Search This Blog

Tuesday, 24 May 2016

ಅಚ್ಚೇದಿನ್ ಯಾರಿಗೆ?
ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ: ಉದ್ಯಮಿಗಳ ಪರ ಒಲವು
ಪ್ರದೀಪ್ ಮಾಲ್ಗುಡಿ
ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ೧೮೯೪ರ ಭೂಸ್ವಾಧೀನ ಕಾಯ್ದೆಗೆ ೨೦೧೩ರಲ್ಲಿ ತಿದ್ದುಪಡಿ ತಂದಿತ್ತು. ಅದರ ಪ್ರಕಾರ ವಶಪಡಿಸಿಕೊಳ್ಳಬೇಕಾದ ಕೃಷಿ ಜಮೀನಿನ ೭೦% ಭಾಗದ ರೈತರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಡಿಸೆಂಬರ್ ೨೦೧೪ರಂದು ಎನ್ಡಿಎ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದರ ಪ್ರಕಾರ ಸರ್ಕಾರದ ಅನುಮತಿ ಪಡೆದ  ಉದ್ದೇಶಿತ ಯೋಜನೆಗಳಿಗೆ (ಅವು ಖಾಸಗಿಯಾಗಿರಲಿ ಅಥವಾ ಸರ್ಕಾರಿ ಯೋಜನೆಗಳಾಗಿರಲಿ) ಭೂ ಸ್ವಾಧೀನಪಡಿಸಿಕೊಳ್ಳಲು ರೈತರ ಅನುಮತಿಯೇ ಅಗತ್ಯವಿಲ್ಲ.
ತಿದ್ದುಪಡಿ ಖುಷ್ಕಿ, ನೀರಾವರಿ, ಬಂಜರು ಭೂಮಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ಭೂಸ್ವಾಧೀನಕ್ಕೆ ಅವಕಾಶ ನೀಡುತ್ತದೆ. ಇದರಿಂದ ಭವಿಷ್ಯದಲ್ಲಿ ದೇಶದ ಆಂತರಿಕ ಕೃಷಿ ಉತ್ಪಾದನೆ ಹಾಗೂ ಆಹಾರ ಉತ್ಪಾದನೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ೨೦ ಕೋಟಿ ಜನಕ್ಕೆ ಎರಡು ಹೊತ್ತಿನ ಊಟ ಸಿಗದ, ಅಪೌಷ್ಟಿಕತೆಯಿಂದ ಗರ್ಭಿಣಿಯರು ಮತ್ತು ಮಕ್ಕಳು ಬಳಲುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ವಿವೇಚನಾರಹಿತವಾಗಿ ಕೃಷಿ ಭೂಮಿಯನ್ನು ಸರ್ಕಾರಿ, ಅರೆ ಸರ್ಕಾರಿ ಯೋಜನೆಗಳಿಗೆ ಮತ್ತು ಖಾಸಗಿ ಹಾಗೂ ವಿದೇಶೀ ಕಂಪೆನಿಗಳಿಗೆ ಹಸ್ತಾಂತರಿಸಿದರೆ ಇದರ ಪರಿಸ್ಥಿತಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
೨೦೧೩ರ ಕಾಯ್ದೆಯ ಪ್ರಕಾರ ಉದ್ದೇಶಿತ ಯೋಜನೆ ವರ್ಷಗಳ ಅವಧಿಯಲ್ಲಿ ಜಾರಿಗೆ ಬರದಿದ್ದಲ್ಲಿ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮೂಲ ರೈತರಿಗೆ ಹಿಂದಿರುಗಿಸಬೇಕಿತ್ತು. ಆದರೆ ವಿಷಯವನ್ನು ಪ್ರಸ್ತುತ ತಿದ್ದುಪಡಿಯಲ್ಲಿ ಕೈಬಿಟ್ಟಿದೆ. ಇದುವರೆಗೆ ನಡೆದಿರುವ ಸ್ವಾಧೀನ ಪ್ರಕ್ರಿಯೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಜಮೀನನ್ನು ಆಧಾರವಾಗಿರಿಸಿ ಬ್ಯಾಂಕ್ಗಳಲ್ಲಿ ಸಾಲ ಪಡೆಯಲಾಗಿದೆ. ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿರುವ ಉದಾಹರಣೆಗಳೂ ಇವೆ. ಇನ್ನೊಂದು ಆಘಾತಕಾರಿ ಮಾಹಿತಿ ಎಂದರೆ; ಸಿಎಜೆ ವರದಿ ಪ್ರಕಾರ ಇದುವರೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನಿನಲ್ಲಿ ೩೮%ರಷ್ಟು ಭೂಮಿಯಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.
ಕಾಯ್ದೆ  ಜಾರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣಅಭಿವೃದ್ಧಿಗೆ ಹಿಂದಿನ ಕಾಯ್ದೆ ಅಡ್ಡಗಾಲಾಗಿದೆ. ಆದ್ದರಿಂದ ಇದಕ್ಕೆ ತಿದ್ದುಪಡಿ ತರಲಾಗಿದೆ ಎಂಬುದು. ಆದರೆ ಗುಜರಾತಿನಲ್ಲಿ ನಡೆದಿರುವ ಭೂಸ್ವಾಧೀನ ಮತ್ತು ಅದರ ಫಲಾನುಭವಿಗಳ ಸಂಪತ್ತಿನ ವೃದ್ಧಿಯನ್ನು ಗಮನಿಸಿದರೆ ಇದು ಶುದ್ಧ ಸುಳ್ಳೆಂಬುದು ಸಾಬೀತಾಗುತ್ತದೆ. ಅಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಕರೆಗೆ ಕೇವಲ ೨೦ ರೂ.ನಂತೆ ಸಾವಿರಾರು ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಕೊಡಲಾಗಿತ್ತು. ಕೆಲವೇ ವರ್ಷಗಳ ಹಿಂದೆ ಕಂಪನಿ ಸ್ಥಾಪಿಸಿದ ವ್ಯಕ್ತಿ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಸಂಪಾದಿಸಿರುವುದರ ಜತೆಗೆ, ಬಹುರಾಷ್ಟ್ರೀಯ ಕಂಪೆನಿಗಳ ಒಡೆಯನಾಗಿದ್ದಾರೆ.  ತಿದ್ದುಪಡಿಯಿಂದ ಗುಜಾರಾತಿಗೆ ಸೀಮಿತವಾಗಿದ್ದ ಭೂಸ್ವಾಧೀನ ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಅಭಿವೃದ್ಧಿಗೆ ಶರವೇಗ ನೀಡುವುದಾಗಿ ಭರವಸೆ ನೀಡಿದ ಮೋದಿ ಸರ್ಕಾರ ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಪಾಯಕಾರಿ ಹೆಜ್ಜೆಗಳನ್ನು ಇಟ್ಟಿದೆ. ಮೂಲಕ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳಿಗೆ ನಂಬಿಕೆ ಇಲ್ಲವೆಂಬುದನ್ನು ಸಾಬೀತು ಮಾಡಿದೆ.
