Search This Blog

Thursday 8 May 2014

ರೆಡ್‌ಕ್ರಾಸ್: ಮಾನವೀಯ ಕಾಳಜಿಯ ದ್ಯೋತಕ 
                                                                                                                                 ಪ್ರದೀಪ್ ಮಾಲ್ಗುಡಿ
ಜಗತ್ತಿನೆಲ್ಲೆಡೆ ಯುದ್ಧಗಳು ಸಂಭವಿಸಿವೆ, ಸಂಭವಿಸುತ್ತಲೇ ಇರುತ್ತವೆ. ಉದ್ದೇಶ ಯಾವುದೇ ಇದ್ದರೂ ಅಮಾಯಕರ ಬಲಿ ಮಾತ್ರ ನಿರಂತರ. ಮಾನವೀಯತೆಗೆ ಅಂಟಿದ ಶಾಪವೆಂದು ಬೇಕಾದರೂ ಯುದ್ಧಕ್ಕೆ ವ್ಯಾಖ್ಯಾನವನ್ನು ನೀಡಬಹುದು. ಸಾವಿರಾರು ಲೀಟರ್ ರಕ್ತ ಹರಿಯದೇ ಯುದ್ಧಗಳು ಮುಗಿಯುವುದಿಲ್ಲ. ಆದರೆ ಹೀಗೆ ಹರಿದ ರಕ್ತವೂ ಮನುಷ್ಯರ ಯುದ್ಧದಾಹವನ್ನು ತಣಿಸಿಲ್ಲ. ಇದಕ್ಕೆ ಬಲಿಯಾಗುವವರ ಪರವಾಗಿ ಚಿಂತಿಸುವ, ಅವರ ಪರವಾಗಿ ಕ್ರಿಯಾಶೀಲವಾದವರ ಸಂಖ್ಯೆ ಯುದ್ಧಪೀಪಾಸುಗಳಿಗೆ ಹೋಲಿಸಿದರೆ ಕಡಿಮೆಯೆ.
ಕಳಿಂಗ ಯುದ್ಧದಲ್ಲಿ ಜಯಗಳಿಸಿದ ಅಶೋಕ ಮುಂದೆ ಯುದ್ಧ ಮಾಡುವುದಿಲ್ಲವೆಂದು ನಿರ್ಣಯಿಸಿದ. ಕಾಲ ಕ್ರಿ.ಪೂ. ೩೦೪-೨೩೨. ಇಂತಹ ಯುದ್ಧ ನಡೆಸಿದ ತಪ್ಪಿಗಾಗಿ ಯುದ್ಧವಿರೋಧಿ ನಿಲುವನ್ನು ತಳೆದ ಅಶೋಕನನ್ನು ಈ ಲೋಕ ಮರೆಯಲಾರದು. ಹಾಗೆಯೇ ಯುದ್ಧಾನಂತರದ ಭೀಬತ್ಸ ಸನ್ನಿವೇಶಗಳನ್ನು ಕಂಡು  ಹೆನ್ರಿ ಡೋನೆಂಟ್‌ನ ಮನಸು ತೀವ್ರವಾದ ಆಘಾತಕ್ಕೆ ಒಳಗಾಗುತ್ತದೆ. ಯುದ್ಧ ದೃಶ್ಯಗಳಿಗೆ ಮುಖಾಮುಖಿಯಾಗುವ ಮೂಲಕ ಮಾನವೀಯತೆಯ ಕಡೆಗೆ ತುಡಿದ ಅಶೋಕ ಮತ್ತು ಹೆನ್ರಿ ಡೋನೆಂಟ್ ಮಾನವ ಜನಾಂಗದ ಅಸ್ಥಿತ್ವವನ್ನು ಉಳಿಸಲು ನೆರವಾದವರು.
