾರ
ಮತ್ತೊಂದು ಅನಾಹುತಕಾರಿ ಆಲೋಚನೆಯನ್ನು ಆಹಾರ ಮತ್ತು ಕಟುಂಬ ಇಲಾಖೆಯ ಅಧಿಕಾರಿಗಳು  ಮಾಡುತ್ತಿದ್ದಾರೆ. ತಮ್ಮ ಕರ್ತವ್ಯಲೋಪವನ್ನು ತಿದ್ದಿಕೊಳ್ಳುವ ಬದಲು ಇನ್ನೊಂದು ಕರ್ತವ್ಯಲೋಪಕ್ಕೆ ಸಜ್ಜಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿ ವ್ಯಾಪಾರಿ ಮಳಿಗೆಗಳಿಗೆ(ಫುಡ್‌ವರ್ಲ್ಡ್‌ನಂತಹ ಅಂಗಡಿಗಳಲ್ಲಿ ಪಡಿತರ ಮಾರಾಟ ವ್ಯವಸ್ಥೆಯನ್ನು ಆರಂಭಿಸುವ ಚಿಂತನೆ) ಪರವಾನಗಿ ನೀಡುವುದರ ಕುರಿತ ಚಿಂತನೆಯಲ್ಲಿ ಖಾಸಗಿ ಲಾಭಿ ಹಾಗೂ ಒತ್ತಡದ ಕಮಟು ವಾಸನೆ ವ್ಯಾಪಿಸುತ್ತಿದೆ. ಜೊತೆಗೆ ಸರ್ಕಾರ ಹಾಗೂ ಅಧಿಕಾರಿಗಳ ಖಾಸಗೀಕರಣದ ಹುನ್ನಾರವನ್ನು ಈ ಯೋಜನೆ ಸಮರ್ಥಿಸುತ್ತದೆ.
ಈ ಹುನ್ನಾರವೂ ಸರ್ಕಾರದ ನಿಯಮಗಳನ್ನು ಮೀರುವಂತದ್ದೇ ಆಗಿದೆ. ಏಕೆಂದರೆ, ಈಗಾಗಲೇ ಅಸ್ಥಿತ್ವದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಪರವಾನಗಿ ನೀಡುವಾಗ ಒಂದು ನಿಯವನ್ನು ಅನುಸರಿಸಲಾಗಿದೆ. ಆ ನಿಯವೆಂದರೆ, ಸರ್ಕಾರಿ ನ್ಯಾಯಬೆಲೆ ಅಂಗಡಿ ನಡೆಸುವವರು ಅದರ ಜೊತೆಗೆ ದಿನಸಿ ಅಂಗಡಿಯನ್ನು ನಡೆಸುವಂತಿಲ್ಲ. ಇದು ಸರಿಯಾದ ನಿಯಮ. ಏಕೆಂದರೆ, ದಿನಸಿ ಅಂಗಡಿ ನಡೆಸಲು ಅನುಮತಿ ನೀಡಿದಲ್ಲಿ ಬಿ.ಪಿ.ಎಲ್. ಕಾರ್ಡ್‌ದಾರರ ಪಡಿತರವನ್ನು ಮಾರುಕಟ್ಟೆ ದರದಲ್ಲಿ ಈ ಮಾಲೀಕರು ಮಾರಾಟ ಮಾಡುವ ಅಪಾಯವುಂಟು. ಈ ಯಾವುದೇ ಸರ್ಕಾರಿ ನಿಯಮಗಳೂ ಈ ಅಧಿಕಾರಿಗಳ ಗಮನಕ್ಕೆ ಬಂದಂತಿಲ್ಲ.
ಫುಡ್‌ವರ್ಲ್ಡ್, ರಿಲಯನ್ಸ್ ಫ್ರೆಶ್, ಮೆಟ್ರೊ, ವಾಲ್‌ಮಾರ್ಟ್‌ನಂತಹ ದೇಶೀ, ವಿದೇಶೀ ಕಂಪನಿಗಳೆಲ್ಲವಕ್ಕೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ದೊಡ್ಡ ಪೈಪೋಟಿ ನೀಡುತ್ತಿವೆ. ಹೇಗೆಂದರೆ, ಅಲ್ಲಿ ಕನಿಷ್ಠ ಬೆಲೆಯ ಅಕ್ಕಿ ೩೫ ರೂಪಾಯಿಗಳು. ಅದೇ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ೩೦ರೂಪಾಯಿಗೆ ೩೦ ಕೆಜಿ ಅಕ್ಕಿ. ಇಂತಹ ಸರ್ಕಾರಿ ವ್ಯವಸ್ಥೆಯನ್ನು ನಿರ್ನಾಮ ಮಾಡುವ  ವ್ಯವಸ್ಥಿತ ಹುನ್ನಾರ ನಡೆಯುತ್ತಿರಬಹುದು. ಸರ್ಕಾರ ಈ ಹುನ್ನಾರಗಳನ್ನು ಅರ್ಥಮಾಡಿಕೊಂಡು ಅಧಿಕಾರಿಗಳ ತುಘಲಕ್ ದರ್ಬಾರಿಗೆ ಲಗಾಮು ಹಾಕಬೇಕಾಗಿದೆ.


ಪಕ್ಷಾಂತರ ತರವಲ್ಲ                                  - ಪ್ರದೀಪ್ ಮಾಲ್ಗುಡಿ
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಶುರುವಾಗುತ್ತದೆ. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಪಕ್ಷಗಳು ನಡೆಸಿಲೊಳ್ಳುತ್ತಿರುವ ರೀತಿಯೂ ಈ ಪ್ರಕ್ರಿಯೆಗೆ ಕಾರಣವಾಗಿದೆ. ಜೊತೆಗೆ ಅಧಿಕಾರ ಲಾಲಸೆ ಪಕ್ಷಾಂತರಕ್ಕೆ ಮೂಲ ಕಾರಣವಾಗಿದೆ. ಸ್ವಾಭಿಮಾನದ ಹೆಸರಿನಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ತೊರೆದಿದ್ದ ಇಬ್ಬರು ಮುಖಂಡರು ಹೊಸ ಪಕ್ಷಗಳನ್ನು ಸ್ಥಾಪಿಸಿದರು. ಈಗ ಲೋಕಸಭಾ ಚುನಾವಣೆಯ ಹೊತ್ತಿಗೆ ಮಾತೃ ಪಕ್ಷಕ್ಕೆ ಮರಳಿದ್ದಾರೆ. ಟಿಕೆಟ್ ವಂಚಿತ ಕೇಂದ್ರದ ಮಾಜಿ ಸಚಿವರು ಈಗ ಯಾವ ಪಕ್ಷಕ್ಕೆ ಹೋಗಬೇಕೆಂಬ ಜಿಜ್ಞಾಸೆಯಲ್ಲಿದ್ದಾರೆ. ಎಲ್ಲ ಪಕ್ಷಗಳು ಈ ಸಮಸ್ಯೆಯನ್ನು ಪ್ರತಿ ಚುನಾವಣೆಯಲ್ಲೂ ಎದುರಿಸುತ್ತಿವೆ. ಪ್ರಾದೇಶಿಕ ಪಕ್ಷವೊಂದು ಅನ್ಯ ಪಕ್ಷಗಳ ಟಿಕೆಟ್ ವಂಚಿತ ಅತೃಪ್ತರ ಮೇಲೆ ಕಣ್ಣಿಟ್ಟುಕೊಂಡು ಕಾಯುವ ತಂತ್ರವನ್ನು ಅನುಸರಿಸುತ್ತಿದೆ. ರಾಜಕೀಯ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಪಕ್ಷಾಂತರಿಗಳಿಗೆ ಟಿಕೆಟ್ ನೀಡುತ್ತವೆ. ಆಗ ತಮ್ಮ ಪಕ್ಷದಲ್ಲಿರುವ ನಿಷ್ಠಾವಂತ ಕಾರ‍್ಯಕರ್ತರು ಹಾಗೂ ನಾಯಕರಿಗೂ ಅವಮಾಣವಾಗುತ್ತದೆ.
ಇಲ್ಲಿ ಕುಸಿಯುತ್ತಿರುವುದು ನೈತಿಕ ಬದ್ಧತೆ. ಪಕ್ಷ, ತತ್ವ, ಸಿದ್ಧಾಂತ, ವೈಯಕ್ತಿಕ ಬದ್ಧತೆ, ಪ್ರಾದೇಶಿಕ ಸಮಸ್ಯೆಗಳು, ಮತದಾರರ ಆಶಯಗಳನ್ನು ಪಕ್ಷಾಂತರ ಮಾಡುವ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ. ಆದರೂ ಅವರಲ್ಲಿ ಕೆಲವರು ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಿದ್ದಾರೆ. ಆ ಮೂಲಕ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯವನ್ನು ವಿರೋಧಿಸುವ ದೃಢ ನಿಲುವನ್ನ ತಾಳುವ ಮೂಲಕ ಪಕ್ಷಗಳು ಹಾಗೂ ಮತದಾರರು ಪಕ್ಷಾಂತರಿಗಳಿಗೆ ಬುದ್ಧಿ ಕಲಿಸಬೇಕಾಗಿದೆ.

ಶಾಲಾ - ಕಾಲೇಜುಗಳ ಜಾಗ ಪರಭಾರೆಯಾಗದಿರಲಿ                                       - ಪ್ರದೀಪ್ ಮಾಲ್ಗುಡಿ
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುತ್ತಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಿತಾಂಡದ ಬಳಿ ಇರುವ ಶಾಲೆಯೊಂದರಲ್ಲಿ ಗ್ರಾಮಸ್ಥರು ಭಜನೆ ಮಾಡುತ್ತಿರುವುದು ವರದಿಯಾಗಿದೆ. ಶಾಲಾ ಕಾಲೇಜುಗಳ ಸ್ಥಳವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಸರ್ಕಾರಗಳು ಕಳೆದ ಹತ್ತು ವರ್ಷಗಳಿಂದ ಪ್ರತಿವರ್ಷ ಸರಾಸರಿ ೨೦೦೦೦ ಕೋಟಿಯಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕಾಗಿ ಮೀಸಲಾಗಿಡಲಾಗುತ್ತಿದೆ. ಆದರೆ, ದಿನದಿಂದ ದಿನಕ್ಕೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಕುಂಟಿತವಾಗುತ್ತಿರುವುದನ್ನು ಅನೇಕ ವರದಿಗಳು ಬಹಿರಂಗಗೊಳಿಸಿವೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದಿರುವ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನೂ ಓದಲಾರರೆಂಬ ಈ ವರದಿಯ ಅಂಶಗಳನ್ನು ಶಿಕ್ಷಣ ಸಚಿವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಪೋಷಕರು ಹಾಗೂ ಶಿಕ್ಷಕರು ಗಂಭೀರವಾಗಿ ಪರಿಗಣಸಬೇಕಾಗಿದೆ ಮತ್ತು ಇಂತಹ ಕೆಲಸಗಳ ವಿರುದ್ಧ ತುರ್ತಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.

ಶಾಂತಿಯುತ ಮತದಾನ ಅಗತ್ಯ                                       - ಪ್ರದೀಪ್ ಮಾಲ್ಗುಡಿ
ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಅಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಬಹುತೇಕ ರಾಜಕಾರಣಿಗಳ ತೆಕ್ಕೆಯಲ್ಲಿರುವ ರೌಡಿಗಳನ್ನು ಚುನಾವಣಾ ಸಂದರ್ಭದಲ್ಲಿ ತಮ್ಮ ಪರವಾಗಿ ಬಳಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಇಂತವರು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನದ ಪ್ರಕ್ರಿಯೆಯೆಗೆ ಅಡ್ಡಿಯನ್ನುಂಟು ಮಾಡಬಹುದು.
ಮತದಾರರನ್ನು ಮತಗಟ್ಟೆಗೆ ಬಾರದಂತೆ ತಡೆಯುವ, ಇಂತಹವರಿಗೇ ಮತದಾನ ಮಾಡಿ ಎಂದು ಬೆದರಿಸುವ, ಮತಗಟ್ಟೆಗೆ ಬಾರದವರ ಹೆಸರಿನಲ್ಲಿ ತಾವೇ ಮತಹಾಕುವ ಹಾಗೂ ಮತದಾರರಿಗೆ ಆಮಿಷವೊಡ್ಡುವ ಕ್ರಿಯೆಗಳು ಇಂತಹ ಸಂದರ್ಭದಲ್ಲಿ ಹೊಸದಲ್ಲ. ಅಲ್ಲದೇ ಚುನಾವಣಾ ಅಕ್ರಮದ ಭಾಗವಾದ ಹಣ ವಿತರಿಸುವ, ಬಟ್ಟೆ ಇನ್ನಿತರೆ ದಿಬಳಕೆಯ ವಸ್ತುಗಳನ್ನು ಹಂಚುವ, ಮದ್ಯವನ್ನು ಮತದಾರರಿಗೆ ಹಂಚುವ, ಚುನಾವಣೆಗಾಗಿ ಮತದಾರರನ್ನು ಕರೆತರುವುದರ ಮೂಲಕ ಸಂಭವಿಸುವ ಅಕ್ರಮಗಳನ್ನು ತಡೆಯಲೇಕಾಗಿದೆ. ಇಂತಹ ಕೆಲಸಗಳಿಗೆಲ್ಲ ರೌಡಿಶೀಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಕರ್ನಾಟಕದ ಕೆಲ ವರ್ಷಗಳ ಹಿಂದಿನ ಕೆಲವು ಜನಪ್ರಿಯ ಮುಖ್ಯಮಂತ್ರಿಗಳಿಂದ ಹಿಡಿದು ಈಗಿನ ಅನೇಕ ರಾಜಕಾರಣಿಗಳು ಇಂತಹವರೊಡನೆ ಉತ್ತಮ ಸಂಬಂಧ ಹೊಂದಿರುವುದು ಸ್ವತಃ ಪೊಲೀಸ್ ಇಲಾಖೆಗೆ ಗೊತ್ತಿರುವ ವಿಷಯ.
ಇಂತಹ ಸಂದರ್ಭದಲ್ಲಿ ಅಂತವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು, ಮುಂಜಾಗ್ರತಾ ಕ್ರಮವಾಗಿ ಅವರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕಾಗಿದೆ.

ಹಲವು ಕಡೆ ಸ್ಪರ್ಧೆ ಬೇಡ                                               - ಪ್ರದೀಪ್ ಮಾಲ್ಗುಡಿ
ಜನಪ್ರತಿನಿಧಿಗಳಾಗುವ ಬಯಕೆಯುಳ್ಳ ಹಲವು ರಾಜಕಾರಣಿಗಳು ಏಕಕಾಲದಲ್ಲಿ ಹಲವು ಕಡೆ ಸ್ಪರ್ಧಿಸುವುದು ತರವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ಮುಖಂಡರು ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ತಾವು, ಕುಟುಂಬದ ಸದಸ್ಯರು ಹಾಗೂ ತಮ್ಮ ಬೆಂಬಲಿಗರನ್ನು ಅಖಾಡಕ್ಕಿಳಿಸುತ್ತಿರುವುದು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ. ಅಲ್ಲದೇ ಎರಡೂ ಕಡೆ ಗೆದ್ದರೆ ಜನಪ್ರತಿನಿಧಿಗಳ ಈ ನಡೆ  ಒಂದು ಕ್ಷೇತ್ರದಲ್ಲಿ ವಿನಾಕಾರಣ ಮತ್ತೊಮ್ಮೆ ಚುನಾವಣೆಯನ್ನು ಅನವಶ್ಯಕವಾಗಿ ಹೇರುತ್ತದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ದೇವೇಗೌಡರೂ ಇಂತಹ ಪ್ರಯತ್ನಗಳನ್ನು ಈಗಾಗಲೇ ಮಾಡಿದ್ದಾರೆ. ಜನಪ್ರತಿನಿಧಿಗಳ ಈ ಅಧಿಕಾರ ಲಾಲಸೆ ಮತದಾರರಿಗೂ ಇಷ್ಟವಿಲ್ಲವೆಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.
ಉದಾಹರಣೆಗೆ ಸೋನಿಯಾ ಗಾಂಧಿಯವರು ಅಮೇಥಿ ಹಾಗೂ ಬಳ್ಳಾರಿಯಲ್ಲಿ ಸ್ಪರ್ಧಿಸಿ ಎರಡರಲ್ಲೂ ಜಯಗಳಿಸಿದರು. ಆದರೆ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು. ಆದರೆ, ಅದರ ನಂತರ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷವು ಹಿಡಿತವನ್ನು ಕಳೆದುಕೊಂಡು, ಇದುವರೆಗೂ ಮತ್ತೆ ಆ ಕ್ಷೇತ್ರದಲ್ಲಿ ಜಯಗಳಿಸಲಾಗಿಲ್ಲ. ಅದಾದ ನಂತರ ಕಾಂಗ್ರೆಸ್ ರಾಜ್ಯದಾದ್ಯಂತ ಬಲಹೀನವಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯಡಿ ಸಲ್ಲಿಕೆಯಾಗಿರುವ ಈ ಸಂಬಂಧದ ಅರ್ಜಿಯನ್ನು ತ್ವರಿತವಾಗಿ ನ್ಯಾಯಾಲಯವು ವಿಲೇವಾರಿ ಮಾಡಿ, ನ್ಯಾಯಮೂರ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಇಬ್ಬಂದಿತನವನ್ನು ನಿವಾರಿಸಬೇಕಾಗಿದೆ.