ಕಪ್ಪು ಹೋರಾಟಗಾರ ಚೀಫ್ ಸಿಯಾಟಲ್ ಹೋರಾಟದ ಸಮಯದಲ್ಲಿಎಂಡ್ ಆಫ್ ದಿ ಲಿವಿಂಗ್, ಬಿಗಿನಿಂಗ್ ಆಫ್ ದಿ ಸರ್ವೈವಲ್ ಎಂದಂತೆ ಭಾರತೀಯ ಬಡ ರೈತರು ಇನ್ನು ಬದುಕಿ ಉಳಿಯಲು ಹೋರಾಡಬೇಕಾದ ದಿನಗಳು ದೂರವಿಲ್ಲ. ಗುಜರಾತ್ನಲ್ಲಿ ಇಪ್ಪತ್ತು ರೂಪಾಯಿಗೆ ಒಂದು ಎಕರೆಯಂತೆ ಸಾವಿರಾರು ಎಕರೆ ಭೂಮಿಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಹರಿದು ಹಂಚಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಇಂದು ಭಾರತದ ಪ್ರಧಾನಿಯಾಗಿ ಅದನ್ನು ಇಡೀ ದೇಶಕ್ಕೆ ವಿಸ್ತರಿಸಲು ಮುಂದಾಗಿದ್ದಾರೆ.
ಸ್ವತಂತ್ರ ಪೂರ್ವ ಸಂದರ್ಭದಲ್ಲಿ ಮೋಹನದಾಸ್ ಕರಮಚಂದ್ ಗಾಂಧಿಯವರು ಟಾಟಾ, ಬಿರ್ಲಾರಿಂದ ಕಾಂಗ್ರೆಸ್ಗೆ ದೇಣಿಗೆ ಪಡೆಯುವುದಕ್ಕೂ ಆಧುನಿಕೋತ್ತರ ಸಂದರ್ಭದಲ್ಲಿ ವಿವಿಧ ಪಕ್ಷಗಳು ಉದ್ದಿಮೆದಾರರಿಂದ ದೇಣಿಗೆ ಪಡೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ದೇಶವನ್ನು ವಿದೇಶಿ ಆಡಳಿತದಿಂದ ಸ್ವತಂತ್ರಗೊಳಿಸಲು ಉದ್ದಿಮೆದಾರರು ದೇಣಿಗೆ ನೀಡಿದರೆ, ಇಂದು ವ್ಯಾವಹಾರಿಕ ಉದ್ದೇಶಗಳಿಂದ ದೇಣಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯಾನಂತರ ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾದ ರಾಜಕೀಯ ಪಕ್ಷಗಳು ಗಾಂಧಿಗೆ ಇದ್ದ ನೈತಿಕತೆಗೆ ತಿಲಾಂಜಲಿ ನೀಡಿದವು. ಇದರ ಪರಿಣಾಮವೆಂದರೆ ಉದಾರ ದೇಣಿಗೆ ನೀಡಿದಷ್ಟು ತಾವು ಅಧಿಕಾರದ ಗದ್ದುಗೆ ಹಿಡಿದ ನಂತರ ಪ್ರತ್ಯುಪಕಾರ ಮಾಡಲು ಒಳ ಒಪ್ಪಂದವಾಗುತ್ತಿರುವುದು ಬಹಿರಂಗ ಸತ್ಯ. ಇಲ್ಲವಾದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯುವುದು ಹೇಗೆ ಸಾಧ್ಯ?
ಬೃಹತ್ ಬಂಡವಾಳವನ್ನು ರಾಜಕೀಯ ಪಕ್ಷಗಳಿಗಾಗಿ ಹೂಡಿದ ಬಂಡ ಬಂಡವಾಳಶಾಹಿಗಳಿಗೆ ದೇಶಪ್ರೇಮ, ನೈತಿಕತೆ, ಪ್ರಾಮಾಣಿಕತೆಗಳ ಜತೆಗೆ ಎಣ್ಣೆ ಸೀಗೆಕಾಯಿ ಸಂಬಂಧ. ಅಲ್ಲದೇ ವ್ಯಾಪಾರವೆಂದರೆ ದ್ರೋಹ ಚಿಂತನೆ. ಅವರ ಮನೋಧರ್ಮದ ಪ್ರಕಾರ ಹೂಡಿದ ಬಂಡವಾಳಕ್ಕೆ ಗರಿಷ್ಠ ಮಟ್ಟದ ಲಾಭ ಮರಳಿ ಬರಬೇಕು. ರಾಜಕಾರಣಿ ಮತ್ತು ರಾಜಕೀಯ ಪಕ್ಷಗಳ ಮೇಲೆ ಹೂಡುವ ಬಂಡವಾಳವೂ ಇದಕ್ಕೆ ಹೊರತಲ್ಲ. ಹೀಗೆ ಪರಸ್ಪರ ಕೊಡುಕೊಳೆಗಳಲ್ಲಿ ಸಿಲುಕಿರುವ ಭಾರತೀಯ ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿಗಳಿಗೆ ಬಡವರೆಂದರೆ ಅವರ ಭೋಗದ ವಸ್ತುವಿಗಿಂತ ಕಡೆ. ಅವರ ಪರವಾಗಿ ಯಾರೂ ಏನನ್ನೂ ಮಾಡಲು ಬಿಡುವುದಿಲ್ಲ. ಕಾರಣ ಇವರು ಕರ್ಚು ಮಾಡಲು ಹಿಂದೇಟು ಹಾಕುವ ಮನಃಸ್ಥಿತಿಯ ಜನ. ಇವರಿಂದ ದೇಶದಲ್ಲಿ ಬಂಡವಾಳ ಕೊಳೆಯುತ್ತದೆ. ಆದ್ದರಿಂದ ಎಲ್ಲರನ್ನೂ ಮಧ್ಯಮ, ಮೇಲ್ಮಧ್ಯಮ ವರ್ಗದ ವ್ಯಾಪ್ತಿಗೆ ತರಬೇಕು. ಇದಕ್ಕಾಗಿ ಆರ್ಥಿಕ ತಜ್ಞರನ್ನು ಕಲೆಹಾಕಿದೇಶದ ತಲಾದಾಯ ವೃದ್ಧಿಯಾಗಿದೆ ಎಂಬ ಮಿಥ್ಯೆಯನ್ನು ಸತ್ಯವೆಂದು ಪ್ರತಿಪಾದಿಸಲಾಗುತ್ತದೆ.