ಹೆನ್ರಿ ಡೋನೆಂಟ್ ೧೮೫೯ರಲ್ಲಿ ಇಟಲಿಯ ಸಾಲ್ಫಾರಿನೋ ನಗರಕ್ಕೆ ಬಂದಿದ್ದರು. ಈ ಅವಧಿಯಲ್ಲಿ ಅಲ್ಲಿ ನಡೆದ ಭೀಕರ ಯುದ್ಧದ ನಂತರ ಇಡೀ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಸಾವು, ನೋವು, ನರಳಿಕೆ ಕೇಳಿ ಬರುತ್ತಿತ್ತು. ಸೈನಿಕರ, ಯುದ್ಧದಲ್ಲಿ ಬಳಕೆಯಾದ ಕುದುರೆಗಳ ಶವಗಳು ಎಲ್ಲೆಂದರಲ್ಲಿ ಚೆಲ್ಲಾಡಿ ಅನಾಥಶವಗಳಾಗಿದ್ದವು. ಕೆಲವು ಸೈನಿಕರು ಜೀವ ಉಳಿಸುವಂತೆ ಅಂಗಲಾಚುತ್ತಿದ್ದ ಆರ್ತನಾದಗಳು, ನೋವಿನ  ನರಳಾಟಗಳು ಮುಗಿಲುಮುಟ್ಟಿ, ಅಕ್ಷರಶಃ ಅರಣ್ಯ ರೋದನವಾಗಿತ್ತು. ಈ ಅಮಾನುಷ ದೃಶ್ಯವನ್ನು ಕಂಡ ಹೆನ್ರಿ ಡೋನೆಂಟ್ ಮನಸು ತೀವ್ರ ಅಲ್ಲೋಲಕಲ್ಲೋಲಕ್ಕೆ ಒಳಗಾಯಿತು.
ಇಂತಹ ಅನಾಹುತಗಳನ್ನು ತಡೆಯುವ ಸಲುವಾಗಿ ಏನಾದರೂ ಮಾಡಬೇಕು, ನಾಗರಿಕ ಪ್ರಜ್ಞೆ ಮೂಡಿಸಬೇಕೆಂಬ ಸಂಕಲ್ಪದಿಂದ ‘ಎ ಮೆಮೊರಿ ಆಫ್ ಸಾಲ್ಫಾರಿನೋ’ ಎಂಬ ಕೃತಿಯನ್ನು ಡೋನೆಂಟ್ ರಚಿಸಿದರು. ಮುಂದೆ ಇದು ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಹೆನ್ರಿ ಡೋನೆಂಟ್ ಮತ್ತು ಗುಸ್ತೇವ್ ಮಯನೀರ್ ಜತೆಗೂಡಿ ರೆಡ್‌ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಪೂರಕವಾದ ಕೆಲಸಗಳನ್ನು ಮಾಡುತ್ತಾರೆ. ಅದರ ಪ್ರತಿಫಲವಾಗಿ ಜಿನೇವಾದಲ್ಲಿ ಸಭೆ ನಡೆದು ಸಂಸ್ಥೆಯ ಸ್ಥಾಪನೆಯಾಗುತ್ತದೆ. ಇತ್ತೀಚೆಗೆ ಸ್ವಿಟ್ಜರ್‌ಲೆಂಡನ್ನು ಕೇವಲ ಸ್ವಿಸ್ ಬ್ಯಾಂಕ್ ಖಾತೆಯ ಕಾರಣಕ್ಕೆ ನೆನಪಿಸಿಕೊಳ್ಳಲಾಗುತ್ತಿದೆ. ಆದರೆ, ಮಾನವೀಯತೆಗೆ ಇದು ಕೊಟ್ಟಿರುವ ಉದಾರ ಕೊಡುಗೆ ಮರೆಗೆ ಸಂದಿದೆ.
ಜಗತ್ತಿನಲ್ಲಿ ಯುದ್ಧಗಳು ನಡೆಯಲು ಇಂತದೇ ನಿರ್ದಿಷ್ಟ ಕಾರಣಗಳು ಬೇಕಿಲ್ಲ. ಮೋಜಿಗಾಗಿ ಬೇಟೆಯಾಡುವಂತೆ ಕಳೆದ ಕೆಲವು ಶತಮಾನಗಳಿಂದ ಯುದ್ಧಗಳು ನಡೆದಿವೆ. ರಾಮಾಯಣ, ಮಹಾಭಾರತ, ಈನಿಯಡ್, ಓಡಿಸ್ಸಿಯಂತಹ ಮಹಾಕಾವ್ಯಗಳ ವಸ್ತುಗಳು ಮೂಲತಃ ಯುದ್ಧವನ್ನೇ ಅವಲಂಬಿಸಿವೆ. ಯುದ್ಧವಿಲ್ಲದ ಮಹಾಕಾವ್ಯ ರಚನೆಯೇ ಕಷ್ಟಕರವೇನೋ ಎಂಬಷ್ಟರಮಟ್ಟಿಗೆ ಇವುಗಳಲ್ಲಿ ಯುದ್ಧಗಳು ಅನಿವಾರ‍್ಯವಾಗಿವೆ. ಸೀತೆಯನ್ನು ರಾವಣ ಅಪಹರಿಸಿದ ಕಾರಣಕ್ಕೆ, ದ್ರೌಪದಿಯನ್ನು ದುರ‍್ಯೋಧನ ಅವಮಾನಿಸಿದ ಕಾರಣಕ್ಕೆ ಇಡೀ ಭಾರತದ ರಾಜಮಹಾರಾಜರು, ಸಣ್ಣಪುಟ್ಟ ಸಾಮಂತರು, ಪಾಳೆಯಗಾರರು, ದಳವಾಯಿಗಳು, ನಾಯಕರು ಈ ಯುದ್ಧಗಳಲ್ಲಿ ಭಾಗವಹಿಸಿದರು.