ಮರೆತು ಹೋದ ವಿಶ್ವ ತಾಯ್ನುಡಿ ದಿನ
- ಪ್ರದೀಪ್ ಮಾಲ್ಗುಡಿ
ಭಾರತದಂತಹ ಬಹುಭಾಷಿಕ ಪರಿಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣವನ್ನು ಜಾರಿಗೊಳಿಸುವುದು ಅಸಾಧ್ಯವಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕನ್ನಡವೊಂದೆ ಮನೆಮಾತಾಗಿಲ್ಲ. ಕನ್ನಡೇತರ ಭಾಷೆಗಳಾದ ಕೊಂಕಣಿ, ತುಳು, ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ ಹಾಗೂ ಈ ಯಾವುದೇ ಭಾಷಾ ಪ್ರಬೇಧಗಳಿಗೂ ಸೇರಿಸಲಾಗದ ಅನೇಕ ಭಾಷೆಗಳನ್ನು ಮನೆಮಾತಾಗಿ ಆಡುತ್ತಿರುವ ಸಮುದಾಯಗಳು ಕರ್ನಾಟಕದಲ್ಲಿದ್ದಂತೆಯೆ ಇಡೀ ಭಾರತದಾದ್ಯಂತ ಅಸ್ಥಿತ್ವದಲ್ಲಿವೆ. ಆದರೆ ರಾಜ್ಯದ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸುವುದರ ಕುರಿತು ಆಲೋಚಿಸಿ, ಸಮರ್ಥವಾಗಿ ವಾದವನ್ನು ಮಂಡಿಸಿದರೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವಲ್ಲಿ ಸಾರ್ಥಕತೆಯನ್ನು ಕಾಣಬಹುದು.
ಈ ತೊಡಕುಗಳನ್ನು ಈಗ ಕನ್ನಡ ಪರವಾಗಿ ವಾದ ಮಂಡಿಸುತ್ತಿರುವಂತೆಯೆ ಮುಂದುವರಿಸಿದಲ್ಲಿ ಅದು ಯಾವ ಪ್ರತಿಫಲವನ್ನೂ ಪಡೆಯಲಾರದು. ಇದರ ಬದಲಾಗಿ ಪ್ರಾದೇಶಿಕ ಭಾಷೆಗಳು ಉಳಿಯಬೇಕಾದ ಅಗತ್ಯವನ್ನು ಮನಗಂಡು ಮತ್ತೊಂದು ದಿಕ್ಕಿನಿಂದ ಕನ್ನಡದಂತಹ ಭಾಷೆಗಳನ್ನು ಉಳಿಸುವ ಪ್ರಯತ್ನವನ್ನು ನಾವಿಂದು ಗಂಭೀರವಾಗಿ ಮಾಡಬೇಕಾಗಿದೆ. ಮನ್ವಂತರದ ಕಾಲಘಟ್ಟದಲ್ಲಿರುವ ತೃತೀಯ ರಾಷ್ಟ್ರಗಳ ಎಲ್ಲ ವರ್ಗಗಳೂ ಏನನ್ನು, ಏಕೆ, ಹೇಗೆ ಒಪ್ಪಿಕೊಳ್ಳಬೇಕು? ಏನನ್ನು ಮಾಡಿದರೆ ಭವಿಷ್ಯ ಉಜ್ವಲವಾಗಲಿದೆ? ಯಾವ ಭಾಷೆಯನ್ನು ಕಲಿತರೆ ಮಾರುಕಟ್ಟೆ ಮೌಲ್ಯ ಹೆಚ್ಚುತ್ತದೆ? ಎಂಬಿವೆ ಕೆಲವು ಅಂಶಗಳನ್ನು ಇಟ್ಟುಕೊಂಡೆ ಏನನ್ನೂ ನಿರ್ಧರಿಸಲಾಗದ ಅಸಹಾಯಕತೆಯಲ್ಲೇ ದಿನಗಳನ್ನು ಕಳೆಯುತ್ತಿವೆ.
ಇಂಗ್ಲಿಶ್ ಭಾಷೆಯ ಮೂಲಕ ಮೇಲ್ವರ್ಗಗಳು ಪಡೆದಿರುವ ಸವಲತ್ತುಗಳಿಂದ ತಳಸಮುದಾಯಗಳು ಆಕರ್ಷಿತವಾಗಿವೆ. ಆದರೆ ಮೇಲ್ವರ್ಗಗಳ ಸಾಂಸ್ಕೃತಿಕ ರಾಜಕಾರಣವನ್ನು ಮಾಡಬಲ್ಲಷ್ಟು ಶಕ್ತಿಯನ್ನು ಈ ಸಮುದಾಯಗಳು ಇನ್ನೂ ಪಡೆದಿಲ್ಲ. ಅದನ್ನು ಸಾಧಿಸುವುದು ಕಷ್ಟಸಾಧ್ಯವಾಗಿದೆ. ಏಕೆಂದರೆ ಭಾರತದಂತಹ ರಾಷ್ಟ್ರಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಾಗಿ ಮೇಲ್ವರ್ಗಗಳು ತಳಸಮುದಾಯಗಳನ್ನೇ ಬಳಸಿಕೊಳ್ಳುತ್ತವೆ.
ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಸದ್ದಿಲ್ಲದೇ ಕಳೆದು ಹೋದ ಒಂದು ದಿನವನ್ನು ನಾವೆಲ್ಲ ಮರೆತು ಬಿಟ್ಟಿದ್ದೇವೆ. ಮಾರುಕಟ್ಟೆಯ ಕಾರಣದಿಂದ ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿರುವ ಪ್ರೇಮಿಗಳ ದಿನಕ್ಕೆ ಎಲ್ಲೆಡೆ ಪ್ರಚಾರದ ಭರಾಟೆಯಿರುತ್ತದೆ. ಏಕೆಂದರೆ ಶಾಪಿಂಗ್ ಮಾಲ್, ಕಾರ್ಡ್, ಉಡುಗೆ, ಉಡುಗೊರೆಗಳ ಮಾರುಕಟ್ಟೆಯ ವಿಸ್ತರಣೆಯ ಭಾಗವಾಗಿ ಈ ದಿನ ಆಧುನಿಕ ಸಂದರ್ಭದಲ್ಲಿ ಮುದ್ರಣ, ಶ್ರವಣ, ದರ್ಶನ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೆರೆದಾಡುತ್ತಿದೆ. ಆದರೆ ಈ ಮಾಧ್ಯಮಗಳಲ್ಲಿ ಕನ್ನಡದಂತಹ ಸ್ಥಳೀಯ ಭಾಷೆಗಳನ್ನು ಬಳಸಿಕೊಂಡು ವ್ಯಾವಹಾರಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿರುವ ಎಲ್ಲರೂ ಭವಿಷ್ಯದಲ್ಲಿ ಕನ್ನಡದಂತಹ ಭಾಷೆಗಳನ್ನು ಉಳಿಸುವ ಸಲುವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹುಡುಕಿದರೂ ಕಾಣದಿರುವುದು ದುರಾದೃಷ್ಟಕರ ಬೆಳವಣಿಗೆಯಾಗಿದೆ. ಅಂದ ಹಾಗೆ ನಾವು ಮರೆತು ಹೋದ ಆ ದಿನವೇ ಫೆಬ್ರವರಿ ೨೧ ವಿಶ್ವ ತಾಯ್ನುಡಿ ದಿನ.
ಮಾನವನ ಮಹೋನ್ನತ ಸಾಧನೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಸಲ್ಲುವುದು ಭಾಷೆಗೆ. ಆದರೆ ನಾವಿಂದು ಎಷ್ಟು ಉಪಭೋಗವಾದಿ ಹಾಗೂ ಉಪಯೋಗವಾದಿಗಳಾಗಿ ಬದಲಾಗಿದ್ದೇವೆಂದರೆ; ನಮಗೆ ಇಂದಿನ ಸಕಲ ಸವಲತ್ತುಗಳನ್ನು ಧಾರೆಯೆರೆಯಲು ಕಾರಣವಾಗಿರುವ ನಮ್ಮನಮ್ಮ ತಾಯ್ನುಡಿಯನ್ನು ಅದರಿಂದ ಲಭ್ಯವಾದ ಎಲ್ಲ ಸೌಲಭ್ಯಗಳನ್ನು ಗಳಿಸಿದ ನಂತರ ಕಾಲಕಸವನ್ನಾಗಿ ಮಾಡುತ್ತಿದ್ದೇವೆ. ಒಮ್ಮೆ ಯೋಚಿಸಿದರೆ ನಾವು ಕಲಿತ ಮೊದಲ ಭಾಷೆ ನಮಗೆ ಏನೆಲ್ಲವನ್ನು ಒದಗಿಸಿದೆ ಎಂದು ಮನದಟ್ಟಾಗುತ್ತದೆ. ನಮ್ಮ ಆಲೋಚನೆ, ಲೋಕಗ್ರಹಿಕೆ, ಒಡನಾಟ, ಉದ್ಯೋಗ ಹೀಗೆ ಜೀವನದ ಎಲ್ಲ ಸ್ತರಗಳಲ್ಲಿ ಭಾಷೆಯು ತನ್ನ ಆತ್ಯಂತಿಕ ಮಟ್ಟದ ಕೊಡುಗೆಯನ್ನು ಮಾನವ ಸಮುದಾಯಕ್ಕೆ ಕೊಟ್ಟಿದೆ. ಪ್ರಾಣಿ ಸಮೂಹಕ್ಕಿಂತ ಉನ್ನತ ಹಂತವೆಂದು ಹೇಳಿಕೊಳ್ಳುವ ಅವಕಾಶವನ್ನು ಭಾಷೆಯ ಮೂಲಕ ಗಳಿಸಿರುವ ಮಾನವರು ಭಾಷೆಗಳ ಉಳಿವಿಗೆ ಇನ್ನು ಮುಂದಾದರೂ ಕ್ರಿಯಾಶೀಲವಾಗಬೇಕಿದೆ.
ಆದರೆ ಆ ಕೆಲಸ ಆರಂಭವಾಗುವ ಸಾಧ್ಯತೆಗಳೇ ಸದ್ಯಕ್ಕೆ ಕಾಣುತ್ತಿಲ್ಲ. ಏಕೆಂದರೆ ಎಲ್ಲರೂ ಆಧುನಿಕತೆಯ ಓಟದಲ್ಲಿ ನಿರತರಾಗಿದ್ದಾರೆ. ಅವರ ಈ ಓಟ ಗುರಿ ಇರದೆ ಬಿಟ್ಟ ಬಾಣದಂತೆ ಸಾಗುತ್ತಿದೆ. ಆಧುನಿಕ ಮೂಢನಂಬಿಕೆಯೊಂದನ್ನು ಗಮನಿಸಿದರೆ ಈ ಮಾತಿಗೆ ಸಮಜಾಯಿಷಿ ಸಿಗಬಹುದು. ಆದಷ್ಟು ಬೇಗ ಎಲ್ಲರೂ ಇಂಗ್ಲಿಶ್ ಕಲಿಯಿರಿ, ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ, ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ ಎಂಬರ್ಥದ ಜಾಹಿರಾತುಗಳು, ಇಂಗ್ಲಿಶ್ ಕಲಿಸುವ ಸಂಸ್ಥೆಗಳು ಪ್ರಚಾರವನ್ನು ನೀಡುತ್ತಿವೆ. ಇದರ ಜೊತೆಗೆ ಖಾಸಗಿ ಶಾಲಾಕಾಲೇಜುಗಳು ಈ ವಾದಕ್ಕೆ ಹಿಮ್ಮೇಳವನ್ನು ಜೊತೆಗೂಡಿಸುತ್ತಿವೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂದು ಯೋಚಿಸಬೇಕಾಗಿದೆ. ಅಮೆರಿಕಾದ ಆರ್ಥಿಕ ವ್ಯವಸ್ಥೆ ಕುಸಿದಾಗ ಸಾಫ್ಟ್‌ವೇರ್ ಆಧರಿಸಿದ ಉದ್ದಿಮೆಗಳು ಆರ್ಥಿಕ ಕುಸಿತದ ಕಾರಣದಿಂದಾಗಿ ಹೊಸ ಉದ್ಯೋಗಿಗಳ ನೇಮಕಾತಿಯನ್ನು ಸ್ಥಗಿತಗೊಳಿಸಿ, ಇರುವ ಉದ್ಯೋಗಗಳನ್ನೂ ಕಡಿತಗೊಳಿಸಿದವು. ಆಗ ಇಂಗ್ಲಿಶ್ ಕಲಿತ ಸಾಫ್ಟ್‌ವೇರ್ ಉದ್ಯೋಗಿಗಳೂ ಆತ್ಮಹತ್ಯೆಯ ಹಾದಿ ಹಿಡಿದಿದ್ದರು. ಹಾಗಾದರೆ ಇಂಗ್ಲಿಶ್ ಭಾಷೆಯನ್ನು ಕಲಿತ ಮಾತ್ರಕ್ಕೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕುವ ಅವಕಾಶ ಎಲ್ಲರಿಗೂ ಮುಕ್ತವಾಗಿದ್ದಲ್ಲಿ ಇವರೇಕೆ ಆತ್ಮಹತ್ಯೆಯ ದಾರಿ ಹಿಡಿದರು? ಇಂತಹ ಸೂಕ್ಷ್ಮಗಳೆಡೆಗೆ ಇಂದು ನಾವು ಯೋಚಿಸುವಷ್ಟು ಬಿಡುವು ನಮಗಿಲ್ಲ. ಏಕೆಂದರೆ; ೨೪ ಘಿ ೭ ಚಾನೆಲ್‌ಗಳ ಭರಾಟೆಯಲ್ಲಿ ನಮ್ಮ ಯೋಚಿಸುವ ಶಕ್ತಿ ಕುಂದಿಹೋಗಿದೆ. ಧಾರಾವಾಹಿ, ಹಾಡು, ಸಿನಿಮಾ, ನಗು, ವಾರ್ತೆಗಳನ್ನು ದಿನದ ೨೪ ಗಂಟೆಯೂ ಪ್ರಸಾರಿಸುತ್ತ ನಮ್ಮನ್ನು ಬಿಡುವಾಗದಂತೆ ಯೋಚನೆಯ ಸಾಧ್ಯತೆಗೆ ಒಡ್ಡನ್ನು ನಿರ್ಮಿಸುತ್ತಿವೆ. ಅದರ ಜೊತೆಗೆ ರೇಡಿಯೊ, ಇಂಟರ‍್ನೆಟ್‌ನಲ್ಲಿ ಮೇಯ್ಲ್, ಫೇಸ್‌ಬುಕ್, ಟ್ವೀಟರ್, ಇವುಗಳೆಲ್ಲ ಮೊಬೈಲ್‌ನಲ್ಲೇ ಲಭಿಸುವಂತಾಗಿರುವುದು ನಮ್ಮ ಸುಯೋಗವೆಂಬಂತೆ ನಾವು ಭಾವಿಸುತ್ತಿದ್ದೇವೆ. ಕನಿಷ್ಟ ದರದಲ್ಲಿ ಹೆಚ್ಚಿನ ಟಾಕ್‌ಟೈಮ್, ಎಂ.ಬಿ. ಹಾಗೂ ಜಿ.ಬಿ. ಗಳಿಸುವ ಕುರಿತು ನಮ್ಮ ಆಲೋಚನೆಗಳಿವೆ. ಆದರೆ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರ ಕಡೆ ನಮ್ಮ ಗಮನವಿಲ್ಲ! ಹಾಲು, ಅಕ್ಕಿ, ಸೊಪ್ಪು, ತರಕಾರಿ, ದಿನಸಿ ಪದಾರ್ಥಗಳ ಬೆಲೆಯ ಕುರಿತು ನಮ್ಮ ಆಲೋಚನೆಗಳಿಲ್ಲ! ಆಧುನಿಕತೆಯ ಜುಗಾರಿ ಕ್ರಾಸ್‌ನಲ್ಲಿ ಸಿಲುಕಿಕೊಂಡು ನಾವಿಂದು ಬಳಲುತ್ತಿದ್ದೇವೆ.
ಕನ್ನಡ ಭಾಷೆಯ ಅಭಿವೃದ್ಧಿಗೆ ಈ ಮಾಧ್ಯಗಳ ಕೊಡುಗೆಯೇನು? ಎಂಬ ಪ್ರಶ್ನೆಯನ್ನು ಕೇಳಿದರೆ ಸಿಗುವ ಉತ್ತರ ನಿರಾಶಾದಾಯಕವಾಗಿದೆ. ಮಾಧ್ಯಮಗಳು ಬೃಹತ್ ಬಂಡವಾಳ ಹೂಡಿಕೆಯನ್ನು ಬಯಸುತ್ತವೆ. ವ್ಯಾಪಾರವೆಂದರೆ ದ್ರೋಹ ಚಿಂತನೆ ಎಂಬ ಮಾತಿದೆ. ಅದರಂತೆ ರೇಡಿಯೋ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳು ಹೂಡಿದ ಬಂಡವಾಳವನ್ನು ಮರಳಿ ಪಡೆಯುವತ್ತ ತಮ್ಮ ಗಮನವನ್ನು ಹರಿಸುತ್ತವೆ. ಆಗ ಭಾಷೆ, ಸಂಸ್ಕೃತಿ, ನಾಡಿನ ಹಿತಾಸಕ್ತಿ ಮಸುಕಾಗುತ್ತದೆ.
ಇಂತದೇ ಸಂದರ್ಭ ಖಾಸಗಿ ಶಾಲಾಕಾಲೇಜುಗಳದು. ಸರ್ಕಾರಿ ಶಾಲಾಕಾಲೇಜುಗಳಲ್ಲಿಲ್ಲದ ಪೀಠೋಪಕರಣಗಳು, ಪರಿಣತ ಶಿಕ್ಷಕರು, ಇಂಗ್ಲಿಶ್ ಮಾಧ್ಯಮ ನಮ್ಮಲ್ಲಿದೆ ಎಂದು ಪೋಷಕರನ್ನು ನಂಬಿಸಲಾಗುತ್ತಿದೆ. ಬೆಂಗಳೂರಿನ ಬಹುತೇಕ ಸರ್ಕಾರಿ ಶಾಲಾಕಾಲೇಜುಗಳ ಸುತ್ತಮುತ್ತಲ ವಾತಾವರಣವನ್ನು ಹದಗೆಡಿಸಲಾಗಿದೆ. ಸುತ್ತಮುತ್ತ ತಿಪ್ಪೆಗುಂಡಿಗಳ ನಿರ್ಮಾಣ ಮಾಡಲಾಗಿದೆ. ಇಂತಹ ವಾತಾವರಣದಲ್ಲಿ ತಮ್ಮ ಮಕ್ಕಳನ್ನು ಓದಲು ಕಳಿಸುವುದು ಹೇಗೆ ಎಂದು ಪೋಷಕರು ಹಿಂದೆಮುಂದೆ ನೋಡುವಂತಹ ಸ್ಥಿತಿಯನ್ನು ನಿರ್ಮಿಸಲಾಗಿದೆ. ಆ ಮೂಲಕ ಇಂಗ್ಲಿಶ್ ಭಾಷೆಯನ್ನೂ ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಾಣತನವನ್ನು ಮೆರೆಯಲಾಗಿದೆ. ಇನ್ನು ಕನ್ನಡದಂತಹ ಭಾಷೆಗಳ ಸ್ಥಿತಿಯನ್ನು ಕಾಪಾಡುವವರು ಯಾರು?

ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಬೇಡಿ
                                                                                 - ಪ್ರದೀಪ್ ಮಾಲ್ಗುಡಿ
ಕರ್ನಾಟಕದ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಶಿಕ್ಷಣವನ್ನು ಉದ್ದಿಮೆಯೆಂದು ತಿಳಿದು ತಮ್ಮ ಕಾಲೇಜುಗಳಲ್ಲಿ ಸರ್ಕಾರಕ್ಕೆ ಬರೆದು ಕೊಟ್ಟಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕೆಂದು ನಿಲುವನ್ನು ಮಂಡಿಸುತ್ತಿರುವ ಹೊತ್ತಿನಲ್ಲಿ ತಮ್ಮ ಸಹೋದ್ಯೋಗಿಗಳ ಒಡೆತನದ ಕಾಲೇಜುಗಳು ವೈದ್ಯಕೀಯ ಸೀಟು ಹಂಚಿಕೆಯ ಸಮಯದಲ್ಲಿ ಮೀಸಲಾತಿಯನ್ನು ಉಲ್ಲಂಘಿಸಿದ್ದಾರೆ.
ಶಿಕ್ಷಣವು ವ್ಯಾಪಾರೀ ಉದ್ದೇಶಗಳಿಂದ ಈಗಾಗಲೇ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ. ನೈತಿಕತೆಯನ್ನು ಯಾವ ಶಿಕ್ಷಣ ಸಂಸ್ಥೆಗಳೂ ಬೋಧಿಸಲಾರದಷ್ಟು ಈ ಕ್ಷೇತ್ರ ಹದಗೆಟ್ಟಿದೆ. ಏಕೆಂದರೆ, ಇಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸಿವೆ. ಈ ಎಲ್ಲ ಹಂತಗಳಲ್ಲಿ ತಮಗೆ ಬೇಕಾದಂತೆ ಶುಲ್ಕ ವಸೂಲಾತಿಯನ್ನು ಅವ್ಯಾಹತವಾಗಿ ನಡೆಸಿದ್ದಾರೆ. ಸರ್ಕಾರಕ್ಕೇ ಶೆಡ್ಡು ಹೊಡೆಯುವಷ್ಟು ಈ ಸಂಸ್ಥೆಗಳು ಪ್ರಬಲವಾಗಿವೆ ಹಾಗೂ ಚೆನ್ನಾಗಿ ತಿಂದು ಸೊಕ್ಕಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ವಿದ್ಯಾಸಂಸ್ಥೆಗಳ ಒಡೆತನ ರಾಜಕಾರಣಿಗಳು, ಮಠಗಳು ಹಾಗೂ ಉದ್ಯಮಿಗಳ ಕೈಯಲ್ಲಿದೆ. ಈ ಕಾರಣದಿಂದ   ಸರ್ಕಾರವಾಗಲೀ ಅಧಿಕಾರಿಗಳಾಗಲೀ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿವೆ.
ಒಮ್ಮೆ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ಅವರು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದಿದ್ದರು. ಆದರೆ, ಅದು ದೂರದ ಬೆಟ್ಟ. ಏಕೆಂದರೆ, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧಿಪತಿಗಳನ್ನು ಎದುರು ಹಾಕಿಕೊಂಡು ಈ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವುದು ಅಸಾಧ್ಯದ ಕೆಲಸವಾಗಿದೆ. ಆದರೆ ಈಗ ನಮ್ಮ ಮುಂದಿರುವ ಸಮಸ್ಯೆ ಸಾಮಾಜಿಕ ನ್ಯಾಯದ ಪರವಾಗಿ ಬಡಬಡಿಸುವ ರಾಜಕಾರಣಿಗಳು ಹಾಗೂ ಮಠಾಧಿಪತಿಗಳ ಒಡೆತನದ ಶಾಲಾ-ಕಾಲೇಜಿನಲ್ಲಿ ನಡೆದಿರುವ ಅನ್ಯಾಯಗಳನ್ನು ಏನೆಂದು ವ್ಯಾಖ್ಯಾನಿಸುವುದು?