ದೊಡ್ಡ ಪ್ರಮಾಣದ ಹಣ ಹೂಡಿರುವವರು ದೇಶಕ್ಕಾಗಿ ತಂತ್ರಜ್ಞಾನ, ವಿಜ್ಞಾನ, ಬಡತನ ನಿವಾರಣೆ, ಗುಡಿಸಲು ಮುಕ್ತ ಭಾರತ, ಮೂಲಸೌಕರ್ಯಗಳ ಬಗೆಗೆ ಯೋಚಿಸಬೇಕೆಂದು ಬಯಸುವುದು ಆದರ್ಶವಾಗುತ್ತದೆ. ಇದರಿಂದ ಸೌಲತ್ತು ಪಡೆದ ರಾಜಕೀಯ ಪಕ್ಷ, ರಾಜಕಾರಣಿಗಳು ದೇಶವನ್ನು ಸ್ವದೇಶೀ ಉದ್ದಿಮೆದಾರರಿಗೆ ಒದಗಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಸಾಕಾರಕ್ಕಾಗಿ ಭೂಸ್ವಾಧೀನ ಮಸೂದೆಗೆ ಹಠ ಹಿಡಿದು ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಿ, ಲೋಕಸಭೆಯ ಬಹುತೇಕ ವಿರೋಧ ಪಕ್ಷಗಳು ಹಾಗೂ ದೇಶದ ಚಳವಳಿಗಾರರ ವಿರೋಧಗಳನ್ನು ಲೆಕ್ಕಿಸದೆ, ಕನಿಷ್ಠ ಕುರಿತು ಚರ್ಚೆಗೆ ಅವಕಾಶವಾಗುವ ವಾತಾವರಣವನ್ನೂ ಇಲ್ಲವಾಗಿಸಿ ಲೋಕಸಭೆಯಲ್ಲಿ ಮಂಡಿಸಿ ರಾಷ್ಟ್ರಪತಿಯಿಂದ ಅಂಕಿತ ಪಡೆದರೂ ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಇನ್ನೂ ಅಂಗೀಕರಿಸಲಾಗಿಲ್ಲ
ಭೂಸ್ವಾಧೀನ ಕಾಯ್ದೆಯ ವಿರೋಧಿಗಳಿಗೆ ಅಭಿವೃದ್ಧಿ ವಿರೋಧಿಗಳೆಂಬ ಪಟ್ಟಕಟ್ಟಲು ಪಟ್ಟಭದ್ರ ಗುಂಪುಗಳನ್ನು ಕಟ್ಟಿಕೊಳ್ಳಲಾಗಿದೆ. ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ, ಕೆಲವೊಮ್ಮೆ ಧಮ್ಕಿ ಹಾಕುವ ಶೈಲಿಯಲ್ಲಿ ವಾದದಲ್ಲಿ ತೊಡಗಿದೆ. ಮತ್ತಿವರು ಸ್ವಯಂಘೋಷಿತ ದೇಶಭಕ್ತರು. ಬಹುತೇಕ ಸ್ವಯಂಘೋಷಿತ ದೇವಮಾನವರ ಕತೆ ಏನಾಗಿದೆ ಎಂದು ಇವರು ಕ್ಷಣಕಾಲ ಯೋಚಿಸಬೇಕಿದೆ. ಆದರೆ ದೀಪದ ಬುಡ ಕತ್ತಲೆ. ಕತ್ತಲೆಗೆ ದೀಪ ಹಿಡಿದವರಿಗೆ ಯಥಾಪ್ರಕಾರ ದೇಶದ್ರೋಹಿಗಳ ಪಟ್ಟ.
ದೇಶಭಕ್ತಿ ಹೆಸರಿನಲ್ಲಿ ದೇಶಾದ್ಯಂತ ವ್ಯಾಪಕ ಸಂಘಟನೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮೋದಿಯವರನ್ನು ಪ್ರಧಾನಿ ಹುದ್ದೆಗೇರಿಸಲು ಹಗಲಿರುಳು ದುಡಿದ ನಮೋ ಬ್ರಿಗೇಡಿಗರೂ ಕೇಂದ್ರ ಸರ್ಕಾರದ ರೈತವಿರೋಧಿ ಭೂಸ್ವಾಧೀನ ಮಸೂದೆ ವಿಷಯದಲ್ಲಿ ಮೌನವಾಗಿದ್ದಾರೆ. ಇದು ಅವರ ಆತ್ಮಸಾಕ್ಷಿಗೆ ಮಾಡುತ್ತಿರುವ ದ್ರೋಹವಲ್ಲವೇ? ಅಭಿವೃದ್ಧಿಯೆಂದರೆ ಅನ್ನ ನೀಡುವ ರೈತನ ಭೂಮಿಯನ್ನು ಅವನ ಒಪ್ಪಿಗೆಯಿಲ್ಲದೇ ಕಿತ್ತುಕೊಂಡು ಬ್ರಹ್ಮಾಂಡ ಭ್ರಷ್ಟಾಚಾರದ ಭಾಗಿದಾರರಾದ ಖಾಸಗಿ ಉದ್ದಿಮೆದಾರರಿಗೆ ಹಂಚುವುದೇ?

ಅಭಿಪ್ರಾಯಗಳು:
ಹೊಟ್ಟೆಗೆ ಅನ್ನ ತಿನ್ನುವವರೆಲ್ಲರೂ ಕಾಯ್ದೆಯನ್ನು ವಿರೋಧಿಸಬೇಕು.
ದೇವನೂರ ಮಹಾದೇವ

ಇದು ಭೂಸ್ವಾಧೀನ ಕಾಯ್ದೆಯಲ್ಲ. ಭೂ ದರೋಡೆ ಕಾಯ್ದೆ.
ಎನ್.ಎಸ್ಶಂಕರ್ 

Friday, 15 April 2016

ಶಂಬೂಕ, ಏಕಲವ್ಯರ ಶಕ್ತಿ ಇನ್ನಷ್ಟೇ ಸಾಬೀತಾಗಬೇಕಿದೆ
ಖಾಸಗಿ ರಂಗದಲ್ಲಿ ಮೀಸಲಾತಿ 
ಪ್ರದೀಪ್ ಮಾಲ್ಗುಡಿ
೨೦೦೪ರಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತು ಯುಪಿಎ ಸರ್ಕಾರ ಪ್ರಸ್ತಾಪಿಸಿತು. ಆದರೆ ಆಕಾಶವೇ ಕಳಚಿ ಬಿದ್ದಂತೆ ಖಾಸಗಿ ಕಂಪೆನಿಗಳು ಹುಯಿಲೆಬ್ಬಿಸಿದವು.