ಒಟ್ಟಿನಲ್ಲಿ ಯುದ್ಧೋತ್ಸಾಹಕ್ಕೆ ಒಂದು ನೆಪ ಬೇಕಷ್ಟೆ. ಅದು ಆಧುನಿಕ ಕಾಲದಲ್ಲೂ ಸಾಬೀತಾಗಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ, ಜಪಾನ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳ ವೈಯಕ್ತಿಕ ಹಿತಾಸಕ್ತಿಗಾಗಿ ಜಗತ್ತಿನಲ್ಲಿ ಎರಡು ಕೆಟ್ಟ ಯುದ್ಧಗಳು ಹಿಂದಿನ ಶತಮಾನದಲ್ಲಿ ನಡೆದವು. (ಅವುಗಳನ್ನು ಮಹಾಯುದ್ಧಗಳೆಂದು ಕರೆಯುವುದು ಅಪಾಯಕಾರಿ.) ಅದರಿಂದ ಕೋಟ್ಯಂತರ ಜನರ ಸಾವು ಸಂಭವಿಸಿತು. ಇನ್ನು ಸ್ವತಂತ್ರ ಭಾರತ ನೆರೆ ರಾಷ್ಟ್ರಗಳಿಂದ ಪ್ರೇರಿತವಾಗಿ, ಅಥವಾ ದಾಳಿಗೊಳಗಾಗಿ ನಡೆಸಿರುವ ಯುದ್ಧಗಳದ್ದೂ ದೊಡ್ಡ ಇತಿಹಾಸವಿದೆ. ಕಳೆದ ಶತಮಾನದ ಅಂತ್ಯದಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ ಯುದ್ಧದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇಂದಿನ ಇಂಧನ ಬೆಲೆ ಏರಿಕೆ, ಹಣದುಬ್ಬರ, ಡಾಲರ್ ಬೆಲೆ ಏರಿಕೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಜಿಡಿಪಿ ಬೆಳವಣಿಗೆಯಲ್ಲಿ ಉಂಟಾಗಿರುವ ಕುಸಿತಗಳ ಕಾರಣ ಅನವಶ್ಯಕ ಯುದ್ಧಗಳ ಪರಿಣಾಮವೆಂಬುದನ್ನು ಇಂದಿಗೂ ನಾಗರಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ.