ಚುನಾವಣಾ ಪ್ರಣಾಳಿಕೆ 
                                                                                                    - ಪ್ರದೀಪ್ ಮಾಲ್ಗುಡಿ
ಇದೀಗ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಭರದಿಂದ ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಒಂದು ಹಂತದ ಅಭ್ಯರ್ಥಿಗಳ ಪಟ್ಟಿಯನ್ನೂ ಈಗಾಗಲೆ ಬಿಡುಗಡೆ ಮಾಡಿವೆ. ಇನ್ನು ಅಧಿಕಾರವನ್ನು ಹಿಡಿಯಲು ಭರವಸೆಗಳ ಮಹಾಪೂರವನ್ನೇ ಹರಿಸಲು ಪ್ರಣಾಳಿಕೆಗಳ ಬಿಡುಗಡೆಯ ಸಮಯವಿದು. ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ಘೋಷಿಸಿದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದು ಕಷ್ಟವೆಂದು ಭಾವಿಸುವ ರಾಜಕೀಯ ಪಕ್ಷಗಳು; ಈ ಸಂದರ್ಭದಲ್ಲಿ ಭರವಸೆಗಳ ಅತಿವೃಷ್ಟಿಯನ್ನೇ ಸುರಿಸುತ್ತವೆ. ಆದರೆ, ಚುನಾವಣಾ ನಂತರ ಈ ಭರವಸೆಗಳನ್ನು ಘೋಷಿಸಿದವರು ಹಾಗೂ ಕೇಳಿ, ನಂಬಿ ಮತ ಹಾಕಿದವರು ಮತ್ತು ಇವರಿಬ್ಬರ ನಡುವೆ ಸೇತುವೆಯಾಗಿ ಕಾರ‍್ಯನಿರ್ವಹಿಸುತ್ತಿರುವ ಮಾಧ್ಯಮಗಳು ಬಹುತೇಕ ಈ ವಿಷಯಗಳನ್ನು ಮರೆತುಬಿಡುತ್ತವೆ. ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಘೋಷಿಸಿದ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾವ ಹಂತದಲ್ಲಿ ಜಾರಿಗೆ ತಂದಿದೆ? ಎಂದು ಪ್ರಶ್ನಿಸಿದರೆ ಉತ್ತರ ಕೊಡಲು ಯಾರಿಗೆ ಪ್ರಶ್ನೆ ಕೇಳಬೇಕೆಂಬ ಗೊಂದಲ ಶುರುವಾಗುತ್ತದೆ.

ಮೂಢನಂಬಿಕೆ ಅಳಿಯಬೇಕಾಗಿದೆ
                                                                              ಪ್ರದೀಪ್ ಮಾಲ್ಗುಡಿ
ಇತ್ತೀಚೆಗೆ ಚಿಕ್ಕಮಗಳೂರು ಜಲ್ಲೆಯ ರಂಭಾಪುರಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಮಡೆಸ್ನಾನ, ಹೃದಯಭಾಗವಾದ ದಾವಣಗೆರೆಯಲ್ಲಿ ನಡೆದ ಅರೆಬೆತ್ತಲೆ ಸೇವೆ ಹಾಗೂ ಉತ್ತರ ಕರ್ನಾಟಕದ ಕೊಪ್ಪಳದಲ್ಲಿ ನಡೆದ ಮುತ್ತುಕಟ್ಟುವ ಮೌಢ್ಯಾಚರಣೆಗಳು ಕರ್ನಾಟಕದ ವೈಚಾರಿಕ ಪ್ರಜ್ಞೆಗೆ ಕನ್ನಡಿ ಹಿಡಿದಿವೆ.
ಪುರೋಹಿತಶಾಹಿ ವ್ಯವಸ್ಥೆಯ ಯಥಾಸ್ಥಿತಿ ವಾದವನ್ನು ಕಾಪಿಡುವ ಹಾಗೂ ನಿರಂತರ ಮುಂದುವರಿಸುವ ಉದ್ದೇಶಕ್ಕಾಗಿ ತಳಸಮುದಾಯಗಳನ್ನು ನಿರಂತರವಾಗಿ ಬಳಸಿಕೊಳ್ಳಲಾಗಿದೆ. ಧಾರ್ಮಿಕ ವೇಷದ ಹಾಗೂ ಬಹುಸಂಖ್ಯಾತರ ಆತ್ಮಗೌರವವನ್ನು ಕುಂದಿಸುವ ಈ ಮೂಢನಂಬಿಕೆಗಳನ್ನು ನಿಷೇಧಿಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ವಿರೋಧಿ ಕಾನೂನನ್ನು ಹೆಚ್ಚಿನ ಮಾಧ್ಯಮಗಳು ಅಪವ್ಯಾಖ್ಯಾನಕ್ಕೆ ಒಳಪಡಿಸಿದವು. ಅಂತಿಮವಾಗಿ ಇದರ ಲಾಭ ಪಡೆದದ್ದು ಜ್ಯೋತಿಷಿಗಳು. ವಾಸ್ತು, ದಿನಭವಿಷ್ಯ, ವಾರಭವಿಷ್ಯ, ವಾರ್ಷಿಕ ಭವಿಷ್ಯ, ಹೋಮ, ಹವನ, ಶಾಂತಿಗಳ ಹೆಸರಿನಲ್ಲಿ ಅಮಾಯಕ ಜನರನ್ನು ಮೋಸಗೊಳಿಸಲಾಗುತ್ತಿದೆ.
ಶಿವರಾಮ ಕಾರಂತ, ಎಚ್.ನರಸಿಂಹಯ್ಯ, ಕುವೆಂಪು, ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ ಹಾಗೂ ರಾಮದಾಸ್‌ರಂತಹ ವ್ಯಕ್ತಿಗಳ ಕೊರತೆಯನ್ನು ಈ ಪ್ರಸಂಗಗಳು ಎತ್ತಿತೋರಿವೆ. ಯವಜನಾಂಗವು ಇಂತಹ ಸಂಕೀರ್ಣ ಸನ್ನಿವೇಶಗಳನ್ನು ವಸ್ತುನಿಷ್ಟವಾಗಿ ಮುಖಾಮುಖಿಯಾಗಬೇಕಾಗಿದೆ. ಇವುಗಳ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಾದ ಅವಶ್ಯಕತೆಯನ್ನು ಸರ್ಕಾರಗಳು ಹಾಗೂ ಮಾಧ್ಯಮಗಳು ತ್ವರಿತವಾಗಿ ಮನಗಾಣಬೇಕಾಗಿದೆ.
ಕಾಡ್ಗಿಚ್ಚು ನಂದುವುದೆಂದು?
                                                                                       ಪ್ರದೀಪ್ ಮಾಲ್ಗುಡಿ
ಪ್ರತಿ ಬೇಸಿಗೆಯಲ್ಲೂ ಕರ್ನಾಟಕದ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಹಾವಳಿ ಶುರುವಾಗುತ್ತದೆ. ಈ ಸಮಸ್ಯೆಗೆ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಕಾರಣವಾಗಿರುವಂತಿದೆ. ಏಕೆಂದರೆ, ಕಾಡ್ಗಿಚ್ಚಿನ ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ವರದಿಗಳ ಆಧಾರದಲ್ಲಿ ಕರ್ನಾಟದಂಥ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಸಾಧ್ಯತೆಗಳು ಕಡಿಮೆ. ಆದರೆ ನಾಗರಹೊಳೆ, ಬಂಡೀಪುರ ಮೊದಲಾದ ಕಾಡುಗಳಲ್ಲಿ ಪ್ರತಿವರ್ಷ ಈ ಅವಘಡ ನಡೆಯುತ್ತಿದೆ.
ಆದರೆ, ಇದರ ಪರಿಣಾಮಕಾರಿ ಪರಿಹಾರೋಪಾಯಗಳು ಮಾತ್ರ ಇಂದಿಗೂ ಮರೀಚಿಕೆಯಾಗಿವೆ. ಅಕ್ಷರಶಃ ಅರಣ್ಯರೋಧನವನ್ನು ಕೇಳುವವರೆ ಇಲ್ಲವಾಗಿದೆ. ಈ ಅವಘಡದಲ್ಲಿ ಅನೇಕ ಅಮೂಲ್ಯ ಹಾಗೂ ಅಪರೂಪದ  ಪ್ರಾಣಿ, ಪಕ್ಷಿ ಸಂತತಿ ಮತ್ತು ವೃಕ್ಷ, ಗಿಡಮೂಲಿಕೆಗಳೂ ಬಲಿಯಾಗುತ್ತಿವೆ. ಇವುಗಳಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಜೀವಸಂಕುಲ. ಪ್ರಾಣಿ, ಪಕ್ಷಿ ಹಾಗೂ ವೃಕ್ಷಸಂಕುಲದ ಅಳಿವಿನ ಸರದಿಯಲ್ಲಿ ಮಾನವನೂ ಇದ್ದಾನೆಂದು ಮನಗಂಡು ನಮ್ಮ ಮುಂದಿನ ಪೀಳಿಗೆಗಾಗಿ ನಾವಿಂದು ಕ್ರಿಯಾಶೀಲವಾಗಬೇಕಿದೆ. ಪ್ರತಿವರ್ಷವೂ ಕೇವಲ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಘೋಷಣೆ ಭರವಸೆಯಾಗಿ ಮಾತ್ರ ಉಳಿದಿದೆ.  ಪ್ರಕೃತಿ ಮನುಷ್ಯರ ಎಲ್ಲ ಆಸೆಯನ್ನೂ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ ಎಂಬ ಮಹಾತ್ಮ ಗಾಂಧಿಯವರ ಎಚ್ಚರಿಕೆಯನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ.



  ಕುಲಪತಿ ನೇಮಕ: ಆಯ್ಕೆ ಮಾನದಂಡ ಬದಲಾಗಲಿ 
                                                                          ಪ್ರದೀಪ್ ಮಾಲ್ಗುಡಿ
ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರ ನೇಮಕಾತಿಯಲ್ಲಿ ನಡೆಯುತ್ತಿರುವ ವಿವಿಧ ವಲಯಗಳ ಹಸ್ತಕ್ಷೇಪಗಳು ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿವೆ. ಹೈಕೋರ್ಟ್ ಕೂಡ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳ ಮುಂದುವರಿಕೆಯನ್ನು ಕುರಿತು ವಿವರಣೆ ಕೇಳಿ ರಾಜ್ಯಪಾಲರಿಗೆ ನೋಟೀಸ್ ನೀಡಿದೆ. ಇತ್ತೀಚೆಗೆ ದಾವಣಗೆರೆ ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ.ಯೂ.ಆರ್.ಅನಂತಂಮೂರ್ತಿಯವರು ನೇಮಕಾತಿ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಸಾಂವಿಧಾನಿಕವಾಗಿ ಉನ್ನತ ಹುದ್ದೆಯಲ್ಲಿರುವ ಮಾಜಿ ಕಾನೂನು ಸಚಿವ ಹಾಗೂ ಹಾಲಿ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ವೈಯಕ್ತಿಕ ಅವಹೇಳನಕ್ಕೆ ಮುಂದಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇಲ್ಲಿ ಪ್ರಶ್ನೆಗಳಿರುವುದು ಉನ್ನತ ಹುದ್ದೆಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಈಗ ಅನುಸರಿಸುತ್ತಿರುವ ಮಾನದಂಡಗಳು ಸಮಾಧಾನಕರವಾಗಿಲ್ಲ ಎಂಬುದರ ಕುರಿತು. ಈ ಬಗೆಯ ತಕರಾರುಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಉನ್ನತ ಅಧಿಕಾರ ಹೊಂದಿರುವವರು ಪರಿಗಣಿಸಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗಿದೆ.
ಕೇಂದ್ರ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಉನ್ನತ ವಿದ್ಯಾಭ್ಯಾಸವನ್ನು ಕೇಂದ್ರವಾಗಿಟ್ಟುಕೊಂಡು ನಿರಂತರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಮುಖ್ಯವಾಗಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುವವರ ಈಗಿನ ಪ್ರಮಾಣ ಶೇ ೫ರಿಂದ ಶೇ ೮ಕ್ಕೆ ಏರಿಸುವ ಗುರಿಯನ್ನು  ಸಾಧಿಸುವ ಪ್ರಯತ್ನವನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಬೇಕಾಗಿದೆ.
ಎಲ್ಲ ವಿಶ್ವವಿದ್ಯಾಲಯಗಳನ್ನು ಜಾತಿ ಕೇಂದ್ರಿತವಾಗಿ ಗುರುತಿಸಲಾಗುತ್ತಿದೆ. ಅದಕ್ಕೆ ಕಾರಣಗಳು ಸ್ಪಷ್ಟವಾಗಿವೆ. ಸಾಮಾಜಿಕವಾಗಿ ಮೇಲ್ಜಾತಿ ಹಾಗೂ ಕೆಳಜಾತಿ ಎಂದು ಪರಿಭಾವಿಸಿರುವ ಎಲ್ಲ ಜಾತಿಯವರು ಉನ್ನತ ಅಧಿಕಾರವನ್ನು ವಹಿಸಿಕೊಂಡಾಗಲೆಲ್ಲ ತಮ್ಮತಮ್ಮ ಜಾತಿಯವರಿಗೆ ಮೆರಿಟ್, ಮೀಸಲಾತಿ ಮಾನದಂಡಗಳನ್ನು ಮೀರಿ ಹುದ್ದೆಗಳನ್ನು ದಯಪಾಲಿಸುವ ಪವಾಡಗಳನ್ನು ನಡೆಸಿದ್ದಾರೆ. ಸ್ವಜನಪಕ್ಷಪಾತ, ಸ್ವಜಾತಿ ಮೋಹ, ಹಣ, ಸಿದ್ಧಾಂತ, ಅಧಿಕಾರದ ಒತ್ತಡಗಳನ್ನು ಮೀರಿ ಉನ್ನತ ಶಿಕ್ಷಣ ಕೇಂದ್ರಗಳು ಕಾರ‍್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ.
ಇತ್ತೀಚಿನ ವಿಶ್ವವಿದ್ಯಾಲಯಗಳ ಬಹುತೇಕ ನೇಮಕಾತಿಯಲ್ಲಿ ಅನೇಕ ಅಕ್ರಮಗಳು ನಡೆದಿರುವುದನ್ನು ಆತ್ಮಸಾಕ್ಷಿ ಇದ್ದ ಪಕ್ಷದಲ್ಲಿ ಸ್ವತಃ ಕುಲಾಧಿಪತಿಗಳು, ಕುಲಪತಿಗಳು, ನೇಮಕಗೊಂಡವರು ಹಾಗೂ ಉದ್ಯೋಗ ವಂಚಿತರು ಅಲ್ಲಗಳೆಯಲಾರರು. ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣದ ಮೂಲೋದ್ದೇಶಗಳು ಮಸುಕಾಗುತ್ತಿರುವುದನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ.
ಉನ್ನತ ಶಿಕ್ಷಣ ಕ್ಷೇತ್ರವು ಜ್ಞಾನವನ್ನು ಹಂಚುವ, ವಿಸ್ತರಿಸುವ, ದೇಶೀ ಚಿಂತನಕ್ರಮಗಳನ್ನು ರೂಪಿಸುವ ಹಾಗೂ ಸಾಮಾಜಿಕ ಅಸಮತೋಲನವನ್ನು ನಿವಾರಿಸಲು ಇರುವ ಬಹುದೊಡ್ಡ ಸಾಧನ. ಆದರೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಈ ದೇಶದ ಸಾಮಾಜಿಕ ಚಲನೆಯ ಸಾಧ್ಯತೆಯೇ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಆಯ್ಕೆ ಸಮಿತಿ ಸದಸ್ಯರು, ಆಕಾಂಕ್ಷಿತರು ಈ ಅಂಶಗಳನ್ನು ಮನಗಂಡು ಕ್ರಿಯಾಶೀಲವಾಗಬೇಕಾಗಿದೆ.

     

Sunday, 27 April 2014

ಮುತ್ಸದ್ಧಿ ಅಭ್ಯರ್ಥಿಗಳನ್ನು ಪರಿಗಣಿಸಿ
                                                                                                                            - ಪ್ರದೀಪ್ ಮಾಲ್ಗುಡಿ
ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕಿನ ಮೇಲೆ ಕಣ್ಣಿಟ್ಟುಕೊಂಡಿವೆ. ಅಧಿಕಾರ ರಾಜಕಾರಣದ ಜೊತೆಜೊತೆಗೆ ಮುತ್ಸದ್ಧಿ ರಾಜಕಾರಣದ ಅಗತ್ಯವನ್ನು ಪಕ್ಷಗಳು ಅರಿಯಬೇಕಾಗಿದೆ. ಜಾತಿ, ಹಣ, ತೋಳ್ಬಲ ಇತ್ಯಾದಿಗಳಿಂದಲೇ ಚುನಾವಣೆಗಳು ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಪ್ರಪಂಚದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅತ್ಯುತ್ತಮ ಸಂಸದೀಯ ಪಟುಗಳ ಅಭಾವ ಸೃಷ್ಟಿಯಾಗಿರುವುದಕ್ಕೆ ರಾಜಕೀಯ ಪಕ್ಷಗಳ ಕೊಡುಗೆ ದೊಡ್ಡದಿದೆ. ಕಳೆದ ಹದನಾರನೇ ಲೋಕಸಭಾ ಅವಧಿಯಲ್ಲಿ ಮಾತನ್ನೇ ಆಡದೇ ಇಡೀ ಐದು ವರ್ಷಗಳನ್ನು ಕಳೆದ ಸಂಸದರಿದ್ದಾರೆ. ದಿನಕಳೆದಂತೆ ಲೋಕಸಭಾ ಕಲಾಪದಲ್ಲಿ ಮುತ್ಸದ್ಧಿಗಳ ಕೊರತೆ ಕಂಡುಬರುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳಲ್ಲಾದರೂ ಅರ್ಹ, ದಕ್ಷ, ಪ್ರಾಮಾಣಿಕ, ಜನಪರ ಕಾಳಜಿ, ಸಾಮಾಜಿಕ ಜವಾಬ್ದಾರಿ, ದೂರದೃಷ್ಟಿಯುಳ್ಳ ಹಾಗೂ ವಾಗ್ಮಿಗಳಾಗಿರುವಂತಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಈಗಾಗಲೇ ಎಲ್ಲರೂ ತಿಳಿದಿರುವಂತೆ ನಿಜಕ್ಕೂ ಭಾರತ ಪ್ರಜಾಸತ್ತಾತ್ಮಕ ದೇಶವಾಗಿಲ್ಲ. ಅದಿನ್ನೂ ಸಾಧಿಸಬೇಕಾದ ದೂರದ ಕನಸಾಗಿಯೇ ಉಳಿದಿದೆ. ಈ ಕನಸು ನನಸಾಗಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈಗಿನ ಮಾನದಂಡಗಳನ್ನು ಪರಿಷ್ಕರಿಸಿಕೊಳ್ಳಬೇಕಾಗಿದೆ. ಈಗಿನಂತೆಯೇ ತಮ್ಮ ಹೊಗಳು ಭಟ್ಟರು, ಭಟ್ಟಂಗಿಗಳು, ಜಾತಿ, ಕುಟುಂಬ, ಮನೋಧರ್ಮ, ಧರ್ಮ, ಸಿದ್ಧಾಂತಗಳಿಗನುಗುಣವಾದಂತಹ ವ್ಯಕ್ತಿಗಳಿಗೇ ಮಣೆಹಾಕುವುದು ಮುಂದುವರೆದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದೃಢವಾಗುವ ಬದಲು ಕುಸಿಯುವ ಸಾಧ್ಯತೆಗಳೇ ಹೆಚ್ಚಾಗಿವೆ. 
ಪ್ರಶ್ನೆಗಳನ್ನು ಕೇಳದ್ದನ್ನೂ ಕ್ಷಮಿಸಬಹುದು ಆದರೆ ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಂಸದರು ನಡೆದುಕೊಂಡ ಅಸಂವಿಧಾನಿಕ ನಡೆಯನ್ನು ಕ್ಷಮಿಸುವುದು ಹೇಗೆ? ಇಂತಹ ಅಚಾತುರ‍್ಯಗಳು ಭವಿಷ್ಯದಲ್ಲಿ ನಡೆಯದಂತೆ ಈಗಲೇ ಪಕ್ಷಗಳು ಟಿಕೆಟ್ ನೀಡುವ ಸಮಯದಲ್ಲಿ ಎಚ್ಚರವಹಿಸಬೇಕಾಗಿದೆ. ಆ ಮೂಲಕ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲ ಪಕ್ಷಗಳು ಆರಂಭಿಸಬೇಕಿದೆ. ಗೂಂಡಾರಾಜ್ಯ, ಜಂಗಲ್ ರಾಜ್ಯಗಳ ಬದಲಿಗೆ ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಬೇಕಾಗಿದೆ. 


ಚುನಾವಣಾ ಆಯೋಗ ನಿಷ್ಠುರ ನಿಲುವು ಕೈಗೊಳ್ಳಲಿ 
                                                                     - ಪ್ರದೀಪ್ ಮಾಲ್ಗುಡಿ
ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಚುನಾವಣಾ ಆಯೋಗ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರನ್ವಯ ಪ್ರಸಕ್ತ ಚುನಾವಣೆಯಲ್ಲಿ ಕಪ್ಪುಹಣದ ಬಳಕೆಯನ್ನು ತಡೆಯುವ ಕೆಲಸಕ್ಕೆ ಕೈಹಾಕಿದೆ. ಆದರೆ, ನೂರಕ್ಕೆ ನೂರರಷ್ಟು ಇದರ ಚಲಾವಣೆಯನ್ನು ತಡೆಯುವುದು ಕಷ್ಟಸಾಧ್ಯವಾಗಬಹುದು. ಇಂತಹ ಕ್ರಮಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನಿವಾರ‍್ಯವಾದರೂ ಅದರ ಯಶಸ್ಸಿನ ಬಗ್ಗೆ ಎಲ್ಲರಲ್ಲೂ ಅನುಮಾನವಿದೆ. ಇತ್ತೀಚೆಗೆ ಬಾತ್ಮೀದಾರರು ನೀಡಿದ ಮಾಹಿತಿಯನ್ನಾಧರಿಸಿ, ತೆರಿಗೆ ವಂಚಿಸಲು ಕಳ್ಳಸಾಗಣೆಯಾಗುತ್ತಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಶಪಡಿಸಿಕೊಂಡ ಹಣವನ್ನೇ ಪೊಲೀಸ್ ಅಧಿಕಾರಿಗಳು ತಮ್ಮ ಕಿಸೆಗೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗೆ ರಕ್ಷಕರೇ ಭಕ್ಷಕರಾದಲ್ಲಿ ಯಾರನ್ನು ದೂರುವುದು? ಆದ್ದರಿಂದ ಚುನಾವಣಾ ಆಯೋಗದ ಸುಧಾರಣಾ ಕ್ರಮಗಳು ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ಜಾರಿಗೆ ಬರುವ ಸಾಧ್ಯತೆಗಳೆಡೆಗೆ ಅನುಮಾನವನ್ನು ಮೂಡಿಸುತ್ತಿವೆ. ಇಂತಹ ಪ್ರಸಂಗಕ್ಕೆ ಕಾರಣವಾಗಿರುವುದು ವ್ಯವಸ್ಥೆ. ಲಂಚ ಪಡೆಯುವುದು, ಕೊಡುವುದು ಎರಡೂ ಭ್ರಷ್ಟ ವ್ಯವಸ್ಥೆಯ ಮುಂದುವರಿಕೆಗೆ ಕಾರಣ. ಇತ್ತೀಚೆಗೆ ನಡೆದ ಬಹುತೇಕ ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ, ತಮ್ಮ ಸಿದ್ಧಾಂತಗಳಿಗೆ ಪೂರಕವಾದ ವ್ಯಕ್ತಿಗಳಿಗೆ ಮನ್ನಣೆ ನೀಡಲಾಗಿರುವುದು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಇಂತಹವರನ್ನು ಪ್ರತಿಷ್ಠಾಪಿಸಿರುವುದರಿಂದಾಗಿ ಅಕ್ರಮಗಳು ಸಕ್ರಮವಾಗುವ ಸಂಭವಗಳೇ ಹೆಚ್ಚಾಗಿವೆ.
ವಿಧಾನಸಭೆ ಅಥವಾ ಲೋಕಸಭಾ ಚುನಾವಣಾ ನಂತರದಲ್ಲಿ ಅಸ್ಥಿತ್ವಕ್ಕೆ ಬರುವ ಎಲ್ಲ ಸರ್ಕಾರಗಳೂ ತಮ್ಮ ಆಪ್ತ ವಲಯವನ್ನೇ ಅಧಿಕಾರ ಕೇಂದ್ರದ ಸುತ್ತ ನಿಯೋಜಿಸಿಕೊಳ್ಳುವ ಪರಿಪಾಠ ಇಂದು ನಿನ್ನೆಯದಲ್ಲ. ಅಲ್ಲದೆ, ಈ ಅಂಶವನ್ನು ಮನಗಂಡಿರುವ ಅಧಿಕಾರಿಗಳೂ ಮುಂದೆ ಅಧಿಕಾರ ಹಿಡಿಯುವವರ ಪರವಾಗಿ ಕೆಲಸ ನಿರ್ವಹಿಸುವ ಅಥವಾ ಸೋಲುವಂತಹವರ ಮನವಿಗಳಿಗೆ ಕಿವಿಗೊಡದಿರುವ ಪ್ರಸಂಗಗಳು ನಡೆಯುತ್ತವೆ. ಒಟ್ಟಿನಲ್ಲಿ ಮುಕ್ತ, ನ್ಯಾಯಸಮ್ಮತ, ಭ್ರಷ್ಟಾಚಾರರಹಿತ ಚುನಾವಣೆಗಳು ಇನ್ನೂ ಆದರ್ಶಗಳಾಗೆ ಉಳಿದಿವೆ ಎಂಬುದು ಸತ್ಯ. ಈ ಎಲ್ಲ ವಿಷಯಗಳನ್ನು ಗಮನಿಸಿ ಚುನಾವಣಾ ಆಯೋಗ ನಿಷ್ಠುರ ನಿಲುವುಗಳನ್ನು ಕೈಗೊಳ್ಳಬೇಕಾಗಿದೆ.  

ಪಡಿತರ ಹಂಚಿಕೆ ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ
                                                                                                       - ಪ್ರದೀಪ್ ಮಾಲ್ಗುಡಿ
    ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳಾಗಿರುವ ಕಿರು ಸಾಲ ಯೋಜನೆ, ಗುಡಿಕೈಗಾರಿಕೆಗಳ ಸಬ್ಸಿಡಿ, ರಿಯಾಯಿತಿ ದರದಲ್ಲಿ ಹಂಚಿಕೆಯಾಗುತ್ತಿರುವ ಸಿಲಿಂಡರ್ ಹಾಗೂ ಪಡಿತರ ಮತ್ತು ಸೀಮೆಎಣ್ಣೆ ಮೊದಲಾದವುಗಳನ್ನು ಸರಿಯಾಗಿ ಸೂಕ್ತ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರಗಳು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ರಾಜ್ಯದ ಆರು ಕೋಟಿ ಜನಸಂಖೆಯಲ್ಲಿ ಒಂದು ಕೋಟಿಗೂ ಹೆಚ್ಚಿನ ಅನ್ನಭಾಗ್ಯ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಹಾಗೂ ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ. ಆದರೆ, ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಗೌರವಯುತವಾಗಿ ಸರ್ಕಾರ ಹಾಗೂ ಅಧಿಕಾರಿಗಳು ನಡೆಸಿಕೊಳ್ಳುತ್ತಿಲ್ಲ. ಈ ಮಾಲೀಕರಿಗೆ ಸರ್ಕಾರದಿಂದ ಗೌರವ ಧನವೂ ಸಂದಾಯವಾಗುತ್ತಿಲ್ಲ. ಬದಲಿಗೆ ಕಮೀಶನ್ ಆಧಾರದಲ್ಲಿ ಅವರು ಜೀವನ ನಡೆಸಬೇಕಾಗಿದೆ. 
  ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ದಿನಕ್ಕೊಂದು ನಿಯಮವನ್ನು ಜಾರಿಗೆ ತರುತ್ತಿದ್ದಾರೆ. ಅದರ ಪ್ರಕಾರ; ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅರವತ್ತು ವಯೋಮಿತಿ ಮೀರಿರಬಾರದು, (ಕೇಂದ್ರ ಸರ್ಕಾರ ಒಂದೊಂದು ಇಲಾಖೆಗೆ ಒಂದೊಂದು ವಯೋಮಾನವನ್ನು ನಿಗದಿ ಪಡಿಸಿದೆ. ಅದರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ ೬೫ ವರ್ಷ, ರಾಜ್ಯ ಸರ್ಕಾರವು ಈ ವಯೋಮಿತಿಯನ್ನು ೬೨ಕ್ಕೇರಿಸಿದೆ. ಇನ್ನು ರಾಜಕಾರಣಿಗಳಿಗೆ ಯಾವುದೇ ವಯೋಮಿತಿಯಿಲ್ಲ!) ಒಂದು ತಿಂಗಳ ಮುಂಗಡ ದಾಸ್ತಾನಿಗೆ ಅವಕಾಶವಿರುವಷ್ಟು ವಿಶಾಲವಾದ ಜಾಗವಿರಬೇಕು, (ಇದು ಸರ್ಕಾರಿ ಸ್ವಾಮ್ಯದ ಉಗ್ರಾಣ ಸಾಮರ್ಥ್ಯದ ಮಿತಿಯನ್ನು ಎತ್ತಿ ತೋರಿಸುತ್ತದೆ. ಅನ್ನಭಾಗ್ಯದ ಅಪಾರ ಪ್ರಮಾಣದ ಪಡಿತರಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವ ವಿಶಾಲವಾದ ಉಗ್ರಾಣ ವ್ಯವಸ್ಥೆ ಸರ್ಕಾರದ ಸುಪರ್ದಿಯಲ್ಲಿಲ್ಲ. ಈ ನಿಯಮ ಜಾರಿಯಾದರೆ, ಅನ್ಯಾಯ, ಅಕ್ರಮಗಳು ಹೆಚ್ಚಾಗುವ ಸಂಭವವಿದೆ. ಏಕೆಂದರೆ, ಒಂದು ತಿಂಗಳ ಮುಂಗಡ ಪಡಿತರವನ್ನು ಮಾಲೀಕರು ನಿರ್ವಹಿಸಬೇಕಾಗುತ್ತದೆ. ಅದರಿಂದ ಮಾಲೀಕರು ಮತ್ತಷ್ಟು ಕಷ್ಟಗಳನ್ನು ಎದುರಿಸಲಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಎರಡು ತಿಂಗಳ ಮೊತ್ತವನ್ನು ಒಟ್ಟಿಗೆ ಕಟ್ಟಿ ಎಂಬ ಹೊಸ ವಾದವನ್ನು ಅಧಿಕಾರಿಗಳು ಹೂಡಬಹುದು.) ಮಾಲೀಕರನ್ನು ಹೊರತುಪಡಿಸಿ ಅಂಗಡಿಯಲ್ಲಿ ಕೆಲಸವನ್ನು ನಿರ್ವಹಿಸಬಾರದು, ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಕೆಲಸ ನಿರ್ವಹಿಸಬೇಕು ಹೀಗೆ ದಿನಕ್ಕೊಂದು ನಿಯಮಗಳು ಎದುರಾದರೆ ಪಡಿತರ ಹಂಚಿಕೆ ವ್ಯವಸ್ಥೆ ಸುಗಮವಾಗಿ ನಡೆಯುವುದಾದರೂ ಹೇಗೆ? ಸರ್ಕಾರಗಳ ಜನಪರ ಯೋಜನೆಗಳನ್ನು ದಿಕ್ಕುತಪ್ಪಿಸುವಂತಹ ನಿರ್ಣಯಯಗಳನ್ನು ಅಧಿಕಾರಿಗಳು ಜಾರಿಗೆ ತರುವ ಪ್ರಯತ್ನಗಳನ್ನು ಮಾಡುತ್ತಿರುವುದೇಕೆ? ಎಂಬ ಪ್ರಶ್ನೆಗಳು ಈ ನಿಯಮಗಳಿಂದ ಮೂಡುತ್ತಿವೆ. 
ಈಗಾಗಲೇ ಅನ್ನಭಾಗ್ಯ ಯೋಜನೆಯಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಅಪಾರ ಪ್ರಮಾಣದ ಹಣವನ್ನು ಮುಂಗಡವಾಗಿ ಡಿ.ಡಿ. ಮೂಲಕ ಸಲ್ಲಿಸಿ, ಇಲಾಖೆ ಪಡಿತರಗಳನ್ನು ಸರಬರಾಜು ಮಾಡಿದಾಗ  ಲಾರಿ ಬಾಡಿಗೆ ಹಾಗೂ ಪಡಿತರಗಳನ್ನು ಲೋಡ್  ಮತ್ತು ಅನ್‌ಲೋಡ್ ಮಾಡಿದ ಕೂಲಿಯನ್ನು ಸಲ್ಲಿಸಿ, ಪಡೆದುಕೊಂಡು ನಂತರ ಕಾರ್ಡುದಾರರಿಗೆ ಹಂಚಿಕೆ ಮಾಡಬೇಕಾಗಿದೆ. ಇದರ ಜೊತೆಗೆ ಈ ಅವಧಿಯಲ್ಲಿ ಲೋಡ್ ಹಾಗೂ ಅನ್‌ಲೋಡ್ ಸಮಯದಲ್ಲಿ ಸಂಭವಿಸುವ ನಷ್ಟವನ್ನೂ ಅಂಗಡಿ ಮಾಲೀಕರೆ ಭರಿಸಬೇಕಾಗಿದೆ. ಸೀಮೆಎಣ್ಣೆಯ ಪರಿಸ್ಥಿತಿ ಇದಕ್ಕೂ ಭಿನ್ನ. ಸೂಕ್ತ ತಂಪು ವಾತಾವರಣವಿಲ್ಲದಿದ್ದರೆ ಇದು ಆವಿಯಾಗುತ್ತದೆ ಅಥವಾ ಬಿಸಿಲಿನಲ್ಲಿ ಬ್ಯಾರೆಲ್‌ಗಳಿದ್ದರೆ ಹಿಗ್ಗಿ ಹೊರಚೆಲ್ಲಿ ನಷ್ಟ ಸಂಭವಿಸುತ್ತದೆ. ಡಿ.ಡಿ.ಯನ್ನು  ಮುಂಗಡವಾಗಿ ಪಡೆದು ತಾಲೂಕು ಕೇಂದ್ರಗಳಿಗೆ ಹೋಗಿ, ಅಲ್ಲಿನ ದಾಸ್ತಾನು ಮಳಿಗೆಗೆಳ ನಿರ್ವಾಹಕರಿಗೆ ಸಲ್ಲಿಬೇಕಾಗಿದೆ. ಅಲ್ಲದೆ ಇವರಿಗೆ ಯಾವುದೇ ಬಗೆಯ ಪ್ರಯಾಣ ಭತ್ಯೆ, ದಿನಭತ್ಯೆ, ಇ.ಎಸ್.ಐ., ಪಿ.ಎಫ್., ನಂತಹ ಸರ್ಕಾರಿ ಸೌಲಭ್ಯಗಳಾಗಲಿ, ನಿವೃತ್ತಿ ವೇತನ ಸೌಲಭ್ಯಗಳಾಗಲೀ ಲಭ್ಯವಿಲ್ಲ.  ಈ ಸಮಸ್ಯೆಗಳ ಜೊತೆಗೆ ಕಾರ್ಡುದಾರರು ಸಮಯಕ್ಕೆ ಸರಿಯಾಗಿ ಬಾರದೆ, ಸೂಕ್ತ ಹಣವನ್ನು ತಾರದೆ, ಮದುವೆ, ಮುಂಜಿ, ತಿಥಿ ಇತ್ಯಾದಿಗಳ ಹೆಸರಿನಲ್ಲಿ ಮಾಲೀಕರನ್ನು ಹೆಚ್ಚಿನ ಪಡಿತರಕ್ಕಾಗಿ ಪೀಡಿಸುತ್ತಿರುತ್ತಾರೆ. ಹಳ್ಳಿಗಳಲ್ಲಿನ ನ್ಯಾಯಬೆಲೆ ಅಂಗಡಿ ಮಾಲೀಕರ ದುಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಉದಾಹರಣೆಗೆ; ಹಳ್ಳಿಗಳಲ್ಲಿನ ಬಹುತೇಕ ಪಡಿತರ ಚೀಟಿದಾರರು ಭೂರಹಿತ ಕೃಷಿಕಾರ್ಮಿಕರು. ಇವರು ನಿಗದಿತ ಸಮಯದಲ್ಲಿ ಪಡಿತರವನ್ನು ಕೊಂಡೊಯ್ಯಲು ಬರುವುದಿಲ್ಲ. ಬದಲಾಗಿ ಅವರಿಗೆ ಬಿಡುವಾದಾಗ ಆಗಮಿಸುತ್ತಾರೆ. ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗಬೇಕೆಂದು ಆರು ಗಂಟೆಗೆ ಕೆಲವರು ಬಂದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸುಪ್ರಭಾತವನ್ನು ಹಾಡಿ ಎದ್ದೇಳಿಸಿದರೆ, ಇನ್ನು ಕೆಲವರು ರಾತ್ರಿ ಮಲಗಿದ ನಂತರವೂ ಬಂದು ಶುಭರಾತ್ರಿಯನ್ನು ಕೋರುತ್ತಿರುತ್ತಾರೆ! ವಾರದ ರಜೆಯ ಪರಿಕಲ್ಪನೆಯಿಲ್ಲದ, ಅಂಗಡಿಯಲ್ಲಿ ಹಾಕಿರುವ ವೇಳಾಪಟ್ಟಿಯನ್ನು ನೋಡುವ ವ್ಯವಧಾನವಿಲ್ಲದ ಕಾರ್ಡುದಾರರು ಹಾಗೂ ಇದನ್ನು ಪ್ರತಿತಿಂಗಳು ಹೇಳಿಹೇಳಿ ಸುಸ್ತಾಗಿರುವ ಮಾಲೀಕರ ನಡುವೆ ಸದಾ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಯ ಉಂಟಾಗುತ್ತಿರುತ್ತದೆ. ಇದರ ಜೊತೆಗೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿರುವಂತೆ ಇಲ್ಲಿಯೂ ಅನೇಕ ಬಗೆಯ ಅಲಿಖಿತ ನಿಯಮಗಳಿವೆ. ಇಲಾಖೆ ನಡೆಸುವ ಅನೇಕ ಕಾರ‍್ಯಕ್ರಮಗಳ ಖರ್ಚನ್ನು ನ್ಯಾಯಬೆಲೆ ಅಂಗಡಿ ಮಾಲೀಕರು  ಭರಿಸಬೇಕಾಗಿದೆ! 
ಅಂಗಡಿ ಮಾಲೀಕರನ್ನು ಹೊರತುಪಡಿಸಿ ಬೇರಾರೂ ಕೆಲಸ ನಿರ್ವಹಿಸುವಂತಿಲ್ಲ ಎಂಬ ನಿಯಮದ ಸಾಧ್ಯತೆಗಳೆಡೆಗೆ ನೋಡುವುದಾದರೆ; ಅನ್ನ ಭಾಗ್ಯ ಯೋಜನೆಯನ್ವಯ ಹಂಚಿಕೆಯಾಗುತ್ತಿರುವ ಅಕ್ಕಿ, ಗೋಧಿ ಹಾಗೂ ಸಕ್ಕರೆಯನ್ನು ದಿನವಿಡೀ ಒಬ್ಬ ವ್ಯಕ್ತಿ ಕಾರ್ಡಿಗೆ ಅವರು ಪಡೆದಿರುವ ಪಡಿತರದ ಮಾಹಿತಿಯನ್ನು ನಮೂದಿಸಿ, ಅವರ ಬಳಿ ಇರಬಹುದಾದ ಟೋಕನ್‌ಗಳನ್ನು ಪಡೆದು, ( ಇವರಲ್ಲಿ ಕೆಲವರು ಹಣ, ಪಡಿತರ ಕಾರ್ಡನ್ನು, ಚಿಲ್ಲರೆಯನ್ನು , ಟೋಕನ್ನನ್ನು, ಚೀಲವನ್ನು ತಂದಿರುವುದಿಲ್ಲ) ಹಣ ಪಡೆದು ಬಿಲ್‌ನಲ್ಲಿ ಈ ಎಲ್ಲ ಮಾಹಿತಿಯನ್ನು ನಮೂದಿಸಿ ಕಾರ್ಡುದಾರರಿಂದ ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಪಡೆದು ದಿನಕ್ಕೆ ಎಷ್ಟು ಜನಕ್ಕೆ ತೂಕ ಮಾಡಿ ಪಡಿತರವನ್ನು ಹಂಚಲು ಸಾಧ್ಯ? ನಿಯಮಗಳನ್ನು ಜಾರಿಗೆ ತರುವಾಗ ಆಚರಣಯೋಗ್ಯವಾದ, ಕಾರ‍್ಯಸಾಧುವಾದ ನಿಯಮಗಳನ್ನು ಕುರಿತು ಆಲೋಚಿಸಬೇಕಾಗಿದೆ. ಇಲ್ಲವಾದಲ್ಲಿ ಈ ನಿಯಮಗಳು ಜಾರಿಗೆ ಬರಲಾರವು.