ಭಾರತದಲ್ಲಿ ಮೀಸಲಾತಿ ಬ್ರಿಟಿಷ್ ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ಬಂದದ್ದು ೧೯೦೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿ (೧೮೮೧)ಜ್ಯೋತಿಬಾ ಫುಲೆ ಕಡ್ಡಾಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿದ್ದರು. ೧೯೦೨ರಲ್ಲಿ ಶಾಹು ಮಹರಾಜ್ ತಮ್ಮ ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಇದರ ಜತೆಗೆ ಮೈಸೂರು ಅರಸರೂ ಮೀಸಲಾತಿ ಪರವಾಗಿದ್ದರು.
ಈ ಆಧಾರದ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಒತ್ತಾಯ ಮತ್ತು ಆರಂಭವಾಗಿ ಇನ್ನೂ ೧೩೪ ವರ್ಷಗಳಷ್ಟೇ ಆಗಿದೆ. ಅದು ಜಾರಿಯಾಗಿ ೧೦೭ ವರ್ಷಗಳು ಕಳೆದಿವೆ. ಆದರೆ ಭಾರತದ ಚರಿತ್ರೆ ಆರಂಭವಾದ ದಿನದಿಂದ ಇಂದಿನವರೆಗೆ ಅನೈಚ್ಛಿಕವಾಗಿ ಜಾರಿಯಲ್ಲಿರುವ ಮೀಸಲಾತಿಯನ್ನು ಇದುವರೆಗೆ ಯಾರೂ ವಿರೋಧಿಸುವುದಿಲ್ಲ. ವರ್ಣಾಶ್ರಮವನ್ನು ಆಧರಿಸಿ ಶ್ರಮ ವಿಭಜಿಸಿದ ಕಾರಣದಿಂದ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಅಧಿಕಾರ, ಆಸ್ತಿ, ಸಂಪತ್ತಿನ ಒಡೆತನವನ್ನು ಅನುಭವಿಸಿರುವವರು ಇಂದಿಗೂ ಆರಾಮವಾಗಿದ್ದಾರೆ. ಆರಂಭದಿಂದಲೂ ದಮನಿತರಿಗೆ ಅಕ್ಷರ ಜ್ಞಾನವನ್ನೂ ಒಳಗೊಂಡಂತೆ ಯಾವುದರ ಮೇಲೂ ಅಧಿಕಾರವಿರಲಿಲ್ಲ. ಇವರಲ್ಲಿ ಬಹುಪಾಲು ಮಂದಿ ಇನ್ನೂ ಆದಿಮ ಸ್ಥಿತಿಯಲ್ಲೇ ಜೀವಿಸುತ್ತಿದ್ದಾರೆ.
ಕೇವಲ ೧೦೭ ವರ್ಷಗಳ ಮೀಸಲಾತಿ ಜಾರಿಗೆ ಬಂದು ಅದೂ ಕಟ್ಟುನಿಟ್ಟಾಗಿ ಜಾರಿಯಾಗಲೇಬೇಕೆಂದು ನ್ಯಾಯಾಲಯಗಳು ಆಜ್ಞೆ ಹೊರಡಿಸಿದ ನಂತರ ಕೆಲವೇ ದಶಕಗಳಿಂದ ಸರ್ಕಾರದಿಂದ ನಿಗದಿತ ಪ್ರಮಾಣದ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಇದರ ಅರಿವಿಲ್ಲದವರಂತೆ ವರ್ತಿಸುತ್ತಿರುವ ಮೀಸಲಾತಿ ವಿರೋಧಿಗಳು ದೇಶದ ಕರಾಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.   ದುರಂತವೆಂದರೆ ಮೀಸಲಾತಿ ವಿರೋಧಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪಾಲು ಹೆಚ್ಚಿರುವುದು.
ಶಂಬೂಕ, ಏಕಲವ್ಯರ ಪಾಂಡಿತ್ಯವನ್ನು ನಿರುಪಯುಕ್ತಗೊಳಿಸಲು ನಡೆಸಿರುವ ಹುನ್ನಾರವನ್ನು ಈ ಶೂದ್ರ ಸಮುದಾಯದವರು ಮರೆತಿದ್ದಾರೆ. ವಿದ್ಯಾಭ್ಯಾಸದಲ್ಲಿ ಎಲ್ಲರಿಗೂ ಅವಕಾಶ ಮುಕ್ತವಾಗಿದೆಯಾದರೂ ಉದ್ಯೋಗದಲ್ಲಿ ಈ ಅವಕಾಶ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗುವುದು ಸಾಧ್ಯವಿಲ್ಲ. ಇದುವರೆಗೆ ಶಿಕ್ಷಣ, ಅಧಿಕಾರ, ಅಂತಸ್ತು ಹಾಗೂ ಆಸ್ತಿ ಸಂಪಾದಿಸಿರುವವರಿಗೆ ತಂತಾನೇ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿದ್ದರೆ, ಈ ಯಾವುದೂ ಇಲ್ಲದವರು ಮತ್ತೆ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಶಂಬೂಕನ ತಲೆ ಕತ್ತರಿಸಿ ಅವನ ಜ್ಞಾನ ಅವನ ಸಮುದಾಯಕ್ಕೆ ಸಿಗದಂತೆ, ಏಕಲವ್ಯನ ಬೆರಳು ಕತ್ತರಿಸುವ ಮೂಲಕ ಅವನ ಜ್ಞಾನವನ್ನೇ ಇಲ್ಲವಾಗಿಸಿದ್ದಕ್ಕಿಂತ ಭೀಕರ ಸನ್ನಿವೇಶಗಳನ್ನು ಆಧುನಿಕ ಸಂದರ್ಭದಲ್ಲಿ ಸೃಜಿಸಲಾಗಿದೆ. ಹೇಗೆಂದರೆ ವಿದ್ಯಭ್ಯಾಸ ಪಡೆದ ತಳಸಮುದಾಯದ ಪ್ರತಿಭಾವಂತರಿಗೆ ತಮ್ಮ ಪರವಾಗಿ ಕರ್ತವ್ಯ ನಿರ್ವಹಿಸುವವರ ಬೆಂಬಲವಿಲ್ಲದೆ ಅವರ ವಿದ್ಯೆ ಅನುಪಯುಕ್ತವಾಗುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಭವಿಷ್ಯದಲ್ಲಿ ಅವರು ಓದಿದ್ದೇ ವ್ಯರ್ಥ ಎಂಬ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಲಾಗುತ್ತಿದೆ. ಇದರ ಮುಂದುವರೆದ ರೂಪವನ್ನೇ ಈಗಲೂ ಹೊಸರೂಪದಲ್ಲಿ ಅಸ್ತಿತ್ವದಲ್ಲಿಡಲು ಈ ಮೇಲ್ವರ್ಗ ಹಗಲಿರುಳೂ ಕಾರ್ಯನಿರತವಾಗಿರುವಂತಿದೆ. ಮೀಸಲಾತಿ ವಿರೋಧಕ್ಕೆ ಪೂರಕ ಜನಾಭಿಪ್ರಾಯ ರೂಪಿಸುವಲ್ಲಿ ಕೂಡ ಯಶಸ್ವಿಯಾಗಿರುವುದು ಇದಕ್ಕೆ ನಿದರ್ಶನ.