ವೈಯಕ್ತಿಕ ಹಠ, ಸಿದ್ಧಾಂತ, ಧರ್ಮ, ಭಾಷೆ, ಭೂಮಿ, ಹೆಣ್ಣುಗಳಿಗಾಗಿ ನಡೆದಿರುವ ಯುದ್ಧಗಳಲ್ಲಿ ಮಡಿದ ಸಾವಿರಾರು ಜನರ ಕಷ್ಟಕೋಟಲೆಗಳ ಕಡೆಗೆ ಯುದ್ಧೋತ್ಸಾಹಿಗಳು ಗಮನ ನೀಡುವುದಿಲ್ಲ. ಕಟ್ಟಕಡೆಗೆ ಇವರ ಯುದ್ಧದಿಂದ ತಮ್ಮ ಹಿತಾಸಕ್ತಿಯ ಸಾಧನೆಯಾದರೂ ಸಾಧ್ಯವಾಯಿತೇ? ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಏಕೆಂದರೆ, ಇತ್ತೀಚೆಗೆ ಅಮೆರಿಕಾ ಪ್ರಾಯೋಜಿತ, ಯೋಜಿತ ಯುದ್ಧಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಅವು ಬಹುತೇಕ ಧರ್ಮ ಕೇಂದ್ರಿತವಾಗಿವೆ. ಗಲ್ಫ್ ದೇಶಗಳು, ಇರಾನ್, ಇರಾಕ್, ಆಫ್ಘಾನಿಸ್ತಾನ ಮೊದಲಾದ ಕಡೆ ನಡೆದಿರುವ ಕ್ರಾಂತಿಯ ಹೆಸರಿನ ಅಧಿಕಾರ ಬದಲಾವಣೆಗಳು ಹಾಗೂ ಅಮೆರಿಕ ಸ್ವತಃ ದಾಳಿ ನಡೆಸಿ, ಪ್ರಜಾಪ್ರಭುತ್ವದ ರಕ್ಷಕನ ಫೋಸ್ ನೀಡುತ್ತಿರುವ ಈ ಹೊತ್ತಿನಲ್ಲಿ ಅಶೋಕ ಮತ್ತು ಹೆನ್ರಿ ಡೋನೆಂಟ್ ತರದವರ ಕ್ರಿಯೆಯನ್ನು ಯಾರು ಮನ್ನಿಸಬೇಕು?
ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಯ ಉದ್ದೇಶ ಕೇವಲ ಯುದ್ಧ ಸಂತ್ರಸ್ತರ ರಕ್ಷಣೆಯಲ್ಲ; ಬದಲಾಗಿ ಎಲ್ಲ ಬಗೆಯ ವಿಕೋಪಗಳ ಸಂದರ್ಭದಲ್ಲೂ ಅಸಹಾಯಕರ ನೆರವಿಗೆ ತನ್ನ ನೆರವಿನ ಹಸ್ತವನ್ನು ನೀಡುವುದು. ಆದ್ದರಿಂದ ಇಂದು ಜಗತ್ತಿನಾದ್ಯಂತ ರೆಡ್‌ಕ್ರಾಸ್ ಸಂಸ್ಥೆಯ ಶಾಖೆಗಳು ಕಾರ‍್ಯ ನಿರ್ವಹಿಸುತ್ತಿವೆ. ರಕ್ತ ಸಂಗ್ರಹ, ರಕ್ತದಾನದ ಮೂಲಕ ಮಾನವ ಸಂಕುಲದ ಉಳಿವಿಗೆ ಇದು ಸಲ್ಲಿಸಿರುವ, ಸಲ್ಲಿಸುತ್ತಿರುವ ಕೊಡುಗೆ ಅನುಪಮವಾದುದು. ಇಂದು ಎಲ್ಲೆ ಎಂಥ ಬಗೆಯ ಅವಘಡಗಳು ಸಂಭವಿಸಿದಾಗಲೂ ಮೊದಲು ರೆಡ್‌ಕ್ರಾಸ್‌ನ ಸ್ವಯಂ ಸೇವಕರು ಹಾಜರಿರುತ್ತಾರೆ. ಅಂತಹ ನಿಸ್ವಾರ್ಥಮಯ ಸೇವೆಗೆ ತನನ್ನು ತಾನು ತೆತ್ತುಕೊಳ್ಳುವಂತಹ ಮನಸ್ಥಿತಿಯನ್ನು ಜನರಲ್ಲಿ ಉಂಟುಮಾಡಿದ ರೆಡ್‌ಕ್ರಾಸ್ ಸಂಸ್ಥೆಗೆ ಮೂರು ಬಾರಿ ವಿಶ್ವಶಾಂತಿಗಾಗಿ ಸಲ್ಲುವ ನೊಬೆಲ್ ಪ್ರಶಸ್ತಿ ಲಭಿಸಿದೆ.