 ಶಿಶು ನಾಪತ್ತೆ ತಪ್ಪಲಿ
ಪ್ರದೀಪ್ ಮಾಲ್ಗುಡಿ
ಮೈಸೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿರುವ ಶಿಶು ನಾಪತ್ತೆ ಪ್ರಕರಣವನ್ನು ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಕೌಟುಂಬಿಕ ಭಾವನೆಗಳಿಗೆ ತಳುಕು ಹಾಕಿಕೊಂಡಿರುವ ವಿಷಯ. ಗರ್ಭಾಂಕುರವಾದ ದಿನದಿಂದ ಮಗುವಿನ ಜನನದವರೆಗಿನ ಕುಟುಂಬದ ಸದಸ್ಯರ ಕಾಯುವಿಕೆ, ಆಸೆ, ಆಕಾಂಕ್ಷೆ, ಕಟ್ಟಿರುವ ಕನಸುಗಳ ಪ್ರಮಾಣ ಅನೂಹ್ಯ. ಇದ್ದಕ್ಕಿದ್ದಂತೆ, ಮಗುವನ್ನು ಕಳೆದುಕೊಂಡಿರುವ ತಾಯಿಗಾಗಿರುವ ಆಘಾತವನ್ನು ಪರಿಹರಿಸುವುದು ಹೇಗೆ?
ತನ್ನ ಮಗುವಿನ ಬಗೆಗೆ ಬೇರೆಲ್ಲರೂ ಯಾವ ಕನಸನ್ನಾದರೂ ಕಟ್ಟಿರಲಿ. ಆದರೆ ಸ್ವತಃ ತಾಯಿಯೊಬ್ಬಳು ತನ್ನ ಕರುಳ ಕುಡಿಯ ಬಗೆಗೆ ಕಂಡಿರುವ ಕನಸಿನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ತಾಯಿ ಮಗು ಬೇರೆಯಾಗಿರುವ ಈ ಪ್ರಕರಣಕ್ಕೆ ಪರಿಹಾರವನ್ನು ಕಂಡುಹಿಡಿಯುವುದು ಅಸಂಭವ. ಏಕೆಂದರೆ, ಈ ನೋವಿಗೆ ಯಾವ ಮದ್ದೂ ಮುಲಾಮಾಗಲಾರದು. ಮೊದಲ ತಿಂಗಳಿನಿಂದ ಜನನದವರೆಗಿನ ಒಂಬತ್ತು ತಿಂಗಳು ತಾಯಿ ತನ್ನ ಮಗುವಿನ ಪ್ರತಿಯೊಂದು ಕ್ಷಣವನ್ನೂ ಅನುಭವಿಸಿ ಮಗುವಿನ ಒಡನಾಡಿಯಾಗಿ ಸುಖಿಸುತ್ತಾಳೆ. ಮಗುವಿನ ಸಣ್ಣ ಚಲನವಲನಗಳು ತನ್ನ ಸ್ಪರ್ಶಸುಖಕ್ಕೆ ಲಭಿಸಿದಾಗ ಅವಳು ಪಡುವ ಆನಂದಕ್ಕೆ ಪಾರವೇ ಇಲ್ಲ. ಅನ್ನಾಹಾರ ಸೇವನೆಗಳಲ್ಲೂ ಮಗುವಿಗಾಗಿ ಅನೇಕ ಬದಲಾವಣೆಗಳಾಗುತ್ತವೆ. ಎಷ್ಟೋ ತಾಯಂದಿರು ತಮ್ಮ ಮಗುವಿಗಾಗಿ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ತನಗಲ್ಲದಿದ್ದರೂ ತನ್ನ ಮಗುವಿಗಾಗಿ ಜೀವ ಉಳಿಸಿಕೊಂಡಿರುವ ತಾಯಂದಿರೆಷ್ಟೋ?
ಈ ಯಾವ ಭಾವನೆಗಳಿಗೂ ಬೆಲೆಯಿಲ್ಲದಂತೆ ಮಗುವಿನ ನಾಪತ್ತೆ ಪ್ರಕರಣ ನಡೆಯುತ್ತಿವೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಬೇಜವಾಬ್ದಾರಿ ಪ್ರಕರಣಗಳು ಆಗಾಗ ನಡೆಯುತ್ತಲೆ ಇರುತ್ತವೆ. ಆದರೂ ಇಂತಹ ಭಾವನಾತ್ಮಕ ವಿಷಯಗಳಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗುತ್ತಲೇ ಇದ್ದಾರೆ. ಇಂತಹ ಕರ್ತವ್ಯಲೋಪಕ್ಕೆ ಹೊಣೆಗಾರರಾಗಿರುವವರನ್ನು ತಕ್ಷಣ ಸೇವೆಯಿಂದ ಬಿಡುಗಡೆ ಮಾಡಿ, ದಕ್ಷರನ್ನು ನೇಮಿಸಿ ಇಂತಹ ಅವಘಡಗಳು ನಡೆಯದಂತೆ ತಡೆಯಬೇಕಾಗಿದೆ.

                                 ಹೊಸ ಪಕ್ಷಗಳಿಗೆ ಮಾನ್ಯತೆ 
ಪ್ರದೀಪ್ ಮಾಲ್ಗುಡಿ
ಹೊಸ ರಾಜಕೀಯ ಪಕ್ಷಗಳಿಗೆ ಜನರಿಂದ ಮಾನ್ಯತೆ ಸಿಗುತ್ತಿಲ್ಲ. ಇದರ ಲಾಭ ಚಿರಪರಿಚಿತ ರಾಷ್ಟ್ರೀಯ ಪಕ್ಷಗಳಿಗೆ ಆಗುತ್ತಿದೆ. ಅಲ್ಲದೆ ಹೊಸ ರಾಜಕೀಯ ಪಕ್ಷಗಳು ಜನರನ್ನು ತಲುಪುವಲ್ಲಿ ವಿಫಲವಾಗುವುದಕ್ಕೆ ಚುನಾವಣಾ ಆಯೋಗ ಚುನಾವಣೆಯ ಸಮಯದಲ್ಲಿ ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಗಳು ಪ್ರಮುಖ ಕಾರಣವಾಗಿವೆ. ಕಳೆದ ಕೆಲವು ವರ್ಷಗಳಿಂದ ಹಂತಹಂತವಾಗಿ ಆಯೋಗವು ರಾಜಕೀಯ ಪಕ್ಷಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತ ಬಂದಿದೆ. ಅದರಲ್ಲಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್, ಪಕ್ಷಗಳ ಚಿಹ್ನೆಯನ್ನೊಳಗೊಂಡ ಪ್ಲಾಸ್ಟಿಕ್ ಪ್ರಚಾರ ಸಾಮಗ್ರಿಗಳನ್ನು ನಿಷೇಧಿಸಲಾಗಿದೆ.
ಇದರಿಂದಾಗಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಪರಿಚಿತವಾಗುವುದು ಕಷ್ಟಕರವಾಗುತ್ತಿದೆ. ಭಾರತದಲ್ಲಿ ಚುನಾವಣಾ ಅವಧಿಯಲ್ಲಿ ಅನೇಕ ರಾಜಕೀಯ ಪಕ್ಷಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ, ಈ ಹಿಂದೆ ಚುನಾವಣಾ ಪ್ರಚಾರದ ಮೇಲೆ ಹಿಡಿತವಿಲ್ಲದ ಕಾರಣ ಜನರಿಗೆ ತಮ್ಮ ಪಕ್ಷ, ಸಿದ್ಧಾಂತ, ಅಭ್ಯರ್ಥಿಗಳ ಸಾಧನೆಗಳು, ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಡುವ ಸಾಧ್ಯತೆ ಇತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಹೊಸ ಪಕ್ಷವೊಂದು ತಮ್ಮ ಕಾರ‍್ಯಕರ್ತರಿಗೆ ತಮ್ಮ ಪಕ್ಷದ ಚಿಹ್ನೆಯನ್ನು ಪರಿಚಿತಗೊಳಿಸುವುದು ತ್ರಾಸದಾಯಕವಾಗುತ್ತಿದೆ.
ಇಂತಹ ವಿಷಮ ಸನ್ನಿವೇಶದ ಪರಿಣಾಮ ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ಪರಿಚಿತವಾಗಿರುವ ಕಾರಣದಿಂದ ಬಹುತೇಕ ಮತಚಲಾಯಿಸಲು ಬರುವ ಮತದಾರರು ಹಸ್ತದ ಗುರುತು, ಕಮಲದ ಗುರುತುಗಳನ್ನು ಪತ್ತೆಹಚ್ಚುತ್ತಾರೆ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬರುವ ಪಕ್ಷಗಳ ಗುರುತುಗಳನ್ನು ಇಷ್ಟು ಸುಲಭವಾಗಿ ಪತ್ತೆಹಚ್ಚಲಾಗದು. ಜತೆಗೆ ಮತದಾನದ ವೇಳೆಯಲ್ಲಿ ಒಬ್ಬ ವ್ಯಕ್ತಿಗೆ ಅಲ್ಲಿ ಯೋಚಿಸಿ, ತಮ್ಮ ಆಯ್ಕೆಯ ಅಭ್ಯರ್ಥಿಯ ಪಕ್ಷ, ಗುರುತು, ಹೆಸರುಗಳನ್ನು ಹುಡುಕುವಷ್ಟು ವ್ಯವಧಾನವಿರುವುದಿಲ್ಲ. ಏಕೆಂದರೆ, ಮತದಾನದ ಮೂಲಕ ನಾವು ನಮ್ಮ ಅತ್ತ್ಯುನ್ನತ ಜವಾಬ್ದಾರಿಯೊಂದನ್ನು ನಿರ್ವಹಿಸುತ್ತಿದ್ದೇವೆಂಬ ತಿಳುವಳಿಕೆ ಇನ್ನೂ ಸಾರ್ವಜನಿಕರಲ್ಲಿ ಮೂಡಿಲ್ಲ. ಕೆಲವು ಸಂದರ್ಭದಲ್ಲಂತೂ ಮತದಾನಕ್ಕಾಗಿ ನೂಕುನುಗ್ಗಲು ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮತದಾರರು ಗೊಂದಲಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಹೊಸ ಭರವಸೆ, ಆಶಯ, ತತ್ವ, ಸಿದ್ಧಾಂತಗಳನ್ನು ಜನರಲ್ಲಿ ಬಿತ್ತುವ ಪಕ್ಷಗಳನ್ನು ಕಟ್ಟುವ ಮುತ್ಸದ್ಧಿ ರಾಜಕಾರಣಿಗಳ ಕೊರತೆಯಿದೆ. ಇದರ ಜತೆಗೆ ಇತ್ತೀಚೆಗೆ ಜನ್ಮತಾಳುತ್ತಿರುವ ಪಕ್ಷಗಳು ತಮ್ಮ ವೈಯಕ್ತಿಕ ಅಸಹನೆ, ಎದುರಾಳಿಯನ್ನು ಮಟ್ಟ ಹಾಕುವ ಹುನ್ನಾರ, ಅಧಿಕಾರ ಲಾಲಸೆ, ಕೌಟುಂಬಿಕ ರಾಜಕಾರಣ, ವೈಯಕಿಕ ಲಾಭಾಕಾಂಕ್ಷೆಗಳಿಂದಾಗಿ ರೂಪುಗೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಈ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಉಂಟಾಗುತ್ತಿಲ್ಲ. ಈ ಕಾರಣಗಳಿಂದಾಗಿಯೂ ಹೊಸ ಪಕ್ಷಗಳನ್ನು ಜನ ತಿರಸ್ಕರಿಸುತ್ತಿದ್ದಾರೆ.

Wednesday, 23 April 2014

ಸಾಹಿತಿಗಳ ಪಕ್ಷಪಾತ: ಬಾಯಿಂದ ಉಲ್ಕಾಪಾತ
ಪ್ರದೀಪ್ ಮಾಲ್ಗುಡಿ
ಇಷ್ಟು ದಿವಸ ಕರ್ನಾಟಕಕ್ಕೆ ಸೀಮಿತವಾಗಿದ್ದ ಸಾಹಿತಿಗಳ ಪಕ್ಷಪ್ರೀತಿ ಇಂದು ನವದೆಹಲಿ ತಲುಪಿದೆ. ಆಜನ್ಮ ವೈರಿಗಳಂತಾಡುವ ಎರಡು ಗುಂಪಿನ ಸಾಹಿತಿಗಳು ಪರಸ್ಪರರ ಮೇಲೆ ವಾಗ್ಬಾಣಗಳ ದಾಳಿ ನಡೆಸಿದ್ದಾರೆ. ಎಷ್ಟೇ ಆಗಲಿ ಸರಸ್ವತಿ ಪುತ್ರರಲ್ಲವೇ? ಅದಕ್ಕಾದರೂ ಗೌರವ ಕೊಡುವ ಸಲುವಾಗಿ ಈ ರೀತಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿರಬಹುದು. ಇರಲಿ. ’ಕೌಟುಂಬಿಕ ರಜಕಾರಣ ಮಾಡುವ ಕಾಂಗ್ರೆಸ್‌ಗಿಂತ, ಚಹಾ ಮಾರುವ ಹುಡುಗನನ್ನು ಪ್ರಧಾನಿ ಮಾಡಬೇಕೆಂದು’  ಡಾ.ಎಸ್.ಎಲ್.ಭೈರಪ್ಪನವರು ಪಣ ತೊಟ್ಟಿದ್ದಾರೆ. ಇವರನ್ನು, ಇವರ ಸಾಹಿತ್ಯ ತತ್ವವನ್ನು ಕಾಲದಿಂದಲೂ ವಿರೋಧಿಸಿಕೊಂಡು ಬಂದಿರುವ ಪ್ರೊ.ಯು.ಆರ್.ಅನಂತಮೂರ್ತಿಯವರು, ’ಕೋಮುವಾದಿಯ ಕೈಗೆ ಈ ದೇಶದ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಹಾಗೂ ಆಪ್ ಬೆಂಬಲಿಸಬೇಕೆಂದು’ ಕರೆ ಕೊಡುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಾಣೆಯ ಸಮಯದಲ್ಲಿ  ಪ್ರಗತಿಪರರೆಂದು ಮಾಧ್ಯಮದವರಿಂದ ಕರೆಸಿಕೊಂಡಿದ್ದ ಸಾಹಿತಿಗಳ ಗುಂಪೊಂದು ಕಾಂಗ್ರೆಸ್ ಪರ ಬಹಿರಂಗ ಪ್ರಚಾರಕ್ಕಿಳಿದಿತ್ತು. ಇದೇ ಮಾಧ್ಯಮದವರ ಪರಿಣಾಮದಿಂದಾಗಿ  ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಸರಣಿ ಹಗರಣಗಳು ಒಂದಾದ ನಂತರ ಒಂದು ಬಯಲಾಗಿದ್ದವು. ಇದರ ಪರಿಣಾಮದಿಂದ ಕರ್ನಾಟಕದಲ್ಲಿ ಆಡಳಿತ ವಿರೋಧೀ ಅಲೆ ಎದ್ದಿತು. ಆದರೆ ಇದನ್ನು ಕೆಲ ಸಾಹಿತಿಗಳ ಗುಂಪು ತಮ್ಮ ಬಹಿರಂಗ ಪ್ರಚಾರದಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಭ್ರಮೆಗೆ ಒಳಗಾಯಿತು. ಇದನ್ನು ಸ್ವತಃ ಸಿ.ಎಂ. ಸಿದ್ದರಾಮಯ್ಯನವರೂ ನಂಬಿದಂತಿದೆ. ಇದರ ಪರಿಣಾಮ ಮತ್ತೆ ಲೋಕಸಭೆ ಚುನಾವಣೆಯ ವೇಳೆಯಲ್ಲಿಯೂ ಈ ಸಾಹಿತಿಗಳು ಕಾಂಗ್ರೆಸ್ ಪರವಾಗಿ ಬಹಿರಂಗ ಚುನಾವಣಾ ಪ್ರಚಾರಕ್ಕಿಳಿದರು.
ಸಾಹಿತ್ಯಕ ವಲಯದಲ್ಲಿ ಎಡ, ಬಲ, ಬುದ್ಧಿಜೀವಿ, ಗಂಭೀರ, ಜನಪ್ರಿಯ, ಸಾಮಾನ್ಯ ಹಾಗೂ ಪ್ರಗತಿಪರ-ಪ್ರತಿಗಾಮಿ ಎಂಬ ಗುಂಪುಗಳು ಬಹಳ ಕಾಲದಿಂದ ಅಸ್ತಿತ್ವದಲ್ಲಿವೆ. ಇವರಲ್ಲಿ ಮೊದಲ ಮೂರು ಗುಂಪಿನವರು ಉಳಿದವರನ್ನು ಉಳಿದ ಮೂರು ಗುಂಪಿಗೆ ಸದಾ ಸೇರಿಸುವ, ಕೆಲವೊಮ್ಮೆ ತಾವೇ ಇನ್ನೆರಡು ಗುಂಪುಗಳಿಗೆ ಸೇರುವ ಪ್ರಯತ್ನಗಳನ್ನು ಮಾಡುತ್ತಿರುವುದು ಹೊಸದಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮ್ಮನಿದ್ದ ಒಂದು ಗುಂಪು ಈಗ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಮಾಡಲುತ್ಸುಕವಾಗಿದೆ. ಈ ಎರಡೂ ಗುಂಪಿನವರು ಒಂದು ಕಾಲಕ್ಕೆ ಹೆಗಲ ಮೇಲೆ ಕೈ ಹಾಕಿಕೊಂಡೋ ಅಥವಾ ಗುರು-ಶಿಷ್ಯರಾಗಿಯೋ ವರ್ತಿಸಿದವರು. ಉದಾಹರಣೆಗೆ; ಪ್ರೊ.ಕೆ.ಮರುಳಸಿದ್ದಪ್ಪನವರಿಗೆ ಪ್ರೊ.ಎಂ.ಚಿದಾನಂದಮೂರ್ತಿಯವರು ಪಿಎಚ್.ಡಿ., ಪದವಿಗೆ ಮಾರ್ಗದರ್ಶಕರಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಈಗಲೂ ಮರುಳಸಿದ್ದಪ್ಪನವರ ’ಆಧುನಿಕ ಕನ್ನಡ ನಾಟಕ’ ಕೃತಿ ರಾರಾಜಿಸುತ್ತಿದೆ. ಇನ್ನು ಗಿರೀಶ್ ಕಾರ್ನಾಡ್ ಅವರು ಡಾ.ಎಸ್.ಎಲ್.ಭೈರಪ್ಪನವರ ’ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಬಿ.ವಿ.ಕಾರಂತರ ಜತೆಗೆ ಸಿನಿಮಾ ಮಾಡಿದ್ದರು. ಆಗ ಇಲ್ಲದ ದ್ವೇಷಗಳು, ತಾತ್ವಿಕ ಭಿನ್ನಾಭಿಪ್ರಾಯಗಳು, ಎಡ, ಬಲ ವಾದಗಳು ಕಾಲಾನಂತರದಲ್ಲಿ ಪರಸ್ಪರ ಎದುರಾದವು. ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಶ್ರದ್ಧಾವಂತ ಹಿಂದೂವಾದಿಗಳು ಹಾಗೂ ಹಿಂದೂ ಧರ್ಮದ ಕಟು ವಿಮರ್ಶಕರು ವಿರೋಧೀ ಗುಂಪುಗಳಾಗಿ ಸೆಣಸುತ್ತಿದ್ದಾರೆ.
ಇಲ್ಲಿ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಜಾತಿ, ಕೋಮು, ಧರ್ಮಗಳು ಕೆಲಸ ಮಾಡುತ್ತಿವೆ. ಇದನ್ನು ಸ್ವತಃ ಈ ಎರಡೂ ಗುಂಪುಗಳು ಆತ್ಮಸಾಕ್ಷಿಯಿಂದ ಅವಲೋಕಿಸಿಕೊಳ್ಳಬೇಕಾಗಿದೆ. ಇನ್ನೊಂದು ಅವರ ಕೃತಿ ಜನಪ್ರಿಯವಾಗುತ್ತಿದೆ ಎಂದರೆ ಇವರಿಗೆ ಅಸಹನೆ. ಇವರ ಕೃತಿ ಜನಪ್ರಿಯವಾಗುತ್ತಿದೆ ಎಂದರೆ ಅವರಿಗೆ ಅಸಹನೆ. ಇಲ್ಲಿ ಜಯ ಯಾರಿಗೆಂಬುದು ಇನ್ನೂ ನಿಶ್ಚಯವಾಗಿಲ್ಲ. ಆದರೆ, ವಿರೋಧೀ ಪಾಳೆಯದವರ ಜಯದ ಕನಸು ಪರಸ್ಪರರಿಗೆ ದುಃಸ್ಪಪ್ನವಾಗಿ ಕಾಡುತ್ತಿದೆ. ಇದರ ಪರಿಣಾಮ ಅವರಿಗೆ ಇವರು, ಇವರಿಗೆ ಅವರು ಕೆಸರೆರಾಚಾಡುತ್ತಿದ್ದಾರೆ. ಇದರಿಂದ ನೋಡುವವರಿಗೆ ರೋಮಾಂಚನ ಮೂಡುತ್ತಿದೆ.

Monday, 21 April 2014

ನಿಜದ ನಾಡೋಜನನ್ನು ನೆನೆದು
                                                                                                                       ಪ್ರದೀಪ್ ಮಾಲ್ಗುಡಿ
ಕನ್ನಡದ ಪ್ರಮುಖ ಸಂಸ್ಕೃತಿ ಚಿಂತಕರು ಹಾಗೂ ಪ್ರಾಧ್ಯಾಪಕರಾದ ಕಿ.ರಂ.ನಾಗರಾಜ ಅವರು ಸದಾ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಮೊದಲಾದ ಬಹುಶಿಸ್ತೀಯ ವಾಗ್ವಾದಗಳೊಡನೆ ಮುಖಾಮುಖಿಯಾಗುತ್ತಿದ್ದರು. ಸಾಹಿತ್ಯ (ಅಭಿಜಾತ, ಸಮಕಾಲೀನ, ಜಾನಪದ, ತೌಲನಿಕ), ಭಾಷಾವಿಜ್ಞಾನ, ಸಾಹಿತ್ಯ ಚರಿತ್ರೆ, ಕಾವ್ಯಮೀಮಮಾಂಸೆ,  ವಿಮರ್ಶಾ ಸಿದ್ಧಾಂತಗಳು ಮುಂತಾದ ಕ್ಷೇತ್ರಗಳಲ್ಲಿ ಅವರಿಗಿದ್ದ ನಿರಂತರವಾದ ಆಸಕ್ತಿ, ಸಾಹಿತ್ಯದೆಡೆಗಿನ ಉಗ್ರ ನಿಷ್ಠೆ, ಸಾಹಿತ್ಯದ ಮೇಲಿನ ಅಪಾರ ನಂಬುಗೆಗಳ ಕಾರಣದಿಂದಾಗಿ ಅವರು ಸಾಹಿತ್ಯದ ವಕ್ತಾರರಾಗಿದ್ದರು. ನಿಜದ ನಾಡೋಜರಾಗಿದ್ದ ಕಿ.ರಂ. ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪಠ್ಯಗಳ ಆಚೆಗೂ ಅನೇಕರನ್ನು ಒಳಗೊಂಡವರಾಗಿದ್ದರು.
ಸಾಹಿತ್ಯ, ಭಾಷಾವಿಜ್ಞಾನ, ಸಾಹಿತ್ಯ ಚರಿತ್ರೆ, ಕಾವ್ಯಮೀಮಮಾಂಸೆ,  ವಿಮರ್ಶಾ ಸಿದ್ಧಾಂತಗಳು ಮುಂತಾದ ಕ್ಷೇತ್ರಗಳಲ್ಲಿ ಆಳವಾದ ತಿಳುವಳಿಕೆಯಿತ್ತು. ಕಿ.ರಂ.,  ಮೇಲಿನ ಬಹುಶಿಸ್ತೀಯ ಜ್ಞಾನವನ್ನು ಅಧ್ಯಾಪನದ ಸಂದರ್ಭದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದರು. ಇದರ ಪರಿಣಾಮದಿಂದಾಗಿ ವಿದ್ಯಾರ್ಥಿಗಳು ಅನೇಕ ಶಿಸ್ತುಗಳ ಜ್ಞಾನವನ್ನು ಏಕಕಾಲಕ್ಕೆ ಪಡೆಯಬಹುದಾಗಿತ್ತು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ೨೦೦೭-೦೮ರಲ್ಲಿ ಕಿ.ರಂ.ರವರು ನಮಗೆ ಅತಿಥಿ ಉಪನ್ಯಾಸಕರಾಗಿ ತರಗತಿಗಳನ್ನು ನಡೆಸುತ್ತಿದ್ದರು. ಜಿ.ರಾಜಶೇಖರ್‌ರವರ ’ಯಶೋಧರ ಚರಿತೆಯ ದ್ವಂದ್ವ ವಿನ್ಯಾಸ’, ಕೆ.ವಿ.ನಾರಾಯಣರವರ ’ಕನ್ನಡಿಗಳು ಇನ್ನು ಸಾಕು’, ರಾಜೇಂದ್ರ ಚೆನ್ನಿಯವರ ’ಕುಸುಮಬಾಲೆಯ ನಿರಚನವಾದಿ ಓದು’, ಡಿ.ಆರ್.ನಾಗರಾಜ್ ಅವರ ’ಕನ್ನಡ ರಾಷ್ಟೀಯತೆಯ ಸ್ವರೂಪ’, ಮೊದಲಾದ ವಿಮರ್ಶಾ ಲೇಖನಗಳ ಜೊತೆಗೆ ’ಸ್ಯಾಫೋ ಕಾವ್ಯ’, ’ಓಡಿಸ್ಸಿ’, ’ಅಭಿಜ್ಞಾನ ಶಾಕುಂತಲ’ ಮುಂತಾದ ಪಠ್ಯಗಳನ್ನು ಬೋಧಿಸುತ್ತಿದ್ದರು.
ಸರ್ ಈ ಕವನ ಅರ್ಥ ಆಗ್ಲಿಲ್ಲ ಸರ್ ಎಂದರೆ ಅರ್ಥ ಯಾಕ್ರೀ ಮಾಡ್ಕೊಳ್ಳೋಕ್ ಹೋದ್ರಿ?  'ಕಾವ್ಯದ ಓದು  ಎಂದರೆ ಅದೊಂದು ಪ್ರಯಾಣ ಕಣ್ರೀ' ಎಂದು ಅವರದೇ ಆದ ಶೈಲಿಯಲ್ಲಿ ನಗುತ್ತಿದ್ದರು. ಬೇಂದ್ರೆಯವರು ಮಹಾಕಾವ್ಯ ಬರೆದಿಲ್ವಲ್ಲ ಸಾರ್? ಎಂದಾಗ ಯಾಕ್ರೀ ಬರೀಬೇಕು? ಎಂದು ಪ್ರಶ್ನಿಸಿ ತಬ್ಬಿಬ್ಬಾಗಿಸಿದ್ದರು. ಆ ಕಾಲಕ್ಕೆ ನನಗೆ ಮಹಾಕಾವ್ಯ ಬರೆದವರಷ್ಟೇ ಸತ್ವಶಾಲಿಯಾದ ಕವಿ ಎಂಬ ಅನಿಸಿಕೆ ಇತ್ತು. ಮುಂದಿನ ದಿನಗಳಲ್ಲಿ ಕಿ.ರಂ. ಈ ಅಭಿಪ್ರಾಯವನ್ನು ಬದಲಿಸಿದರು.
ಬೋಧನೆಯ ಸಂದರ್ಭದಲ್ಲಿ ಅವರದು ಮೌಖಿಕ ಸಂಪ್ರದಾಯ. ಪಠ್ಯಕ್ಕೆ ಸಂಬಂಧಿಸಿದ ಅನೇಕ ಕವನ, ಪಠ್ಯ, ಪ್ರಸಂಗಗಳನ್ನು ಬೆರಳನ್ನು ಉಜ್ಜಿ ಕೊಳ್ಳುತ್ತಾ, ನೆನಪಿನಿಂದ ಎತ್ತಿಕೊಂಡು ಹಾಗೇ ಉದ್ಧರಿಸಿ, ಸಂದರ್ಭಕ್ಕೆ ತಕ್ಕಂತೆ ವ್ಯಾಖ್ಯಾನಿಸಿ - ಬೋಧನೆಯನ್ನು ಆಕರ್ಷಕ ಹಾಗೂ ಅರ್ಥಪೂರ್ಣಗೊಳಿಸುತ್ತಿದ್ದರು. ಅವರು ತರಗತಿಗೆ ಬರುವುದು ಸಮಯಕ್ಕೆ ಸರಿಯಾಗಿದ್ದರೂ ಎಂದೂ ಒಂದೇ ಗಂಟೆಗೆ ತರಗತಿಯನ್ನು ಮುಗಿಸುತ್ತಿರಲಿಲ್ಲ. ಗಂಟೆಯ ಸೀಮಿತ ವೃತ್ತಕ್ಕೆ ಸಿಕ್ಕು ಬೋಧಿಸುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಒಂದು ವಿಷಯಕ್ಕೆ ಸೀಮಿತವಾಗಿ ಅವರು ಎಂದೂ ಬೋಧಿಸಿದ ನೆನಪಿಲ್ಲ. ವಿಮರ್ಶೆಯಿರಲಿ,  ಪುನರ್ಮನನ ಶಿಬಿರಗಳ ಅವರ ಬೋಧನೆಯಾಗಲಿ, ಪುಸ್ತಕ ಬಿಡುಗಡೆಯ ಮಾತುಗಳಾಗಿರಲಿ, ಪಠ್ಯಗಳ ಬೋಧನೆಯಿರಲಿ, ಕಾವ್ಯಮಂಡಲದ ಎಂ.ಫಿಲ್., ತರಗತಿಗಳಿರಲಿ ಅಥವಾ ಅವರು ಇಷ್ಟಪಡುವ ಪಟ್ಟಾಂಗ  ಹೊಡೆಯುವ ಹರಟೆಗಳಿರಲಿ - ಈ ಎಲ್ಲ  ಸಂದರ್ಭಗಳಲ್ಲೂ ಮೀಮಾಂಸೆ, ವಿಮರ್ಶೆ, ಭಾಷಾವಿಜ್ಞಾನದ ಅನೇಕ ಆಳವಾದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಹಿಡಿದು, ಮಿದಿದು ವ್ಯಾಖ್ಯಾನಿಸುತ್ತಿದ್ದ ಪರಿ ಅನನ್ಯವಾದುದು.
ಎಂ.ಎ., ಓದುವಾಗಿನ ಅವರ ಕೆಲಕಾಲದ ಒಡನಾಟವನ್ನು ಶಾಶ್ವತಗೊಳಿಸಿಕೊಳ್ಳುವ ತವಕ ಲಕ್ಷ್ಮೀಕಾಂತ್, ಪುಟ್ಟರಾಜ ಹಾಗೂ ನನಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಅವರ ಮಾತುಗಳನ್ನು ದಿನವಿಡೀ ಕೇಳುವ ಬಯಕೆಯಾಗುತ್ತಿತ್ತು. ಕಾರಣಾಂತರಗಳಿಂದ ನಾವು ದ್ವಿತೀಯ ಎಂ.ಎ., ಪ್ರವೇಶಿಸಿದ ನಂತರ ನಮ್ಮ ಪ್ರೀತಿಯ ಮೇಷ್ಟ್ರು ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲವೆಂದು, ತರಗತಿಯ ವೇಳಾಪಟ್ಟಿಯನ್ನು ನೋಡಿದಾಗಲೇ ನಮಗೆ ತಿಳಿದಿದ್ದು. ಆ ನಂತರ ನಮಗೆ ಒಂದು ರೀತಿಯ ಅನಾಥ ಪ್ರಜ್ಞೆ ಕಾಡತೊಡಗಿತು. ಕಳೆದ ವರ್ಷ ನಮ್ಮ ಆತಂಕಗಳನ್ನು ಸ್ವಲ್ಪವಾದರೂ ಕಡಿಮೆ ಮಾಡುತ್ತಿದ್ದ ಕಿ.ರಂ. ಪಾಠವಿಲ್ಲದ ಎಂ.ಎ., ತರಗತಿಗಳನ್ನು ನೆನಪಿಸಿಕೊಂಡಷ್ಟು ನೆಮ್ಮದಿ ಇಲ್ಲದಾಯಿತು. ಆದರೆ ನಾವು ಅಸಹಾಯಕರಾಗಿದ್ದೆವು. ಕಿ.ರಂ. ಸ್ವತಃ ಮತ್ತೆ ಇನ್ನೆಂದೂ ಕನ್ನಡ ಅಧ್ಯಯನ ಕೇಂದ್ರಕ್ಕೆ ಕಾಲಿಡುವುದಿಲ್ಲವೆಂದು ನಿರ್ಧರಿಸಿದಂತಿತ್ತು. ಆ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೆ ಬಂದರೂ ಕನ್ನಡ ಅಧ್ಯಯನ ಕೇಂದ್ರಕ್ಕೆ ಅವರು ಕಾಲಿಡಲಿಲ್ಲ.
ಆದರೆ  ನಾವು ಅವರ ಬೆನ್ನು ಬಿದ್ದೆವು. ವಿವಿಧ ಕ್ಷೇತ್ರದ ಹಿರಿಯರಿಂದ ಕಿರಿಯರವರೆಗೂ ಕಿ.ರಂ.ರವರು ತೋರಿಸುತ್ತಿದ್ದ ಪ್ರೀತಿ, ನೀಡುತ್ತಿದ್ದ ಗೌರವ ನಮ್ಮನ್ನು ಅವರತ್ತ ಸೆಳೆಯುತ್ತಿತ್ತು. ಆಗ ಅವರ ಮನೆಗೆ ನಮ್ಮ ಓಡಾಟ, ಒಡನಾಟ ಶುರುವಾಯಿತು.  ಈ ಅವಧಿಯಲ್ಲೇ ಕಿ.ರಂ. ಕುರಿತು ನಿಜದ ನಾಡೋಜ ಅಭಿನಂದನಾ ಗ್ರಂಥವನ್ನು ತರಬೇಕೆಂಬ ಚರ್ಚೆ ಆರಂಭವಾಯಿತು. ಆದರೆ ಲೇಖನಗಳನ್ನು ಕಿ.ರಂ. ಒಡನಾಡಿಗಳು, ಶಿಷ್ಯರು, ಸ್ನೇಹಿತರ ಬಳಿ ಕೇಳಿದಾಗ ಈಗಾಗಲೇ ಕಿ.ರಂ. ಅಭಿನಂದನಾ ಸಮಿತಿ ರಚನೆಯಾಗಿದೆ. ಲೇಖನಗಳನ್ನು ಅವರಿಗೆ ಕೊಟ್ಟಿದ್ದೇವೆ ಎಂದು ಅನೇಕರು ತಿಳಿಸಿದರು. ದೊಡ್ಡವರು ಈ ಕೆಲಸ ಮಾಡುತ್ತಿರುವಾಗ ಒಳ್ಳೆಯ ಅಭಿನಂದನಾ ಗ್ರಂಥವನ್ನು ನಿರೀಕ್ಷಿಸುತ್ತಾ ನಾವು ಕಿ.ರಂ. ಜೊತೆಗೆ ಒಡನಾಟವನ್ನು ಮುಂದುವರೆಸಿದೆವು. ಆದರೆ ಆ ಅಭಿನಂದನಾ ಗ್ರಂಥ ಇನ್ನೂ ಬಂದಿಲ್ಲ. ಈ ನಡುವೆಯೇ ಕಿ.ರಂ. ನಮ್ಮಿಂದ ದೈಹಿಕವಾಗಿ ದೂರವಾದರು.
ಈ ಆಘಾತದಿಂದ ನಮ್ಮಲ್ಲನೇಕರು ಎಲ್ಲವನ್ನೂ ಕಳೆದುಕೊಂಡಂತಹ ಒತ್ತಡಕ್ಕೆ ಸಿಕ್ಕಿಬಿದ್ದೆವು. ಕುವೆಂಪು, ಬೇಂದ್ರೆ, ಅಡಿಗ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಲಂಕೇಶ್, ನಂಜುಂಡಸ್ವಾಮಿ, ತೇಜಸ್ವಿ ಮೊದಲಾದವರನ್ನು ಕುರಿತ ಸೆಮಿನಾರ್, ಕಿ.ರಂ. ಅವರು ಕಾವ್ಯಮಂಡಲದಿಂದ ಪ್ರಕಟಿಸಬೇಕೆಂದುಕೊಂಡಿದ್ದ; ನಮ್ಮಂತಹ ಯುವಕರಿಂದ ಸಂಪಾದಿತ ಕವನ, ಕತೆ, ಪ್ರಬಂಧ, ವಿಮರ್ಶೆ, ವೈಚಾರಿಕ, ಮೀಮಾಂಸೆ ಹೀಗೆ ವಿವಿಧ ಬಗೆಯ ಸಂಕಲನಗಳು ಹಾಗೂ ಅವರ ಮಾರ್ಗದರ್ಶನದಲ್ಲಿ ನಾವು ಹೊರತರಬೇಕೆಂದುಕೊಂಡ ಮಾಯೆ ಮಾಸಪತ್ರಿಕೆ... ಇನ್ನೂ ಇಂತಹ ಸಾವಿರಾರು ಕನಸುಗಳು... ಹಾಗೇ ಉಳಿದಿವೆ.
ಹೀಗೆ ದಿನಗಳು ಪೇಲವವಾಗಿ ನಡೆಯುತ್ತಿರಬೇಕಾದರೆ ಅವರ ನೆನಪಿನಲ್ಲಿ ಒಂದು ಕಾರ‍್ಯಕ್ರಮ ಮಾಡಬೇಕೆಂದು ಸಂಸ ಸುರೇಶ್, ಲಕ್ಷ್ಮೀಕಾಂತ್ ಮತ್ತು ನಾನು ನಿರ್ಧರಿಸಿದೆವು. ಆಗ ನಮ್ಮ ಹಳೆಯ ನಿಜದ ನಾಡೋಜ ಅಭಿನಂದನಾ ಗ್ರಂಥವನ್ನು ತರಬೇಕೆಂಬ ಆಸೆ ಮತ್ತೆ ಚಿಗುರೊಡೆಯಿತು. ಕಿ.ರಂ. ಬಗೆಗೆ ಇದುವರೆಗೆ ಅಲ್ಲಲ್ಲಿ ಪ್ರಕಟವಾದ ಲೇಖನಗಳು ಹಾಗೂ ಕವಿತೆಗಳ ಜೊತೆಗೆ ಹೊಸ ಲೇಖನಗಳು, ಅವರ ಕೃತಿಗಳನ್ನು ಕುರಿತ ಲೇಖನಗಳನ್ನು ಸಂಪಾದಿಸಬೇಕೆಂದು ಸ್ನೇಹಿತರು ನನಗೆ ಜವಾಬ್ದಾರಿಯನ್ನು ವಹಿಸಿದರು. ಅಭಿನಂದನಾ ಗ್ರಂಥಗಳನ್ನು ಓದಿದ್ದ ನನಗೆ ಆ ಗ್ರಂಥಗಳಲ್ಲಿರುವ ಅಭಿನಂದನಾ ಸಮಿತಿ, ಸಂಪಾದಕ ಮಂಡಳಿ, ಸಲಹಾ ಸಮಿತಿ, ಪುಸ್ತಕ ಪ್ರಕಟಣಾ ಸಮಿತಿ ಇತ್ಯಾದಿಗಳನ್ನು ನೆನೆದು ನನ್ನ ಕೈಯಿಂದ ಈ ಕೆಲಸ ಸಾಧ್ಯವೇ? ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ಆದರೆ ಕಿ.ರಂ. ಮೇಷ್ಟ್ರ ಒಡನಾಡಿಗಳ ಬಗೆಗೆ ನಂಬಿಕೆ ಹುಟ್ಟಿತು. ಆ ನಂತರ ಅನೇಕರನ್ನು ಈ ಕುರಿತು ಲೇಖನ ಹಾಗೂ ಕವಿತೆಗಳನ್ನು ಕೇಳುವ ಕಾಯಕ ಮುಂದುವರೆಯಿತು. ಅನೇಕರು ಆ ಆಘಾತದಿಂದ ಹೊರಬರಲು ಇನ್ನೂ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಬರೆಯಲೇಬೇಕಾಗಿದ್ದ ಹಲವರು ಬರೆಯಲಿಲ್ಲ. ಇನ್ನು ಕೆಲವರು ನನ್ನ ಕರೆಯನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದರು. ಈ ಎಲ್ಲವುಗಳ ನಡುವೆಯೇ ನಿಜದ ನಾಡೋಜ ಕೃತಿ ರೂಪುಗೊಂಡಿತು. ಈ ಕೃತಿಯಲ್ಲಿ ಸಂಪಾದಕ ಎಂದು ನೆಪಮಾತ್ರಕ್ಕೆ ನನ್ನ ಹೆಸರಿದೆಯಷ್ಟೆ. ನನ್ನ ಅನೇಕ ಸ್ನೇಹಿತರು ಈ ಪುಸ್ತಕಕ್ಕಾಗಿ ಹಗಲಿರುಳು ನನ್ನ ಜೊತೆ ಯೋಗೀಶ, ಲಕ್ಷ್ಮೀಕಾಂತ ಹಾಗೂ ರೀಗಲ್ ಪ್ರಿಂಟ್ಸ್ ಸರ್ವೀಸ್‌ನ ವೆಂಕಟೇಶ್ ಅವರು ದುಡಿದಿದ್ದಾರೆ.