ಇನ್ನು ಗ್ಯಾಟ್, ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದ, ಬಂಡವಾಳ ಹಿಂತೆಗೆತ ಮೊದಲಾದವುಗಳಿಂದ ದೇಶದಲ್ಲಿ ಸರ್ಕಾರಿ ಉದ್ಯೋಗಗಳ ಲಭ್ಯತೆ ಕನಿಷ್ಠಮಟ್ಟಕ್ಕೆ ಕುಸಿಯಲಿದೆ. ಮೀಸಲಾತಿ ವಿರೋಧಿಗಳು ಇದನ್ನು ಯಶಸ್ವಿಯಾಗಿ ಆಗುಮಾಡುತ್ತಿದ್ದಾರೆ. ರೋಗಗ್ರಸ್ಥತೆಯ ಹೆಸರಿನಲ್ಲಿ ಹಂತಹಂತವಾಗಿ ಸರ್ಕಾರಿ ಕೈಗಾರಿಕೆ, ಉದ್ಯಿಮೆಗಳನ್ನು ಮುಚ್ಚುತ್ತಿರುವ ಹೊತ್ತಿನಲ್ಲಿ ಖಾಸಗಿ ಕೈಗಾರಿಕೆಗಳು ಹಾಗೂ ಉದ್ಯಿಮೆಗಳು ಸಾವಿರಾರು ಕೋಟಿ ರೂ.ಗಳ ಲಾಭ ಗಳಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಖಾಸಗಿ ಉದಿಮೆಗಳನ್ನುಳಿದು ಸರ್ಕಾರದ ಯಾವುದೇ ಕೈಗಾರಿಕೆಗಳೂ ಅಸ್ತಿತ್ವದಲ್ಲಿರುವುದು ಸಾಧ್ಯವಿಲ್ಲ.
ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಬೇಕಿದೆ. ಭಾರತದಲ್ಲಿ ದಕ್ಷ ಕೆಲಸಗಾರರಿಗೆ ಕೊರತೆ ಇಲ್ಲ. ಆದರೆ ಸ್ವಜಾತಿಯ ಕಾರಣದಿಂದ ದಕ್ಷತೆ ಮತ್ತು ಅದಕ್ಷತೆಯನ್ನು ಅಳೆಯುವ ಕೆಲಸ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿಗೆ ಬಂದಲ್ಲಿ ಈಗ ವಿದ್ಯಾಭ್ಯಾಸದಲ್ಲಿ ಇರುವ ಸ್ಪರ್ಧೆ ಉದ್ಯೋಗ ಕ್ಷೇತ್ರದಲ್ಲೂ ಏರ್ಪಟ್ಟು ಎಲ್ಲರಿಗೂ ಉದ್ಯೋಗದ ಅವಕಾಶ ನಿರ್ಮಾಣವಾಗಬಹುದು.

ರಾಮ ಜನ್ಮ ಭೂಮಿ: ಇತಿಹಾಸ ತಿರುಚುವವರ ವರಸೆ
ಪ್ರದೀಪ್ ಮಾಲ್ಗುಡಿ 
ಈ ವಿವಾದವನ್ನು ಅಧಿಕಾರ ಹಿಡಿಯಲು ಸಂಘ ಪರಿವಾರ ಮತ್ತು ಬಿಜೆಪಿ ದುರ್ಬಳಕೆ ಮಾಡಿಕೊಂಡಿವೆ. ಇತಿಹಾಸದ ಅರಿವುಳ್ಳವರಿಗೆ ಆಯಾ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳೂ ತಿಳಿದಿರುತ್ತವೆ. ’ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದನೋ ಇಲ್ಲವೋ’ ಎಂಬುದಕ್ಕಿಂತ ’ರಾಜ್ಯ ಗೆದ್ದವನ ಸ್ವತ್ತು’ ಎಂಬುದು ಅಂದಿನ ನಿಯಮ. ಮುಸ್ಲಿಮರು ಅಲ್ಲಿ ಬಾಬರಿ ಮಸೀದಿಯನ್ನು ಕಾಲಾನಂತರದಲ್ಲಿ ಕಟ್ಟಿರಬಹುದು. ಈ ಹಿಂದೆ ಬಲಿಷ್ಠ ರಾಜ ತಾನು ಗೆದ್ದ ಪ್ರದೇಶವನ್ನು ವಶಪಡಿಸಿಕೊಂಡಾಗ ಆ ನಾಡು, ಅಲ್ಲಿನ ಪ್ರಜೆಗಳೆಲ್ಲರೂ ಅವನ ಅಧೀನದಲ್ಲಿದ್ದು, ಅವನ ಆದೇಶದಂತೆ ನಡೆಯಬೇಕಿತ್ತು. ಅದರಂತೆ ತಾನು ಗೆದ್ದ ಪ್ರದೇಶದಲ್ಲಿ ಅವನು ಏನನ್ನು ಬೇಕಾದರೂ ಮಾಡಲು ಅವಕಾಶವಿತ್ತು. ಅದರಂತೆ ಅಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿರಬಹುದು.
ಮಧ್ಯಕಾಲದ ಐತಿಹಾಸಿಕ ಘಟನೆಯೊಂದನ್ನು ದಾಳವಾಗಿಸಿಕೊಂಡು ಅಧಿಕಾರ ಹಿಡಿಯಲು ಬಳಸಿಕೊಂಡದ್ದು ದೇಶದ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಈ ಘಟನೆಯ ಮೂಲಕ ದೇಶದಲ್ಲಿ ಹಿಂದೂ - ಮುಸ್ಲಿಂರ ನಡುವೆ ದೊಡ್ಡ ಕಂದಕವನ್ನು ನಿರ್ಮಿಸಲಾಗಿದೆ.