ಮೊಟ್ಟಮೊದಲು ರೆಡ್‌ಕ್ರಾಸ್ ಸಂಸ್ಥಾಪಕ ಹೆನ್ರಿ ಡೋನೆಂಟ್‌ಗೆ ಈ ಪುರಸ್ಕಾರ ಘೋಷಣೆಯಾದಾಗ ಅವನ ಸ್ಥಿತಿ ಅಯೋಮಯವಾಗಿರುತ್ತದೆ. ವಯೋಸಹಜವಾದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. ಇಪ್ಪತ್ತನೆ ಶತಮಾನದಲ್ಲಿ ಮಾನವೀಯತೆಗೆ ನೀವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಿಮಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡುವುದಾಗಿ ನೊಬೆಲ್ ಸಮಿತಿ ಅವನಿಗೆ ಪತ್ರವೊಂದನ್ನು ಬರೆಯುತ್ತದೆ. ಮುಂದುವರೆದು ಈ ಪ್ರಶಸ್ತಿಯನ್ನು ಪಡೆಯಲು ನಿಮ್ಮನ್ನು ಹೊರತು ಪಡಿಸಿದ ಮತ್ತೊಬ್ಬ ವ್ಯಕ್ತಿ ಇಲ್ಲ, ಅದು ನೀವೇ. ನಲವತ್ತು ವರ್ಷಗಳ ಹಿಂದೆ ಯುದ್ಧಸಂತ್ರಸ್ತರಿಗಾಗಿ ನೀವು ಮೂಡಿಸಿದ ಹೆಜ್ಜೆ ಅಂತರಾಷ್ಟ್ರೀ ಸಂಸ್ಥೆಯಾಗಿ ಬೆಳೆದಿದೆ. ನಿಮ್ಮನ್ನು ಹೊರತು ಪಡಿಸಿದ ರೆಡ್‌ಕ್ರಾಸ್ ಸಂಸ್ಥೆ, ಹತ್ತೊಂಬತ್ತನೆ ಶತಮಾನದ ಮಹೋನ್ನತ ಮಾನವೀಯ ಸಾಧನೆಯನ್ನು ಸಾಧಿಸುವುದು ಪ್ರಾಯಶಃ ಕಷ್ಟಸಾಧ್ಯವಾದುದು ಎಂದು ಅವನ ಸಾಧನೆಯನ್ನು, ಸಂಸ್ಥೆಯ ಹುಟ್ಟಿಗೆ ಕಾರಣವಾದ ಅವನ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತದೆ. ಆದರೆ ಅದಕ್ಕೆ ಅವನು ಪ್ರತಿಕ್ರಿಯಿಸುವುದೂ ಇಲ್ಲ. ಕೊನೆಗೆ ಅವನನ್ನು ಹುಡುಕಿ ಪುರಸ್ಕಾರವನ್ನು ನೀಡಲಾಗುತ್ತದೆ. ಅವನು ಪುರಸ್ಕಾರ ರೂಪದಲ್ಲಿ ಬಂದ ಹಣದ ಚೆಕ್ಕನ್ನು ರೆಡ್‌ಕ್ರಾಸ್ ಸಂಸ್ಥೆಗೆ ಮರಳಿಸುತ್ತಾನೆ. ಇಂದಿಗೂ ಇವನ ಈ ನಡೆ ಮಾದರಿಯಾಗಿದೆ. ನಮ್ಮ ನಡುವೆ ಇರುವ ಬಹುತೇಕ ಚಿಂತಕರು, ಸಮಾಜಸೇವಕರು, ಲೇಖಕರು ತಮಗೆ ಸಂದಾಯವಾದ ಹಣರೂಪದ ಕೊಡುಗೆಯನ್ನು ಹೇಗೆ ಜನೋಪಯೋಗಿ ವಿಷಯಗಳಿಗಾಗಿ ವಿನಿಯೋಗಿಸಬೇಕೆಂಬುದಕ್ಕೆ ಮಾರ್ಗದಶಿಯಾಗಿ ಇವನ ನಡೆಯಿದೆ. ಎಲ್ಲೋ ಕೆಲವರು ಮಾತ್ರ ಇಂತಹ ದಾರಿಯನ್ನು ಅನುಕರಿಸಿದ್ದಾರೆ. ಬಹುತೇಕರು ತಮಗೆ ಬಂದ ಹಣವನ್ನು ಮನೆಗೆ ಕೊಂಡೊಯ್ದಿದ್ದಾರೆ. ವೇದಿಕೆ ಸಿಕ್ಕಾಗ ಪುಂಖಾನುಪುಂಖವಾಗಿ ಮಾತನಾಡುವುದಕ್ಕೂ ಅವಕಾಶ ಲಭಿಸಿದಾಗ ಉದಾರವಾಗಿ ದಾನ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ಈ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು.

No comments:

Post a Comment