ನಿಜದ ನಾಡೋಜ ಕೃತಿ ಬಿಡುಗಡೆ ವಿಶಿಷ್ಟವಾಗಿರಬೇಕೆಂದು  ಎಲ್.ಎನ್.ಮುಕುಂದರಾಜ್ ಅವರು ಕಾರ‍್ಯಕ್ರಮದ ಉದ್ಘಾಟನೆಯನ್ನು ಡಾ.ಚಂದ್ರಶೇಖರ ಕಂಬಾರ ಅವರು, ಕೃತಿ ಬಿಡುಗಡೆಯನ್ನು ಶೂದ್ರ ಶೀನಿವಾಸ್ ಅವರು, ಮುಖ್ಯ ಅತಿಥಿಗಳಾಗಿ ಪ್ರೊ. ಯೂ.ಆರ್. ಅನಂತಮೂರ್ತಿಯವರು, ಶ್ರೀಮತಿ ಕೆ.ಎನ್.ಸಹನ ಅವರು ಹಾಗೂ ಅಧ್ಯಕ್ಷತೆಯನ್ನು ಡಾ.ಕೆ.ಮರುಳಸಿದ್ದಪ್ಪ ಅವರು ವಹಿಸಿಕೊಳ್ಳಲಿ ಎಂದು ತೀರ್ಮಾನಿಸಿದರು. ಅಂತಿಮವಾಗಿ ಅನಾರೋಗ್ಯದ ಕಾರಣದಿಂದಾಗಿ ಅನಂತಮೂರ್ತಿಯವರು ಕಾರ‍್ಯಕ್ರಮಕ್ಕೆ ಬರುತ್ತೇನೆ, ವೇದಿಕೆಯ ಮೇಲಿರಲು ನನ್ನಿಂದ ಸಾಧ್ಯವಿಲ್ಲವೆಂದು ತಿಳಿಸಿದರು. ಅದರಂತೆಯೆ ಬಂದು ನಮ್ಮಂತಹ ಯುವಕರನ್ನು ಹುರಿದುಂಬಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ೦೬.೦೮.೨೦೧೧ ರಂದು ಕಿ.ರಂ.ನುಡಿನಮನ ಕಾರ‍್ಯಕ್ರಮದಲ್ಲಿ ಬೆಳಿಗ್ಗೆ ಕೃತಿ ಬಿಡುಗಡೆ ಹಾಗೂ ಮಧ್ಯಾಹ್ನ ಡಾ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಹಿರಿಕಿರಿಯ ಕವಿ ಹಾಗೂ ಕಲಾವಿದರಿಂದ ಕಿ.ರಂ. ನೆನಪಿನ ಕವಿಗೋಷ್ಠಿ ನಡೆಯಿತು.
ಕಿ.ರಂ.ರವರು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗೌರವ ಹಾಗೂ ಅವರಲ್ಲಿ ಮೂಡಿಸುತ್ತಿದ್ದ ಆತ್ಮಗೌರವಕ್ಕೆ ಇನ್ನೊಂದು ಘಟನೆ ನೆನಪಾಗುತ್ತದೆ. ಒಂದು ದಿನ ಬೆಳಿಗ್ಗೆ ಯಾವುದೋ ಕಾರ‍್ಯಕ್ರಮಕ್ಕೆ ಹೋಗೋಣ ಬನ್ನಿ ಎಂದು ಹಿಂದಿನ ದಿನ ನನ್ನನ್ನು ಕರೆದಿದ್ದರು. ಬೆಳಿಗ್ಗೆ ಕಿ.ರಂ. ಮನೆ ತಲುಪಿದೆ. ಆಗ ಹಾಲು ಹಾಕುವವರು, ಹಾಲನ್ನು ಬಾಗಿಲಿನ ಒಳಗೆ ಇರಿಸಿ ಹೋದರು. ಕಿ.ರಂ. ರವರು, ಯಾವುದೋ ಪುಸ್ತಕ ಹುಡುಕುತ್ತಿದ್ದರು. ನಾನು ಆ ಹಾಲಿನ ಪ್ಯಾಕೆಟ್‌ಗಳನ್ನು ಎತ್ತಿಕೊಂಡೆ. ಆ ಕ್ಷಣದಲ್ಲೇ, ತಾವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಅದನ್ನ ಇಡ್ರೀ ಅಲ್ಲಿ ಎಂದರು. ನಾನು ಪರವಾಗಿಲ್ಲ ಬಿಡಿ ಸರ್ ಎಂದೆ. ಕಿರಂ ಮತ್ತೆ, ಸ್ವಲ್ಪ ಸಿಡಿಮಿಡಿಗೊಂಡು ಅಲ್ಲೇ ಇಡ್ರೀ ಅದನ್ನ ಎಂದು ಧ್ವನಿ ಎತ್ತರಿಸಿದರು. ಅದಕ್ಕೂ ಬಗ್ಗದ ನಾನು ಇರಲಿ ಬಿಡಿ ಸರ್ ಎಂದಾಗ. ಅವರು ಅಲ್ಲಿ ಇಡ್ಬೇಕಷ್ಟೇ ಎಂದು ಕಿರುಚಿದರು. ಆ ಕ್ಷಣದಲ್ಲೆ ಎತ್ತಿಕೊಂಡ ಹಾಲಿನ ಪ್ಯಾಕೆಟ್‌ಗಳನ್ನು ಅಲ್ಲೇ ಇಟ್ಟೆ. ನಂತರ ಅವರೇ ಬಂದು, ಆ ಹಾಲಿನ ಪ್ಯಾಕೆಟ್‌ಗಳನ್ನು ಎತ್ತಿಕೊಂಡು, ಕಲ್ಗುಡಿ ಮೇಷ್ಟ್ರು, ನಟರಾಜ್ ಹುಳಿಯಾರ್, ದಳವಾಯಿ, ಸುಮಿತ್ರ ಮೇಡಂ ಅವರತ್ರ ಹೋದಾಗ್ಲೂ ಹೀಗೆ ಮಾಡ್ತೀರೇನ್ರೀ? ಅವರೆಲ್ಲ ಈ ತರದ ಕೆಲಸಗಳನ್ನೆಲ್ಲ ನಿಮ್ಮತ್ರ ಮಾಡ್ಸಲ್ಲ ತಾನೇ? ನನ್ನತ್ರ ಬಂದಾಗ ಕೂಡ ಹಾಗೆ ಇರ‍್ಬೇಕು. ಈ ಎಲ್ಲ ಕೆಲಸಗಳು ನನ್ನವು, ನಾನೇ ಮಾಡ್ಕೋಬೇಕು ಎಂದರು. ಬಿಸಿಬಿಸಿ ಕಾಫಿ ಮಾಡಿಕೊಟ್ಟು ಮರುಕ್ಷಣದಲ್ಲೇ ಏನೂ ನಡೆದೇ ಇಲ್ಲವೆಂಬಂತೆ, ಹೊರಡಲು ಸಿದ್ಧತೆ ಮಾಡಿಕೊಳ್ಳತೊಡಗಿದರು. ಕ್ಷಣದ ಹಿಂದೆ ನಡೆದ ಕಿರುಚಾಟಕ್ಕೂ, ಈಗಿನ ಶಾಂತ ಕಿ.ರಂ. ರವರಿಗೂ ಯಾವ ಸಂಬಂಧವೂ ಇರಲಿಲ್ಲ. ಇಂತಹ ಅಸಂಖ್ಯ ಪ್ರಸಂಗಗಳು ಅವರ ಜೊತೆ ಕಳೆದ ದಿನಗಳಲ್ಲಿ ಸಾಮಾನ್ಯವಾಗಿರುತ್ತಿದ್ದವು. ಇದು ಕಿ.ರಂ.ರವರು ತಮ್ಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗೌರವಕ್ಕೆ ಒಂದು ಚಿಕ್ಕ ಉದಾಹರಣೆ ಮಾತ್ರ. ನನ್ನ ಅವರ ನಾಲ್ಕು ವರ್ಷದ ಒಡನಾಟದಲ್ಲಿ ಒಮ್ಮೆಯೂ ನನ್ನನ್ನು ಅವರು ತಮ್ಮ ವೈಯಕ್ತಿಕ ಅಥವಾ ಕಾವ್ಯಮಂಡಲದ ಕೆಲಸಕ್ಕೆ ಬಳಸಿಕೊಂಡ ನೆನಪಿಲ್ಲ. ಒಮ್ಮೆ ವೆಂಕಟೇಶ ಮೂರ್ತಿಯವರು ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡುವಂತೆ ನನಗೆ ಕೊಡಲು ಬಂದರು. ಆದರೆ ಕಿ.ರಂ. ಅದನ್ನು ಕೂಡ ನನ್ನಿಂದ ಮರಳಿ ಪಡೆದರು. ಈ ಬಗೆಯ ಗುರು ಪರಂಪರೆಯನ್ನು ನಾನೆಲ್ಲೂ ಕಂಡಿಲ್ಲ. ಕನ್ನಡ ಪ್ರಜ್ಞೆಯ ವಿಸ್ತರಣೆಗೆ ಅವರು ನಮ್ಮಂಥ ಯುವ ಜನರ ಮೇಲೆ ನಂಬಿಕೆ ಇಟ್ಟಿದ್ದರೆನ್ನಿಸುತ್ತದೆ. ಆ ಕಾರಣದಿಂದಾಗಿಯೇ ಸಮಕಾಲೀನರೊಡನೆ ಹೇಗೆಲ್ಲ ವರ್ತಿಸುತ್ತಿದ್ದರೋ, ನಮ್ಮ ತಲೆಮಾರಿನವರೊಡನೆಯೂ ಅಷ್ಟೇ ಲೀಲಾಜಾಲವಾಗಿ ಬೆರೆಯುತ್ತಿದ್ದರು.
 ನಿಜದ ನಾಡೋಜ ಸಂಕಲನದ ಕವನ, ಲೇಖನಗಳನ್ನು ಓದುತ್ತಾ ಹೋದಾಗ ಕಿರಂ ರವರ ವ್ಯಕ್ತಿತ್ವದ ಅಸಾಮಾನ್ಯತೆ ವ್ಯಕ್ತವಾಗುತ್ತಾ ನನಗೆ ಕಿ.ರಂ.ರ ಮೇಲಿದ್ದ ಪ್ರೀತಿ, ಗೌರವಗಳು ಮತ್ತಷ್ಟು ಹೆಚ್ಚಿದವು. ಕೆ. ಮರುಳಸಿದ್ದಪ್ಪ, ಬಸವರಾಜ ಕಲ್ಗುಡಿ, ಶಿವಪ್ರಕಾಶ್, ರಹಮತ್ ತರೀಕೆರೆ, ಟಿ.ಗೋವಿಂದರಾಜು, ಬಂಜಗೆರೆ ಜಯಪ್ರಕಾಶ್, ಎಸ್.ಆರ್.ವಿಜಯಶಂಕರ್, ವೈ.ಜಿ.ಅಶೋಕ್ ಕುಮಾರ್, ಗುಬ್ಬಿ ರೇವಣಾರಾಧ್ಯ... ಮೊದಲಾದವರು ಕಳೆದಿರುವ ಕಿರಂರ ಜೊತೆಗಿನ ಅನೇಕ ಪ್ರಸಂಗಗಳು, ಕ್ಷಣಗಳನ್ನು ಕಿರಂ ರವರು ನನ್ನಂಥ ಹಲವಾರು ಕಿರಿಯರೊಡನೂ ಕಳೆದಿದ್ದಾರೆ. ಇದು ಕಿರಂರವರು ಎಷ್ಟು ಪ್ರಜಾಪ್ರಭುತ್ವವಾದಿ ಮನಸ್ಸುಳ್ಳವರಾಗಿದ್ದರೆಂಬುದಕ್ಕೆ ಉದಾಹರಣೆ.
ಕಿರಂ ಬದುಕು - ಬರಹ
ಕಿರಂರವರದು ಸದಾ ಅಧ್ಯಯನಶೀಲವಾದ ಬದುಕು. ಅದರಲ್ಲಿ ಸಾಂದರ್ಭಿಕವಾಗಿ ಅವರಿವರ ಒತ್ತಡಕ್ಕೆ ಬರೆದಿದ್ದಾರೆ. ಆದರೆ, ಆ ಬರಹಗಳು ಅವರನ್ನು ಆಳದಲ್ಲಿ ಕಾಡದೆ ರಚನೆಗೊಂಡವುಗಳಲ್ಲ. ಅದು ಅವರ ಕೃತಿಗಳಿಂದಲೇ ವ್ಯಕ್ತವಾಗುತ್ತದೆ. ’ಪ್ರತಿಷ್ಠಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ’ (೧೯೭೩) ಕೃತಿಯಲ್ಲಿ ವ್ಯಕ್ತವಾಗಿರುವ ವಿಚಾರಗಳು ಕಿರಂ ತಮಗೆ ತಾವೇ ಹಾಕಿಕೊಂಡ ನಿಬಂಧನೆಗಳಂತೆ ಈಗ ತೋರುತ್ತಿದೆ. ಅದರ ಅನೇಕ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದನ್ನು ಈಗಾಗಲೇ ಕಿರಂ ರ ಒಡನಾಡಿಗಳು ದಾಖಲಿಸಿದ್ದಾರೆ. ಅವರ ಬದುಕು - ಬರಹವನ್ನು ಮತ್ತಷ್ಟು ಗಾಢವಾಗಿಸಿದ್ದು ಅವರ ನಿರಂತರ ಓದು ಹಾಗೂ ಮಾತುಗಳೆ.
     ‘ನೀಗಿಕೊಂಡ ಸಂಸ’ ಹಾಗೂ ‘ಕಾಲಜ್ಞಾನಿ ಕನಕ’ ನಾಟಕಗಳು ಕಿ.ರಂ.ರ ವ್ಯಕ್ತಿತ್ವದ ಎರಡು ತುಣುಕುಗಳು. ಅವರ ಇಡಿಯಾದ ವ್ಯಕ್ತಿತ್ವದ ಪರಿಚಯವೂ ಸಾಧ್ಯವಾಗದಷ್ಟು ಅವರ ಜೀವನ ವಿಸ್ತಾರವಾಗಿತ್ತು. ರಾಜಕಾರಣಿಗಳು, ಮಠಾಧಿಪತಿಗಳು, ಅಧಿಕಾರಿ ವರ್ಗ, ಅಧ್ಯಾಪಕ ವರ್ಗವಷ್ಟೇ ಅಲ್ಲದೆ ಅವರ ಒಡನಾಟದ ಅಸಂಖ್ಯಾತ ಜನರೊಡನೆ ಅವರ ವ್ಯಕ್ತಿತ್ವದ ವಿವಿಧ ಹಂತಗಳು ಹಂಚಲ್ಪಟ್ಟಿವೆ, ವಿಸ್ತರಿಸಲ್ಪಟ್ಟಿವೆ.
ಸಾಹಿತ್ಯ ಪಕ್ಷಪಾತಿ ಕಿರಂ
      ಕಿರಂ ಸಮಕಾಲೀನ ಸಮಾಜದ ಎಲ್ಲ ಬಗೆಯ ಸಮಸ್ಯೆಗಳಿಗೂ ನಮ್ಮ ಸಾಹಿತ್ಯದಲ್ಲಿಯೇ ಉತ್ತರಗಳಿವೆ ಎಂದು ದೃಢವಾಗಿ ನಂಬಿದ್ದರು. ಅವರ ಈ ಸಾಹಿತ್ಯಕ ನಂಬಿಕೆಯೆ ಅವರನ್ನು ಅನೇಕ ಸಭೆ, ಸಮಾರಂಭ, ಪುಸ್ತಕ ಬಿಡುಗಡೆ, ಸಂವಾದ, ವಿಚಾರ ಸಂಕಿರಣಗಳಲ್ಲಿ ನಿರಂತರವಾಗಿ ಭಾಗವಹಿಸುವಂತೆ ಮಾಡುತ್ತಿತ್ತು. ಈ ಸಭೆ ಸಮಾರಂಭಗಳಲ್ಲಿ ಹೇಳಿದ್ದನ್ನೆ ಹೇಳುವ - ಕೇಳುವಂಥ ವಾತಾವರಣವನ್ನು ಕಿರಂ ಎಂದೂ ಸೃಷ್ಟಿಸಿರಲಿಲ್ಲ.
    ನಾಡಿನ ಪ್ರಖ್ಯಾತ, ಖ್ಯಾತನಾಮರಾದ ವಿಮರ್ಶಕರುಗಳೇ ಆಗಿರಲಿ, ಒಂದೇ ವಿಷಯದ ಬಗ್ಗೆ ಎರಡು ಬಾರಿ ಮಾತನಾಡಿದ್ದು, ಮೂರನೆ ಬಾರಿಗೆ ಅದೇ ವಿಷಯವನ್ನು ಕುರಿತು ಮಾತನಾಡಿದರೆ, ಹೊಸ ಹೊಳಹುಗಳೇನೂ ಸಿಗಲಾರವು. ಆದರೆ, ಕಿರಂರವರು ಬೇಂದ್ರೆ, ಅಲ್ಲಮ, ಅಡಿಗ, ಷರೀಫ, ಮಧುರಚೆನ್ನ, ಕುವೆಂಪು, ಪಂಪ, ಕುಮಾರವ್ಯಾಸ ಮೊದಲಾದವರ ಬಗ್ಗೆ ತರಗತಿಗಳಲ್ಲಷ್ಟೇ ಅಲ್ಲದೆ ಅನೇಕ ಕಡೆ ಮಂಡಿಸಿರುವ ವಿಚಾರಗಳು ಮತ್ತೆ ಮತ್ತೆ ಹೊಸತನದಿಂದ ಕೂಡಿರುತ್ತಿದ್ದವು.
    ಈ ಹೊಸತನವನ್ನು ಕಿ.ರಂ.ತನವೆನ್ನಬಹುದು. ಅವರು ಪ್ರತಿಕ್ಷಣದ ರಾಜಕೀಯ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಭಾಷಿಕ, ಸಾಂಸ್ಥಿಕ, ಸಾಂದರ್ಭಿಕ ಒತ್ತಡಗಳನ್ನು (ಆeಜಿiಟಿe ಮಾಡಿಕೊಳ್ಳುತ್ತಿದ್ದುದೆ - ಸಾಹಿತ್ಯ ಕೃತಿಗಳಿಂದ. ಅದು ಈ ಎಲ್ಲವುಗಳನ್ನು ಒಳಗೊಳ್ಳುವುದು ಸದ್ಯಕಾಲೀನ ಸಾಹಿತ್ಯವೆನ್ನುತ್ತಿದ್ದರು.) ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ತಾವು ಅದನ್ನು ಸಾಹಿತ್ಯ ಕೃತಿಗಳ ಓದಿನಿಂದ ಪಡೆದಿದ್ದೇನೆಂಬುದು ಅವರ ತಿಳುವಳಿಕೆಯಾಗಿತ್ತು. ಆದ್ದರಿಂದಲೆ ಒಂದೆ ವಿಷಯ, ವಸ್ತು, ವ್ಯಕ್ತಿ, ಕೃತಿಗಳ ಬಗೆಗೆ ಕಿರಂ ಅನೇಕ ಆಯಾಮಗಳಲ್ಲಿ ಮಾತನಾಡಬಲ್ಲವರಾಗಿದ್ದರು.
        ಭಾಷಾವಿಜ್ಞಾನ, ಕಾವ್ಯಮೀಮಾಂಸೆ, ಸಾಹಿತ್ಯ ಚರಿತ್ರೆ, ವಿಮರ್ಶಾ ಕ್ಷೇತ್ರಗಳಲ್ಲೂ ಆಳವಾದ ಪರಿಶ್ರಮವಿದ್ದ ಕಿರಂ ಅವುಗಳೆಲ್ಲವನ್ನು ಅಧ್ಯಾಪನದ ಸಂದರ್ಭದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದರು. ಅದರ ಪರಿಣಾಮದಿಂದಾಗಿ ವಿದ್ಯಾರ್ಥಿಗಳು ಅನೇಕ ಜ್ಞಾನಶಿಸ್ತುಗಳ ಬಗೆಗೆ ಏಕಕಾಲಕ್ಕೆ ಜ್ಞಾನ ಪಡೆಯುವಂತಾಗುತ್ತಿತ್ತು. ಈ ಎಲ್ಲ ಜ್ಞಾನಗಳೆಡೆಗೆ ಅವರಿಗಿದ್ದ ನಿರಂತರವಾದ ಆಸಕ್ತಿ, ಸಾಹಿತ್ಯದೆಡೆಗಿನ ಉಗ್ರ ನಿಷ್ಠೆ, ಸಾಹಿತ್ಯದ ಮೇಲಿನ ಅಪಾರ ನಂಬುಗೆಗಳ ಕಾರಣದಿಂದಾಗಿ ಅವರು ಸಾಹಿತ್ಯ ಪಕ್ಷಪಾತಿಯಂತೆ ಕಾಣುತ್ತಿದ್ದರು. ಆದರೆ ಅದು ಮುಂದುವರೆದು ಮಾನವೀಯತೆಯತ್ತ ಸಾಗುತ್ತಿತ್ತು.