ಇತಿಹಾಸವನ್ನು ಬೇಕಾದಾಗ ಬೇಕಾದಂತೆ ವ್ಯಾಖ್ಯಾನಿಸುವ ಕೆಲಸವನ್ನು ಸಂಘ ಪರಿವಾರ ಮತ್ತವರ ಬೆಂಬಲಿಗರು ಮಾಡುತ್ತಿದ್ದಾರೆ. ಮುಸ್ಲಿಮರು ಗೆದ್ದು ಸ್ಥಾಪಿಸಿದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿ, ಅದೇ ಸ್ಥಳದಲ್ಲಿ ರಾಮ ಮಂದಿರ ಕಟ್ಟುತ್ತೇನೆನ್ನುವವರು ಇತಿಹಾಸ ಸೃಷ್ಟಿಸುವ ಮದದಲ್ಲಿದ್ದಾರೆ. ಇಂತಹ ಮನೋಧರ್ಮ ಮುಂದುವರೆದರೆ ಮತ್ತಷ್ಟು ಜೀವಹಾನಿಯಲ್ಲದೆ ಮತ್ತೇನನ್ನೂ ಸಾಧಿಸಲಾಗದು.
ಆದರೆ ಇತಿಹಾಸ ಸೃಷ್ಟಿಸಲು ಅಮಾಯಕರ ಬಲಿಯಾಗುತ್ತಿರುವುದನ್ನು ಈ ದೇಶಭಕ್ತರು ಮರೆಯುತ್ತಿದ್ದಾರೆ. ’ಧರ್ಮವೆನ್ನುವುದು ಜನರಿಗೆ ತಿನ್ನಿಸಲಾದ ಅಫೀಮು’ ಎಂದ ಮಾರ್ಕ್ಸ್‌ನ ಮಾತು ನಿಜವಾಗಿದೆ. ಈ ಮತ್ತಿನಿಂದ ಅವರೆಂದೂ ಹೊರಬರದಂತೆ, ಸೇವಿಸಿದವರನ್ನು ತೇಲಿಸುವ ಬದಲು ಮುಳುಗಿಸುತ್ತಿದೆ.

Monday, 16 March 2015

ಜಾಗತೀಕರಣ ಹಾಗಂದರೇನು?
ಕೆಪ್ಪರ ನಡುವೆ ಶ್ರೋತೃಗಳ ಹುಡುಕಾಟ 
- ಪ್ರದೀಪ್ ಮಾಲ್ಗುಡಿ

ನಾಡಿನೆಲ್ಲೆಡೆ ಜಾಗತೀಕರಣ ಕುರಿತು ಬಹುತೇಕರು ಅದನ್ನು ಸಮರ್ಥಿಸಿಯೋ ಅಥವಾ ವಿಮರ್ಶಿಸಿಯೋ ಮಾತನಾಡುತ್ತಿರುವುದು ಈಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ಜಾಗತೀಕರಣವೆಂದರೇನು? ಎಂಬ ಪ್ರಶ್ನೆಗೆ ಇನ್ನೂ ಭಾರತೀಯರು ಖಚಿತ ಉತ್ತರ ಕಂಡುಕೊಂಡಿಲ್ಲ. ರಾಜಕಾರಣಿಗಳು, ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು, ಚಿಂತಕರು, ಸಂಶೋಧಕರ ಬಾಯಲ್ಲಿ ಸದಾ ಜಾಗ ಪಡೆದಿರುವ ಇದಕ್ಕೆ ವ್ಯಾಖ್ಯೆ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ತುಸು ಕಷ್ಟಕರವಾದ ಕೆಲಸವಾಗಿದೆ. ಜಾಗತೀರಣವೆಂದರೆ ತೃತೀಯ ರಾಷ್ಟ್ರಗಳನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಲು ನವವಸಾಹತುಶಾಹಿಗಳು ಬಳಸಿದ ಆಕರ್ಷಕ ಪರಿಭಾಷೆ. ಇದು ಆರ್ಥಿಕ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡಿದೆ. ಆದರೆ ಅದಕ್ಕೆ ಕೇವಲ ಆರ್ಥಿಕ ಹಿತಾಸಕ್ತಿಗಳು ಮಾತ್ರ ಮುಖ್ಯವಾಗಿಲ್ಲ. ಅದರ ಜತೆಗೆ ಸ್ಥಳೀಯ ಭಾಷೆ, ಧರ್ಮ, ನಂಬಿಕೆ, ಆಚರಣೆ, ಸಂಪ್ರದಾಯ, ಉದ್ಯೋಗ, ಶಿಕ್ಷಣ, ಆಡಳಿತ ಮೊದಲಾದ

ಚಿತ್ರ ಕೃಪೆ: ಬಿಸಿನೆಸ್ ನ್ಯೂಸ್
ಸಾಂಸ್ಕೃತಿಕ ಹಾಗೂ ರಾಜಕೀಯ ವಿಷಯಗಳನ್ನೂ ನಿಧಾನಕ್ಕೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರವಿದೆ. ಇದನ್ನು ಉದಾಹರಿಸದ ಹೊರತು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಇಲ್ಲವಾದಲ್ಲಿ ಈ ಲೇಖನ ಜಾಗತೀಕರಣದ ವಿರೋಧಿಯೊಬ್ಬನ ಬಡಬಡಿಕೆಯಂತೆ ತೋರಬಹುದು. ಪೆಪ್ಸಿ-ಕೋಕಕೋಲ, ಕೆಂಟಕಿ ಚಿಕನ್, ಜೀನ್ಸ್, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಂತರಿಕ ಸಂಬಂಧವಿದೆ. ಇಂದು ಯುಜಿಸಿ ವೇತನವನ್ನು ನಿಗದಿ ಮಾಡುವ ಅವಕಾಶವನ್ನು ಭಾರತದಂತಹ ತೃತೀಯ ರಾಷ್ಟ್ರಗಳು ಕಳೆದುಕೊಂಡಿವೆ ಎಂಬ ಅಂಶ ಸ್ವತಃ ಯುಜಿಸಿ ವೇತನ ಪಡೆಯುತ್ತಿರುವ ಲಕ್ಷಾಂತರ ಪ್ರಾಧ್ಯಾಪಕರ ಅರಿವಿಗೆ ಬಂದಿಲಾರದು. ಅಥವಾ ತಿಳಿದಿದ್ದೂ ಜಾಗತೀಕರಣದ ವಿರುದ್ಧ ಮಾತನಾಡದಂತೆ ಮ್ಯಾಜಿಕ್‌ನಂತೆ ದುಪ್ಪಟ್ಟು ಏರಿಕೆಯಾದ ವೇತನವೂ ಕಾರಣವಾಗಿರಬಹುದು. ಇಲ್ಲವೇ ಇದರ ವಿರುದ್ಧ ಮಾತನಾಡಿದರೆ ಮುಂದೆ ಏರಬಹುದಾದ ವೇತನದ ಮೇಲೆ ನಾವೇ ಏಕೆ ಕಲ್ಲು ಹಾಕಿಕೊಳ್ಳಬೇಕೆಂಬ ಜಾಣ ಕುರುಡಿರಬಹುದು. ಇದಕ್ಕೊಂದು ಕಾರಣವಿದೆ. ಉನ್ನತ ವಿದ್ಯಾಕೇಂದ್ರಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ನವವಸಾಹತುಶಾಹಿಯ ಜಾಗತಿಕ ಭವಿಷ್ಯ ಬಯಲಾಗಿಬಿಡುತ್ತದೆ. ಆದರೆ ಅಲ್ಲಿನ ವ್ಯವಸ್ಥೆಯನ್ನು ಹಾಳುಗೆಡವುವಲ್ಲಿ ಯಶಸ್ವಿಯಾದರೆ ತಮ್ಮ ಬುಡ ಭದ್ರವಾಗಿರುತ್ತದೆಂಬುದು ನವವಸಾಹತುಶಾಹಿಗಳ ದೃಢವಾದ ನಂಬಿಕೆಯಾಗಿದೆ. ಆದರೆ ತಾನು ನಂಬಿದ್ದನ್ನು ಎಲ್ಲರಿಗೂ ತಿಳಿಯದಂತೆ, ಎಲ್ಲರೂ ಒಪ್ಪುವಂತೆ ಮಾಡುವ ಕುತಂತ್ರ ಮಾತ್ರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಇಲ್ಲವಾದಲ್ಲಿ ಈ ಹೊತ್ತಿಗೆ ಜಾಗತೀಕರಣದ ಸುತ್ತ ತೃತೀಯ ರಾಷ್ಟ್ರಗಳಲ್ಲಿ ದೊಡ್ಡ ಜನಾಭಿಪ್ರಾಯ ರೂಪಿತವಾಗಿರಬೇಕಿತ್ತು.
ತೃತೀಯ ರಾಷ್ಟ್ರಗಳ ಅನೈಕ್ಯತೆಯನ್ನು ವಸಾಹತುಶಾಹಿಗಳಂತೆಯೇ ಇಂದಿಗೂ ನವವಸಾಹತುಶಾಹಿಗಳು ಬಳಸಿಕೊಳ್ಳುತ್ತಿದ್ದಾರೆ. ಜಾತಿ, ವರ್ಗ, ವರ್ಣ, ಲಿಂಗ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಸಮಾನತೆಯನ್ನು ಜೈವಿಕ ವಿಷಯವೆಂಬಂತೆ ತಿಳಿದಿರುವ ತೃತೀಯ ರಾಷ್ಟ್ರಗಳನ್ನು ಆಧುನಿಕ ಸಂದರ್ಭದಲ್ಲಿ ಮರಳು ಮಾಡುವುದು ಇನ್ನಷ್ಟು ಸುಲಭಸಾಧ್ಯವಾಗಿದೆ.
ಅಕಾಡೆಮಿಕ್ ವಲಯದಲ್ಲಿ ಇಂದು ಎಲ್ಲ ವಿಷಯಗಳಿಗೂ ಹಿಂದೆ ಅಥವಾ ಮುಂದೆ ಜಾಗತೀಕರಣವನ್ನು ಅಂಟಿಸಿ ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡದಲ್ಲಿ ಇದರ ಬಗೆಗೆ ಸಮರ್ಥವಾಗಿ ಚಿಂತಿಸುವವರ ಸಂಖ್ಯೆಯ ಖಚಿತ ಅಂದಾಜು ಕೂಡ ಸಿಗಲಾರದು. ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ’ಈ ಜಾಗತೀಕರಣದಿಂದಾದರೂ ಜಾತಿ ವ್ಯವಸ್ಥೆ ಹೋಗುವುದಾದರೆ ಹೋಗಲಿಬಿಡಿ’ ಎಂಬ ಮಾತನ್ನು ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡು ’ನೋಡಿ, ನೋಡಿ. ತೇಜಸ್ವಿಯವರೂ ಜಾಗತೀಕರಣದ ಪರ ವಕಾಲತ್ತು ವಹಿಸುತ್ತಿದ್ದಾರೆ’ ಎಂಬಂತಹ ಅಸಂಬದ್ಧ ವಾದವನ್ನು ಮಂಡಿಸಿ ಚರ್ಚೆಯ ಸಾಧ್ಯತೆಗಳನ್ನೇ ಇಲ್ಲವಾಗಿಸಿದರು. ಇದರ ಪರಿಣಾಮದಿಂದ ಅದರ ಸಾಧಕ ಬಾಧಕಗಳ ಚರ್ಚೆಗೇ ಸ್ಥಳವಿಲ್ಲದಂತಾಯಿತು. ಅದರ ದುಷ್ಪರಿಣಾಮ ಇಂದು ನಮ್ಮೆದುರಿದೆ.
ವಸಾಹತೋತ್ತರ ಸನ್ನಿವೇಶದಲ್ಲಿ ತೃತೀಯ ರಾಷ್ಟ್ರಗಳ ಮೇಲೆ ಬಿಗಿಹಿಡಿತ ಸಾಧಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಟ್ (ಜನರಲ್ ಅಗ್ರೀಮೆಂಟ್ ಆನ್ ಟ್ರೇಡ್ ಅಂಡ್ ಟ್ಯಾರಿಫ್) ಒಪ್ಪಂದವನ್ನು ಹೇರುವ ಹುನ್ನಾರ ನಡೆಯಿತು. ಅದನ್ನು ಭಾರತದಲ್ಲಿ ೧೯೯೧ರಲ್ಲಿ ಅಪ್ಪಿಕೊಳ್ಳಲಾಯಿತು. ಇದು ಇಲ್ಲಿ ಮಾಡಿರುವ ಅನಾಹುತಗಳನ್ನು ಅಳೆಯಲು ಇನ್ನೂ ಮಾಪಕಗಳು ಸಿದ್ಧಗೊಂಡಿಲ್ಲ. ಈ ಒಪ್ಪಂದಕ್ಕೆ ಮೂಲ ಕಾರಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಅಂದಿನ ವಿತ್ತ ಸಚಿವರಾಗಿದ್ದ ಇವರು, ಭಾರತದಲ್ಲಿ ಆರ್ಥಿಕ ಸುಧಾರಣೆಯ ಸಲುವಾಗಿ ಈ ಒಪ್ಪಂದಕ್ಕೆ ಭಾರತದ ಹೆಬ್ಬಾಗಿಲನ್ನು ತೆರೆದರು. ಅದರ ನಂತರ ಹಂತಹಂತವಾಗಿ ಭಾರತದ ಆರ್ಥಿಕ ಸ್ಥಿರತೆ ಕುಸಿಯಲಾರಂಭಿಸಿತು.