ಕಿರಂ ನಿಜದ ಅರ್ಥದಲ್ಲಿ ನಾಡೋಜರಾಗಿದ್ದವರು. ಅವರು ಬರೆದಿಲ್ಲವೆಂಬ ಅವರ ಬಗೆಗಿನ ಮಾತುಗಳು ಸತ್ಯವಲ್ಲ. ಅವರು ಬರೆದ, ಸಂಪಾದಿಸಿದ, ಅನುವಾದಿಸಿದ, ಮುನ್ನುಡಿ, ಹಿನ್ನುಡಿಗಳು ಮತ್ತು ಸಾಹಿತ್ಯವಾರ್ಷಿಕ, ಕನ್ನಡ ವಾರ್ಷಿಕ ಹಾಗೂ ಸಾಂದರ್ಭಿಕವಾಗಿ ಬರೆದ ಲೇಖನ, ನಾಟಕ, ಬರಹ, ಭಾಷಣಗಳನ್ನು ಒಟ್ಟುಗೂಡಿಸಿದರೆ ಸಾವಿರಾರು ಪುಟಗಳ ಸಂಪುಟಗಳು ಸಿದ್ಧವಾಗುತ್ತವೆ. ಸದ್ಯದಲ್ಲೆ ಅವರ ಪ್ರಾತಿನಿಧಿಕ ಸಂಪುಟ ಹೊರಬರಲಿದೆ. ಆಗ ಕಿರಂ ಬರಹದ ಅಗಾಧತೆ ತಿಳಿಯುತ್ತದೆ. ಆದರೆ, ಅವರು ಬರೆದಿಲ್ಲ, ಬರೆದದ್ದು ಕಡಿಮೆ ಎಂಬ ತಿಳುವಳಿಕೆ ಇನ್ನು ಮುಂದೆ ಹಾಗೆ ಉಳಿಯಲಾರದು.
ಸಾಹಿತ್ಯ ಪರಿಚಾರಕ
     ಕನ್ನಡದ ಮುಖ್ಯ ಸಾಂಸ್ಕೃತಿಕ ವಾಗ್ವಾದಗಳಲ್ಲಿ, ಜನಪರ ಚಳುವಳಿಗಳಲ್ಲಿ ಅಂತರ್ಜಲದಂತೆ ಅವಿರತವಾಗಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸಿರುವ ಕಿ.ರಂ. ನಾಗರಾಜರವರಿಗೆ ಜಿ.ಪಿ. ರಾಜರತ್ನಂರವರ ಹೆಸರಿನಲ್ಲಿ ’ಸಾಹಿತ್ಯ ಪರಿಚಾರಿಕೆ’ ಪ್ರಶಸ್ತಿ ನೀಡಿದ ಪುಸ್ತಕ ಪ್ರಾಧಿಕಾರದ ಕ್ರಮಕ್ಕೆ ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ ಕೆಲವರಿಗೆ ಕಿ.ರಂ. ರವರ ಸಾಹಿತ್ಯ ಪರಿಚಾರಿಕೆಯ ಕ್ರಮಗಳ ಅರಿವಿರಲಾರದೆನಿಸುತ್ತದೆ. ಶ್ರೀವಿಜಯನ ಕೃತಿಗಳಿಂದ, ಮಧುರಚೆನ್ನ, ಬೇಂದ್ರೆ, ಕುವೆಂಪು, ಅಡಿಗ, ಕಂಬಾರ, ಸಿದ್ಧಲಿಂಗಯ್ಯ, ಎನ್.ಕೆ. ಹನುಮಂತಯ್ಯ ಹೀಗೆ ಹಿರಿಯ ಕವಿಗಳಿಂದ ಕಿರಿಯ ಕವಿಗಳವರೆಗಿನ ಕಾವ್ಯಗಳನ್ನು ಆಳವಾದ ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಕಿ.ರಂ ರವರು ಕನ್ನಡ, ಸಂಸ್ಕೃತ ಹಾಗೂ ಪಾಶ್ಚಾತ್ಯ ಸಾಹಿತ್ಯ, ತತ್ವಗಳಂತೆಯೆ ಜಾನಪದ ಸಾಹಿತ್ಯದ ಆಳವಾದ ಅಭ್ಯಾಸ ಮಾಡಿರುವುದರ ಜೊತೆಗೆ ಅನೇಕ ಕಿರಿಯರ ಕೃತಿ ಪ್ರಕಟಣೆಗಳಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ಸಿದ್ಧಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’ ಕವನ ಸಂಕಲನದ ಪ್ರಕಟಣೆಯ ಸಂದರ್ಭದಲ್ಲಿನ ಅವರ ಆಸ್ಥೆಯನ್ನು ಕಾವ್ಯ ಪರಿಚಾರಿಕೆಯೆಂದಲ್ಲದೆ ಏನೆಂದು ಕರೆಯಬೇಕು ?
ಕಾವ್ಯಮಂಡಲದ ಮೂಲಕ ’ಕುಸುಮಬಾಲೆ’ಯಂತಹ ಪಠ್ಯವನ್ನು ಓದುಗರಿಗೆ ತಲುಪಿಸುವ ಆ ಮೂಲಕ ಅದು ನಾಟಕವಾಗಿ ರೂಪಾಂತರವಾಗುವಲ್ಲಿ ಅವರ ಪ್ರಯತ್ನವು ಮುಖ್ಯವಾದುದು. ಕನ್ನಡದಲ್ಲಿ ಸದಭಿರುಚಿಯ ಅಪರೂಪದ ಕೃತಿಗಳ ಪ್ರಕಟಣೆಗೆ ಕಾವ್ಯಮಂಡಲ ಹಾಗೂ ಅಧ್ಯಯನ ಮಂಡಲದ ಪ್ರಕಟಣೆಗಳು ಉದಾಹರಣೆಗಳಾಗಿವೆ. ಸ್ಯಾಫೋ ಕಾವ್ಯ, ಸಿಲ್ವಿಯಾ ಪ್ಲಾತ್, ಕನ್ನಡದ ಹಾಡು ಪಾಡು, ಎಡ್ವರ್ಡ್ ಸೈದ್, ಬಾಳಿನಲ್ಲಿ ಬೆಳಕು, ಕುವೆಂಪು ಕಥನ, ಮಾತನಾಡುವ ಹಕ್ಕಿ, ಮಾತು ಚಿಟ್ಟೆ, ಬೆಂಕಿ-ಬೆರಳು, ಸಿಮೊನ್ ದ ಬೊವಾರವರ  ದ ಸೆಕೆಂಡ್ ಸೆಕ್ಸ್, ಟ್ರೋಜನ್ ಯುದ್ಧ, ಕನ್ನಡ ನಾಟಕ - ಯಾಜಮಾನ್ಯ ಸಂಕಥನ, ತೌಲನಿಕ ಸಾಹಿತ್ಯ ಮೊದಲಾದ ಕಾವ್ಯ, ಅನುವಾದ, ಸಂಶೋಧನಾ ಕೃತಿಗಳ ಪ್ರಕಟಣೆಯನ್ನು ಈ ನಿಟ್ಟಿನಲ್ಲಿ ಗಮನಾರ್ಹವಾದ ಪ್ರಯತ್ನವೆನ್ನಬಹುದು.
ಕಿ.ರಂ ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪಡೆದ ಕೆ.ಸಿ. ಶಿವಾರೆಡ್ಡಿ, ಸಿ.ಆರ್. ಗೋವಿಂದರಾಜು, ವಾಸುದೇವಮೂರ್ತಿ, ರಂಗನಾಥ ಕಂಟನಕುಂಟೆ, ಕುರುವ ಬಸವರಾಜ್ ಮೊದಲಾದವರು ಇಂದಿಗೂ ಸೃಜನಶೀಲ, ವಿಮರ್ಶೆ, ಸಂಶೋಧನೆ ಹಾಗೂ ಅನುವಾದದ ಕ್ಷೇತ್ರಗಳಲ್ಲಿ ತಮ್ಮ ಕೃಷಿಯನ್ನು ಮುಂದುವರೆಸಿದ್ದಾರೆ. ಇದು ಕಾವ್ಯಮಂಡಲ ಹಾಗೂ ಕಿ.ರಂ. ರವರ ಮಹತ್ವ. ಅನೇಕ ಸಂಶೋಧಕರ ಸಂಶೋಧನಾಸಕ್ತಿ ಪಿಎಚ್.ಡಿ., ಪ್ರಬಂಧ ಸಲ್ಲಿಕೆಯಲ್ಲೇ ಮುಗಿದು ಹೋಗುವ ಉದಾಹರಣೆಗಳಿಗಿಂತ ಭಿನ್ನವಾಗಿ ಕಿ.ರಂ.ರವರ ಶಿಷ್ಯ ಬಳಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಸ್ತಿತ್ವವನ್ನು ಹೊಂದಿದೆ. ಕಾವ್ಯ ಮಂಡಲ ಡಾಕ್ಟರ್‌ಗಳನ್ನು ಸೃಷ್ಟಿಸುವ ಕೆಲಸವನ್ನಷ್ಟೇ ಮಾಡುತ್ತಿಲ್ಲ.
ನಿರಂತರವಾದ ಅಧ್ಯಯನ, ಅಧ್ಯಾಪನ, ಚಿಂತನೆಯಲ್ಲಿ ತೊಡಗಿಕೊಂಡಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಕಿ.ರಂ ರವರಿಂದ ಕಲಿತ ಅಸಂಖ್ಯ ವಿದ್ಯಾರ್ಥಿಗಳು ಇಂದು ನಾಡಿನಾದ್ಯಂತ ಅಧ್ಯಾಪಕರಾಗಿ, ಐ.ಎ.ಎಸ್., ಕೆ.ಎ.ಎಸ್. ಅಧಿಕಾರಿಗಳಾಗಿ, ಸಮೂಹ ಮಾಧ್ಯಮದಲ್ಲಿ, ರಾಜಕಾರಣದಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿನವರೆಗೆ ಒಂದೇ ಬಗೆಯ ಆದರ, ಪ್ರೀತಿ, ವಿಶ್ವಾಸಗಳನ್ನು ಹೊಂದಿದ್ದ ಹಾಗೂ ಕಾವ್ಯಮಂಡಲದ ಮೂಲಕ ಕಾವ್ಯ, ಸಾಹಿತ್ಯ ಪರಿಚಾರಿಕೆಯನ್ನು ಅವಿರತವಾಗಿ ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ತುರ್ತಿರುವ ವಿಚಾರ ಗೋಷ್ಠಿಗಳು, ಕಾವ್ಯ ಶಿವರಾತ್ರಿಯಂತಹ ಅನೇಕ ಕಾರ್ಯಕ್ರಮಗಳು ಸಾಹಿತ್ಯ ಪರಿಚಾರಿಕೆಯಲ್ಲದೇ ಮತ್ತಾವುದು ಪರಿಚಾರಿಕೆಯೆಂಬುದನ್ನು ಯೋಚಿಸಬೇಕು. ನಾಡು, ರಾಷ್ಟ್ರ, ವಿದೇಶಗಳಲ್ಲಿ ಕೂಡ ಇರುವ ಕಿ.ರಂ.ರವರ ಅಪಾರ ಸ್ನೇಹಿತರು, ಒಡನಾಡಿಗಳು, ಶಿಷ್ಯ ವೃಂದದವರಿಗೆ ಈ ಬಗೆಯ ಲೇಖನ ಹಾಗೂ ಮಾತುಗಳು ನೋವನ್ನುಂಟು ಮಾಡಿದ್ದವು.
ಈಚಿನ ಕರ್ನಾಟಕದ ಸಾಮಾಜಿಕ, ರಾಜಕೀಯ ಪಲ್ಲಟಗಳು ಕಿರಂರನ್ನು ತೀವ್ರವಾಗಿ ವ್ಯಗ್ರಗೊಳಿಸಿದ್ದವು. ಕೋಮುವಾದಿ ಶಕ್ತಿಗಳ ಕೈಯಲ್ಲಿನ ಅಧಿಕಾರದ ದುರ್ಬಳಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ’ಅರಿಕೇಸರಿಯ ಹೆಸರಿರುವುದು - ಪಂಪನಿಂದ’ ಎಂದು ಹೇಳುವ ಮೂಲಕ ಕರ್ನಾಟಕದ ಅತಿವೃಷ್ಟಿ ಸಂದರ್ಭದಲ್ಲಿ ನಡೆದ ದುಂದು ವೆಚ್ಚಗಳನ್ನು ಕುರಿತು ಕಟುವಾಗಿ ನಮ್ಮೊಡನೆ ಆ ವಿಷಯವನ್ನು ಚರ್ಚಿಸುತ್ತಿದ್ದರು.
ಹಾಗೆಯೇ ಮಾಧ್ಯಮಗಳವರ ಮಿತಿಮೀರಿದ ಸುದ್ದಿ ದಾಹವನ್ನು ಕುರಿತು ಕೂಡ ವಿಮರ್ಶಿಸುತ್ತಿದ್ದರು. ಈ ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಇಡೀ ಬದುಕು ಪಲ್ಲಟಕ್ಕೊಳಗಾಗುವುದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಶೂದ್ರ ಪತ್ರಿಕೆಗೆ ಮಾಧ್ಯಮಗಳ ಕುರಿತು ಲೇಖನ ಬರೆದು ಕೊಡುವಂತೆ ಮೂರು ತಿಂಗಳುಗಳ ಕಾಲ ನನ್ನನ್ನು ಕೇಳುತ್ತಿದ್ದರು. (ಆದರೆ, ಅವರ ಮಾತನ್ನು ನನಗೆ ಇನ್ನೂ ನಡೆಸಲಾಗಿಲ್ಲ. ಅದರ ಕೊರತೆ ನೀಗಿಸಲು ಒಂದು ಪುಸ್ತಕವನ್ನೇ ಬರೆಯಬೇಕಾಗುತ್ತದೆ. ಮಾಧ್ಯಮಗಳು ಇಂದು ವಿಮರ್ಶಾತೀತವಾಗಿ ಬೆಳೆಯುತ್ತಿವೆ.)
ಮಾಧ್ಯಮಗಳ ಮೇಲೆ ಅವರು ಕಿಡಿಕಾರುವುದಕ್ಕೆ ಮಾಧ್ಯಮದವರ ಸುದ್ದಿದಾಹವಷ್ಟೇ ಕಾರಣವಾಗಿರಲಿಲ್ಲ. ಅವುಗಳ ಸಾಮಾಜಿಕ ಬದ್ಧತೆಯ ಬಗ್ಗೆ ಅವರಿಗೆ ಅನುಮಾನಗಳಿದ್ದವು. ತಮ್ಮ ವಿದ್ಯಾರ್ಥಿಗಳು, ಸ್ನೇಹಿತರನೇಕರು ಈ ಮಾಧ್ಯಮಗಳಲ್ಲಿದ್ದರೂ ಕೂಡ ಅವುಗಳ ಜೊತೆಗೂ ಕೂಡ ಅಂತರವನ್ನು ಕಾಪಾಡಿಕೊಂಡಿದ್ದರು.
   ಅವರು ಸಾಹಿತ್ಯ ಪಕ್ಷಪಾತಿಯಾಗಿ, ಕೆಲವೊಮ್ಮೆ ಅತಿಯೆಂಬಂತೆ ಸಾಹಿತ್ಯ, ಕಾವ್ಯದ ಬಗ್ಗೆ ಮಾತನಾಡುತ್ತಿದ್ದರೂ ಸಾಹಿತ್ಯವನ್ನೇ ಬದುಕನ್ನಾಗಿಸಿಕೊಂಡಿದ್ದರು. ವಿಮರ್ಶೆಯು ಕಾಲದಿಂದ ಕಾಲಕ್ಕೆ ಭಿನ್ನವಾದ ಉಪಕರಣಗಳನ್ನು ಬಳಸುತ್ತಾ ಭಿನ್ನವಾದ ಪರಿಪ್ರೇಕ್ಷ್ಯಗಳನ್ನು ಪಡೆಯುವ ಸಂದರ್ಭದಲ್ಲಿ ಕಿ.ರಂ.ರವರು ಸಮಕಾಲೀನರಿಗಿಂಥ ಮೊದಲೇ ಈ ಬಗೆಯ ಎಲ್ಲ ಉಪಕರಣಗಳನ್ನು ಒಳಗೊಂಡು, ಅದಕ್ಕಿಂತ ಮುಂದೆ ಹೋಗಿ ಪ್ರತಿಯೊಬ್ಬ ಕೃತಿಕಾರನಿಗೂ ಅವನದೇ ಆದ ಕಾವ್ಯ ಮೀಮಾಂಸೆ, ಜೀವನ ದೃಷ್ಟಿ ಇರುತ್ತದೆಂದು ಪ್ರತಿಪಾದಿಸುತ್ತಿದ್ದರು. ಶ್ರೀವಿಜಯ, ಪಂಪ, ವಚನಕಾರರು, ಕುಮಾರವ್ಯಾಸ, ಶರೀಫ, ಮಧುರಚೆನ್ನ, ಬೇಂದ್ರೆ, ಕುವೆಂಪು ಮತ್ತು ಅಡಿಗರಂಥ ಕವಿಗಳ ಕಾವ್ಯದಲ್ಲಿಯೇ ಕಾವ್ಯಮೀಮಾಂಸೆಯ ಉಪಕರಣಗಳಿವೆ ಎಂಬುದನ್ನು ಉದಾಹರಣೆಗಳ ಮೂಲಕ ನಮಗೆ ತೋರಿಸಿಕೊಡುತ್ತಿದ್ದರು. ಪಂಪನ ಕಿವಿಯಿಂಬಗೆವುಗುವೊಡೆ ಕೊಂಕುವೆತ್ತ ಪೊಸನುಡಿಯೆ ಪುಗುಗುಮುಳಿದುದು ಸವಿಸಯ್ತವಚರನೆ ಮಾಡಿ ಸರು ಸಯ್ತು ವೋಕುಮದು ಬಗೆಯ ಬಟ್ಟೆಯಂ ಮುಟ್ಟುದುಮೇಣ|| ಎಂಬ ಭಾಗಗಳಿಂದ ಜಾನಪದಕ್ಕೂ ಶಿಷ್ಟಕ್ಕೂ ಇರುವ ಆದಿಮ ಕೊಂಡಿಗಳ ಹುಡುಕಾಟವನ್ನು ನಡೆಸುತ್ತಿದ್ದರು. ಈ ಬಗೆಯಲ್ಲಿ ಕಾವ್ಯ, ನಾಟಕ, ಪ್ರಬಂಧ, ಕತೆ, ಕಾದಂಬರಿ, ಜಾನಪದ, ಕಾವ್ಯಮೀಮಾಂಸೆ, ವಿಮರ್ಶೆ, ತತ್ವಜ್ಞಾನ ಎಲ್ಲವನ್ನೂ ಒಳಗೊಳ್ಳುವ - ಆ ಮೂಲಕ ಬದುಕು ಮತ್ತು ಸಾಹಿತ್ಯಕ್ಕೆ ಇರುವ ಸಂಬಂಧಗಳನ್ನು ಬೆಸೆಯುವ ಹುಡುಕಾಟದತ್ತ ಅವರ ಪಯಣವಿತ್ತು.
ಮೇರು ಸದೃಶ ವ್ಯಕ್ತಿತ್ವದ ಕಿ.ರಂ. ಮೇಷ್ಟ್ರು ಕನ್ನಡದ ಮೂಲಕ ಜಗತ್ತನ್ನು ಒಳಗೊಳ್ಳುವ ಪ್ರಯತ್ನವನ್ನು ಅವರ ಪರಿಧಿಗೆ ಬಂದವರಿಗೆ ಕಲಿಸುತ್ತಿದ್ದರು. ಅಪಾರ ಶಿಷ್ಯ ವಾತ್ಸಲ್ಯವುಳ್ಳ ಅವರಿಗೆ ಅವರ ಎಲ್ಲಾ ವಿದ್ಯಾರ್ಥಿಗಳಿಗೂ ಸಾಹಿತ್ಯದ ಭಿನ್ನ ಬಗೆಯ ಓದು ಸಾಧ್ಯವಾಗುವುದು ಹೇಗೆಂಬುದರ ಹುಡುಕಾಟವನ್ನು ತೋರಿಸಿಕೊಡುತ್ತಿದ್ದರು. ಪಂಪ, ಅಲ್ಲಮ, ಕುಮಾರವ್ಯಾಸ, ಮಧುರಚನ್ನ, ಬೇಂದ್ರೆ, ಕುವೆಂಪು, ಅಡಿಗರ ಕಾವ್ಯಗಳನ್ನು ಅವರಷ್ಟು ಆಳವಾಗಿ ಅಧ್ಯಯನ ಮಾಡಿ ಕಾವ್ಯದ ಅನಂತ ಮುಖಗಳನ್ನು ತೋರಿಸುವ ಮತ್ತೊಬ್ಬರು ಪ್ರಾಯಶಃ ಬರಲಾರರೆನಿಸುತ್ತದೆ. ಪ್ರತಿ ಬಾರಿಯು ಕಾವ್ಯವನ್ನು ಹೊಸದಾಗಿ ಅರ್ಥೈಸುವ, ವ್ಯಾಖ್ಯಾನಿಸುವ ಅಸಂಖ್ಯ ಪರಿಕರಗಳಿಂದ ಕಿ.ರಂ.ರ ಕಾವ್ಯಪ್ರೀತಿಯ ಅನನ್ಯತೆಯನ್ನು ಕಾಣಬಹುದು. ಈ ಎಲ್ಲ ವಿಷಯಗಳು ಕಿ.ರಂ.ರ ಬಗೆಗೆ ನಿಜದ ನಾಡೋಜ ಕೃತಿ ಸಂಪಾದನೆಗೆ ಕಾರಣವಾಗಿವೆ. ಕನ್ನಡ ಸಂವೇದನೆಯ ಭಾಗವಾಗಿರುವ ಅವರ ಚಿಂತನೆಗಳು ನಿರಂತರವಾಗಿರುತ್ತವೆ.

(ನಾನು ಪ್ರೊ.ಕಿ.ರಂ.ನಾಗರಾಜ  ಅವರನ್ನು ಕುರಿತ ಕವಿತೆ, ಲೇಖನಗಳನ್ನು  ಸಂಪಾದಿಸಿದ ನಿಜದ ನಾಡೋಜ ಕೃತಿಯ ಮುನ್ನುಡಿ)