ಗ್ಯಾಟ್‌ನ ಕರಾಳ ಮುಖಗಳು ಅರಿವಾಗಬೇಕೆಂದರೆ ಕಳೆದ ಎರಡು ದಶಕಗಳಲ್ಲಿ ಭಾರತದ ಗುಡಿ ಕೈಗಾರಿಕೆಗಳ ಮೇಲೆ ವಿದೇಶಿ ಕಂಪನಿಗಳು ಮಾಡಿದ ದಾಳಿಯ ಪರಿಣಾಮ ಏನಾಗಿದೆ ಎಂದು ಪರಿಶೀಲಿಸಬೇಕಿದೆ. ಚಮ್ಮಾರ, ಕಮ್ಮಾರ, ನೇಕಾರ, ಕಂಬಾರ ಹಾಗೂ ಇನ್ನಿತರ ಸ್ವಯಂ ಉದ್ಯೋಗ ನಡೆಸಿ, ಹಳ್ಳಿಗಳಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದ  ಜನ ಗ್ಯಾಟ್ ಒಪ್ಪಂದದ ನಂತರ ಹಂತಹಂತವಾಗಿ ಹಳ್ಳಿಗಳಿಂದ ವಿಮುಖರಾಗತೊಡಗಿದರು. ಇದರ ಇನ್ನೊಂದು ದುಷ್ಪರಿಣಾಮ ರೈತರ ಮೇಲೆ ಕೂಡ ಉಂಟಾಯಿತು. ಇಂದು ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ಜನ ಸಿಗದಿರುವ ಹಂತಕ್ಕೆ ತಲುಪಲು ಕಾರಣ ಅಂದಿನ ವಿವೇಚನಾರಹಿತ ನಿರ್ಧಾರವಾಗಿದೆ. (ಇಲ್ಲಿ ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಎಲ್ಲರೂ ಒಂದರ್ಥದಲ್ಲಿ ಕೂಲಿಗಳೇ. ಆದರೆ ನಾನು ಯಥಾಸ್ಥಿತಿವಾದದ ಪರವಾಗಿ ವಾದ ಮಂಡಿಸುತ್ತಿಲ್ಲ. ವಸ್ತುಸ್ಥಿತಿ ಏನಾಗಿದೆ ಎಂಬುದಷ್ಟೇ ನನ್ನ ಮಂಡನೆ)
ಆದರೆ ಇದನ್ನು ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀರಕರಣಗಳೆಂಬ ಆಕರ್ಷಕ ಹೆಸರಿನಲ್ಲಿ ಮಂಡಿಸಲಾಯಿತು. ದೇಶೀ ಸಮುದಾಯಗಳ ಸ್ವಾವಲಂಬಿ ಜೀವನವನ್ನು ಹಂತಹಂತವಾಗಿ, ಆದರೆ ಹಿಡಿಯಾಗಿ ಆಪೋಶನ ತೆಗೆದುಕೊಳ್ಳುವ ಅನಾಹುತಕಾರಿ ಒಪ್ಪಂದವನ್ನು ದೇಶ ತನಗರಿವಿಲ್ಲದೇ ಸ್ವಾಗತಿಸಿಬಿಟ್ಟಿತು. ನೋಡನೋಡುತ್ತಲೆ ಹಳ್ಳಿಗಳಿಂದ ಯುವಕರು ನಗರಗಳೆಡೆಗೆ ಗುಳೆ ಏಳತೊಡಗಿದರು. ಹಳ್ಳಿಗಳು ಕೇವಲ ರೈತರ, ವಯಸ್ಸಾದವರ ಪಾಲಾಗತೊಡಗಿದವು. ದುಡಿಮೆಗೆ ಹಳ್ಳಿಗಳು ಯೋಗ್ಯವಲ್ಲವೆಂಬಂತೆ ನಗರಗಳು ಬೆಳೆಯತೊಡಗಿದವು. ಈ ನಗರೀಕರಣ ಪ್ರಕ್ರಿಯೆ ಜಾಗತೀಕರಣದ ಪ್ರಮುಖ ಅಂಶವಾಗಿದೆ. ಏಕೆಂದರೆ ನಗರಕೇಂದ್ರಿತ ಉತ್ಪಾದಕ ವಲಯಗಳು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಸ್ವರ್ಗಗಳಂತೆ ಭಾಸವಾಗತೊಡಗಿದವು. ಇದರಿಂದ ಆಕರ್ಷಿತರಾದ ಯುವಕರು ಕಾರ್ಖಾನೆ, ಕಚೇರಿ, ಸಾಫ್ಟ್‌ವೇರ್, ಹಾರ್ಡ್‌ವೇರ್, ಸೆಕ್ಯುರಿಟಿ ಮೊದಲಾದ ಕೆಲಸಗಳಿಗೆ ನಗರಗಳಿಗೆ ದೌಡಾಯಿಸತೊಡಗಿದ್ದು ಆ ಕ್ಷಣಕ್ಕೆ ಬಿಡುಗಡೆಯ ಹಾದಿಯಂತೆ ಕಾಣತೊಡಗಿತು. ಆದರೆ ಕಾಲಾನಂತರದಲ್ಲಿ ಎಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಜೀತವೇ ಎಂಬುದು ಅರ್ಥವಾಗತೊಡಗಿದೆ. ಆದರೆ ಈ ವಿಷಯವನ್ನು ಮನದಟ್ಟು ಮಾಡಿಕೊಳ್ಳುವಷ್ಟರಲ್ಲಿ ಆಗಬಾರದ ಅನಾಹುತಗಳು ನಡೆದಾಗಿದೆ. ಈಗ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂತಹ ಸ್ಥಿತಿ ಆಧುನಿಕ ಗುಳೆಹೊರಟ ಕಾರವಾನ್‌ಗಳದ್ದಾಗಿದೆ.